ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾಡಿನಲ್ಲಿ ಹೊಸ ಜೇಡ ಪ್ರಭೇದವೊಂದು ಪತ್ತೆಯಾಗಿ ಇಡೀ ಜಗತ್ತಿನ ಗಮನ ಸೆಳೆದಿದೆ. ಹಗಲು ಹೊತ್ತಿನಲ್ಲಿ ಎಲೆಗಳ ಹಿಂದೆ ಮರೆಯಾಗಿ, ಸೂರ್ಯ ಮುಳುಗುತ್ತಿದ್ದಂತೆ ಹೊರಗೆ ಬಂದು ಆಹಾರದ ಬೇಟೆಗೆ ತೊಡಗುವ ಈ ಚಿಕ್ಕ ಜೇಡ ಸಿಕ್ಕ ಸುದ್ದಿ ಕನ್ನಡ ಪತ್ರಿಕೆಗಳಿಗೂ ಬೇಡವೇನೋ! ಸುದ್ದಿಗಾಗಿ ಹುಡುಕಾಡುತ್ತ ಸಿಕ್ಕಿದ ಈ ಸುದ್ದಿಯ ಜಾಡು ಹಿಡಿದೆ; ಜೇಡವನ್ನೇ ಹುಡುಕಿದವರನ್ನು ಹುಡುಕಿ ಇನ್ನಷ್ಟು ಮಾಹಿತಿ ಹೊರತೆಗೆದೆ; ಈ ಬ್ಲಾಗ್ ಬರೆದೆ!!
ಮುಂಬಯಿಯ ಜೇಡ ಸಂಶೋಧಕರಾದ ಜಾವೇದ್ ಅಹಮದ್ ನಾಯಕತ್ವದ ತಂಡದಲ್ಲಿ ಒಬ್ಬರಾದ, ಇಂಜಿನಿಯರ್ ಜೆ ಎನ್ ಸುಮುಖ ಈ ಹೊಸ ಜೇಡವನ್ನು ಪತ್ತೆ ಹಚ್ಚಿದವರು. ರಾಜಶ್ರೀ ಖಲಪ್ ಈ ತಂಡದ ಇನ್ನೊಬ್ಬ ಸದಸ್ಯೆ. ಹೊಸನಗರ ಪ್ರದೇಶದಲ್ಲಿ ಹೊಸ ಜೀವ ಪ್ರಭೇದಗಳಿವೆಯೆ ಎಂದು ಹೀಗೆಯೇ ಹುಡುಕುತ್ತಿದ್ದಾಗ ಸಿಕ್ಕಿದ್ದು ಈ ಟೋಪಿ ಆಕಾರದ ಜೇಡ. ನೆಲಕ್ಕೆ ಲಂಬವಾಗಿ ಬಲೆ ಕಟ್ಟಿ ಕೀಟಗಳನ್ನು ಹಿಡಿಯುವುದು ಇದರ ದಿನಚರಿ. ಒಣ ಎಲೆಗಳ ಹಾಗೆಯೇ ಬಣ್ಣ ಮತ್ತು ವಿನ್ಯಾಸ ಹೊಂದಿರುವ ಈ ಜೇಡ ಹಗಲು ಇತರೆ ಕೀಟಗಳ ಕಣ್ಣು ತಪ್ಪಿಸುತ್ತದೆ. ಏರಿಯೋವಿಕ್ಸಿಯಾ ಕುಲದ ಅರಾನೀಡೇ ಕುಟುಂಬಕ್ಕೆ ಇದು ಸೇರಿದೆ.
ಹೊಸನಗರ ಈಗಲೂ ಕಾಡಿನ ನಡುವೆಯೇ ಇರುವ ಊರು. ಈ ಊರಿನ ಸಿವಿಲ್ ಕೋರ್ಟಿನ ಹಿಂಭಾಗದಲ್ಲಿ ಈ ಜೇಡ ಸಿಕ್ಕಿತು. ಇಲ್ಲಿರುವ ಕಡತದ ಕೊಠಡಿಯಲ್ಲಿ ಬಲೆ ಕಟ್ಟುವುದಕ್ಕೆ ಹೊಂಚು ಹಾಕಿತ್ತೋ ಏನೋ!
ಈ ಜೇಡವು ಹ್ಯಾರಿ ಪಾಟರ್‌ನ ಕಥೆಯಲ್ಲಿ ಬರುವ ಗೋದ್ರಿಕ್ ಗ್ರಿಫಿನ್‌ದೋರ್‌ನ ಟೋಪಿಯನ್ನೇ ಹೋಲುವುದರಿಂದ ಸಂಶೋಧಕರಿಗೆ ಜೇಡದ ನಾಮಕರಣ ಸುಲಭವಾಯಿತು: ಏರಿಯೋವಿಕ್ಸಿಯಾ ಗ್ರಿಫಿನ್‌ದೋರಿ ಎಂಬ ಹೆಸರು ಸಹಜವಾಗಿಯೇ ಹುಟ್ಟಿತು. ಹ್ಯಾರಿ ಪಾಟರ್ ಲೇಖಕಿ ಜೆ ಕೆ ರೋಲಿಂಗ್ ಕೂಡಾ ಕಣ್ಣರಳಿಸಿ ಟ್ವೀಟ್ ಮಾಡಿದ್ದೂ ಆಯಿತು. `ಇಂಡಿಯನ್ ಜರ್ನಲ್ ಆಫ್ ಅರಾಕ್ನಾಲಜಿ’ಯ ಮುಖಪುಟದಲ್ಲೂ ಈ ಜೇಡ ಅವತರಿಸಿತು! ನಿಕಾನ್ ಡಿ೭೨೦೦ ಡಿಎಸ್‌ಎಲ್‌ಆರ್ ಕ್ಯಾಮೆರಾದಲ್ಲಿ ಈ ಜೇಡವನ್ನು ಸೆರೆಹಿಡಿಯಲಾಯ್ತು. ಈ ಛಾಯಾಗ್ರಹಣಕ್ಕೆ ೫೦ಮಿಮೀ ಯಾಶಿಕಾ ಲೆನ್ಸ್, ವಿವಿಟಾರ್ ಎಲೆಕ್ಟ್ರಾನಿಕ್ ಫ್ಲಾಶ್ ಮತ್ತು ಸ್ವಂತ ತಯಾರಿಯ ಡಿಫ್ಯೂಸರ್ ಬಳಸಲಾಗಿದೆ. ಈ ಜೇಡದ ಮಾದರಿಯನ್ನು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಚಿಕಲ್‌ಧಾರಾದಲ್ಲಿರುವ ಫಾರೆಸ್ಟ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಸಂಗ್ರಹಿಸಿ ಇಡಲಾಗಿದೆ.
ಈ ಜೇಡವು ಹೊಸನಗರ ತಾಲೂಕಿನ ಒಂದು ಪುಟ್ಟ ಪ್ರದೇಶದಲ್ಲಷ್ಟೇ ಕಂಡುಬಂದಿದೆ. ಈ ಪ್ರದೇಶವನ್ನು ಕೇಂದ್ರ ಪಶ್ಚಿಮ ಘಟ್ಟದ ಒಂದು ಕಾನು ಎಂದು ವಿಜ್ಞಾನಿಗಳು ಗುರುತಿಸುತ್ತಾರೆ. `ಈ ಅಪರೂಪದ, ಹೊಸ ಜೇಡದ ಕುಲ ಸಂರಕ್ಷಣೆಯ ಬಗ್ಗೆ ಇನ್ನಷ್ಟು ಸಮೀಕ್ಷೆ ಮಾಡಬೇಕಿದೆ’ ಎಂದು ಜೆ ಎನ್ ಸುಮುಖ ಮಿಂಚಂಚೆಯ ಮೂಲಕ ನನಗೆ ತಿಳಿಸಿದರು. `ಈ ಜೇಡವು ಅತ್ಯಂತ ಜಾಣತನದಿಂದ ಮರೆಯಾಗಿಯೇ ಇರುವುದರಿಂದ ಇದನ್ನಾಗಲೀ, ಇದೇ ರೀತಿಯ ಇನ್ನಾವುದೇ ಜೇಡವನ್ನಾಗಲೀ ಹುಡುಕುವುದೇ ಕಷ್ಟ’ ಎಂದು ಸುಮುಖ ಹೇಳುತ್ತಾರೆ.
ಶೃಂಗೇರಿ ಮೂಲದ ಸುಮುಖ ಶಿವಮೊಗ್ಗದ ಜವಹರಲಾಲ್ ನೆಹರೂ ನ್ಯಾಶನಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಮಾಡಿದವರು. ಒಂದನೇ ತರಗತಿಯಿಂದ ಹಿಡಿದು ೧೬ ವರ್ಷಗಳ ಕಾಲ – ಇಂಜಿನಿಯರಿಂಗ್ ಶಿಕ್ಷಣ ಮುಗಿಸುವವರೆಗೂ- ಆ ಭಾಗದಲ್ಲೇ ಇದ್ದವರು. ಈಗ ಬೆಂಗಳೂರಿನಲ್ಲಿ ಡಿಸೈನ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. `ಮ್ಯಾಕ್ರೋ ವೈಲ್ಡ್‌ಲೈಫ್ ಫೋಟೋಗ್ರಫಿ’ (ನಿಕಟದೃಶ್ಯ ವನ್ಯಜೀವಿ ಛಾಯಾಗ್ರಹಣ ಎನ್ನಬಹುದೆ?) ಅವರ ಆಸಕ್ತಿಯ ವಿಷಯ. ಜೇಡಗಳ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡುವುದು, ಪ್ರವಾಸ ಮತ್ತು ತೋಟಗಾರಿಕೆ – ಸುಮುಖರ ಹವ್ಯಾಸಗಳು.
ಸುಮುಖ ಇರುವ ಈ ತಂಡವು ಇನ್ನೂ ಮೂರು ಹೊಸ ಜೇಡಗಳನ್ನು ಇದುವರೆಗೆ ಪತ್ತೆ ಮಾಡಿದೆ. ಲೇಡಿಬಗ್ ಹೆಸರಿನ ದುಂಬಿಯನ್ನು ಹೋಲುವ `ಪ್ಯಾರಾಪ್ಲೆಕ್ಟಾನಾ ರಾಜಶ್ರೀ’, ಹೊಂಚುಹಾಕಿ ಬೇಟೆಯಾಡುವ `ಥೆಲ್‌ಕ್ಟಿಯೋಕೋಪಿಸ್ ಕಿರಣ್‌ಖಲಾಪಿ’, ಬಸವನ ಹುಳುವನ್ನು ಹೋಲುವ `ಸೈರ್‌ಟರಾಕ್ನೇ ಸುಂಜಯ್‌ಮೋಂಗಾಯ್’ – ಈ ಜೇಡಗಳೂ ಇವರ ಕಣ್ಣಿಗೆ ಸಿಕ್ಕಿಬಿದ್ದ ಜೇಡಗಳು. ಇನ್ನೂ ಹಲವು ಜೇಡಗಳು ನಮ್ಮ ಕ್ಯಾಮೆರಾ ಬಲೆಗೆ ಬೀಳಲಿವೆ ಎಂದು ಸುಮುಖ ಹೇಳಿದ್ದಾರೆ.
ಹೊಸನಗರವೇನು, ಇಡೀ ಜಗತ್ತಿನಲ್ಲೇ ಇನ್ನೂ ಹೆಸರಿಡದ, ಕಣ್ಣಿಗೆ ಕಾಣದ ನೂರಾರು ಹೊಸ ಜೀವಪ್ರಭೇದಗಳು ಇದ್ದೇ ಇವೆ. ಹತ್ತು ವರ್ಷಗಳ ಹಿಂದೆ ನಾನು ಈ ಕುರಿತು ಒಂದು ಉದಾಹರಣಾರ್ಥ ಲೇಖನ ಬರೆದಿದ್ದೆ (ನೋಡಿ – ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ: http://mitramaadhyama.co.in/archives/324). ಪ್ರತಿವರ್ಷವೂ ಇಂಥ ಒಂದು ಸುದೀರ್ಘ ಲೇಖನವನ್ನು ನೀವೂ ಬರೆಯಬಹುದು. ಕಾರಂತ, ಕುವೆಂಪು, ಅನಂತಮೂರ್ತಿಯಂಥ ಜ್ಞಾನಪೀಠ ಪುರಸ್ಕೃತರನ್ನು ರೂಪಿಸಿದ ಈ ಮಲೆನಾಡು ಬೆಟ್ಟಸಾಲು ಇನ್ನೆಷ್ಟು ವೈವಿಧ್ಯಮಯ ಜೀವಗಳನ್ನು ತನ್ನ ಒಡಲಿನಲ್ಲಿ ಅಡಗಿಸಿಕೊಂಡಿದೆಯೋ ಬಲ್ಲವರಾರು? ಕೇರಳದ ಎಸ್ ಡಿ ಬಿಜು ಮತ್ತವರ ತಂಡಕ್ಕೆ ಹೊಸ ಕಪ್ಪೆಗಳನ್ನು ಹುಡುಕಲೂ ಇದೇ ಪಶ್ಚಿಮಘಟ್ಟವೇ ಬೇಕು ಎಂಬುದನ್ನೂ ನೀವು ಗಮನಿಸಿರಬಹುದು (ಬಿಜು ಹುಡುಕಿದ ಕಪ್ಪೆಗಳ ಬಗ್ಗೆ ನಾನು ೨೦೦೪ರಲ್ಲೇ ಅವರ ಸಂದರ್ಶನ ಆಧರಿಸಿ ಒಂದು ಲೇಖನ ಬರೆದಿದ್ದೆ).
ಇಂಥ ಒಂದೊಂದು ಜೇಡವೂ, ಒಂದೊಂದು ಚಿಟ್ಟೆಯೂ, ಒಂದೊಂದು ಕಪ್ಪೆಯೂ, ಒಂದೊಂದು ಕೇರೆ ಹಾವೂ, ಒಂದೊಂದು ಚಿಟ್ಟೆಯೂ ….. ಜೀವವೈವಿಧ್ಯದ ಸೂಕ್ಷ್ಮ ಸಂತುಲನೆಗೆ ಕಾರಣವಾಗಿವೆ; ತನ್ಮೂಲಕ ನಾವೆಲ್ಲ ಈ ನೆಲದ ಮೇಲೆ ಉಸಿರು ಹಿಡಿದುಕೊಳ್ಳಲು ಮೂಲಾಧಾರವಾಗಿವೆ. ಇವುಗಳನ್ನು ಒರೆಸಿಹಾಕಿ ಸ್ಥಾವರಗಳನ್ನು ಕಟ್ಟುವುದಕ್ಕೆ ಹೊರಟರೆ….
ಮನುಕುಲದ ಸಮಾಧಿ ತಪ್ಪಿದ್ದಲ್ಲ…
(ಕೇಳಿದ ಕೂಡಲೇ ವಿವರ ಮತ್ತು ಚಿತ್ರಗಳನ್ನು ಒದಗಿಸಿದ ಶ್ರೀ ಜೆ ಎನ್ ಸುಮುಖರಿಗೆ ವಂದನೆಗಳು)
ಈ ಕುರಿತ ಸುದ್ದಿಗಳು ವಿಶ್ವದಾದ್ಯಂತ ಪ್ರಕಟವಾಗಿವೆ:
- http://edition.cnn.com/2016/12/14/world/spider-india-harry-potter-hat-gryffindor/
- http://www.livescience.com/57181-harry-potter-sorting-hat-spider.html
- https://www.washingtonpost.com/news/morning-mix/wp/2016/12/13/harry-potter-loving-scientists-find-spider-that-looks-amazingly-like-the-sorting-hat-name-it-eriovixia-gryffindori/
- https://www.theguardian.com/environment/gallery/2016/dec/16/the-week-in-wildlife-in-pictures