ನನ್ನ ಹಳೆಯ ಕಾಗದದ ನೋಂದಣಿ ಇತ್ಯಾದಿ ದಾಖಲೆಗಳನ್ನು ಜೋಡಿಸಲೆಂದು ನಾಗಂದಿಗೆಯ ಮೇಲಿನ ‘ಹರಗಣ’ವನ್ನು ಕೆಳಗಿಳಿಸಿದೆ. ಕಂಪ್ಯೂಟರನ್ನು ಸ್ಮಾರ್ಟ್ ಟಿವಿಗೆ ಜೋಡಿಸಿ ಯೂಟ್ಯೂಬ್ ಹಚ್ಚಿ ಸುಲ್ತಾನ್ ಖಾನ್ ಆಲ್ಬಮ್‌ನ್ನು ಶುರು ಮಾಡಿದೆ. ಇದ್ದ ಐದಾರು ಕಾಗದದ ರಾಶಿಗಳಲ್ಲಿ ಮೊದಲ ಹತ್ತೇ ನಿಮಿಷದಲ್ಲಿ ನನಗೆ ೨೦ ವರ್ಷಗಳಿಂದ ಸಿಗದಿದ್ದ ಮದ್ರಾಸು ವಿವಿ ಗಣಿತ ಪದವಿಯ ಮೊದಲ ವರ್ಷದ ಅಂಚೆ ತೆರಪಿನ ಕೋರ್ಸಿನ ಒರಿಜಿನಲ್ ಅಂಕಪಟ್ಟಿ ಸಿಕ್ಕಿತು! ಅದಾಗಿ ಅಗೆದಂತೆ ನಾನು ಹಾಕಿದ್ದ ಕಾರ್ಮಿಕ ಕೇಸಿನ ದಾವೆಯೂ, ಅದರ ತೀರ್ಪೂ ಸಿಕ್ಕಿದವು; ನಾನು ಮುಳಬಾಗಿಲಿನಲ್ಲಿ ಎದುರಿಸಿದ್ದ ಮಾನಹಾನಿ ಮೊಕದ್ದಮೆ ಕೇಸಿನ ತೀರ್ಪೂ ಸಿಕ್ಕಿತು.
ಇದಿಷ್ಟೇ ಆಗಿದ್ದರೆ ನಾನು ಈ ಬ್ಲಾಗ್ ಬರೆಯುತ್ತಿರಲಿಲ್ಲ!
ಉಸ್ತಾದ್ ಸುಲ್ತಾನ್ ಖಾನ್ ಎಂಥ ಮೆಸ್ಮರೈಸಿಂಗ್ ಕಲಾವಿದರು ಅಂದ್ರೆ ಅವರು ಯಮನ್, ನಟಭೈರವ್ ಬಾರಿಸುತ್ತ ನನ್ನನ್ನು ಬಹುವಾಗಿ ಕಾಡತೊಡಗಿದರು. ಅವರು ಹಾಡಿದಂತೆ ಮೆದುವಾಗಿ ತೊನೆಯುವ ಉಸ್ತಾದ್ ಜಾಕೀರ್ ಹುಸೇನರ ತಬಲಾ…. ಕೇಳುತ್ತ ಕೇಳುತ್ತ ನಾನು ನನ್ನ ಪತ್ರಗಳ ರಾಶಿಯನ್ನೇ ಒಂದೊಂದಾಗಿ ಬಿಡಿಸುತ್ತ ಹೋದೆ….
ನನ್ನ ಅಕ್ಕ ತೀರಿಕೊಂಡಾಗ ಲೇಖಕ ಶಿವರಾಮು ಆಗ ಬರೆದಿದ್ದರು: (ಅವರು ನನ್ನ ಅಕ್ಕನ ಕೊನೆಯ ದಿನಗಳಲ್ಲಿ ಒಂದೆರಡು ದಿನ ನಮ್ಮನೆಯಲ್ಲೇ ಇದ್ದರು)
“ಜಗತ್ತಿಗಾದರೋ ಈ ಹುಟ್ಟು ಸಾವು ಎಲ್ಲ ಮಾಮೂಲು. ಆದರೆ ಅಕ್ಕನನ್ನು ಕಳೆದುಕೊಂಡ ನಿಮಗೆ, ಮಗಳನ್ನು ಕಳೆದುಕೊಂಡ ತಾಯಿಗೆ ಇನ್ನುಳಿದ ಹತ್ತಿರದವರಿಗೆ ಹಾಗೆ ಆಗುವುದಿಲ್ಲ. ಮಾಮೂಲಿನ ಹಾಗೆ ಅನಿಸುವುದಿಲ್ಲ. ನಿಮ್ಮೆಲ್ಲರ ಮನಸ್ಸಿನ ಅವಿಭಾಜ್ಯ ಅಂಗ ಆ ಅಕ್ಕ. ಅದರಲ್ಲೂ ಎಲ್ಲರ ಅಕ್ಕಂದಿರಂತಲ್ಲ ಈ ಅಕ್ಕ. ಮೊದಲೇ ಎಲ್ಲವನ್ನೂ ತಿಳಿದಿದ್ದವರು. ತಮ್ಮನ್ನು ಕರೆದೊಯ್ಯಲು ದಿನದಿನವೂ ಹತ್ತಿರವಾಗುತ್ತಿದ್ದ ಆ `ಗುಮ್ಮನ’ ಹೆಜ್ಜೆಯ ಸಪ್ಪಳವನ್ನು ಕೇಳುತ್ತಲೇ ಬದುಕುತ್ತಿದ್ದವರು. ಬಹುಶಃ ಭಯ, ನಿಸ್ಸಹಾಯಕತೆ ಇವೆಲ್ಲ ಅನುಭವವಾಗುತ್ತಿದ್ದುದು ಮನೆಯವರಿಗೆ. ಆದರೆ ನನ್ನ ಅಂದಾಜಿನಂತೆ ಆ ಚಳಿ ಅಕ್ಕನಿಗೆ ಎಂದೋ ಬಿಟ್ಟುಹೋಗಿರಬೇಕು. ದಿಟ್ಟವಾಗಿಯೇ ಸಾಗಿರಬೇಕು – ಬಾಗಿಲಿನಿಂದಾಚೆಗೆ..
ನಿಮಗೆ ಆಶ್ಚರ್ಯ ಆಗಬಹುದು. ಹಿಂದಿನ ದಿನ (ಅಶ್ವಯುವ ಶುದ್ಧ ಅಷ್ಟಮಿ) ನನಗೊಂದು ಕನಸಾಯಿತು. ಒಂದು ಸಭೆ; ನಾನು ಮೊದಲ ಸಾಲಿನಲ್ಲಿದ್ದೆ. ವೇದಿಕೆಗೆ ಒಂದು ಪುಟ್ಟ ಹುಡುಗಿ ಬಂದಳು. ತುಂಬು ಮುಖ; ಹೊಳೆಯುವ ಕಣ್ಣುಗಳು. ಸಂಗೀತಕ್ಕೆ ತೊಡಗಿದಳು. ಹಾಡಹಾಡುತ್ತಿದ್ದಂತೆ ಅವಳ ಮೈ ಬೆಳೆಯತೊಡಗಿತು. ತೊಟ್ಟಿದ್ದುದು ಹಳೆಯ ಬಟ್ಟೆಗಳು (ಬಡವೆಯಾಗಿದ್ದರಿಂದಲೇನೋ?). ಹಾಡು ತುಂಬ ಇಂಪಾಗಿತ್ತು. ಕುಳಿತಿದ್ದ ಅವಳು ಹಾಡುತ್ತಲೇ ವೇದಿಕೆಯಲ್ಲೇ ಮಲಗಿಬಿಟ್ಟಳು. ಮರುಕ್ಷಣ ಜೀವ ಇರಲಿಲ್ಲ.
ನನಗೆ ಎಚ್ಚರವಾದಾಗ (ಮಹಾನವಮಿ ಶುಕ್ರವಾರ ಬೆಳಗ್ಗೆ) ನಾನು, ಇದೆಂಥ ವಿಚಿತ್ರ, ಯಾರವಳು ಎಂದೆಲ್ಲ ತಲೆ ಕೆರೆದುಕೊಂಡೆ. ಬಹುಶಃ ಅಷ್ಟಮಿ, ನವಮಿಗಳ ನಡುವೆ ಮಹಾದೇವಿಯ ದರ್ಶನ ಆಗಿರಬೇಕೆಂದುಕೊಂಡೆ. ಆದರೆ ವೇದಿಕೆಯಲ್ಲೆ ಅವಸಾನಗೊಂಡದ್ದೇಕೆ? ಅರ್ಥವಾಗಿರಲಿಲ್ಲ. ಈಗ ಅರ್ಥ ಜೋಡಿಸತೊಡಗಿದ್ದೇನೆ.
ನನ್ನ ಸಮಾಧಾನಕ್ಕೆ ಅಂದುಕೊಳ್ಳುತ್ತೇನೆ = ಶಾಸ್ತ್ರಗಳಲ್ಲೂ ಹಾಗೇ ಇದೆಯಂತೆ). ಕೆಲವು ಆತ್ಮಗಳು ಹೆಚ್ಚಿನ ಸಂಸ್ಕಾರ, ತರಬೇತಿ ಪಡೆದುಕೊಳ್ಳಲು ಹುಟ್ಟು ತಡೆದುಕೊಳ್ಳುತ್ತವೆ. ಅದು ಮುಗಿಯುತ್ತಲೇ, ಇಲ್ಲಿ ಏನೂ ಕೆಲಸವಿಲ್ಲವಷ್ಟೆ!
ಆದರೆ ಇದರಲ್ಲೊಂದು ಮಜಾ ಸಂಗತಿ ಇದೆ. ಆ ಮೂಲಕ ಮನೆಯ ಇತರರಿಗೆ ಬೇಕಾದ ತರಬೇತಿ, ಸಂಸ್ಕಾರ, ಅನುಭವ ಎಲ್ಲ ಏಕಕಾಲಕ್ಕೆ ದೊರೆಯುತ್ತಿರುತ್ತದೆ. ಇದೊಂದು ದೈವೀ ವ್ಯವಸ್ಥೆ.
ಅಕ್ಕ ನಮಗೆಲ್ಲರಿಗೂ ಅಗತ್ಯವಾದ ಟ್ರೈನಿಂಗ್ ಕೊಟ್ಟಿದ್ದಾರೆ. ಅದೇ ಮುಖ್ಯ. ಅದು ನೆನಪಿದ್ದರಾಯಿತು. ಮಹಾನವಮಿ – ಶುಕ್ರವಾರ – ಬೆಳಗಿನ ಹೊತ್ತು – ತಿಥಿ – ವಾರ – ಗಳಿಗೆ ಎಲ್ಲ ಒಳ್ಳೆಯದಾಗಿತ್ತು. ಹೀಗೇ ಸಂತೈಸಿಕೊಳ್ಳುವುದು ಬಿಟ್ಟರೆ ಬೇರೆ ದಾರಿಯಿಲ್ಲ…. (ಇಂದಬೆಟ್ಟು, ಬೆಳ್ತಂಗಡಿ ತಾಲೂಕು, ೨೪ ಅಕ್ಟೋಬರ್ ೯೭)”.
ಆರೆಸೆಸ್‌ನ ಹಿರಿಯ ಪ್ರಚಾರಕ ಹೊ ವೆ ಶೇಷಾದ್ರಿಯವರು ಮುದ್ದಾದ ಅಕ್ಷರಗಳಲ್ಲಿ ಬರೆದ ಕಾರ್ಡ್ ಕೂಡ ಅಲ್ಲೇ ಕಂಡಿತು… ಹಿರಿಯ ಕಾರ್ಯಕರ್ತ ಎಂ ಕೆ ಶ್ರೀಧರ್ ಬಗ್ಗೆ ಕರ್ಮವೀರದಲ್ಲಿ ಬರೆದ ನುಡಿಚಿತ್ರಕ್ಕೆ ಆರೆಸೆಸ್ ಪ್ರಚಾರಕ ಸು ರಾಮಣ್ಣ ಬರೆದ ವಸ್ತುನಿಷ್ಠ ವಿಮರ್ಶೆಯ ಕಾರ್ಡೂ ಸಿಕ್ಕಿತು. ತನ್ನ ಪ್ರವಾಸದ ಮಧ್ಯೆಯೂ ನಾನು ಮಾಡಬೇಕಾದ ಕೆಲಸಗಳ ಬಗ್ಗೆ ಮೆದುವಾಗಿ ನೆನಪಿಸುವ ದತ್ತಾಜಿಯವರ ಕಾರ್ಡ್‌ಗಳು, ಇನ್‌ಲೆಂಡ್ ಪತ್ರಗಳು…
ನಾನು ವಿಜಯ ಕರ್ನಾಟಕದಲ್ಲಿದ್ದಾಗ ನನಗೆ ಹಲವು ಲೇಖಕರು ಬರೆದ ಪತ್ರಗಳು ಕಂಡವು. ಅವರ ಸಂಪರ್ಕವೇ ಈಗ ಇಲ್ಲ! ಆ ಪತ್ರಿಕೆ ಬಿಟ್ಟ ಮೇಲೆಯೂ ಡಾ|| ಸಿದ್ದಲಿಂಗ ಪಟ್ಟಣಶೆಟ್ಟಿ, ಕಮಲಾ ಹೆಮ್ಮಿಗೆ – ಹೀಗೆ ಕೆಲವರು ಕಾಗದ ಬರೆದು ಶುಭ ಹಾರೈಸಿದ್ದೂ ಕಂಡಿತು…
ಈ ನೂರಾರು ಕಾಗದಗಳಲ್ಲಿ ನಾನು ಬರೆದು ಅಂಚೆಗೆ ಹಾಕದೇ ಇದ್ದ ಕಾಗದಗಳೂ ಡಜನ್‌ಗಟ್ಟಳೆ ಇವೆ. ಅವೆಲ್ಲವೂ ನನ್ನ ಆ ಕಾಲದ (ಈ ಕಾಲದಲ್ಲೇನು ಬದಲಾವಣೆ ಆಗಿಲ್ಲ ಅನ್ನಿ!) ಭಾವುಕ / ಭ್ರಾಮಕ ಮನಸ್ಥಿತಿಯನ್ನು ಬಿಂಬಿಸುತ್ತವೆ ಎಂಬುದು ಈಗ ಅರಿವಾಯಿತು. ನನಗೆ ಬಂದ ಕಾಗದಗಳಲ್ಲಿ ಎಷ್ಟೆಲ್ಲ ತವಕ – ತಲ್ಲಣ – ತನ್ಮಯತೆ – ಸ್ನೇಹ – ವಿಶ್ವಾಸ – ಪ್ರೀತಿ – ಅಭಿಮಾನ – ಸೇಡು – ತಿರಸ್ಕಾರ – ಇವೆ ಎಂದು ನೋಡಿದೆ… ಆ ಕಾಲದ ಹೊಸ ಕವಿಗಳು ನನಗೆ ಕೃತಜ್ಞತೆಗಳನ್ನು ತಿಳಿಸಿದ್ದೇನು, ಆಗಷ್ಟೇ ನನ್ನ ಬೆಂಬಲ, ಕೌನ್ಸೆಲಿಂಗ್ ಮತ್ತು ಸ್ನೇಹವನ್ನು ಪಡೆದು ಬರಹ-ಬದುಕಿನಲ್ಲಿ ಉತ್ಸಾಹ ತುಂಬಿಕೊಂಡು ನನಗೆ ಉದ್ದಂಡ ನಮಸ್ಕಾರಗಳನ್ನು ಹಾಕಿದ್ದೇನು…. ಮೂರ್‍ನಾಲ್ಕು ಲೇಖಕರಂತೂ ಅವರ ಮೊದಲ ಪುಸ್ತಕ ಪ್ರಕಟಣೆಗಾಗಿ ನನ್ನನ್ನು ಬಳಸಿಕೊಂಡಿದ್ದೇನು, ಪುಸ್ತಕ ಪ್ರಕಟವಾದ ಮೇಲೆ ಸಿಕ್ಕಾಪಟ್ಟೆ ಹೊಗಳಿದ್ದೇನು, ನನ್ನ ಆ ಕಾಲದ ಸ್ನೇಹಿತ – ಸ್ನೇಹಿತೆಯರು ನನಗೆ ಆದರ್ಶ ಮತ್ತು ವಾಸ್ತವಗಳು ಬೇರೆ ಬೇರೆ ಎಂದು ಬಗಲಲ್ಲೇ ಕೂರಿಸಿಕೊಂಡು ತಿಳಿಹೇಳಿದ್ದೇನು, ಪ್ರೀತಿ-ಪ್ರೇಮ-ಕಾಮ-ಕ್ರೋಧಗಳ ಬಗ್ಗೆ ನನಗೆ ತಿಳಿಸಿದ್ದೇನು….
ನಿಮ್ಮಿಂದಲೇ ನನ್ನ ಮೊದಲ ವೃತ್ತಿ ಆರಂಭವಾಯ್ತು / ನನಗೆ ಹೊಸ ಬದುಕು ಸಿಕ್ಕಿತು ಎಂದು ಬರೆದ ಇಬ್ಬರು ಈಗ ಅತ್ಯುನ್ನತ ಹುದ್ದೆಗಳಲ್ಲಿದ್ದಾರೆ. ಅವನನ್ನು ಮದುವೆಯಾಗಲಾರೆ ಎಂದವರು ಅವನನ್ನೇ ಮದುವೆಯಾಗಿ ಸುಖವಾಗಿದ್ದಾರೆ! ಮದುವೆಯಾಗುವೆ ಎಂದವರೂ ಬೇರೆಯವರನ್ನು ಮದುವೆಯಾಗಿ ಸಂತೋಷದಿಂದಲೇ ಇದ್ದಾರೆ!! ಅವರ ಪತ್ರಗಳಲ್ಲೇ ಆ ಬಗ್ಗೆ ಸುಳಿವು ಸಿಕ್ಕವು. ಬದುಕು ಏನೆಲ್ಲ ವಿಪ್ಲವಗಳಿಗೆ ಸಿಲುಕುತ್ತದೆ, ಕಾಲವು ಹೇಗೆ ಎಲ್ಲವನ್ನೂ ಕೊಚ್ಚಿ ತನಗೆ ಬೇಕಾದ್ದನ್ನು ಮಾತ್ರ ಉಳಿಸಿಕೊಳ್ಳುತ್ತದೆ…. ನಾವು ಬೇಕು ಎಂದುಕೊಂಡ ಸಂಬಂಧಗಳನ್ನೂ ಅದು ತನ್ನದೇ ಕಾರಣ ಕೊಟ್ಟು ಹೊಸಕುತ್ತದೆ.
ಈ ಮಧ್ಯೆ ನನ್ನ ಕವನಗಳನ್ನು ಓದಿ ಪತ್ರ ಬರೆದು ಪ್ರೀತಿ ತೋರಿದ ನಾಗರಾಜ್ ಹೊನ್ನೂರು ಕಾರ್ಡ್ ಕಂಡಿತು. ದುರ್ದೈವ, ಆ ಭಾವುಕ ಪತ್ರಕರ್ತ (ಆಮೇಲೆ ಸೈಬರ್ ಕ್ರೈಮ್ ಪೊಲೀಸ್) ಈಗ ಇಲ್ಲ.
ಅಟ್ಟದ ಮೇಲೆಯೇ ವರ್ಷಗಟ್ಟಳೆ ಕಳೆಯುವ ಈ ಪತ್ರಗಳಿಗೆ, ಈ ಕಾಗದಗಳಿಗೆ ನಾನು ನೋಡುವವರೆಗೂ ಜೀವ ಇರುವುದೋ ಇಲ್ಲವೋ ಗೊತ್ತಿಲ್ಲ…. ನೋಡಿದಾಕ್ಷಣ ಗತಕಾಲದ ಆ ಎಲ್ಲ ಕ್ಷಣಗಳನ್ನೂ ಚಕಚಕನೆ ಸಿನೆಮಾ ದೃಶ್ಯಗಳಂತೆ ಮರುರೂಪಿಸುತ್ತವೆ. ಸರಾಸರಿಯಾಗಿ ನೋಡುವುದಾದರೆ, ನನ್ನ ಭಾವುಕತೆಯನ್ನು ಪ್ರಶ್ನಿಸಿ `ಆದರ್ಶ – ವಾಸ್ತವ’ದ ಬಗ್ಗೆ ನನಗೆ ಬುದ್ಧಿವಾದ ಹೇಳಿ ತಿದ್ದಲು ಯತ್ನಿಸಿದ ಪತ್ರಗಳೇ ನೂರಾರು. ಅವೆಲ್ಲ ಜೀವಗಳಿಗೂ ನಾನು ಹೇಗೆ ಕೃತಜ್ಞತೆಗಳನ್ನು ಸಲ್ಲಿಸಲಿ? ಆದರೂ ಭಾವುಕತೆಯೇ ಮೇಲುಗೈ ಸಾಧಿಸಿರಬೇಕು; ಅದಿಲ್ಲವಾದರೆ ೩೦ – ೩೫ ವರ್ಷಗಳ ಹಿಂದಿನ ಪತ್ರಗಳನ್ನು ನಾನು ಉಳಿಸಿಕೊಳ್ಳುವುದಾದರೂ ಏಕೆ? ನನಗೆ ಕಾಗದ ಬರೆದ ಇವರ ಬಳಿ ಈ ಕಾಲಘಟ್ಟದ ಕಾಗದಗಳು ಇನ್ನೂ ಭದ್ರವಾಗಿವೆಯೆ? ನನಗೆ ಅನುಮಾನವಿದೆ.
ಈ ಕಾಗದಗಳನ್ನು ಹರಿದುಬಿಟ್ಟರೆ ಎಲ್ಲ ಸಂಬಂಧಗಳೂ, ನನ್ನ ಆ ಅನಾಥ ದಿನಗಳ ಒಳಗುಟ್ಟುಗಳೂ, ನಾನು ಎದುರಿಸಿದ ವೈಯಕ್ತಿಕ ಸಮಸ್ಯೆಗಳೂ – ಎಲ್ಲವೂ ಇಲ್ಲವಾಗುವವೆ? ಅಥವಾ ಹೀಗೆ ಬರೆದೇ ನನ್ನ ಖಾಸಾತನವನ್ನು ಕಳೆದುಕೊಂಡೆನೆ? ನನಗೆ ಗೊತ್ತಿಲ್ಲ. ಮೊದಲು ಕೇವಲ ಪತ್ರಗಳನ್ನು ಬರೆದೇ ತೆರೆದುಕೊಳ್ಳುತ್ತಿದ್ದ ನಾನು, ನನ್ನಂಥವರು ಈಗ ಯೂಟ್ಯೂಬ್ ಮೊರೆಹೋಗುತ್ತಿರೋದು ನನ್ನದೇ ವಿಶೇಷವೋ, ಎಲ್ಲರ ಸಮಸ್ಯೆಯೋ – ಎಂಬುದೂ ಗೊತ್ತಿಲ್ಲ. ಆಗ ತಿಂಗಳುಗಳ / ವರ್ಷಗಳ ಕಾಲ ತೆಗೆದುಕೊಳ್ಳುತ್ತಿದ್ದ ಸಂಬಂಧಗಳ ಹುಟ್ಟು ಸಾವು ಈಗ ಸಮಾಜತಾಣಗಳಲ್ಲಿ ಕ್ಷಣಮಾತ್ರದಲ್ಲಿ ನಡೆಯುತ್ತಿವೆ ಎಂಬುದೊಂದು ದೊಡ್ಡ ವ್ಯತ್ಯಾಸವನ್ನು ಮಾತ್ರ ನಾನು ಕಂಡೆ.
ಈ ಏರಿಳಿತಗಳ ಬದುಕಿನ ಬಗೆಗೆ, ಕಳೆದುಕೊಂಡವರ-ಉಳಿದುಕೊಂಡವರ ಬಗೆಗೆ, ದೂರವಿದ್ದೂ ಹತ್ತಿರವೆನಿಸುವ, ಹತ್ತಿರವಿದ್ದೂ ದೂರವಾಗಿರುವವರ ಬಗೆಗೆ ನನಗೆ ಈ ಕ್ಷಣ ಏನೂ ಅನಿಸುತ್ತಿಲ್ಲ. ನಗರದ ಜಂಜಡದಿಂದ ದೂರವಾಗಿರುವ ನಾನು ಒಳಗಣ ಭಾವುಕತೆಯನ್ನು ಹೊರಗಣ ಲೌಕಿಕ ಕೆಲಸಗಳಿಂದ ಕಟ್ಟಿ ಹಾಕಿ ಆರಾಮಾಗಿದ್ದೇನೆ. ಈ ಬ್ಲಾಗ್ ಬರೆಯುವಂತೆ ಮಾಡಿದ ಸುಲ್ತಾನ್ ಖಾನರ ಸಾರಂಗಿಯ ಯಮನ್, ಈಗಲಾದರೂ ನಿನ್ನ ಹೊರಗಣ ಹರಗಣಗಳನ್ನು ಬದಿಗಿಟ್ಟು ಒಳಗಣ ನೋಟದಲ್ಲಿ ಶುದ್ಧಿ ಮಾಡಿಕೋ ಎಂದ ಝಿಯಾ ಮೊಹಿಯುದ್ದೀನ್ ಡಾಗರ್‌ರ ರುದ್ರವೀಣೆಯ ಧ್ರುಪದ್ ಯಮನ್ – ಇವಿಷ್ಟೇ ಈ ಹೊತ್ತಿನ ವಾಸ್ತವ ಮತ್ತು ನನ್ನನ್ನು ರಿವೈಂಡ್ ಮಾಡುವ ತರಂಗಗಳು.
ನನ್ನ ಬದುಕಿನ ತರಂಗಗಳಲ್ಲಿ ಹೊಸಬೆಳಕಾಗಿದ್ದ ನನ್ನ ಗುರುಗಳು ನನ್ನ ಅಕ್ಕ ತೀರಿಕೊಂಡ ಮಹಾನವಮಿಯಂದೇ (ಕಳೆದ ಅಕ್ಟೋಬರ್ ೧೦) ಅಗಲಿದ್ದು ಕೂಡಾ – ಶಿವರಾಮು ಹೇಳಿದಂತೆ – ಯಾವುದೋ ತಯಾರಿಗೇ ಇರಬೇಕು/ ನಮ್ಮ ನೋವನ್ನು ಮರೆಯಲಾದರೂ ಹಾಗೇ ಅಂದುಕೊಳ್ಳಬೇಕು. ಅದಿಲ್ಲವಾದರೆ, ಈ ಬ್ಲಾಗ್ ಮುಗಿಸುವ ಒಂದರಗಳಿಗೆ ಮುನ್ನ ಬಂದ ಕರೆಯಲ್ಲಿ `ಮಗಳು ಹುಟ್ಟಿದ್ದಾಳೆ’ ಎಂಬ ಸುದ್ದಿಯಾದರೂ ಯಾಕೆ ಬರಬೇಕು ಹೇಳಿ?
ಹೃದಯಮಾರ್ದವದಲ್ಲಿ ಮಿಂದ ನೆನಪುಗಳೀಗ
ವರ್ತಮಾನದ ಬಿಸಿಲು ಕಾಯುತ್ತಿವೆ.
ನೆಲಕ್ಕಿಳಿದ ಭೂತಾಂಶಗಳ ಹೀರಿದ ನನ್ನ
ಭವಿಷ್ಯದ ಬೇರು ಚಿಗುರುತ್ತಿದೆ.