ನೀವು ಒಡಿಶಾ(ಒರಿಸ್ಸಾ)ದ ರಾಯ್‌ಪುರ, ರಾಂಚಿ ಅಥವಾ ಭುವನೇಶ್ವರಕ್ಕೆ ಹೋದಲ್ಲಿ ನಿಮ್ಮನ್ನು ಸ್ವಾಗತಿಸುವುದು ಅಭ್ಯುದಯದ ಹೇಳಿಕೆಗಳನ್ನು ಹೊತ್ತ ಬೃಹತ್ ಹೋರ್ಡಿಂಗ್‌ಗಳು. ಕಲಹನಿ (ಕಲಹಂದಿ) ಜಿಲ್ಲೆಯೇ ಭವ್ಯವಾಗಿ ರೂಪಾಂತರಗೊಳ್ಳುತ್ತಿದೆ, ಒಡಿಶಾ ರಾಜ್ಯದಲ್ಲಿ ಸುಖವನ್ನು ಅಗೆಯಲಾಗುತ್ತಿದೆ – ಇತ್ಯಾದಿ ಘೋಷಣೆಗಳನ್ನು ನೋಡಿ ನೀವು ನಿಬ್ಬೆರಗಾಗುತ್ತೀರಿ. ಛಪ್ಪನ್ ಸಾಲಾರ್ ಬರಗಾಲದಂಥ ಭೀಕರ ಬರಗಾಲಗಳ ಸರಣಿಯಿಂದ ತತ್ತರಿಸಿದ, ಹಸಿವಿನ ಸಾವುಗಳಿಗೆ ಕುಪ್ರಸಿದ್ಧವಾದ ಕಲಹನಿ ಜಿಲ್ಲೆ ಈಗ ಸುಖೀ ಬದುಕಿನ ಸ್ವರ್ಗವಾಗಿದೆಯೆ ಎಂದು ನೀವು ಅಚ್ಚರಿಗೆ ಬೀಳುತ್ತೀರಿ.
ಹೀಗೆ ಕಲಹನಿಯನ್ನು ಸ್ವರ್ಗವೆಂದೇ ಬಿಂಬಿಸುವರಿಗೆ ಕಂಡಿರುವುದು ಅಲ್ಲಿನ ನಿವಾಸಿಗಳ ಖಾಲಿ ಹೊಟ್ಟೆಯೂ ಅಲ್ಲ; ವನವಾಸಿಗಳ ಕಾಡುಭಕ್ತಿಯೂ ಅಲ್ಲ. ದಟ್ಟ ಕಾಡಿನ ಬುಡದಲ್ಲಿ ಇರುವ ಬಾಕ್ಸೈಟ್ ಖನಿಜ; ಅಲ್ಯುಮಿನಿಯಂ ಉತ್ಪಾದನೆಯ ಕಚ್ಚಾಮಾಲು. ಅದಕ್ಕೇ ಇಲ್ಲಿನ ಲಾಂಜಿಗಢದಲ್ಲಿ ವೇದಾಂತ ಸಂಸ್ಥೆಯ ಅಲ್ಯುಮಿನಾ ಸ್ಥಾವರ ಹಗಲುರಾತ್ರಿಯೆನ್ನದೆ ದುಡಿಯುತ್ತಿದೆ. ಲಕ್ಷಗಟ್ಟಳೆ ಟನ್ ಅದಿರನ್ನು ಅದರ ಹೊಟ್ಟೆಗೆ ಹಾಕದಿದ್ದರೆ, ಅಲ್ಲಿಂದ ಥಳ ಥಳ ಹೊಳೆವ ಅಲ್ಯುಮಿನಿಯಂ ಹೊರಬರದಿದ್ದರೆ, ಅದರಿಂದ ಉದ್ಯಮಗಳು ಬೆಳೆಯದಿದ್ದರೆ, ಅಭಿವೃದ್ಧಿ ಸಾಧಿಸುವುದಾದರೂ ಹೇಗೆ? ದೇಶದ ಆಂತರಿಕ ಉತ್ಪನ್ನ ಹೆಚ್ಚಾಗುವುದಾದರೂ ಹೇಗೆ? – ನಿಮ್ಮ ಪ್ರಶ್ನೆ ಸಹಜ. ೧೫೩ ಕೋಟಿ ಟನ್ ಬಾಕ್ಸೈಟ್ ಖನಿಜನಿಕ್ಷೇಪದೊಂದಿಗೆ ಜಗತ್ತಿನಲ್ಲೇ ನಾಲ್ಕನೇ ಅತಿದೊಡ್ಡ ಬಾಕ್ಸೈಟ್‌ಯುಕ್ತ ರಾಜ್ಯವಾಗಿರುವ ಒಡಿಶಾದ ಸರ್ಕಾರ ಇನ್ನೇನು ಮಾಡಬಹುದು?
ಈ ಹಿಂದೆ ವೇದಾಂತ ಸಂಸ್ಥೆಗೆ ಈ ಜಿಲ್ಲೆಯ ನಿಯಾಂಗಿರಿ ಗುಡ್ಡಸಾಲಿನಲ್ಲಿ ಬಾಕ್ಸೈಟ್ ಗಣಿಗಾರಿಕೆಗೆ ಅನುಮತಿ ನೀಡಿದ್ದೂ ಇದೇ ಉದ್ದೇಶದಿಂದ. ಆದರೆ, ಗಣಿಗಾರಿಕೆಗೆ ಅನುಮತಿ ನೀಡಿದ ದಿನದಿಂದಲೂ ಇದೊಂದು ಸಮಾಜವಿರೋಧಿ, ಸಮುದಾಯವಿರೋಧಿ ಕೃತ್ಯ ಎಂಬ ಕೂಗು ಕೇಳಿಬಂತು. ‘ಎಲ್ಲ ಅಭಿವೃದ್ಧಿ ಕಾಮಗಾರಿಗಳಿಗೂ ಅಡ್ಡಗಾಲು ಹಾಕುತ್ತಾರೆ’ ಎಂಬ ಹೀಗಳೆತಕ್ಕೆ ಸದಾ ಪಕ್ಕಾಗಿರುವ ಪರಿಸರವಾದಿಗಳಿಂದ ಹಿಡಿದು ಹಲವರು, ಸರ್ಕಾರೇತರ ಸಂಸ್ಥೆಗಳು ಪ್ರತಿಭಟನೆ ಆರಂಭಿಸಿದವು. ಏಳು ವರ್ಷಗಳಿಂದ ನಡೆದ ಈ ಹೋರಾಟವೀಗ ಮತ್ತೊಂದು ಮಜಲು ತಲುಪಿದೆ. ವೇದಾಂತ ಸಂಸ್ಥೆಗೆ ನೀಡಿದ್ದ ಗಣಿಗಾರಿಕೆ ಪರವಾನಗಿಯನ್ನು ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆ ರದ್ದು ಮಾಡಿದೆ. ಅಭಿವೃದ್ಧಿ ಬೇರೆ, ಅಭ್ಯುದಯ ಬೇರೆ ಎಂಬ ವಾದಕ್ಕೆ ಮನ್ನಣೆ ನೀಡಿದೆ. ಸಮಷ್ಟಿಯ ಅಭ್ಯುದಯದ ದೃಷ್ಟಿಕೋನವಿಲ್ಲದ ಅಭಿವೃದ್ಧಿ ಯೋಜನೆಗಳ ಬಗ್ಗೆ ಹೀಗೆ ರಾಜಕೀಯ ದೃಢತೆಯನ್ನು ಪ್ರದರ್ಶಿಸಿದ ಘಟನೆ ನಮ್ಮ ದೇಶದಲ್ಲಿ ಅಪರೂಪವೇ. ಹಿಂದೆ ನಾನಾ ಕಾರಣಗಳಿಗಾಗಿ ಸೈಲೆಂಟ್ ವ್ಯಾಲೆಯ ರಕ್ಷಣೆಗೆ ಆಗಿನ ಪ್ರಧಾನಿ ಇಂದಿರಾ ಗಾಂಧಿ ಮುಂದಾದರು; ಈಗ ಮನಮೋಹನಸಿಂಗ್ ಪ್ರಧಾನಿಯಾಗಿ ಇಂಥದ್ದೊಂದು ಮಹತ್ತರ ಕ್ರಮ ಕೈಗೊಂಡಿದ್ದಾರೆ. ಈ ಗಣಿಗಾರಿಕೆ ರದ್ದತಿ ಆದೇಶವನ್ನು ಪ್ರಕಟಿಸಿದವರು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಜೈರಾಂ ರಮೇಶ್. ಕೆಲವು ತಿಂಗಳುಗಳ ಹಿಂದಷ್ಟೇ ಕುಲಾಂತರಿ ಬದನೆಗೆ ತಾತ್ಕಾಲಿಕ ತಡೆ ಒಡ್ಡಿದ್ದ ಜೈರಾಂ ರಮೇಶ್‌ಗೆ ಇದು ಇನ್ನೊಂದು ಭಾರೀ ನಡೆ.
ಈ ರದ್ದತಿ ಘೋಷಣೆಯ ೨೦ ಪುಟಗಳ ಪತ್ರದಲ್ಲಿ ಇಡೀ ಪ್ರಕರಣದ ಸ್ಥೂಲ ಇತಿಹಾಸವೂ ಇದೆ; ಹೇಗೆ ವೇದಾಂತವು ಗುಡ್ಡಗಾಡು ಜನರ ಅರಣ್ಯ ಹಕ್ಕಿನ ಕಾಯ್ದೆ ಇತ್ಯಾದಿಗಳನ್ನು ಹೇಗೆ ಉಲ್ಲಂಘನೆ ಮಾಡಿದೆ ಎಂಬ ವಿವರಣೆಯೂ ಇದೆ. ಮೊದಲು ತ್ರಿಸದಸ್ಯ ಸಮಿತಿಯು ಕೊಟ್ಟ ವರದಿ ಹೇಳಿದ್ದೇನು, ಆಮೇಲೆ ಡಾ|| ನರೇಶ್ ಸಕ್ಸೇನಾ ಶಿಫಾರಸು ಮಾಡಿದ್ದೇನು – ಆ ಅವಾಂತರದ ಎಲ್ಲ ಮುಖಗಳು ಇಲ್ಲಿ ಅನಾವರಣಗೊಳ್ಳುತ್ತವೆ. ಈ ಹಗರಣದಲ್ಲಿ ವೇದಾಂತವು ೨೦೦೬ರ ಅರಣ್ಯ ಹಕ್ಕು ಕಾಯ್ದೆ, ೧೯೮೦ರ ಅರಣ್ಯ ಸಂರಕ್ಷಣಾ ಕಾಯ್ದೆ, ೧೯೮೬ರ ಪರಿಸರ ರಕ್ಷಣಾ ಕಾಯ್ದೆಗಳನ್ನು ಉಲ್ಲಂಘಿಸಿದೆ. ಸೂಕ್ತ ಪರವಾನಗಿ ಇಲ್ಲದೆಯೇ ರಿಫೈನರಿಯ ವಿಸ್ತರಣೆಗೆ ಹೊರಟಿದೆ ಎಂದು ಜೈರಾಂ ರಮೇಶ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ವೇದಾಂತದ ಅಕ್ರಮಗಳ ತನಿಖೆಗೂ ಅವರು ಆದೇಶಿಸಿದ್ದಾರೆ; ‘ಯೋಜನೆಯೊಂದನ್ನು ಸರ್ವೋಚ್ಚ ನ್ಯಾಯಾಲಯವು ಒಪ್ಪಿದರೆ ಕೇಂದ್ರ ಸರ್ಕಾರವು ತಿರಸ್ಕರಿಸಬಾರದು ಎಂದೇನಿಲ್ಲ’ ಎಂಬ ಮಹತ್ವದ ಮಾತನ್ನೂ ದಾಖಲಿಸಿದ್ದಾರೆ.
ಸಕ್ಸೇನಾ ವರದಿ ಹೇಳಿದ್ದಿಷ್ಟು: ಇಲ್ಲಿನ ಏಳು ಚದರ ಕಿಮೀ ಪ್ರದೇಶದಲ್ಲಿ ಗಣಿಗಾರಿಕೆ ಮಾಡಿದರೆ ಇಲ್ಲಿನ ವನ್ಯಜೀವಿಗಳ ಮೇಲೆ ಭಾರೀ ದುಷ್ಪರಿಣಾಮವಾಗುತ್ತದೆ; ಒಂದೂಕಾಲು ಲಕ್ಷ ಮರಗಳನ್ನು ಕಡಿಯಬೇಕಾಗುತ್ತದೆ; ಗಣಿಗಾರಿಕೆಯ ಬದಿಪರಿಣಾಮವಾಗಿ ಎಲ್ಲ ಪ್ರದೇಶವೂ ಹಾಳಾಗುತ್ತವೆ; ಜೀವಸಂಕುಲ ಅಸ್ತವ್ಯಸ್ತಗೊಳ್ಳುತ್ತದೆ. ಈಗಾಗಲೇ ವೇದಾಂತವು ೨೬ ಹೆಕ್ಟೇರು ಕಾಡನ್ನು ಅಕ್ರಮವಾಗಿ ಆಕ್ರಮಿಸಿದೆ. ಈ ರಿಫೈನರಿಗೆ ಕೊಟ್ಟ ಅನುಮತಿಯೇ ಅಸಿಂಧು; ಅದನ್ನೂ ರದ್ದುಗೊಳಿಸಬೇಕು.
ವೇದಾಂತದ ಸೋಲು ಎಂದರೆ ಗುಡ್ಡಗಾಡು ಜನರ ವಿಜಯ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಣ್ಣಿಸಿದ್ದಾರೆ. ರಾಜಕೀಯ ಲಾಭದ ಮಾತು ಇರಬಹುದು. ಆದರೆ, ವೇದಾಂತದ ಅವಾಂತರವನ್ನಾಗಲೀ, ಒರಿಸ್ಸಾ ಸರ್ಕಾರವು ಮಾಡಹೊರಟಿದ್ದ ಘನಘೋರ ದುರಂತವನ್ನಾಗಲೀ ನಾವು ಮರೆಯುವಂತಿಲ್ಲ.
ಕಲಹನಿಯ ನಿಯಾಂಗಿರಿ ಅರಣ್ಯವು ಅಭಯಾರಣ್ಯ ಎಂದು ಕೇಂದ್ರ ಪರಿಸರ ಸಚಿವಾಲಯ ೧೯೯೮ರಲ್ಲೇ ಘೋಷಿಸಿತ್ತು. ಅಲ್ಲಿ ಆನೆ, ಚಿರತೆ, ಹುಲಿ, ಜಿಂಕೆ, ನೂರಾರು ಬಗೆಯ ಹಕ್ಕಿಗಳು ಮತ್ತು ವಿನಾಶದ ಅಂಚಿನಲ್ಲಿರುವ ಜೀವಿಗಳಿವೆ. ಕಬ್ಬಿನ ವಿಶೇಷ ಕಾಡುತಳಿಯೂ ಅಲ್ಲಿದೆ. ೩೦೦ಕ್ಕೂ ಹೆಚ್ಚು ಬಗೆಯ ಮರಗಳಿವೆ. ೫೦ಕ್ಕೂ ಹೆಚ್ಚು ವೈದ್ಯಕೀಯ ಮೌಲ್ಯದ ಮರಗಳಿವೆ. ಅದಕ್ಕಿಂತ ಮುಖ್ಯವಾಗಿ ಈ ನಿಯಾಂಗಿರಿಯನ್ನು ತಮ್ಮ ದೈವವೆಂದೇ ಬಗೆದು ಬದುಕುತ್ತಿರುವ ಢೋಂಗರಿಯಾ ಕೊಂಧ್ ಮತ್ತು ಕುಟಿಯಾ ಬುಡಕಟ್ಟು ಸಮುದಾಯಗಳ ೧೫ ಸಾವಿರ ಜನರಿಗೆ ಈ ಕಾಡೇ ಬದುಕು. ಜೀವವನ್ನಾದರೂ ಕೊಟ್ಟೇವು, ಕಾಡನ್ನು ಕೊಡೆವು ಎಂದು ಅವರೆಲ್ಲ ಪಟ್ಟು ಹಿಡಿದಿದ್ದೇನು ಕಡಿಮೆಯಲ್ಲ. ಅವರಿಗೆ ಸರ್ಕಾರಗಳು, ವೇದಾಂತ ಕೊಟ್ಟ ಹಿಂಸೆ, ಹೇರಿದ ಭಯ ಕಡಿಮೆಯೇನಲ್ಲ. ಈ ಎಲ್ಲ ವಿದ್ಯಮಾನಗಳನ್ನು ಪತ್ರಕರ್ತ ಕಾಂಚಿ ಕೊಹ್ಲಿ ಸರಣಿ ಲೇಖನಗಳಲ್ಲಿ ದಾಖಲಿಸಿದ್ದಾರೆ. ಈ ಸಂಘರ್ಷದ ಗಾಥೆಯು ಥೇಟ್ ಜೇಮ್ಸ್ ಕ್ಯಾಮರಾನ್‌ನ ‘ಅವತಾರ್’ ಸಿನೆಮಾದ ಕಥೆಯಂತೇ ಇದೆ. ಕಡಡಿನ ದವರು ‘ನಿಯಾಂರಾಜ’ನೊಂದಿಗೆ ಬದುಕನ್ನು ಜೋಡಿಸಿಕೊಂಡವರು ಅದನ್ನು ಬಿಟ್ಟು ಬದುಕುವುದಾದರೂ ಹೇಗೆ?
ನಿಯಾಂಗಿರಿಯ ಹೋರಾಟದಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯವೂ ಪಾತ್ರಧಾರಿ. ಮೊದಲು ಗಣಿಗಾರಿಕೆಗೆ ಅನುಮತಿ ನೀಡಿದ್ದ ಅದು ಆಮೇಲೆ ಕೇಂದ್ರೀಯ ಉನ್ನತಾಧಿಕಾರ ಸಮಿತಿಗೆ (ಸಿಇಸಿ)ವರದಿ ಸಲ್ಲಿಸಲು ಕೇಳಿತ್ತು. ಸಿಇಸಿಯೂ ಈ ಕಾಡುಪ್ರದೇಶವನ್ನು ಖಂಡಿತಾ ಗಣಿಗಾರಿಕೆಗೆ ಕೊಡಕೂಡದು ಎಂದು ೨೦೦೫ರಲ್ಲೇ ಶಿಫಾರಸು ಮಾಡಿತ್ತು. ಇಡೀ ಹಗರಣದಲ್ಲಿ ಒರಿಸ್ಸಾ ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಪರಿಸರ ಇಲಾಖೆಯೂ ಶಾಮೀಲಾಗಿದೆ ಎಂದು ಅದು ಆರೋಪಿಸಿತ್ತು. ನಿಯಾಂಗಿರಿ ಗುಡ್ಡದ ಹಲವು ಜಲಮೂಲಗಳು ನಾಶವಾಗುತ್ತವೆ; ಒಡಿಶಾ – ಆಂಧ್ರದ ಜನರಿಗೆ ನೆರವಾದ ವಂಶಧಾರ ಮತ್ತು ನಾಗ್ವಲ್ಲಿ ನದಿಗಳ ಜಲಮೂಲಕ್ಕೇ ಧಕ್ಕೆ ಒದಗುತ್ತದೆ; ಬಾಕ್ಸೈಟ್ ಇದ್ದಿದ್ದರಿಂದಲೇ ಜಲದ ಸೆಲೆಯಿದೆ – ಅದಿಲ್ಲದಿದ್ದರೆ ಜನರ ಸಂಕಷ್ಟ ಹೆಚ್ಚುತ್ತದೆ; ಈಗಾಗಲೇ ಬಾಡಿಗೆ ಗೂಂಡಾಗಳು, ಪೊಲೀಸರು ಅಲ್ಲಿನ ಗುಡ್ಡಗಾಡು ಜನರನ್ನು ವೇದಾಂತದ ಬಂದೂಕುಧಾರಿ ಕಾವಲುಭಟರ ಕಣ್ಗಾವಲಿನಲ್ಲಿ ಬಂಧಿಸಿದ್ದಾರೆ; ಆದಿವಾಸಿಗಳ ಭೂಮಿಯನ್ನು ಹಸ್ತಾಂತರ ಮಾಡುವುದೇ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಉಲ್ಲಂಘನೆ; ಬಾಕ್ಸೈಟ್‌ನಿಂದ ಕೆಳಭಾಗದ ಅಂತರ್ಜಲವೆಲ್ಲ ವಿಷಯುಕ್ತವಾಗುತ್ತದೆ – ಹೀಗೆ ಸಿಇಸಿ ಕಟುವಾಗಿಯೇ ಬರೆದಿತ್ತು. ಈಗಿರುವ ಅಲ್ಯುಮಿನಾ ಸ್ಥಾವರಕ್ಕೆ ನೀಡಿದ ಅನುಮತಿಯನ್ನೇ ರದ್ದು ಮಾಡಬೇಕೆಂದು ಶಿಫಾರಸು ಮಾಡಿತ್ತು.
ವೇದಾಂತದ ಅವಾಂತರಗಳು
ವೇದಾಂತದ ಅನೈತಿಕ ವರ್ತನೆಗಳ ಬಗ್ಗೆ ಸುದೀರ್ಘ ತನಿಖೆ ನಡೆಸಿದ ಫಿನ್‌ಲೆಂಡ್ ಸರ್ಕಾರದ ಪಿಂಚಣಿ ನಿಧಿಯು ವೇದಾಂತ ಸಂಸ್ಥೆಯಲ್ಲಿ ಹೂಡಿದ್ದ ಹಣವನ್ನು ವಾಪಸು ಪಡೆದಿದೆ. ಅದೇ ರೀತಿ ಚರ್ಚ ಆಫ್ ಇಂಗ್ಲೆಂಡ್ ಸಹಾ ವೇದಾಂತದಲ್ಲಿ ಹೂಡಿದ್ದ ಬಂಡವಾಳವನ್ನು ಹಿಂತೆಗೆದಿದೆ. ೧೭೦ ಸಂಸ್ಥೆಗಳ ದನಿ ಬಲವಾಗಿದ್ದರಿಂದ ವೇದಾಂತದ ಮುಖ್ಯಸ್ಥ ಅನಿಲ್ ಅಗರ್‌ವಾಲ್‌ಗೆ ಸಿಗಬೇಕಿದ್ದ ಗೋಲ್ಡನ್ ಪೀಕಾಕ್ ಎನ್‌ವಿರಾನ್‌ಮೆಂಟ್ ಮ್ಯಾನೇಜ್‌ಮೆಂಟ್ ಪ್ರಶಸ್ತಿ ತಪ್ಪಿಹೋಯಿತು. ತಮಿಳುನಾಡಿನ ತೂತ್ತುಕುಡಿಯಲ್ಲಿರುವ ವೇದಾಂತದ ತಾಮ್ರ ಘಟಕವೂ ಪರಿಸರ ಮಾಲಿನ್ಯಕ್ಕೆ ಕಾರಣ ಎಂಬ ಮಾಹಿತಿ ಹೊರಬಿತ್ತು. ವೇದಾಂತದಲ್ಲಿ ಹಿರಿಯ ಅಧಿಕಾರಿಯಾಗಿದ್ದ ಎಸ್ ಕೆ ತಮೋಟಿಯಾ ಹಿಂದೆ ಸೇವೆ ಸಲ್ಲಿಸಿದ್ದ ನ್ಯಾಶನಲ್ ಅಲ್ಯುಮಿನಿಯಂ ಕಂಪೆನಿಯಲ್ಲಿ ಅವ್ಯವಹಾರ ಎಸಗಿದ್ದಾರೆ ಎಂದು ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ದೂರಿ ಅವರನ್ನು ಬಂಧಿಸಿ ಕಟಕಟೆಯಲ್ಲಿ ನಿಲ್ಲಿಸಿದ್ದು ಇತ್ತೀಚೆಗಿನ ಸುದ್ದಿ.
೨೦೦೬ರಲ್ಲೇ ಒಡಿಶಾ ರಾಜ್ಯದ ಲೋಕಪಾಲರು (ಲೋಕಾಯುಕ್ತ) ವೇದಾಂತ ಸಂಸ್ಥೆಗೆ ವಿಶ್ವವಿದ್ಯಾಲಯ ಸ್ಥಾಪಿಸಲು ಸಾವಿರಾರು ಎಕರೆ ಜಾಗ ನೀಡಿದ್ದರಲ್ಲಿ ಅಕ್ರಮ ನಡೆದಿದೆ ಎಂದು ವರದಿ ಮಾಡಿತ್ತು. ಈಗ, ಈ ವರ್ಷದ ಮೇ ತಿಂಗಳಿನಲ್ಲಿ ಕೇಂದ್ರ ಪರಿಸರ ಇಲಾಖೆಯು ಈ ವಿಶ್ವವಿದ್ಯಾಲಯಕ್ಕೆ ನೀಡಿದ್ದ ಪಾರಿಸರಿಕ ಅನುಮತಿಯನ್ನೂ ರದ್ದು ಮಾಡಿದೆ. ೫೦೦೦ ಕೋಟಿ ರೂ.ಗಳ ಬಂಡವಾಳದ, ೧೦ ಸಾವಿರ ಎಕರೆ ವಿಸ್ತೀರ್ಣದ ಈ ವಿಶ್ವವಿದ್ಯಾಲಯ ಸ್ಥಾಪನೆಯ ನೈಜ ಉದ್ದೇಶವೇನು ಎಂಬ ಪ್ರಶ್ನೆ ಈಗ ಕೇಳಿದೆ.
ಆಕ್ಷನ್ ಏಡ್ ಸಂಸ್ಥೆಯು ಪ್ರಕಟಿಸಿದ ‘ವೇದಾಂತ ಕೇರ್‍ಸ್?’, ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಪ್ರಕಟಿಸಿದ ‘ಡೋಂಟ್ ಮೈನ್ ಅಸ್ ಔಟ್ ಆಫ್ ಎಕ್ಸಿಸ್ಟೆನ್ಸ್’, – ವೇದಾಂತದ ಅವಾಂತರಗಳಿಗೆ ಹತ್ತು ಹಲವು ನಿದರ್ಶನಗಳನ್ನು ಒದಗಿಸುತ್ತವೆ.
ವೇದಾಂತದಲ್ಲಿ ೩೦೦ಕ್ಕೂ ಹೆಚ್ಚು ಹೂಡಿಕೆದಾರ ಮ್ಯೂಚುಯಲ್ ಫಂಡ್ ಸಂಸ್ಥೆಗಳಿವೆ; ಹತ್ತಾರು ವ್ಯಕ್ತಿಗಳಿದ್ದಾರೆ. ಆದ್ದರಿಂದ ಇಂಥ ಮ್ಯೂಚುಯಲ್ ಫಂಡ್‌ಗೆ ಹಣ ಹಾಕಿದ ಎಲ್ಲರೂ ಈ ವಿದ್ಯಮಾನದಲ್ಲಿ ಹೊಣೆ ಹೊರಬೇಕಿದೆ. ಅನಿಲ್ ಅಗರ್‌ವಾಲ್ ಕೇವಲ ಮುಖ್ಯಸ್ಥರು.
ವೇದಾಂತ : ಅಂತ್ಯವಲ್ಲ, ಆರಂಭ
ಖನಿಜಗಳಿರುವುದೇ ನಮ್ಮ ಕಾಡಿನ ಬುಡದಲ್ಲಿ. ಅಂದಮೇಲೆ ಕಾಡನ್ನೂ ಬೋಳಿಸಿ, ಖನಿಜವನ್ನೂ ಕೆಲವೇ ಕಾರ್ಪೋರೇಟ್ ಸಂಸ್ಥೆಗಳಿಗೆ ಕ್ಷುದ್ರ ರಾಯಲ್ಟಿಗೆ ಮಾರುವ ಸರ್ಕಾರದ ನೀತಿಯೇ ಬದಲಾಗದಿದ್ದರೆ ವೇದಾಂತದ ಬದಲಿಗೆ ಇನ್ನಾವುದೋ ಕಂಪೆನಿ ಬರುತ್ತದೆ. ಮತ್ತೊಂದು ಕಾಡಿನ ಮೇಲೆ ತೂಗುಗತ್ತಿ ಬೀಸುತ್ತದೆ. ಒಂದು ಯೋಜನೆಯಿಂದ ಸಮಾಜಕ್ಕಾಗುವ ಲಾಭ ಮತ್ತು ಅದಕ್ಕಾಗಿ ತೆರುವ ಸಾಮಾಜಿಕ – ಪಾರಿಸರಿಕ ನಷ್ಟದ ಲೆಕ್ಕ ಹಾಕದೇ ನಾವು ವಸುಂಧರೆಯನ್ನು ಕೆಲವೇ ವ್ಯಕ್ತಿಗಳಿಗೆ ಹರಾಜಿಗಿಡುವ ವ್ಯವಹಾರ ಮಾಡುತ್ತಿಲ್ಲವೆ?
ಹೆಚ್ಚು ದೂರ ಹೋಗುವುದು ಬೇಡ : ತದಡಿಯ ಜಾಗತಿಕ ಹಾಟ್‌ಸ್ಪಾಟ್, ಗುಂಡಿಯಾದ ದಟ್ಟ ಅರಣ್ಯ, ಮಲೆನಾಡಿನ ಸದಾಹಸಿರು ಕಾಡುಗಳು ನಮ್ಮ ಹೊಸ ಹೊಸ ಯೋಜನೆಗಳಿಗೆ ಬಲಿಯಾಗುವ ಮಾತು ಕೇಳಿಬಂದಿದೆ. ಬಳ್ಳಾರಿಯ ಕುಮಾರಸ್ವಾಮಿ ಪರ್ವತಶ್ರೇಣಿ ಈಗಾಗಲೇ ಅರ್ಧಕ್ಕರ್ಧ ಬೊಕ್ಕತಲೆಯಂತಿದೆ. ಇಂಥ ಎಷ್ಟೋ ಯೋಜನೆಗಳು ಪರಿಸರ ನಷ್ಟದ ಲೆಕ್ಕಾಚಾರವೇ ಇಲ್ಲದೆ ಜಾರಿಯಾಗುತ್ತವೆ. ಪಶ್ಚಿಮಘಟ್ಟದ ಶೇ. ೬೦ರಷ್ಟು ಕಾಡು ನಮ್ಮ ರಾಜ್ಯದಲ್ಲೇ ಇದೆ. ಈ ಕಾಡನ್ನು ಅವಲಂಬಿಸಿ ಲಕ್ಷಾಂತರ ಗುಡ್ಡಗಾಡು ಜನರು, ದಲಿತರು ಜೀವಿಸಿದ್ದಾರೆ. ದೇಶದ ಕಾಲುಭಾಗ ಆನೆಗಳು, ಶೇ. ೧೦ರಷ್ಟು ಹುಲಿಗಳು ಇರುವುದೂ ಇಲ್ಲೇ. ವೇದಾಂತ ಗಣಿಗಾರಿಕೆ ರದ್ದತಿಯು ರಾಜ್ಯದ ಕಾಡಿಗೂ, ಸಮುದಾಯಗಳಿಗೂ ರಕ್ಷಣೆ ಒದಗಿಸುವುದೆ? ಸರ್ಕಾರದಲ್ಲಿ ವಿವೇಚನೆ ಮೂಡುವುದೆ?
ವೇದಾಂತದ ವಿದ್ಯಮಾನವನ್ನು ಸುಸ್ಥಿರ, ಸಮೃದ್ಧ ಮತ್ತು ಸರ್ವಸ್ಪರ್ಶಿ ಸಾಮುದಾಯಿಕ ಬದುಕಿಗೆ ನೆರವಾಗುವ ಅಭ್ಯುದಯದ ಹಿನ್ನೆಲೆಯಲ್ಲಿ ಮರುಪರಿಶೀಲಿಸಬೇಕಿದೆ. ಇದು ಕೇವಲ ಗಣಿಗಾರಿಕೆಯಷ್ಟೇ ಅಲ್ಲ, ಭಾರೀ ಉದ್ಯಮಗಳು, ವಿದ್ಯುತ್ ಯೋಜನೆಗಳು, ಕಾಡಿನೊಳಗೆ ಹೆದ್ದಾರಿ ಕಟ್ಟುವ ಉದ್ದೇಶದ ಅಸಾಂಪ್ರದಾಯಿಕ ಇಂಧನ ಘಟಕಗಳು – ಎಲ್ಲದಕ್ಕೂ ಅನ್ವಯಿಸುತ್ತದೆ. ಅವಸರದ ಯೋಜನೆಗಳ ಭಾನಗಡಿಯಲ್ಲಿ ಸಿಗದೆ ವಿವೇಚನಾ ಸಾಮರ್ಥ್ಯ ಬೆಳೆಸಿಕೊಳ್ಳಬೇಕಿದೆ. ಇಂಥ ‘ರ್‍ಯಾಡಿಕಲ್’ ಚಿಂತನೆಯಾಗದೆ ನಾವು, ನಮ್ಮ ಮಕ್ಕಳು ಸುಖಿಸುವುದು ಅಸಾಧ್ಯ.
ಅನಿಲ್ ಅಗರ್‌ವಾಲ್ ಯಾರು?
ಕಲಹನಿಯಲ್ಲಿ ಭೀಕರ ಬರಗಾಲ ಬಂದ ವರ್ಷದಲ್ಲೇ (೧೯೫೪) ಬಿಹಾರದಲ್ಲಿ ಜನಿಸಿದ ಅನಿಲ್ ಅಗರ್‌ವಾಲ್ ಈಗ ಅನಿಲ್ ೧೦ ಬಿಲಿಯ ಡಾಲರ್‌ಗಳ ಸಿರಿವಂತ ಉದ್ಯಮಿ. ಇನ್ನೇನು ಸಿರಿವಂತಿಕೆಯಲ್ಲಿ ಮುಕೇಶ್ ಅಂಬಾನಿಯನ್ನೂ ಹಿಂದೆ ಹಾಕಲಿರುವ ಅನಿಲ್ ಅಗರ್‌ವಾಲ್ ಉದ್ದಿಮೆಗೆ ಬಂದಿದ್ದೇ ೧೯೭೬ರಲ್ಲಿ, ಗುಜರಿ (ಸ್ಕ್ರಾಪ್) ಲೋಹದ ವರ್ತಕನಾಗಿ.
ನಿಯಾಂಗಿರಿಯಲ್ಲಿರುವ ಢೋಂಗರಿಯಾ ಕೊಂಧ್ ಸಮುದಾಯದ ಒಟ್ಟು ಜನಸಂಖ್ಯೆ ೧೫ ಸಾವಿರ. ಹಲವು ದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ವೇದಾಂತದ ಉದ್ಯೋಗಿಗಳ ಒಟ್ಟು ಸಂಖ್ಯೆ ೩೦ ಸಾವಿರ. ಬಾಲ್ಯದಲ್ಲಿ ಸೈಕಲ್ಲಿನಲ್ಲಿ ಓಡಾಡುತ್ತಿದ್ದ ಅನಿಲ್ ಈಗ ಸ್ವಂತ ವಿಮಾನದಲ್ಲಿ ಅಡ್ಡಾಡುತ್ತಾರೆ; ಹಾಗೇನೇ ರಿಕ್ಷಾದಲ್ಲಿ ಕೂತು ಗೆಳೆಯನೊಂದಿಗೆ ದೇವಸ್ಥಾನಕ್ಕೂ ಹೋಗುತ್ತಾರಂತೆ.
ಹೆಚ್ಚುವರಿ ಮಾಹಿತಿಗೆ:
(೫.೯.೨೦೧೦ರಂದು ಪ್ರಜಾವಾಣಿಯಲ್ಲಿ ಪ್ರಕಟಿತ)