ಮಿತ್ರಮಾಧ್ಯಮ ಟ್ರಸ್ಟ್‌ನಿಂದ ಮುಕ್ತಜ್ಞಾನಕ್ಕಾಗಿ ಡಾ. ಎಲ್ ಆರ್ ಹೆಗಡೆಯವರ ಅಪ್ರಕಟಿತ ಜಾನಪದ ಸಂಗ್ರಹಗಳ ಆರು ಡಿಜಿಟಲ್ ಪುಸ್ತಕಗಳು ಇಂದು ಲೋಕಾರ್ಪಣೆಗೊಂಡವು.
ಈ ಕಾರ್ಯಕ್ರಮ ನಡೆದಿದ್ದು ನನಗೆ ತುಂಬಾ ಖುಷಿ ಕೊಟ್ಟಿದೆ. ಡಾ. ಎಲ್ ಆರ್ ಹೆಗಡೆಯವರ ಸಂಗ್ರಹಗಳನ್ನು ದಶಕಗಳಿಂದ ಕಾಪಿಟ್ಟುಕೊಂಡು ಬಂದ ಶ್ರೀಮತಿ ರೇಣುಕಾ ರಾಮಕೃಷ್ಣ ಭಟ್ಟ ಅವರ ಕನಸನ್ನು ಒಂದಿನಿತಾದರೂ ನನಸು ಮಾಡಿದ ಪುಟ್ಟ ತೃಪ್ತಿ ನನ್ನದಾಯಿತು. ನನ್ನ ಅಶಿಸ್ತನ್ನು ಸಹಿಸಿಕೊಂಡು ಶಿಸ್ತಿನ ಪಾಠ ಹೇಳುತ್ತ ಬಂದಿರುವ ದಶಕಗಳ ಕಾಲದ ಹಿರಿಯ ಮಿತ್ರ ಮತ್ತು ಈಗಿನ ವಿಧಾನಭಾಧ್ಯಕ್ಷ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅತ್ಯಂತ ಆಪ್ತವಾಗಿ, ಸಕಾಲಿಕ ಸಂಗತಿಗಳನ್ನು ಉಲ್ಲೇಖಿಸಿ ಮಾತನಾಡಿದ್ದು ಕೂಡ ತುಂಬಾ ಹೃದ್ಯವಾಗಿತ್ತು.
ಇನ್ನೂ ಮುಖ್ಯವೆಂದರೆ ಡಿಜಿಟಲ್ ಜನಪದರ ಭಾಗಿತ್ವ. ಈ ಹಿಂದೆಯೇ ತಿಳಿಸಿದಂತೆ ನನ್ನ ಫೇಸ್‌ಬುಕ್ ಮಿತ್ರ – ಮಿತ್ರೆಯರೇ ಈ ಪ್ರಕಟಣೆಯನ್ನು ಸಾಧ್ಯವಾಗಿಸಿದ್ದು. ಅವರಲ್ಲಿ ಕೆಲವರು (ಶ್ರೀ ವೇಣುಗೋಪಾಲ್ ಗಾಂವ್ಕರ್, ಸುಷ್ಮಾ ಮೂಡಬಿದ್ರಿ) ಭಾಗವಹಿಸಿದ್ದರು. ಹೊಣೆಗಾರಿಕೆಯ ಸಾಹಿತ್ಯ ವಲಯದಿಂದ ಸಾಂಕೇತಿಕವಾಗಿ ಶ್ರೀ ರೋಹಿತ್ ಚಕ್ರತೀರ್ಥ ಬಂದಿದ್ದರು. ಕನ್ನಡದ ಹಿರಿಮೆಗಾಗಿ ಶ್ರಮಿಸುತ್ತಿರುವ ಕ ಅ ಪ್ರಾಧಿಕಾರದ ಅಧ್ಯಕ್ಷ ಶ್ರೀ ಟಿ ಎಸ್ ನಾಗಾಭರಣ ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇನಾಲಯದ ನಿರ್ದೇಶಕ ಶ್ರೀ ರಂಗಪ್ಪ ಕೂಡ ಅಭಿಮಾನದಿಂದ ಬಂದಿದ್ದರು. ಮುಖಪುಟ ಚಿತ್ರವನ್ನು ರಚಿಸಿದವರಲ್ಲಿ ಒಬ್ಬರಾದ ಹಿರಿಯ ಕಲಾವಿದ ಶ್ರೀ ಕೋಟೆಗದ್ದೆ ಎಸ್ ರವಿ ಬಂದಿದ್ದರು.
ಮುಖ್ಯವಾಗಿ ಬಾಕಿ ಇರುವ ಈ ಕೆಳಗಿನ ಪುಸ್ತಕಗಳನ್ನು ಪ್ರಕಟಿಸುವ ಕೆಲಸವನ್ನು ಈ ಕಾರ್ಯಕ್ರಮದೊಂದಿಗೆ ಆರಂಭಿಸುತ್ತಿದ್ದೇನೆ.
- ಅಂಬಿಗರ ಗಂಗೆ ಮತ್ತು ಇತರ ಕಥನ ಗೀತಗಳು (ಪೀಠಿಕೆ ಸಹಿತ)
- ಪತ್ರಿಕೆಗಳಲ್ಲಿ ಬಂದ ಜನಪದ ಕಥೆಗಳು
- ಸಂಮಿಶ್ರ ಕಥನ ಗೀತಗಳು
- ಎಲ್ ಆರ್ ಹೆಗಡೆ ಭಾಷಣಗಳು
ಈ ಕಾರ್ಯಕ್ರಮದ ವಿಶಿಷ್ಟ ಅಂಶಗಳನ್ನು ನಾನಿಲ್ಲಿ ದಾಖಲಿಸಲೇಬೇಕಿದೆ
– ಅಪ್ರಕಟಿತ ಜನಪದ ಸಂಗ್ರಹಗಳನ್ನು ಜನರೇ ಡಿಜಿಟಲ್ ವೇದಿಕೆ ಫೇಸ್‌ಬುಕ್ ಮೂಲಕ ಒಂದಾಗಿ ಅಕ್ಷರ ಜೋಡಣೆ ಮಾಡಿದರು; ಅಕ್ಷರ ಜೋಡಣೆ ಮಾಡಿದರು; ಪುಟ ವಿನ್ಯಾಸ ಮಾಡಿದರು.
– ಇದು ಸಂಪೂರ್ಣವಾಗಿ ಸ್ಥಳೀಯತೆಯ ವಾದವನ್ನು ಎತ್ತಿಹಿಡಿದಿದೆ. ಕರ್ನಾಟಕದವರೇ ಕರ್ನಾಟಕದ ಜಾನಪದ ಸಂಗ್ರಹವನ್ನು ಡಿಜಿಟಲೀಕರಿಸಿ, ಕರ್ನಾಟಕ ಸರ್ಕಾರದ ಮತ್ತು ಭಾರತ ಸರ್ಕಾರದ ಜಾಲತಾಣಗಳಲ್ಲಿ ಪ್ರಕಟವಾಗುತ್ತಿದೆ. ವೋಕಲ್ ಫಾರ್ ಲೋಕಲ್ ಅಂದ್ರೆ ಇದೂ ಹೌದು!
– ನಮ್ಮ ಜ್ಞಾನ ಭಂಡಾರಗಳು ನಮ್ಮ ನೆಲದಲ್ಲೇ ಹೋಸ್ಟಿಂಗ್ ಆಗಬೇಕಾದ್ದು ಕೇವಲ ಭಾವನಾತ್ಮಕ ಅಗತ್ಯವಲ್ಲ; ತಾಂತ್ರಿಕ ಮತ್ತು ಭದ್ರತಾ ಅವಶ್ಯಕತೆಯೂ ಹೌದು. ಈ ಅಂಶವನ್ನು ಕಾರ್ಯಕ್ರಮ ಬಿಂಬಿಸಿದೆ.
ಇನ್ನು ಕಾರ್ಯಕ್ರಮದ ಔಪಚಾರಿಕ ವರದಿ ಕೆಳಗಿದೆ!
………………………………………………………..
ಅಪ್ರಕಟಿತ ಜಾನಪದ ಸಾಹಿತ್ಯ ಡಿಜಿಟಲೀಕರಣಕ್ಕೆ
ಯುವಸಮುದಾಯ ಮುಂದಾಗಬೇಕು: ವಿಶ್ವೇಶ್ವರ ಹೆಗಡೆ ಕಾಗೇರಿ
ನಮ್ಮ ಅದ್ಭುತ ಜಾನಪದ ಪರಂಪರೆಯನ್ನು ಸಂರಕ್ಷಿಸಲು ಮುಕ್ತಜ್ಞಾನ ಸಂಗ್ರಹ ಮತ್ತು ಡಿಜಿಟಲೀಕರಣದಲ್ಲಿ ಯುವಜನತೆ ಹೆಚ್ಚು ಭಾಗವಹಿಸಬೇಕು ಎಂದು ವಿಧಾನಸಭಾಧ್ಯಕ್ಷ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಸೆ. ೧೯ ರಂದು ವಿಧಾನಸೌಧದಲ್ಲಿ ಮಿತ್ರಮಾಧ್ಯಮ ಟ್ರಸ್ಟ್ ಹಮ್ಮಿಕೊಂಡಿದ್ದ ಡಾ. ಎಲ್ ಆರ್ ಹೆಗಡೆಯವರ ಅಪ್ರಕಟಿತ ಜಾನಪದ ಸಂಗ್ರಹಗಳ ಆರು ಡಿಜಿಟಲ್ ಪುಸ್ತಕಗಳನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಶ್ರೀ ಕಾಗೇರಿಯವರು ಜಾನಪದ ವಿಷಯಗಳ ಡಿಜಿಟಲೀಕರಣದ ಕಾರ್ಯ ತುಂಬಾ ಮಹತ್ವದ್ದು ಎಂದು ಅಭಿಪ್ರಾಯಪಟ್ಟರು.
ಸರಳ ನಡೆಯ ಜಾನಪದ ಸಂಗ್ರಹಕಾರ ಎಲ್ ಆರ್ ಹೆಗಡೆಯವರ ಜನ್ಮಶತಾಬ್ದಿ ವರ್ಷವು ಸಮೀಪಿಸುತ್ತಿದ್ದು (೨೦೨೨) ಅಷ್ಟರಹೊತ್ತಿಗೆ ಅವರ ಇನ್ನುಳಿದ ಅಪ್ರಕಟಿತ ಸಂಗ್ರಹಗಳನ್ನು ಪ್ರಕಟಿಸಲು ಸರ್ಕಾರ ಮತ್ತು ಸಮುದಾಯಗಳು ಮುಂದಾಗಬೇಕೆಂದು ಅವರು ನುಡಿದರು. ಡಾ. ಎಲ್ ಆರ್ ಹೆಗಡೆಯವರು ತಮ್ಮೂರು ಕಾಗೇರಿಗೂ ಬಂದಿದ್ದನ್ನು ನೆನಪಿಸಿಕೊಂಡ ಶ್ರೀ ವಿಶ್ವೇಶ್ವರ ಹೆಗಡೆಯವರು ಉತ್ತರ ಕನ್ನಡದ ವೈವಿಧ್ಯಮ ಜಾನಪದ ಸಂಸ್ಕೃತಿಯನ್ನು ಎಲ್ ಆರ್ ಹೆಗಡೆಯವರು ಸಂಗ್ರಹಿಸಿರುವುದು ಅವರ ಅಪಾರ ಜೀವನ ನಿಷ್ಠೆಯಿಂದ ಸಾಧ್ಯವಾಯಿತು ಎಂದು ಸ್ಮರಿಸಿದರು.
ನಾಮಧಾರಿಗಳ ಆಡುಭಾಷೆಗಳ ಕಥೆಗಳು, ಆಯ್ದ ನಾಮಧಾರಿ ಕಥನಗೀತಗಳು, ಹಾಲಕ್ಕಿ ಕಥೆಗಳು, ಶುದ್ಧ ಭಾಷೆಯ ಕಥೆಗಳು, ಕೋಲಾಟದ ಪದಗಳು, ಆಯ್ಕೆ ಮಾಡಿದ ಜಾನಪದ ಕಥೆಗಳು – ಈ ಸಂಗ್ರಹಗಳು ಇಂದಿನ ಕಾರ್ಯಕ್ರಮದಲ್ಲಿ ಬಿಡುಗಡೆಯಾದವು.
ಬಿಡುಗಡೆಯಾದ ಕೃತಿಗಳ ಸಂಪಾದಕಿ, ಡಾ. ಎಲ್ ಆರ್ ಹೆಗಡೆಯವರ ಪುತ್ರಿ ಶ್ರೀಮತಿ ರೇಣುಕಾ ರಾಮಕೃಷ್ಣ ಭಟ್ಟ ಅವರು ಮಾತನಾಡಿ ಹಳ್ಳಿ ಔಷಧಗಳನ್ನೂ ತಿಳಿದಿದ್ದ ಡಾ. ಎಲ್ ಆರ್ ಹೆಗಡೆಯವರು ಎಲ್ಲರ ಹೆಗಡೆ ಆಗಿ ಬದುಕಿದ್ದರು ಎಂದು ಮೆಲುಕು ಹಾಕಿದರು.
ಫೇಸ್‌ಬುಕ್ ನಂತಹ ಡಿಜಿಟಲ್ ಜನಪದರೇ ಈ ಆರೂ ಪುಸ್ತಕಗಳ ಅಕ್ಷರಜೋಡಣೆ ಮತ್ತು ಮುಖಚಿತ್ರರಚನೆ ಮಾಡಿರುವುದಾಗಿ ತಿಳಿಸಿದ ಮಿತ್ರಮಾಧ್ಯಮ ಟ್ರಸ್ಟೀ ಮತ್ತು ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರ ಶ್ರೀ ಬೇಳೂರು ಸುದರ್ಶನ ಅವರು ಡಿಜಿಟಲ್ ಜನಪದದಿಂದ ಪರಂಪರಾಗತ ಜನಪದ ಉಳಿಸುವ ಕೆಲಸವಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರಲ್ಲದೆ, ಮುಂದಿನ ದಿನಗಳಲ್ಲಿ ಎಲ್ ಆರ್ ಹೆಗಡೆಯವರ ಇನ್ನುಳಿದ ಅಪ್ರಕಟಿತ ಸಂಗ್ರಹಗಳನ್ನು ಡಿಜಿಟಲ್ ಮಾಧ್ಯಮಕ್ಕೆ ತರುವುದಾಗಿ ತಿಳಿಸಿದರು.
ಮುಕ್ತಜ್ಞಾನಕ್ಕಾಗಿ ಈ ರೀತಿಯಲ್ಲಿ ಅಚ್ಚುಕಟ್ಟಾದ ಪ್ರಕಟಣಾ ಕಾರ್ಯವನ್ನು ಕೈಗೊಂಡ ಕ್ರಮವನ್ನು ಸಭೆಯಲ್ಲಿ ಉಪಸ್ಥಿತರಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಟಿ ಎಸ್ ನಾಗಾಭರಣ ಅವರು ಶ್ಲಾಘಿಸಿದರು.
ಕರ್ನಾಟಕ ಸರ್ಕಾರದ ಕಣಜ ಜಾಲತಾಣದಲ್ಲಿ ಪ್ರಕಟಿಸಲು ಈ ಆರೂ ಪುಸ್ತಕಗಳ ಸಾಂಕೇತಿಕ ಪ್ರತಿಗಳನ್ನು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕ ಶ್ರೀ ಎಸ್ ರಂಗಪ್ಪ ಸ್ವೀಕರಿಸಿದರು. ಭಾರತವಾಣಿ ಬಹುಭಾಷಾ ಆನ್‌ಲೈನ್ ಕೋಶದಲ್ಲೂ ಈ ಪುಸ್ತಕಗಳು ಪ್ರಕಟವಾಗಲಿವೆ ಎಂದು ಬೇಳೂರು ಸುದರ್ಶನ ತಿಳಿಸಿದ್ದಾರೆ.
ಸಭೆಯಲ್ಲಿ ಪುಸ್ತಕಗಳ ಅಕ್ಷರ ಜೋಡಣೆ ಮಾಡಿದವರು, ಮುಖಚಿತ್ರ ರಚಿಸಿದ ಕಲಾವಿದರು ಭಾಗವಹಿಸಿದ್ದರು.
ಈ ಸಂಗ್ರಹದಲ್ಲಿ ಇದ್ದ ಒಂದು ಗೀತೆಯನ್ನೇ ಕಾರ್ಯಕ್ರಮದ ಸ್ವಾಗತಗೀತೆಯಾಗಿ (ಗಾಯಕ: ನನ್ನ ಮಿತ್ರ, ಕಲಾಶಿಕ್ಷಕ ಶ್ರೀ ಟಿ ಲಕ್ಷ್ಮೀನಾರಾಯಣ) ಹಾಡಲಾಯಿತು. ಅದನ್ನು ಇಲ್ಲಿ ಕೇಳಬಹುದು:
ಈಗ ಈ ಪುಸ್ತಕಗಳು ಇಲ್ಲಿ ಸಿಗುತ್ತವೆ: https://bit.ly/3hTZO1r