ಶ್ರೀನಿವಾಸಪುರದ ಮಾವಿನ ಹಣ್ಣಿನ ಬಗ್ಗೆ ಯಾರಾದರೂ ಮಾತನಾಡುವಾಗ ನನಗೆ ನೆನಪಾಗುವುದು ಅವಳ ಸ್ನಿಗ್ಧ ನಗು. ಬಾರೋ ಸುದರ್ಶನ, ಎಂದು ಬಾಯಿ ತುಂಬ ನನ್ನ ಹೆಸರನ್ನು ಕರೆಯುವುದರಲ್ಲಿ ಅವಳಿಗಿದ್ದ ಜತನವನ್ನು ನಾನೆಂದೂ ಮರೆಯಲಾರೆ.
ಕೊಟ್ಟಿಗೆಹಾರದ ಆ ಮನೆಯನ್ನು ನಾನು ಹುಡುಕಿಕೊಂಡು ಹೋದಾಗ ಅಲ್ಲಿ ಯಾರು ಬಾಗಿಲು ತೆರೆಯಬಹುದು ಎಂಬ ಪ್ರಜ್ಷೆಯೂ ನನಗಿರಲಿಲ್ಲ. ಸಂಜೆ ನಾಲ್ಕರ ಬಿಸಿಲು ಊರನ್ನು ಸಿಂಗರಿಸಿದ್ದ ಕ್ಷಣದಲ್ಲಿ ನಾನು ಬಸ್ಸಿನಿಂದ ಇಳಿದು ಅವಳ ಚಿಕ್ಕಪ್ಪನ ಮನೆ ಹುಡುಕಿಕೊಂಡು ಹೋಗಿದ್ದೆ. ಅವಳೇ ಬಾಗಿಲು ತೆರೆದಳು. `ಅರೆ, ಸುದರ್ಶನಾ…..’ ಎಂದು ನನ್ನ ಹೆಸರನ್ನು ಪೂರ್ತಿ ಕರೆದು ನಕ್ಕಳು. ಅವಳನ್ನು ಹಾಗೆ ಹತ್ತಿರದಿಂದ ಕಂಡಿದ್ದು, ಮಾತನಾಡಿಸಿದ್ದು… ಎಲ್ಲವೂ ಅವತ್ತೇ ಮೊದಲು! ತಲೆಗೂದಲು ಬಾಚಿಕೊಳ್ಳುತ್ತ ನನ್ನನ್ನು ಒಳಗೆ ಕರೆದು ಕೂಡ್ರಿಸಿದಳು. ಆಮೇಲೆ ನಾವಿಬ್ಬರೂ ಅವಳ ಅಜ್ಜನ ಮನೆಯಾದ ಹನುಮನಹಳ್ಳಿಗೆ ಹೋದೆವು.
ಹನುಮನಹಳ್ಳಿಯಲ್ಲಿ ಏನಿತ್ತು ಏನಿರಲಿಲ್ಲ ಎಂದು ಈಗ ನೆನೆಸಿಕೊಂಡರೆ ರೋಮಾಂಚನವಾಗುತ್ತೆ. ಮೂರು ದಿನ ನಾನು ಅಲ್ಲಿದ್ದೆ. ಗಡಿಯಾರವಿಲ್ಲ; ದಿನಪತ್ರಿಕೆಯಿಲ್ಲ; ರೇಡಿಯೋ ಇಲ್ಲ. ಕರೆಂಟ್ ಇಲ್ಲ. ಇದ್ದಿದ್ದು ಮಾತ್ರ ಅಜ್ಜ, ಅಮ್ಮ, ತಂಗಿ, ತಮ್ಮಂದಿರೆಂಬ ಹೃದಯವಂತ ಜೀವಗಳು. ಅವರನ್ನು ಕಾಪಿಟ್ಟ ನಾಲ್ಕು ಗೋಡೆಗಳು. ಪಕ್ಕದಲ್ಲೇ ನನ್ನನ್ನು ಮೆದುವಾಗಿ ವಿಸ್ಮೃತಿಗೆ ತಳ್ಳಿದ ದೇಗುಲ. ಸುತ್ತಲೂ ಏರಿಳಿತದ ವಿಸ್ತಾರ ಬಯಲು. ವಸುಂಧರೆಯ ವಕ್ಷಸ್ಥಳದಲ್ಲಿ ಮಲಗಿದ ಅನುಭವ.
ಅಮ್ಮ ಮತ್ತು ಅವಳು ಸದಾ ಹೊಗೆಗೂಡಾದ ಅಡುಗೆಮನೆಯಲ್ಲಿ ಕೂತು ನನಗಾಗಿ ಮಾಡಿದ ಅಡುಗೆ ಪದಾರ್ಥಗಳೆಷ್ಟು….. ಅವಳು ನನ್ನ ಜೊತೆ ಕಬ್ಬು ತಿನ್ನುತ್ತ ನೆನಪಿಸಿಕೊಂಡ ಬದುಕಿನ ಕ್ಷಣಗಳೆಷ್ಟು…. ತಮ್ಮ ಗತಕಾಲದ ದಿನಗಳನ್ನು ಎನಿತೂ ನೆನಪಿಸಿಕೊಂಡಂತೆ ಕಾಣದ ಆ ತಾಯಿಯ ಪ್ರೀತಿಯೆಷ್ಟು…. ಅವಳ ಅಕ್ಕ, ತಂಗಿಯರು ನನ್ನನ್ನು ನೋಡಿಕೊಂಡ ಪ್ರೀತಿಯ ತೂಕವೆಷ್ಟು…..
ಎಂಥ ನೆನಪು… ಎಂಥ ಸವಿನೆನಪು…
ಮೂರನೇ ದಿನವೇ ಇರಬೇಕು, ನಾವೆಲ್ಲ ಆ ದೇಗುಲದ ಪ್ರಾಂಗಣದಲ್ಲಿ ಕೂತಿದ್ದೆವು. ಅವರೆಲ್ಲರೂ ಯಾವ್ಯಾವುದೋ ಹಾಡುಗಳನ್ನು ನವಿರಾಗಿ ಹಾಡಿದ್ದರು. ನಾನು ಆ ರಾತ್ರಿಯಿಡೀ ದೇಗುಲದ ನೆನಪಿನ ಮಧುರಯಾತನೆಯಲ್ಲಿ ನಿದ್ರಿಸಿದೆ. ನನ್ನನ್ನು ಯಾರೋ ಯಕ್ಷಿಗಳೇ ಇಲ್ಲಿಗೆ ಎಳೆತಂದಿರಬೇಕು ಎಂದೆಲ್ಲ ಅನ್ನಿಸಿತ್ತು. ಮೇಲೆ ನಿರಭ್ರ ಆಕಾಶ. ಕೆಳಗೆ ಹಸಿರು ಬಯಲು. ಬದುಕುವುದೇ ಯಜ್ಞವಾದ ಅಜ್ಜ; ಅವನ ಮಗಳೇ ನಮ್ಮ ತಾಯಿ. ಅವರ ಮಕ್ಕಳೇ ನನ್ನನ್ನು ಮನಸಾರೆ ಪ್ರೀತಿಸಿದ ಹೃದಯಗಳು. ನಾನು ಅನಾಥನಲ್ಲ ಎಂದು ಮೊಟ್ಟ ಮೊದಲ ಬಾರಿಗೆ ಅನ್ನಿಸಿದ್ದು ಅವತ್ತೇ.
ಮನಸ್ಸಿಗೆ ಬಂದಂತೆ ತಿರುಗುತ್ತಿದ್ದ ಆ ಕಾಲದಲ್ಲಿ ಮೂರು ದಿನ ನನ್ನನ್ನು ಅಕ್ಕರೆಯಿಂದ ಕಟ್ಟಿಹಾಕಿದ ಆ ಮನೆ ಈಗ ಹೇಗಿರಬಹುದು? ನೋಡುವ ಆಸೆ. ಏನಾದರಾಗಲಿ, ಒಂದೊಮ್ಮೆ ನಾನು ಅವರೆಲ್ಲರನ್ನೂ ಕಂಡು ನಮಸ್ಕರಿಸಬೇಕು ಅನ್ನಿಸುತ್ತಿದೆ. ಆ ದಿನಗಳಿಗಾಗಿ ಎದುರುನೋಡುತ್ತಿದ್ದೇನೆ.
ನನ್ನನ್ನು ಸುದರ್ಶನ ಎಂದು ಪೂರ್ತಿಯಾಗಿ ಕರೆಯುವ ಅವಳನ್ನು ಆಮೇಲೆಯೂ ನೋಡಿದ್ದೇನೆ; ತೀರ್ಥಹಳ್ಳಿಯ ತೀರ್ಥರಾಮೇಶ್ವರ ದೇಗುಲದಲ್ಲಿ. ಅದಾಗಿ ಎಷ್ಟೋ ವರ್ಷಗಳಾಗಿವೆ. ನನಗೂ ಈ ಕಾಂಕ್ರೀಟು ಕಾಡನ್ನು ಬಿಟ್ಟಿರಲಾಗಿಲ್ಲ.
ಇಪ್ಪತ್ತಾರು ವರ್ಷಗಳ ಹಿಂದಿನ ಪ್ರತೀ ಕ್ಷಣವೂ ನನ್ನನ್ನು ಯಾಕೆ ಹೀಗೆ ಕಾಡುತ್ತದೆ ಎಂದು ಗೊತ್ತಾಗುತ್ತಿಲ್ಲ. ನಾಸ್ಟಾಲ್ಜಿಯಾದ ಬಂಧದಿಂದ ತಪ್ಪಿಸಿಕೊಳ್ಳಲು ನನಗಾಗುತ್ತಿಲ್ಲ.
ನನ್ನ ಸ್ನೇಹದ, ಅನುಬಂಧಗಳ ಲೆಕ್ಕವೆಲ್ಲ ತಪ್ಪಿಹೋಗಿರೋವಾಗ ಈ ನೆನಪು, ಕೊಟ್ಟಿಗೆಹಾರದ ಸಂಜೆ, ಹನುಮನಹಳ್ಳಿಯ ಸುಗಂಧ….. ಮೂಡಿಗೆರೆ ರಸ್ತೆಯ ಮಾದಕ ತಿರುವುಗಳು….. ಜವ್ವನೆಯೊಬ್ಬಳು ಏದುಸಿರು ಬಿಡುವಂತೆ ಕಂಡಿದ್ದ ಬಯಲು ಗುಡ್ಡದ ಹಾಸು….
ಈ ಮನಸ್ಸು ಯಾವುದನ್ನೋ ನೆನಪಿಟ್ಟುಕೊಂಡು ನನ್ನನ್ನು ಕಾಡುತ್ತಿದೆ. ಯಾವುದನ್ನೋ ಮರೆಯಬೇಕೆಂದು ಹವಣಿಸುತ್ತಿದೆ. ಯಾಕೆ ಹೀಗಾಗುತ್ತಿದೆ ಎಂದು ನನಗಂತೂ ಗೊತ್ತಾಗುತ್ತಿಲ್ಲ….
ಸುಮ್ಮನೆ ನಿಮ್ಮೆಲ್ಲರಲ್ಲಿ ಹಂಚಿಕೊಳ್ಳಲು ಕೆಲವು ಸಾಲುಗಳನ್ನು ಬರೆದಿರುವೆ. ಈ ರಾತ್ರಿ ನನ್ನನ್ನು ಈ ನೆನಪುಗಳು ಕೊಚ್ಚದಿದ್ದರೆ ಸಾಕು…. ನಾಳೆ ಮತ್ತಷ್ಟು…. ಬಿಚ್ಚಿಕೊಳ್ಳುವೆನು… ಹಗುರಾಗಲು ಯತ್ನಿಸುವೆನು…