ಇವರಿಗೆ,
ಶ್ರೀ ಎಲ್. ಕೆ. ಆಡ್ವಾನಿಜಿ,
ಲೋಕಸಭೆಯ ಮಾನ್ಯ ಪ್ರತಿಪಕ್ಷ ನಾಯಕರು
ಕ್ಯಾಂಪ್ : ೨೨ ಸಾವಿರ ರೂ. ದಿನಬಾಡಿಗೆಯ ಯಾವುದೋ ಒಂದು ಕೊಠಡಿ
ಆರೆಂಜ್ ಕೌಂಟಿ
ಕರಡಿಗೋಡು ಪೋಸ್ಟ್
ಸಿದ್ದಾಪುರ
ಕೊಡಗು ಜಿಲ್ಲೆ ೫೭೧೨೫೩
ಪ್ರಿಯ ಆಡ್ವಾನಿಜಿ,
ಇತಿಹಾಸ ಆಗುವುದು ಬೇರೆ, ಬರೆಯುವುದು ಬೇರೆ, ನೆನಪಿಸಿಕೊಳ್ಳುವುದು ಬೇರೆ. ಅಲ್ಲವೆ ಆಡ್ವಾನಿಜಿ……. ?
ಕಳೆದ ವರ್ಷ ಇದೇ ದಿನ, ಜೂನ್ ೨೫ರಂದು ನೀವು ಬೆಂಗಳೂರಿನಲ್ಲಿದ್ದಿರಿ. ಫ್ರೀಡಂ ಪಾರ್ಕ್ ಉದ್ಘಾಟಿಸಲು. ಅದೇ, ನೀವೇ ಬರೆದಿದ್ದೀರಿ, ಒಂದು ಕಾಲದಲ್ಲಿ ಬೆಂಗಳೂರು ಸೆಂಟ್ರಲ್ ಜೈಲಾಗಿತ್ತು. ನೀವಲ್ಲಿ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಬಂಧಿಯಾಗಿದ್ದಿರಿ. ಎಷ್ಟೋ ವರ್ಷಗಳಿಂದ ಅದೇ ದಿನ, ಜೂನ್ ೨೫ – ನೀವು ಬೆಂಗಳೂರಿಗೆ ಬರುತ್ತಿದ್ದಿರಿ. ಸೆರೆಮನೆಗೊಂದು ಭೇಟಿ ಕೊಟ್ಟು ನಾಸ್ಟಾಲ್ಜಿಯಾಕ್ಕೆ ಜಾರುತ್ತಿದ್ದಿರಿ. ಪತ್ರಕರ್ತರೊಂದಿಗೆ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನಪಿಸಿಕೊಂಡು ನಿಟ್ಟುಸಿರು ಬಿಡುತ್ತಿದ್ದಿರಿ. ಕಾಂಗ್ರೆಸ್ ಪಕ್ಷದ, ಅದರಲ್ಲೂ ಇಂದಿರಾ ಗಾಂಧಿಯವರ ಸರ್ವಾಧಿಕಾರಿ ಧೋರಣೆ, ದಬ್ಬಾಳಿಕೆಯ ಸರ್ಕಾರದ ದಮನಕಾರಿ ಕ್ರಮಗಳನ್ನು ಉಲ್ಲೇಖಿಸುತ್ತಿದ್ದಿರಿ. ಪ್ರಜಾತಂತ್ರವೇ ಹೇಗೆ ಬುಡಮೇಲಾಯ್ತು ಎಂದೆಲ್ಲ ನಿಮ್ಮ ವಿವರಣೆಯನ್ನು ಕೇಳಿಯೇ ಬಚ್ಚಾ ಪತ್ರಕರ್ತರು ತುರ್ತುಪರಿಸ್ಥಿತಿಯನ್ನು ಊಹಿಸಿಕೊಳ್ಳುತ್ತಿದ್ದರು.
ಹೌದು ಆಡ್ವಾನಿಜಿ…… ಊಹಿಸಿಕೊಳ್ಳುತ್ತಿದ್ದರು.
ಯಾಕೆಂದರೆ ಅವರಿಗೆ ಅಂದಿನ ದಿನಗಳ ಕಾಠಿಣ್ಯ ಎಂದೂ ಅರ್ಥವಾಗುವುದಿಲ್ಲ.
ನಿಮಗೋ, ಮಧು ದಂಡವತೆಯವರಿಗೋ, ಹೊ.ವೆ. ಶೇಷಾದ್ರಿಯವರಿಗೋ, ದತ್ತಾತ್ರೇಯ ಹೊಸಬಾಳೆಯವರಿಗೋ…. ನೂರಾರು, ಸಾವಿರಾರು ಕಾರ್ಯಕರ್ತರಿಗೆ ಆ ದಿನಗಳು ಎಂದಿಗೂ ಮರೆತುಹೋಗುವುದು ಅಸ್ಸಾಧ್ಯ. ಹೆಸರಿಲ್ಲದ ಎಷ್ಟೋ ಕಾರ್ಯಕರ್ತರು ಈ ಜೈಲಿನಲ್ಲಿ, ಆ ಜೈಲಿನಲ್ಲಿ, ದೇಶದಾದ್ಯಂತ ಹಬ್ಬಿದ ಸೆರೆಮನೆಗಳಲ್ಲಿ ದಿನ ಕಳೆದರು. ಮೈಕೇಲ್ ಫೆರ್ನಾಂಡಿಸ್, ಸ್ನೇಹಲತಾ ರೆಡ್ಡಿ, – ಒಂದಲ್ಲ ಎರಡಲ್ಲ, ಎಲ್ಲ ಸೈದ್ಧಾಂತಿಕ ಪಂಥ ಭೇದಗಳನ್ನೂ ಬದಿಗಿಟ್ಟು ಇಂದಿರಾಗಾಂಧಿಯವರು ಹೇರಿದ ತುರ್ತುಪರಿಸ್ಥಿತಿಯ ವಿರುದ್ಧ ಹೋರಾಡಿದವರ, ಸೆರೆಮೆ ಸೇರಿದವರ, ಹಿಂಸೆಗೆ ಒಳಗಾದವರ, ಕೈಕಾಲು ಮುರಿದುಕೊಂಡವರ, ಮಾನಸಿಕ ಅಸ್ವಸ್ಥತೆಗೆ ಒಳಗಾದವರ ಸಂಖ್ಯೆಗೆ ಮಿತಿಯಿಲ್ಲ. ಕನ್ನಡದಲ್ಲಿ ಬಂದ ‘ಭುಗಿಲು’ ಪುಸ್ತಕದಲ್ಲಿ ಇರುವ ತುರ್ತುಪರಿಸ್ಥಿತಿಯ ವಿವರಗಳನ್ನು ಓದಿದರೆ ಎಂಥ ಕಲ್ಲು ಹೃದಯದವನಿಗೂ ಕಣ್ಣೀರು ಬರುತ್ತದೆ.
ಅದಾಗಿ ಜನತಾ ಪಾರ್ಟಿ ಅಧಿಕಾರಕ್ಕೆ ಬಂದಿದ್ದು, ಒಳಜಗಳದಿಂದ ಕುಸಿದಿದ್ದು, ಮತ್ತೆ ಇಂದಿರಾ ಗಾಂಧಿ, ಅವರ ಹತ್ಯೆ, ಬಿಜೆಪಿಯ ಹುಟ್ಟು, ರಾಜೀವ್ ಗಾಂಧಿ, ಏಳು ಬೀಳುತ್ತ ವಿ ಪಿ ಸಿಂಗ್ ಸರ್ಕಾರಕ್ಕೆ ಷರತ್ತಿನ ಬಾಹ್ಯ ಬೆಂಬಲ, ರಾಮ ರಥಯಾತ್ರೆ, ಲಾಲೂರಿಂದ ನಿಮ್ಮ ಬಂಧನ, ರಾಜೀವ್ ಹತ್ಯೆ, ರಾಮಜನ್ಮಭೂಮಿಯಲ್ಲಿ ಬಾಬ್ರಿ ಕಟ್ಟಡದ ನಿರ್ನಾಮ, ರಾ.ಸ್ವ.ಸಂಘದ ಮೇಲೆ ನಿಷೇಧ, ಚುನಾವಣೆ, ೧೩ ದಿನಗಳ ಸರ್ಕಾರ, ಅಮೇಲೆ ಆರು ವರ್ಷಗಳ ಸಮ್ಮಿಶ್ರ ಸರ್ಕಾರ, ಮತ್ತೆ ಮನಮೋಹನ್‌ಸಿಂಗ್ ನಾಯಕತ್ವದ ಕಾಂಗ್ರೆಸ್‌ಗೆ ದೇಶದ ಆಡಳಿತ ಚುಕ್ಕಾಣಿ……. ಚಕಚಕನೆ ಸರಿದುಹೋದ ದಿನಗಳನ್ನು ಒಂದು ಪ್ಯಾರಾದಲ್ಲಿ ಕಟ್ಟಿಕೊಡಲಾದೀತೆ ಹೇಳಿ…… ಇವತ್ತಿಗೆ ತುರ್ತುಪರಿಸ್ಥಿತಿ ಘೋಷಣೆಯಾಗಿ ೩೪ ವರ್ಷಗಳಾಗಿವೆ.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬಂತು, ಕೇಂದ್ರದಲ್ಲಿ ನಿಮ್ಮ ನಾಯಕತ್ವದ ಬಿಜೆಪಿ ಸರ್ಕಾರ ಬರುವ ಕನಸು ಹ್ಯಾಗೋ ಏನೋ, ನುಚ್ಚುನೂರಾಯಿತು. ಬಿಜೆಪಿಯಲ್ಲಿ ಅಪಸ್ವರದ, ಒಡಕಿನ ದನಿಗಳು ಕೇಳಿಬಂದವು. (ನಾನು ರಾಜ್ಯ ಸರ್ಕಾರದಲ್ಲಿ ನಡೆಯುತ್ತಿರೋ ರಾಜಕಾರಣವನ್ನು ಹೇಳುತ್ತಿಲ್ಲ). ಮಾತಿನ ಹೊಡೆದಾಟವೆಲ್ಲ ಬಹಿರಂಗವಾದವು. ನೀವು ಮತ್ತೆ ಇನ್ನೊಂದು ರಥಯಾತ್ರೆ ಹೊರಡುವುದಾಗಿ ಘೋಷಿಸಿ…….
ಈಗ ಆರೆಂಜ್ ಕೌಂಟಿಯಲ್ಲಿ ಬಂದು ಕುಳಿತಿದ್ದೀರಿ. ೨೨ ಸಾವಿರ ರೂ.ಗಳ ನಿಮ್ಮ ಕೊಠಡಿಯಲ್ಲಿ ಶಾಂತ ವಾತಾವರಣ ಇರಬಹುದು; ನಿಮ್ಮ ಸೇವೆಗಾಗಿ ಹತ್ತಾರು ನೌಕರರು ತುದಿಗಾಲಲ್ಲಿ ನಿಂತಿರಬಹುದು; ನೀವು ಯಾವುದೋ ಮಹತ್ತರ ಚಿಂತನೆಯನ್ನು ಮಾಡುತ್ತ ಆರಾಮು ಕುರ್ಚಿಯಲ್ಲಿ ಕೂತು ಮನನ, ಮಂಥನ ನಡೆಸುತ್ತಿರಬಹುದು. ಆರು ದಶಕಗಳ ಕಾಲ ದೇಶದ ರಾಜಕಾರಣದಲ್ಲಿ ಸಕ್ರಿಯವಾಗಿರುವ ನೀವು ಆರೆಂಜ್ ಕೌಂಟಿಗೆ ಬಂದಕೂಡಲೇ ಮಜಾ ಮಾಡುತ್ತೀರಿ ಎಂದು ಯಾರೂ ಹೇಳಲಾರರು. ಸಿದ್ಧಾಂತ (ಹಿಂದೂಯಿಸಂ) , ವಾದ (ನಾಯಕತ್ವ), ವಿವಾದ (ಜಿನ್ನಾ?), ಚರ್ಚೆ (ಸೋಲಿನ ಹೊಣೆ ಯಾರದು?) – ಯಾವುದೋ ಗಹನ ವಿಚಾರದಲ್ಲಿ ನೀವು ಸಹಜವಾಗೇ ತೊಡಗಿರುತ್ತೀರಿ. ಅಥವಾ ಅನೌಪಚಾರಿಕವಾಗಿ ಕಾಲ ಕಳೆಯುತ್ತ ಯಾವುದೋ ಹೊಸ ವಿಚಾರದ ಪುಸ್ತಕ ಓದುತ್ತ ಹೊರಗಿನ ನಿಸರ್ಗ ರಮಣೀಯ ದೃಶ್ಯವನ್ನು ಮತ್ತೆ ಮತ್ತೆ ನಿರುಕಿಸುತ್ತ…. ಬರೀ ಊಹೆಯೇ ಆಗಿಹೋಯಿತು ಎನ್ನಬೇಡಿ. ನಾನು ಆ ರೆಸಾರ್ಟಿಗೆ ಹೋಗಿಲ್ಲ.
೧೯೭೫ರ ಜೂನ್ ೨೫ಕ್ಕೂ, ೨೦೦೯ರ ಜೂನ್ ೨೫ಕ್ಕೂ ಎಷ್ಟೆಲ್ಲ ವ್ಯತ್ಯಾಸ ಅಲ್ಲವೆ ಆಡ್ವಾನಿಜಿ…….
ಜನಸಂಘವಾಗಿ ಜೈಲಿಗೆ ಹೋಗಿ ಜನತಾಪಾರ್ಟಿಯಾಗಿ ಹೊರಬಂದು, ನಂತರ ಬಿಜೆಪಿ ಎಂಬ ರಾಷ್ಟ್ರೀಯ ಪಕ್ಷವಾಗಿ ಬೆಳೆದಿದೆ : ರಾ.ಸ್ವ.ಸಂಘದ ರಾಜಕೀಯ ಕೂಸು. ಅಸಾಮಿನಲ್ಲೂ ಬಿಜೆಪಿ ಇದೆ. ಮಣಿಪುರದಲ್ಲೂ ಅದನ್ನು ಜನ ಗುರುತಿಸುತ್ತಾರೆ. ಕಾಶ್ಮೀರದಲ್ಲಿ, ತಮಿಳುನಾಡಿನಲ್ಲಿ, ಕೇರಳದಲ್ಲಿ ಬಿಜೆಪಿಗೆ ಮತಗಳು ಬರುತ್ತಿವೆ. ಗುಜರಾತಿನಂಥ ಉದ್ಯಮಶೀಲ ರಾಜ್ಯದಲ್ಲಿ ನರೇಂದ್ರ ಮೋದಿಯವರನ್ನು ಸೋಲಿಸುವುದಕ್ಕೆ ಇನ್ನೆಂದೂ ಆಗದೇನೋ ಎಂಬ ಸ್ಥಿತಿ; ಕರ್ನಾಟಕದಲ್ಲಿ, ದಕ್ಷಿಣ ಭಾರತದ ಪ್ರಥಮ ರಾಜ್ಯ ಸರ್ಕಾರ ಸ್ಥಾಪಿಸಿದ ಕೀರ್ತಿ.
ಅಷ್ಟೇನೇ? ಆರು ವರ್ಷ ಕೇಂದ್ರದಲ್ಲಿ ಆಡಳಿತ ನಡೆಸಿದ ಮಾತ್ರಕ್ಕೇ ಬಿಜೆಪಿಯ ಶಕ್ತಿಯೆಲ್ಲ ಹೃಸ್ವವಾಯಿತೇ? ಅಲ್ಪಕಾಲದ ಅಧಿಕಾರವನ್ನು ಅನುಭವಿಸಿದ ಮಾತ್ರಕ್ಕೆ ಶಕ್ತಿಯೆಲ್ಲ ಉಡುಗಿಹೋಗುವಂಥ ಘನ ದುರಂತವೇನಾಯಿತು? ಎಲ್ಲ ರಾಜ್ಯಗಳಲ್ಲೂ ಬಹುತೇಕ ಬೀಳು. ವ್ಯಕ್ತಿ (ಗುಜರಾತ್) , ಜಾತಿ (ಕರ್ನಾಟಕ) ಆಧಾರಿತ ಪ್ರದೇಶಗಳಲ್ಲಿ ಮಾತ್ರವೇ ಕೊಂಚ ಏಳು. ಹಾಗಾದರೆ ಈ ಸಿದ್ಧಾಂತಗಳೇನಾದವು? ರಾಷ್ಟ್ರೀಯತೆ, ರಾಷ್ಟ್ರೀಯ ಅಸ್ಮಿತೆ, ಮಾನವತಾವಾದ, ನೈಜ ಸೆಕ್ಯುಲರಿಸಮ್ – ಎಲ್ಲವೂ ಬೆಲೆ ಕಳೆದುಕೊಂಡವೆ? ಅಧಿಕಾರವೇ ರಾಜಕೀಯ ಪಕ್ಷವೊಂದರ ಅಂತಿಮ ಗಮ್ಯವೇ? ಚುನಾವಣೆಯೇ ರಾಜಕೀಯ ಪಕ್ಷವೊಂದರ ಏಕೈಕ ಮಾನದಂಡವೇ? ಒಂದು ಸೋಲೇ ಪಕ್ಷದ ವಿಘಟನೆಯ ಸಾಧನವಾಗಬಹುದೆ?
ಐದು ವರ್ಷಗಳಿಗೊಮ್ಮೆ ಹೊಸ ಖಾದಿ, ಗರಿಗರಿ ಜುಬ್ಬಾ…. ಎಲ್ಲ ಪಕ್ಷಗಳಂತೆ ಬಿಜೆಪಿಯದೂ ಒಂದು ಪ್ರಣಾಳಿಕೆ. ಈಗಂತೂ ರೆಸಾಟ್‌ಗಳಲ್ಲಿಯೇ ದೇಶದ ಬಗ್ಗೆ ಚಿಂತನ, ಮಂಥನ. ಸರಳ, ಸುಂದರ ಹಳ್ಳಿ ಬದಿಯ ವಾತಾವರಣದಲ್ಲಿ ಜಮಖಾನಾ ಹಾಸಿ ಕೂತುಗೊಳ್ಳುವ ದಿನಮಾನದ ಬಗ್ಗೆ ನೆನಪಿಸುವುದೇ ಬೇಡ ಅಲ್ಲವೆ? ಹೊಸ ಪೀಳಿಗೆಯ ನಾಯಕರಿಗೆ ಸರಿಯಾದ ವ್ಯವಸ್ಥೆ ಬೇಕಲ್ಲ ಎಂದು ಸಮರ್ಥಿಸಿಕೊಳ್ಳಬಹುದೇನೋ ಬಿಡಿ.
ಇವತ್ತಷ್ಟೇ ನೀರಜಾ ಚೌಧರಿ ಇಂಡಿಯನ್ ಎಕ್ಸ್‌ಪ್ರೆಸ್ ಕಾಲಮ್ಮಿನಲ್ಲಿ ಬರೆದಿದ್ದಾರೆ. ಯಾವುದನ್ನು ಒಪ್ಪಿಕೊಳ್ಳಬೇಕು? ಏಕಾತ್ಮ ಮಾನವತಾ ವಾದವನ್ನೋ, ಗಾಂಧಿ ಪ್ರಣೀತ ಸಮಾಜವಾದವನ್ನೋ, ಸಾಂಸ್ಖೃತಿಕ ರಾಷ್ಟ್ರೀಯತೆಯನ್ನೋ…. ಅಥವಾ ಇವೆಲ್ಲವನ್ನೂ ಬಂಧಿಸುವ ಒಂದು ಏಕೀಕೃತ ಸಿದ್ಧಾಂತವೇನಾದರೂ ಇದೆಯೆ?
ಬಿಜೆಪಿಯನ್ನು ಬೆಂಬಲಿಸಿದ ದೇಶದ ಹಲವಾರು ಮತದಾರರಲ್ಲಿ ನಾನೂ ಒಬ್ಬ. ವಿಶೇಷ ಇಷ್ಟೆ: ನಾನೂ ನಿಮ್ಮಂತೆ ಅಲ್ಲದಿದ್ದರೂ ತುರ್ತುಪರಿಸ್ಥಿತಿ ಕಾಲದಿಂದಲೂ ಪುಡಗೋಸಿ ಕಾರ್ಯಕರ್ತ. ನೀವು ಪ್ರೌಢ ನಾಯಕರಾಗಿ ಸೆರೆಮನೆ ಸೇರಿದಿರಿ. ನಾನು ತರಲೆ ಪೋರನಾಗಿ ಎಲ್ಲೋ ಕಾಡಿನಲ್ಲಿ ‘ ಇಂದಿರಾ ಗಾಂಧಿಗೆ ಧಿಕ್ಕಾರ’ ಎಂದು ನನ್ನ ಎಕ್ಸರ್‌ಸೈಜ್ ಹಾಳೆಯಲ್ಲಿ ಬರೆದು ಗಿಡಕ್ಕೆ ತೂಗು ಹಾಕಿದೆ. ನೀವು ರಾಮರಥ ಯಾತ್ರೆಯ ಹಾದಿಯಲ್ಲಿ ಬಂಧನಕ್ಕೆ ಒಳಗಾದಾಗ ನಾನು ಸಮಾಜಕಂಟಕನ ಥರ ಗಿರಿನಗರದಲ್ಲಿ ಬಿಟಿಎಸ್ ಬಸ್ಸಿನ ಟಯರಿಗೆ ಮೊಳೆ ಚುಚ್ಚುತ್ತಿದ್ದೆ. ಸಿದ್ಧಾಂತದ ಅಮಲು ನೋಡಿ.. ನಿಜಕ್ಕೂ ಅಫೀಮಿನ ಥರ…. ನನ್ನನ್ನೂ ನಿಮ್ಮನ್ನೂ, ಎಷ್ಟೋ ಕಾರ್ಯಕರ್ತರನ್ನು ಹೇಗೆ ಅಮರಿಕೊಂಡಿರುತ್ತೆ…..
ನೀವು ಈಗ ರೆಸಾರ್ಟಿನಲ್ಲಿ ರಿಲ್ಯಾಕ್ಸ್ ಮಾಡುವ ನೆಪದಲ್ಲಿ ಹೊಸ ಚಿಂತನೆಯನ್ನು ಅರಸಿ ಬಂದಿದ್ದೀರಿ; ನಾನು ಬಿಜೆಪಿಯ ಒಳಜಗಳ, ಜಾತಿ ರಾಜಕಾರಣ, ಕುಟುಂಬಗಳ ಯಜಮಾನಿಕೆ – ಇವೆಲ್ಲದರ ಬಗ್ಗೆ ರೋಸಿ ಬ್ಲಾಗ್ ಬರೆಯುತ್ತ ಸಹ ಕಾರ್ಯಕರ್ತರ ಕಟುಟೀಕೆಗೆ ಒಳಗಾಗಿದ್ದೇನೆ.
ನಿಜ, ಹೋಲಿಕೆ ಇಲ್ಲಿಗೇ ನಿಲ್ಲುತ್ತದೆ. ದೇಶದ ಉಪಪ್ರಧಾನಿಯಾಗಿದ್ದ, ಪ್ರಧಾನಮಂತ್ರಿ ಅಭ್ಯರ್ಥಿಯಾಗಿದ್ದ ನೀವೆಲ್ಲಿ… ಕೊನೇ ಪಕ್ಷ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೂ ಪಡೆಯದೇ ಪಾರ್ಟಿಯನ್ನು ಹಿಗ್ಗಾಮುಗ್ಗಾ ಟೀಕಿಸುವ ನಾನೆಲ್ಲಿ?
ಆದರೂ ಯಾಕೋ… ನೀವು ಕರ್ನಾಟಕಕ್ಕೆ ಬಂದಿದ್ದೀರಿ ಮತ್ತು ನಾಳೆ ಜೂನ್ ೨೫ ಎಂದೆಲ್ಲ ನೆನಪಾಗಿ ಇಷ್ಟು ಬರೆದೆ. ಬರೆಯುತ್ತ ಬರೆಯುತ್ತ ಬೆಂಗಳೂರು ಸೆರೆಮನೆಯ ಚಿತ್ರಗಳನ್ನೂ, ಆ ಬಗ್ಗೆ ನೀವು ಬರೆದಿದ್ದನ್ನೂ ನಿಮ್ಮ ಬ್ಲಾಗಿನಲ್ಲಿ ಓದಿದೆ. ಆರೆಂಜ್ ಕೌಂಟಿಯ ಸುಖಾಸೀನ ಕೊಠಡಿಗಳ ಛಾಯಾಚಿತ್ರಗಳನ್ನು ನೋಡಿ ಓಹೋ… ಆಡ್ವಾನಿಯವರು ಈ ಕುರ್ಚಿಯಲ್ಲಿ ಕೂತೇ ಚಿಂತನೆ ನಡೆಸಬಹುದೇನೋ ಎಂದು ಊಹಿಸಿಕೊಂಡೆ.
ಆಡ್ವಾನಿಜಿ, ನೀವಿನ್ನೂ ಛಲವಂತರು. ಈಗಲೂ ನೀವು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಮಾತನಾಡಿಲ್ಲ; ಮೆಚ್ಚತಕ್ಕದ್ದೇ. ಕರ್ನಾಟಕದ ಮುಖ್ಯಮಂತ್ರಿಯವರೂ ತಮ್ಮ ಹೊಣೆಗಾರಿಕೆ ಹೆಚ್ಚಿಸಿಕೊಳ್ಳಲು ಇನ್ನೆರಡು ದಿನಗಳಲ್ಲಿ ಇನ್ನೊಂದು ರೆಸಾರ್ಟಿಗೆ ಹೋಗಿ ಮಂಥನ ೨ ನಡೆಸಲಿದ್ದಾರೆ. ಅವರೂ ಛಲವಂತರೇ. ಅಧಿಕಾರಿಗಳಿಗೆ ಚುರುಕು ಮುಟ್ಟಿಸದೆ ಬಿಡೋದಿಲ್ಲ.
ಇವತ್ತು ಫ್ರೀಡಂ ಪಾರ್ಕ್ ನೋಡುತ್ತ ನಿಮ್ಮನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವೆ. ದೇಶದ ಅತಿ ಹಿರಿಯ ಮತ್ತು ಸಕ್ರಿಯ ಮುತ್ಸದ್ದಿಯಾಗಿ ನೀವು ಆರೆಂಜ್ ಕೌಂಟಿಯಲ್ಲಿ ಇರುವ ಕ್ಷಣಗಳ ಬಗ್ಗೆ, ಅದರ ಫಲಶ್ರುತಿಯ ಬಗ್ಗೆ ಖುಷಿಯಿಂದ ನಿರೀಕ್ಷಿಸುತ್ತೇನೆ. ಏನಾದರಾಗಲಿ, ತುರ್ತುಪರಿಸ್ಥಿತಿಯಲ್ಲಿ ನಿಮಗೆ ಹೊಸ ಚಿಂತನೆಗೆ ಹಚ್ಚಿದ ಕರ್ನಾಟಕವೇ ಈ ಸಲವೂ ರೆಸಾರ್ಟ್ ಮೂಲಕ ನಿಮ್ಮನ್ನು ಮತ್ತೆ ಹೊಸ ಅಧ್ಯಾಯಕ್ಕೆ ಸ್ವಾಗತಿಸುತ್ತದೆ ಎಂದು ಕನವರಿಸುತ್ತೇನೆ.
ನಿಮ್ಮನ್ನು ಸದಾ ನಿರೀಕ್ಷಿಸುತ್ತಿರುವ
ಬೇಳೂರು ಸುದರ್ಶನ