ನೂರು ವರ್ಷಗಳ ಹಿಂದೆ ಯಾವುದೋ ಹಿಮಗಡ್ಡೆಗೆ ಸಿಲುಕಿ ಮುಳುಗಿದ ಟೈಟಾನಿಕ್ ಹಡಗಿನ ಕಥೆ ಬರೆಯಲೆ? ಅದೇ ಟೈಟಾನಿಕ್ ಸಿನೆಮಾದ ತ್ರಿ-ಆಯಾಮದ ಆವೃತ್ತಿ ಥಿಯೇಟರುಗಳನ್ನು ಆವರಿಸಿದ ಬಗ್ಗೆ ಬರೆಯಲೆ? ಅಥವಾ ಜೇಮ್ಸ್ ಕೆಮರಾನ್ ಕಳೆದ ತಿಂಗಳಷ್ಟೆ ಸಮುದ್ರದ (ಭೂಮಿಯ ಅನ್ನಿ) ಅತಿ ಆಳದ ಮಾರಿಯಾನಾ ಟ್ರೆಂಚ್ ಎಂಬ ಪ್ರಪಾತಕ್ಕೆ ಇಳಿದು ಮೇಲೆದ್ದು ಬಂದ ಸಾಹಸವನ್ನು ವಿವರಿಸಲೆ? ಅಥವಾ ನಿನ್ನೆ ಘಟಿಸಿದ ಭೂಕಂಪನಕ್ಕೂ ಒಂದು ಷರಾ ಬರೆದುಬಿಡಲೆ?
ಯೋಚಿಸಿದೆ. ಒಂದು ತಿಂಗಳಿನಿಂದ ತಿರುವಿದ ಅಂತರಜಾಲದ ಪುಟಗಳನ್ನು ಮತ್ತೆ ಮತ್ತೆ ತಿರುವಿದೆ. ಈ ಭೂಮಿಯಲ್ಲಿ ಪ್ರತಿದಿನವೂ ನಡೆಯುವ ಇಂಥ ಹಲವು ವಿಶೇಷ ವಿದ್ಯಮಾನಗಳನ್ನೆಲ್ಲ ವಿವರಿಸುತ್ತ ಕೂತರೆ ಮುಗಿಯುವುದೇ ಇಲ್ಲ ಅನ್ನಿಸಿತು! ಹಾಗಾದರೆ, ಬರೆಯವುದಾದರೂ ಏನನ್ನು? ಗೀಚರ್ ಬರೆಯುವುದಕ್ಕೂ (ಗೂಗಲ್‌ನಲ್ಲಿ ಹುಡುಕಿ ಬರೆಯುವ ನುಡಿಚಿತ್ರಗಳನ್ನು ನಾನು ಗೀಚರ್ ಎಂದು ಕರೆದಿದ್ದೇನೆ – ಫೀಚರ್‌ಗೆ ಪರ್ಯಾಯವಾಗಿ!) ಒಂದು ಸಂಹಿತೆ ಬೇಡವೆ?
ಟೈಟಾನಿಕ್ ಮುಳುಗಿದ್ದು ೩.೮ ಕಿಲೋಮೀಟರ್ ಆಳದ ಸಮುದ್ರದಲ್ಲಿ. ಮೊನ್ನೆ ಕೆಮರಾನ್ ಇಳಿದಿದ್ದು ೧೧ ಕಿಲೋಮೀಟರ್ ಆಳದ ಸಮುದ್ರ ಗುಂಡಿಗೆ, ಅಥವಾ, ಖಂಡಗಳ ತುಂಡುಗಳನ್ನೇ ಲೆಕ್ಕ ಹಿಡಿದರೆ, ಇಂಡೋ ಆಸ್ಟ್ರೇಲಿಯನ್ ಪ್ಲೇಟ್ ಮತ್ತು ಪೆಸಿಫಿಕ್ ಪ್ಲೇಟ್‌ಗಳ ನಡುವಣ ಅಗಳಕ್ಕೆ. (ಮಲೆನಾಡಿನಲ್ಲಿ ದೈತ್ಯ ಚರಂಡಿಗಳನ್ನು ಅಗಳ ಎನ್ನುತ್ತೇವೆ). ಆಳಕ್ಕಿಳಿದ ಕೆಮರಾನ್ ಟ್ವೀಟ್ ಮಾಡಿ, ‘ತಲುಪಿದೆ’ ಎಂದ ಸುದ್ದಿ ಸೆಕೆಂಡು ಮಾತ್ರದಲ್ಲಿ ಜಗತ್ತಿಗೇ ಹಬ್ಬಿತು. ನಾನು ಚಂದ್ರಲೋಕಕ್ಕೆ ಹೋಗಿ ಬಂದ ಹಾಗಾಯ್ತು ಎಂದು ಕೆಮರಾನ್ ಹೇಳಿದರು. `ಅವತಾರ್’ ೩ಡಿ ಸಿನೆಮಾದಲ್ಲಿ ಮನುಕುಲದ ದುರಾಸೆಯನ್ನು ವ್ಯಂಗ್ಯ – ಕಟೂಕ್ತಿಗಳಿಂದ ಖಂಡಿಸಿದ್ದ ಕೆಮರಾನ್ `ಮಾರಿಯಾನಾ ಅಗಳದಲ್ಲಿ ನೀರವ ಮೌನ’ ಎಂದರಂತೆ. ಅವತಾರ್ ಸಿನೆಮಾದಲ್ಲಿ ಮನುಷ್ಯರು `ಅನ್ ಒಬ್ಟೇನಿಯಂ’ ಎಂಬ ಖನಿಜಕ್ಕಾಗಿ ಆಲ್ಫಾ ಸೆಂಟೌರಿ ನಕ್ಷತ್ರದ ಅನಿಲಗ್ರಹದ ಉಪಗ್ರಹದ ಮೇಲೆ ದಾಳಿಗೆ ಸಜ್ಜಾಗುತ್ತಾರೆ. ಗೊತ್ತಾಯಿತಲ್ಲ, ಅನ್ ಒಬ್ಟೇನಿಯಂ ಎಂದರೆ `ಸಿಗಲಾರದ್ದು’ ಎಂದು!! ಆದರೆ ಮಾರಿಯಾನಾ ಕಮರಿಗೆ ಇಳಿದು ಅಲ್ಲೇನೂ ಇಲ್ಲ ಎಂದ ಕೆಮರಾನ್ ಮನುಕುಲಕ್ಕೆ ಒಳಿತು ಮಾಡಿದರೋ, ವಸುಂಧರೆಗೆ ಶಾಪ ಹಾಕಿದರೋ – ಗೊತ್ತಾಗಲಿಕ್ಕೆ ಇನ್ನಷ್ಟು ದಶಕಗಳೇ ಬೇಕು.
ಕಿರುಬೆರಳ ಮೇಲೇ ಒಂದು ಟನ್ ಒತ್ತಡ ಹೇರುವ ಮಾರಿಯಾನಾ ಕಮರಿಯಲ್ಲಿ ಕೆಮರಾನ್ ಕನವರಿಸಿದ್ದೇನೆಂದು ನ್ಯಾಶನಲ್ ಜಿಯಾಗ್ರಫಿಕ್ ಸೊಸೈಟಿಯವರು ಮಾಡುವ ಸಿನೆಮಾ ನೋಡಿದರೇ ಖಚಿತವಾಗುತ್ತದೆ ಬಿಡಿ. ಆದರೆ, ಮಾರಿಯಾನಾ ಕಮರಿಯೇನೂ ಮನುಷ್ಯರಿಗೆ ಹೊಸತಲ್ಲ. ೧೯೬೦ರಲ್ಲೇ ಈ ಕಮರಿಯೊಳಕ್ಕೆ ಇಳಿದ ಖ್ಯಾತಿಯ ಇಬ್ಬರಲ್ಲಿ ಡಾನ್ ವಾಲ್ಶ್ ಈಗಲೂ ಬದುಕಿದ್ದಾರೆ. ಕೆಮರಾನ್‌ಗೆ ಶುಭಾಶಯ ಹೇಳಿದ್ದಾರೆ. ಅವರು ಮತ್ತು ಜಾಕ್ವೆಸ್ ಪಿಕಾರ್ಡ್ ಇದ್ದ ಟ್ರಿಯೆಸ್ಟೆ ಎಂಬ ಜಲಾಂತರ್ಗಾಮಿ ಅಂದು ಮಾರಿಯಾನಾ ಕಮರಿಯ ತಳ ಮುಟ್ಟಿದಾಗ ಬಿಳಿಯ ನೀರುಧೂಳೆದ್ದು ಏನೂ ಕಾಣದೆ ಹೋಯಿತು. ಅದಾಗಿ ೫೨ ವರ್ಷಗಳ ನಂತರ ಜೇಮ್ಸ್ ಕೆಮರಾನ್ ಮಾರಿಯಾನಾ ತಳ ತಲುಪಿದರು.
ಮೊದಲೇ ಹೇಳಿದೆನಲ್ಲ, ಈ ಮಾರಿಯಾನಾ ಅಗಳವು ಹುಟ್ಟಿದ್ದೇ ಎರಡು ಭೂಖಂಡಗಳ (ಮನುಷ್ಯರು ಗುರುತಿಸಿದ ಖಂಡಗಳಲ್ಲ, ಪ್ರಕೃತಿಯೇ ರೂಪಿಸಿದ ಮಣ್ಣಿನ ಬೃಹತ್ ಕಾಯಗಳು) ತುಂಡುಗಳ ನಡುವೆ ಉಂಟಾದ ಕೊರಕಲಿನಿಂದ. ನಿನ್ನೆ (೧೧ ಏಪ್ರಿಲ್ ೨೦೧೨) ನಡೆದ ಭೂಕಂಪನವೂ ಇಂಥದ್ದೇ – ಇಂಡೋ ಆಸ್ಟ್ರೇಲಿಯನ್ ಪ್ಲೇಟ್ ಮತ್ತು ಯುರೇಶಿಯನ್ ಪ್ಲೇಟ್ ನಡುವೆ ಹುಟ್ಟಿರುವ – ಜಾವಾ ಟ್ರೆಂಚ್‌ನಲ್ಲಿ, ಸುಮಾತ್ರಾ ಬಳಿ ಘಟಿಸಿತು. ಅಂದರೆ ….. ಹೌದು. ಮಾರಿಯಾನಾ ಕಮರಿಯೂ ಇಂಥ ಖಂಡಗಳ ತಿಕ್ಕಾಟಗಳಿಗೆ ಪಕ್ಕಾಗುವಂಥ ಪ್ರದೇಶವೇ. ಖಂಡಗಳೇ ಪರಸ್ಪರ ಅರೆದುಕೊಂಡರೆ ಮನುಷ್ಯನ ಸ್ಥಿತಿ ಕೇಳುವುದೇ ಬೇಡ! ಸಮುದ್ರದಾಳದ ಖಂಡಗಳ ಸಂದಿಯಲ್ಲಿ ಹಲವು ಪರ್ವತಗಳು ಜಜ್ಜಿಬಜ್ಜಿ ಆದಾಗ ಭೂಕಂಪನವಾಗುತ್ತದೆ. ಈ ಅಂಚುಗಳು ಅಡ್ಡಡ್ಡ ತಿಕ್ಕಿದರೆ ಬರೀ ಭೂಕಂಪನ; ಮೇಲೆ – ಕೆಳಗೆ ಒರೆಸಿಕೊಂಡರೆ ಸುನಾಮಿ ಖಚಿತ. `ಈ ಪ್ರದೇಶದಲ್ಲಿ ಭೂಕಂಪನದ ಸಾಧ್ಯತೆ ಹೆಚ್ಚು ಎಂದು ಅಮೆರಿಕಾದ ಸೆಂಟರ್ ಫಾರ್ ಕೋಸ್ಟಲ್ ಎಂಡ್ ಓಶಿಯನ್ ಮ್ಯಾಪಿಂಗ್‌ನ ಜಿಮ್ ಗಾರ್ಡನರ್ ಹೇಳುವುದನ್ನು ನಾವು ಕೇಳಿಸಿಕೊಳ್ಳಬೇಕು.
ಇಂಥ ಕಮರಿಯಲ್ಲಿ ಜೀವಿಗಳಿದ್ದೇ ಇವೆ. ನುಣ್ಣಗೆ ಚೆಲ್ಲಿದ್ದ ಆ ಸಮುದ್ರದ ಹೂಳನ್ನು ಕೆದಕದೇ ಇರಲು ನಾಜೂಕಾಗಿ ಯತ್ನಿಸಿದ ಕೆಮರಾನ್‌ಗೆ ಹೆಸರಿಸಲಾಗದ ಪುಟ್ಟ ಪುಟ್ಟ ಜೀವಿಗಳೂ ಕಾಣಿಸಿದವಂತೆ. ಆದರೆ ಇಡೀ ಸನ್ನಿವೇಶ ಒಂದು ನಿರ್ಲಿಪ್ತ ಮರುಭೂಮಿಯ ಹಾಗೇ ಇತ್ತು ಎಂದು ಕೆಮರಾನ್ ಹೇಳಿದ್ದು ಒಟ್ಟಾರೆ ವಾತಾವರಣದ ಬಗ್ಗೆ ಎಂದೇ ತಿಳಿಯಬೇಕು. ಉದಾಹರಣೆಗೆ ಅಲ್ಲಿ ದೊಡ್ಡ ಗಾತ್ರದ ಆಂಫಿಪಾಡ್‌ಗಳು ಇವೆಯಂತೆ. ಅಲ್ಲಿ ದೊಡ್ಡ ಅಮೀಬಾಗಳಿವೆಯಂತೆ. ಅಲ್ಲಿ ಇನ್ನೂ ಎಂತೆಂಥದೋ ಜೀವಿಗಳು ಮೇಲಿನಿಂದ ಬಂದ (ಸತ್ತ ಜಲಚರಗಳು ಅನ್ನಿ) ಜೈವಿಕ ಆಹಾರವನ್ನೇ ತಿಂದು ಬದುಕುತ್ತವೆ. ಹೀಗೆ ನೀರಿನಲ್ಲೇ ಸೋರಿ ಸೋರಿ ಕೆಳಬಂದ ಜೀವಿಗಳಿಂದ ಸುರಿದ ಇಂಗಾಲವು ಈ ಕೊರಕಲಿನ ಅಂಚುಗಳಲ್ಲಿ ಶೇಖರವಾಗಿವೆಯಂತೆ. ಈ ಬಗೆಯ ಪ್ರಕ್ರಿಯೆಯೇ ಇಡೀ ವಸುಂಧರೆಯ ಹವಾಗುಣವನ್ನೇ ನಿಯಂತ್ರಿಸುತ್ತಿವೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಒಳಗೇ ಉಳಿದ ಇಂಗಾಲವೆಷ್ಟು, ವಾತಾವರಣಕ್ಕೆ ಬಂದಿದ್ದೆಷ್ಟು ಎಂಬ ಲೆಕ್ಕ ಆರಂಭವಾಗಿದೆ.
ಹೌದು. `ನಮಗೆ ಸೌರವ್ಯೂಹದ ಬಗ್ಗೆ ಗೊತ್ತಿರುವಷ್ಟು ಸಮುದ್ರದಾಳವೇ ಗೊತ್ತಿಲ್ಲ’ ಎನ್ನುತ್ತಾರೆ ಸಾಗರವಿಜ್ಞಾನಿ ಡಾ. ಸಿಲ್ವಿಯಾ ಅರ್ಲ್. ಆಳ ಸಮುದ್ರದ ವ್ಯಾಪ್ತಿ ಒಟ್ಟಾರೆ ಸಮುದ್ರದ ಶೇ. ೩ರಷ್ಟು; ಆದರೆ ಅದು ಚೀನಾ ದೇಶದಷ್ಟು ದೊಡ್ಡದು. ರಾಕೆಟ್ ವಿಜ್ಞಾನಕ್ಕೆ ನೀಡುವ ಗಮನವನ್ನು ಸಮುದ್ರ ವಿಜ್ಞಾನಕ್ಕೆ ಕೊಡಬೇಕು ಎಂದು ಸಿಲ್ವಿಯಾ ಆಗ್ರಹಿಸುತ್ತಾರೆ.
ಅದೆಲ್ಲ ವಿಜ್ಞಾನ – ಸಂಶೋಧನೆಗೆ ಸಂಬಂಧಿಸಿದ್ದು; ಈಗ ಕೆಮರಾನ್ ಉವಾಚವು ಶಾಪ ಎಂದೆನಲ್ಲ; ಆ ವಿಚಾರಕ್ಕೆ ಬರೋಣ.
ಮಾರಿಯಾನಾ ಕಮರಿಯೂ ಸೇರಿದಂತೆ ಜಗತ್ತಿನಲ್ಲಿ ಇಪ್ಪತ್ತು ಅತಿಯಾಳದ ಸಮುದ್ರ ಕಮರಿಗಳಿವೆ. ದಶಕಗಳ ಹಿಂದೆಯೇ ಯುರೇನಿಯಂ ಕಂಡುಹಿಡಿದ ಮನುಷ್ಯ, ಅದರಿಂದ ಪರಮಾಣು ಶಕ್ತಿಯನ್ನು ಸೆಳೆಯುವ ವಿದ್ಯೆಯನ್ನೂ ಕಲಿತ. ಬಾಂಬು ತಯಾರಿಸಿ ತನ್ನದೇ ಕುಲದ ಲಕ್ಷಗಟ್ಟಳೆ ಜನರನ್ನು ಕೊಂದ. ಇನ್ನಷ್ಟು ಲಕ್ಷ ಜನರಿಗೆ ಅಂಗಾಂಗ ನ್ಯೂನತೆಯನ್ನು ತಂದಿಟ್ಟ. ಪರಮಾಣು ಶಕ್ತಿಯನ್ನು ವಿದ್ಯುತ್ತಿಗೂ ಬಳಸಬಹುದು ಎಂಬ `ಶಾಂತಿಯುತ ಬಳಕೆ’ಯ ನೆಪದಲ್ಲಿ ಅಣು ವಿಕಿರಣದ ನೆರಳಿನಲ್ಲೇ ಬದುಕಲು ಹೊರಟ. ವಿಕಿರಣಕ್ಕೆ ತುತ್ತಾದ ವಿಷಪೂರಿತ ತ್ಯಾಜ್ಯಗಳನ್ನು ಎಲ್ಲಿ ಎಸೆಯುವುದು? ೧೯೪೬ರಿಂದ ೧೯೮೨ರವರೆಗೆ ಇಂಥ ವಿಕಿರಣ ಕಸವನ್ನು ಸಮುದ್ರಕ್ಕೇ ಎಸೆದು ಬಚಾವಾದೆ ಎಂದುಕೊಂಡ. ಆಮೇಲೆ ತನ್ನವರದ್ದೇ ವಿರೋಧ ಕಂಡು ಜಾಗತಿಕ ಒಪ್ಪಂದ ಮಾಡಿಕೊಳ್ಳೋಣ ಎಂದು ಚರ್ಚೆ ಆರಂಭಿಸಿದ. ಈ ವರ್ಷಗಳಲ್ಲಿ ಸಮುದ್ರಕ್ಕೆ ಎಸೆದ ವಿಕಿರಣ ಕಸದ ಪ್ರಮಾಣ ೧.೭ ಮೆಗಾ ಬಿಕ್ವೆರೆಲ್ ವಿಕಿರಣ ಪ್ರಮಾಣದ್ದಂತೆ. (ಈ ವಿಕಿರಣದ ಲೆಕ್ಕಾಚಾರ, ಅಳತೆ ಬಗ್ಗೆ ತಿಳಿಯಲು ಇಲ್ಲಿಗೆ ಬನ್ನಿ.)
ಅಂದಿನಿಂದ ಇವತ್ತಿನವರೆಗೆ ಬಿಸಾಕಬೇಕಾದ ವಿಕಿರಣ ಕಸವೆಲ್ಲವನ್ನೂ ಟನ್ನುಗಟ್ಟಳೆ ತೂಕದ, ಉದ್ದುದ್ದ ಲೋಹದ ಗುಡಾಣಗಳಲ್ಲಿ – ನಾವು ಮನುಷ್ಯರು – ತುಂಬುತ್ತಲೇ ಬಂದಿದ್ದೇವೆ. ನೆವಡಾದ ನಿರ್ಜನ ಯುಕ್ಕಾ ಪರ್ವತಶ್ರೇಣಿಯಲ್ಲೋ, ಅಥವಾ ಶಾಂತಸಾಗರದ ಆಳದಲ್ಲೋ ಈ ಕಸವನ್ನು ವಿಲೇವಾರಿ ಮಾಡಬೇಕೆಂಬ ಪ್ರಯತ್ನದಲ್ಲಿ ಎಲ್ಲ ಪರಮಾಣು ಶಕ್ತ ದೇಶಗಳೂ ಕಾತರವಾಗಿವೆ. ಆದರೆ ಅಣುಶಕ್ತಿ ವಿರೋಧಿ ನಾಗರಿಕ ಶಕ್ತಿಯೆದುರು ಏನೂ ಮಾಡಲಾಗದೆ ಮೈ ಪರಚಿಕೊಳ್ಳುತ್ತಿವೆ.
ಮನುಷ್ಯನಿಗೆ ದಕ್ಕಿದ ಯುರೇನಿಯಂನಿಂದ ಹುಟ್ಟಿದ ವಿಕಿರಣ ಕಸವನ್ನು ಬೇರೆ ಗ್ರಹಕ್ಕೆ ತೂರಿಬಿಡಲೂ ಆಗದ ಮನುಷ್ಯನ ಕುಲಕ್ಕೇ ಸೇರಿದ ಜೇಮ್ಸ್ ಕೆಮರಾನ್, ದಕ್ಕಲಾರದ ಅನ್‌ಒಬ್ಟೇನಿಯಂ ಬಗ್ಗೆ ೩ಡಿ ಕಥೆ ಕಟ್ಟಿ ಮನ ಕಲಕಿದ ಜೇಮ್ಸ್ ಕೆಮರಾನ್, ಮಾರಿಯಾನಾ ಆಳದಲ್ಲಿ ಹೂಳನ್ನು ಕೆದಕದ ಸೂಕ್ಷ್ಮ ಮನಸ್ಸಿನ ಜೇಮ್ಸ್ ಕೆಮರಾನ್ – ಮರುಭೂಮಿಯ ಹೋಲಿಕೆ ಕೊಟ್ಟು ಮಾಡಿದ್ದೇನು? ವಿಕಿರಣ ಕಸ ಹೊತ್ತ ಭಸ್ಮಾಸುರರಿಗೆ ಒಂದು ಬಾಗಿಲು ತೆರೆದಂತಾಗಲಿಲ್ಲವೆ? ಮಾರಿಯಾನಾ ಟ್ರೆಂಚ್ ಕೂಡಾ ವಿಕಿರಣ ಕಸ ಎಸೆಯಲು ಗುರುತಿಸಿರುವ ಪ್ರಮುಖ ತಾಣ. ಕ್ಲೀನ್ ಡೆವಲಪ್‌ಮೆಂಟ್ ಮೆಕ್ಯಾನಿಸಂ (ಸಿಡಿಎಂ) ಅಡಿಯಲ್ಲಿ ಚಿಕ್ಕಾಸೂ ಕಾರ್ಬನ್ ಕ್ರೆಡಿಟ್ ಕೊಡಿ ಎಂದು ಅಂಗಲಾಚದೇ ರುದ್ರ ಮೌನದ ಬೀಡಾದ ಮಾರಿಯಾನಾ ಕಮರಿಯಂಥ ಅತಿಯಾಳದ ಅಗಳಗಳನ್ನು ಉಧ್ವಸ್ತಗೊಳಿಸಲು ನಾವು ಯಾರು?
ಜೇಮ್ಸ್ ಕೆಮರಾನ್ ಸಜ್ಜನ ಎಂದೇ ತಿಳಿಯೋಣ. ಆದರೆ ಅವರು ತಮ್ಮ ಈ ಒಂದೇ ವಾಕ್ಯದಿಂದ ನನ್ನ ಮನಸ್ಸನ್ನು ಕದಡಿರುವುದಂತೂ ನಿಜ. ಭೂಕಂಪನಕ್ಕೆ ಹೇಳಿ ಮಾಡಿಸಿದ ತಳದಲ್ಲಿ ವಿಕಿರಣ ಕಸವನ್ನು ತುಂಬಿದರೆ ಏನಾದೀತು? ಕಿರುಬೆರಳ ತುದಿಗೇ ಟನ್ ಭಾರದ ಒತ್ತಡ ಇರಬೇಕಾದರೆ, ಈ ವಿಕಿರಣ ಕಸ ತುಂಬಿದ ಕೊಳವೆಗಳು ಒಡೆಯುವುದಿಲ್ಲ ಎಂಬ ಖಾತ್ರಿ ಏನಿದೆ? ಇಷ್ಟಕ್ಕೂ ಭೂಮಿಯ ಹವಾಗುಣದ ನಿಯಂತ್ರಣದ ಪ್ರಮುಖ ಭಾಗೇದಾರಿ ಕಮರಿಗಳಲ್ಲಿ ಕಸ ತುಂಬಿದರೆ, ಅದರ ಸುರುಳಿ ಪರಿಣಾಮವನ್ನು (ಸ್ಪೈರಲಿಂಗ್ ಎಫೆಕ್ಟ್) ಎದುರಿಸುವುದಾದರೂ ಹೇಗೆ? ಮೆಗಾ ಭೂಕಂಪನಗಳಾದರೆ ಈ ವಿಕಿರಣ ಕಸವು ಭೂಮಿಯ ಹೊಟ್ಟೆ ಸೇರುವ ಬದಲು, ಇನ್ನೆಲ್ಲೋ ಹೊರಬರಬಹುದು; ಆಳದಲ್ಲೇ ನೀರನ್ನು ವಿಕಿರಣಯುಕ್ತಗೊಳಿಸಬಹುದು. `ಅಬಿಸ್’ನಂಥ ಆಳ ಸಮುದ್ರದ ಕಥೆಯನ್ನೇ ಕಾವ್ಯಾತ್ಮಕವಾಗಿ ನಿರ್ಮಿಸಿದ ಕೆಮರಾನ್‌ಗೆ ಈ ಭಾವನೆಗಳೆಲ್ಲ ಅರ್ಥವಾಗುತ್ತವೆ ಎಂದುಕೊಳ್ಳೋಣವೆ?
ಮಾರಿಯಾನಾ ಕಮರಿಯಲ್ಲಿ ಏನನ್ನೂ ಕದಡದೆ ಕೆಮರಾನ್ ತಣ್ಣಗೆ ಮೇಲೆದ್ದು ಬಂದಿರಬಹುದು. ಆದರೆ ಅವರಿಂದ ಬಂದ ಸಂದೇಶ ಮಾತ್ರ ವಿಕಿರಣ ವಿವಾದವನ್ನು ಕದಡದೆ ಇರದು.
ಟೈಟಾನಿಕ್ ದುರಂತ, ಅಬಿಸ್‌ನ ಆಳ, ಖನಿಜದ ಆಸೆ, ಅತಿಯಾಳದ ಅಗಳಕ್ಕೆ ಇಳಿದ ಸಾಹಸ, ವಿಕಿರಣದ ಇತಿಹಾಸ , ಕಂಪನದ ಕಥೆ – ಎಲ್ಲವೂ ಒಂದಕ್ಕೊಂದು ತಳುಕು ಹಾಕಿದಂತೆ ಕಾಣಿಸಿತೆ? ಆಳಕ್ಕೆ ಇಳಿಯುವ, ಆಗಸಕ್ಕೆ ಏರುವ ಮನುಷ್ಯನ ಬಯಕೆಯಲ್ಲಿ ಸಾಹಸದ ಮನೋಭಾವದ ಜೊತೆಗೇ ತಾನೊಬ್ಬನೇ ಸುಖವಾಗಿ ಬದುಕಬೇಕೆಂಬ ಸ್ವಾರ್ಥವೂ ಇದೆ. ದುಡ್ಡಿರುವ ಇನ್ನೂ ಹಲವರು ಮಾರಿಯಾನಾ ಕಮರಿಗೆ ಇಳಿಯುವುದಕ್ಕೆ ಸಜ್ಜಾಗುತ್ತಿದ್ದಾರೆ.
ನಾವು ಈ ಕಥೆಗಳ ಹಿಂದಿನ ಕೊಂಡಿಗಳನ್ನು ಅರಿತು ಸಜ್ಜಾಗುವುದೆಂದು?
ಹೆಚ್ಚುವರಿ ಮಾಹಿತಿಗೆ: