ಚೀನಾದ ಮಿಲಿಟರಿ ಸ್ಥಿತಿ ಗತಿ ಹೀಗಿದೆ:
೨೦೦೬ರಲ್ಲೇ ಚೀನಾ ತನ್ನ ರಾಷ್ಟ್ರೀಯ ರಕ್ಷಣಾ ನೀತಿಯನ್ನು ಪ್ರಕಟಿಸಿತ್ತು; ಪಾರದರ್ಶಕತೆಯ ಬಗ್ಗೆ ಬೇಕಾದಷ್ಟು ಹೇಳಿದ್ದರೂ ಸೇನಾ ವಿವರಗಳೇನೂ ಖಚಿತವಾಗಿ ಸಿಕ್ಕಿಲ್ಲ. ಅದೇ ವರ್ಷವೇ ಚೀನಾವು ‘ನವಯುಗಕ್ಕೆ ಮಿಲಿಟರಿ ವ್ಯೂಹ ದಿಕ್ಸೂಚಿಯನ್ನು ರೂಪಿಸಿತ್ತು. ಅದಿನ್ನೂ ಅಮೆರಿಕಾಗೇ ಸಿಕ್ಕಿಲ್ಲ!
೨೦೦೭ರಲ್ಲಿ ಚೀನಾವು ಉಪಗ್ರಹನಾಶಕ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಹತ್ತಿರದ ಕಕ್ಷೆಯಲ್ಲಿ ಸುತ್ತುವ ಉಪಗ್ರಹಗಳನ್ನು ಚೀನಾ ಸುಲಭವಾಗಿ ಉಡಾಯಿಸಬಹುದು.
ರಶಿಯಾದ ಜೊತೆಗೆ ಚೀನಾ ೨೦೦೭ರಿಂದ ಸುಮಧುರ ಸಂಬಂಧಕ್ಕಾಗಿ ವರ್ತನೆಗಳನ್ನು ಬದಲಿಸಿದೆ. ಎರಡೂ ದೇಶಗಳ ನಡುವೆ ಮಿಲಿಟರಿ ವಿನಿಮಯವೂ ನಡೆದಿದೆ. ರಶ್ಯಾವು ಭಾರತದ ಹಳೇ ದೋಸ್ತ್, ಖರೆ. ಹಾಗಂತ ಈ ಬೆಳವಣಿಗೆ ಅಲಕ್ಷ್ಯ ಮಾಡಲಾಗದು.
ಸೌದಿ ಅರೇಬಿಯಾ ಮತ್ತು ಹಲವು ಆಫ್ರಿಕಾ ದೇಶಗಳ ನಡುವೆ ಹಲವು ಒಪ್ಪಂದಗಳನ್ನು ಚೀನಾ ಮಾಡಿಕೊಂಡಿದೆ. ಕೀನ್ಯಾದಲ್ಲಿ ಭಾರೀ ಪ್ರಮಾಣದ ಕೃಷಿಯೋಗ್ಯ ಭೂಮಿಯನ್ನು ಖರೀದಿಸಿ ಮೀಸಲಿಟ್ಟುಕೊಂಡಿದೆ. ಭಾರತದಂತೆ ಆಹಾರದ ಕೊರತೆ ಉಂಟಾದ ಕೂಡಲೇ ಗಡಬಡಾಯಿಸುವ ಸನ್ನಿವೇಶ ಚೀನಾಗಿಲ್ಲ. ೨೦೦೬ರಲ್ಲಿ ಚೀನಾ ಸಂಘಟಿಸಿದ ಒಂದು ಸಮಾವೇಶದಲ್ಲಿ ಆಫ್ರಿಕಾದ ೫೩ ದೇಶಗಳ ಪೈಕಿ ೪೮ ದೇಶಗಳು ಭಾಗವಹಿಸಿದ್ದವು. ಗೊತ್ತಾಯ್ತಲ್ಲ, ಚೀನಾದ ಮುಂದಿನ ಗುರಿ ಆಫ್ರಿಕಾ.
ಒಂದೂವರೆ ಕೋಟಿ ಸೈನಿಕರನ್ನು ಹೊಂದಿದ ಚೀನಾವು ಪ್ರತೀ ವರ್ಷ ಕನಿಷ್ಠ ೧೦೦ ಕ್ಷಿಪಣಿಗಳನ್ನು ತಯಾರಿಸುತ್ತಿದೆ. ಈಗಂತೂ ಇವು ಹೆಚ್ಚಿನ ವ್ಯಾಪ್ತಿ ಮತ್ತು ನಿಖರತೆ ಹೊಂದಿವೆ.
ರಶ್ಯಾ ಮತ್ತು ಅಮೆರಿಕಾದಿಂದ ಚೀನಾಗೆ ಸಾಕಷ್ಟು ಪ್ರಮಾಣದಲ್ಲಿ ಮಿಲಿಟರಿ ನೆರವು ಹರಿದುಬರುತ್ತಿದೆ. ಜಾರ್ಜ್ ಡಬ್ಲ್ಯು ಬುಶ್‌ರ ಹೊಸ ನೀತಿಯಂತೆ ರಾಜಕೀಯವಾಗಿ ಅತಿಸೂಕ್ಷ್ಮವಾದ ಹೈ-ಟೆಕ್ ತಂತ್ರಜ್ಞಾನವನ್ನು ಖಾಸಗಿ ಸಂಸ್ಥೆಗಳು ಚೀನಾಗೆ ರವಾನಿಸಬಹುದು. ಈ ತಂತ್ರಜ್ಞಾನವನ್ನು ಚೀನಾವು ಇರಾನ್ – ಸಿರಿಯಾ ಜೊತೆಗೂ ಹಂಚಿಕೊಳ್ಳುವ ಸಾಧ್ಯತೆ ಇದೆ. ಚೀನಾ ಕಾರ್ಪೋರೇಟ್ ವಲಯದಲ್ಲಿ ಚೀನಾ ಮಿಲಿಟರಿ ಸಂಸ್ಥೆಗಳೂ ಗುಟ್ಟಾಗಿ ಭಾಗಿಯಾಗಿವೆ. ಚೀನಾವು ಅಮೆರಿಕಾದಿಂದ ತಂತ್ರಜ್ಞಾನವನ್ನು ಕದಿಯುತ್ತಿದ್ದ ಬಗ್ಗೆ ೨೦೦೦ದಿಂದ ಈವರೆಗೆ ೫೦೦ಕ್ಕೂ ಹೆಚ್ಚು ತನಿಖೆಗಳು ನಡೆದಿವೆ.
ದುಷ್ಟ ಶಕ್ತಿಗಳೊಂದಿಗೆ ಸರಸ
ಚೀನಾದ ಟಿಯಾನನ್‌ಮನ್ ನರಮೇಧದ ಕುಖ್ಯಾತಿಯ ನಾಯಕ ಡೆಂಗ್ ಶಿಯಾವೋ ಪಿಂಗ್ ರೂಪಿಸಿದ್ದ ನೀತಿ ಹೀಗಿದೆ: ‘ಸಹನೆಯಿಂದಿರಿ. ಸ್ಥಾನ ಭದ್ರ ಮಾಡಿಕೊಳ್ಳಿ. ಸನ್ನಿವೇಶಗಳನ್ನು ಸಂಯಮದಿಂದ ಎದುರಿಸಿ. ನಮ್ಮ ಸಾಮರ್ಥ್ಯವನ್ನು ಬಚ್ಚಿಡಿ; ಸಮಯ ಕಾಯೋಣ; ಪ್ರಚಾರಕ್ಕೆ ಕಡಿವಾಣ ಹಾಕೋಣ. ಎಂದೂ ನಾಯಕತ್ವವನ್ನು ಘೋಷಿಸಿಕೊಳ್ಳಬೇಡಿ. ಸ್ವಲ್ಪ ಕೊಡುಗೆಯನ್ನೂ ಕೊಡಿ’. ಚೀನಾದ ವರ್ತನೆಗಳಲ್ಲಿ ಇವೆಲ್ಲವೂ ಇಲ್ಲವೆ?
ಅದಕ್ಕೇ, ತೈಲ, ಕಲ್ಲಿದ್ದಲು ಸರಬರಾಜು ಮಾಡುವ ದೇಶಗಳಾದ ಅಂಗೋಲಾ, ಛಾಡ್, ಈಜಿಪ್ಟ್, ಇಂಡೋನೇಶ್ಯಾ, ಇರಾನ್, ನೈಜೀರಿಯಾ, ಓಮನ್, ಸೌದಿ ಅರೇಬಿಯಾ, ಸುಡಾನ್, ವೆನೆಜುಲಾ ದೇಶಗಳಿಗೆ ಆರ್ಥಿಕ ನೆರವು, ಮಿಲಿಟರಿ ನೆರವು ನೀಡುವುದಕ್ಕೆ ಚೀನಾ ಹಿಂದೆ ಮುಂದೆ ನೋಡಿಲ್ಲ. ‘ ಯುದ್ಧ ಮಾಡಿ ಯಾರಾದರೂ ಸಾಯಲಿ, ನಮ್ಮ ಹಾನ್ ಜನಾಂಗ ಇದ್ದರೆ ಸಾಕು’ ಎಂಬುದು ಚೀನಾ ನೀತಿ. ಪಾಕಿಸ್ತಾನ, ಉತ್ತರ ಕೊರಿಯಾ, ಲಿಬ್ಯಾ ದಏಶಗಳಿಗೂ ಚೀನಾವು ಅಣ್ವಸ್ತ್ರ ಮಾಹಿತಿ, ಕ್ಷಿಪಣಿ ತಂತ್ರಜ್ಞಾನವನ್ನು ನೀಡಿದೆ.
ಮಾನವ ಹಕ್ಕುಗಳು, ಅಂತಾರಾಷ್ಟ್ರೀಯ ಭಯೋತ್ಪಾದನೆ, ಅಣ್ವಸ್ತ್ರ ವಿಸ್ತರಣೆಯಂಥ ಅಂತಾರಾಷ್ಟ್ರೀಯ ನಿಯಮ ಉಲ್ಲಂಘನೆಯ ದೇಶಗಳ ಜೊತೆ ಚೀನಾಗೆ ಭಾರೀ ನಂಟು ಎಂದು ಅಮೆರಿಕಾ ರಕ್ಷಣಾ ಇಲಾಖೆಯು ಕಾಂಗ್ರೆಸಿಗೆ ನೀಡಿದ ವರದಿಯಲ್ಲಿ ಗೊಣಗುತ್ತದೆ.
ನರಮೇಧಕ್ಕೆ ಪ್ರೋತ್ಸಾಹ
ಚೀನಾವು ಈ ದಶಕದ ಆರಂಭದಿಂದಲೂ ನರಮೇಧದ ಅಪರಾಧಿ ಸುಡಾನ್ ದೇಶಕ್ಕೆ ಮಿಲಿಟರಿ ನೆರವು ನೀಡುತ್ತಲೇ ಬಂದಿದೆ. ಸುಡಾನ್‌ನ ತೈಲ ಚೀನಾಗೆ ಬೇಕೇ ಬೇಕು. ಎಷ್ಟರಮಟ್ಟಿಗೆ ಎಂದರೆ ಸುಡಾನ್ ಸರ್ವಾಧಿಕಾರಿ ಪ್ರಧಾನಿ ಬಷೀರನ ಅರಮನೆಗೂ ಚೀನಾ ಥೈಲಿಗಟ್ಟಳೆ ಹಣ ಸುರಿದಿದೆ. ಹಳೆ ಸಾಲವನ್ನು ಮನ್ನಾ ಮಾಡಿದೆ. ಸುಡಾನ್ ಸರ್ಕಾರಕ್ಕೆ ಚೀನಾವು ಮಿಲಿಟರಿ ನೆರವನ್ನು ನೀಡುತ್ತಿದೆ ಎಂದು ಬಿಬಿಸಿ ವಾರ್ತಾಸಂಸ್ಥೆಯು ಬಯಲು ಮಾಡಿದೆ. ಚೀನಾ ನಿರ್ಮಿತ ಟ್ರಕ್ಕುಗಳನ್ನು, ಮೆಶಿನ್‌ಗನ್‌ಗಳನ್ನು, ವಿಮಾನನಾಶಕ ಬಂದೂಕುಗಳನ್ನು ಬಿಬಿಸಿ ಪತ್ತೆ ಮಾಡಿದೆ. ಫೈಟರ್ ವಿಮಾನಗಳನ್ನೂ ಸುಡಾನಿಗೆ ನೀಡಿರುವ ಚೀನಾ ಮಿಲಿಟರಿ ತರಬೇತಿಗೂ ಮುಂದಾಗಿದೆ. ಗೊತ್ತಿರಲಿ: ಸುಡಾನ್‌ಗೆ ಯಾವುದೇ ಮಿಲಿಟರಿ ನೆರವು ನೀಡಬಾರದೆಂದು ವಿಶ್ವಸಂಸ್ಥೆಯು ದಿಗ್ಬಂಧನ ವಿಧಿಸಿದೆ.
ಆರ್ಥಿಕ ಪ್ರಗತಿ, ಹಸಿವಿನ ದುರ್ಗತಿ
ಚೀನಾದ ೧೧ನೇ ಪಂಚವಾರ್ಷಿಕ ಯೋಜನೆಯ (೨೦೦೬-೨೦೧೦) ಗುರಿ ಒಟ್ಟಾರೆ ಆಂತರಿಕ ಉತ್ಪನ್ನ (ಜಿಡಿಪಿ)ವನ್ನು ಇಮ್ಮಡಿಗೊಳಿಸುವುದು, ೨೦೨೦ರ ಹೊತ್ತಿಗೆ ಈ ಮೊತ್ತ ೪ ಟ್ರಿಲಿಯ ಡಾಲರ್ ಆಗುವಂತೆ ಯತ್ನಿಸುವುದು.
ಚೀನಾ ಈಗ ವಿಶ್ವದಲ್ಲೇ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿ. ನಿಜ. ಆದರೆ….
ವಿಶ್ವಸಂಸ್ಥೆ ವರದಿಯ ಪ್ರಕಾರ ಜಗತ್ತಿನ ಶೇ. ೬೫ರಷ್ಟು ಅಂದರೆ ೫೪ ಕೋಟಿ ತೀವ್ರ ಹಸಿವಿನಿಂದ ಬಳಸುತ್ತಿರುವ ಜನರು ಭಾರತ, ಚೀನಾ, ಕಾಂಗೋ, ಬಾಂಗ್ಲಾದೇಶ, ಇಂಡೋನೇಶ್ಯಾ ಮತ್ತು ಪಾಕಿಸ್ತಾನ ಮತ್ತು ಇಥಿಯೋಪಿಯಾಗಳಲ್ಲಿ ಇದ್ದಾರೆ. ಭಾರತ ಚೀನಾ ಸೇರಿ ಇಂಥ ಹಸಿದ ಹೊಟ್ಟೆಗಳ ಸಂಖ್ಯೆ ೩೫ ಕೋಟಿ. ಅಂದಮೇಲೆ ಚೀನಾದಲ್ಲಿ ಹಸಿವಿಲ್ಲ ಎಂದು ಪ್ರಾಜ್ಞರು ಬರೆದರೆ ಒಪ್ಪಿಕೊಳ್ಳಲಾಗದು. ಚೀನಾದಲ್ಲೇ ೧೨.೩ ಕೋಟಿ ಜನ ಹಸಿವಿನಿಂದ ತತ್ತರಿಸಿದ್ದಾರೆ ಎಂದು ವರದಿ ನಕಾಶೆ ಬರೆದಿದೆ.
ಚೀನಾ ದೇಶದಲ್ಲಿ ೨೦೦೬ ಒಂದೇ ವರ್ಷದಲ್ಲಿ ೧೭೫೦೦ ಸರ್ಕಾರಿ ಅಧಿಕಾರಿಗಳು ಅಲ್ಲಿನ ‘ಲೋಕಾಯುಕ್ತ’ ಬಲೆಗೆ ಬಿದ್ದು ಶಿಕ್ಷೆಗೆ ಒಳಗಾಗಿದ್ದಾರೆ.
ಜಗತ್ತಿಗೆ ತನ್ನ ಹಿರಿಮೆಯನ್ನು ತೋರಲು ಚೀನಾ ತನ್ನದೇ ಲಕ್ಷಗಟ್ಟಳೆ ಮನೆಗಳನ್ನು ನೆಲಸಮ ಮಾಡಿ ಬೀಜಿಂಗನ್ನು ಮರುಕಟ್ಟಿದೆ. ಪರಿಸರ ಮಾಲಿನ್ಯದ ಹೆಗ್ಗುರುತಾದ ಬೀಜಿಂಗಿನ ನೂರಾರು ಕಾರ್ಖಾನೆಗಳನ್ನು ಮುಚ್ಚಿ ಪರಿಸರ ಕಾಳಜಿಯ ತೇಪೆ ಹಾಕಿದೆ. ನೋಬೆಲ್ ಪುರಸ್ಕೃತ ನೋಮ್ ಚೋಮ್‌ಸ್ಕಿ ಕೂಡಾ ಚೀನಾದ ಪರಿಸರ ಮಾಲಿನ್ಯ ಭೀಕರ ಎಂದು ಬಣ್ಣಿಸಿದ್ದಾರೆ.
ಇಂಥ ಚೀನಾವನ್ನು ಮಾದರಿ ದೇಶ ಎಂದು ಕರೆಯುವುದು ಎಷ್ಟು ಸರಿ?
————————————————————————
ಉದಯವಾಣಿಯಲ್ಲಿ ೧೬.೯.೨೦೦೯ರಂದು ಪ್ರಕಟಿತ ಸರಣಿ ಲೇಖನದ ಎರಡನೇ ಭಾಗ