ತಳಮಳದ ಅರಿವಿನ ಹಿಂದೆ…. (ಅನುವಾದಕನ ಮಾತುಗಳು)
ಒಂದು ದಿನ ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಒಂದು ತುಂಡು ಹಾಳೆಯಲ್ಲಿ ಈ ಪುಸ್ತಕದ ವಿಮರ್ಶೆಯನ್ನು ಓದಿದೆ. ತುಂಬಾ ಪ್ರಯತ್ನಿಸಿ ಪುಸ್ತಕವನ್ನು ಖರೀದಿಸಿದೆ. ಓದಿದ ಮೇಲೆ ಇದನ್ನು ಕನ್ನಡಕ್ಕೆ ತರುವ ಮನಸ್ಸಾಯಿತು.
ಆ ಕಾಲದಲ್ಲಿ ಈಮೈಲ್ ಶುರುವಾಗಿತ್ತಷ್ಟೆ. ನಾನು ಈ ಪುಸ್ತಕದ ಹಕ್ಕುಸ್ವಾಮ್ಯ ಹೊಂದಿರುವ ಪ್ರಕಾಶಕರನ್ನು ಸಂಪರ್ಕಿಸಿದೆ. ಎಂದಿನಂತೆ ಪಾಶ್ಚಾತ್ಯ ಪ್ರಕಾಶಕರ ಒರಟುತನ ಪ್ರಕಟವಾಯಿತು. ಕೊನೆಗೆ ಟಿಬೆಟನ್ ಸರ್ಕಾರದ ಬೆಂಗಳೂರು ಕಚೇರಿಯಲ್ಲಿ ಶೂಫೆಲ್ ತುಪ್ತೆನ್ ಎಂಬ ಅಧಿಕಾರಿಯ ಗೆಳೆತನ ಮಾಡಿ ಅವರ ಮೂಲಕ ಯತ್ನಗಳನ್ನು ಆರಂಭಿಸಿದೆ. ಅವರು ಲಂಡನ್ನಿನಲ್ಲಿರುವ ಟಿಬೆಟನ್ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ನನಗೆ ಅನುವಾದದ ಮತ್ತು ಧಾರಾವಾಹಿ ಪ್ರಕಟಣೆಯ ಹಕ್ಕುಗಳನ್ನು ಅಧಿಕೃತವಾಗಿ ಕೊಡಿಸಿದರು. ಆ ಪತ್ರವು ಈಗಲೂ ಯಾವುದೋ ಕಡತದಲ್ಲಿ ಇದೆ.
ಯಾವುದೋ ಸಾಲ ತೀರಿಸಲೆಂದು ಈ ಅನುವಾದವನ್ನು `ಹೊಸದಿಗಂತ’ ಪತ್ರಿಕೆಗೆ ಕೊಟ್ಟೆ. ಅಲ್ಲಿ ಇದು ಹಲವು ಕಂತುಗಳಲ್ಲಿ ಪ್ರಕಟವಾಯಿತು. ಅಂತೂ ಸಾಲ ತೀರಿತು! ಅದಾಗಿ ಇಷ್ಟು ದಿನಗಳವರೆಗೂ ಈ ಪುಸ್ತಕದ ಪ್ರಕಟಣೆ ಸಾಧ್ಯವಾಗಲಿಲ್ಲ.
ಟಿಬೆಟ್‌ನ್ನು ಚೀನಾವು ನುಂಗಿ ನೀರು ಕುಡಿದ ಮೇಲೆ ಇಂಥ ಎಷ್ಟೋ ಕಥೆಗಳು ಹೊರಬರುತ್ತಿವೆ. ಆದರೆ ಭಾರತದಲ್ಲಿ ಇನ್ನೂ ಪಾಶ್ಚಾತ್ಯ ಲೌಕಿಕ ಬದುಕೇ ಆಸಕ್ತಿಕರ. ನಮ್ಮ ಲಿಟೆರರಿ ಫೆಸ್ಟಿವಲ್‌ಗಳನ್ನು ಗಮನಿಸಿ: ಪೌರ್ವಾತ್ಯ ಲೇಖಕರು ಇದೀಗ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯುರೋಪಿನಲ್ಲಿ ಏನೇ ಆದರೂ ಅದು ಬುದ್ಧಿಮತ್ತೆಯ ಲಕ್ಷಣ. ಚೀನಾದಲ್ಲಿ ಜೀವಗಳನ್ನು ಕೊಳ್ಳೆ ಹೊಡೆಯುತ್ತಿದ್ದರೂ ಅವೆಲ್ಲ ನಗಣ್ಯ!
ಈ ಪುಸ್ತಕವನ್ನು ಅನುವಾದಿಸುವುದರ ಜೊತೆಗೇ ನಾನು ಟಿಬೆಟನ್ ಸ್ವಾತಂತ್ರ್ಯ ಹೋರಾಟದ ವಾಲಂಟೀರ್ ಆದೆ. ಅವರನ್ನು ಹತ್ತಿರದಿಂದ ಕಂಡೆ.
ನಾನು ಚೀನಾ ಮತ್ತು ಟಿಬೆಟ್ ಬಗ್ಗೆ ವಿಶೇಷ ಅಧ್ಯಯನ ಮಾಡಲು ಈ ಪುಸ್ತಕವೇ ಮೂಲಕಾರಣ. ಆದ್ದರಿಂದಲೇ ಇದನ್ನು ನಿಮ್ಮ ಮುಂದೆ ಇಡುವುದಕ್ಕೆ ಸಂತೋಷವಾಗುತ್ತಿದೆ.
ಟಿಬೆಟಿಯನ್ನರ ಬಗ್ಗೆ ನಮ್ಮಲ್ಲಿ ಹಲವು ಅನುಮಾನಗಳಿವೆ. ಅವರಿಗೆ ಈ ದೇಶದಲ್ಲಿ ಆಶ್ರಯ ಕೊಟ್ಟಿರುವ ಬಗ್ಗೆ ನೆಹರೂ ಮೇಲೆ ಮುನಿಸಿಕೊಂಡವರೂ ಇದ್ದಾರೆ. ಮನುಷ್ಯ ಸಹಜ ದೌರ್ಬಲ್ಯಗಳು ಆ ಸಮುದಾಯದಲ್ಲೂ ಇರಬಹುದು. ಆದರೆ ಟಿಬೆಟಿಯನ್ನರು ಇಂದಿಗೂ ಕಷ್ಟಪಟ್ಟು ಮೇಲೆ ಬರುವ ಸಮುದಾಯವಾಗಿದ್ದಾರೆ.
ಚೀನಾದ ದೈತ್ಯ ಆರ್ಥಿಕತೆಯನ್ನು ನೋಡಿ ಬೆರಗಾಗುವವರು ಈ ಪುಸ್ತಕವನ್ನು ಓದಿ ವಾಸ್ತವಿಕತೆಯ ಅರಿವು ಪಡೆಯಲಿ ಎಂದು ಆಶಿಸುತ್ತೇನೆ. ಎಂದೋ ಹೂತುಹೋಗಿರುವ ಕಮ್ಯುನಿಸಂನ್ನು ಜೀವವಿದೆ ಎಂದು ಭ್ರಮಿಸಿ ಬದುಕುತ್ತಿರುವ ಭಾರತದ ಕಮ್ಯುನಿಸ್ಟರು ಇನಿತಾದರೂ ವಾಸ್ತವಕ್ಕೆ ಬರಲಿ ಎಂದು ನಿರೀಕ್ಷಿಸುತ್ತೇನೆ.
ಹಲವು ಸಮಸ್ಯೆಗಳ ನಡುವೆಯೂ ಇಂಥ ಪುಸ್ತಕವನ್ನು ಯಾವ ಹಿಂಜರಿಕೆಯೂ ಇಲ್ಲದೆ ಬರೆಯಲು, ಪ್ರಕಟಿಸಲು ಅವಕಾಶ ನೀಡುತ್ತಿರುವ ಭಾರತದ ಪ್ರಜಾತಂತ್ರಕ್ಕೆ ನನ್ನ ಅನಂತ ನಮನಗಳು.
ಈ ಪುಸ್ತಕವನ್ನು ಅನುವಾದ ಮಾಡಲಾಗುತ್ತಿದೆ ಎಂಬುದು ಶ್ರೀ ಪಾಲ್ದೆನ್ ಗ್ಯಾತ್ಸೋರಿಗೂ ಅಂದು ತಿಳಿಸಲಾಗಿತ್ತು. ಅವರ ಅಗೋಚರ ಆಶೀರ್ವಾದ ನನ್ನ ಮೇಲಿದೆ ಎಂದು ಭಾವಿಸುತ್ತೇನೆ. ೩೩ ವರ್ಷಗಳ ಕಾಲ ನಿರಂತರ ಸೆರೆಮನೆವಾಸ ಅನುಭವಿಸಿ, ನಂತರ ಹೇಗೋ ತಪ್ಪಿಸಿಕೊಂಡು ಬಂದಮೇಲೂ ಅವರ ಮುಖದಲ್ಲಿ ಎಂಥ ದೃಢತೆ, ಎಂಥ ಧೀರ ನಗು! ಅವರ ಜೀವನೋತ್ಸಾಹ ಮತ್ತು ಬದ್ಧತೆ ಬಹುಶಃ ಹಲವು ಪೀಳಿಗೆಗಳಲ್ಲಿ ಎಲ್ಲೋ ಒಮ್ಮೊಮ್ಮೆ ಕಾಣಿಸಿಕೊಳ್ಳುತ್ತದೆ.
ಅಂಥ ಚೇತನವೊಂದು ನಮ್ಮ ನಡುವೆ ಇದ್ದಿದ್ದರಿಂದಲೇ ನನಗೆ ಈ ಪುಸ್ತಕವನ್ನು ಅನುವಾದಿಸುವ ಭಾಗ್ಯ ಸಿಕ್ಕಿದೆ.
ನಿಜ, ಇದನ್ನು ಮುದ್ರಿತ ಪುಸ್ತಕವಾಗಿ ಪ್ರಕಟಿಸಿದ್ದರೆ ಇನ್ನಷ್ಟು ಸಾಮಾನ್ಯರನ್ನು ತಲಪುಬಹುದಿತ್ತು. ಅದಾಗದಿದ್ದುದಕ್ಕೆ ವಿಷಾದಿಸುತ್ತೇನೆ. ಈ ಪುಸ್ತಕವನ್ನು ನೀವು ಓದಿ, ಕಂಪ್ಯೂಟರ್/ ಇಂಟರ್‌ನೆಟ್ ಗೊತ್ತಿಲ್ಲದ ಆಸಕ್ತರಿಗೆ ನೀಡಿರಿ.
ಒಂದಲ್ಲ ಒಂದು ದಿನ ಟಿಬೆಟ್ ಸ್ವತಂತ್ರ ದೇಶವಾಗುತ್ತದೆ ಎಂಬ ಆಶಯ, ಕನಸು ನನಗೂ ಇದೆ. ಇಂದು (೨೦೧೫) ಇಸ್ಲಾಮಿಕ್ ದೇಶಗಳಲ್ಲಿ ಸ್ವ-ಆಡಳಿತಕ್ಕಾಗಿ ನಡೆಯುತ್ತಿರುವ ರಕ್ತಪಾತ – ನರಮೇಧವನ್ನೂ, ಟಿಬೆಟಿಯನ್ನರು ಈವರೆಗೆ ಕೈಗೊಂಡ ಸುಮಾರು ಏಳು ದಶಕಗಳ ಶಾಂತಿಯುತ ಹೋರಾಟವನ್ನೂ ಗಮನಿಸಿ. ಟಿಬೆಟಿಯನ್ನರನ್ನು ತೆಗಳುವ ಮೊದಲು ಈ ಅಂಶವನ್ನು ಮರೆಯಕೂಡದು.
ಈ ಪುಸ್ತಕಕ್ಕೆ ಪೂಜ್ಯ ಶ್ರೀ ದಲಾಯಿ ಲಾಮಾರವರೇ ಮೂಲ ಸ್ಫೂರ್ತಿ. ಶ್ರೀ ಪಾಲ್ದೆನ್ ಗ್ಯಾತ್ಸೋರಿಗೆ ಈ ಪುಸ್ತಕ ಬರೆಯಲು ಹೇಳಿದ್ದಲ್ಲದೆ, ಇದಕ್ಕೊಂದು ಚೆಂದದ ಆಶೀರ್ವಾದವನ್ನೂ ಬರೆದಿದ್ದಾರೆ. ಶ್ರೀ ದಲಾಯಿ ಲಾಮಾರ ಸ್ನಿಗ್ಧ, ಆಳ ನಸುನಗುವಿನಲ್ಲಿ ನಮ್ಮೆಲ್ಲ ದುಃಖಗಳನ್ನು ಮರೆಯುವ ಶಕ್ತಿ ಇದೆ. ಅವರಿಗೆ ನನ್ನ ಗೌರವಪೂರ್ವಕ ನಮನಗಳು.
ರಮ್ಯತೆ, ವಿಶೇಷಣಗಳಿಲ್ಲದ ನೇರ ನಿರೂಪಣೆಯ ಈ ಪುಸ್ತಕವನ್ನು ಓದಲು ಮುಂದಾಗಿರುವ ನಿಮಗೂ ಅಭಿನಂದನೆಗಳು!
– ಬೇಳೂರು ಸುದರ್ಶನ
೩ ಫೆಬ್ರುವರಿ ೨೦೧೫
beluru@beluru.com
www.beluru.com
ಆನ್‌ಲೈನ್‌ನಲ್ಲೇ ಓದಲು ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ.
ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಹೆಚ್ಚುವರಿ ಮಾಹಿತಿಗಾಗಿ ಈ ಕೊಂಡಿಗಳಿಗೆ ಭೇಟಿ ಕೊಡಿ:
https://www.youtube.com/watch?v=Dwb9UCKp9TU
https://www.youtube.com/watch?v=kIgtBQ8rwdA
http://www.fireunderthesnow.com/site2009/
https://www.youtube.com/watch?v=nsfZZTipR5s#t=32
http://newleftreview.org/II/51/tsering-shakya-tibetan-questions
http://www.iar.ubc.ca/aboutus/iarfacultystaff/faculty/tseringshakya.aspx