ಹುಲ್ಲಿನ ಸಾರನ್ನು ಎರಡನೇ ಸಲ ಕುಡಿಯುವ ಮುನ್ನ….
೨೦೦೨ರಲ್ಲಿ ಅನುವಾದಿಸಿದ್ದ `ಹುಲ್ಲಿನ ಸಾರು’ ಪುಸ್ತಕವನ್ನು ಈಗ, ೧0 ವರ್ಷಗಳ ನಂತರ ನಿಮ್ಮೆದುರಿಗೆ ಇಡಲು ಸಂತೋಷ- ದುಃಖ ಎರಡೂ ಆಗುತ್ತಿದೆ. ಇಂಥದ್ದೊಂದು ಪುಸ್ತಕವನ್ನು ನಿಮಗೆ ಓದಲು ಉಚಿತವಾಗಿ ಕೊಡುವ ಸಂತೋಷ. ಆದರೆ ಈ ಪುಸ್ತಕದ ಮೂಲ ಲೇಖಕ ಇನ್ನಿಲ್ಲ ಎಂಬ ದುಃಖ.
ನಾನು ಚೀನಾ – ಟಿಬೆಟ್ ಕುರಿತು ಹತ್ತಾರು ಡಜನ್‌ಗಟ್ಟಳೆ ಪುಸ್ತಕಗಳನ್ನು ಓದಿದ್ದೇನೆ. ನೂರಾರು ವರದಿಗಳನ್ನು ಸಂಗ್ರಹಿಸಿದ್ದೇನೆ. ಪ್ರವಾಸ ಮಾಡದೆಯೂ ಆ ದೇಶಗಳ ಭೂಗೋಳ, ಜನ, ಆಹಾರ ಪದ್ಧತಿ, ಸರ್ಕಾರ, ಯಾತನೆ- ಎಲ್ಲವೂ ನನಗೆ ಅರಿವಾಗಿದೆ.
ಜಗತ್ತಿನಲ್ಲಿ ಇವತ್ತಿಗೂ ಯಾತನಾಶಿಬಿರಗಳು ಇದ್ದರೆ ಅವು ಚೀನಾದಲ್ಲಿ ಮತ್ತು ಉತ್ತರ ಕೊರಿಯಾದಲ್ಲಿ ಮಾತ್ರ ಇವೆ ಎಂಬುದು ನನ್ನ ತಿಳಿವಳಿಕೆ. ಹದಿಹರೆಯದಲ್ಲಿ ಕಮ್ಯುನಿಸ್ಟ್ ವಿಚಾರಧಾರೆಗೆ ಮನಸೋತ ನಾನು ಈಗಲೂ ಪಕ್ಕಾ ಕಮ್ಯುನಿಸ್ಟ್ ವಿಚಾರಧಾರೆ ಮಂಡಿಸುವ ಕೆಲವು ಪ್ರಾಜ್ಞರನ್ನು ಗೌರವಿಸುತ್ತೇನೆ. ಆದರೆ ಕಮ್ಯುನಿಸಂ ಸಿದ್ಧಾಂತದ ಜಾರಿಯ ಹೆಸರಿನಲ್ಲಿ ಚೀನಾದಲ್ಲಿ ನಡೆದ, ನಡೆಯುತ್ತಿರುವ ಮಾನವ ಹಕ್ಕುಗಳ ದಮನವನ್ನು ಖಂಡಿಸುತ್ತೇನೆ. ಕನ್ನಡದ ಮೊದಲ ಕೆಲವೇ ಬ್ಲಾಗುಗಳಲ್ಲಿ ನನ್ನದೂ ಒಂದು. ನನ್ನ ಮೊದಲ ಬ್ಲಾಗ್ : ಟಿಬೆಟನ್ನು ಸ್ವತಂತ್ರಗೊಳಿಸಬೇಕು; ಅಲ್ಲಿರುವ ಟಿಬೆಟನ್ ಭಿಕ್ಷು ಖೈದಿಗಳನ್ನು ಬಿಡುಗಡೆ ಮಾಡಬೇಕು ಎಂಬುದೇ ಆಗಿತ್ತು. ಅಂದಿನಿಂದಲೂ ಸಮಾಜತಾಣಗಳಲ್ಲಿ, ಬ್ಲಾಗಿನಲ್ಲಿ ಆದಷ್ಟೂ ಸಾರ್ವಜನಿಕ ಸಂಗತಿಗಳನ್ನೇ ಬರೆಯುತ್ತಿದ್ದೇನೆ. ಕೆಲವೊಮ್ಮೆ ಅತೀವ ವೇದನೆಯಿಂದ ಖಾಸಗಿ ಬ್ಲಾಗ್‌ಗಳು ಇಣುಕಿದ್ದೂ ನಿಜ.
ಶಾಂಗ್ ಬರೆದ `ಮಿಮೋಸಾ’ ಪುಸ್ತಕವನ್ನು ನಾನು ಹತ್ತು ವರ್ಷಗಳ ಹಿಂದೆಯೇ ಆನ್‌ಲೈನ್‌ನಲ್ಲಿ ಹುಡುಕಿ ಓದಿದೆ. ಅವರ ‘ಹಾಫ್ ಆಫ್ ಮ್ಯಾನ್ ಈಸ್ ವುಮನ್’ ಪುಸ್ತಕವನ್ನು ಎಷ್ಟೋ ದಿನಗಳ ಯತ್ನದಿಂದ ದಿಲ್ಲಿಯಿಂದ ತರಿಸಿದೆ. ಅವರ ಸಮಗ್ರ ಕೃತಿಗಳನ್ನೂ ಕನ್ನಡದಲ್ಲಿ ಪ್ರಕಟಿಸಬೇಕು; ಕಮ್ಯುನಿಸಂ ಆಡಳಿತದ ಕರಾಳ ಮುಖಗಳನ್ನು ಖಚಿತವಾಗಿ ವರದಿ ಮಾಡುವ ಪುಸ್ತಕಗಳನ್ನೂ ಕನ್ನಡಕ್ಕೆ ತರಬೇಕು ಎಂಬ ನನ್ನ ಆಸೆ ಹಾಗೇ ಉಳಿದಿದೆ.
ಶಾಂಗ್ ನಿಧನದ ಸುದ್ದಿಯನ್ನು ತಡವಾಗಿ ತಿಳಿದ ಮೇಲೆ, ಕೊನೇ ಪಕ್ಷ `ಹುಲ್ಲಿನ ಸಾರು’ವನ್ನಾದರೂ ಈಗಿನ ಆನ್‌ಲೈನ್ ಓದುಗರಿಗೆ ತಲುಪಿಸೋಣ ಎಂಬ ಮನಸ್ಸಾಗಿ, ಪೇಜ್‌ಮೇಕರ್‌ನಿಂದ ಇನ್‌ಡಿಸೈನ್‌ಗೆ ಇಡೀ ಕಡತವನ್ನು ವರ್ಗಾಯಿಸಿ, ವಿನ್ಯಾಸ ಮಾಡಿ ಈ ಇ-ಪುಸ್ತಕ ಸಿದ್ಧಪಡಿಸಿ ನಿಮ್ಮ ಮುಂದೆ ಇಟ್ಟಿದ್ದೇನೆ. ಸ್ವೀಕರಿಸಿ.
ಇದನ್ನೂ ಮಿತ್ರಮಾಧ್ಯಮದಿಂದ, ಕ್ರಿಯೇಟಿವ್ ಕಾಮನ್ಸ್ ಹಕ್ಕಿನಡಿಯಲ್ಲಿ ಬಿಡುಗಡೆ ಮಾಡುತ್ತಿದ್ದೇನೆ. ನೀವು ಇದನ್ನು ಮುದ್ರಿಸಬಹುದು, ನನಗೆ ರಾಯಲ್ಟಿ ಕೊಡಬೇಕಿಲ್ಲ! ಆದರೆ ಮಾರುವಂತಿಲ್ಲ; ಉಚಿತವಾಗಿ ಹಂಚಬೇಕು.
ಚೀನಾದ ಬೆಳವಣಿಗೆ ಮತ್ತು ಭಾರತದ ಬೆಳವಣಿಗೆಯನ್ನು ಪದೇ ಪದೇ ಹೋಲಿಸುವ ಕೆಲಸವನ್ನು ನಮ್ಮ ಬುದ್ಧಿಜೀವಿಗಳೂ, ರಾಜಕಾರಣಿಗಳೂ ಮಾಡುತ್ತಿದ್ದಾರೆ. ಪರಂಪರೆಯ ಕಷ್ಟಸುಖಗಳ ಜೊತೆಗೇ ಪ್ರಜಾತಂತ್ರದ ಅಂಶಗಳನ್ನು ಹೀರಿಕೊಳ್ಳುತ್ತ ಬೆಳೆಯುತ್ತಿರುವ ಭಾರತವೆಲ್ಲಿ? ಮನುಷ್ಯನ ಚಿಂತನೆಯೂ ಅಪರಾಧ ಎಂದು ಪರಿಗಣಿಸಿ, ಮನುಕುಲದ ಬೌದ್ಧಿಕ – ಭಾವುಕ ಪ್ರಪಂಚಕ್ಕೇ ಮಚ್ಚು ಲಾಂಗು ಹಾಕಿದ ಚೀನಾ ಎಲ್ಲಿ? ಹೋಲಿಕೆ ಅವೈಜ್ಞಾನಿಕ. ಸಾಧನೆಯಷ್ಟೇ ಅಲ್ಲ, ಗುರಿಯೂ ಮುಖ್ಯ ಎಂಬ ಮಾತನ್ನೇ ಮರೆಯುತ್ತಿರುವುದು ವಿಷಾದನೀಯ.
ನೀವು ಈ ಪುಸ್ತಕದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ತಿಳಿಸಲು ವಿನಂತಿ.
ವಿಶ್ವಾಸದಿಂದ
ಬೇಳೂರು ಸುದರ್ಶನ / ೧ ಫೆಬ್ರುವರಿ ೨೦೧೫
ಆನ್‌ಲೈನ್‌ನಲ್ಲೇ ಓದಲು ಇಲ್ಲಿ ಕ್ಲಿಕ್ ಮಾಡಿರಿ: