`ನನ್ನ ಮೇಡಂ ಜಯಲಕ್ಷ್ಮಿ ‘ಎಂಬ ಕವನವನ್ನು ಬರೆದು ಎಟೋ ವರ್ಷಗಳಾದ ಮೇಲೆ….. ಅವರನ್ನು ಖುದ್ದು ಕಾಣುವುದಕ್ಕೆ ಹರಸಾಹಸ ಮಾಡುತ್ತಿದ್ದೇನೆ. ನಿಮ್ಮ ಹರಕೆಯೂ ಸಏರಿಕೊಂಡರೆ ಖಂಡಿತ ಮೇ ತಿಂಗಳಲ್ಲಿ ಅವರನ್ನು ಕಾಣುವೆ.
ನನ್ನ ಕವನ ಸಂಕಲನ `ವರ್ತಮಾನದ ಬಿಸಿಲುನಲ್ಲೂ ಈ ಕವನವನ್ನು ನೀವು ಕಾಣಬಹುದು. ಅಷ್ಟಮಟ್ಟಿಗೆ ಜಯಲಕ್ಷ್ಮಿ ಮೇಡಂ ನನ್ನ ಮೇಲೆ ಪ್ರಭಾವ ಬೀರಿದ್ದಾರೆ. ಅವರನ್ನು ನಾನು ಕಾಣದೇ ಸುಮಾರು ೨೬ ವರ್ಷಗಳಾದವು. ಅವರ ಪಾಠ ಕೇಳಿಯೇ ಇಪ್ಪತ್ತೊಂಬತ್ತು ವರ್ಷಗಳಾಗಿವೆ. ಆದರೆ ಈಗಲೂ ಅವರ ಮುಖ, ಅವರು ನನಗೆ ಹೇಳಿದ ಮಾತುಗಳು, ಬರೆದ ಪತ್ರಗಳು, ತರಗತಿಯೊಳಗೆ ಅವರು ನನ್ನನ್ನು ಪರಿಚಯ ಮಾಡಿಕೊಂಡ ಕ್ಷಣ ಎಲ್ಲವೂ ಸ್ಪಷ್ಟವಾಗಿ ನೆನಪಿವೆ.
೧೯೮೦ರ ಜೂನ್ ತಿಂಗಳಿನಲ್ಲಿ ಪೊನ್ನಂಪೇಟೆಯ ಜ್ಯೂನಿಯರ್ ಕಾಲೇಜಿನಲ್ಲಿ ನಾನು ಎಸೆಸೆಲ್ಸಿ ಸೇರಿದಾಗ, ಮಲೆನಾಡಿನ ಮಳೆಯಲ್ಲಿ ನನ್ನ ದಗಲುಬಾಜಿ ಯೂನಿಫಾರಂ ಒದ್ದೆಯಾಗಿತ್ತು. ಛತ್ರಿಯೂ ಇಲ್ಲದೆ ಆ ಮಲೆನಾಡಿನ ಪುಟ್ಟ ನಗರದಲ್ಲಿ ಗುಬ್ಬಚ್ಚಿ ಥರ ನಡುಗುತ್ತಿದ್ದ ನಾನು ಹೇಗೋ ತರಗತಿಯ ಕೋಣೆಯಲ್ಲಿ ಮುದುರಿ ಕೂತಿದ್ದೆ. ಗಂಡು-ಹೆಣ್ಣಿನ ಸಂಬಂಧಗಳೆಲ್ಲ ಮಾಡರ್ನ್ ಆಗಿ ಕಂಡು ನನಗೆ ದಿಗಿಲಾಗಿತ್ತು.
ಆ ದಿನ ಗಣಿತದ ಪೀರಿಯಡ್‌ಗೆ ಬಂದವರೇ ಜಯಲಕ್ಷ್ಮಿ ಮೇಡಂ. ಒಂದು ಆಲ್ಜೀಬ್ರಾ ಈಕ್ವೇಶನ್ ಕೊಟ್ಟು ಪಾಠ ಸುರು ಮಾಡಿದರು. ನಾನೂ ಉಳಿದವರಂತೆ ಲೆಕ್ಕ ಮಾಡುತ್ತ ಕೂತಿದ್ದೆ. ಹಾಗೇ ನನ್ನ ಡೆಸ್ಕ್ ಹತ್ರ ಬಂದು `ಯಾವ ಊರು?’ ಎಂದು ಕೇಳಿದರು. `ಸಾಗರ’ ಅಂದೆ. ಕುಳ್ಳು ದೇಹ, ಕನ್ನಡಕ, ಮುಖದಲ್ಲಿ ಒಂಥರ ನಿರ್ಲಿಪ್ತ ಭಾವ. ಎಲ್ಲೂ ಎಮೋಶನ್‌ಗಳಿಗೆ ಅವಕಾಶವೇ ಇಲ್ಲದಂಥ ಸ್ಥಿತಿ. ಅವತ್ತಿನಿಂದ ಅವರು ಕ್ಲಾಸಿನಲ್ಲಿ ನನ್ನನ್ನು ಛಲೋ ಪ್ರೀತಿಯಿಂದ ನೋಡಿಕೊಂಡರು. ಯಾವ ಸಮಸ್ಯೆ ಇದ್ದರೂ ಅವರು ಬಂದು ಬಿಡಿಸಿಕೊಟ್ಟರು. ಪೊನ್ನಂಪೇಟೆಯಲ್ಲಿ ನಾನು, ಪ್ರಸಾದ ಮತ್ತು ಪೊನ್ನಪ್ಪ, ಮೂವರೇ ಕೊಂಚ ಲೆಕ್ಕ ಪಕ್ಕ ಮಾಡ್ತಿದ್ದವರು.
ಮಳೆಗಾಲ ಮಉಗಿದ ಒಂದು ದಿನ. ನನ್ನ ಕ್ಲಾಸಿನ ಕೆಲವು ಹಉಡುಗರು ಪೀರಿಯಡ್ ತಪ್ಪಿಸಿ ಕ್ರಿಕೆಟ್ ಆಡಲು ಹೊರಟರು. ನನಗೆ ಕ್ರಿಕೆಟ್ ಸ್ಪೆಲಿಂಗ್ ಕೂಡಾ ಗೊತ್ತಿಲ್ಲ. ಆದ್ರೂ ಗೆಳೆಯರ ಒತ್ತಾಯದ ಮೇರೆಗೆ ಬಯಲಿಗೆ ಹೋದೆ. ಕೊಡಗಿನಲ್ಲಿ ನಮ್ಮ ಕಾಲೇಜಿನದೇ ದೊಡ್ಡ ಬಯಲಂತೆ. ಅಲ್ಲೇ ಗುಂಡೂರಾವ್ ಹೆಲಿಕಾಪ್ಟರ್ ಇಳೀತಿತ್ತು. ಒಂದು ಪೀರಿಯಡ್ ಆಡಿದ ಮೇಲೆ ವಾಪಸು ಬರ್‍ತಾ ಇದ್ದೆವು. ಮೊಗಸಾಲೆಯಲ್ಲಿ ಜಯಲಕ್ಷ್ಮಿ ಮೇಡಂ ನಿಂತಿದಾರೆ.
ಅವರು ಉಳಿದ ಯಾರಿಗೂ ಏನೂ ಹೇಳಲಿಲ್ಲ. ನನ್ನನ್ನು ಕರೆದರು. `ಸುದರ್ಶನ, ನೀನೂ…?’ ಎಂದುಬಿಟ್ಟರು. ನನಗೆ ಅಳು ನುಗ್ಗಿಬಂತು. ಅವರು ನನ್ನನ್ನು ಅಷ್ಟೆಲ್ಲ ನಂಬಿದರೂ ನಾನು ಒಂದು ಪೀರಿಯಡ್ ಬಂಕ್ ಮಾಡಿದ್ನಲ್ಲಾ ಅಂತ ಪೂರಾ ತಲೆ ತಗ್ಗಿಸಿದೆ.
`ಈ ಊರಿನಲ್ಲೇ ಹುಟ್ಟಿ ಬೆಳೆದ ಹುಡುಗ್ರು ಹೀಗೇ ಆರಾಮಾಗಿ ಇರೋಣ ಅಂತ ಇರ್‍ತಾರೆ. ಆದ್ರೆ ನಿನಗೇನಾಗಿದೆ ಸುದರ್ಶನ…’ ಮೇಡಂ ಈ ಮಾತು ಹೇಳಿ ಅಲ್ಲಿ ನಿಲ್ಲಲೇ ಇಲ್ಲ.
ಅವತ್ತಿನಿಂದ ಇವತ್ತಿನವರೆಗೆ ನನಗೆ ಅವರು ಕೈಕಟ್ಟಿ ನಿಂತು ಹೇಳಿದ ಆ ಮಾತುಗಳು ಗುಂಗುಡುತ್ತಿವೆ. ನಾನು ಅನಾಥನ ಹಾಗೆ ಬೆಂಗಳೂರಿಗೆ ಬಂದು ಯಾವುದಾದ್ರೂ ಡಿಗ್ರಿ ಮಾಡಲೇಬೇಕು ಅಂತಿದ್ದಾಗ ಮಾಡಲು ಹೊರಟಿದ್ದು ಬಿಎಸ್ಸಿ ಮ್ಯಾಥೆಮ್ಯಾಟಿಕ್ಸ್. ಎರಡು ವರ್ಷ ಮದ್ರಾಸು ಯೂನಿವರ್ಸಿಟಿ ಪರೀಕ್ಷೆಗೆ ಕೂತು ಪಾಸಾಗಿದ್ದೇನೆ. ಮೂರನೇ ವರ್ಷ ಶಿರಸಿಗೆ ಹೋಗಿ ಮಾಡಲಾಗಲೇ ಇಲ್ಲ. ಮ್ಯಾಥೆಮಾಟಿಕ್ಸ್ ಅಂದಕೂಡಲೇ ನನಗೆ ಜಯಲಕ್ಷ್ಮಿ ಮೇಡಂ ನೆನಪಾಗುತ್ತಾರೆ.
ಆಮೇಲೆ ಹೂವಿನಹಡಗಲಿ, ಉಜಿರೆಯಲ್ಲಿ ಪಇಯುಸಿ ಮುಗಿಸಿ ದಾವಣಗೆರೆಯ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇ ಎಂಡ್ ಸಿ ಸೇರಿದ್ದೆ. ಮೇಡಂಗೆ ನಾನೇ ಕಾಗದ ಬರೆಯುತ್ತಿದ್ದೆ. ಅವರು ಹೇಗೋ ಪತ್ರ ಬರೆದು ವಾಲ್ಯುಯೇಶನ್‌ಗೆ ಅಂತ ದಾವಣಗೆರೆಗೆ ಬರ್‍ತಾ ಇದೇನೆ ಅಂತ ತಿಳಿಸಿದ್ದರು. ೧೯೮೩ರ ಆ ಒಂದು ದಿನ ಅವರನ್ನು ನಾನು ಭೇಟಿಯಾದೆ. ಅದೇ ಪ್ರೀತಿ. ಅದೇ ಅಕ್ಕರೆ.
ಅವರನ್ನು ಈ ತಿಂಗಳು ಭೇಟಿಯಾಗುವ ತವಕದಲ್ಲಿ, ಅವರು ನನ್ನ ಈ ಅವತಾರವನ್ನು ಎಷ್ಟು ಒಪ್ಪಬಹುದು ಎಂಬ ಭಯದಲ್ಲಿ ನಿಮ್ಮೊಂದಿಗೆ ಅವರ ನೆನಪನ್ನು ಹಂಚಿಕೊಂಡಿದ್ದೇನೆ.
ಈ ಹೊತ್ತಿನಲ್ಲಿ ನಗರದಲ್ಲಿ ನನ್ನ ಮೂರನೇ ಕ್ಲಾಸ್ ಟೀಚರ್ ಹನುಮಯ್ಯ, ಸಾಗರದಲ್ಲಿ ನನ್ನ ಆರನೇ ಕ್ಲಾಸ್ ಮಾಸ್ತರ ವೆಂಕಟೇಶ್ ಮತ್ತು ಗುಡಿಗಾರ ಮಾಸ್ತರ, ದಾವಣಗೆರೆಯಲ್ಲಿ ಎಂಟನೇ ಕ್ಲಾಸ್ ಮಾಸ್ತರರಾದ ಬಿ ಎಂ ಎಸ್ (ಸದಾಶಿವಯ್ಯ), ಎಚ್ ಆರ್ ಆರ್ (ರಾಮಚಂದ್ರರಾವ್), – ಎಲ್ಲರೂ ನೆನಪಾಗುತ್ತಿದ್ದಾರೆ.