೨೦ನೇ ಶತಮಾನದಲ್ಲಿ ಚೀನಾದಲ್ಲಿ ನಡೆದ ನರಮೇಧಗಳಿಗೆ ಲೆಕ್ಕವಿಲ್ಲ. ಚೀನಾದ ಕಮ್ಯುನಿಸ್ಟ್ ಚಳವಳಿಯ ಪರ ಮತ್ತು ವಿರೋಧಿಗಳ ಸಾವನ್ನಷ್ಟೇ ನಾನು ಹೇಳುತ್ತಿಲ್ಲ. ಜಪಾನ್ – ಚೀನಾ ಸಮರಗಳಲ್ಲೂ ಲಕ್ಷಗಟ್ಟಳೆ ಜನ ಸತ್ತರು. ಆ ಕಾಲದಲ್ಲಿ ಜಪಾನ್ ಪೂರ್ವಜಗತ್ತಿನ ಬಲಾಢ್ಯ ಮತ್ತು ಆಕ್ರಮಣಕಾರಿ ದೇಶವಾಗಿತ್ತು. ಚೀನಾವು ಕಮ್ಯುನಿಸ್ಟ್ ಆಡಳಿತಕ್ಕೆ ಸಿಕ್ಕಿದ ಮೇಲಂತೂ ನರಮೇಧಗಳು ತಣ್ಣಗೆ ನಡೆಯತೊಡಗಿದವು. ಈ ಮಧ್ಯೆ ದಕ್ಷಿಣ ಕೊರಿಯಾದ ಮೇಲೆ ಸಮರ ಸಾರಿದ ಉತ್ತರ ಕೊರಿಯಾಗೆ ತನ್ನ ಸೇನೆಯನ್ನು ಕಳಿಸಿದ ಚೀನಾವು ಸುಮಾರು ನಾಲ್ಕು ಲಕ್ಷ ಸೈನಿಕರನ್ನು ಕಳೆದುಕೊಂಡಿತು ಎನ್ನುವುದು ಇನ್ನೊಂದು ಭೀಕರ ಇತಿಹಾಸ. ಈ ಮಧ್ಯೆ ೧೯೩೭ರಲ್ಲಿ ಜಪಾನ್ ಸೇನೆಯು ಚೀನಾದ ನಾನ್‌ಜಿಂಗ್ ಪ್ರಾಂತವನ್ನು ಆಕ್ರಮಿಸಿ ನಡೆಸಿದ ನರಮೇಧ ಮನುಕುಲ ಕಂಡ ಅತಿ ಅಮಾನುಷ ಕೃತ್ಯಗಳಲ್ಲಿ ಒಂದು.
ನಾನ್‌ಜಿಂಗ್ ಇತಿಹಾಸದ ಬಗ್ಗೆ ಹಲವಾರು ಸಿನೆಮಾಗಳು ಬಂದಿವೆ. ಈ ಪೈಕಿ ನಾನು ನೋಡಿದ ಮತ್ತು ಹೆಚ್ಚು ಜನಪ್ರಿಯವಾದ ಸಿನೆಮಾಗಳ ಪುಟ್ಟ ನೋಟ ಕೊಡಲು ಯತ್ನಿಸಿರುವೆ:
ಜಾನ್ ರೇಬ್ (೨೦೦೯)
೧೯೩೭ರ ನವೆಂಬರ್ ೨೨ರಂದು ಜಪಾನೀ ಸೇನೆಯು ನಾನ್‌ಜಿಂಗ್‌ನ್ನು ಆಕ್ರಮಿಸಿದಾಗ ಅಲ್ಲಿ ಹಲವು ವಿದೇಶೀಯರೂ ಇದ್ದರು. ನಾನ್‌ಜಿಂಗ್‌ನಲ್ಲಿ ಮಿಶನರಿಗಳೂ, ವ್ಯಾಪಾರಿಗಳೂ ಹೇರಳವಾಗಿದ್ದರು. ಅವರಲ್ಲಿ ಜಾನ್ ರೇಬ್ ಕೂಡಾ ಇದ್ದ. ಈತ ಜರ್ಮನಿಯಿಂದ ಬಂದು ನೆಲೆಸಿದ ಹಿಟ್ಲರ್ ಪರ ವ್ಯಕ್ತಿ. ಸಿರಿವಂತನಾಗಿದ್ದ ಜಾನ್ ರೇಬ್ ಯಾವ ತಾಪತ್ರಯವೂ ಇಲ್ಲದೆ ಜರ್ಮನಿಗೆ ವಾಪಸು ಬರಬಹುದಿತ್ತು. ಆದರೆ ತನ್ನನ್ನು ನಂಬಿದ ಈ ಚೀನೀಯರನ್ನು ಬಿಟ್ಟು ಹೊರಡುವುದು ಎಂದರೆ ಅವರ ನಂಬುಗೆಯನ್ನೇ ಕಳೆದುಕೊಳ್ಳುವುದು ಎಂದು ಜಾನ್ ರೇಬ್ ಭಾವಿಸಿದ. ಸರಿ, ಇಲ್ಲೇ ಇದ್ದು ಎಲ್ಲವನ್ನೂ ಎದುರಿಸೋಣ ಎಂದು ಜನರನ್ನು ಸಂಘಟಿಸಿ ನಾನ್‌ಜಿಂಗ್‌ನಲ್ಲೇ ಒಂದು ಸುರಕ್ಷಾ ವಲಯವನ್ನು ರಚಿಸಿದ. ಜಪಾನೀಯರ ಆಕ್ರೋಶದ ನಡುವೆಯೂ ಈ ಸುರಕ್ಷಾ ವಲಯದಲ್ಲಿ ಸುಮಾರು ಎರಡು ಲಕ್ಷ ಚೀನೀಯರು ಸೇರಿಕೊಂಡು ಜೀವ ಉಳಿಸಿಕೊಂಡರು. ತನ್ನ ಸ್ವಂತ ಜಾಗದಲ್ಲೇ ಜಾನ್ ರೇಬ್ ೬೫೦ಕ್ಕೂ ಹೆಚ್ಚು ಜನರಿಗೆ ಆಶ್ರಯ ಕೊಟ್ಟ.
ಇನ್ನುಳಿದ ಮೂರು ಲಕ್ಷ ಜನರಿಗೆ ಈ ಭಾಗ್ಯ ಇರಲಿಲ್ಲ. ಅವರೆಲ್ಲರೂ ಜಪಾನೀಯರು ನಡೆಸಿದ (ನನ್ನ ದೃಷ್ಟಿಯಲ್ಲಿ ಮನುಕುಲದ ಇತಿಹಾಸದಲ್ಲೇ ಅತ್ಯಂತ ಹೇಯವಾದ್ದು ಎಂದು ಕರೆಯಬಹುದಾದ) ನರಮೇಧಕ್ಕೆ ಬಲಿಯಾದರು. ಇವರಲ್ಲಿ ಯುದ್ಧಖೈದಿಗಳಾಗಿದ್ದ ೫೭ ಸಾವಿರಕ್ಕೂ ಹೆಚ್ಚು ಕೋಮಿಂಟಾಂಗ್ ಸೇನೆಯ ಸೈನಿಕರೂ ಸೇರಿದ್ದಾರೆ; ಆ ಹೊತ್ತಿನಲ್ಲಿ ಮಾವೋ ಇನ್ನೂ ಇಡೀ ಚೀನಾವನ್ನು ಆಕ್ರಮಿಸಿರಲಿಲ್ಲ.
ಗರ್ಭಿಣಿ ಹೆಣ್ಣುಮಕ್ಕಳನ್ನೂ ಬಿಡದೆ ಬಯೊನೆಟ್‌ನಿಂದ ತಿವಿದು ವಿಕೃತ ಆನಂದ ಪಡೆದ ಜಪಾನೀ ಸೈನಿಕರು ಸುಮಾರು ೨೦-೮೦ ಸಾವಿರ ಸ್ತ್ರೀಯರ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿ ಕೊಂದುಹಾಕಿದರು. ಈಗಲೂ ಈ ವಿಷಯವು ಜಪಾನ್ – ಚೀನಾ ನಡುವಣ ಸಂಘರ್ಷದ ಪ್ರಮುಖ ಕಾರಣವೂ ಹೌದು. ರಾಜತಾಂತ್ರಿಕ ಸಂಬಂಧಗಳಿದ್ದರೂ ಈ ಕಪ್ಪುಚುಕ್ಕೆಯನ್ನು ಅಳಿಸಲು ಜಪಾನಿಗೆ ಸಾಧ್ಯವಾಗಿಲ್ಲ.
ಜಾನ್ ರೇಬ್‌ನ ಈ ದಿನಚರಿ ಟಿಪ್ಪಣಿಯನ್ನೇ ನೋಡಿ:
Two Japanese soldiers have climbed over the garden wall and are about to break into our house. When I appear they give the excuse that they saw two Chinese soldiers climb over the wall. When I show them my party badge, they return the same way. In one of the houses in the narrow street behind my garden wall, a woman was raped, and then wounded in the neck with a bayonet. I managed to get an ambulance so we can take her to Kulou Hospital…. Last night up to 1,000 women and girls are said to have been raped, about 100 girls at Ginling Girls’ College alone. You hear nothing but rape. If husbands or brothers intervene, they’re shot. What you hear and see on all sides is the brutality and bestiality of the Japanese soldiers.
ಜಾನ್ ರೇಬ್ ಪಾತ್ರದಲ್ಲಿ ಉಲ್‌ರಿಚ್ ತುಕುರ್ ನೀಡಿದ ನಟನೆ ಅರಳ, ನೇರ ಮತ್ತು ಗಂಭೀರ. ಎಲ್ಲೂ ಕೃತಕತೆಯ ಲಕ್ಷಣ ಕಾಣಿಸುವುದಿಲ್ಲ. ಭವ್ಯವಾದ ಸೆಟಿಂಗ್‌ನಲ್ಲಿ ಜಾನ್ ರೇಬ್‌ನ ಎತ್ತರದ ವ್ಯಕ್ತಿತ್ವ ಮತ್ತು ಕುಳ್ಳಗಿನ ಚೀನೀಯರ ದಯನೀಯ ಸ್ಥಿತಿ – ಎಲ್ಲವೂ ಮನೋಜ್ಞವಾಗಿ ಮೂಡಿ ಬಂದಿದೆ. ನಿಜ ಜೀವನದಲ್ಲಿ ಜಾನ್ ರೇಬ್ ಬರೆಯುವ ದಿನಚರಿಗಳ ಹಾಳೆಗಳು, ಪತ್ರಗಳು ಅಲ್ಲಲ್ಲಿ ಮಿಂಚಿ ಮರೆಯಾಗುತ್ತ ಇತಿಹಾಸದ ಪುಟಗಳು ತೆರೆದುಕೊಳ್ಳುತ್ತವೆ. ಸಹಜವಾಗೇ ಜಪಾನಿನಲ್ಲಿ ಈ ಸಿನೆಮಾವನ್ನು ಸ್ವೀಕರಿಸಿಲ್ಲ.
ದಿ ಚಿಲ್ಡ್ರನ್ ಆಫ್ ಹ್ವಾಂಗ್ ಶಿ (೨೦೦೮)
ಇಂಥ ಸಮರಗ್ರಸ್ತ ನಾನ್‌ಜಿಂಗ್‌ಗೆ ವರದಿ ಮಾಡಲೆಂದು ಬಂದು ಸಿಕ್ಕಿಕೊಂಡ ಪತ್ರಕರ್ತ ಜಾರ್ಜ್ ಹಾಗ್ ಎಂಬಾತನ ನೈಜ ಕಥೆಯನ್ನು ಆಧರಿಸಿದೆ ಎನ್ನಲಾದ ಸಿನೆಮಾವೇ ‘ದಿ ಚಿಲ್ಡ್ರನ್ ಆಫ್ ಹ್ವಾಂಗ್ ಶಿ’. ಜೋನಾಥನ್ ರಿಸ್ ಮೇಯರ್ಸ್ ನಟಿಸಿದ ಈ ಚಿತ್ರದಲ್ಲಿ ಆಸ್ಟ್ರೇಲಿಯಾದ ಭಾರತೀಯ ಸಂಜಾತ ನಟಿ ರಾಧಾ ಮಿಚ್ಚೆಲ್ ಮುಖ್ಯ ಪಾತ್ರದಲ್ಲಿದ್ದಾಳೆ.
ಜಾರ್ಜ್ ಹಾಗ್‌ನ ಇಬ್ಬರು ಮಿತ್ರರನ್ನೂ ಜಪಾನೀ ಸೈನಿಕರು ಸಾಯಿಸುತ್ತಾರೆ. ಹೇಗೋ ಆತನನ್ನು ಶೆನ್ ಹಾನ್‌ಶೆಂಗ್ ಎಂಬ ಕಮ್ಯುನಿಸ್ಟ್ ಹೋರಾಟಗಾರ ರಕ್ಷಿಸುತ್ತಾನೆ. ಜಪಾನೀಯರ ಗುಂಡಿನಿಂದ ಗಾಯಗೊಂಡ ಹಾಗ್‌ನನ್ನು ಹೇಗೋ ಬಚ್ಚಿಟ್ಟು ಚಿಕಿತ್ಸೆ ನೀಡಿದ ಮೇಲೆ ಹ್ವಾಂಗ್‌ಶಿಯಲ್ಲಿರುವ ಅನಾಥ ಮಕ್ಕಳ ಶಾಲೆಗೆ ಬಿಡುತ್ತಾರೆ. ಅಲ್ಲಿ ಲೀ ಪಿಯರ್‌ಸನ್ (ರಾಧಾ ಮಿಚ್ಚೆಲ್) ಒಬ್ಬ ದಾದಿ.
ಈ ಅನಾಥಾಲಯದಲ್ಲಿ ೬೦ ಮಕ್ಕಳಿದ್ದಾರೆ. ಅಲ್ಲಿ ತಿಗಣೆ ಮತ್ತಿತರೆ ಹುಳಗಳ ಕಾಟ. ಔಷಧಿ ಪುಡಿ ಹಾಕಿಸಿಕೊಳ್ಳಲು ಯಾರೂ ಒಪ್ಪಿಲ್ಲ. ಈ ಹಿನ್ನೆಲೆಯಲ್ಲಿ ಜಾರ್ಜ್ ಹಾಗ್‌ನನ್ನು ಎಲ್ಲರ ಎದುರಿಗೇ ನಿಲ್ಲಿಸಿ ಔಷಧದ ಪುಡಿ ಹಾಕಿ ಸ್ನಾನ ಮಾಡಿಸುವ ಸನ್ನಿವೇಶ ಸಹಜವಾಗೇ ಮೂಡಿದೆ. ಉಳಿದಂತೆ ಇಡೀ ಚಿತ್ರದಲ್ಲಿ ಅಸಂಬದ್ಧ ಸನ್ನಿವೇಶಗಳಿಲ್ಲ. ಕ್ರಮೇಣವಾಗಿ ಮಕ್ಕಳು ಜಾರ್ಜ್ ಹಾಗ್‌ಗೆ ಹೊಂದಿಕೊಳ್ಳುತ್ತಾರೆ. ಅವರಲ್ಲಿ ಕೆಲವರ ವರ್ತನೆ ವಿಚಿತ್ರವಾಗಿರುತ್ತದೆ.
ಚಿತ್ರ ಇಷ್ಟೇ ಆಗಿದ್ದರೆ ತೀರಾ ಸಾಮಾನ್ಯವಾಗಿ ಯಾರೂ ನೋಡ್ತಾ ಇರಲಿಲ್ಲ. ಮೊದಲೇ ಹೇಳಿದೆನಲ್ಲ, ನಾನ್‌ಜಿಂಗ್ ಸುತ್ತಮುತ್ತ ಇದ್ದವರೆಲ್ಲ ಕೋಮಿಂಗ್‌ಟಾಂಗ್ ಸೈನಿಕರು. ಅವರೆಲ್ಲ ಶಿಯಾಂಗ್ ಕೈ ಶೇಕ್‌ನ ಕೆಳಗಿದ್ದವರು. ಅತ್ತ ಜಪಾನೀಯರನ್ನು ಓಡಿಸಲಿಕ್ಕೆ, ಇತ್ತ ಮಾವೋ ಸೈನಿಕರೊಂದಿಗೆ ಯುದ್ಧ ಮಾಆಡಲಿಕ್ಕೆ ಅವರಿಗೆ ಸೈನಿಕರ ಅಗತ್ಯವಿತ್ತು. ಚಿಕ್ಕವರು ದೊಡ್ಡವರು ಎನ್ನದೆ ಎಲ್ಲರನ್ನೂ ಸೇನೆಗೆ ಸೇರಿಸಕೊಳ್ಳುವ ಅಭಿಯಾನ ಅಲ್ಲಿಯೂ ನಡೆದಿತ್ತು. ಇನ್ನೇನು ಈ ಅನಾಥಾಲಯಕ್ಕೂ ಅವರ ದಾಳಿ ಆಗಲಿದೆ ಎಂಬ ಸುದ್ದಿ ಕೇಳಿದಾಗ ಜಾರ್ಜ್ ಹಾಗ್ ಸುಮ್ಮನಿರಲ್ಲ. ಸರಿ, ಈ ಮಕ್ಕಳನ್ನು ಕರೆದುಕೊಂಡು ೯೦೦ ಕಿಮೀ ದೂರದ ಶಾಂದಾನ್‌ಗೆ ಹೋಗೋಣ ಎಂದು ನಿರ್ಧರಿಸುತ್ತಾನೆ. ಎಳೆವ ಬಂಡಿಗಳಲ್ಲೇ ಸಾಮಾನು ಸರಂಜಾಮುಗಳನ್ನು ಕಟ್ಟಿಕೊಂಡು ಈ ಮಕ್ಕಳೊಂದಿಗೆ ಜಾರ್ಜ್ ಹಾಗ್, ಪಿಯರ್‍ಸನ್ ನಡೆಸುವ ಪಯಣದ ಸನ್ನಿವೇಶಗಳು ಮಾರ್ದವತೆಯಿಂದ ಕೂಡಿವೆ. ಕೆಲವೊಮ್ಮೆ ನಾಟಕೀಯ ಅನ್ನಿಸಿದರೂ ಕಥೆಯೇ ನಿಜವಾಗಿರುವುದರಿಂದ ಸಹಿಸಿಕೊಳ್ಳಬಹುದು. ಹಿಮಾಚ್ಛಾದಿತ ಪರ್ವತಗಳನ್ನು ಹಾದು, ಮಂಗೋಲಿಯಾವನ್ನು ದಾಟಿ ಈ ಮಕ್ಕಳು ಮೂರು ತಿಂಗಳ ನಂತರ ಕಮ್ಯುನಿಸ್ಟರ ನಿಯಂತ್ರಣ ಇರುವ ಪ್ರದೇಶಕ್ಕೆ ಬರುತ್ತಾರೆ. ಅಲ್ಲಿದ್ದ ಕಮ್ಯುನಿಸ್ಟ್ ನಾಯಕರು ಅವರಿಗೆ ಟ್ರಕ್‌ಗಳನ್ನು ಕೊಟ್ಟು ಸಹಕರಿಸುತ್ತಾರೆ. ಶಾಂದಾನ್‌ನಲ್ಲಿ ಪಾಳುಬಿದ್ದ ಬೌದ್ಧಾಲಯದಲ್ಲಿ ಇವರೆಲ್ಲರ ಹೊಸಜೀವನ ಆರಂಭವಾಗುತ್ತದೆ.
ಇಲ್ಲಿಗೂ ಸಿನೆಮಾ ಮುಗಿಯುವುದಿಲ್ಲ. ಮಕ್ಕಳಿಗೆ ಧನುರ್ವಾಯು ಬರಬಾರದೆಂದು ಸ್ನಾನ ಮಾಡಿ ತೋರಿಸಿದ್ದ ಜಾರ್ಜ್ ಹಾಗ್ ಸ್ವತಃ ಅದೇ ರೋಗಕ್ಕೆ ಬಲಿಯಾಗುತ್ತಾನೆ. ಅವನಿಗೆ ಔಷಧ ತರುವುದಕ್ಕೇ ದಿನ ಹಿಡಿಯುವ ಆ ಪ್ರದೇಶದಲ್ಲಿ ಜಾರ್ಜ್ ಹೇಗಾದರೂ ಬದುಕಿಯಾನು?
ಈ ಸಿನೆಮಾವನ್ನು ಸಿನೆಮಾ ಎಂದಷ್ಟೇ ನೋಡಿದ್ದರೆ ಸಾಕಿತ್ತೇನೋ. ಆದರೆ ಇತಿಹಾಸದ ಕಳಂಕಿತ ಪುಟಗಳನ್ನು ಮರೆಯಲಾದೀತೆ? ನಿಜ ಇತಿಹಾಸದಲ್ಲಿ ಜಾರ್ಜ್ ಹಾಗ್ ಜೊತೆಗೆ ರೇವಿ ಅಲೇ ಎಂಬ ನ್ಯೂಝೀಲ್ಯಾಂಡ್‌ನ ಸಾಮಾಜಿಕ ಕಾರ್ಯಕರ್ತನ ಪಾತ್ರವೇ ಈ ಸಿನೆಮಾದಲ್ಲಿ ಮಾಯವಾಗಿದೆ ಎಂಬ ಆರೋಪ ಇದೆ. ಅಲ್ಲದೆ, ಆ ಕಾಲದಲ್ಲಿ ಅಪ್ರಾಪ್ತ ಮಕ್ಕಳ ಜೊತೆಗೆ ಲೈಂಗಿಕಕ್ರಿಯೆ ನಡೆಸುವ ವಿದೇಶೀಯರ ದೊಡ್ಡ ಜಾಲವೇ ಅಲ್ಲಿತ್ತಂತೆ. ರೇವಿ ಅಲೇ ಬಗ್ಗೆಯೂ ಈ ಆರೋಪವಿದೆ. ಇವೆಲ್ಲ ಸಿನೆಮಾದಲ್ಲಿ ಇಲ್ಲ.
ಹಾಲಿವುಡ್ ಕಂಡ ಅತ್ಯುತ್ತಮ ನಟರಲ್ಲಿ ಒಬ್ಬನಾದ ಜೊನಾಥನ್ ರೆಸ್ ಮೇಯರ್ಸ್ ನಟನೆಗಾಗಿ ಈ ಸಿನೆಮಾವನ್ನು ಖಂಡಿತ ನೋಡಬಹುದು. ಜೊತಗೇ ರಾಧಾ ಮಿಚ್ಚೆಲ್‌ಳ ಪಾತ್ರವನ್ನೂ ಮೆಚ್ಚಬಹುದು. ಅಚ್ಚರಿಯೆಂದರೆ ಶೆಂಗ್ ಹಾನ್‌ಶೆಂಗ್ ಪಾತ್ರದಲ್ಲಿ ನಟಿಸಿದ ಚೌ ಎನ್ ಫಾತ್ ಮತ್ತು ವಾಂಗ್ ಎಂಬ ವ್ಯವಹಾರಸ್ಥ ಮಹಿಳೆಯ ಪಾತ್ರದಲ್ಲಿರುವ ಮಿಶೆಲ್ ಯೋಹ್ – ಇಬ್ಬರೂ ಪ್ರಖ್ಯಾತ ಸಿನೆಮಾ ‘ದಿ ಕ್ರೌಚಿಂಗ್ ಟೈಗರ್ ಎಂಡ್ ಹಿಡನ್ ಡ್ರಾಗನ್’ನಲ್ಲಿ ಮುಖ್ಯಭೂಮಿಕೆಗಳಲ್ಲಿ ಇದ್ದವರು. ಅವರಿಬ್ಬರನ್ನೂ ಮತ್ತೆ ಒಂದೇ ಸಿನೆಮಾದಲ್ಲಿ ನೋಡಬಹುದು.
ನಾನ್‌ಜಿಂಗ್ ! ನಾನ್‌ಜಿಂಗ್!! (ದಿ ಸಿಟಿ ಆಫ್ ಲೈಫ್ ಎಂಡ್ ಡೆತ್) (೨೦೦೯)
ನಾನ್‌ಜಿಂಗ್ ನರಮೇಧದ ಬಗ್ಗೆ ಸಮತೋಲನದಿಂದ ಬರೆದ ಚಿತ್ರಕಥೆ ಇದರಲ್ಲಿದೆ ಎಂದು ಕಾಣುತ್ತದೆ. ಜಪಾನೀ ಯೋಧನ ಕಣ್ಣಲ್ಲಿ ಸಾಗುವ ಈ ಕಥೆಯಲ್ಲಿ ಚೀನಾದ ದುರಂತವೂ ನಿಮ್ಮ ಎದೆ ಇರಿಯುವಂತೆ ಚಿತ್ರಿತ. ನಾನ್‌ಜಿಂಗ್ ನರಮೇಧದ ಅಗಾಧತೆ ಮತ್ತು ಕ್ರೌರ್ಯ ಹೇಗಿತ್ತು ಎಂದು ಊಹಿಸಿಕೊಳ್ಳುವುದಕ್ಕಿಂತ ಈ ಸಿನೆಮಾ ನೋಡುವುದು ವಾಸಿ. ಜೀವಕ್ಕೆಷ್ಟು ಬೆಲೆ, ಇಷ್ಟೇನಾ (ಲೈಫು ಇಷ್ಟೇನಾ ಥರ ಅಲ್ಲ!) ಅನ್ನಿಸುವ ಹಾಗೆ ಕಪ್ಪು ಬಿಳುಪಿನ ಭೀಕರ ಪರದೆಯಾಟದಲ್ಲಿ ರಕ್ತದೋಕುಳಿ ಹರಿಯುತ್ತದೆ.
ಈ ಸಿನೆಮಾದಲ್ಲಿ ಜಾನ್ ರೇಬ್‌ನ ಪಾತ್ರವೂ ಸಹಜವಾಗಿ ಬಂದುಹೋಗಿದೆ. ‘ಜಾನ್ ರೇಬ್’ ಸಿನೆಮಾಗೂ ಇದಕ್ಕೂ ಪ್ರೊಡಕ್ಷನ್ ಟ್ರೀಟ್‌ಮೆಂಟ್‌ನಲ್ಲೇ ವ್ಯತ್ಯಾಸಗಳಿವೆ. ‘ಜಾನ್ ರೇಬ್’ ಹೇಳಿ ಕೇಳಿ ‘ಶಿಂಡ್ಲರ್ಸ್ ಲಿಸ್ಟ್’ ಮಾದರಿಯ ಒಂದು ಕಮರ್ಶಿಯಲ್ – ಸೀರಿಯಸ್ ಸಿನೆಮಾ. ಆದರೆ ‘ನಾನ್‌ಜಿಂಗ್ ! ನಾನ್‌ಜಿಂಗ್!!’ ಹಾಗಲ್ಲ. ಎಲ್ಲ ಪಾತ್ರಗಳೂ ಹೆಚ್ಚು ಮಾತಾಡೋದಿಲ್ಲ. ಯುದ್ಧದಲ್ಲಿ ಗುಂಡಿನ ಸದ್ದೇ ಮುಖ್ಯ ತಾನೆ ? ಈ ಸಿನೆಮಾವನ್ನು ತಾಂತ್ರಿಕ ಅಚ್ಚುಕಟ್ಟುತನಕ್ಕಾಗಿಯೂ ನೋಡಬೇಕು. ಈ ದಶಕದಲ್ಲಿ ಬಂದ ಅತ್ಯುತ್ತಮ ಕಪ್ಪು ಬಿಳುಪು ಸಿನೆಮಾ ಇದೇ ಇರಬಹುದು ಅನ್ನಿಸುತ್ತೆ. ಜಾನ್ ರೇಬ್‌ನ ಸಹಾಯಕ ಟಾಂಗ್‌ನ ಮಗಳು ಜಪಾನೀ ಸೈನಿಕರ ಅಟ್ಟಹಾಸಕ್ಕೆ ಬಲಿಯಾದರೆ, ಅವನ ನಾದಿನಿ ಅತ್ಯಾಚಾರಕ್ಕೆ ಒಳಗಾಗುತ್ತಾಳೆ. ನಮಗೆ ಸುಖಿಸಲಿಕ್ಕೆ ೧೦೦ ಹೆಣ್ಣುಗಳನ್ನು ಕೊಡಿ ಎಂದು ಜಪಾನೀಯರು ಪೀಡಿಸುವುದು, ಆ ಅತ್ಯಾಚಾರಕ್ಕೆ ಸಿದ್ಧವಾಗಿ ಹೆಣ್ಣುಮಕ್ಕಳು ಕೈಯೆತ್ತುವ ದೃಶ್ಯವಂತೂ ನಿಮ್ಮನ್ನು ದಿಕ್ಕೆಡಿಸುತ್ತದೆ. ಆದರೆ ನೀವು ನಂಬಲೇಬೇಕು: ಇದೆಲ್ಲ ನಡೆದದ್ದು.
ತನ್ನನ್ನು ತನ್ನ ಮಗ ಕರೆದರೆ ಜೀವ ಉಳಿಯುತ್ತೆ ಎಂದು ಸೈನಿಕನೊಬ್ಬ ಇನ್ನಲದಂತೆ ಗೋಗರೆಯುವುದು, ಟಾಂಗ್ ಕೊನೆಗೆ ಜಪಾನೀಯರ ಹಿಂಸೆಗೆ ಬಲಿಯಾಗುವುದು – ನೋಡುತ್ತ ಹೋದರೆ ಈ ಸಿನೆಮಾ ನಿಮ್ಮಲ್ಲಿ ‘ಲೈಫು ಇಷ್ಟೇನಾ?’ ಎಂದು ಪ್ರಶ್ನಿಸುವಂತೆ ಮಾಡುತ್ತದೆ. ಕಡೋಕಾವಾ ಎಂಬ ಜಪಾನೀ ಸೈನಿಕನ ವಿಲಕ್ಷಣ ಸ್ವಭಾವ, ವರ್ತನೆ, ಪ್ರತಿಕ್ರಿಯೆ – ಇವೆಲ್ಲವೂ ಈ ಸಿನೆಮಾದ ಇತರೆ ಹೈಲೈಟ್‌ಗಳು.
ಪ್ರೇಕ್ಷಕರಿಗಾಗಿ (ಕ್ಲಾಸ್) ಸಿನೆಮಾ ಮಾಡಬೇಕು, ನಿಜ. ಆದರೆ ಹೀಗೆ ಇತಿಹಾಸದ ಕರಾಳ ಪುಟಗಳನ್ನು ಶ್ರಮವಹಿಸಿ ಕಲೆಹಾಕಿ, ಸಿನೆಮಾಗೆ ಭಾರೀ ಸೆಟ್ ಹಾಕಿ ಖರ್ಚು ಮಾಡಿ, ಕೊನೆಗೆ ನಮ್ಮ ಎದೆಯಾಳದಲ್ಲೊಂದು ಭಾವ ಮೂಡಿಸುವಂತೆ ಮಾಡುವುದಿದೆಯಲ್ಲ, ಅದನ್ನು ಸಾಧಿಸುವವರು ವಿರಳ. ಹುಡುಗ – ಹುಡುಗಿಯರ ನಡುವಣ ಪ್ರೀತಿಯೊಂದೇ ಬದುಕಿನ ಮಹತ್ತರ ಘಟನೆ ಎಂಬಂತೆ ಕಾಣುವ ನಮ್ಮ ಕಥೆಗಾರರು, ನಿರ್ದೇಶಕರು ನೈಜತೆಯೊಂದಿಗೆ, ಸಾಮಾಜಿಕ ಕಾಳಜಿಯೊಂದಿಗೆ ಸಿನೆಮಾ ಮಾಡಿದರೆ ಎಷ್ಟು ಒಳ್ಳೆಯದು ಅನ್ನಿಸುತ್ತದೆ. ಮ್ಯಾಸ್ಸಿವ್ ಸಿನೆಮಾ ಮಾಡಲೂ ಹಣ ಬೇಕು; ಪ್ಯಾಶನ್ ಕೂಡಾ ಬೇಕು.
ಈ ಮೂರೂ ಸಿನೆಮಾಗಳನ್ನು ನೋಡಿದರೆ ಇತಿಹಾಸ ನಮಗೆ ಕಲಿಸುವ ಪಾಠಗಳು ಅರ್ಥವಾಗುವುದಂತೂ ನಿಜ.
ನಾನ್‌ಜಿಂಗ್ ನರಮೇಧದ ನೈಜ ಛಾಯಾಚಿತ್ರಗಳಿಗೆ ಈ ಕೊಂಡಿಯನ್ನು ಕ್ಲಿಕ್ಕಿಸಿ