೨೦೧೫ರ ಮಾರ್ಚ್ ೩ರ ಮುಂಜಾನೆ ಎದ್ದರೆ ಹೊರಗೆಲ್ಲ ಮಳೆಯ ವಾತಾವರಣ. ಹಿಂದಿನ ದಿನದ ಮಧ್ಯರಾತ್ರಿಯೂ ಅತ್ಯಂತ ಒಣಹವೆಯಲ್ಲೇ ನಿದ್ದೆಗೆ ಜಾರಿದ್ದ ನನಗೆ ಅಚ್ಚರಿಯಾಯಿತು. ನಾನು ನನ್ನ ಇನ್‌ಬಾಕ್ಸ್ ನೋಡಿದರೆ ಯಮುನಾ ಜೀಯೇ ಅಭಿಯಾನದ ಮನೋಜ್ ಮಿಶ್ರಾರ ಒಂದು ಪತ್ರ ಬಂದಿತ್ತು. ಭಾರತ ಹವಾಮಾನ ಇಲಾಖೆ ಮತ್ತು ಆಕ್ಯುವೆದರ್ ಜಾಲತಾಣಗಳ ಕೊಂಡಿಗಳನ್ನೂ ಅವರು ಕೊಟ್ಟಿದ್ದರು. ಅಲ್ಲಿನ ವರದಿ ಸ್ಪಷ್ಟವಾಗಿಯೇ ಇತ್ತು: `ಮಾರ್ಚ್ ಆರಂಭವಾಗುತ್ತಿದ್ದಂತೆ ಒಂದು ಪ್ರಬಲ ಬಿರುಗಾಳಿಯು ಬೀಸಿ ಭಾರತ ಮತ್ತು ಪಾಖಿಸ್ತಾನದ ಪ್ರದೇಶಗಳಲ್ಲಿ ಭಾರೀ ಮಳೆ, ಪ್ರವಾಹ ಮತ್ತು ಹಿಮಪಾತಕ್ಕೆ ಕಾರಣವಾಗುತ್ತದೆ.’ ಅದರಲ್ಲೂ ವಾಯುವ್ಯ ಭಾರತ ಮತ್ತು ಉತ್ತರ ಪಾಕಿಸ್ತಾನಗಳು ಈ ಬಿರುಗಾಳಿಯ ಗರಿಷ್ಠ ಪ್ರಬಾವಕ್ಕೆ ಒಳಗಾಗಲಿವೆ ಎಂದು ವರದಿ ಹೇಳಿತ್ತು. ಕರ್ನಾಟಕದವರೆಗೂ ಇದರ ಪರಿಣಾಮ ತಟ್ಟಲಿದೆ ಎಂದೂ ಉಲ್ಲೇಖಿಸಲಾಗಿತ್ತು. ಇದೊಂದು ಅತ್ಯಂತ ಅಪರೂಪದ ಪ್ರಕರಣ ಎಂದು ವರದಿ ಹೇಳಿತ್ತು: `ವ್ಯಾಪಕ ಮತ್ತು ಗಮನಾರ್ಹ ಮಳೆಯಾಗುವುದು ಉತ್ತರ ಮತ್ತು ಮಧ್ಯಭಾರತದ ಮಟ್ಟಿಗೆ ಅತ್ಯಂತ ವಿಶೇಷ’ ಎಂದು ವರದಿ ತಿಳಿಸಿತ್ತು.
ಅಕ್ಯುವೆದರ್‌ನ ಇನ್ನೊಂದು ವರದಿಯು ಏಶ್ಯಾದ ವಸಂತಕಾಲದ ಹವಾಮಾನ ವರದಿಗಳನ್ನು ನೀಡಿ ಹಿಮಾಲಯದಲ್ಲಿ ಮಳೆ ಮತ್ತು ಹಿಮಪಾತವಾಗಲಿದೆ ಎಂದಿತ್ತು.
ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ನೆರೆಯ ನೇಪಾಳ ಮತ್ತು ಪಾಕಿಸ್ತಾನಗಳ ಉತ್ತರ ಭಾಗಗಳು ಭಾರೀ ಹಿಮಸುರಿ ಮತ್ತು ಹಿಮಪಾತಕ್ಕೆ ಒಳಗಾಗಬಹುದು. ಇದೇ ಬಿರುಗಾಳಿಯು ಹಾದುಹೋದ ಅಫಘಾನಿಸ್ತಾನದಲ್ಲಿ ಈಗಾಗಲೇ ೨೩೦ ಜನರು ಹಿಮಪಾತ ಮತ್ತು ಪ್ರವಾಹಕ್ಕೆ ಬಲಿಯಾಗಿದ್ದಾರೆ. ನಮ್ಮ ದೇಶದ ಕಾರ್ಗಿಲ್‌ನ ಝನ್‌ಸ್ಕಾರ್ ಕಣಿವೆಯಲ್ಲಿ ಇರುವ ಅಣೆಕಟ್ಟು ಕೂಡಾ ಈ ಭೂಕುಸಿತ, ಪ್ರವಾಹ ಮತ್ತು ಹಿಮಪಾತಕ್ಕೆ ಪಕ್ಕಾಗಬಹುದು ಅನ್ನಿಸಿತು.
ಅಷ್ಟು ಹೊತ್ತಿಗೆ ಉತ್ತರ ಭಾರತ ಮತ್ತು ಮಧ್ಯಭಾರತದ ಹಲವು ಪ್ರದೇಶಗಳಲ್ಲಿ ಹಾನಿ ಉಂಟಾಗಿರುವುದರ ಬಗ್ಗೆ ವರದಿಗಳು ಬರಲಾರಂಭಿಸಿದವು.
ಮಾರ್ಚ್ ೪ರಂದು ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್‌ರವರು ವಿವಿಧೆಡೆಗಳಲ್ಲಿ ಬಿದ್ದ ಮಳೆಯಿಂದಾಗಿ ೫೦ ಲಕ್ಷ ಹೆಕ್ಟೇರ್ ಭೂಮಿಯಲ್ಲಿನ ಕೃಷಿಬೆಳೆಗಳು ಅಂದರೆ ಚಳಿಗಾಲದ ಶೇಕಡಾ ೮ರಷ್ಟು ಬೆಳೆಗಳು ನಾಶವಾಗಿವೆ; ಹಲವೆಡೆ ೧೦೦ ಮಿಮೀ ಮಳೆಯೂ ಬಿದ್ದಿದೆ ಎಂದು ತಿಳಿಸಿದರು. ಉತ್ತರ ಪ್ರದೇಶದಲ್ಲಿ ೨೭ ಲಕ್ಷ, ರಾಜಸ್ಥಾನದಲ್ಲಿ ೧೪ ಲಕ್ಷ, ಮಹಾರಾಷ್ಟ್ರದಲ್ಲಿ ೭೫ ಸಾವಿರ, ಪಶ್ಚಿಮ ಬಂಗಾಳದಲ್ಲಿ ೪೯ ಸಾವಿರ, ಪಂಜಾಬಿನಲ್ಲಿ ೬ ಸಾವಿರ ಹೆಕ್ಟೇರ್‌ಗಳಷ್ಟು ಕೃಷಿಭೂಮಿ ಹಾನಿಗೆ ಒಳಗಾಗಿತ್ತು ಎಂದು ಅವರು ವಿವರ ನೀಡಿದರು. ಇದರಲ್ಲಿ ಹರ್‍ಯಾನಾ, ಉತ್ತರಾಖಂಡ, ಮಧ್ಯಪ್ರದೇಶ, ಗುಜರಾತ್, ಆಂಧ್ರಪ್ರದೇಶ, ತೆಲಂಗಾಣ ಮತ್ತು ಜಮ್ಮು – ಕಾಶ್ಮೀರ ರಾಜ್ಯಗಳಲ್ಲಿ ಉಂಟಾದ ನಷ್ಟದ ಪ್ರಮಾಣವನ್ನು ಸೇರಿಸಿರಲಿಲ್ಲ. ಈ ರಾಜ್ಯಗಳ ರೈತರಿಗೆ ಪರಿಹಾರ ನೀಡಬೇಕು ಎಂದು ಅವರು ಸಂಸತ್ತಿನಲ್ಲಿ ಮನವಿ ಮಾಡಿದರು.
ಹಿಂದುಸ್ತಾಣ್ ಟೈಮ್ಸ್‌ನ ಒಂದು ವರದಿಯ ಪ್ರಕಾರ ಫೆಬ್ರುವರಿ ೨೮ರಿಂದ ಮಾರ್ಚ್ ೧ರ ಅವಧಿಯಲ್ಲಿ ಗೋಧಿ, ಸಾಸಿವೆ, ಬೇಳೆಕಾಳುಗಳು ಸೇರಿದಂತೆ ಶೇ. ೧೦-೨೦ ಬೆಳೆಗಳು ನಾಶವಾಗಿವೆ. ಮಾವು, ಕಿತ್ತಳೆ, ದ್ರಾಕ್ಷಿ ಬೆಳೆಗಳೂ ಹಾನಿಗೆ ಒಳಗಾಗಿವೆ ಎಂದು ಪುಣೆಯ ಕೃಷಿ ಹವಾಮಾನ ವಿಭಾಗದ ಅಧಿಕಾರಿ ಡಾ|| ಎನ್ ಚಟ್ಟೋಪಾಧ್ಯಾಯ ತಿಳಿಸಿದ್ದಾರೆ.
ಈ ಆಕಸ್ಮಿಕ, ಅಕಾಲಿಕ ಮಳೆಯಿಂದಾಗಿ ನದೀತೀರದ ಬೆಳೆಗಳೂ ನಾಶವಾಗಿವೆ. ಯಮುನಾ ನದಿಯು ಮಾಚ್ ೨-೩ರ ರಾತ್ರಿ ಸತತವಾಗಿ ಮೂರು ಗಂಟೆಗಳ ಕಾಲ ೮೭೩೬೪ ಕ್ಯೂಸೆಕ್‌ಗಳ ಗರಿಷ್ಠ ಪ್ರಮಾಣದಲ್ಲಿ ಹರಿಯುತ್ತಿತ್ತು. ಇದರಿಂದಾಗಿ ನದೀತೀರದ ಹಲವು ಬೆಳೆಗಳು ನಾಶವಾಗುವ ಭೀತಿ ಇದೆ. ನದೀತೀರದ ಬೆಳೆಯನ್ನು ಸ್ಥಳೀಯವಾಗಿ ಪ್ಲೇಜ್ ಎಂದು ಕರೆಯುತ್ತಾರೆ.
ನದೀತೀರದ ಬೆಳೆಗಳಿಗೆ ಬಹಳ ನೀರು ಬೇಕಿಲ್ಲ; ಒಣ ನೆಲವೇ ಅವಕ್ಕೆ ಸೂಕ್ತ ಎನ್ನುತ್ತಾರೆ ಸ್ಥಳೀಯ ಕೃಷಿಕ ಶರಾಫತ್ ಆಲಿ.
ನದೀತೀರದ ಎಲ್ಲಾ ಬೆಳೆಗಳೂ ನಾಶವಾಗುತ್ತವೆ ಎಂದು ರಾಮ್ರಾದ ಕೃಷಿಕ ಇಕ್ಬಾಲ್ ಹೇಳುತ್ತಾರೆ.
ಸಹರಾನ್‌ಪುರ, ಮುಜಾಫರ್‌ನಗರ, ಶಾಮ್ಲಿ, ಗಾಝಿಯಾಬಾದ್ ಮತ್ತು ಭಾಗ್‌ಪತ್ ಪ್ರದೇಶಗಳಲ್ಲಿ ಕನಿಷ್ಠಪಕ್ಷ ೫೦ ಸಾವಿರ ಕುಟುಂಬಗಳು ನದೀತೀರದ ಕೃಷಿಯನ್ನು ಅವಲಂಬಿಸಿವೆ. ಈ ಕುಟುಂಬಗಳಿಗೆ ಸ್ವಂತ ಕೃಷಿಭೂಮಿಯಿಲ್ಲ. ಆದ್ದರಿಂದ ಅವರು ನದೀತೀರದ ಕೃಷಿ ಮಾಡುತ್ತಾರೆ. ೨೦೧೩ರ ಜೂನ್‌ನಲ್ಲೂ ಉತ್ತರಾಖಾಂಡ ಪ್ರವಾದ ಸಂದರ್ಭದಲ್ಲಿ ಇದೇ ಸನ್ನಿವೇಶ ಉಂಟಾಗಿತ್ತು.
ಮಹಾರಾಷ್ಟ್ರದಲ್ಲಿ ಫೆಬ್ರುವರಿ ೨೮ ಮತ್ತು ಮಾರ್ಚ್ ೧ರಂದು ಸುರಿದ ಅಕಾಲಿಕ ಮಳೆಯಿಂದಾಗಿ ಒಟ್ಟು ೧೦೦೦ ಕೋಟಿ ರೂ.ಗಳ ಬೆಳೆ ಹಾನಿಯಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿಯು ಹೇಳಿದೆ. ಕೇವಲ ಯವತ್‌ಮಾಳ ಒಂದರಲ್ಲೇ ೧೭ ಸಾವಿರ ಹೆಕ್ಟೇರ್‌ಗಳಷ್ಟು ಕೃಷಿಭೂಮಿಯು ಹಾನಿಗೆ ಒಳಗಾಗಿದೆ. ಗೋಧಿ, ಜೋಳ, ಬಟಾಣಿಗಳು ಹಾನಿಗೆ ಒಳಗಾಗಿವೆ ಎಂದು ವರದಿ ತಿಳಿಸಿದೆ. ನಾಸಿಕ್ ಜಿಲ್ಲೆಯ ೫ ಸಾವಿರ ರೈತರೂ ಇದೇ ಅಕಾಲಿಕ ಮಳೆಯ ಹಾನಿಗೆ ತುತ್ತಾಗಿದ್ದಾರೆ. ಒಂದು ವರ್ಷದ ಹಿಂದಷ್ಟೇ ರಾಜ್ಯದ ರೈತರು ಭಾರೀ ಆಲಿಕಲ್ಲು ಮಳೆಗೆ ಗುರಿಯಾಗಿದ್ದರು. ೨೦೧೪ರ ಮಳೆಗಾಲದಲ್ಲಿ ೯೦ ಲಕ್ಷ ಕೃಷಿಕರು ಬರಗಾಲಕ್ಕೆ ತುತ್ತಾದರು!
ಕಳೆದ ವಾರವಷ್ಟೇ ಬಿಡುಗಡೆಯಾದ ಆರ್ಥಿಕ ಸಮೀಕ್ಷೆಯಲ್ಲಿ ಮಹಾರಾಷ್ಟ್ರದಲ್ಲಿ ಹವಾಗುಣ ವೈಪರೀತ್ಯವನ್ನು ಎದುರಿಸಲು ಮತ್ತು ಅದರಿಂದ ಉಂಟಾಗುವ ಸಮಸ್ಯೆಗಳಿಗೆ ಸೂಕ್ತ ಕಾರ್ಯತಂತ್ರವನ್ನು ರೂಪಿಸಲು ನಬಾರ್ಡ್ ೨೧ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ತಿಳಿಸಲಾಗಿತ್ತು. ಮಹಾರಾಷ್ಟ್ರ ರಾಜ್ಯದ ಹವಾಗುಣ ಬದಲಾವಣೆ ಕ್ರಿಯಾಯೋಜನೆಯನ್ನು ತೇರಿ ಸಂಸ್ಥೆಯು ರೂಪಿಸಿದ್ದು ಇನ್ನೂ ಅಂತಿಮಗೊಳಿಸಬೇಕಿದೆ.
ಪುಣೆಯ ಭಾರತೀಯ ಉಷ್ಣವಲಯ ಹವಾಮಾನ ಸಂಸ್ಥೆಯ ವಿಜ್ಞಾನಿಗಳು ಮಂಡಿಸಿದ ಒಂದು ಸಂಶೋಧನಾ ಪ್ರಬಂಧವೂ ಈ ಮಳೆಗೂ ಹವಾಗುಣ ಬದಲಾವಣೆಗೂ ಸಂಬಂಧವಿದೆ ಎಂಬುದನ್ನು ತೋರಿಸುತ್ತದೆ. ಪಶ್ಚಿಮದಿಂದ ಬರುವ ತೊಡಕುಗಳು ಎಂದೇ ಹೆಸರಾಗಿರುವ ಈ ಹವಾಮಾನ ಬದಲಾವಣೆಗಳು ಮೆಡಿಟರೇನಿಯನ್ ಪ್ರದೇಶದಲ್ಲಿ ಹುಟ್ಟಿ ಪೂರ್ವಕ್ಕೆ ಬರತೊಡಗುತ್ತವೆ. ಟಿಬೆಟನ್ ಪ್ರಸ್ಥಭೂಮಿಯಲ್ಲಿ ಕಂಡುಬರುತ್ತಿರುವ ತಾಪಮಾನ ಹೆಚ್ಚಳವೂ ಭೂಮಿ ಬಿಸಿಯಾಗುತ್ತಿರುವ ಲಕ್ಷಣದ ಭಾಗ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಅಂದರೆ ಟಿಬೆಟಿನ ತಾಪಮಾನ ಹೆಚ್ಚಳಕ್ಕೆ ಸಾವಿರಾರು ಕಿಲೋಮೀಟರ್ ದೂರದ ಮೆಡಿಟರೇನಿಯನ್ ಪ್ರದೇಶವು ಕಾರಣ ಎಂದಾಯಿತು!
ಸಂಸತ್ತಿನಲ್ಲಿ ಮಾರ್ಚ್ ೨ರಂದು ಈ ರೈತರಿಗೆ ಪರಿಹಾರ ಕೊಡಬೇಕೆಂದು ಚರ್ಚೆಯಾಯಿತಾದರೂ, ಇವರೆಲ್ಲರೂ ಹವಾಗುಣ ವೈಪರೀತ್ಯಕ್ಕೆ ಗುರಿಯಾದವರು ಎಂಬ ಮಾತು ಬರಲಿಲ್ಲ.
ಇಲ್ಲಿ ಕೋಟಿಗಟ್ಟಳೆ ರೂಪಾಯಿಗಳನ್ನು ಪರಿಹಾರವಾಗಿ ನೀಡುವ ಬದಲಿಗೆ ಹವಾಮಾನ ಆಧಾರಿತ ವಿಮೆಯಲ್ಲಿ, ಹವಾಮಾನ ನಿಗಾದಲ್ಲಿ ಮತ್ತು ಬೆಳೆ ವಿಮೆಯಲ್ಲಿ ಹಣ ಹೂಡುವುದೇ ಸರ್ಕಾರಕ್ಕೆ ಇರುವ ಒಳ್ಳೆಯ ಪರ್ಯಾಯ ಮಾರ್ಗ ಅನ್ನಿಸುತ್ತದೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿಯವರು ಹವಾಗುಣ ಬದಲಾವಣೆ ನಿಧಿಯಾಗಿ ಕಳೆದ ಬಜೆಟ್ಟಿನಲ್ಲಿ ೧೦೦ ಕೋಟಿ ರೂ. ತೆಗೆದಿರಿಸಿದ್ದಾರೆ. ಆದರೆ ಇದಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಇನ್ನೂ ಹಣಕಾಸು ಅನುಮೋದನೆ ಸಿಕ್ಕಿಲ್ಲ.
ಸಂಸತ್ತಿನಲ್ಲಿ ನಮ್ಮ ಪ್ರತಿನಿಧಿಗಳು ಈ ವಿಷಯದ ಬಗ್ಗೆ ಗಂಭೀರವಾಗಿ ಚರ್ಚಿಸುತ್ತಾರೆ ಎಂದು ಆಶಿಸುತ್ತೇನೆ. ಇಲ್ಲಿ ಹವಾಗುಣ ಸಂತ್ರಸ್ತ ರೈತರಿಗೆ ಪರಿಹಾರ ಕೊಡುವುದಷ್ಟೇ ಅಲ್ಲ, ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ಪರಿಹಾರದ ಬಗ್ಗೆ ಧ್ವನಿ ಎತ್ತಬೇಕಿದೆ.
ಮೂಲ: Himanshu Thakkar, SANDRP (ht.sandrp@gmail.com)
ಆನ್‌ಲೈನ್ ಕೊಂಡಿ: https://sandrp.wordpress.com/2015/03/03/early-spring-rains-bring-climate-disaster-for-farmers-in-india/
ಕನ್ನಡಕ್ಕೆ: ಬೇಳೂರು ಸುದರ್ಶನ