ಕನ್ನಡದ ಪತ್ರಕರ್ತ, `ಹೊಸದಿಗಂತ’ ದೈನಿಕದ ಹಿರಿಯ ವರದಿಗಾರ ಗುರುವಪ್ಪ ಎನ್ ಟಿ ಬಾಳೇಪುಣಿ ಯವರಿಗೆ ೨೦೧೧ರ ಸರೋಜಿನಿ ನಾಯ್ಡು ಪ್ರಶಸ್ತಿ ದೊರೆತಿದೆ. ಅವರಿಗೆ ನಾವೆಲ್ಲರೂ ಹೃತ್ಪೂರ್ವಕವಾಗಿ ಶುಭಾಶಯಗಳನ್ನು ತಿಳಿಸೋಣ. ಅಭ್ಯುದಯ ಪತ್ರಿಕೋದ್ಯಮವೆಂದರೆ ಏನು ಎಂಬ ಪ್ರಶ್ನೆ ಕೇಳಿಕೊಳ್ಳಬೇಕಾದ ಈ ಸಂದರ್ಭದಲ್ಲಿ ಬಾಳೇಪುಣಿಯಂಥ ನೈಜ ಅಭ್ಯುದಯ ಪತ್ರಕರ್ತರಿಗೆ ಈ ಪ್ರಶಸ್ತಿ ದೊರೆತಿರುವುದು, ಅದರಲ್ಲೂ ಈ ಪ್ರಶಸ್ತಿ ಸ್ಥಾಪನೆಯಾದ ಹತ್ತು ವರ್ಷಗಳಲ್ಲಿ ಇದೇ ಮೊದಲ ಸಲ ಕನ್ನಡಿಗರಿಗೆ ಈ ಪ್ರಶಸ್ತಿ ಬಂದಿರುವುದು ವಿಶೇಷವೇ. ಈ ಪ್ರಶಸ್ತಿಯೂ ಪ್ರತಿಷ್ಠಿತವೇ. ಇಂಟರ್‌ನ್ಯಾಶನಲ್ ಹಂಗರ್ ಪ್ರಾಜೆಕ್ಟ್ ಆಯೋಜಿಸಿರುವ ಈ ಪ್ರಶಸ್ತಿಯ ಆಯ್ಕೆಯೂ ಅತ್ಯಂತ ವಸ್ತುನಿಷ್ಠವೇ ಎನ್ನುವುದು ಅದರ ವಿವರಗಳನ್ನು ಓದಿದಾಗ ಅನ್ನಿಸುತ್ತದೆ.
॒॒॒॒॒॒॒॒॒॒॒॒॒॒॒॒॒॒॒
ಇಡ್ಕಿದು ಗ್ರಾಮ ಪಂಚಾಯತ್ : ಗ್ರಾಮಾಭಿವೃದ್ಧಿಗೊಂದು ಜೀವಂತ ಮಾದರಿ
ಜಲ ಸಾಕ್ಷರತೆಯ ಮೂಲಕ ವಿಶ್ವದ ಗಮನಸೆಳೆದ ಕರ್ನಾಟಕದ ಮೊದಲ ಗ್ರಾ.ಪಂ. ಇಡ್ಕಿದು. ಸಮುದಾಯದ ಪಾಲ್ಗೊಳ್ಳುವಿಕೆಯೊಂದಿಗೆ ಗ್ರಾಮಾಭಿವೃದ್ಧಿಯಲ್ಲಿಯೂ ಇಡ್ಕಿದು ಮುಂಚೂಣಿಯಲ್ಲಿದೆ. ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೊಬ್ಬರ ಸಮರ್ಥ ಸಾರಥ್ಯ ಈ ಗ್ರಾ.ಪಂ.ಗೆ ಲಭಿಸಿದ್ದು, ಪ್ರಗತಿಯ ವೇಗವನ್ನು ಹೆಚ್ಚಿಸಿದೆ.
ಗ್ರಾಮ ಸ್ವರಾಜ್ಯ, ಗ್ರಾಮಾಭಿವೃದ್ಧಿ ಮತ್ತು ಸ್ವಾವಲಂಬನೆಯಲ್ಲಿ ಮೌನಕ್ರಾಂತಿಯತ್ತ ಸಾಗಿರುವ ಅಪರೂಪದ ಗ್ರಾಮ ಪಂಚಾಯತೊಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿದೆ. ಅದುವೇ ಇಡ್ಕಿದು ಗ್ರಾಮ ಪಂಚಾಯತು.
ಗ್ರಾಮಾಭಿವೃದ್ಧಿಯಲ್ಲಿ `ಇಡ್ಕಿದು ಮಾದರಿ’ಯನ್ನು ರಾಷ್ಟ್ರಕ್ಕೆ ಪರಿಚಯಿಸಲು ಗ್ರಾಮ ಪಂಚಾಯತ್ ಅಧ್ಯಕ್ಷೆ ರತ್ನಾ ಆಸಕ್ತಿ ವಹಿಸಿದ್ದಾರೆ. ರತ್ನಾ ದ.ಕ.ದಲ್ಲಿ ಭೂತ ನೃತ್ಯ ವೃತ್ತಿಯಿಂದ ಗುರುತಿಸಲ್ಪಡುವ ಪರಿಶಿಷ್ಟ ಜಾತಿಯ ನಲಿಕೆ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಹಿಂದಿನ ಅವಧಿಯಲ್ಲಿ ಗ್ರಾ.ಪಂ. ಸದಸ್ಯೆಯಾಗಿ ಗಳಿಸಿದ ಅನುಭವದಿಂದ ಇಂದು ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ.
ಹೆಣ್ಣೊಂದು ಕಲಿತರೆ…
`ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬ ಮಾತಿದೆ. ಈ ಮಾತು ಶಿಕ್ಷಣದ ಮಹತ್ವವನ್ನು ಸಾರುತ್ತದೆ. ಇಡ್ಕಿದು ಗ್ರಾ.ಪಂ. ಅಧ್ಯಕ್ಷೆ ರತ್ನಾ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಪಡೆದಿದ್ದಾರೆ. ಬೆಳ್ತಂಗಡಿಯ ಹಳ್ಳಿ ನಿಡ್ಲೆಯಿಂದ ೧೦ ವರ್ಷದ ಹಿಂದೆ ಇಡ್ಕಿದು ಗ್ರಾಮ ಪಂಚಾಯತ್‌ಗೊಳಪಟ್ಟ ಕುಳ ಗ್ರಾಮದ ಸೇಕೆಹಿತ್ಲುಗೆ ಸೊಸೆಯಾಗಿ ಬಂದಿದ್ದಾರೆ. ೨ ವರ್ಷ ಕುಳ ಗ್ರಾಮದ ಮುಂದುವರಿಕಾ ಶಿಕ್ಷಣ ಕೇಂದ್ರದಲ್ಲಿ ಪ್ರೇರಕಿಯಾಗಿ ನವಸಾಕ್ಷರರನ್ನು ಸಂಘಟಿಸಿದ್ದರು. ಅವರಿಗಾಗಿ ಸ್ವಸಹಾಯ ಗುಂಪುಗಳನ್ನು ರಚಿಸಿದ್ದ ರತ್ನಾ, ಮುಂದೆ ತಾನು ಈ ಸ್ಥಳೀಯಾಡಳಿತ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಏರುತ್ತೇನೆಂಬ ಕನಸನ್ನೂ ಕಂಡಿರಲಿಲ್ಲ.೨೦೦೫-೧೦ನೇ ಸಾಲಿನ ಗ್ರಾ.ಪಂ. ಚುನಾವಣೆ ಘೋಷಣೆಯಾದಾಗ ಪರಿಚಿತರೊಬ್ಬರ ಪ್ರೇರಣೆಯಿಂದ ರತ್ನಾ ಚುನಾವಣಾ ಕಣಕ್ಕಿಳಿದರು. ಮೊದಲ ಪ್ರಯತ್ನದಲ್ಲೇ ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾದರು. ಅಲ್ಲಿಂದೀಚೆಗೆ ರತ್ನಾ ಜನತೆಗೆ ಗ್ರಾಮಾಭಿವೃದ್ಧಿಯ ಪಾಠವನ್ನು ಬೋಧಿಸುತ್ತಿದ್ದು, ಇಂದು ಇಡ್ಕಿದು ಗ್ರಾ.ಪಂ.ನ ಪ್ರಥಮ ಪ್ರಜೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಪ್ರಾಥಮಿಕ ಶಿಕ್ಷಣ ಹೊಂದಿರುವ ರತ್ನಾ ಅವರ ಪತಿ ಕೃಷ್ಣಪ್ಪ ರಬ್ಬರ್ ಫ್ಯಾಕ್ಟರಿಯೊಂದರಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ರತ್ನಾ ಬೀಡಿ ಕಾರ್ಮಿಕೆ. ಇಬ್ಬರು ಪುಟ್ಟ ಗಂಡು ಮಕ್ಕಳನ್ನು ಹೊಂದಿರುವ ಚಿಕ್ಕ, ಚೊಕ್ಕ ಸಂಸಾರ ಇವರದು. ಹಿರಿಯರಿಂದ ಬಂದ ಸೇಕೆಹತ್ಲಿನ ೬ ಸೆಂಟ್ಸ್ ಜಮೀನು, ೮ ವರ್ಷದ ಹಿಂದೆ ನಿರ್ಮಿಸಿದ ಸಣ್ಣ ಆಶ್ರಯ ಮನೆ ಇವರ ಆಸ್ತಿ. ಪತಿಯ ಪ್ರೋತ್ಸಾಹ, ಬೆಂಬಲ ರತ್ನಾರವರ ಆಸಕ್ತಿಯನ್ನು ದ್ವಿಗುಣಗೊಳಿಸಿದೆ.
“ಚುನಾವಣೆಗೆ ಸ್ಪರ್ಧಿಸುವಾಗ ನನಗೆ ಅಳುಕಿತ್ತು. ಗ್ರಾ.ಪಂ. ಆಡಳಿತದ ಬಗ್ಗೆ ಯಾವುದೇ ಅನುಭವವಿರಲಿಲ್ಲ. ಆಯ್ಕೆಯಾದ ಬಳಿಕ ಸಹೋದ್ಯೋಗಿ ಸದಸ್ಯರು, ಸಿಬ್ಬಂದಿ ಹಾಗೂ ಜನತೆಯ ಸಹಕಾರದಿಂದ ಗ್ರಾಮ ಪಂಚಾಯತ್ ವ್ಯವಸ್ಥೆಯನ್ನು ಅರಿತುಕೊಳ್ಳಲು ಸಾಧ್ಯವಾಯಿತು. ಜನತೆಯ ಬೇಕು-ಬೇಡಗಳನ್ನು ಮನವರಿಕೆ ಮಾಡಿಕೊಳ್ಳುವ ಶಕ್ತಿ ಬಂತು” ಎಂದು ತಮ್ಮ ಗ್ರಾಮ ಪಂಚಾಯತ್ ಪ್ರವೇಶವನ್ನು ರತ್ನಾ `ಹೊಸ ದಿಗಂತ’ ದೊಂದಿಗೆ ಹಂಚಿಕೊಂಡರು.
ಜಾತಿ, ಮತದ ಎಲ್ಲೆ ಮೀರಿ….
“೨೦೦೫-೧೦ನೇ ಸಾಲಿನಲ್ಲಿ ೧೯ ಸದಸ್ಯರ ಪೈಕಿ ನಾನು ಸೇರಿದಂತೆ ೮ ಮಂದಿ ಮಹಿಳೆಯರಿದ್ದೆವು. ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಚರ್ಚಿಸಿ ಗ್ರಾ.ಪಂ.ಗಾಗಿ ಯೋಜನೆಗಳನ್ನು ರೂಪಿಸುತ್ತಿದ್ದೆವು. ಆ ವೇಳೆ ಆಗ ಜಾತಿ, ಧರ್ಮ, ಅಂತಸ್ತು ಮರೆಯುತ್ತಿದ್ದೆವು. ಗ್ರಾಮ ಸ್ವರಾಜ್ಯ, ಸ್ವಾವಲಂಬನೆ ಮತ್ತು ಗ್ರಾಮಾಭಿವೃದ್ಧಿ ನಮ್ಮ ಮುಖ್ಯ ಧ್ಯೇಯವಾಗಿತ್ತು. ಎಲ್ಲಕ್ಕಿಂತಲೂ ಮುಖ್ಯವಾಗಿ ನಮಗಾಗಿಯೇ ಯೋಜನೆಗಳನ್ನು ರೂಪಿಸುತ್ತಿರುವೆವು ಎಂಬ ಅರಿವು ನಮಗಿತ್ತು. ನಾನು ಪ್ರೌಢಶಾಲಾ ಶಿಕ್ಷಣ ಪಡೆದುದು ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಬಹುಬೇಗ ಅರಿತುಕೊಳ್ಳಲು ಸಹಕಾರಿಯಾಯಿತು” ಎಂದು ಹೇಳುವ ರತ್ನಾ ಸಾಕ್ಷರತೆ, ಆರೋಗ್ಯ, ಶುದ್ಧ ಕುಡಿಯುವ ನೀರು, ಮಹಿಳಾ ಸಶಕ್ತೀಕರಣ ಮತ್ತು ಮೂಲಭೂತ ಸೌಕರ್‍ಯಗಳು ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಬಲಪಡಿಸಬಲ್ಲುದು ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಇಡ್ಕಿದು ಗ್ರಾ.ಪಂ. ಕುಳ ಮತ್ತು ಇಡ್ಕಿದು ಕಂದಾಯ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದ್ದು ೭ ಬ್ಲಾಕ್‌ಗಳಿವೆ. ಪ್ರಸ್ತುತ ೧೯ ಸದಸ್ಯರ ಆಡಳಿತ ಮಂಡಳಿ ಇದೆ. ಪ.ಜಾ., ಪ.ಪಂ., ಮಹಿಳೆ, ಹಿಂದುಳಿದ ವರ್ಗ ಹೀಗೆ ಎಲ್ಲಾ ವರ್ಗ, ಸಮುದಾಯಗಳ ಪ್ರತಿನಿಗಳನ್ನು ಒಳಗೊಂಡಿದೆ. ೮ ಮಂದಿ ಮಹಿಳಾ ಸದಸ್ಯರಿದ್ದಾರೆ. ಪ್ರಸ್ತುತ ಮಹಿಳೆಯರೇ ಅಧ್ಯಕ್ಷ-ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪಕ್ಷೇತರ, ಕಾಂಗ್ರೆಸ್, ಬಿಜೆಪಿ ಬೆಂಬಲಿತ ಸದಸ್ಯರು ಆಡಳಿತ ಮಂಡಳಿಯಲ್ಲಿದ್ದಾರೆ.
ಸಂಪನ್ಮೂಲ-ಸೌಲಭ್ಯ ವೃದ್ಧಿ
ಹಿಂದೆ ಸದಸ್ಯೆಯಾಗಿದ್ದುಕೊಂಡು ಹಮ್ಮಿಕೊಂಡ ಗ್ರಾಮಾಭಿವೃದ್ಧಿ ಕಾರ್ಯಕ್ರಮಗಳನ್ನು ಇದೀಗ ಅಧ್ಯಕ್ಷರಾಗಿದ್ದುಕೊಂಡು ಹೆಚ್ಚು ವೇಗದಿಂದ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಗ್ರಾಮ ಪಂಚಾಯತಿಯ ಸಂಪನ್ಮೂಲವನ್ನು ಹೆಚ್ಚಿಸುವಲ್ಲಿಯೂ ರತ್ನಾ ಗಮನ ಹರಿಸಿದ್ದಾರೆ.
ಮಾರ್ಪಳ್ಳಿ, ಪೆಲತ್ತಡಿ, ಸೂರ್ಯ, ನೇರ್ಲಾಜೆ, ಮುಂಡ್ರಬೈಲು ಮುಂತಾದೆಡೆಯ ೨೨ ಕುಟುಂಬಗಳಿಗೆ ರೂ. ೧.೫ ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಒದಗಿಸಿಕೊಡುವಲ್ಲಿ ಗ್ರಾ.ಪಂ. ಅಧ್ಯಕ್ಷರು ಯಶಸ್ವಿಯಾಗಿದ್ದಾರೆ. ಉರಿಮಜಲು, ಅಳಕೆ ಮಜಲು ಭಾಗಗಳ ೩೦ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಕಾಮಗಾರಿಗಳನ್ನು ಜಿಲ್ಲಾ ಪಂಚಾಯತ್ ಅನುದಾನದಿಂದ ಕೈಗೆತ್ತಿಕೊಳ್ಳಲು ರತ್ನಾ ಸಿದ್ಧರಾಗಿದ್ದಾರೆ. ಮಹಾತ್ಮ ಗಾಂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ಎಂಜಿಎನ್‌ಆರ್‌ಇಜಿಎ)ಯಲ್ಲಿ ರೂ. ೪.೬೭ ಲಕ್ಷ ಮೌಲ್ಯದಲ್ಲಿ ರಸ್ತೆ ಅಭಿವೃದ್ಧಿ, ಶಾಲಾ ಮೈದಾನ, ಅಂಗನವಾಡಿಗಳಿಗೆ ಆವರಣ ಗೋಡೆ ನಿರ್ಮಿಸಲಾಗಿದೆ. ಪ.ಜಾತಿ ಮತ್ತು ಪ.ವರ್ಗಗಳ ಜಮೀನು ಅಭಿವೃದ್ಧಿಗೆ ಉದ್ಯೋಗ ಖಾತರಿಯಡಿ ರೂ. ೭೦,೫೨೯ ಮೊತ್ತವನ್ನು ವ್ಯಯಿಸಲಾಗಿದೆ. ಇದಲ್ಲದೆ ಬಿಪಿಎಲ್ ಕುಟುಂಬಗಳ ಜಮೀನು ಅಭಿವೃದ್ಧಿಗೆ ರೂ. ೨,೬೦,೮೭೫ ಖರ್ಚು ಮಾಡಲಾಗಿದೆ.
“ಸಂಪನ್ಮೂಲವಿದ್ದರೆ ಮಾತ್ರ ಗ್ರಾ.ಪಂ. ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಸಮಾನ ಪ್ರಗತಿ ಸಾಧಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ಆರ್ಥಿಕ ಸಂಪನ್ಮೂಲ ಹೆಚ್ಚಳಕ್ಕೆ ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ವ್ಯಾಪಾರ ವಹಿವಾಟಿನ ಶುಲ್ಕವನ್ನು ಪರಿಷ್ಕರಿಸಿ ಬೇಡಿಕೆ ರೂ. ೩೭ ಸಾವಿರಗಳಿಂದ ೮೭ ಸಾವಿರಕ್ಕೆ ಹೆಚ್ಚಿಸಲಾಗಿದೆ. ಗ್ರಾ.ಪಂ. ೧೦ ಅಂಗಡಿ ಕೊಠಡಿಗಳನ್ನು ಹೊಂದಿದ್ದು ವಾರ್ಷಿಕ ರೂ. ೩೫,೦೦೦ ಆದಾಯ ಬರುತ್ತಿದೆ” ಎನ್ನುತ್ತಾರೆ ರತ್ನಾ.
ಮನವೊಲಿಕೆ ಯಶಸ್ವಿ
ತೆರಿಗೆ ಸಂಗ್ರಹದಲ್ಲಿ ಗಮನಾರ್ಹ ಹೆಚ್ಚಳವಾಗಿದೆ. ನಾಗರಿಕರನ್ನು ಮುಖತಃ ಭೇಟಿಯಾಗಿ ಮನವೊಲಿಸಿದ ರತ್ನಾರವರ ಪ್ರಯತ್ನ ಇಲ್ಲಿ ಫಲ ನೀಡಿದೆ. ೨೦೦೯-೧೦ನೇ ಸಾಲಿಗೆ ನೀರಿನ ಶುಲ್ಕದ ಬಾಬ್ತು ಬೇಡಿಕೆ ರೂ. ೨.೨೫ ಲಕ್ಷ ಇದ್ದು, ೨,೦೫,೮೫೫ ರೂ. ಸಂಗ್ರಹವಾಗಿತ್ತು. ೨೦೧೦-೧೧ನೇ ಸಾಲಿನ ಬೇಡಿಕೆ ರೂ. ೩ ಲಕ್ಷ. ವಸೂಲಿ ಹಿಂದಿನ ಬಾಕಿ ಸೇರಿ ೩,೧೨,೬೬೫. ಪ್ರಸಕ್ತ ಸಾಲಿನಲ್ಲಿ ರೂ. ೩.೦೫ ಲಕ್ಷ ಬೇಡಿಕೆ ಇದ್ದು, ಈಗಾಗಲೇ ರೂ. ೪೯,೮೬೫ ಸಂಗ್ರಹವಾಗಿದೆ.
೨೦೦೯-೧೦ನೇ ಸಾಲಿನಲ್ಲಿ ಗ್ರಾ.ಪಂ.ನ ತೆರಿಗೆ ಬಾಬ್ತುನ ಬೇಡಿಕೆ ರೂ. ೧,೮೫,೫೨೫ ವಸೂಲಿ ರೂ. ೧,೬೦,೩೨೫. ೨೦೧೦-೧೧ನೇ ಸಾಲಿನ ಬೇಡಿಕೆ ರೂ. ೨,೩೦,೧೭೦ ಆಗಿದ್ದು, ರೂ. ೨,೩೬,೪೭೫ ವಸೂಲಿಯಾಗಿದೆ. ೨೦೧೧-೧೨ನೇ ಸಾಲಿನ ಬೇಡಿಕೆ ರೂ. ೨,೩೭,೮೩೦ ಆಗಿದ್ದು, ಜೂನ್ ೧೦ರ ಅಂತ್ಯಕ್ಕೆ ರೂ. ೧೮,೫೧೦ ವಸೂಲಾಗಿದೆ.
ಶಿಕ್ಷಣ
ಗ್ರಾ.ಪಂ. ವ್ಯಾಪ್ತಿಯಲ್ಲಿ ೩ ಕಿರಿಯ ಪ್ರಾಥಮಿಕ ಶಾಲೆಗಳು, ೧ ಹಿರಿಯ ಪ್ರಾಥಮಿಕ ಶಾಲೆ ಮತ್ತೊಂದು ಪ್ರೌಢಶಾಲೆ ಇದೆ. ೧೦ ಅಂಗನವಾಡಿ ಕೇಂದ್ರಗಳಿವೆ. ಇವುಗಳಲ್ಲಿ ೭೬೩ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಆ ಪೈಕಿ ೩೯೭ ಬಾಲಕಿಯರು. ಎಲ್ಲಾ ಶಾಲೆಗಳು, ಅಂಗನವಾಡಿಗಳು ಉತ್ತಮ ನೀರು ಮತ್ತು ಶೌಚಾಲಯ ವ್ಯವಸ್ಥೆಯನ್ನು ಹೊಂದಿವೆ. ೯ ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿದ್ದು ವಿದ್ಯುತ್ ಸಂಪರ್ಕವನ್ನು ಹೊಂದಿವೆ. ೫ ಅಂಗನವಾಡಿ ಕೇಂದ್ರಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ.
೫ ವರ್ಷದ ಹಿಂದೆ ಇಬ್ಬರು ೬ರಿಂದ ೧೪ ವರ್ಷ ವಯೋಮಿತಿಯ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರು. ಈಗ ಯಾವುದೇ ಮಕ್ಕಳು ಶಾಲೆಯಿಂದ ಹೊರಗುಳಿದಿಲ್ಲ. ಗ್ರಾಮ ಪಂಚಾಯತ್ ವ್ಯಾಪ್ತಿಯ ೪೦ ವರ್ಷ ವಯೋಮಿತಿಯೊಳಗಿನ ಎಲ್ಲರೂ ಸಾಕ್ಷರರು. ಗ್ರಾ.ಪಂ. ಸರಾಸರಿ ಸಾಕ್ಷರತಾ ಪ್ರಮಾಣ ಶೇ. ೯೦ ದಾಟಿದೆ. ಪ.ಜಾತಿ/ಪಂಗಡದ ಹೆಮ್ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಶೇ. ೨೫ರ ನಿಧಿಯಲ್ಲಿ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ.
ನೈರ್ಮಲ್ಯ ಮತ್ತು ಆರೋಗ್ಯ
ಇಡ್ಕಿದು ಗ್ರಾಮ ಪಂಚಾಯತ್ ಆರೋಗ್ಯ ಕಾರ್‍ಯಕ್ರಮಗಳಿಗೆ ವಿಶೇಷ ಒತ್ತು ನೀಡಿದೆ. ಕಳೆದ ೧೬ ವರ್ಷಗಳಿಂದ ಪಂಚಾಯತ್ ವ್ಯಾಪ್ತಿಯಲ್ಲಿ ಎಲ್ಲಾ ಸಾಕುನಾಯಿಗಳಿಗೆ ರೇಬಿಸ್ ನಿರೋಧಕ ಲಸಿಕೆ ನೀಡಲಾಗುತ್ತಿದೆ. ಈ ಸಾಲಿನ ರೇಬಿಸ್ ನಿರೋಧಕ ಲಸಿಕಾ ಆಂದೋಲನ ಫೆ. ೧೦ರಂದು ನಡೆದಿದೆ. ಹಸುಗಳಿಗೆ ಕಾಲುಬಾಯಿ ನಿರೋಧಕ ಚುಚ್ಚುಮದ್ದನ್ನು ಕೂಡಾ ಇದೇ ವೇಳೆ ಉಚಿತವಾಗಿ ನೀಡಲಾಗುತ್ತಿದೆ. ಆರೋಗ್ಯ ತಪಾಸಣಾ ಶಿಬಿರಗಳು, ನೇತ್ರ ಚಿಕಿತ್ಸಾ ಶಿಬಿರ, ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಜಾಗೃತಿ ಕಾರ್‍ಯಕ್ರಮಗಳನ್ನು ಪಂಚಾಯತ್ ತನ್ನ ವ್ಯಾಪ್ತಿಯ ಸಂಘ ಸಂಸ್ಥೆಗಳ ಸಹಯೋಗದಿಂದ ನಡೆಸಿಕೊಂಡು ಬರುತ್ತಿದೆ.
ಸಂಪೂರ್ಣ ಸ್ವಚ್ಛತಾ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಇಡ್ಕಿದು ಗ್ರಾ.ಪಂ. ೨೦೦೮ರಲ್ಲಿ `ನಿರ್ಮಲ ಗ್ರಾಮ’ ಪುರಸ್ಕಾರ ಪಡೆದಿದೆ. ಸಂಪೂರ್ಣ ಸ್ವಚ್ಛತಾ ಆಂದೋಲನ ಆರಂಭದ ದಿನಗಳಲ್ಲಿ ಶೌಚಾಲಯ ರಹಿತ ಕುಟುಂಬಗಳ ಸಂಖ್ಯೆ ೩೬೦. ಆ ಪೈಕಿ ೨೧೬ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿನವುಗಳಾಗಿದ್ದವು. ಗ್ರಾ.ಪಂ. ವಿವಿಧ ಸಂಘ ಸಂಸ್ಥೆಗಳು ಹಾಗೂ ಗ್ರಾಮದ ಜನತೆಯ ಸಹಕಾರದೊಂದಿಗೆ ಎಲ್ಲಾ ಕುಟುಂಬಗಳು ಶೌಚಾಲಯ ಹೊಂದಲು ಯಶಸ್ವಿಯಾಗಿದೆ.
`ಪ್ಲಾಸ್ಟಿಕ್ ಹೆಕ್ಕಿಕೋ’ ಆಂದೋಲನ, ಶಾಲಾ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು ಮತ್ತು ಜನತೆಯ ಸಹಕಾರದಿಂದ ಯಶಸ್ವಿಯಾಗಿದ್ದು. ಪ್ಲಾಸ್ಟಿಕ್ ಬಳಕೆ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ ಎನ್ನುತ್ತಾರೆ ಪಂ.ಅಭಿವೃದ್ಧಿ ಅಧಿಕಾರಿ ನವೀನ್ ಕುಮಾರ್.
ನೀರು-ನೈರ್ಮಲ್ಯ ಸಮಿತಿ
ಗ್ರಾ.ಪಂ. ಒಂದು ಪ್ರಧಾನ ನೀರು ನೈರ್ಮಲ್ಯ ಸಮಿತಿ(ವಿಡಬ್ಲ್ಯುಎಸ್)ಯನ್ನು ಹೊಂದಿದೆ. ೯ ಪ್ರದೇಶಾವಾರು ಸಮಿತಿಗಳಿವೆ. ಎಲ್ಲಾ ಸಮಿತಿಗಳಿಗೂ ಗ್ರಾ.ಪಂ. ಅಧ್ಯಕ್ಷೆ ರತ್ನಾರವರೇ ಅಧ್ಯಕ್ಷರು. ರತ್ನಾ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ೯ ಸಮಿತಿಗಳಿಗಿದ್ದ ಪ್ರತ್ಯೇಕ ಬ್ಯಾಂಕು ಖಾತೆಗಳನ್ನು ರದ್ದುಪಡಿಸಿ ಒಂದೇ ಖಾತೆ ತೆರೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಅಪರೂಪವಾಗಿದ್ದ ವಿಡಬ್ಲ್ಯುಎಸ್ ಸಭೆಗಳು ಈಗ ೩ ತಿಂಗಳಿಗೊಮ್ಮೆ ನಿಯಮಿತವಾಗಿ ನಡೆಯುತ್ತಿವೆ. ನೀರಿನ ಶುಲ್ಕ ಸಂಗ್ರಹದಲ್ಲಿಯೂ ಏರಿಕೆಯಾಗಿದೆ. ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕಾರ್‍ಯಕ್ರಮಗಳು ಜಾರಿಯಾಗುತ್ತಿವೆ ಎನ್ನುತ್ತಾರೆ ಗ್ರಾಮಸ್ಥರಾದ ವೆಲ್ಡರ್ ವೃತ್ತಿ ಮಾಡುತ್ತಿರುವ ಕರೀಂ.
ನಿರ್ಮಲ ಪುರಸ್ಕಾರದಲ್ಲಿ ಬಂದ ನಗದು ರೂ. ೪ ಲಕ್ಷ ಮೊತ್ತದಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ಮತ್ತು ಒಳಚರಂಡಿ ಕಾಮಗಾರಿ ನಡೆಸುವುದಕ್ಕೆ ಕ್ರಿಯಾಯೋಜನೆ ರೂಪಿಸಲಾಗಿದ್ದು ಜಿಲ್ಲಾ ಪಂಚಾಯತ್‌ನಿಂದ ಇತ್ತೀಚೆಗೆ ಅನುಮೋದನೆ ಪಡೆಯಲಾಗಿದೆ.
ಕ್ಷೀರಕ್ರಾಂತಿ-ಮಹಿಳಾ ಸಬಲೀಕರಣ
ಇಡ್ಕಿದು ಗ್ರಾ.ಪಂ. ವ್ಯಾಪ್ತಿಯಲ್ಲಿ ೧,೦೦೦ ಪುರುಷರಿಗೆ ೧,೦೦೪ ಮಹಿಳಾ ಪ್ರಮಾಣವಿದೆ. ಹಿಂದೆ ಇದೇ ಗ್ರಾ.ಪಂ. ಅಧ್ಯಕ್ಷರಾಗಿದ್ದ ಕೆ.ಟಿ. ಶೈಲಜಾ ಭಟ್ ಇಂದು ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದಾರೆ. ೨೦೦೫-೧೦ನೇ ಸಾಲಿನ ಮೊದಲ ಅವಧಿಯಲ್ಲಿ ಭಾಗೀರಥಿ ಅಧ್ಯಕ್ಷರಾಗಿ, ಎರಡನೇ ಅವಧಿಯಲ್ಲಿ ಸುಜಾತ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಅಧ್ಯಕ್ಷ -ಉಪಾಧ್ಯಕ್ಷ ಎರಡೂ ಹುದ್ದೆಗಳನ್ನು ಮಹಿಳೆಯರೇ ಅಲಂಕರಿಸಿದ್ದಾರೆ.
ಇಲ್ಲಿ ಒಟ್ಟು ೨೮೪ ಸ್ವಸಹಾಯ ಗುಂಪುಗಳಿವೆ. ಆ ಪೈಕಿ ೧೬೬ ಗುಂಪುಗಳು ಮಹಿಳೆಯರದ್ದಾಗಿದೆ. ಸ್ವಸಹಾಯ ಗುಂಪುಗಳ ವಾರ್ಷಿಕ ಉಳಿತಾಯ ರೂ. ೬೧ ಲಕ್ಷವಾಗಿದ್ದು, ಮಹಿಳೆಯರ ಪಾಲು ರೂ. ೩೦.೯೦ ಲಕ್ಷವಾಗಿದೆ.
ಹೈನುಗಾರಿಕೆಯಿಂದ ಶಕ್ತಿ
ಗ್ರಾ.ಪಂ. ವ್ಯಾಪ್ತಿಯಲ್ಲಿ ೩ ಹಾಲು ಉತ್ಪಾದಕರ ಸಹಕಾರಿ ಸಂಘಗಳಿವೆ. ಇವುಗಳಲ್ಲಿ ೨೫೦ ಸದಸ್ಯರಿದ್ದಾರೆ. ಇವರ ಪೈಕಿ ಬಹಳಷ್ಟು ಮಂದಿ ಮಹಿಳೆಯರು ಹಾಗೂ ಹಾಲು ಉತ್ಪಾದನೆಯ ಹಿಂದಿನ ಶ್ರಮವೆಲ್ಲ ಇವರದ್ದೇ ಆಗಿದೆ. ದಿನವೊಂದರ ೧,೬೦೦ ಲೀಟರ್‌ನಿಂದ ೧,೮೦೦ ಲೀ. ಹಾಲು ಸಹಕಾರ ಸಂಘಕ್ಕೆ ಪೂರೈಕೆಯಾಗುತ್ತಿದೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಯಲ್ಲಿ ಹೈನುಗಾರಿಕೆ ಪ್ರಮುಖ ಪಾತ್ರ ವಹಿಸಿದೆ.
“ಹೈನುಗಾರಿಕೆಯಲ್ಲಿ ಯಾವುದೇ ನಷ್ಟವಿಲ್ಲ. ಆಳುಗಳನ್ನು ನೇಮಿಸದೇ ಕುಟುಂಬದ ಸದಸ್ಯರೇ ಕೆಲಸ ಮಾಡಿದರೆ ಲಾಭಾಂಶ ಜಾಸ್ತಿ. ಹಾಲು ಹೊರಗಿನಿಂದ ತರಬೇಕಾಗಿಲ್ಲ. ಗೋಬರ್ ಗ್ಯಾಸ್ ಸ್ಥಾವರದಿಂದ ಅಡುಗೆ ಅನಿಲ ಲಭ್ಯ. ಗೊಬ್ಬರ ಕೃಷಿಗೆ ಬಳಕೆಯಾಗುತ್ತಿದೆ”. ಇದು ೨೫ ವರ್ಷಗಳಿಂದ ಹೈನುಗಾರಿಕೆಯಲ್ಲಿ ಸಂತೃಪ್ತಿ ಕಂಡಿರುವ ಉರಿಮಜಲಿನ ತೆರೆಸಾ ಪಾಯಸ್ ಅವರ ಅನುಭವದ ನುಡಿಗಳಾಗಿವೆ.
ಸಾಮಾಜಿಕ ಕಾರ್‍ಯಕರ್ತ ಮತ್ತು ಪಶು ವೈದ್ಯಾಕಾರಿ ಡಾ| ಕೃಷ್ಣ ಭಟ್ ಹೇಳುವಂತೆ, ಹೈನುಗಾರಿಕೆ ಇಲ್ಲಿಯ ಮಹಿಳೆಯರಿಗೆ ದೊಡ್ಡ ಶಕ್ತಿ ನೀಡಿದೆ ಮತ್ತು ಅವರ ಶ್ರಮವೇ ಕ್ಷೀರಕ್ರಾಂತಿಗೆ ಕಾರಣವಾಗಿದೆ. “ಹಸು, ಕರುಗಳಿಗೆ ಅನಾರೋಗ್ಯವಿದ್ದರೆ ಫೋನ್ ಕರೆ ಮಾಡುವವರಲ್ಲಿ ಮಹಿಳೆಯರೇ ಅಧಿಕ. ಅವರು ತಮ್ಮ ಮನೆ ಮಂದಿಯೊಂದಿಗೆ ಹಾಲು ಉತ್ಪಾದನೆಯಲ್ಲಿ ಒಂದಾಗಿ ಸೇರಿ ಹೋಗಿದ್ದಾರೆ. ಸೊಸೈಟಿಗೆ ಹಾಲು ತರುವವರು ಮಾತ್ರ ಪುರುಷರು” ಎಂದು ಭಟ್ ಹೇಳತ್ತಾರೆ.
ಇಡ್ಕಿದು ವ್ಯವಸಾಯ ಸೇವಾ ಸಹಕಾರಿ ಸಂಘ ಗ್ರಾಮಾಭಿವೃದ್ಧಿಗಾಗಿ ೧೨ ಸೂತ್ರಗಳನ್ನು ಕೈಗೊಂಡಿದೆ. ಗ್ರಾ.ಪಂ. ಆ ಸೂತ್ರಗಳನ್ನು ಆಡಳಿತದಲ್ಲಿ ಅಳವಡಿಸಿಕೊಂಡಿದೆ. ಈಗಿನ ಅಧ್ಯಕ್ಷೆ ಶಿಕ್ಷಣ ಪಡೆದವರಾಗಿದ್ದಾರೆ. ಸ್ವಂತ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಅವರಲ್ಲಿದೆ ಎನ್ನುತ್ತಾರವರು.
ಎಸ್‌ಜಿಎಸ್‌ವೈ
ಸ್ವರ್ಣ ಜಯಂತಿ ಗ್ರಾಮ ಸ್ವರೋಜ್‌ಗಾರ್ ಯೋಜನೆ (ಎಸ್‌ಜಿಎಸ್‌ವೈ)ಯಡಿಯಲ್ಲಿ ಗ್ರಾ.ಪಂ. ಅನೇಕ ಮಹಿಳೆಯರಿಗೆ ಹೈನುಗಾರಿಕೆ, ಮಲ್ಲಿಗೆ ಕೃಷಿ, ಹೊಲಿಗೆ ತರಬೇತಿ, ಕೋಳಿ ಸಾಕಣೆ ಮೊದಲಾದ ಸ್ವ ಉದ್ಯೋಗ ನಡೆಸಲು ತರಬೇತಿ ನೀಡಿರುವುದಲ್ಲದೆ, ಸಹಾಯಧನ ಒದಗಿಸಲಾಗಿದೆ. ಇಂದು ಇದರಿಂದ ಅನೇಕರು ಆರ್ಥಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.
೨ ವರ್ಷಗಳಲ್ಲಿ ಎಸ್‌ಜಿಎಸ್‌ವೈಯಲ್ಲಿ ರೂ. ೨೨ ಲಕ್ಷ ಗ್ರಾ.ಪಂ.ಗೆ ಲಭಿಸಿದ್ದು ಅವುಗಳನ್ನು ಸಂಪೂರ್ಣವಾಗಿ ವ್ಯಯಿಸಲಾಗಿದೆ. ಸ್ವ ಸಹಾಯ ಸಂಘಗಳ ೨೩೦ ಸದಸ್ಯರು ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂದು ಇಡ್ಕಿದು ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ್ ಹೇಳುತ್ತಾರೆ.
ಜಲ ಸಾಕ್ಷರತೆ
ಜಲ ಸಾಕ್ಷರತೆಗೆ ನಿಜಾರ್ಥ ತಂದು ಕೊಟ್ಟ ಗ್ರಾ.ಪಂ.ಗಳ ಪೈಕಿ ಇಡ್ಕಿದುಗೆ ಮೊದಲ ಸ್ಥಾನ ಸಲ್ಲಬೇಕು. ಒಂದೂವರೆ ದಶಕಗಳ ಹಿಂದೆಯೇ ಮಳೆಕೊಯ್ಲು, ನೀರಿಂಗಿಸುವಿಕೆ, ಕಟ್ಟಗಳ ಕುರಿತು ಆಸಕ್ತಿ ವಹಿಸಿ ಕಾರ್‍ಯೋನ್ಮುಖರಾದ ಜನತೆ ಇಂದಿಗೂ ಅದೇ ಮಾದರಿಯಲ್ಲಿ ಮುಂದುವರಿದಿದ್ದಾರೆ. ಶಾಲೆ, ಮನೆಗಳು ಸರಕಾರಿ ಕಟ್ಟಡಗಳು ಮಾತ್ರವಲ್ಲದೆ ಆರಾಧನಾ ಕೇಂದ್ರಗಳಲ್ಲೂ ಜಲ ಮರುಪೂರಣದ ಪ್ರಯೋಗಗಳು ಯಶಸ್ವಿಯಾಗಿ ನಡೆದಿದ್ದು, ಇಂದಿಗೂ ಜೀವಂತವಾಗಿವೆ.
ನೀರಿಂಗಿಸುವಿಕೆ, ಔಷಯ ವನ, ಗ್ರಾಮ ತೋಟ ಮತ್ತು ಗ್ರಾಮಾಭಿವೃದ್ಧಿ ಚರ್ಚಾ ಕೂಟಗಳ ಮೂಲಕ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ನಾಡಿನ ಗಮನ ಸೆಳೆದಿದೆ.
ಇಡ್ಕಿದು ಗ್ರಾಮದ ನೀರಿನ ಬಗೆಗಿನ ಎಚ್ಚರಿಕೆ ಅತ್ಯಂತ ಮಾದರಿಯಾದುದು. ನೀರಿಂಗಿಸುವಿಕೆಯಲ್ಲಿ ಇಲ್ಲಿನ ಸಮುದಾಯದ ಭಾಗವಹಿಸುವಿಕೆ ವಿಶ್ವದ ಗಮನ ಸೆಳೆದಿದೆ. ಇತರೆಡೆಗಳಿಗೆ ಪ್ರೇರಣೆಯಾಗಬಲ್ಲ ಪ್ರಯತ್ನಗಳು ನಡೆದಿವೆ. ಜಲ ಸಾಕ್ಷರತೆ, ಸಾವಯವ ಕೃಷಿ, ರೇಬಿಸ್ ನಿರ್ಮೂಲನ, ಹೈನುಗಾರಿಕೆಯ ಮೂಲಕ ಇಡ್ಕಿದು ಮಿಕ್ಕೆಲ್ಲಾ ಗ್ರಾ.ಪಂ.ಗಳಿಗಿಂತ ಭಿನ್ನವಾಗಿ ಗುರುತಿಸಲ್ಪಡುತ್ತದೆ ಎನ್ನುತ್ತಾರೆ ಜಲತಜ್ಞ ಶ್ರೀ ಪಡ್ರೆ.
ಸೌಕರ್ಯಕ್ಕೆ ಒತ್ತು
ರತ್ನಾ ಅವರೊಂದಿಗೆ ಐದು ವರ್ಷಗಳ ಕಾಲ ಗ್ರಾ.ಪಂ. ಸದಸ್ಯರಾಗಿ ಒಡನಾಟದಲ್ಲಿದ್ದ ಅಳಕೆಮಜಲಿನ ಸೆಫಿಯಾರವರ ಪ್ರಕಾರ, ರತ್ನಾ ತುಂಬ ಒಳ್ಳೆಯ ಮೆಂಬರ್, ಅವರು ನೈರ್ಮಲ್ಯ ಕಾರ್‍ಯಕ್ರಮಗಳು, ಹೆಮ್ಮಕ್ಕಳ ಶಿಕ್ಷಣ, ಮೂಲಭೂತ ಸೌಕರ್‍ಯಗಳ ಬಗ್ಗೆ ಮುನ್ನೋಟ ಹೊಂದಿದ್ದಾರೆ.
ಪಾರದರ್ಶಕ ಆಡಳಿತ
ಇಲ್ಲಿಯ ಸಾಕ್ಷರತಾ ಪ್ರಮಾಣ, ಮಹಿಳಾ ಸಬಲೀಕರಣ, ಜಲ ಸಾಕ್ಷರತೆ, ಆರೋಗ್ಯ ಕಾರ್‍ಯಕ್ರಮಗಳು ಗ್ರಾಮ ಪಂಚಾಯತ್ ಆಡಳಿತ ಪರಿಣಾಮಕಾರಿಯಾಗಿ ಮತ್ತು ಪಾರದರ್ಶಕವಾಗಿದೆ ಎಂಬುದನ್ನು ಪ್ರತಿಫಲಿಸುತ್ತದೆ. ಇಲ್ಲಿ ಪ್ರತೀ ತಿಂಗಳು ಸಾಮಾನ್ಯ ಸಭೆ ನಡೆಯುತ್ತಿದೆ. ಸದಸ್ಯರ ಹಾಜರಾತಿ ಬಹುತೇಕ ಶೇ. ೧೦೦. ಗ್ರಾಮ ಸಭೆ, ಜಮಾಬಂದಿಗೆ ಮತದಾರರ ಪ್ರತಿಕ್ರಿಯೆ ಉತ್ತಮವಾಗಿವೆ. ಉಪಸಮಿತಿಗಳು ಸಕ್ರಿಯವಾಗಿವೆ. ಎಲ್ಲಾ ರೀತಿಯ ಸಭೆಗಳಿಗೆ ಅಧ್ಯಕ್ಷರ ಹಾಜರಾತಿ ೧೦೦ ಶೇ. ಎಂಬುದನ್ನು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಖಚಿತ ಪಡಿಸುತ್ತಾರೆ.
೨೦೦೫-೧೦ರ ಸಾಲಿನಲ್ಲಿ ೪೪ ಮಾಸಿಕ ಸಭೆಗಳು ನಡೆದು, ೪೧ ಸಭೆಗಳಲ್ಲಿ ರತ್ನಾ ಪಾಲ್ಗೊಂಡಿದ್ದಾರೆ. ಆ ಸಾಲಿನ ಎಲ್ಲಾ ಆರು ವಿಶೇಷ ಸಭೆಗಳಲ್ಲಿ ರತ್ನಾರವರ ಹಾಜರಾತಿಯಿದೆ. ೨೦೧೦-೧೧ನೇ ಸಾಲು ೨೩.೬.೨೦೧೦ರಿಂದ ಪ್ರಾರಂಭವಾಗಿದೆ. ಈಗಾಗಲೇ ೮ ಸಾಮಾನ್ಯ ಸಭೆಗಳು, ೩ ವಿಶೇಷ ಸಭೆಗಳು ಜರುಗಿದ್ದು, ಅಧ್ಯಕ್ಷೆ ರತ್ನಾ ಎಲ್ಲಾ ಸಭೆಗಳಲ್ಲಿ ಪಾಲ್ಗೊಂಡಿದ್ದಾರೆ. ವಿಡಬ್ಲ್ಯುಎಸ್ ಸಭೆಗಳಲ್ಲೂ ಅಧ್ಯಕ್ಷೆ ರತ್ನಾ ಶೇ. ೧೦೦ ಹಾಜರಾತಿ ಕಾಯ್ದುಕೊಂಡಿದ್ದಾರೆ.
ಮದಕಕ್ಕೆ ಕಾಯಕಲ್ಪ ಬೇಕು
ಇಡ್ಕಿದು ಗ್ರಾಮದ ಏಮಾಜೆಯಲ್ಲಿ ಒಂದು ಮದಕವಿದ್ದು, ಹೂಳು ತುಂಬಿದೆ. ಅದರ ಹೂಳೆತ್ತಿ ಅಭಿವೃದ್ಧಿ ಪಡಿಸಿದರೆ ಸೂರ್ಯ, ಕೋಲ್ಪೆ ಮತ್ತು ಕೆದಿಮಾರು ಭಾಗದ ಕೃಷಿ ಭೂಮಿಗೆ ನೀರು ಒದಗಿಸಬಹುದಾಗಿದೆ ಎನ್ನುತ್ತಾರೆ ಕಳೆದ ಅವಯಲ್ಲಿ ಉಪಾಧ್ಯಕ್ಷರಾಗಿದ್ದು ಪ್ರಸ್ತುತ ಸದಸ್ಯರಾಗಿರುವ ಸುಧೀರ್ ಕುಮಾರ್.
ಕುಳ ಗ್ರಾಮದ ೫ ಅಂಗನವಾಡಿಗಳಿಗೆ ಅಡುಗೆ ಅನಿಲದ ಸಂಪರ್ಕ, ಇಡ್ಕಿದು ಗ್ರಾಮದ ಮಿತ್ತೂರು ಬರೆ ಎಂಬಲ್ಲಿ ಅಪಾಯ ದಂಚಿನಲ್ಲಿರುವ ೫ ಮನೆಗಳ ಸಂರಕ್ಷಣೆಗಾಗಿ ತಡೆಗೋಡೆ, ಕಬಕ- ಓಜಾಲ- ಕುಂಡಡ್ಕ ಸಂಪರ್ಕ ರಸ್ತೆ, ಉರಿಮಜಲು- ದೇವಸ್ಯ- ಕೋಲ್ಪೆ- ಮಿತ್ತೂರು ಕೂಡುರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ನೀರಿಂಗಿಸುವಿಕೆ, ಗೋಬರ್ ಗ್ಯಾಸ್ ಸ್ಥಾವರ ನಿರ್ಮಾಣ ಹೆಚ್ಚಳವಾಗಬೇಕು ಎಂಬುದು ಸುಧೀರ್‌ರವರ ಆಶಯ.
ಇಡ್ಕಿದು ಗ್ರಾಮ ಪಂಚಾಯತ್ ಆಡಳಿತ ಮಂಡಳಿ ತಂಡವಾಗಿ ಗ್ರಾಮಾಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದ್ದು, ಜನತೆ ಇನ್ನಷ್ಟು ಪ್ರೋತ್ಸಾಹಿಸುವ ಮೂಲಕ ಪಂಚಾಯತ್‌ರಾಜ್ ವ್ಯವಸ್ಥೆಯ ಬೇರುಗಳನ್ನು ಬಲಪಡಿಸಬಹುದು ಮತ್ತು ಗ್ರಾಮಾಭಿವೃದ್ಧಿಯನ್ನು ಸಾಸಬಹುದು ಎಂಬುದು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮಲ್ಲಿಕಾರವರ ಅನಿಸಿಕೆಯಾಗಿದೆ.
ಹೊಗೆ ರಹಿತ ಗ್ರಾ.ಪಂ.ನತ್ತ….
ಹೈನುಗಾರಿಕೆ ನಿರತರ ಪೈಕಿ ನೂರಕ್ಕೂ ಅಧಿಕ ಕುಟುಂಬಗಳು ಗೋಬರ್ ಗ್ಯಾಸ್ ಸ್ಥಾವರ ಹೊಂದಿವೆ. ಅಡುಗೆ ಅನಿಲ ಸಂಪರ್ಕ ಪಡೆದ ಕುಟುಂಬಗಳ ಸಂಖ್ಯೆ ಮುನ್ನೂರನ್ನು ದಾಟಿದೆ. ೫ ಅಂಗನವಾಡಿಗಳು ಅಡುಗೆ ಅನಿಲದ ಸಂಪರ್ಕ ಹೊಂದಿವೆ.
ಹೊಗೆ ರಹಿತ ಗ್ರಾ.ಪಂ. ಕಲ್ಪನೆ ಅಧ್ಯಕ್ಷರ ಮನದಲ್ಲಿ ಸುಳಿದಾಡತೊಡಗಿದೆ. ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿಯ ಹಾಗೂ ಗ್ರಾಮದ ಜನತೆಯ ಸಹಕಾರದೊಂದಿಗೆ ಯೋಜನೆಯನ್ನು ಜಾರಿಗೆ ತರುವ ಆಸಕ್ತಿಯನ್ನು ರತ್ನಾರವರು ಹೊಂದಿದ್ದಾರೆ.
ಶಿಶು ಮರಣವಿಲ್ಲ
೨೦೦೮ರ ಏಪ್ರಿಲ್ ೧ರಿಂದ ೨೦೧೧ರ ಮಾರ್ಚ್ ೩೧ರ ವರೆಗೆ ೩ ವರ್ಷಗಳ ಅವಯಲ್ಲಿ ೩೧೭ ಶಿಶುಗಳು ಇಲ್ಲಿ ಜನ್ಮತಾಳಿವೆ. ಶಿಶು ಮರಣ, ಬಾಣಂತಿ ಮರಣ ಪ್ರಕರಣಗಳು ಸಂಭವಿಸಿಲ್ಲ ಎಂಬುದನ್ನು ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಕಾರಿ ಡಾ. ರಾಮಕೃಷ್ಣ ದೃಢೀಕರಿಸಿದ್ದಾರೆ. ಕಳೆದ ೩ ವರ್ಷಗಳ ಅವಧಿಯಲ್ಲಿ ಕೇವಲ ೩ ಡೆಂಗ್ಯು ಪ್ರಕರಣಗಳು ವರದಿಯಾಗಿದ್ದು (ಸಾವು ಸಂಭವಿಸಿಲ್ಲ), ಇತರ ಯಾವುದೇ ಸಾಂಕ್ರಾಮಿಕ ರೋಗಗಳು ಇಡ್ಕಿದುನಿಂದ ವರದಿಯಾಗಿಲ್ಲ.
ಗ್ರಾಮಾಭಿವೃದ್ಧಿಗೆ ೧೨ ಸೂತ್ರಗಳು
ಇಡ್ಕಿದು ಸೇವಾ ಸಹಕಾರಿ ಸಂಘವು ಗ್ರಾಮ ಸ್ವರಾಜ್ಯ, ಸ್ವಾವಲಂಬನೆ ಮತ್ತು ಗ್ರಾಮಾಭಿವೃದ್ಧಿಗಾಗಿ ೧೨ ಸೂತ್ರಗಳನ್ನು ರೂಪಿಸಿದೆ. ಆ ಸೂತ್ರಗಳನ್ನು ಗ್ರಾ.ಪಂ.ಆಡಳಿತ ಮಂಡಳಿ ಪೋಷಿಸುತ್ತಾ ಬಂದಿದೆ. ಅವುಗಳೆಂದರೆ,
ಜಲ ಸುರಕ್ಷತೆಗೆ ಜನ ಚಿಂತನೆ, ಮಿಶ್ರ ಕೃಷಿ, ಮನೆ ಬಳಕೆಗೆ ಬಾವಿ ನೀರು, ಔಷಧೀಯ ಸಸ್ಯಗಳನ್ನು ಬೆಳೆಸುವುದು, ಅಡುಗೆ ಮನೆಗೆ ಬಯೋಗ್ಯಾಸ್, ಸೌರ ವಿದ್ಯುತ್ ಬಳಕೆ, ಆಹಾರ-ತರಕಾರಿ ಸ್ವಾವಲಂಬನೆ, ದೇಶಿ ಗೋವು ತಳಿಗಳ ಪೋಷಣೆ, ದಿನಬಳಕೆ ವಸ್ತುಗಳ ತಯಾರಿ, ದುಶ್ಚಟಗಳಿಂದ ದೂರ. ಇವುಗಳಿಗೆಲ್ಲಾ ಪೂರಕ ವಾತಾವರಣಕ್ಕಾಗಿ ಸಾಮರಸ್ಯ.
ವಿಸ್ತೀರ್ಣ ಮತ್ತು ಜನಸಂಖ್ಯೆ
- ಇಡ್ಕಿದು ಗ್ರಾಮ ಪಂಚಾಯತ್ ಕುಳ ಮತ್ತು ಇಡ್ಕಿದು ಕಂದಾಯ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದೆ.
- ವಿಸ್ತೀರ್ಣ: ಇಡ್ಕಿದು-೨೦೯೪.೬೪ ಎಕರೆ, ಕುಳ-೧೩೪೯.೬೦ ಎಕರೆ
- ಕುಟುಂಬಗಳು: ೧,೭೦೦. ಬಿಪಿಎಲ್ : ೭೦೫, ಪ.ಜಾ.: ೪೬, ಬಿಪಿಎಲ್: ೪೨, ಪ.ವರ್ಗ: ೪೩, ಬಿಪಿಎಲ್: ೩೫.
- ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂದೇ ಒಂದು ಕೊರಗ ಕುಟುಂಬವನ್ನು ಖಾತರಿ ಯೋಜನೆಗೆ ಒಳಪಡಿಸಲಾಗಿದೆ
- ಒಟ್ಟು ಜನಸಂಖ್ಯೆ: ೭೨೧೮. ಪುರುಷರು: ೩೬೦೨. ಮಹಿಳೆಯರು: ೩೬೧೬. (ಸಾವಿರ ಪುರುಷರಿಗೆ ಮಹಿಳೆಯರ ಪ್ರಮಾಣ ೧೦೦೩.೮೮ ಆಗಿದೆ.)
೧. ಮುಂದುವರಿಕಾ ಶಿಕ್ಷಣ ಕೇಂದ್ರದಲ್ಲಿ ಪ್ರೇರಕಿಯಾಗಿದ್ದ ಶ್ರೀಮತಿ ರತ್ನಾ , ಪ್ರಸ್ತುತ ಇಡ್ಕಿದು ಗ್ರಾ.ಪಂ. ಪ್ರಥಮ ಪ್ರಜೆ.
೨. ಸಂಪನ್ಮೂಲವಿದ್ದರೆ ಮಾತ್ರ ಆಡಳಿತದಲ್ಲಿ ಸುಧಾರಣೆ ಮತ್ತು ಅಭಿವೃದ್ಧಿಯಲ್ಲಿ ಪ್ರಗತಿ ಸಾಧಿಸಲು ಸಾಧ್ಯ.
೩. ಹದಿನಾರು ವರ್ಷಗಳಿಂದ ಇಡ್ಕಿದು ವ್ಯಾಪ್ತಿಯ ಎಲ್ಲಾ ಸಾಕುನಾಯಿಗಳಿಗೆ ರೇಬಿಸ್ ನಿರೋಧಕ ಚುಚ್ಚುಮದ್ದು ನೀಡಲಾಗುತ್ತಿದೆ.
೪. ಜಲಸಾಕ್ಷರತೆಯಲ್ಲಿ ಅತ್ಯಂತ ಮುಂಚೂಣಿಯಲ್ಲಿರುವ ಗ್ರಾಮ ಪಂಚಾಯತ್
೫. ಗ್ರಾ.ಪಂ. ಆಡಳಿತ ಮಂಡಳಿಯು ಪ್ರತಿಯೊಂದು ಸಭೆಯಲ್ಲೂ ಅತ್ಯುತ್ತಮ ಹಾಜರಾತಿ ಕಾಯ್ದುಕೊಂಡಿದೆ.
॒॒॒॒॒॒॒॒॒॒॒॒॒॒॒॒॒॒॒
Name : Guruvappa N.T. Balepuni
S/o. Aitha Mogera,
Narya-Thachcha Majal House,
Post Balepuni
Bantwal Taluk,
Dakshina Kannada-574 153
Date of birth : 01/06/1963
Office address : Senior Reporter
Hosa Digantha Kannada Daily
Rashtrakavi Govinda Pai Circle
City Point, 4th Floor,
Kodialbail, Mangalore-575 003.
Mobile: 9448889268
E-mail: balepuni@gmail.com
Educational Qualification:
B.A. (N.C)-1985, Joint to Journalism Field-1986
Work experience:
Worked in various local media houses like Chetana Weekly, Suddi Bidugade Weekly, Amrutha Weekly, Saptasaara Weekly, Canara Times group (Canara Times, Karavali Ale, Kannada Janantaranga) Mangalore Mithra, Samyuktha karanataka, various place of Dakshina Kannada district (Sullia, Mangalore, Bantwal), Udupi District, Hubli City and Bangalore City.
Some important Reports:
1) Udupi Land Scam : investigative report
2) Bhaskar Nair Jail escape: precautionary report
3) Feature on Social worker Hajabba who later became KANNADAPRABHA MAN OF THE YEAR
4) Mysore Public School issue
5) Doctorate degree awardee: Babu in Koraga Community
6) In the weaving field Surekha is the first tribal girl.
7) Literacy movement achievers Ilanthila Sumathi, Swarnalatha Kaukrady (best SHG promoter)
8) Exposing the scams in the Tribal welfare projects
9) Mahabaleshwara Bhat (best achiever of Sericulture in the coastal region)
10) Rare project by rural ladies at Laila (Sanitary Napkin unit)
11) Special Housing Schemes for Koragas (tribals in the DK)
12) MGNREGA related series of report.
13) Reports about Grama Sabhas and different Zilla panchayaths schemes.
14) Total sanitation programmes : Development report on Ira GP, Naringana GP and Hosangadi GPs
15) Model in MGNREGA implementation about Kashipatna GP
Impacts:
1) The feature on social worker Hajabba took him to National level ; he was invited for governor’s tea-party on the occasion of republic day. Various individuals and institutions supported them to come up in the society. He was the founder of Government higher primary school in Newpadpu near Mangalore University, with the assistance of Rs 20,00,000 support from public and institutions. He was recognized by popular Kannada daily Kannada Prabha year award, CNN IBN year award and other prestigious awards.
2) Udupi Land Scam, criminal case against 11 persons by Karnataka CoD 1995.
3) Within a week of publishing an investigative report of notorious counterfeit Bhaskar Nair escapes from Mangalore Sub-jail on 26/6/1999. The report was highlighted in the Karnataka Assembly.
4) Exposure report of ITDP scam resulted in suspension of three officials and also ordered for investigation. One of the culprit is under the criminal case.
Professional guidance:
For the last 10 years, have introduced more than 30 students into Journalism by training them. Many of them now work in the various print and visual media houses. Few are working in the educational institutions and one of them working in an institution as Journalism Head of the Department.
Other interests
Rural development and Panchayat Raj, Tribal Welfare, Women empowerment, Folk and Literacy Movement.
ಬೇಳೂರು ಸುದರ್ಶನ
ದೂರವಾಣಿ: ೯೭೪೧೯೭೬೭೮೯
1 Comment
Pingback: ಸುದ್ದಿಮನೆ ಮುಖ್ಯಾಂಶಗಳು – 28 ಸೆ. « ಕಾಲಂ9 * column9 * Kannada media