ಸೆನ್ಸಾರ್ ಬೋರ್ಡ್ ಎಂದರೆ ಅಭಿವ್ಯಕ್ತಿ ಸ್ವಾತಂತ್ರ್‍ಯವನ್ನು ಬಲಿಹಾಕಲು ಇರುವ ಸಂಸ್ಥೆ ಎಂದೇ ಎಲ್ಲರ ಸಾಮಾನ್ಯ ಅಭಿಪ್ರಾಯ. ಮುಕ್ತ ಮುಕ್ತ ಸಮಾಜತಾಣಗಳು, ಬ್ಲಾಗುಗಳು ಇರುವ ಈ ಹೊತ್ತಿನಲ್ಲೂ ಸೆನ್ಸಾರ್ ಬೋರ್ಡ್ ಬೇಕೇ ಎಂಬ ಪ್ರಶ್ನೆ ಮೂಡುವುದೂ ಸಹಜವೇ. ಇವತ್ತಷ್ಟೆ ಕೇಂದ್ರೀಯ ಸೆನ್ಸಾರ್ ಮಂಡಳಿಯು ಸಿನೆಮಾಗಳಲ್ಲಿ ಬಳಸಬಾರದು ಎಂದು ಪಟ್ಟಿ ಮಾಡಿರುವ ಪದಗಳ ಪಟ್ಟಿ ಹೊರಬಿದ್ದಿದೆ. ಅಭಿವ್ಯಕ್ತಿ ಸ್ವಾತಂತ್ರ್‍ಯ ಎಂದು ಸಿಕ್ಕಾಪಟ್ಟೆ ಘೋಷಣೆ ಕೂಗುವವರು ಈ ನಡೆಯನ್ನು ವಾಚಾಮಗೋಚರ ತೆಗಳುತ್ತಿದ್ದಾರೆ. ಸೆನ್ಸಾರ್ ಬೋರ್ಡಿನ ಅಧ್ಯಕ್ಷ ಪಂಕಜ್ ನಿಹಲಾನಿಯವರು ನಮ್ಮ ಸಂಸ್ಕೃತಿ ರಕ್ಷಣೆಗೆ ಇದು ಅನಿವಾರ್ಯ ಎಂದಿದ್ದಾರೆ. ಯಾವುದು ಸರಿ?
ಪ್ರಾದೇಶಿಕ ಸೆನ್ಸಾರ್ ಬೋರ್ಡಿನಲ್ಲಿ ಎರಡು ವರ್ಷ ಸದಸ್ಯನಾಗಿ ಸಾಕಷ್ಟು ಸಿನೆಮಾಗಳನ್ನು ಕತ್ತರಿ ಪ್ರಯೋಗಕ್ಕೆ ಮುನ್ನವೇ ನೋಡಿ, ಕತ್ತರಿ ಪ್ರಯೋಗಗಳನ್ನೂ ಸೂಚಿಸಿದ ನನ್ನ ಅನುಭವದ ಪ್ರಕಾರ…
ನಮ್ಮ ದೇಶದ ಸಿನೆಮಾಗಳಿಗೆ ಕನಿಷ್ಠ ಇನ್ನೂ ಐವತ್ತು ವರ್ಷ ಸೆನ್ಸಾರ್ ಬೋರ್ಡ್ ಬೇಕು.
ನಾನು ನೋಡಿದ ಸಿನೆಮಾಗಳಲ್ಲಿ ಕಂಡಿದ್ದಿಷ್ಟು: ದಶಕಗಳ ಕಾಲ ಖಳನಟ, ನಾಯಕನಟನಾದ ವ್ಯಕ್ತಿಯಿಂದ ಹೀರೋಯಿನ್‌ನ ಸ್ತನಗಳನ್ನು ಅದುಮುವುದು, ಅಂಗವಿಕಲರನ್ನು ಹಿಗ್ಗಾಮುಗ್ಗಾ ಲೇವಡಿ ಮಾಡುವುದು, ಹಿಜಡಾಗಳಂದರಂತೂ ಕಾಡು ಪ್ರಾಣಿಗಳಂತೆ ಕಾಣುವುದು, ನಿಮಗೆ ಖಾಸಗಿಯಾಗಿಯೂ ಹೇಳಲಾಗದ ಡೈಲಾಗ್‌ಗಳನ್ನು ಬೇಕಾಬಿಟ್ಟಿಯಾಗಿ, ಎಲ್ಲೆಂದರಲ್ಲಿ ಬಳಸುವುದು, ಐಟಂ ಸಾಂಗ್ ಹೆಸರಿನಲ್ಲಿ ನಗ್ನತೆಗೆ ಅತೀ ಹತ್ತಿರವಾದ ಮೈ ಪ್ರದರ್ಶನ, ಪದೇ ಪದೇ ಡಬಲ್ ಮೀನಿಂಗ್ ಡೈಲಾಗ್‌ಗಳನ್ನು ಎಸೆಯುವುದು, ಹೆಣ್ಣು ಎಂದರೆ ಕೇವಲ ಸಂಭೋಗಕ್ಕೆ ಯೋಗ್ಯವಾದ ದೇಹ ಎಂದು ಬಿಂಬಿಸುವುದು, ಕುಡಿಯುವುದೇ ಸುಖದ ದಾರಿ ಎಂದು ಪಪದೇ ಪದೇ ಬಿಂಬಿಸುವುದು…. ಒಂದೆರಡಲ್ಲ.
ಹೀಗೆ ಹೇಳಿದ ಕೂಡಲೇ `ಅಲ್ರೀ ನಿಜ ಜೀವನದಲ್ಲಿ ಇರೋದನ್ನೇ ಇಲ್ಲಿ ಹೇಳ್ತಿದೀವಿ, ಅದರಲ್ಲೇನು ತಪ್ಪು?’ – ಈ ಪ್ರಶ್ನೆ ಬರುತ್ತೆ. ಇವರೆಲ್ಲ ನಿರ್ಮಾಪಕರು, ನಿರ್ದೇಶಕರು, ನಟರು – ಎಲ್ಲರೂ ಏನೋ ಪ್ರತಿದಿನವೂ ಇಂಥ ಸನ್ನಿವೇಶಗಳನ್ನೇ ಪ್ರತಿನಿತ್ಯ ಅನುಭವಿಸ್ತಾ ಬದುಕುತ್ತಿದ್ದಾರೆಯೆ ಎಂಬುದು ನನ್ನ ಪ್ರಶ್ನೆ. ಕೇವಲ ಎರಡೂವರೆ ಗಂಟೆಗಳ ಸಿನೆಮಾದಲ್ಲಿ ಇಷ್ಟೊಂದು ಕ್ಷುದ್ರ ಡೈಲಾಗ್ ಮತ್ತು ದೃಶ್ಯಗಳನ್ನು ತುರುಕಿ ಪ್ರೇಕ್ಷಕರಿಂದ ದುಡ್ಡೆತ್ತುವ ಈ ಪರಿಯನ್ನು ವಿರೋಧಿಸುವವರೇ ಇಲ್ಲವಾಗಿದೆ. ಇವೆಲ್ಲ ಸಮಾಜದಲ್ಲಿ ತುಂಬಾ ಸ್ವಾಭಾವಿಕ ಆಗಿದ್ದರೆ, ನಮ್ಮ ಮುದ್ರಿತ ದಿನಪತ್ರಿಕೆಗಳಲ್ಲಿ ಪ್ರತಿದಿನವೂ ಈ ಡೈಲಾಗ್‌ಗಳು ಬರುತ್ತಿವೆಯೆ? ಅಕಸ್ಮಾತ್ ಬಂದಿದ್ದರೆ ಏನಾಗುತ್ತಿತ್ತು?
ಕೇಂದ್ರ ಸೆನ್ಸಾರ್ ಮಂಡಳಿಯು ಪಟ್ಟಿ ಮಾಡಿದ ಪದಗಳು ಈಗ ಪ್ರತಿಯೊಬ್ಬ ಮಗುವಿಗೂ ಗೊತ್ತು ಕಣ್ರೀ ಎಂದು ನಿರ್ದೇಶಕ ಡ್ಯಾನಿಶ್ ಅಸ್ಲಾಂ ಹೇಳಿದ್ದಾರಂತೆ. ಹೀಗೆ ಮಕ್ಕಳಿಗೂ ಇವೆಲ್ಲ ಪದಗಳನ್ನು ಗೊತ್ತು ಮಾಡಿಸಿದವರು ಯಾರು? ಅವೇನು ತಾಯಿಯ ಹೊಟ್ಟೆಯಲ್ಲಿದ್ದಾಗಲೇ ಈ ಪದಗಳನ್ನು ಕಲಿತುಬಿಟ್ಟವೆ?
`ಈ ಪದಗಳನ್ನು ಬ್ಯಾನ್ ಮಾಡಿದರೆ ಪ್ರತಿಯೊಂದೂ ಹಾಡನ್ನೂ ಸೆನ್ಸಾರ್ ಬೋರ್ಡ್ ಕತ್ತರಿಸಬೇಕು’ ಎಂದು ಉದಯಭಾಸ್ಕರ್ ಶರ್ಮ ಹೇಳಿದ್ದಾರೆ. ಖಂಡಿತ. ನಾನು ನೋಡಿದ, ಅತಿಹೆಚ್ಚು (೨೦) ಕಟ್‌ಗಳನ್ನು ಸೂಚಿಸಿದ್ದ ಒಂದು ಸಿನೆಮಾ ಅತ್ಯಂತ ಜನಪ್ರಿಯವಾಯ್ತು. ಆಮೇಲೆ ನೋಡಿದರೆ ಅದರಲ್ಲಿ ಹತ್ತು ಕಟ್‌ಗಳನ್ನು ಮಾಡಿರಲೇ ಇಲ್ಲ! ಅದಲ್ಲದೆ ಹಾಡುಗಳಲ್ಲಿದ್ದ ಪದಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿತ್ತು. ಸಂಗೀತ ಸಂಯೋಜನೆ, ದೃಶ್ಯಗಳ ಚಿತ್ರೀಕರಣ ಆದಮೇಲೆ ಕಟ್ ಮಾಡುವುದು ಸಾಧ್ಯವಿಲ್ಲ ಎಂಬುದು ಈ ನಿರ್ದೇಶಕರು / ನಿರ್ಮಾಪಕರು ಕೊಡುವ ಸಬೂಬು. ಹಾಡನ್ನು ಬರೆದಾಗಲೇ ಅದನ್ನು ಸ್ವಯಂ ವಿಶ್ಲೇಷಣೆಗೆ ಒಳಪಡಿಸಲು ಇವರಿಗೆ ಬರುವುದಿಲ್ಲವೆ? (ಜಯಂತ್ ಕಾಯ್ಕಿಣಿ ಹಾಡುಗಳು ಎಂದಾದರೂ ಸೆನ್ಸಾರ್ ಆಗಿವೆಯೆ? ಗೊತ್ತಿಲ್ಲ).
ಮುಖ್ಯ ವಿಷಯ ಅಂದ್ರೆ ನಮ್ಮ ಮುದ್ರಣ ಮಾಧ್ಯಮಗಳಿಗೆ ಇರುವ ಸ್ವಲ್ಪ ಮಟ್ಟಿನ ಪದಬಳಕೆಯ ಸಭ್ಯತೆ ಸಿನೆಮಾ ಮಾಡುವವರಿಗೆ ಆಲ್‌ಮೋಸ್ಟ್ ಇಲ್ಲ. ಅದರಲ್ಲೂ ಸಿನೆಮಾದಲ್ಲಿ ಇರೋದೆಲ್ಲ ಕಟ್ಟು ಕಥೆ. ಡಾಕ್ಯುಮೆಂಟರಿಗಳಲ್ಲಿ ನೈಜತೆಗಾಗಿ / ಅಗತ್ಯಕ್ಕಾಗಿ ಇಂಥ ಪದಗಳನ್ನು ಬಳಸೋದ್ರಲ್ಲಿ ಅರ್ಥ ಇದೆ. ಆದರೆ ಕಪೋಲ ಕಲ್ಪಿತ ಕಥೆಯಲ್ಲಿ ಗಳಿಗೆಗೊಂದು ಬೈಗುಳ ಸೇರಿಸಿದರೆ? ಈ ಪದಗಳನ್ನು ಹೇಳದೆಯೂ ದೃಶ್ಯವನ್ನು ತೋರಿಸಬಹುದು; ಅನುಭವವನ್ನು ದಾಟಿಸಬಹುದು. ಮೊದಲಿನಿಂದಲೂ ಅಗತ್ಯಕ್ಕೆ ತಕ್ಕಂತೆ ಮಾತ್ರವೇ ಇಂಥ ಪದಗಳನ್ನು ಬಳಸಿದ್ದರೆ ಖಂಡಿತ ಸೆನ್ಸಾರ್ ಬೋರ್ಡ್ ಈ ಮಟ್ಟಕ್ಕೆ ಹೋಗುತ್ತಿರಲಿಲ್ಲ. ಜನರ ಜೇಬಿಗೆ ಕತ್ತರಿ ಹಾಕುವ,ಅವರೆಲ್ಲರ ಮನಸ್ಸುಗಳ ಮೇಲೆ ದೊಡ್ಡ ಪರದೆಯ ಮೂಲಕ ಪ್ರಭಾವ ಬೀರಿ ನಾವು ಹೇಳಿದ್ದೇ ಸತ್ಯ ಎಂಬ ಭಾವ ಮೂಡಿಸುವ ಸಿನೆಮಾ ನಿರ್ದೇಶಕರು ಈ ಪದಗಳನ್ನು ಮನಸ್ಸಿಗೆ ಬಂದಂತೆ ಬಳಸಿದರು.
ಪತ್ರಿಕೆಗಳ ಮಟ್ಟಿಗೆ ಪ್ರಕಟಣಾಪೂರ್ವ ಸೆನ್ಸಾರ್ ಇಲ್ಲ; ತುರ್ತುಪರಿಸ್ಥಿತಿಯಲ್ಲಿ ಹೀಗಿದ್ದ ಸೆನ್ಸಾರನ್ನು ಅತ್ಯಂತ ಉಗ್ರವಾಗಿ ಪ್ರತಿಭಟಿಸಿದ್ದೇ ಆರೆಸೆಸ್ ಎಂಬುದು ನಿರ್ವಿವಾದ. ಆದರೆ ಸಿನೆಮಾಗಳ ಮಟ್ಟಿಗೆ ಸೆನ್ಸಾರ್ ಯಾಕೆ ಇದೆ? ಕೊಂಚ ಯೋಚಿಸಿ. ಜಾತಿಸೂಚಕ ಪದಗಳನ್ನು ಯಾವ ಸಾಸಿವೆಕಾಳಿನಷ್ಟು ಹೊಣೆಗಾರಿಕೆಯೂ ಇಲ್ಲದೆ ಬಳಸುವ ನಿರ್ದೇಶಕರನ್ನು ನಾನು ನೋಡಿದ್ದೇನೆ. ಹತ್ತಾರು ಸಿನೆಮಾ ಮಾಡಿ, ಸೆನ್ಸಾರ್ ಬೋರ್ಡಿನ ಹಲವರ ಕಾಮೆಂಟ್‌ಗಳನ್ನು ಕೇಳಿ ಅನುಭವ ಇದ್ದರೂ ಹೀಗೆ ಮಾಡಿದರೆ, ಅವರದು ಅಭಿವ್ಯಕ್ತಿ ಸ್ವಾತಂತ್ರ್‍ಯ ಎನ್ನಬೇಕೆ? ಅಧಿಕಪ್ರಸಂಗಿತನ ಎಂದು ಕರೆಯಬೇಕೆ? ಶತಮಾನಗಳಿಂದ ಪತ್ರಿಕೆಗಳು ಉಳಿಸಿ, ಬೆಳೆಸಿಕೊಂಡು ಬಂದ ಸಾರ್ವಜನಿಕ ಸಭ್ಯತೆಯು ಸಿನೆಮಾಗೆ ಏಕೆ ಇಲ್ಲ?
ನನ್ನ ಎರಡು ವರ್ಷಗಳ ಸದಸ್ಯತ್ವದಲ್ಲಿ ಸೆನ್ಸಾರ್ ಬೋರ್ಡಿನ ಕಾಳಜಿಯನ್ನು ಅರ್ಥ ಮಾಡಿಕೊಂಡು ಸಿನೆಮಾ ಮಾಡಿ ಒಂದೂ ಕಟ್ ಇಲ್ಲದೆ, ಶ್ಲಾಘನೆಯೊಂದಿಗೆ ಸರ್ಟಿಫಿಕೇಟ್ ಪಡೆದವರು ಒಬ್ಬರು ಮಾತ್ರ. ಅವರು ಕನ್ನಡದ ಒಬ್ಬ ಅನುಭವೀ ಚಿತ್ರ ನಿರ್ಮಾಪಕರು. `ನಾನೂ ಈ ಸಮಾಜದ ಸದಸ್ಯ. ಆದ್ದರಿಂದ ಏನು ಹೇಳಬೇಕು, ಹೇಳಬಾರದು ಅನ್ನೋ ಪ್ರಜ್ಞೆ ನನಗಿದೆ. ಸೆನ್ಸಾರ್ ಮಂಡಳಿಯ ಉದ್ದೇಶಗಳನ್ನು ನಾನು ಅರ್ಥ ಮಾಡಿಕೊಂಡಿದ್ದರಿಂದಲೇ ಸಿನೆಮಾ ಮಾಡುವಾಗ ನಿರ್ದೇಶಕರೊಂದಿಗೆ ಚರ್ಚಿಸಿದ್ದೆ’ ಎಂದು ಅವರು ತಿಳಿಸಿದರು. ಸೆನ್ಸಾರ್ ಮಂಡಳಿಯು ಯು, ಎ/ಯು, ಎ ಸರ್ಟಿಫಿಕೇಟ್‌ಗಳನ್ನು ಕೊಡುವುದೇ ವಯಸ್ಸಿನ ಆಧಾರದ ಮೇಲೆ. ಆದ್ದರಿಂದ ಇಲ್ಲಿ ಸೆನ್ಸಾರ್ ಬೋರ್ಡ್ ಮುಖಮೂತಿ ನೋಡದೆ ಒಂದೇ ಮಾನದಂಡ ಅನುಸರಿಸುವುದಿಲ್ಲ. ಎ ಸರ್ಟಿಫಿಕೇಟ್ ಕೊಡುತ್ತೇವೆ ಎಂದಕೂಡಲೇ ‘ಯು’ ಕೊಡಿ ಸಾರ್ ಎಂದು ಗೋಗರೆವ, ಅಥವಾ ಗಲಾಟೆ ಮಾಡುವ ನಿರ್ದೇಶಕರನ್ನೂ ನಾನು ನೋಡಿದ್ದೇನೆ. ಭಾರತದಂಥ ಜನನಿಬಿಡ, ಸಂಕೀರ್ಣ ಸಮಾಜದಲ್ಲಿ ಈ ಸಿನೆಮಾ ಇಂಥ ವಯಸ್ಸಿಗೆ ಮಾತ್ರ ಎಂದು ನಿರ್ಧರಿಸುವುದೂ ಅಪರಾಧವೆ?
ಈಗ ಬ್ಯಾನ್ ಆಗಿರುವ ಪದಗಳಿವೆಯಲ್ಲ, ಈ ಪದಗಳನ್ನು ಬಳಸಲೇಬೇಕು/ ಬಹುದು ಎಂದು ವಾದಿಸುವ ಜನರು ತಮ್ಮ ಕುಟುಂಬದ ಎಲ್ಲಾ ಸದಸ್ಯರೊಂದಿಗೆ ಕೂತು ಸಹಜವಾಗಿ ಈ ಎಲ್ಲ ಪದಗಳನ್ನು ಒಟ್ಟೊಟ್ಟಿಗೆ ಬಳಸುತ್ತಾರಾ? ಸಭೆ ಸಮಾರಂಭಗಳಲ್ಲಿ ಈ ಪದಗಳಿಂದಲೇ ವಾಕ್ಯಗಳನ್ನು ಪೋಣಿಸುತ್ತಾರಾ? ಇಲ್ಲ ಅಂದಾದರೆ, ಮೂರು ತಾಸಿನ ಸಿನೆಮಾದಲ್ಲಿ ಇವನ್ನೆಲ್ಲ ಯಾಕೆ ಮತ್ತೆ ಮತ್ತೆ ಬಳಸುತ್ತೀರಿ?
ನಿಜ, ಇಂಟರ್‌ನೆಟ್ ಬಂದಮೇಲೆ ನಮ್ಮ ಸಮಾಜದಲ್ಲಿ ಸೆನ್ಸಾರ್‌ನ ಅಗತ್ಯವಿಲ್ಲ ಎಂದು ಬಲವಾಗಿ ಅನ್ನಿಸಬಹುದು. ಹನ್ನೆರಡು ವರ್ಷಗಳ ಹಿಂದೆಯೇ `ಸೆಕ್ಸ್: ಇಂಟರ್‌ನೆಟ್‌ನ ಕಾಮನ್ ಹಬ್ಬ’ ಎಂಬ ಲೇಖನವನ್ನೂ ಬರೆದಿದ್ದೇನೆ. ಯಾವ ವಯಸ್ಸಿಗೆ ಯಾವುದನ್ನು ಮಾಡಬೇಕು ಎಂಬ ವಯೋಸಹಜ ಹಕ್ಕು ಮತ್ತು ಅಧಿಕಾರಗಳನ್ನು ಕಲಿಸಿಕೊಡುವ ಬದಲು ಚಿಕ್ಕಮಗುವಿನಿಂದಲೂ ನಂಗಾನಾಚ್ ಮಾಡುವುದೇ ಸ್ಕೂಲ್‌ಡೇ/ ಟಿವಿ ರಿಯಾಲಿಟಿ ಶೋ ಆಗಿಬಿಟ್ಟಿದೆ ಎಂಬುದೂ ನಿಜ.
ಇದು ಮೇಲ್ನೋಟದ ವಾಸ್ತವ. ಒಳಗಿಳಿದರೆ ಗೊತ್ತಾಗುತ್ತದೆ : ಭಾರತೀಯ ಸಮಾಜ ಇನ್ನೂ ಯಾವ ಸನ್ನಿವೇಶದಲ್ಲಿ ಇದೆ ಎಂಬುದು. ಭಾರತದ ಸಾಂಸ್ಕೃತಿಕ ಸನ್ನಿವೇಶದಲ್ಲಿ ಸಿನೆಮಾದಂಥ ಅತ್ಯಂತ ಪ್ರಭಾವಿ ಮಾಧ್ಯಮದ ಮೂಲಕ ಏನಾದರೂ ಸಂದೇಶ ಬೀರಿದರೆ ಅದರ ಪರಿಣಾಮ ವಿಪರೀತ. ವೃತ್ತಪತ್ರಿಕೆ, ರೇಡಿಯೋಗಿಂತ ಹೆಚ್ಚಿನ ಪ್ರಭಾವ ಸಿನೆಮಾಗಿದೆ. ಆದ್ದರಿಂದ ಭಾರತೀಯ ಸಮಾಜದ ಮಾರುಕಟ್ಟೆಯಲ್ಲಿ ಸಿನೆಮಾ ಮಾಡುವಾಗ ಹೊಣೆಗಾರಿಕೆ ಬೇಕು. ವಿಷಮತೆ ಹಬ್ಬಿಸದಂಥ ಎಚ್ಚರಿಕೆ ಬೇಕು. ಸಮಾಜದ ಛಿದ್ರತೆಗೆ, ಹಿಂಸೆಗೆ, ಮಾನಸಿಕ ತುಮುಲಕ್ಕೆ, ಹೊಣೆಗೇಡಿತನದ ಕೃತ್ಯಗಳಿಗೆ ಸಿನೆಮಾ ಕಾರಣ ಆಗಬಾರದು. ದುರದೃಷ್ಟವಶಾತ್ ಅಭಿವ್ಯಕ್ತಿ ಸ್ವಾತಂತ್ರ್‍ಯವೆಂಬ ಅಮೂರ್ತ ವ್ಯಾಖ್ಯೆಯ ಅಡಿಯಲ್ಲಿ ನಾವು ಡಿಕ್ಷನರಿಯಲ್ಲಿ ಇರುವ ಪದಗಳನ್ನೆಲ್ಲಾ ಬಳಸಲೇಬೇಕು ಎಂಬ ಹಟಕ್ಕೆ ಬಿದ್ದಿದ್ದೇವೆ. ಚಾರ್ಲೀ ಹೆಬ್ಡೋ ಪ್ರಕರಣ ಅಭಿವ್ಯಕ್ತಿ ಸ್ವಾತಂತ್ರ್‍ಯದ್ದೋ, ಮತೀಯ ಟೀಕೆಯ ಪರಮಾವಧಿಯೋ? ಸ್ಕೇಟಿಂಗ್ ಫಲಕದ ಮೇಲೆ ಗಣಪತಿ ಕೇವಲ ಕಿಡಿಗೇಡಿತನವೋ, ಭಾವುಕತೆಯ ಪ್ರಶ್ನೆಯೋ, ಕಳ್ಳರೆಲ್ಲರೂ ಕೊರಮರೇ? ದಡ್ಡರೆಲ್ಲರೂ ಕಿವುಡರೆ? ನಪುಂಸಕರೆಲ್ಲರೂ ಹಿಜಡಾಗಳೆ? ಸೆಕ್ರೆಟರಿಗಳೆಲ್ಲರೂ ರೀಟಾಗಳೆ? ಹೀರೋಗಳೆಲ್ಲರೂ ರಾಹುಲ್‌ಗಳೆ?
ಟಿವಿ ಚಾನೆಲ್‌ಗಳ ವಿಚಾರಕ್ಕೆ ಬಂದರೆ ಇಲ್ಲಿಯೂ ಪ್ರಕಟಣಾ ಪೂರ್ವ ಸೆನ್ಸಾರ್ ಬೇಕು ಎಂದೇ ನಾನು ಹೇಳುತ್ತೇನೆ. ನಾನು ಸಿನೆಮಾ ನೋಡಿ ರೇಪ್ ಮಾಡಿದೆ, ಟಿವಿ ಚಾನೆಲ್ ನೋಡಿ ದರೋಡೆ ಮಾಡಿದೆ ಎಂಬ ಸುದ್ದಿ ಓದಿದ್ದೇನೆಯೇ ವಿನಃ ಪತ್ರಿಕೆ ಓದಿ ಪರಮ ನೀಚನಾದೆ ಎಂಬ ಅಪರಾಧ ಸುದ್ದಿ ನನಗಿನ್ನೂ ಸಿಕ್ಕಿಲ್ಲ. ಅಷ್ಟರಮಟ್ಟಿಗೆ ದೃಶ್ಯಮಾಧ್ಯಮದ ಪ್ರಭಾವವನ್ನು ನಾವು ಒಪ್ಪಿಕೊಳ್ಳಲೇಬೇಕು.
ಹಾಗಾದರೆ ನೀನೂ ಒಬ್ಬ ಮತಾಂಧ, ನೀನೂ ಸೃಜನಶೀಲ ಅಭಿವ್ಯಕ್ತಿಯ ವಿರೋಧಿ, ನೀನೂ ಪರಮ ಮೂಲಭೂತವಾದಿ ಎಂದು ಭಾವಿಸಿದರೆ.. ಕ್ಷಮಿಸಿ. ನಾನೇನೂ ಮಾಡಲಾರೆ. ಸೆನ್ಸಾರ್ ಬೋರ್ಡಿನಲ್ಲಿ ಇಂಥ ಹತ್ತು ಹಲವು ವಿಷಯಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದ್ದೇನೆ. ಸಮಾಜಕ್ಕೆ ನಯಾಪೈಸೆ ಅನುಕೂಲವಾಗದ ದರಿದ್ರ ಸಿನೆಮಾಗಳನ್ನು ನೋಡಿ,ಒಂದಷ್ಟು ಕಟ್‌ಗಳನ್ನು ಸೂಚಿಸಿ, ಸರ್ಟಿಫಿಕೇಟ್‌ಗೆ ಶಿಫಾರಸು ಮಾಡಿ ಸಿಟಿಂಗ್ ಫೀ ತೆಗೆದುಕೊಂಡ ಪರಮನೀಚನೂ ನಾನೇ. ಅದಾಗಿ ಈ ಹದಿನಾಲ್ಕು ವರ್ಷಗಳಲ್ಲಿ ಈ ಕ್ಷುದ್ರ ಪದಗಳಿಲ್ಲದೆಯೇ ನಿರ್ಮಿಸಿದ ನೂರಾರು ಸಿನೆಮಾಗಳಿಂದ ಜಗತ್ತಿನಲ್ಲಿ ನಡೆಯುತ್ತಿರುವ ಕ್ರೌರ್ಯ, ವಂಚನೆ, ಹಿಂಸೆ, ಯಾತನೆ, ಪತನ, ವಿಘಟನೆ – ಎಲ್ಲವನ್ನೂ ಮೌನವಾಗಿ ಅನುಭವಿಸಿ ಅರಿತಿದ್ದೇನೆ ಎಂದು ಘೋಷಿಸಬಲ್ಲ ಅಧಿಕಪ್ರಸಂಗಿಯೂ ನಾನೇ.