`ಉಮರನ ಒಸಗೆ’ಯನ್ನು ಯಾರು ಕೇಳಿಲ್ಲ? ಡಿವಿಜಿಯವರು ಕನ್ನಡಕ್ಕೆ ತಂದು ೧೯30ರಲ್ಲಿ ಪ್ರಕಟವಾದ ಈ ಪುಸ್ತಕದ ಮೂಲ ಕರ್ತೃ ಉಮರ್ ಖಯ್ಯಾಮ್. ಹನ್ನೊಂದನೇ ಶತಮಾನದ ಈ ಮಹಾನ್ ವ್ಯಕ್ತಿ ಬರೆದ ಚೌಪದಿಗಳನ್ನು (ರುಬೈಯಾತ್) ಮತ್ತು ಹಲವು ಕವನಗಳನ್ನು ಡಿವಿಜಿಯವರು ಸೊಗಸಾಗಿ ಕನ್ನಡಕ್ಕೆ ತಂದರು. ಇಬ್ಬರೂ ಮಹಾ ಸಾಧಕರೇ. ಡಿವಿಜಿಯವರ ಮಂಕುತಿಮ್ಮನ ಕಗ್ಗವೂ ಉಮರನ ಮೂಲ ಕವನಗಳಷ್ಟೇ ಗಟ್ಟಿಯಾದ, ಇಂದಿಗೂ ಮರುಮುದ್ರಣ ಕಾಣುತ್ತಿರುವ, ಸಹಸ್ರಾರು ಜನರಿನ ಬಾಳಿನ ಬೆಳಕಾಗಿರುವ ಕೃತಿ.
ಡಿವಿಜಿಯವರ ಬಗ್ಗೆ ಬರೆದ ಪುಸ್ತಕ `ಡಿ ವಿ ಗುಂಡಪ್ಪ’ದಲ್ಲಿ (ಸಾಹಿತ್ಯ ಅಕಾಡೆಮಿ) ಉಮರನ ಒಸಗೆಯ ಸಂಕ್ಷಿಪ್ತ ವಿವರಗಳಿವೆ. ಎಡ್ವರ್ಡ್ ಫಿಟ್‌ಜೆರಾಲ್ಡ್ ಎಂಬ ಉಮರನ ಭಕ್ತ ಪರ್ಶಿಯನ್ ಭಾಷೆಯಿಂದ ಅನುವಾದಿಸಿದ ೮೬ ಕವನಗಳೂ ಸೇರಿದಂತೆ ಒಟ್ಟು ೧೭೨ ಪದ್ಯಗಳನ್ನು ಡಿವಿಜಿ ಕನ್ನಡಕ್ಕೆ ತಂದಿದ್ದಾರೆ.
ಜೀವನದ ಸೊದೆಯ ಸವಿಯಲ್ಕಿರುವುದೀ ನಿಮಿಷ;
ಕರೆವುದಿನ್ನೊಂದು ನಿಮಿಷದಲಿ ಸುಡುಗಾಡು;
ರವಿ ಶಶಿಗಳೋಡುತಿಹರೆಲ್ಲ ಶೂನ್ಯೋದಯಕೆ;
ಸಾಗುತಿಹರಟಕ! ಬಾ, ಸೊದೆಯುಣುವ ಬೇಗ.
ಇದು ಉಮರನ ಒಸಗೆಯ ಒಂದು ರುಬೈಯಾತ್.
ಹೀಗೆ ಇಡೀ ಜಗತ್ತಿಗೇ ಬದುಕಿನ ಬಗ್ಗೆ ಬರೆದ ಮಹಾ ತತ್ವಜ್ಞಾನಿ ಉಮರ್ ಖಯ್ಯಾಮ್ (ಪೂರ್ಣ ಹೆಸರು: ಘಿಯಾತ್ ಅಲ್-ದಿನ್ ಅಬುಲ್ ಫಥಹ್ ಉಮರ್ ಇಬ್ನ್ ಇಬ್ರಾಹಿಮ್ ಅಲ್-ನಿಶಾಪುರಿ ಅಲ್-ಖಯ್ಯಾಮಿ ) ಒಬ್ಬ ಶ್ರೇಷ್ಠ ಗಣಿತಜ್ಞನೂ ಆಗಿದ್ದ ಎಂಬುದೇ ಈ ಬ್ಲಾಗಿನ ಮುಖ್ಯ ಭೂಮಿಕೆ!
ಪರ್ಶಿಯಾ ದೇಶವೂ ಭಾರತದ ಗಣಿತಜ್ಞರ ಸಂಶೋಧನೆಗಳನ್ನು ಅದಾಗಲೇ ತಿಳಿದುಕೊಂಡಿದ್ದ ಕಾಲ. ಭಾರತದ ಗಣಿತವನ್ನೂ ಗಣನೆಗೆ ತೆಗೆದುಕೊಂಡು, ಯೂಕ್ಲಿಡನ ಗಣಿತದ ಸಿದ್ಧಾಂತಗಳನ್ನೂ ಅರಗಿಸಿಕೊಂಡು ಉಮರ್ ಖಯ್ಯಾಮ್ ಬರೆದ ಗಣಿತದ ಪುಸ್ತಕಗಳು ಜಗತ್ತಿನ ಪ್ರಮುಖ ಗಣಿತ ಗ್ರಂಥಗಳೆಂದು ಹೆಸರಾಗಿವೆ.
Treatise on Demonstration of Problems of Algebra ಇದು ಉಮರ್ ಖಯ್ಯಾಮನ ಪ್ರಮುಖ ಗ್ರಂಥ. ಮಧ್ಯಯುಗದ ಮಹಾನ್ ಗಣಿತಜ್ಞರಲ್ಲಿ ಒಬ್ಬನೆಂದು ಖ್ಯಾತನಾದ ಖಯ್ಯಾಮ್ ಈ ಗ್ರಂಥದಲ್ಲಿ ಹೈಪರ್‌ಬೋಲಾವನ್ನು ವೃತ್ತದಿಂದ ಕತ್ತರಿಸಿ ಕ್ಯೂಬಿಕ್ ಸಮೀಕರಣಗಳನ್ನು ಪರಿಹರಿಸಬಹುದೆಂದು ತೋರಿಸಿಕೊಟ್ಟಿದ್ದಾನೆ. x2+200x=20x2+2000 ಕ್ಯೂಬಿಕ್ ಸಮೀಕರಣವನ್ನು ಪರಿಹರಿಸಿದ ಉಮರ್. ಈ ಸಮಸ್ಯೆಯ ಪರಿಹಾರವನ್ನು ರೂಲರ್ ಮತ್ತು ಕಂಪಾಸ್‌ಗಳಿಂದ ಹುಡುಕಲು ಅಸಾಧ್ಯ. ಈ ವಿಷಯವನ್ನು ೭೫೦ ವರ್ಷಗಳ ನಂತರ ಅರಿಯಲಾಯಿತು!
ಕ್ಯೂಬಿಕ್ ಸಮೀಕರಣಗಳಿಗೆ ಮೂರನೇ ಪರಿಹಾರವೂ ಇರಲು ಸಾಧ್ಯ ಎಂದು ಉಮರ್‌ಗೆ ಅನಿಸಿದರೂ ಅದನ್ನು ಸಾಬೀತು ಪಡಿಸಲು ಆಗಲಿಲ್ಲ. ‘ಬಹುಶಃ ಮುಂದೆ ಯಾರಾದರೂ ಈ ವಿಷಯವನ್ನು ಕಂಡುಹಿಡಿಯಬಹುದು’ ಎಂದು ಉಮರ್ ಬರೆದಿದ್ದ. ೧೬ನೇ ಶತಮಾನದಲ್ಲಿ ಡೆಲ್ ಫೆರೋ, ಟಾರ್ಟಾಗ್ಲಿಯಾ ಮತ್ತು ಫೆರಾರಿ ಎಂಬುವರು ಈ ವಿಷಯವನ್ನು ಸೂಕ್ತವಾಗಿ ನಿರೂಪಿಸಿದರು.
ಇದಲ್ಲದೆ ಉಮರ್ ಮತ್ತು ಆ ಕಾಲದ ಅರಬ್ ಗಣಿತಜ್ಞರು ಅಂಕಗಣಿತದಲ್ಲಿ ಸ್ಕ್ವೇರ್ ರೂಟ್, ಕ್ಯೂಬ್‌ರೂಟ್‌ಗಳನ್ನು ಕಂಡುಹಿಡಿಯುವ ಗಣಿತಕ್ಕಿಂತ ಮುಂದೆ ಹೋಗಿ ಐದು ಮತ್ತು ಆರನೆಯ ರೂಟ್‌ಗಳನ್ನು ಹುಡುಕುವ ವಿಧಾನಗಳನ್ನು ರೂಪಿಸಿದರು.
`ಥಿಯರಿ ಆಫ್ ಬೈನಾಮಿಯಲ್ ಎಕ್ಸ್‌ಪ್ಯಾನ್‌ಶನ್’ ಎಂಬುದು ಬೀಜಗಣಿತದ ಒಂದು ಪ್ರಮುಖ ಕೊಂಡಿ. ಈ ಬಗ್ಗೆ ಮೊದಲು ಬರೆದವನೇ ಉಮರ್ ಎಂಬ ಮಾತಿದೆ. ಆಮೇಲೆ ಐನೂರು ವರ್ಷಗಳ ನಂತರ ಪ್ಯಾಸ್ಕಲ್ ಮತ್ತು ನ್ಯೂಟನ್‌ರ ಸಂಶೋಧನೆಗಳಲ್ಲಿ ಈ ವಿಚಾರದ ಬಗ್ಗೆ ಹೆಚ್ಚಿನ ವಿವರಗಳಿವೆ. ಒಂದು ರೀತಿಯಲ್ಲಿ ನ್ಯೂಟನ್‌ನನ್ನೂ ಮೀರಿಸಿದ ಬುದ್ಧಿಮತ್ತೆ ಉಮರನದಾಗಿತ್ತು. ಪ್ಯಾಸ್ಕಲ್‌ನ ತ್ರಿಕೋನ ಎಂಬ ಪ್ರಖ್ಯಾತ ಗಣಿತ ಸಂಗತಿಯನ್ನೂ ಉಮರ್ ೧೧೦೦ರಲ್ಲೇ ಪ್ರಸ್ತಾಪಿಸಿದ್ದ.
ಕೋಪರ್ನಿಕಸ್‌ಗಿಂತ ಮೊದಲೇ `ಸೂರ್ಯಕೇಂದ್ರ’ ಗ್ರಹವ್ಯವಸ್ಥೆಯ ಸಿದ್ಧಾಂತವನ್ನು (ಹೀಲಿಯೋಸೆಂಟ್ರಿಕ್) ಖಯ್ಯಾಮನೇ ವ್ಯಾಖ್ಯಾನಿಸಿದ್ದ ಎಂದೂ ಇತಿಹಾಸಕಾರರು ಅನುಮಾನಪಟ್ಟಿದ್ದಾರೆ. (ಆದರೆ ಭಾರತದ ಆರ್ಯಭಟನು ಐದನೇ ಶತಮಾನದಲ್ಲೇ ಪರೋಕ್ಷವಾಗಿ ಸೂರ್ಯಕೇಂದ್ರಿತ ಗ್ರಹವ್ಯವಸ್ಥೆಯನ್ನು ವಿವರಿಸಿದ್ದ ಎಂಬ ಮಾಹಿತಿಯನ್ನೂ ನೆನಪಿಡಬೇಕು).
ಖಯ್ಯಾಮನ ಮನೆಯವರು ಗುಡಾರ (ಟೆಂಟ್) ನಿರ್ಮಿಸುವ ವೃತ್ತಿಯವರು. ಅಲ್ ಖಯ್ಯಾಮ್ ಎಂದರೆ ಟೆಂಟ್ ಮೇಕರ್ ಎಂದೇ ಅರ್ಥ. ತನ್ನ ಈ ಹಿನ್ನೆಲೆಯನ್ನೇ ಖಯ್ಯಾಮ್ ಒಂದು ರುಬೈಯಾತ್‌ನಲ್ಲಿ ಹೀಗೆ ಹೇಳಿದ್ದಾನೆ:
ವಿಜ್ಞಾನದ ಗುಡಾರವ ಹೊಲೆದ ಖಯ್ಯಾಮ್
ಯಾತನೆಯ ತಿದಿಯೊಳಗೆ ಬಿದ್ದರುವನು; ಹಠಾತ್ತನೆ ಸುಟ್ಟುಹೋಗಿರುವನು
ಅವನ ಬದುಕಿನ ಗುಡಾರದ ಹಗ್ಗಗಳನ್ನು ವಿಧಿಯಲುಗು ಕತ್ತರಿಸಿರುವುದು
ಆಸೆಗಳ ದಲ್ಲಾಳಿಯು ಅವನನ್ನು ಕಾಸಿಲ್ಲದೆ ಮಾರಿರುವನು!
ಯುವ ವಯಸ್ಸಿನಲ್ಲೇ ಸಮರಖಂಡಕ್ಕೆ ಹೋಗಿ ಶಿಕ್ಷಣ ಪಡೆದ ಖಯ್ಯಾಮ್ ನಂತ ಬುಖಾರಾಗೆ ಹೋಗಿ ನೆಲೆಸಿ ವಿಶ್ವಖ್ಯಾತ ಗಣಿತಜ್ಞ, ಖಗೋಳಶಾಸ್ತ್ರಜ್ಞ ಎಂದೇ ಪ್ರಸಿದ್ಧನಾದ. ಖಯ್ಯಾಮ್ ಸರ್ವಕಾಲಕ್ಕೂ ದಕ್ಕುವ ಜಗತ್ತಿನ ಮಹಾನ್ ತತ್ವಶಾಸ್ತ್ರಜ್ಞ ಎಂಬುದು ಹೆಚ್ಚು ಪ್ರಚಲಿತವಾಗಿಲ್ಲ. ಹಲವು ದಶಕಗಳ ಕಾಲ ತತ್ವಶಾಸ್ತ್ರವನ್ನು ಬೋಧಿಸಿದ ಖಯ್ಯಾಮ್‌ನ ಸಮಾಧಿಸ್ಥಳವು ಈಗ ವಿಶ್ವಖ್ಯಾತ ವಾಸ್ತುಶಿಲ್ಪದ ಅದ್ಭುತವೆಂದೇ ಪ್ರಸಿದ್ಧ. ಪ್ರತಿವರ್ಷವೂ ಸಾವಿರಾರು ಜನ ಇಲ್ಲಿಗೆ ಭೇಟಿ ನೀಡುತ್ತಾರೆ.
ಶೇಖ್ ಮುಹಮ್ಮದ್ ಮನ್ಸೂರಿ ಎಂಬ ಖ್ಯಾತ ವಿದ್ವಾಂಸನಿಂದ ಶಿಕ್ಷಣ ಪಡೆದ ಖಯ್ಯಾಮ್ ಮುಂದೆ ಇಮಾಮ್ ಮೊವಾಫಖ್ ನಿಶಾಪುರಿಯಿಂದಲೂ ಉನ್ನತ ಶಿಕ್ಷಣ ಪಡೆದ. ೧೦೭೦ರಲ್ಲಿ ಈತ ಬರೆದ ಕೃತಿಯೇ: Treatise on Demonstration of Problems of Algebra . ಮುಂದೆ ೧೦೭೭ರಲ್ಲಿ ಖಯ್ಯಾಮ್ ಯೂಕ್ಲಿಡನ ವಿವರಣೆಗಳಲ್ಲಿನ ತೊಂದರೆಗಳು ಎಂಬ ಪುಸ್ತಕವನ್ನೂ ಬರೆದ. ಯೂಕ್ಲಿಡನ ಪ್ರಖ್ಯಾತ ಸಮಾನಾಂತರ ಪಾಸ್ಚುಲೇಟ್ ಕುರಿತ ಸುಧಾರಿತ ವಾದವನ್ನು ಖಯ್ಯಾಮ್ ಇಲ್ಲಿ ಮಂಡಿಸುತ್ತಾನೆ. ಜ್ಯಾಮಿತಿಯಲ್ಲೂ ಖಯ್ಯಾಮ್ ಪ್ರಭುತ್ವ ಸಾಧಿಸಿದ್ದ. ಖಯ್ಯಾಮನು ಯೂಕ್ಲಿಡನ ಸಿದ್ಧಾಂತಗಳನ್ನು ಸಾಧಿಸಿ ಬರೆದ ಗ್ರಂಥಕ್ಕಿಂತ ಉತ್ತಮವಾದ ವಿವರಣೆ ಸಿಕ್ಕಿದ್ದೇ ೬೦೦ ವರ್ಷಗಳ ನಂತರ ಎಂದರೆ ಖಯ್ಯಾಮನ ಬುದ್ಧಿಮತ್ತೆಯನ್ನು ಕೊಂಡಾಡಲೇಬೇಕು.
ಉಮರನ ಬದುಕಿನಲ್ಲಿ ೧೧ನೇ ಶತಮಾನದ ರಾಜಕೀಯ ಸ್ಥಿತ್ಯಂತರಗಳು ಭಾರೀ ಪ್ರಭಾವ ಬೀರಿದವು. ಆಗ ಮೆಸೊಪೊಟಾಮಿಯಾ, ಸಿರಿಯಾ, ಪ್ಯಾಲೆಸ್ತೈನ್ ಮತ್ತು ಬಹುತೇಕ ಇರಾನನ್ನು ಒಳಗೊಂಡ ಪ್ರದೇಶವನ್ನು ಸೆಲ್‌ಜುಖ್ ಟರ್ಕರು ಆಳುತ್ತಿದ್ದರು. ಅವರ ದೊರೆ ತೊಘ್ರಿಲ್ ಬೇಗ್ ಕ್ರಿ.ಶ. ೧೦೩೮ರಲ್ಲಿ ಉಮರನ ಹುಟ್ಟೂರಾದ ನಿಶಾಬೋರ್‌ನ್ನೂ ಆಕ್ರಮಿಸಿದ. ಇಂಥ ರಾಜಕೀಯ ಉಲ್ಲಟಪಲ್ಲಟದ ಸಮಯದಲ್ಲೇ ಉಮರನ ಶಿಕ್ಷಣ ನಡೆಯಿತು. ತನಗೆ ಎದುರಾದ ಎಲ್ಲ ಕಷ್ಟಗಳನ್ನೂ ಉಮರನು ಬೀಜಗಣಿತದ ಪುಸ್ತಕದಲ್ಲಿ ಬರೆದುಕೊಂಡಿದ್ದಾನೆ. ೨೫ರ ಹರೆಯದ ಹೊತ್ತಿಗೇ ಅಂಕಗಣಿತ, ಬೀಜಗಣಿತ ಮತ್ತು ಸಂಗೀತದ ಮೇಲೆ ಪುಸ್ತಕಗಳನ್ನು ಬರೆದಿದ್ದ ಉಮರ್ ೧೦೭೦ರಲ್ಲಿ ಉಜ್‌ಬೆಕಿಸ್ತಾನದ ಸಮರಖಂಡಕ್ಕೆ ಹೋದ. ಇದು ಮಧ್ಯ ಏಶ್ಯಾದ ಅತಿ ಪ್ರಾಚೀನ ನಗರ. ಅಲ್ಲೇ ಉಮರನು ಬೀಜಗಣಿತದ ಮಹಾಗ್ರಂಥವನ್ನು ಬರೆದಿದ್ದು.
ಆ ಹೊತ್ತಿಗೆ ಸೆಲ್‌ಜುಖ್ ಸಾಮ್ರಾಜ್ಯದ ರಾಜಧಾನಿ ಎಶ್‌ಫಹಾನ್‌ನಲ್ಲಿ ತೊಘ್ರಿಲ್ ಬೇಗ್‌ನ ಮೊಮ್ಮಗ ಮಾಲಿಕ್ ಶಾ ಆಳುತ್ತಿದ್ದ. ಆತನೇ ಉಮರನಿಗೆ ಆಹ್ವಾನ ನೀಡಿ ಅಲ್ಲಿ ಒಂದು ಖಗೋಳ ವೀಕ್ಷಣಾಲಯವನ್ನು ಸ್ಥಾಪಿಸಲು ಕೇಳಿಕೊಂಡ. (ನೆನಪಿಡಿ, ಈ ಸೆಲ್‌ಜುಖ್ ರಾಜರುಗಳು ಕೇವಲ ಆಕ್ರಮಣ ಮಾಡಿ ಲೂಟಿ ಮಾಡುತ್ತಿದ್ದವರಲ್ಲ, ತಮ್ಮ ಆಡಳಿತದ ಪ್ರದೇಶವನ್ನು ಸುಧಾರಿಸಲು ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತಿದ್ದರು.) ಅಲ್ಲಿ ಎಂಟು ವರ್ಷಗಳ ಕಾಲ ತನ್ನ ಸಹ ವಿಜ್ಞಾನಿಗಳೊಂದಿಗೆ ಸಂಶೋಧನೆ ನಡೆಸಿದ ಉಮರ್ ಒಂದು ವರ್ಷ ಎಂದರೆ ಇಷ್ಟೇ ದಿನಗಳು ಎಂಬ ಕರಾರುವಾಕ್ ಲೆಕ್ಕವನ್ನು ಹಾಕಿ ತೋರಿಸಿದ. ಗಣಿತಜ್ಞನಾಗುವುರ ಜೊತೆಗೆ ಖಗೋಳಶಾಸ್ತ್ರಜ್ಞನಾಗಿದ್ದ ಉಮರ್ ಒಂದು ಸೌರ ವರ್ಷ ಎಂದರೆ ೩೬೫.೨೪೨೧೯೮೫೮೧೫೬ ದಿನಗಳು ಎಂದು ಘೋಷಿಸಿದ. ೫೦೦ ವರ್ಷಗಳ ನಂತರ ಬಂದ ಗ್ರೆಗೊರಿಯನ್ ಕ್ಯಾಲೆಂಡರಿಗಿಂತ ಖಯ್ಯಾಮನ ಕ್ಯಾಲೆಂಡರ್ ಹೆಚ್ಚು ಖಚಿತವಾಗಿತ್ತು. ಈಗಲೂ ಮುಸ್ಲಿಮರು ಉಮರ್ ರೂಪಿಸಿದ ಕ್ಯಾಲೆಂಡರನ್ನೇ ಜಲಾಲಿ ಶಕೆ ಎಂದು ಕರೆದು ಬಳಸುತ್ತಿದ್ದಾರೆ.
ನೀವು ಈಗ ಇಲ್ಲಿ ೩೬೫ ಪೂರ್ಣಾಂಕಗಳ ನಂತರ ಬರೆದಿರುವ ದಶಮಾಂಶ ಸ್ಥಾನದ ೧೧ ಅಂಕಿಗಳನ್ನು ಗಮನಿಸಿ. ಈಗ ನಮಗೆ ಗೊತ್ತಿರುವಂತೆ ಸೌರವರ್ಷದಲ್ಲಿ ಆರನೇ ದಶಮಾಂಶ ಸ್ಥಾನವು ಒಬ್ಬ ಮನುಷ್ಯನ ಜೀವಿತಾವಧಿಯಲ್ಲಷ್ಟೇ ಬದಲಾಗುತ್ತದೆ. ಆದರೆ ಉಮರ್ ೧೧ ಅಂಕಿಗಳವರೆಗೂ ಲೆಕ್ಕ ಬರೆದಿಟ್ಟು ಹೋಗಿದ್ದಾನೆ.
೧೦೯೨ರಲ್ಲಿ ಉಮರನ ಒಳ್ಳೆಯ ದಿನಗಳು ಕೊನೆಗೊಂಡವು. ಮಾಲಿಕ್ ಶಾ ತೀರಿಕೊಂಡ. ಅವನ ವಜೀರ ನಿಜಾಮ್ ಅಲ್ ಮುಲ್ಕ್‌ನ ಕೊಲೆಯಾಯಿತು. ಖಗೋಳ ವೀಕ್ಷಣಾಲಯಕ್ಕೆ ಬರಬೇಕಾದ ಅನುದಾನ ನಿಂತುಹೋಯಿತು.
ಮಾಲಿಕ್ ಶಾನ ಮಗ ಸಂಜಾರ್ ಮುಂದೆ ತುರ್ಕ್‌ಮೆನಿಸ್ತಾನದ ಮೆರ್‍ವ್‌ನ್ನು ರಾಜಧಾನಿಯಾಗಿ ಮಾಡಿ ಅಲ್ಲಿಗೆ ಉಮರ್‌ನನ್ನು ಕರೆಸಿಕೊಂಡ. ಅಲ್ಲಿಯೇ ಉಮರ್ ಉಳಿದೆಲ್ಲ ಗಣಿತದ ಕೃತಿಗಳನ್ನು ರಚಿಸಿದ.
ಕವಿಯಾಗಿ ಖಯ್ಯಾಮ್ ಸುಮಾರು ಒಂದು ಸಾವಿರ ರುಬೈಯಾತ್‌ಗಳನ್ನು ಬರೆದಿದ್ದಾನೆ. ಅವನ ಕಾವ್ಯವೇ ಈಗ ಅವನ ಗಣಿತದ ಸಂಶೋಧನೆಗಳಿಗಿಂತ ಹೆಚ್ಚು ಪ್ರಸಿದ್ಧ!
ಖಯ್ಯಾಮ್ ಸಂಗೀತಜ್ಞನೂ ಆಗಿದ್ದ. ಆತ ಬರೆದ `ಶರ್ ಅಲ್ ಮುಷ್ಕಿಲ್ ಮಿನ್ ಕಿತಾಬ್ ಅಲ್ ಮ್ಯೂಸಿಕ’ (ಸಂಗೀತದ ಪುಸ್ತಕದಲ್ಲಿ ಇರುವ ತೊಂದರೆಗಳ ಕುರಿತ ಭಾಷ್ಯ) ಎಂಬ ಪುಸ್ತಕ ಈಗಲೂ ಸಿಕ್ಕಿಲ್ಲ. ಮೆಕ್ಯಾನಿಕ್ ಶಾಸ್ತ್ರದಲ್ಲೂ ಖಯ್ಯಾಮ್ ‘ದಿ ಬ್ಯಾಲೆನ್ಸ್ ಆಫ್ ವಿಸ್‌ಡಮ್’ ಎಂಬ ಗ್ರಂಥ ಬರೆದಿದ್ದಾನೆ.
`ದಿ ಜೀನಿಯಸ್ ಆಫ್ ಉಮರ್ ಖಯ್ಯಾಮ್’ ಎಂಬ ಡಾಕ್ಯುಮೆಂಟರಿಯನ್ನು ಬಿಬಿಸಿಯು ರೂಪಿಸಿದೆ. ನೀವು ಈ ಡಾಕ್ಯುಮೆಂಟರಿಯನ್ನು ನೋಡಲೇಬೇಕು. ಉಮರನ ಬದುಕಿನ ಬಣ್ಣಗಳನ್ನು ಈ ಡಾಕ್ಯುಮೆಂಟರಿಯು ದಾಖಲಿಸಿದೆ. ಉಮರನ ಕಾವ್ಯದಷ್ಟೇ ಗಟ್ಟಿಯಾದ ಅವನ ವಿಜ್ಞಾನ ಸಂಶೋಧನೆಗಳ ಬಗ್ಗೆ ಈ ಡಾಕ್ಯುಮೆಂಟರಿ ವಿವರ ನೀಡುತ್ತದೆ. ಎಡ್ವರ್ಡ್ ಫಿಟ್‌ಜೆರಾಲ್ಡ್ ಉಮರನ ಒಸಗೆಯನ್ನು ಪ್ರಕಟಿಸಿದಾಗ ಅದನ್ನು ಯಾರೂ ಕಣ್ಣೆತ್ತಿಯೂ ನೋಡಲಿಲ್ಲವಂತೆ.
ಬಿಲ್ ಕ್ಲಿಂಟನ್, ಮಾರ್ಟಿನ್ ಲೂಥರ್ ಕಿಂಗ್‌ನಿಂದ ಹಿಡಿದು ಜಗತ್ತಿನ ಎಲ್ಲ ನಾಯಕರೂ ಉಮರನನ್ನು ಉಲ್ಲೇಖಿಸಿದವರೇ. ಉಮರನ ಒಸಗೆಗಳ ಪ್ರಭಾವ ಎಷ್ಟಿತ್ತೆಂದರೆ ಅಮೆರಿಕಾ, ಇಂಗ್ಲೆಂಡುಗಳಲ್ಲಿ ಈಗಲೂ ನೂರು ವರ್ಷ, ಎಂಬತ್ತು ವರ್ಷ ದಾಟಿದ ಉಮರ್ ಖಯ್ಯಾಮ್ ಕ್ಲಬ್‌ಗಳಿವೆ. ಈ ಕ್ಲಬ್‌ಗಳಿಗೆ ಥಾಮಸ್ ಹಾರ್ಡಿಯಿಂದ ಹಿಡಿದು, ಅರ್ ಆರ್ಥರ್ ಕಾನನ್ ಡಾಯಲ್‌ವರೆಗೆ ಹಲವು ಪ್ರಸಿದ್ಧರು ಸದಸ್ಯರಾಗಿದ್ದರು… ಇವೆಲ್ಲ ಡಾಕ್ಯುಮೆಂಟರಿಯಲ್ಲಿ ಮೂಡಿಬಂದಿದೆ. ೧೯೫೭ರಲ್ಲಿ ಉಮರ್ ಖಯ್ಯಾಮ್ ಎಂಬ ಹಾಲಿವುಡ್ ಸಿನೆಮಾ ಕೂಡ ಬಂದಿದೆ. ಸಿಕ್ಕಿದರೆ ನೋಡಿ (ನನಗೆ ಸಿಕ್ಕಿಲ್ಲ).
ಕವಿಯಾಗಿ ಬದುಕಿನ ನಶ್ವರತೆ ಮತ್ತು ಸಾಫಲ್ಯದ ಬಗ್ಗೆ ತತ್ವಪೂರ್ಣವಾದ ಪದ್ಯಗಳನ್ನು ಬರೆದ ಉಮರ್ ಖಯ್ಯಾಮ್ ವಿಜ್ಞಾನಿಯಾಗಿ, ಗಣಿತಜ್ಞನಾಗಿ ಮನುಕುಲಕ್ಕೆ ನೀಡಿದ ಕೊಡುಗೆಯೂ ಅತ್ಯಪೂರ್ವ. ನಮ್ಮಂಥ ಹುಲುಮಾನವರ ಮಟ್ಟಿಗೆ ಆತ ನಿಜಕ್ಕೂ ಪ್ರಾತಃಸ್ಮರಣೀಯ.
ಉಮರ್ ಖಯ್ಯಾಮನ ಒಸಗೆಗಳನ್ನು ಓದಲು ಇಲ್ಲಿಗೆ ಬನ್ನಿ.
ಉಮರ್, ಫಿಟ್‌ಜೆರಾಲ್ಡ್ ಕುರಿತ ವಿದ್ವತ್ಪೂರ್ಣ ಒಳನೋಟದ ಲೇಖನಕ್ಕಾಗಿ ‘ಉಮರನ ಒಸಗೆ’ಯನ್ನು ಕೊಂಡು ಓದಿರಿ.
ಉಮರ್ ಖಯ್ಯಾಮನನ್ನು ಸ್ಮರಿಸಿಕೊಂಡ ಮೇಲೆ ಈ ಸರಣಿಗೆ ಒಳಿತೇ ಆಗುತ್ತದೆ ಎಂದು ಭಾವಿಸುವೆ. ಮುಂದಿನ ಲೇಖನ ಗಾಂಧಿವಾದಿ – ಸಂಶೋಧಕ ವ್ಯಕ್ತಿತ್ವದ್ದು.
ನಿರೀಕ್ಷಿಸಿ.