ಮೇ 28: ಸಾವರ್‌ಕರ್ ಜನ್ಮದಿನ. ಅವರಿಗೆ ನನ್ನ ನಮನ. ಸಾವರ್‌ಕರ್ ಜನ್ಮದಿನ. ಅವರಿಗೆ ನನ್ನ ನಮನ.
ವೈಭವ್ ಪುರಂಧರೆ ಬರೆದ ಸಾವರ್‌ಕರ್: ದ ಟ್ರೂ ಸ್ಟೋರಿ ಆಫ್ ದ ಫಾದರ್ ಆಫ್ ಹಿಂದುತ್ವ ಪುಸ್ತಕವನ್ನು (SAVARKAR: THE TRUE STORY OF THE FATHER OF HINDUTVA : VAIBHAV PURANDHARE / Juggernaut, 2019) ಇವತ್ತಷ್ಟೇ ಓದಿ ಮುಗಿಸಿದೆ. ಸ್ವತಃ ಮರಾಠಿ ಬಲ್ಲ ಪುರಂಧರೆ ಅವರು ಮರಾಠಿ ಭಾಷೆಯಲ್ಲಿದ್ದ ಆಕರಗಳನ್ನೂ ಹುಡುಕಿ, ಸಂಶೋಧಿಸಿ ಈ ಪುಸ್ತಕ ಬರೆದಿದ್ದಾರೆ. ಆದ್ದರಿಂದಲೇ ನನ್ನ ಮಟ್ಟಿಗೆ ಇದು ಸಾವರ್‌ಕರ್ ಅವರ ಕುರಿತ ಅಧಿಕೃತ ಪುಸ್ತಕ. ಈ ಪುಸ್ತಕದಲ್ಲಿ ಇರುವ ಕೆಲವು ಮಾಹಿತಿಗಳನ್ನು ನನ್ನ ಅಭಿಪ್ರಾಯಗಳೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
(ಇತ್ತೀಚೆಗೆ ಬಂದ ವಿಕ್ರಂ ಸಂಪತ್ ಅವರ “ಸಾವರ್‌ಕರ್: ಎಕೋಸ್ ಫ್ರಂ ಎ ಫಾರ್ಗಾಟನ್ ಪಾಸ್ಟ್: ೧೮೮೩-೧೯೨೪ʼ (Penguin, 2019) ಪುಸ್ತಕವನ್ನೂ ಓದಿದ್ದೇನೆ)
ಡಾ. ಬಿ ಆರ್ ಅಂಬೇಡ್ಕರ್ ಅವರ ಜಾತಿವಿರೋಧಿ ಸತ್ಯಾಗ್ರಹಕ್ಕೆ ಸಾವರ್‌ಕರ್ ಬೆಂಬಲ ಕೊಟ್ಟಿದ್ದರು. ಹಲವಾರು ಅಂತರಜಾತೀಯ ಭೋಜನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಚಾತುರ್ವಣ್ಯ ವ್ಯವಸ್ಥೆಯಲ್ಲಿ ಸಾವರ್‌ಕರ್‌ಗೆ ನಂಬಿಕೆ ಇರಲಿಲ್ಲ,
ಸ್ವಯಂಘೋಷಿತ ಟೌನ್‌ಹಾಲ್ ಬುದ್ಧಿಜೀವಿಗಳಿಗೆ ಗೋಮಾಂಸ ಭಕ್ಷಣೆ ತಪ್ಪೇನಲ್ಲ ಎಂದ, ಜಾತಿ ಪದ್ಧತಿ ಮತ್ತು ವರ್ಣವ್ಯವಸ್ಥೆಯೇ ಬೇಡ ಎಂದು ವಾದಿಸಿದ್ದ ಹೋರಾಡಿದ್ದ ಸಾವರ್‌ಕರ್‌ಗಿಂತ ಚಾತುರ್ವಣ್ಯದಲ್ಲಿ ನಂಬಿಕೆ ಇಟ್ಟಿದ್ದ, ಗೋಹತ್ಯೆ ನಿಷೇಧ ಬೆಂಬಲಿಸಿದ್ದ ಮಹಾತ್ಮಾ ಗಾಂಧಿಯವರು ಹೆಚ್ಚು ಪ್ರಿಯವಾಗುತ್ತಾರೆ ಎಂಬುದೇ ಈ ಕಾಲದ ಕ್ರೌರ್ಯ.
ಈಗ ಕೆಲವರು ವಾದಿಸುತ್ತಿರುವಂತೆ ಮಾರ್ಕ್ಸಿಸ್ಟ್ ಚಿಂತನೆ ಹೊಂದಿದ್ದ ಕ್ರಾಂತಿಕಾರಿ ಭಗತ್‌ಸಿಂಗ್ ಅವರೇ ಸಾವರ್‌ಕರ್ ಅವರು ಬರೆದ ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟದ ಪುಸ್ತಕದ ಇಂಗ್ಲಿಶ್ ಆವೃತ್ತಿಯನ್ನು ಲಾಹೋರಿನಲ್ಲಿ ಪ್ರಕಟಿಸಿದರು. ಆಗಲೂ ಅವರು ಎಚ್‌ಎಸ್‌ಆರ್‌ಎ ಮೂಲಕ ಕ್ರಾಂತಿಗೆ ಮುಂದಾಗಿದ್ದರು. ಎಚ್‌ಎಸ್‌ಆರ್‌ಎ ಸಂಘಟನೆಯನ್ನು ಸಾವರ್‌ಕರ್ ಕೂಡಾ ಮೆಚ್ಚಿದ್ದರು.
ಸಾವರ್‌ಕರ್ ಅವರ ಈ ಪುಸ್ತಕವು ಪ್ರಕಟಣೆಗಿಂತಲೂ ಮೊದಲೇ ನಿಷೇಧಕ್ಕೆ ಒಳಗಾದ ಇಪ್ಪತ್ತನೆಯ ಶತಮಾನದ ಮೊದಲ ಪುಸ್ತಕವಾಯಿತು! ( ಬೇ.ಸು: ಆಗ ಅಭಿವ್ಯಕ್ತಿ ಸ್ವಾತಂತ್ರ್ಯದ ವಕ್ತಾರರು ಹುಟ್ಟಿರಲಿಲ್ಲ ತಾನೆ?) ಇಂಗ್ಲೆಂಡಿನಿಂದ ಭಾರತಕ್ಕೆ ಬಂದಮೇಲೆ ಜವಹರಲಾಲ್ ನೆಹರೂ ಅವರೇ ಈ ಪುಸ್ತಕವು ಬ್ರಿಟಿಶರ ಅಪಪ್ರಚಾರಕ್ಕೆ ಸೂಕ್ತ ಪರಿಹಾರ ನೀಡುವ ಪುಸ್ತಕ ಎಂದು ಬಣ್ಣಿಸಿದ್ದರು.
ಗೋಪೂಜೆಗಿಂತ ಗೋರಕ್ಷಣೆ ನಮ್ಮ ದೇಶದ ಕೃಷಿ ವ್ಯವಸ್ಥೆಗೆ ಮುಖ್ಯ ಎಂಬ ವಾದ ಸಾವರ್‌ಕರ್ ಅವರದಾಗಿತ್ತು. ಮಾಂಸಾಹಾರಕ್ಕೆ ಅವರೆಂದೂ ವಿರೋಧ ವ್ಯಕ್ತಪಡಿಸಲಿಲ್ಲ. ಚಿತ್ಪಾವನ ಬ್ರಾಹ್ಮಣ ಜಾತಿಗೆ ಸೇರಿಯೂ ಅವರು ಸಸ್ಯಾಹಾರಿ ಆಗಿ ಉಳಿಯಲಿಲ್ಲ.
೧೯೩೭ರವರೆಗೆ ಬಾಂಬೆ ಪ್ರಾಂತದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪತನವಾಗಿ ಕಾಂಗ್ರೆಸೇತರ ಸರ್ಕಾರ ಬಂದಮೇಲೆಯೇ ಸಾವರ್‌ಕರ್ ಸೋದರರಿಗೆ ಗೃಹಬಂಧನದಿಂದ ಬಿಡುಗಡೆ ಆಯಿತು.
ಕಾಂಗ್ರೆಸಿಗಿಂತ ಇಪ್ಪತ್ತು ವರ್ಷ ಮೊದಲೇ ಸಂಪೂರ್ಣ ಸ್ವಾತಂತ್ರ್ಯದ ಬೇಡಿಕೆ ಇಟ್ಟವರು ಸಾವರ್‌ಕರ್.
೫೦ ರ ದಶಕದಲ್ಲಿ ಬರಗಾಲ ಬಂದಾಗ ಬ್ರಾಹ್ಮಣರು, ಬೌದ್ಧರು, ಜೈನರು ಮತ್ತು ಇತರೆ ಸಸ್ಯಾಹಾರಿಗಳು ಮೀನು ಮೊಟ್ಟೆ ತಿನ್ನೋದಕ್ಕೆ ಶುರು ಮಾಡಿದರೆ ಆಹಾರದ ಕೊರತೆ ಕಡಿಮೆಯಾಗುತ್ತದೆ ಎಂದಿದ್ದ ಸಾವರ್‌ಕರ್ ಜನರನ್ನು ಅವರು ತಿನ್ನುವ ಆಹಾರದ ಆಧಾರದಲ್ಲಿ ಗುರುತಿಸಬಾರದು ಎಂದೇ ನಂಬಿದ್ದರು. ತನ್ನ ಮಗ ವಿಶ್ವಾಸ್‌ಗೆ ಅವರು ಜನಿವಾರ ಧಾರಣೆ ಮಾಡಿಸಲಿಲ್ಲ.
ಪತ್ನಿ ಯಮುನಾ ಅವಾರು ತೀರಿಕೊಂಡಾಗ ಯಾವುದೇ ಸಾಂಪ್ರದಾಯಿಕ ಆಚರಣೆಗಳೂ ಬೇಡ ಎಂದರು. ಮಗ ವಿಶ್ವಾಸ ಅವರು ಅಪ್ಪನ ಮಾತು ಕೇಳದೆಯೇ ಅವುಗಳನ್ನು ಆಚರಿಸಿದಾಗ ವಿರೋಧಿಸಲಿಲ್ಲ; ಅದು ಅವನ ವೈಯಕ್ತಿಕ ಹಕ್ಕು ಎಂಬುದು ಅವರ ನಿಲುವಾಗಿತ್ತು.
`ನನ್ನ ದೇಹದ ಬೂದಿ ಗಾಳಿಯಲಿ ತೇಲಿಬಿಡಿʼ ಎಂದು ಅವರು ಹೇಳಲೇ ಇಲ್ಲ! ಯಾವುದೇ ಸಾಂಪ್ರದಾಯಿಕ ಆಚರಣೆಗಳೂ ಇಲ್ಲದೆ ತನ್ನನ್ನು ಸುಡಬೇಕು ಎಂದು ಅವರು ತಾಕೀತು ಮಾಡಿದ್ದರು. ಅದರಂತೆಯೇ ಅವರ ದೇಹವನ್ನು ಸುಡಲಾಯಿತು. ಆಗ ಕಾಗೆಗಳಿಗೆ ಪಿಂಡವನ್ನೂ ಇಡಲಿಲ್ಲ; ಮಂತ್ರಗಳ ಉಚ್ಚಾರಣೆಯೂ ಇರಲಿಲ್ಲ.
ಅವರು ಅಂಡಮಾನ್ ಸೆರೆಮನೆಯಿಂದ ಕ್ಷಮಾದಾನಕ್ಕಾಗಿ ಹಲವು ಸಲ ಬ್ರಿಟಿಶರಿಗೆ ಪತ್ರ ಬರೆದಿದ್ದು ರಹಸ್ಯ ಕಾರ್ಯಾಚರಣೆಯೇನೂ ಆಗಿರಲಿಲ್ಲ. 1920ರಲ್ಲಿ ಮಹತ್ಮಾ ಗಾಂಧಿಯವರೇ ಸಾವರ್‌ಕರ್ ಸೋದರರ ಬಿಡುಗಡೆ ವಿಳಂಬ ಏಕೆ ಎಂದು ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಪ್ರಶ್ನಿಸಿದ್ದರು.
ಕಾಕೋರಿ ದರೋಡೆ ಪ್ರಕರಣದ ಆರೋಪಿಗಳಾದ ರಾಮಪ್ರಸಾದ್ ಬಿಸ್ಮಿಲ್, ರೋಶನ್ ಸಿಂಗ್, ರಾಜೇಂದ್ರ ಲಾಹಿರಿ ಮತ್ತು ಅಶ್ಫಾಕ್ ಉಲ್ಲಾ ಖಾನ್ – ನಾಲ್ವರೂ ಸಾವರ್‌ಕರ್ ಸಲ್ಲಿಸಿದಂತೆಯೇ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರನ್ನು ಯಾರೂ ದೇಶದ್ರೋಹಿಗಳು ಎಂದು ಕರೆಯಲಿಲ್ಲ. (ಸಾವರ್‌ಕರ್ ಮೇಲೆ ಮಾತ್ರ ಈ ಆರೋಪ ಹೊರಿಸುವ ಕ್ಷುದ್ರಜೀವಿಗಳು ಇದ್ದಾರೆ!)
ಸಾವರ್‌ಕರ್ ತಮ್ಮನ್ನು ಬಾರತಕ್ಕೆ ಕರೆದೊಯ್ಯುತ್ತಿದ್ದ ಹಡಗಿನಿಂದ ತಪ್ಪಿಸಿಕೊಂಡು ಮಾರ್ಸೇಲ್ಸ್ ದಡದಲ್ಲಿ ಫ್ರಾನ್ಸ್ ಗಡಿ ದಾಟಿದ್ದರೂ ಬ್ರಿಟಿಶರಿಗೆ ಸೆರೆ ಸಿಕ್ಕಿದ ಕತೆ ನಿಮಗೆಲ್ಲ ಗೊತ್ತೇ ಇದೆ. ಈ ವಿಷಯದಲ್ಲಿ ಸಾವರ್‌ಕರ್ ಪರವಾಗಿ ತೀವ್ರವಾದ ಪ್ರಚಾರ ಮಾಡಿದವರು ಜೀನ್ ಲಾಂಗ್ವೆಟ್. ಈತ ಬೇರಾರೂ ಅಲ್ಲ, ಮಾರ್ಕ್ಸಿಸಂ ಸಿದ್ಧಾಂತವನ್ನು ರೂಪಿಸಿದ ಕಾರ್ಲ್ ಮಾರ್ಕ್ಸ್ ಅವರ ಮೊಮ್ಮಗ! ತನ್ನ ಎಲ್ʼಹ್ಯೂಮಾನೈಟ್ ಪತ್ರಿಕೆಯಲ್ಲಿ ಸಾವರ್‌ಕರ್ ಬಂಧನದ ವಿರುದ್ಧ ಹಲವು ಲೇಖನಗಳನ್ನು ಬರೆದರು. ಫ್ರಾನ್ಸಿನ ಸಮಾಜವಾದಿ ಮಾಧ್ಯಮಗಳು ಸಾವರ್‌ಕರ್ ಅವರನ್ನು ಫರಾನ್ಸಿನ ನೆಲದಲ್ಲಿ ಬಂಧಿಸಿದ್ದು ತಪ್ಪೆಂದು ವಾದಿಸಿ ಅಭಿಯಾನವನ್ನೇ ನಡೆಸಿದವು. (ಹೇಗ್ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಲಾಂಗ್ವೆಟ್ ಅವರೇ ಅತಿ ದೀರ್ಘವಾದ ಪತ್ರ ಬರೆದು ವಕಾಲತ್ತು ಮಾಡಿದರು ಎಂಬ ವಿವರಗಳು ವಿಕ್ರಂ ಸಂಪತ್ ಬರೆದ ಪುಸ್ತಕದಲ್ಲಿ ಇದೆ).
ಅಂಡಮಾನಿಗೆ ಹೋಗುವ ಮುನ್ನ ಹಿಂದು – ಮುಸ್ಲಿಂ ಸಂಘಟಿತ ಹೋರಾಟದ ಪರವಾಗಿದ್ದ ಸಾವರ್ಕರ್ ಅಲ್ಲಿಂದ ವಾಪಸಾಗುವ ಹೊತ್ತಿಗೆ ಮುಸ್ಲಿಮರನ್ನು ದೂರ ಇಡುವ ಮನಸ್ಥಿತಿಗೆ ಬಂದಿದ್ದರು. ಅದಕ್ಕೆ ಅಂಡಮಾನಿನಲ್ಲಿ ಅವರನ್ನು ಮತ್ತು ಅವರಂತಹ ಹಲವರನ್ನು ದಂಡಿಸಲು ನೇಮಕವಾಗಿದ್ದ ಮುಸ್ಲಿಂ ಸಮುದಾಯದವರ ತೀವ್ರ ಹಿಂಸೆಯೇ ಕಾರಣ ಎಂಬ ವಾದವಿದೆ. ಅದೇನೇ ಇದ್ದರೂ, ಹಿಂದು ಮಹಾಸಭಾ ರಾಜಕೀಯ ಪಕ್ಷವಾಗಿ ಮುಸ್ಲಿಂ ಲೀಗ್ ಜೊತೆ ಹಲವು ಪ್ರಾಂತಗಳಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಭಾಗಿಯಾಗಿತ್ತು ಎಂಬುದೂ ವಾಸ್ತವ.
೧೯೦೫ ರ ಅಕ್ಟೋಬರ್ ೮ ರಂದು ಪುಣೆಯಲ್ಲಿ ಸಾವರ್‌ಕರ್ ನೇತೃತ್ವದಲ್ಲಿ ನಡೆದ ವಿದೇಶಿ ಬಟ್ಟೆಗಳ ದಹನ ಕಾರ್ಯಕ್ರಮವೇ ಸ್ವದೇಶಿ ಚಳವಳಿಯ ದೇಶದ ಮೊಟ್ಟಮೊದಲ ಘಟನೆ. ಫರ್ಗುಸನ್ ಕಾಲೇಜಿನ ಬಳಿ ಆರಂಭವಾದ ಸ್ವದೇಶಿ ಚಳವಳಿಯ ಮೆರವಣಿಗೆಯಲ್ಲಿ ಬಾಲಗಂಗಾಧರ ತಿಲಕರೂ ಭಾಗಿಯಾದರು. ಕೊನೆಗೆ ಈ ಗುಂಪಿನಲ್ಲಿ ೫ ಸಾವಿರಕ್ಕೂ ಹೆಚ್ಚು ಜನ ಇದ್ದರು. ಈ ಘಟನೆಯಿಂದಾಗಿ ಕಾಲೇಜು ಆಡಳಿತ ವರ್ಗವು ಅವರಿಗೆ ೧೦ ರೂ. ದಂಡ ವಿಧಿಸಿ ಹಾಸ್ಟೆಲ್‌ನಿಂದ ಹೊರಹಾಕಿತು.
ಲಂಡನ್‌ನಲ್ಲಿ ನಡೆದ ಗಾಂಧಿ – ಸಾವರ್‌ಕರ್ ಭೇಟಿಯ ಸಂದರ್ಭದಲ್ಲಿ ಇಬ್ಬರೂ ಪರಸ್ಪರ ಗೌರವ ಹೊಂದಿದ್ದರು.
ಲೈಂಗಿಕ ಅಪೇಕ್ಷೆ ಎಂಬುದು ನೈಸರ್ಗಿಕ, ಅದನ್ನು ಅನುಭವಿಸುವುದರಲ್ಲಿ ತಪ್ಪಿಲ್ಲ ಎಂಬುದು ಸಾವರ್‌ಕರ್ ವಾದವಾಗಿತ್ತು.
ಪು ಲ ದೇಶಪಾಂಡೆಯವರಂತಹ ಎಡಪಂಥೀಯ, ಹಿಂದುತ್ವ ವಿರೋಧಿ ಸಾಹಿತಿಯೇ ಸಾವರ್‌ಕರ್ ದೈತ್ಯ ವ್ಯಕ್ತಿತ್ವದವರು, ಅವರ ಮೇಲೆ ಎಂತಹ ಅಪಪ್ರಚಾರ, ವಿಷಪೂರಿತ ದಾಳಿ ನಡೆದರೂ ಫಲ ನೀಡುವುದಿಲ್ಲʼ ಎಂದಿದ್ದರು.
ಹಾಗೆ ಚರ್ಚೆ ಮಾಡುವುದೇ ಆಗಿದ್ದರೆ ಗಾಂಧಿ ಹತ್ಯೆಗಿಂತ ೧೦ ದಿನಗಳ ಮುಂಚೆ ಗಾಂಧಿಯವರಿದ್ದ ಸ್ಥಳಕ್ಕೆ ಹತ್ತಿರದಲ್ಲೇ ಬಾಂಬ್ ಸ್ಫೋಟ ಮಾಡಿದವನು (ಮದನಲಾಲ್ ಪಹವಾ) ಗೋಡ್ಸೆ ಮತ್ತಿತರ ಆರೋಪಿಗಳ ಜೊತೆಗೇ ವಾಸವಾಗಿದ್ದರೂ, ಅವನ ಈ ಎಲ್ಲ ಸಹಚರರ ಮಾಹಿತಿ ಸಂಪೂರ್ಣವಾಗಿ ಸರ್ಕಾರಕ್ಕೆ ಸಿಕ್ಕಿದ್ದರೂ ಪೊಲೀಸರು ಏಕೆ ಗೋಡ್ಸೆ, ಆಪ್ಟೆ, ಬಾಡಗೆ, ಕಿಸ್ತಾಯ ಮುಂತಾದವರನ್ನು ಜನವರಿ ೨೧ ರಂದೇ ವಶಕ್ಕೆ ತೆಗೆದುಕೊಳ್ಳಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ ಮುಂದುವರಿಯಬೇಕು! (ಆಫ್‌ಕೋರ್ಸ್, ಸಾವರ್‌ಕರ್ ಅವರ ಚಿಂತನೆಗಳಿಂದ ಪ್ರಭಾವಿತರಾಗಿದ್ದಾರೆ ಎಂದು ಸರ್ದಾರ್ ವಲ್ಲಭಭಾಯ್ ಪಟೇಲ್ ಹೇಳುವುದನ್ನೂ ಈ ಪುಸ್ತಕದಲ್ಲಿ ಕಾಣಬಹುದು).(ಪುಸ್ತಕ ಮಾಹಿತಿ ಆಧಾರಿತ ನನ್ನ ಅನಿಸಿಕೆ)
ಅಂಡಮಾನಿನ ಕರಿನೀರಿನ ಶಿಕ್ಷೆ (ಕಾಲಾಪಾನಿ) ಬಗ್ಗೆ ಹೆಚ್ಚು ಉಲ್ಲೇಖಿಸಲಾರೆ; ಅದನ್ನು ಬರೆಯಲು ನನಗೆ ಮನಸ್ಸಿಲ್ಲ. ಒಂದೇ ಮಾತು: ಸಾವರ್‌ಕರ್ ಮತ್ತು ಅವರಂತಹ ಸಾವಿರಾರು ಹೋರಾಟಗಾರರು ಅನುಭವಿಸಿದ ಯಾತನೆಯ ಶೇಕಡಾ .೦೦೧ ರಷ್ಟನ್ನೂ ಅನುಭವಿಸಲಾಗದ ಹೇಡಿಗಳು ಮಾತ್ರವೇ ಸಾವರ್‌ಕರ್ ಅವರನ್ನು ಟೀಕಿಸಬಹುದು. ಸ್ವತಂತ್ರ ಭಾರತದ ನ್ಯಾಯಾಲಯವೇ ತೀರ್ಪು ಕೊಟ್ಟರೂ ಭಯೋತ್ಪಾದಕರನ್ನು ನೇಣಿಗೆ ಹಾಕಬಾರದು ಎಂದೆಲ್ಲ ವಾದಿಸುವವರೂ ಇರುವ ಈ ಕಾಲ ಎಲ್ಲಿ? ತನಗೆ ಬೇಕಾದಂತೆ ಕಾನೂನನ್ನೇ ತಿರುಚಿ ಎರಡು ಅವಧಿಯ ಕರಿನೀರಿನ ಶಿಕ್ಷೆ (ಒಟ್ಟು ೫೦ ವರ್ಷಗಳು) ನೀಡಿದ ಬ್ರಿಟಿಶ್ ಸರ್ಕಾರದ ಕಾಲ ಎಲ್ಲಿ? ( ಈ ಪ್ಯಾರಾ ನನ್ನ ಅನಿಸಿಕೆ)
ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಬಾಲ್ಯದಿಂದಲೂ ಸಾವರ್‌ಕರ್ ಅವರನ್ನು ನೋಡಿದ್ದಾರೆ; ಅವರ ಸಹವಾಸದಿಂದಾಗಿ ತನ್ನ ಗಾಯನವನ್ನೂ ಬಿಟ್ಟು ಸಾವರ್‌ಕರ್ ಅನುಯಾಯಿ ಆಗಲು ಹೊರಟಿದ್ದರಂತೆ. ಸಾವರ್‌ಕರ್ ಅವರೇ ಆಕೆಯನ್ನು ಗಾಯನ ವೃತ್ತಿ ತೊರೆಯದಂತೆ ಮನ ಒಲಿಸಿದರು.
ಭಾಷಾ ಶುದ್ಧಿ ತುಂಬಾ ಮುಖ್ಯ ಎಂದು ತಮ್ಮ ಮಾತೃಭಾಷೆಯಾದ ಮರಾಠಿಯನ್ನು ಶುದ್ಧೀಕರಿಸಲು ಸಾವರ್‌ಕರ್ ಸಾಕಷ್ಟು ಶ್ರಮಿಸಿದರು. ಅನುವಾದಕ್ಕೆ ಆದ್ಯತೆ ನೀಡಬೇಕು, ಭಾರತೀಯ ಭಾಷೆಗಳಲ್ಲಿ ವಿಜ್ಞಾನ ಪದಕೋಶ ರಚಿಸಬೇಕು ಎಂದು ಅವರು ಪ್ರತಿಪಾದಿಸಿದ್ದರು. ಸಾಹಿತ್ಯ ಸಮ್ಮೇಳನದಲ್ಲೇ ʼಪೆನ್ನು ಬದಿಗಿಟ್ಟು ಗನ್ನು ಕೈಗೆತ್ತಿಕೊಳ್ಳಿʼ ಎಂದು ಕರೆ ಕೊಟ್ಟಿದ್ದರು. ʼಸದ್ಯದ ಮಟ್ಟಿಗೆ ಸಾಹಿತ್ಯ ಬಿಟ್ಹಾಕಿ, ದೇಶದ ಆತ್ಮವೇ ನಾಶವಾದರೆ ಸಾಹಿತ್ಯ ಉಳಿಯುವುದೇ ಇಲ್ಲʼ ಎಂದು ಘೋಷಿಸಿದ್ದರು.
ನಾನು ಪುಸ್ತಕದ ವಿಮರ್ಶೆಗೆ ಹೋಗಿಲ್ಲ. ಅದರಲ್ಲಿರುವ ಕೆಲವೇ ಅಂಶಗಳನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ಸಾವರ್‌ಕರ್ ವಿರುದ್ಧ ಸುಳ್ಳಿನ ಸರಮಾಲೆಯನ್ನೇ ಪೋಣಿಸುವ ಸಂಚಿನ ಯುಗದಲ್ಲಿ ನಾವು ಅವರ ನಿಜ ವ್ಯಕ್ತಿತ್ವವನ್ನು ಅರಿಯುವ ಅಗತ್ಯವಿದೆ. ಒಬ್ಬ ವ್ಯಕ್ತಿಯನ್ನು ಅವರ ಉತ್ತಮ ಮತ್ತು ಉತ್ತಮವಲ್ಲದ ಸ್ವಭಾವಗಳಿಂದಲೇ ಅಳೆಯಬೇಕೇ ವಿನಃ ಉತ್ಪ್ರೇಕ್ಷೆಯ ಮಾತುಗಳಿಂದಲ್ಲ. ನಮ್ಮಲ್ಲಿ ವಿವಾದಗಳು ಹುಟ್ಟುವುದೇ ಇಂತಹ ವ್ಯಕ್ತಿತ್ವಗಳನ್ನು ನಮಗೆ ಬೇಕಾದ ಹಾಗೆ ರೂಪಿಸಿಕೊಳ್ಳುವುದರಿಂದ. ಪ್ರಖ್ಯಾತ ಕವಿಯೊಬ್ಬರು ಕುಖ್ಯಾತ ಜಿಪುಣರೂ ಆಗಿದ್ದರಂತೆ. ಅದನ್ನು ಒಪ್ಪಿಕೊಂಡೇ ಮುಂದುವರಿಯಬೇಕಷ್ಟೆ. ಹಾಗೆಯೇ ಸಾವರ್‌ಕರ್, ಗಾಂಧೀಜಿ, ಅಂಬೇಡ್ಕರ್ ವಿರುದ್ಧದ ಯಾವುದೇ ಅಪಪ್ರಚಾರವನ್ನೂ ನಾವು ಸಹಿಸಕೂಡದು. ವಾಸ್ತವವನ್ನು ಅದು ಇದ್ದಂತೆ ಒಪ್ಪಿಕೊಳ್ಳದೇ ಹೋದಲ್ಲಿ ಮುಂದಿನ ದಿನಗಳಲ್ಲೂ ಅರ್ಥಹೀನ ಹೊಡೆದಾಟದಲ್ಲೇ ನಾವಿರುತ್ತೇವೆ. ( ಈ ಪ್ಯಾರಾ ನನ್ನ ಅನಿಸಿಕೆ)
ಗಮನಿಸಿ: ಪ್ಯಾಪಿಲೋನ್ ಬರೆದ ಹೆನ್ರಿ ಶಾರೆರ್ ಒಬ್ಬನೇ ಮಾಜಿ ಖೈದಿ ಆಗಿರಲಿಲ್ಲ. ಆದರೆ ಆತನಿಗೆ ಬರವಣಿಗೆ ಮಾಡುವುದು ಹೇಗೋ ಸಿದ್ಧಿಸಿತ್ತು. ಅವನಿಂದ ನಮಗೆ ಭೂಗತ ಜಗತ್ತಿನ ಚಿಂತನೆಗಳು, ಜೀವನ ಚಿತ್ರಗಳು ಸಿಕ್ಕಿದವು. ಕೇರಳದ ಜಮೀಲಾ ಎಂಬ ಲೈಂಗಿಕ ಕಾರ್ಯಕರ್ತೆಯೊಬ್ಬರೇ ಅಂತಹ ಅನುಭವಗಳನ್ನು ಹೊಂದಿರಲಿಲ್ಲ. ಅವರು ಅವೆಲ್ಲ ವಿಚಾರಗಳನ್ನು ಬರೆದಿದ್ದರಿಂದಲೇ ನಮಗೆ ಆ ವಲಯದ ಮಾಹಿತಿಗಳು ಸಿಕ್ಕಿದವು. ಬೆನ್ನಿ ಬೆನ್ಯಾಮಿನ್ ಬರೆದ ‘ಆಡು ಜೀವಿತಂ’ ಕೇವಲ ಅವರೊಬ್ಬರ ಬದುಕಿನ ರುದ್ರನೋಟವಾಗಿರಲಿಲ್ಲ. ಅವರಿಂದಾಗಿ ನಮಗೆ ಅರಬ್ ದೇಶಗಳ ಕ್ರೌರ್ಯಭರಿತ ಜೀತದ ಕತೆಗಳು ತಿಳಿದವು. ಈ ಪಟ್ಟಿಯನ್ನು ಬೆಳೆಸಬಹುದು. ಹಾಗೆಯೇ ಸಾವರ್‌ಕರ್ ಕೂಡಾ ಅಂಡಮಾನಿನಲ್ಲಿ ಸೆರೆವಾಸ ಅನುಭವಿಸಿದ ಒಬ್ಬರೇ ವ್ಯಕ್ತಿಯಲ್ಲ. ಬರವಣಿಗೆ, ಚಿಂತನೆ ಎಲ್ಲವೂ ಅವರಿಗೆ ಮೊದಲೇ ಸಿದ್ಧಿಸಿದ್ದರಿಂದಲೇ ಅವರ ಕಥನವು ಕೃತಿಯಾಯಿತು. ಅವರೊಬ್ಬ ಸಂಘಟನಕಾರನಾಗಿದ್ದರಿಂದಲೇ ಅವರು ರಾಷ್ಟ್ರ ರಾಜಕೀಯದಲ್ಲಿ ಪ್ರಭಾವಿಯಾಗಿದ್ದರು. ಗಾಂಧಿ, ಜಿನ್ನಾ, ಅಂಬೇಡ್ಕರ್ – ಎಲ್ಲರೂ ಸಾವರ್‌ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಎಂದೇ ಗೌರವಿಸಿದ್ದರು. ( ಈ ಪ್ಯಾರಾ ನನ್ನ ಅನಿಸಿಕೆ)
( ಪೋಸ್ಟಿನಲ್ಲಿ ಇರುವ ಮಾಹಿತಿಗಳು ಪುಸ್ತಕದ್ದು; ಮಾಹಿತಿ ಆಧಾರಿತ ಕಾಮೆಂಟ್‌ಗಳು ನನ್ನವು).
ಹೆಚ್ಚುವರಿ ಮಾಹಿತಿಗೆ
SAVARKAR AND HIS TIMES: DHANJAY KEER (1950)
- ಸಾವರ್‌ಕರ್ ಕುರಿತ ಸಿನೆಮಾ: https://www.youtube.com/watch?v=m_jMCcVbxMg&t=9221s
- ಸಾವರ್‌ಕರ್ ಕುರಿತ ಅಟಲ್‌ಜೀ ಭಾಷಣ: https://www.youtube.com/watch?v=9cEsh04UM2Y
- ಆತ್ಮಾಹುತಿ (Atmahuti): ಸ್ವಾತಂತ್ರ್ಯ ವೀರ ಸಾವರಕರ್ ಅವರ ಆತ್ಮಕಥನ : ಶ್ರೀ ಶಿವರಾಮು : https://play.google.com/store/books/details/ಶ_ವರ_ಮ_ಆತ_ಮ_ಹ_ತ_Atmahuti?id=RiI-DwAAQBAJ
ಗಮನಿಸಿ: ಕಾರವಾನ್ ಮ್ಯಾಗಜಿನ್‌ನಲ್ಲೋ ಅಥವಾ ಇನ್ನಾವುದೋ ಬುಜೀ ಪೋರ್ಟಲ್‌ನಲ್ಲಿ ಈ ಪುಸ್ತಕವನ್ನು ಟೀಕಿಸಿ ಬರೆದ ಲೇಖನಗಳನ್ನೆಲ್ಲ ಓದಿದ್ದೇನೆ. ಅವನ್ನು ಇಲ್ಲಿ ತರುವ ಅಗತ್ಯ ಇಲ್ಲ. ರಚನಾತ್ಮಕ ಕಾಮೆಂಟ್‌ಗಳಿಗೆ ಮಾತ್ರ ಪ್ರವೇಶ. ಸಾವರ್‌ಕರ್ ದೇಶದ್ರೋಹಿ ಎಂದು ವಾದಿಸುವವರು ತಂತಮ್ಮ ಗೋಡೆಯ ಮೇಲೆ ತಮ್ಮ ವಾದವನ್ನು ಹೇಗೆ ಬೇಕಾದರೂ ನೇತಾಡಿಸಿಕೊಳ್ಳಬಹುದು. ಇಲ್ಲಿ ಜಾಗ ಇಲ್ಲ.
1 Comment
ಸರ್ ನಮಸ್ಕಾರ. ನಿಮ್ಮ ಲೇಖನ, ವಾದ ಮಂಡನೆ, ಕಮೆಂಟ್‌ಗಳನ್ನೆಲ್ಲ ಓದಿ ತುಂಬಾ ಖುಷಿಯಾಯಿತು. ನೀವು ಹೇಳಿದ ಹಾಗೆ ಸಾವರ್ಕರ್, ಮಹಾತ್ಮಾ ಗಾಂಧಿ, ಅಂಬೇಡ್ಕರ್ ಅವರ ಬಗ್ಗೆ ಅಪಪ್ರಚಾರ ಸಹಿಸುವುದಿಲ್ಲ ಎಂಬ ಮಾತಿನಂತೆ ಮಹಾನ್ ಇತಿಹಾಸ ಪುರುಷರ ಬಗೆಗಿನ ಅಪಪ್ರಚಾರವನ್ನು ನಾನೂ ಕೂಡ ಸಹಿಸುವುದಿಲ್ಲ. ನಿಮ್ಮ ಮಾತಿಗೆ ನನ್ನ ಸಂಪೂರ್ಣ ಸಹಮತ ಇದೆ. ಹಾಗೆಯೇ ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ಬಗೆಗಿನ ವ್ಯವಸ್ಥಿತ ಅಪಪ್ರಚಾರದ ಬಗ್ಗೆ ತಮ್ಮ ನಿಲುವೇನೆಂದು ತಲಿಯಲು ಬಯಸುವೆ.
ಉತ್ತರದ ನಿರೀಕ್ಷೆಯಲ್ಲಿರುವೆ.
ನಮಸ್ಕಾರ….
ಶುಭ ರಾತ್ರಿ.