“ಮೂರ್ಖರನ್ನು ಅವರಿಗಿದ್ದ ಸ್ವಾತಂತ್ರ್ಯದಿಂದ ಬೇರ್ಪಡಿಸಿದ , ಕಂಪ್ಯೂಟರನ್ನು ತಣ್ಣನೆಯ ಬಂದೀಖಾನೆಯಾಗಿ ಮಾಡಿದ, ಮುಂಚೂಣಿ ನಾಯಕ ಸ್ಟೀವ್ ಜಾಬ್ಸ್ ತೀರಿಕೊಂಡಿದ್ದಾರೆ. ಭ್ರಷ್ಟ ಮೇಯರ್ ಡೇಲಿ ತೀರಿಕೊಂಡಾಗ, ಶಿಕಾಗೋದ ಮೇಯರ್ ಹೆರಾಲ್ಡ್ ವಾಶಿಂಗ್ಟನ್ `ಅವರು ತೀರಿಕೊಂಡಿದ್ದಾರೆ ಎಂದು ನನಗೆ ಸಂತಸವಾಗಿಲ್ಲ; ಆದರೆ ಆತ ಇಲ್ಲ ಎಂಬ ಸುದ್ದಿಯಿಂದ ಸಂತಸವಾಗಿದೆ’ ಎಂದಿದ್ದರು. ನಿಜ ಸಾವು ಯಾರಿಗೂ ಬರಬಾರದು. ಅದರಲ್ಲೂ ಸ್ಟೀವ್ ಜಾಬ್ಸ್‌ಗೆ, ಅಥವಾ ಬಿಲ್ ಗೇಟ್ಸ್‌ಗೆ…. ಅವರಿರಲಿ, ಅವರಿಗಿಂತ ದೊಡ್ಡ ದುಷ್ಟಶಕ್ತಿಗಳಿಗೂ ಸಾವು ಬರಬಾರದು. ಆದರೆ ಜಾಬ್ಸ್ ಜನರ ಕಂಪ್ಯೂಟಿಂಗ್ ಕಾರ್ಯದ ಮೇಲೆ ಹೊಂದಿದ್ದ ಅಪಾಯಕಾರಿ ಪ್ರಭಾವವು ಕೊನೆಗೊಳ್ಳಬೇಕು; ಅಂಥ ಕಾಲಕ್ಕೆ ನಾವೆಲ್ಲ ಅರ್ಹರು.
“ದುರದೃಷ್ಟವಶಾತ್, ಈ ಪ್ರಭಾವವು ಅವರ ಗೈರಿನಲ್ಲಿಯೂ ಮುಂದುವರೆಯಲಿದೆ. ಅವರ ವಾರಸುದಾರರು, ಅವರ ಲೆಗಸಿಯನ್ನು ಮುಂದುವರೆಸುವುದಕ್ಕೆ ಯತ್ನಿಸುತ್ತಿರುವಂತೆಯೂ, ಅವರ ಪ್ರಭಾವ ಕಡಿಮೆಯಾಗಲಿ ಎಂದು ನಾವು ನಿರೀಕ್ಷೆ ಇಟ್ಟುಕೊಳ್ಳಬಹುದು.”
ಸ್ಟೀವ್ ಜಾಬ್ಸ್ ನಿಧನದ ಬಗ್ಗೆ ಇದು ಫ್ರೀ ಸಾಫ್ಟ್‌ವೇರ್ ಚಳವಳಿಯ ಸ್ಥಾಪಕ ರಿಚರ್ಡ್ ಸ್ಟಾಲ್‌ಮನ್ ನೀಡಿದ ಪ್ರತಿಕ್ರಿಯೆ ಇದು.
ಸ್ಟೀವ್ ಜಾಬ್ಸ್ ನಿಧನದ ಬಗ್ಗೆ ಇದಕ್ಕಿಂತ ಕಟುವಾದ ಪ್ರತಿಕ್ರಿಯೆ ಬೇಕೆ?
ಸ್ಟೀವ್ ಜಾಬ್ಸ್. ಕಂಪ್ಯೂಟರ್ ಕ್ರಾಂತಿಯುಗದ ಪ್ರಮುಖ ರೂವಾರಿ. ಆಪಲ್ ಸಂಸ್ಥೆಯ ಸ್ಥಾಪಕರು. ಸದ್ಯ ಜಗತ್ತಿನ ಎಲ್ಲ ಪತ್ರಿಕೆಗಳಲ್ಲಿ ಮುಖಪುಟದ ಸುದ್ದಿಯಾದ ಕಣ್ಮಣಿ. ಅವರ ಸಾಧನೆಗಳನ್ನು ಕೊಂಡಾಡದೆ ಇರುವವರಾರು? ಅವರು ಕಂಪ್ಯೂಟರ್ ಯುಗದ ಥಾಮಸ್ ಆಲ್ವ ಎಡಿಸನ್ ಎಂದ ಪತ್ರಕರ್ತರೂ ಇದ್ದಾರೆ. ಕನ್ನಡ ಪತ್ರಿಕೆಗಳಿಂದ ಹಿಡಿದು ವಿಶ್ವದ ಎಲ್ಲ ಪತ್ರಿಕೆಗಳಲ್ಲೂ ಸ್ಟೀವ್ ಜಾಬ್ಸ್ ನಿಧನಕ್ಕಾಗಿ ಕಂಬನಿ ಮಿಡಿಯಲಾಗಿದೆ. ನಾನೂ ಆ ದಿನ ಅವರ ಭಾಷಣವೊಂದನ್ನು ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ. ಕ್ಯಾನ್ಸರಿಗೆ ಬಲಿಯಾದ ಹಲವು ಪ್ರತಿಭಾವಂತ ಜೀವಿಗಳಲ್ಲಿ ಅವರೂ ಒಬ್ಬರಾಗಿಬಿಟ್ಟರು. ಅದೆಲ್ಲ ಸರಿ. ಆದರೆ ಸ್ಟೀವ್ ಜಾಬ್ಸ್ ಮನುಕುಲಕ್ಕೆ ಬಿಟ್ಟುಹೋಗಿದ್ದೇನು? ಒಂದು ಜಗದ್ವಿಖ್ಯಾತ ಕಂಪೆನಿಯೆ? ಅಥವಾ ರೆವಿನ್ಯೂ ಮಾಡೆಲಿಗಾಗಿ ಇಡೀ ಜಗತ್ತನ್ನೇ ಮುಷ್ಟಿಯಲ್ಲಿ ಇಟ್ಟುಕೊಳ್ಳಬಯಸುವ ಪ್ರೊಪ್ರೈಟರಿ ತಂತ್ರಾಂಶ ಮತ್ತು ಯಂತ್ರಾಂಶದ ಬಿಗಿಬಂಧವೆ? ಸ್ಟೀವ್ ಜಾಬ್ಸ್ ಕುರಿತ ಹೊಗಳಿಕೆಗಳನ್ನೂ ಅಲ್ಲಗಳೆಯದೆ ಅವರು ಬಿಟ್ಟುಹೋದ ಈ ‘ಲೆಗಸಿ’ಯ ಚರ್ಚೆ ಆಗದೆ ಇದ್ದರೆ ವಸ್ತುನಿಷ್ಠತೆಗೆ ಧಕ್ಕೆ ಒದಗದೆ?
ಕಳೆದ ಆಗಸ್ಟಿನಲ್ಲಿ ಸ್ಟೀವ್ ಜಾಬ್ಸ್ ಆಪಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಹುದ್ದೆಗೆ ರಾಜೀನಾಮೆ ನೀಡಿದಾಗಲೇ ಮಾಧ್ಯಮಗಳು ಭಾರೀ ಗಾತ್ರದ ಲೇಖನಗಳನ್ನು ಪ್ರಕಟಿಸಿದವು. ಮುಕ್ತ ತಂತ್ರಾಂಶದ ಬಗ್ಗೆ ಕೆಲ ವರ್ಷಗಳಿಂದ ತಲೆ ಕೆಡಿಸಿಕೊಂಡು ಓದುತ್ತಿದ್ದ ನಾನು ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್‌ರಂಥವರು ತಮ್ಮ ಘನ ಸಂಸ್ಥೆಗಳಿಂದ ಮುಕ್ತ ತಂತ್ರಾಂಶದ ಚಳವಳಿಗೆ ಹೇಗೆ ಕೊಡುಗೆ ಕೊಡುತ್ತಾರೆ ಎಂದೆಲ್ಲ ಗಮನಿಸುತ್ತ ಬಂದಿದ್ದೆ. ಫ್ರೀ ಸಾಫ್ಟ್‌ವೇರ್ ಚಳವಳಿಯ ಜನಕ ರಿಚರ್ಡ್ ಸ್ಟಾಲ್‌ಮನ್‌ರನ್ನು ಒಂಬತ್ತು ವರ್ಷದ ಹಿಂದೆಯೇ (ಈ ಮೈಲ್) ಸಂದರ್ಶಿಸಿದ್ದೆ. ಕೊನೆಗೆ ಜಿಪಿಎಲ್ ೩ರ ಸಮಾವೇಶಕ್ಕೆ ಸ್ಟಾಲ್‌ಮನ್ ಬಂದಾಗ ಅವರ ಕಾರ್ಯಾಗಾರದಲ್ಲಿ ಎರಡು ದಿನ ಕಳೆದೆ. ಅವರು ಯಾರ ಜೊತೆಗಾದರೂ ಮಾತನಾಡುತ್ತಿದ್ದರೆ ಅದನ್ನೆಲ್ಲ ಕೇಳಿಸಿಕೊಂಡೆ. ಅರ್ಥ ಆಗಲಿ, ಬಿಡಲಿ, ಈ ಮುಕ್ತ ಮತ್ತು ಫ್ರೀ ತಂತ್ರಾಂಶ ಚಳವಳಿಯು ಜನರ ಒಳಿತಿಗಾಗೇ ಇದೆ ಎಂಬುದನ್ನು ಅರಿತು ಕೊನೆಗೆ ‘ಸುಧಾ’ದಲ್ಲಿ ಫ್ರಿ ಸಾಫ್ಟ್‌ವೇರ್ ಚಳವಳಿ ಬಗ್ಗೆ ಲೇಖನವನ್ನೂ ಬರೆದೆ. ಇದೆಲ್ಲ ಹಿನ್ನೆಲೆಯಲ್ಲಿ ಮುಕ್ತ ತಂತ್ರಾಂಶ ಹಾಗೂ ಸ್ಟೀವ್ ಜಾಬ್ಸ್ ಕುರಿತ ನನ್ನದೇ ವಿಶ್ಲೇಷಣೆಯನ್ನು ಮಾಡುತ್ತಿದ್ದ ಹೊತ್ತಿಗೇ ಜಾಬ್ಸ್ ಅಕಾಲಿಕವಾಗಿ ತೀರಿಕೊಂಡರು. ಅವರ ಸೃಜನಶೀಲ ಮನಸ್ಸಿಗೆ, ಕ್ರಿಯಾಶಕ್ತಿಗೆ ನಮಿಸುತ್ತಲೇ ಅವರು ಬಿಟ್ಟುಹೋದ ಪ್ರೊಪ್ರೈಟರಿ ಲೆಗಸಿಯನ್ನು ಪ್ರಶ್ನಿಸುವ ಅಧಿಕಪ್ರಸಂಗಿತನ ತೋರುತ್ತಿರುವೆ, ಮನ್ನಿಸಿ. ಅದಕ್ಕೇ ನಾನು ಸ್ಟಾಲ್‌ಮನ್‌ರವರು ಜಾಬ್ಸ್ ಬಗ್ಗೆ ಏನು ಹೇಳುತ್ತಾರೆ ಎಂದು ಕಾಯುತ್ತಿದ್ದೆ. ಅವರ ಹೇಳಿಕೆಯನ್ನೇ ಮೊದಲು ಕೊಟ್ಟಿರುವುದು ಈ ಕಾರಣಕ್ಕೇ.
ಐ ಫೋನ್ ಇರಲಿ, ಐ ಪ್ಯಾಡ್ ಇರಲಿ, – ಸ್ಟೀವ್ ಜಾಬ್ಸ್ ಎಲ್ಲ ಸಾಧನಗಳಲ್ಲೂ ತಂತ್ರಾಂಶ (ಸಾಫ್ಟ್‌ವೇರ್) ಮತ್ತು ಯಂತ್ರಾಂಶ (ಹಾರ್ಡ್‌ವೇರ್) – ಎರಡರಲ್ಲೂ ತನ್ನ / ಸಂಸ್ಥೆಯ ಖಾಸಗಿ ಒಡೆತನದ ಪೇಟೆಂಟ್‌ಗಳ ಬಿಗಿಹಿಡಿತ ಸಾಧಿಸಿದ ಸ್ಟೀವ್ ಜಾಬ್ಸ್ ಒಮ್ಮೆ (ವಿಶೇಷವಾಗಿ ಮ್ಯಾಕ್ ಓ ಎಸ್ ಎಕ್ಸ್) ಮುಕ್ತ ತಂತ್ರಾಂಶವನ್ನೂ ಬಳಸಲು ಯತ್ನಿಸಿದ್ದರು ಎನ್ನುವುದು ವಾಸ್ತವ. ಒಮ್ಮೆ ಅವರ ತಂತ್ರಾಂಶವು ತನ್ನದೇ ನಿಯಂತ್ರಣದ ಸಮುದಾಯ ಬೆಂಬಲಿತ ಮುಕ್ತ ತಂತ್ರಾಂಶದ ಥರ ಕಾಣಿಸಿದ್ದೂ ಇದೆ.
ನಿದರ್ಶನ ೧
ತನ್ನ ಸಾಧನಗಳನ್ನು ಅನಧಿಕೃತ ಬಳಕೆದಾರನು ಬಳಸುತ್ತಿದ್ದರೆ, ಅದನ್ನು ಪತ್ತೆ ಹಚ್ಚಲೆಂದು ಆಪಲ್ ಸಂಸ್ಥೆಯು ಒಂದು ಪೇಟೆಂಟ್ ಪಡೆದಿದೆ. ಆ ಪ್ರಕಾರ, ಅನಧಿಕೃತ ಬಳಕೆದಾರ ಎಂದು ಅನುಮಾನ ಬಂದಕೂಡಲೆ (ಈ ಅನುಮಾನ ಹೇಗೆ ಬರುತ್ತದೆ? ಇಂಟರ್‌ನೆಟ್ ಮೂಲಕ ಆಪಲ್ ಸಂಸ್ಥೆಯು ಮೂಲ ಬಳಕೆದಾರನ ಹೆಸರನ್ನು ಮಾತ್ರ ಅಧಿಕೃತ ಎಂದು ಪರಿಗಣಿಸಿ, ಬೇರೆ ಹೆಸರುಗಳ ಬಳಕೆ ಆದರೆ ಅನಧಿಕೃತ ಬಳಕೆದಾರ ಎಂದು ಶಂಕಿಸಲು ಆರಂಭಿಸುತ್ತದೆ!) ಬಳಕೆದಾರನ/ಳ ಚಿತ್ರವನ್ನು ಮತ್ತು ಸುತ್ತಮುತ್ತಲ ದೃಶ್ಯಗಳನ್ನು ಆ ಸಾಧನವು ಕ್ಲಿಕ್ ಎಂದ ಸದ್ದೂ ಬರದೆ ತೆಗೆದುಕೊಳ್ಳುತ್ತದೆ. ಅಂಥ ಬಳಕೆದಾರನ/ಳ ಧ್ವನಿಯನ್ನೂ ಸಂಗ್ರಹಿಸಿ, ಅವನ / ಳ ನಾಡಿಬಡಿತವನ್ನೂ ದಾಖಲಿಸಿಕೊಳ್ಳುತ್ತದೆ. ಅಲ್ಲದೆ ಈ ಶಂಕಾಸ್ಪದ ಬಳಕೆದಾರನ/ಳ ಇಂಟರ್‌ನೆಟ್ ಚಟುವಟಿಕೆಗಳೆಲ್ಲವನ್ನೂ ದಾಖಲಿಸಿಕೊಳ್ಳುತ್ತದೆ.
ಅಂದರೆ ಅನಧಿಕೃತ ಬಳಕೆದಾರ ಎಂಬುದಾಗಿ ಶಂಕಿಸಿದಾಗ ನಿಮ್ಮ ಹೃದಯಡ ಬಡಿತದಿಂದ ಹಿಡಿದು ನಿಮ್ಮ ಎಲ್ಲ ಜಾತಕವನ್ನೂ ಅದು ದಾಖಲಿಸಿಕೊಳ್ಳುವಂಥ ಹಕ್ಕನ್ನು ಈ ಪೇಟೆಂಟಿನಿಂದ ಪಡೆದಿದೆ.
ಈ ಪೇಟೆಂಟ್ `ಟ್ರೈಟರ್‌ವೇರ್’ ಎಂದು ಯೂರೋಪಿನ ಎಲೆಕ್ಟ್ರಾನಿಕ್ ಫ್ರಾಂಟೈರ್ ಸಂಘಟನೆ ಕರೆದಿದೆ.
ನಿದರ್ಶನ ೨
ತನ್ನ ಹಲವು ಪ್ರೊಪ್ರೈಟರಿ ತಂತ್ರಾಂಶಗಳಲ್ಲಿ ಮುಕ್ತ ತಂತ್ರಾಂಶಗಳನ್ನು ಯಾವ ನಾಚಿಕೆಯೂ ಇಲ್ಲದೆ ಬಳಸಿಕೊಂಡ ಆಪಲ್ ಸಂಸ್ಥೆಗೆ ಥ್ಯಾಂಕ್ಸ್ ಹೇಳಬೇಕೆ? – ಹೀಗೆಂದು ಲೇಖಕ ಅಲೆನ್ ಶಿಮೆಲ್ ಪ್ರಶ್ನಿಸುತ್ತಾರೆ. ಅವರ ಪ್ರಕಾರ ಮಾರಿಯೋ ಪೂಜೋನ ಗಾಡ್‌ಫಾದರ್ ಮತ್ತು ಐಪಾಡ್‌ಫಾದರ್ ಒಬ್ಬರೇ. ಅವರ ವಿನಂತಿಯನ್ನು ನೀವು ತಿರಸ್ಕರಿಸಲಾರಿರಿ!!
`ಆಪಲ್‌ನ ಈ ತಂತ್ರದಿಂದ ಮುಕ್ತ ತಂತ್ರಾಂಶದ ಸ್ಪರ್ಧೆಯ ಮಟ್ಟ ಹೆಚ್ಚಾಯಿತು’ ಆಪಲ್‌ಗೇ ಮುಕ್ತ ತಂತ್ರಾಂಶವಾದಿಗಳು ಥ್ಯಾಂಕ್ಸ್ ಹೇಳಬೇಕು’ ಎಂಬ ಡಿ ಜೆ ವಾಕರ್ ಮೋರ್ಗನ್ ವಾದವನ್ನು ಖಂಡಿಸುವ ಅಲೆನ್ `ಹಾಗೆ ಮಾಡಿದರೆ ಪೊಲೀಸರು ಮಾಫಿಯಾಗೆ ಥ್ಯಾಂಕ್ಸ್ ಹೇಳಿದಂತೆ’ ಎಂದು ಖಾರವಾಗಿಯೇ ಉತ್ತರಿಸಿದ್ದಾರೆ.
ನಿದರ್ಶನ ೩
ತೀರಾ ಇತ್ತೀಚೆಗೆ, ಸ್ಲೇಟ್ ಗಣಕದ ಕಾಲ ಆರಂಭವಾದಾಗ, ಸ್ಟೀವ್ ಜಾಬ್ಸ್‌ರವರು ಗೂಗಲ್‌ನ ಆಂಡ್ರಾಯ್ಡ್ ಮುಕ್ತ ಆಪರೇಟಿಂಗ್ ತಂತ್ರಾಂಶವನ್ನು ಕಟುವಾಗಿ ಟೀಕಿಸಿದ್ದರು. ಅದು ಕೇವಲ ಸ್ಪರ್ಧೆಯ ವಿಷಯ ಎಂಬಂತೆ ಸ್ಟೀವ್ ಭಾವಿಸಿದ್ದು ಸರಿ ಅನ್ನಿಸುವುದಿಲ್ಲ. ಮುಕ್ತ ಫ್ಲಾಟ್‌ಫಾರಂಗಳು ಯಾವಾಗಲೂ ಗೆದ್ದೇಬಿಡುತ್ತವೆ ಎಂದೇನಿಲ್ಲ ಎಂದ ಸ್ಟೀವ್ ಜಾಬ್ಸ್ ಮುಕ್ತ ತಂತ್ರಾಂಶಕ್ಕಾಗಿ ಬೇರೆ ತಂತ್ರಾಂಶಗಳನ್ನು ರೂಪಿಸುವುದು ಕಷ್ಟ ಕೆಲಸ ಎಂದು ಟೀಕಿಸಿದರು.
ನಿಜ. ಮುಕ್ತ ತಂತ್ರಾಂಶವೆಂದರೆ ಸಾಮೂಹಿಕ ಹೊಣೆಗಾರಿಕೆ. ಆದ್ದರಿಂದ ಎಷ್ಟೋ ಸಲ ಈ ಸಾಮೂಹಿಕ ಹೊಣೆಗಾರಿಕೆಯಿಂದ ಕಾಲಬದ್ಧ ಹಾಗೂ ಗ್ರಾಹಕಸ್ನೇಹಿ ಉತ್ಪನ್ನ ಸಿಗಲಾರದು. ಆದರೆ ಅದಕ್ಕಾಗಿ ಸಾಮೂಹಿಕ ಹೊಣೆಗಾರಿಕೆಯನ್ನೇ ಜರೆಯುವುದು ಸರಿಯಲ್ಲ. ಆಪಲ್‌ನದು ಚಕ್ರಾಧಿಪತ್ಯದ ಆಡಳಿತ; ಸಾಮೂಹಿಕ ಹೊಣೆಗಾರಿಕೆ ಅದಕ್ಕೆ ಹೇಳಿ ಮಾಡಿದಸಿದ್ದಲ್ಲ. ಆಂಡ್ರಾಯ್ಡ್ ಯಶಸ್ಸನ್ನು ಟೀಕಿಸುವ ಭರದಲ್ಲಿ ಮುಕ್ತ ತಂತ್ರಾಂಶಗಳೇ ಕೆಟ್ಟವು ಎಂದು ಸ್ಟೀವ್ ಜಾಬ್ಸ್ ಟೀಕಿಸುವುದು ಸಮುದಾಯ ಚಳವಳಿಗೆ ತೋರುವ ಅಗೌರವ.
ನಿದರ್ಶನ ೪
ಮುಕ್ತ ತಂತ್ರಾಂಶದ ಮಾತಿರಲಿ, ಇನ್ನೊಂದು ಪ್ರೊಪ್ರೈಟರಿ ತಂತ್ರಾಂಶದ ಬುಡಕ್ಕೇ ಕೊಡಲಿ ಏಟು ಬೀಸಲು ಯತ್ನಿಸಿದ ಅಪಖ್ಯಾತಿಯೂ ಸ್ಟೀವ್‌ರ ಮೇಲಿದೆ. ಕಳೆದ ವರ್ಷ ಐ ಪ್ಯಾಡ್ ಮತ್ತು ಐಫೋನ್‌ಗಳಲ್ಲಿ ಫ್ಲಾಶ್ ತಂತ್ರಾಂಶವನ್ನು ನೀಡುವುದಿಲ್ಲ ಎಂದು ಸ್ಟೀವ್ ನಿರ್ಧರಿಸಿದ ಬಗ್ಗೆ ಭಾರೀ ಕೋಲಾಹಲವೇ ಉಂಟಾಗಿತ್ತು. ಅಡೋಬೆ ಸಂಸ್ಥೆಯ ಈ ತಂತ್ರಾಂಶವನ್ನು ಬಳಸಲಾರೆ ಎಂದಿದ್ದಕ್ಕೆ ಹಲವು ಗ್ರಾಫಿಕ್ ಕಲಾವಿದರು ಆಕ್ರೋಶ ವ್ಯಕ್ತಪಡಿಸಿ ಪತ್ರ ಬರೆದಿದ್ದರು.
ಈ ವಿಷಯಕ್ಕೆ ಬಂದಾಗ ಫ್ಲಾಶ್ ನೂರಕ್ಕೆ ನೂರು ಪ್ರತಿಶತ ಪ್ರೊಪ್ರೈಟರಿ ತಂತ್ರಾಂಶ ಎಂದು ಸ್ಟೀವ್ ಜಾಬ್ಸ್ ತನ್ನದೇ ಜಾಲತಾಣದಲ್ಲಿ ವಾದಿಸಿದ್ದು ಇನ್ನೂ ವಿಚಿತ್ರ ಮತ್ತು ವಿಪರ್‍ಯಾಸ. ಫ್ಲಾಶ್‌ನ್ನು ಯಾಕೆ ಬಳಸಲಾಗದು ಎಂದು ಅದು ತಾಂತ್ರಿಕವಾಗಿ ಕೊಟ್ಟ ವಿವರಣೆ ಏನೇ ಇರಲಿ, ಇಲ್ಲಿ ಮುಕ್ತ ತಂತ್ರಾಂಶವಲ್ಲ ಎಂದು ಫ್ಲಾಶ್‌ನ್ನು ಜರೆಯುವುದು, ಮತ್ತು ಅದರ ಬದಲಿಗೆ ತನ್ನದೇ ತಂತ್ರಾಂಶವನ್ನು ನೀಡುವುದು – ಇದೆಲ್ಲ ಸ್ಟೀವ್ ಜಾಬ್ಸ್‌ರ ಮಾರುಕಟ್ಟೆ ತಂತ್ರವಾಯಿತೇ ಹೊರತು ಸಮುದಾಯಕ್ಕೆ ಯಾವ ಗಮನಾರ್ಹ ಲಾಭವನ್ನೂ ತಂದುಕೊಡಲಿಲ್ಲ.
ಯಂತ್ರಾಂಶದ ವಿನ್ಯಾಸದಲ್ಲೇ ಗೆದ್ದ ಜಾಬ್ಸ್
ಹಾಗೆ ನೋಡಿದರೆ, ಸ್ಟೀವ್ ಜಾಬ್ಸ್ ಗೆದ್ದಿದ್ದು ತನ್ನ ಸಾಧನಗಳ ವಿನ್ಯಾಸದಲ್ಲಿ. ಅವರು ರೂಪಿಸಿದ ಎಲ್ಲ ಸಾಧನಗಳೂ ಒಂದಿಲ್ಲೊಂದು ಬಗೆಯಲ್ಲಿ ವಿಶಿಷ್ಟವಾದವೇ. ಅವರ ಸಾಧನಗಳ ಪವರ್ ಅಡಾಪ್ಟರಿನಿಂದ ಹಿಡಿದು ಎಲ್ಲವೂ ಆಪಲ್‌ಗಾಗಿಯೇ ರೂಪಿಸಿದ್ದು. ಅದಕ್ಕಾಗಿ ಸ್ಟೀವ್ ಹಲವು ಪೇಟೆಂಟ್‌ಗಳನ್ನು ಪಡೆದಿದ್ದಾರೆ.
ಪೇಟೆಂಟ್ ಬೇಕೆ?
ಹಾಗಾದರೆ ಸಂಶೋಧನೆಗಳಿಗೆ ಪೇಟೆಂಟ್ ಬೇಡವೆ? ವಿಶಿಷ್ಟ ಸಾಧನೆಗಳಿಗೆ ಪೇಟೆಂಟ್ ಬೇಡವೆ? ಯಾರೂ ಮಾಡದ ಚಿಂತನೆಗಳಿಗೆ ಹಕ್ಕುಸ್ವಾಮ್ಯ ಬೇಡವೆ? ಈ ಪ್ರಶ್ನೆಗಳು ಸಹಜ. ಇಂಥ ಹಕ್ಕುಸ್ವಾಮ್ಯದ ಪ್ರಶ್ನೆಗಳಿಗೆ ಉತ್ತರಿಸಲೆಂದೇ ಕಂಪ್ಯೂಟರ್ ಜಗತ್ತಿನಲ್ಲಿ ಜನರಲ್ ಪಬ್ಲಿಕ್ ಲೈಸೆನ್ಸ್, ಕ್ರಿಯೇಟಿವ್ ಕಾಮನ್ ಲೈಸೆನ್ಸ್ ಮುಂತಾದ ಪರಿಕಲ್ಪನೆಗಳು ಹುಟ್ಟಿ ಸಾಕಾರಗೊಂಡಿವೆ; ಬಹಳಷ್ಟು ಪ್ರಮಾಣಧಲ್ಲಿ ಬಳಕೆಯಾಗುತ್ತಿವೆ. ಆದರೆ ಪೇಟೆಂಟ್ ವಿಚಾರದಲ್ಲಿ ಹಾಗಾಗಿಲ್ಲ. ಅದರಲ್ಲೂ ಯಂತ್ರಾಂಶಗಳ ವಿಚಾರದಲ್ಲಿ ಪೇಟೆಂಟ್ ಬಿಗಿಮುಷ್ಟಿ ಇದ್ದೇ ಇದೆ. ಮುಕ್ತ ಪೇಟೆಂಟ್ ಎಂಬುದು ಒಂದು ದೂರದ ಕನಸು.
ಆದರೆ ಯೋಚಿಸಿ, ಒಂದು ವೇಳೆ ರೇಡಿಯೋದ ಸಂಶೋಧಕ, ಭಾರತೀಯ ಜಗದೀಶ ಚಂದ್ರ ಬೋಸ್ ತಮ್ಮ ಸಂಶೋಧನೆಗಾಗಿ ಪೇಟೆಂಟ್ ಪಡೆದಿದ್ದರೆ? ಆಗ ಅವರು ಹೇಳಿದ್ದೇನು ಗೊತ್ತೆ?
A short time before my lecture, a multi-millionaire proprietor of a very famous telegraph company telegraphed me with an urgent request to meet me. I replied that I had no time. In response he said that he is coming to meet me in person and within a short time he himself arrived with patent forms in hand. He made an earnest request to me not to divulge all valuable research results in today’s lecture : “There is money in it — let me take out patent for you. You donot know what money you are throwing away” etc. Of course, ” I will only take half share in the profit — I will finance it” etc.
This multi-millionaire has come to me like a beggar for making some more profits. Friend, you would have seen the greed and hankering after money in this country, – money, money – what a terrible all pervasive greed ! If I once get sucked into this terrible trap, there wont’ be any escape ! See, the research that I have been dedicated to doing, is above commercial profits. I am getting older – I am not getting enough time to do what I had set out to do — I refused him.
ಇಷ್ಟೇ ಅಲ್ಲ, ಈಗ ಮೊಬೈಲಿನಲ್ಲಿ ಬಳಕೆಯಾಗುವ ಮೈಕ್ರೋವೇವ್‌ಗಳನ್ನು ೧೯೦೩ರಲ್ಲೇ ಗುರುತಿಸಿದವರೂ ಜಗದೀಶ ಚಂದ್ರ ಬೋಸರೇ. ಅಕಸ್ಮಾತ್ ಅದಕ್ಕೂ ಅವರು ಹಣ ಗಳಿಸುವ ಹಾದಿಗೆ ಬಿದ್ದಿದ್ದರೆ ಏನಾಗುತ್ತಿತ್ತು ಯೋಚಿಸಿ.
ಇಲ್ಲಿ ನಾನು ಹೇಳಬೇಕಿದ್ದ ವಿಷಯ ಇಷ್ಟೆ: ಮೂಲ ಸಂಶೋಧನೆಗೇ ಪೇಟೆಂಟ್ ಕೇಳದ ಮಹಾನ್ ಚೇತನಗಳೂ ಈ ಜಗತ್ತಿನಲ್ಲಿ ಇವೆ. ಅಂಥ ಮೂಲ ಸಂಶೋಧಕರ ಸಾಲಿಗೇನೂ ಸ್ಟೀವ್ ಸೇರುವುದಿಲ್ಲ. ಯಾಕೆಂದರೆ ಅವರು ಮಾಡಿದ ಬಹುತೇಕ ಸಾಧನೆಗಳು ಒಂದು ತಂಡದ, ಅಥವಾ ಸಮುದಾಯದ (ಮುಕ್ತ ತಂತ್ರಾಂಶ) ಆವಿಷ್ಕಾರಗಳನ್ನು ಅವಲಂಬಿಸಿಯೇ ಇದ್ದವು. ಹೆಚ್ಚೆಂದರೆ ವಿನ್ಯಾಸದಲ್ಲಿ ಮತ್ತು ನಿರೂಪಣೆಯಲ್ಲಿ ಅವರು ವಿಭಿನ್ನ ಮಾರ್ಗ ಹಿಡಿದಿದ್ದರು ಎನ್ನಬಹುದು. ಥಾಮಸ್ ಆಲ್ವ ಎಡಿಸನ್‌ಗೆ ಹೋಲಿಸುವುದು ಎಂದರೆ ಅಧಿಕ ಪ್ರಸಂಗಿತನವಲ್ಲವೆ? ನೂರಾರು ಪೇಟೆಂಟ್‌ಗಳನ್ನು ಹೊಂದಿದ್ದ ಎಡಿಸನ್‌ನ ಹತ್ತು ಹಲವು ಸಂಶೋಧನೆಗಳು ಬದುಕಿಗೆ ಅತ್ಯಗತ್ಯವಾಗಿ ಬೇಕಾದವೇ ಹೊರತು ಐಷಾರಾಮಿ, ಲೋಲುಪ, ಕೊಳ್ಳುಬಾಕ ಸಂಸ್ಕೃತಿಯ ಅಗತ್ಯಗಳಾಗಿರಲಿಲ್ಲ.
ಇಷ್ಟಕ್ಕೂ ಆಪಲ್ ಉತ್ಪನ್ನಗಳ ಗಿರಾಕಿಗಳು ಯಾರು? ಮೇಲ್ವರ್ಗದ, ಯಾವಾಗಲೂ ವಿಶೇಷವನ್ನೇ ಬಯಸುವ ಗ್ರಾಹಕರು. ಕೊಳ್ಳುವ ಸಾಮರ್ಥ್ಯ ಇರುವವರು. ನಮ್ಮ ಕರ್ನಾಟಕದಲ್ಲೇ, ಬೆಂಗಳೂರಿನ ಕೆಲವರನ್ನು ಬಿಟ್ಟರೆ ಆಪಲ್‌ನ ಗ್ರಾಹಕರು ಎಷ್ಟು ಜನ ಇದ್ದಾರೆ?
ಸ್ಟೀವ್ ಜಾಬ್ಸ್ ಹುಟ್ಟುಹಾಕಿದ್ದು ತನ್ನದೇ ಉತ್ಪನ್ನಗಳನ್ನು ಖರೀದಿಸಬೇಕೆನ್ನುವ ಗುಲಾಮೀ ಮಾನಸಿಕತೆಯ ಗ್ಯಾಜೆಟ್ ಪ್ರಿಯರನ್ನೇ ಹೊರತು, ರಾಜ್‌ಕುಮಾರ್ ಥರ ಸಮಸ್ತ ನಾಗರಿಕರ ಪ್ರೀತಿಯನ್ನಲ್ಲ. ನಿಜಕ್ಕೂ ಸ್ಟಾಲ್‌ಮನ್ ಹೇಳಿದಂತೆ ಆಪಲ್ ಸೃಷ್ಟಿಸಿದ್ದು ಹಂಗಿನ ಅರಮನೆ. ಅಥವಾ ಬಂಗಾರದ ಸೆರೆಮನೆ. ಅದರಲ್ಲೇ ಕೂತು ನೀವು ಮೃಷ್ಟಾನ್ನ ಉಣ್ಣಬಹುದು. ಆದರೆ ಹೊರಗೆ ಬಂದರೆ ಮತ್ತೆ ಅದೇ ಹರಕಲು ಸಮಾಜ; ಅದೇ ಸಮುದಾಯ.
ಸ್ಟೀವ್ ಜಾಬ್ಸ್ ಕಂಡುಹಿಡಿದದ್ದೆಲ್ಲ ಯುವ ಪೀಳಿಗೆಯವರು ಏಕಾಗ್ರತೆಯನ್ನು ಕಳೆದುಕೊಳ್ಳುವ ಸಾಧನಗಳು ಎಂಬ ಟೀಕೆಯೂ ಕೇಳಿಬಂದಿದೆ. ಸದ್ಯಕ್ಕೆ ಈ ಟೀಕೆಯನ್ನು ಬದಿಗಿಡೋಣ. ಯುವ ಪೀಳಿಗೆ ಹಾಳಾಗುತ್ತಿದೆ ಎಂದು ಹಿರಿಯರಾದ ಕೂಡಲೇ ಹೇಳುವ ಪರಿಪಾಠ ಹಲವು ಪೀಳಿಗೆಗಳಿಂದ ನಡೆದುಕೊಂಡು ಬಂದಿದೆ!
ಸ್ಟೀವ್ ಜಾಬ್ಸ್ ಮಾಡುತ್ತಿರೋದು ಬ್ಯುಸಿನೆಸ್; ಆದ್ದರಿಂದ ಅವರು ಮಾಡಿದ್ದನ್ನೆಲ್ಲ ಟೀಕಿಸಲಾಗುತ್ತದೆಯೆ ಎಂಬ ಪ್ರಶ್ನೆಯೂ ಬರುತ್ತದೆ. ವ್ಯವಹಾರ ಮಾಡಲಿ; ಯಾರೂ ಬೇಡ ಎನ್ನುವುದಿಲ್ಲ. ಆದರೆ ತನ್ನ ವ್ಯವಹಾರ ಕುದುರಿಸಲು ಇನ್ನೊಂದು ನ್ಯಾಯಯುತ ವ್ಯವಹಾರವನ್ನು ಹಂಗಿಸುವುದು ಸರಿಯಲ್ಲ. ಸ್ಟೀವ್ ಜಾಬ್ಸ್ ತಮ್ಮ ಬದುಕಿನುದ್ದಕ್ಕೂ ಮುಕ್ತ ತಂತ್ರಾಂಶವನ್ನು ಆಧರಿಸಿ ಬೆಳೆದರು; ದುಡ್ಡು ಮಾಡಿದರು. ಆದರೆ ತನ್ನ ನಿಯಂತ್ರಣದಲ್ಲಿ ಲಕ್ಷಗಟ್ಟಳೆ ಗ್ರಾಹಕರು ಬಂದಾಗ ಮುಕ್ತ ತಂತ್ರಾಂಶದಲ್ಲಿ ತೊಡಕುಗಳಿವೆ ಎಂದು ತರಲೆ ತೆಗೆದರು. ಇದು ಸಮುದಾಯದ ಒಳಿತಿನ ಚಿಂತನೆ ಆಗಲಾರದು.
ಮುಂದೆ?
ಮುಕ್ತ ತಂತ್ರಾಂಶಗಳಲ್ಲೂ ಸಮಸ್ಯೆ ಆರಂಭವಾಗಿದೆ. ‘ತಂತ್ರಾಂಶ ಮುಕ್ತ, ಸೇವೆಗೆ ಕಾಸು’ ಎಂಬ ಸಿದ್ಧಾಂತಕ್ಕೆ ಬೆಲೆ ಬಂದಿದೆ. ರಿಚಡ್ ಸ್ಟಾಲ್‌ಮನ್ ಕೂಡಾ ತಮ್ಮ ಆಂದೋಳನವನ್ನು ಮತ್ತಷ್ಟು ತೀವ್ರಗೊಳಿಸಲಾಗುತ್ತಿಲ್ಲ. ಇತ್ತ ಗೂಗಲ್‌ನಂಥ ಸಂಸ್ಥೆಗಳು ಮುಕ್ತ ತಂತ್ರಾಂಶವನ್ನೇ ಮುಂದೆ ಮಾಡಿಕೊಂಡು ಹೊಸ ಬಗೆಯ ರೆವಿನ್ಯೂ ಮಾಡೆಲ್‌ಗೆ ಕೈ ಹಾಕುತ್ತಿವೆ. ಈ ಸಂಕೀರ್ಣ ಪರಿಸ್ಥಿತಿಯಲ್ಲಿ ಏನೂ ಹೇಳಲಾಗದು. ಸ್ಟೀವ್ ಜಾಬ್ಸ್ ಒಬ್ಬರೇ ಹೀಗೆ ಪ್ರೊಪ್ರೈಟರಿ ಹಿಡಿತಕ್ಕೆ ಹೊರಟವರಲ್ಲ. ಅವರು ಕಂಪ್ಯೂಟರ್ ಯುಗದ ಮಹಾನ್ ಅವತಾರ ಎಂದು ಎಲ್ಲರೂ ಒಂದೇ ಧ್ವನಿಯಲ್ಲಿ ಬಣ್ಣಿಸಿದ್ದರಿಂದ ಇಷ್ಟೆಲ್ಲ ಹೇಳಬೇಕಾಯಿತು.
ಇದರ ಜೊತೆಗೆ ಮುಕ್ತ ತಂತ್ರಾಂಶ ಎಂದರೆ ಅದು ಎಡಪಂಥಕ್ಕೆ ಸೇರಿದ ಚಳವಳಿ ಎಂಬ ತಪ್ಪು ಕಲ್ಪನೆಯನ್ನು ಭಾರತದಲ್ಲಿ ಮೂಡಿಸಲಾಗುತ್ತಿದೆ. ಹೆಚ್ಚಾಗಿ ಕಮ್ಯುನಿಸ್ಟ್ ಚಿಂತನೆ ಇರುವವರೇ ಮುಕ್ತ ತಂತ್ರಾಂಶದ ಚಳವಳಿಗೆ ಸೇರಿಕೊಂಡಿದ್ದಾರೆ. ಕಂಪ್ಯೂಟರ್ ರಂಗದಲ್ಲಿ ಇಸಂಗಳನ್ನು ತರುವುದೇ ಒಂದು ವಿಲಕ್ಷಣ ಸಂಗತಿ.
ಇತ್ತ ಕೇಂದ್ರ ಸಚಿವ ಕಪಿಲ್ ಸಿಬಲ್ ಯೂನಿವರ್ಸಿಟಿ ವಿದ್ಯಾರ್ಥಿಗಳಿಗೆ ಅಗ್ಗದ ಸ್ಲೇಟ್ ಟ್ಯಾಬ್ಲೆಟ್ ಕೊಡಲು ಶುರು ಮಾಡಿದ್ದಾರೆ. ಅಗ್ಗದ ಬೆಲೆಯಲ್ಲಿ `ಆಕಾಶ’ ತೋರಿಸುತ್ತಿದ್ದಾರೆ.
ಆಂಡ್ರಾಯ್ಡ್ ಎಂಬುದು ಗೂಗಲ್ ಸಂಸ್ಥೆಯ ಮುಕ್ತ ತಂತ್ರಾಂಶವಾದರೂ ಅದರ ಮೇಲೆ ಹಲವಾರು ಬಳಕೆಸ್ನೇಹಿ ಅಪ್ಲಿಕೇಶನ್‌ಗಳನ್ನು ಸಮುದಾಯದ ಸದಸ್ಯರು ಬರೆಯುತ್ತಿದ್ದಾರೆ.
ಮುಂದಿನ ನಾಲ್ಕು ಪೀಳಿಗೆಯ ಉತ್ಪನ್ನಗಳು ಹೇಗಿರಬೇಕು ಎಂದು ಸ್ಟೀವ್ ಜಾಬ್ಸ್ ಅದಾಗಲೇ ಯೋಚನೆ ಮಾಡಿ ಬರೆದಿಟ್ಟು ಹೋಗಿದ್ದಾರೆ ಎಂಬ ಸುದ್ದಿ ಈ ಲೇಖನವನ್ನು ಮುಗಿಸುವ ಹೊತ್ತಿಗೆ ಬಂದಿದೆ.
ನಮ್ಮ ದೇಶದ ಸೇಬುಹಣ್ಣುಗಳಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಕೀಟನಾಶಕಗಳ ಪಸೆ ಇರುತ್ತದೆ ಎಂದು ಎಲ್ಲೋ ಓದಿದ ನೆನಪಾಗುತ್ತಿದೆ.
4 Comments
Pingback: ಸುದ್ದಿಮನೆ ಮುಖ್ಯಾಂಶಗಳು – 10 ಅ. « ಕಾಲಂ9 * column9 * Kannada media
nice analysis, thanks!
ಈ ಐಫೋನ್, ಈಪಾಡ್, ಇತ್ಯಾದಿ ಐ…ಗಳು ನಮ್ಮಂತಹವರಿಗೆ ಕೈಗೆಟುಕದ ಐಶಾರಾಮಿ ಗ್ಯಾಜೆಟ್ ಗಲೇ ಹೌದು. ಇರಲಿ, ಇವುಗಳ ಸೃಷ್ಟಿಕರ್ತನ ಅವಸಾನದ ಸಂದರ್ಭದಲ್ಲಿ ಆಗಿರುವ ಈ ವಿಶ್ಲೇಷಣೆಯು ಅಕಾರಣವೇನಲ್ಲ!!. ಎಲ್ಲರಿಗೂ ತಿಳಿದಿರದ ವಿಷಯಗಳನ್ನು ವಿಶ್ಲೇಷಣೆಯ ಮೂಲಕ ತಿಳಿಸಿದ್ದೀರಿ. ಧನ್ಯವಾದಗಳು.
Thank you. Very well said. I was trying to save a document on iPad we can not! Such restrictions on devices we buy is no progress.