ಕೆಲವೇ ದಿನಗಳ ಹಿಂದೆ ಬರೆದಿದ್ದೆ: ನಾನು ಕೊಳಲು ಕ್ಲಾಸ್ ಮುಗಿಸಿಕೊಂಡು ಬರುವಾಗೆಲ್ಲ ಹತ್ತಾರು ಸಲ ರಾಜಲಕ್ಷ್ಮಿ ಮನೆಗೆ ಹೋಗಿ ಗಮ್ಮತ್ತಾದ ಮಾತುಕತೆ ನಡೆಸಿ ಚಾ ಕುಡಿದು ಬರುತ್ತಿದ್ದೆ ಎಂದು. ಈ ತಿಂಗಳ ಮೊದಲ ವಾರದಲ್ಲಿ ರಾಜಲಕ್ಷ್ಮಿಯ ಕಥಾ ಸಂಕಲನದ ಬಿಡುಗಡೆಗೆ ಹೋದಾಗಲೂ ಅದೇ ಗಮ್ಮತ್ತಿನ ಅನುಭವ. ಹೊಸ್ತಿಲಲ್ಲೇ ನಿಂತಿದ್ದ ರಾಜಲಕ್ಷ್ಮಿಗೆ ಶುಭ ಹಾರೈಸುವ ಹೊತ್ತಿಗೆ ಎಂದಿನಂತೆ ಕಥೆ, ಕಥಾಸಂಕಲನಗಳು, ಕವಿತೆಯ ಸುತ್ತಲೇ ಭಾವುಕತೆಯಿಂದ ಸದಾ ಮಂಡಲ ಹಾಕುವ ಚ.ಹ.ರಘುನಾಥ, ತಂಪು ಮಾತುಗಳ ವಿಶಾಖ, ಎಲ್ಲರೂ ಹೇಳುವಂತೆ ಸಂಕೋಚದ ಮುದ್ದೆ ಸೃಜನ್, – ಎಲ್ಲರೂ ಸಿಗುತ್ತಲೇ ಹೋದರು. ಬಿಡುಗಡೆ ಸಮಾರಂಭದಲ್ಲೇ ಗೋಚಾರಫಲ ಎಂಬ ಚರ್ಚಾಗೋಷ್ಠಿಯೂ ಇತ್ತು ಎನ್ನಿ. ರಾಜಲಕ್ಷ್ಮಿಯ ಗೆಳತಿಯರು, ಆಫೀಸಿನ ಸಹೋದ್ಯೋಗಿಗಳು, ಅವಳ ಸಂಘಟನಾ ಒಡನಾಡಿಗಳು, ಎಲ್ಲರೂ ಸೇರಿದ್ದ ಸಂಕೀರ್ಣ ಸಭಾಗೋಷ್ಠಿಯ ಮಧ್ಯದಲ್ಲೇ `ಒಂದು ಮುಷ್ಟಿ ನಕ್ಷತ್ರ’ವನ್ನು ಬಾಚಿಕೊಂಡು ತಂದೆ.
ಕಥಾ ಸಂಕಲನದ ಕೆಲವು ಕಥೆಗಳನ್ನು ಅವಳ ಮನೆಯಲ್ಲೇ ಓದಿದ್ದೆ; ಅವಳೇ ಮಾಡಿಕೊಟ್ಟ ಚಾ, ಕಾಫಿ, ಚಪಾತಿ ಸಮಾರಾಧನೆಯಲ್ಲಿ.
ನಾನು ನನ್ನ ಕವನಗಳನ್ನು ತೀರಾ ಹಿಂದೆ….. ೧೯೯೦ರಲ್ಲಿ ಎಚ್ ಎಸ್ ಆರ್‌ಗೆ ತೋರಿಸಿದಾಗ `ನೀನು ಬರೆಯುವ ಕವನಕ್ಕೂ, ನಿನ್ನ ಸಂಘಟನಾ ಬದುಕಿಗೂ ಸಂಬಂಧವೇ ಇಲ್ಲವಲ್ಲ?’ ಎಂದು ತನಿಖೆ ಮಾಡಿದ್ದರು. ಅದೆಲ್ಲ ಈಗ ಎಷ್ಟು ನಿಜ ಎನಿಸುತ್ತಿದೆ. ಇದೇ ಮಾತನ್ನು ಈಗ ರಾಜಲಕ್ಷ್ಮಿಗೂ ಅನ್ವಯಿಸಬಹುದು. ರಾಜಲಕ್ಷ್ಮಿಯ ಕಥೆಗಳಲ್ಲಿ ದಕ್ಷಿಣಕನ್ನಡದ ಮತ್ತಿದೆ. ಅಲ್ಲಿನ ವಿಭಿನ್ನ ಸಮುದಾಯಗಳ ನಡುವಣ ಹೊಯ್ದಾಟಗಳ ಗಮ್ಮತ್ತಿದೆ. ಕಥೆಯ ಲಕ್ಷಣವೇ ಇಲ್ಲ ಎಂದು ಅನ್ನಿಸಿಕೊಳ್ಳುವ ಕೆಲವು ವರ್ತಮಾನಗಳೂ ಇಲ್ಲಿ ನಿರೂಪಣೆಗೊಂಡಿವೆ ಎನ್ನಬಹುದು. ರಾಜಲಕ್ಷ್ಮಿಯ ಕಥೆಗಳು ಅಪ್ಪಟ ಖಾಸಾ ಅನುಭವಕ್ಕೆ ಸೇರಿದ್ದು; ವೈಯಕ್ತಿಕವಾಗಿ ಗಳಿಸಿದ ಸಾಮುದಾಯಿಕ ಅನುಭವಗಳಿಗೆ ಇಲ್ಲಿ ಜಾಗವಿಲ್ಲ. ಅಂದರೆ, ರಾಜಲಕ್ಷ್ಮಿಯ ಸಂಘಟನಾ ಹಿನ್ನೆಲೆಗೂ, ಅವರ ಕಥನಕ್ಕೂ ಅಂಥ ಸಂಬಂಧವೇನೂ ಕಾಣಿಸುವುದಿಲ್ಲ. ಇದೆಲ್ಲ ಮಾತು ಯಾಕೆಂದರೆ, ಸಾಹಿತ್ಯವೆಂಬ ಬೆಕ್ಕನ್ನು ಸಿದ್ಧಾಂತವೆಂಬ ಕಂಬಕ್ಕೆ ಕಟ್ಟಬೇಕೆಂದು ಹಲವರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದಕ್ಕೆ ನಮ್ಮ ಜಿ.ಬಿ. ಹರೀಶ್ ಎಷ್ಟು ಅಪವಾದವೋ ಹಾಗೆಯೇ ರಾಜಲಕ್ಷ್ಮಿ ಕೂಡಾ.
ಕಥೆಗಳ ಬಗ್ಗೆಯೇ ಬರೆಯುವುದಾದರೆ, ಮೊದಲನೇ ಕಥೆ `ಪಟ್ಟೆ ಹುಲಿ’ ಎಲ್ಲಿಂದಲೋ ಆರಂಭವಾಗಿ ಎಲ್ಲಿಗೋ ಮುಗಿಯುತ್ತದೆ! ನಿಜಕ್ಕೂ ಕಥೆ ಅಂದ್ರೆ ಹೀಗೇ ಇರಬೇಕೇನೋ. ಪುಷ್ಪ – ಹನೀಫರ ಸಂಬಂಧ ಮತ್ತು ಹುಲಿವೇಷದ ಮಕ್ಕಳು – ಎರಡೇ ಮುಖ್ಯ ಎಳೆಗಳು ಇಲ್ಲಿವೆ. ನೋಡಲಿಕ್ಕೆ ಎಂತ ಸಂಬಂಧವೂ ಇಲ್ಲವೇನೋ ಅನ್ನಿಸುತ್ತೆ; ಆದರೆ ಎಲ್ಲ ಓದಿದ ಮೇಲೆ ನಮ್ಮೆದುರು ದಿನವೂ ನಡೆಯುವ ಘಟನೆಗಳೇ ಎಷ್ಟೆಲ್ಲ ಸಂದೇಶ ಹೊತ್ತು ನಿಂತಿವೆ ಎಂದು ಅನ್ನಿಸಿಬಿಡುತ್ತದೆ.
`ಬುದ್ಧಿ ಇಲ್ಲದ ಹುಡುಗನ ತಲೆಯೊಳಗೆ’ ಕಥೆಯು ಒಂಥರ ಅಬ್‌ಸ್ಟ್ರಾಕ್ಟ್. ಅಲ್ಲಿ ನೀವು ಯಾರು ಪ್ರಾಮಾಣಿಕರು ಎಂದೆಲ್ಲ ಹುಡುಕುವುದೇ ವ್ಯರ್ಥ. ಕಥೆಗಾರ್ತಿಯೊಬ್ಬಳೇ ಪಾತ್ರಗಳಲ್ಲಿ ತೂರಿಸದೆ ಸುಮ್ಮನೆ ಇದ್ದದ್ದನ್ನು ಇದ್ದ ಹಾಗೆ ಮುಂದಿಟ್ಟಿದ್ದಾರೆ. `ಅವಳ ಪ್ರಶ್ನೆ’ಯನ್ನು ವುಮೆನ್ ಲಿಬ್ ಕಥೆ ಎಂದು ತಳ್ಳಿಹಾಕಲೂ ಸಾಧ್ಯವಿದೆ. ಪುರಾಣದ ಕಥೆಯೊಂದನ್ನು ಹಿಡಿದು ಅಲ್ಲಾಡಿಸಿದರೆ ಹಲವು ತರ್ಕಗಳು ಹುಟ್ಟುವುದು ಸಹಜ. ಇವತ್ತು ನಾವು ಪುರಾಣದ ಮೂಲಕ ವಾದ ಮಾಡಿ ಯಾರನ್ನೂ ಗೆಲ್ಲಬೇಕಿಲ್ಲ ಅನ್ನಿಸುತ್ತದೆ. ದುಷ್ಯಂತನ ಥರ ಹತ್ತಾರು ಪ್ರಕರಣಗಳು ನಮ್ಮ ನಡುವೆಯೇ ನಡೆಯುತ್ತವೆ. ವರ್ತಮಾನದ ಪಾತ್ರಗಳೇ ಬೇಕಾದಷ್ಟು ಸಿಗುತ್ತವೆ; ಅದರಲ್ಲೂ ಪತ್ರಕರ್ತೆ ರಾಜಲಕ್ಷ್ಮಿಗೆ ಯಾಕೆ ಈ ಟ್ರೆಡಿಶನಲ್ ಕಥೆ ಬರೆಯುವ ಹಟ ಎಂದು ಗೊತ್ತಾಗಲಿಲ್ಲ. ತುಂಬ ಮಜಾ ಕೊಡುವ ಕಥೆ ಎಂದರೆ ಪೋಕ್ರಿ ಕಿಟ್ಟಪ್ಪ. `ಗಿಡ್ಡ ಕೂದಲಿನ ಹುಡುಗಿ’ ಒಂಥರ ಹೊಸಕಾಲದ ಕಥೆ. ಲಂಕೇಶ್, ಕೃಷ್ಣ ಆಲನಹಳ್ಳಿಯನ್ನು ನೆನಪಿಸೋ ಹಾಗಿದೆ.
ದಕ್ಷಿಣ ಕನ್ನಡದ ಎಕ್ಸ್‌ಪ್ರೆಶನ್‌ಗಳೇ ಈ ಕಥೆಗಳಲ್ಲಿ ಹೆಚ್ಚು. ಬಹುಶಃ ರಾಜಲಕ್ಷ್ಮಿಯ ಬದುಕಿನ ಮೇಲೆ ಅವೇ ಹೆಚ್ಚು ಪರಿಣಾ ಮಾಡಿವೆಯೇನೋ. ಅವರೇ ಹೇಳುವಂತೆ ಬೆಂಗಳೂರನ್ನು ಹೊಕ್ಕಮೇಲೆ ಒಂಥರ ಐಡೆಂಟಿಟಿ ಕ್ರೈಸಿಸ್ ಕಾಡಿಯೇ ಹೀಗೆ ಬರೆದರೆ? ಬೆಂಗಳೂರು ಹೊಕ್ಕು ಎಂಟು ವರ್ಷಗಳಾದರೂ ಅವರಲ್ಲಿ ಯಾಕೆ ನಗರದ ಬದುಕಿನ ಸಂಕೀರ್ಣತೆ ಕಥೆಯಾಗಿಲ್ಲ? ಕಥೆ ಬರೆಯಬೇಕೆಂದರೆ ನಗರದಲ್ಲಿ ಇದ್ದವರು ನಗರದ ಕಥೆಯನ್ನೇ ಬರೆಯಬೇಕೆಂದಿಲ್ಲ; ಆದರೆ ರಾಜಲಕ್ಷ್ಮಿ ಹಾಗೆ ಬರೆದಿದ್ದರೆ ನಮಗೆ ಇನ್ನಷ್ಟು ಸ್ವಾರಸ್ಯಕರ ಕಥೆಗಳು ಸಿಗುತ್ತಿದ್ದವೇನೋ ಎಂಬುದು ನನ್ನ ಆಸೆ! ಮಹತ್ವಾಕಾಂಕ್ಷೆ ಇಲ್ಲದೆ, ಬರೀ ಮನಸ್ಸಿನ ಫಲಕದ ಮೇಲೆ ಬಿದ್ದ ಭಾವಗಳನ್ನು ತನಗೆ ಕಂಡಂತೆ ಶೈಲಿಯುತವಾಗಿ ಬರೆದ ರಾಜಲಕ್ಷ್ಮಿಯ ಪ್ರಾಮಾಣಿಕತೆಗೆ ಥ್ಯಾಂಕ್ಸ್ ಹೇಳಬೇಕು. ಪರಂಪರೆಗೆ ತಕ್ಕಂತೆ, ಕನ್ನಡ ಸಾಹಿತ್ಯದ ಹರಿವಿಗೆ ಪೂರಕವಾಗಿ, ವಿಮರ್ಶಕರು ಸದಾ ತಮ್ಮ ಎಂದಿನ ಪಾರಿಭಾಷಿಕ ಪದಕೋಶಯುಕ್ತ ಲೇಖನವನ್ನು ಹೆಣೆಯುವುದಕ್ಕೆ ಅನುಕೂಲವಾಗುವಂತೆ ಕಥೆಯನ್ನು ಬರೆಯುವ ಮುಲಾಜಿಗೆ ರಾಜಲಕ್ಷ್ಮಿ ಸಿಕ್ಕಿಕೊಂಡಿಲ್ಲ ಎಂಬುದೇ ಇಲ್ಲಿನ ಇನ್ನೊಂದು ಗಮ್ಮತ್ತು!
ಏನೇ ಇರಲಿ, ಚ.ಹ. ರಘುನಾಥ, ವಿಶಾಖ – ಇವರಿಬ್ಬರ ಸಂಚಿನಿಂದಾಗಿ ಈ ಕಥಾ ಸಂಕಲನ ಪ್ರಕಟವಾಗಿದೆ ಎಂದು ಬಲವಾಗಿ ಅನ್ನಿಸಿದೆ. ಇಂಥ ಸಂಚುಗಾರರು ಇದ್ದಾರೆಂದೇ ರಾಜಲಕ್ಷ್ಮಿಯವರಂಥವರು ಸಿಕ್ಕಿಬೀಳುತ್ತಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ.
ಈ ಕಥಾ ಸಂಕಲನದಲ್ಲಿ ಕಾಲ / ಸಮಯದ ಬಗ್ಗೆ ರಾಜಲಕ್ಷ್ಮಿ ಅಲ್ಲಲ್ಲಿ ಕೋಟ್ ಮಾಡಿದ ವಾಕ್ಯಗಳು ನನಗೆ ತುಂಬಾ ಇಷ್ಟವಾದವು. ಅವುಗಳನ್ನು ಸಂಗ್ರಹಿಸಿ ಕೊಟ್ಟಿದ್ದೇನೆ. ಕಥೆಗಳನ್ನು ಓದುತ್ತ ಹೋದಂತೆ ನನಗೆ ಈ ವಾಕ್ಯಗಳು ಥಟ್ಟನೆ ಸೆಳೆದವು. ಯಾಕೋ ಗೊತ್ತಿಲ್ಲ……
-
ಕ್ಯಾಲೆಂಡರಿನಲ್ಲಿ ಎರಡು ಮೂರು ಪೇಜುಗಳು ಹಿಂಬದಿ ಅಡಗಿ ಕುಳಿತವು.
-
ದಿನಗಳು ನಿಲ್ಲುತ್ತವಾ, ಕಾಲ ಲೋಕಯ್ಯನ ಕಾಲು ಸುತ್ತಿಕೊಂಡಿದ್ದ ಬಡತನವನ್ನು ಬಿಡಿಸುತ್ತಿತ್ತು.
-
ವರ್ಷಗಳು ಅಟ್ಟಿ ಅಟ್ಟಿಯಾಗಿ ಉರುಳಿವೆ.
-
ವರ್ಷದ ಬಳಿಕ ಹೀಗೆ ಒಂದು ದಿನ ಬಿಸಿಲು ಬೆಳ್ಳಗಾಗುತ್ತಿತ್ತು.
-
ಆದರೆ ದಿನಗಳು ಏನೂ ಆಗೇ ಇಲ್ಲ ಎನ್ನುವಂತೆ ನಿಲ್ಲದೆಯೇ ಓಡುತ್ತಿವೆ.
-
ವರ್ಷಗಳು ಹಾಗೆಯೇ ಒಂದರ ಮೇಲೊಂದು ರಾಶಿ ಬಿದ್ದವು.
ಮೊನ್ನೆ ಪ್ರವಾಸದಲ್ಲಿದ್ದಾಗ ಉಡುಪಿಯಿಂದ ಮೂಡುಬಿದಿರೆ ಹೋಗುವಾಗ ಬಲಕ್ಕೆ ಕೋಡಿಬೆಟ್ಟು ಎಂಭ ಬೋರ್ಡ್ ಕಾಣಿಸಿತು. ಅದೇ ರಾಜಲಕ್ಷ್ಮಿಯವರ ಊರಿರಬೇಕು. ಅರೆರೆ, ಇಂಥ ಊರಿನಲ್ಲಿ ಇದ್ದ ಮೇಲೆ ಹೀಗೆ ಕಥೆ ಬರೆಯೋದ್ರಲ್ಲಿ ಯಾವ ಅಚ್ಚರಿಯೂ ಇಲ್ಲ ಅನ್ನಿಸ್ತು.
ಈ ಹಳ್ಳಿಯ ಬೇರು ಇನ್ನೂ ಆಳಕ್ಕೆ ಇಳಿದಿದ್ದರೆ ರಾಜಲಕ್ಷಿ ಕ್ಯಾಲೆಂಡರುಗಳ ಕಟ್ಟು ಕಟ್ಟುತ್ತಲೇ ಇನ್ನೊಂದಿಷ್ಟು ಬರೆಯುತ್ತಾರೆ ಎಂದು ಆಶೆಯಿಂದ ನಿರೀಕ್ಷಿಸಿದ್ದೇನೆ. ಅವರ ಭಾಷೆಯ ಗಮ್ಮತ್ತಿಗಾದರೂ ಅವರ ಕಥೆಗಳನ್ನು ಓದಬೇಕು.