ಪ್ರಣಯ್ ಲಾಲ್ ಬರೆದ ಈ ಮಹತ್ತರ ಪುಸ್ತಕ ಎಲ್ಲರ ಮನೆಯಲ್ಲೂ ಇರಬೇಕು.
- ನಂದಿಬೆಟ್ಟ ಎಲ್ರಿಗೂ ಗೊತ್ತು. ಇದು ಧಾರವಾಡ ಕ್ರೇಟನ್ ಎಂಬ 350 ಕೋಟಿ ವರ್ಷಗಳ ಹಿಂದೆ ರೂಪುಗೊಂಡಿದ್ದು ಅಂತಾನೋ, ಅಥವಾ ಇದು ಭಾರತವೇ ಮೇಲೆದ್ದು ನಿಂತಿರುವ ಮೂಲಾಧಾರ ಕಲ್ಲಿನ ಭಾಗ ಎಂದೋ ನಿಮಗೆ ಗೊತ್ತ?
- ರಾಮನಗರದ ಬೆಟ್ಟಗಳು 250 ಕೋಟಿ ವರ್ಷಗಳ ಹಿಂದೆ ರೂಪುಗೊಂಡಿದ್ದು; ಇದು ಧಾರವಾಡ ಕ್ರೇಟನ್‌ನ ಭಾಗವಾಗಿದ್ರೂ ಇದನ್ನು ಕ್ಲೋಸ್‌ಪೇಟೆ ಗ್ರಾನೈಟ್ ಅಂತ ಕರೀತಾರೆ ಅನ್ನೋದು ನಿಮಗೆ ಗೊತ್ತ?
- ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಧಾಲಾದಲ್ಲಿ ಧೂಮಕೇತು ಅಪ್ಪಳಿಸಿ ರೂಪುಗೊಂಡ 11 ಕಿಲೋಮೀಟರ್ ಅಗಲದ, ಹುಲಿ ಹೆಜ್ಜೆ ಥರ ಕಾಣೋ ಹೊಂಡ ಇದೆ ಗೊತ್ತ?
- ಕೇಂದ್ರ ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ಲೋನಾರ್ ಬಳಿ ಇರೋ ಧೂಮಕೇತು ಅಪ್ಪಳಿಸಿದ ಜಾಗ ಗೊತ್ತ? ಇದು 50 ಸಾವಿರ ವರ್ಷದ ಹಿಂದಷ್ಟೇ ನಡೆದ ಘಟನೆ ಅನ್ನೋದು ಗೊತ್ತ? ಹಾಗೇ ರಾಮಗಢ ಹೊಂಡ ಗೊತ್ತ?
- ಲಡಾಖ್‌ನ ಲೇಹ್ ಹತ್ತಿರ ಇರೋ ಬಿಸಿನೀರಿನ ಬುಗ್ಗೆಯಲ್ಲಿ ಭೂಮಿಯ ಅತಿ ಪುರಾತನ ಜೀವಿಗಳನ್ನು ಕಾಣಬಹುದು ಅನ್ನೋದು ನಿಮಗೆ ಗೊತ್ತ?
- ಈ ಭೂಮಿಯ ಮೇಲೆ ಆಮ್ಲಜನಕವು ಹೆಚ್ಚಿನ ಪ್ರಮಾಣದಲ್ಲಿ ಸಿಗೋ ಹಾಗೆ ಮಾಡಿದ ಸಯಾನೋಬ್ಯಾಕ್ಟೀರಿಯಾಗಳನ್ನು ಮಧ್ಯಪ್ರದೇಶದ ಬಂಧ್ವಾಗಢ ನ್ಯಾಶನಲ್ ಪಾರ್ಕ್‌ನ ಕೊಳದಲ್ಲಿ, ಪವಡಿಸಿದ ವಿಷ್ಣುವಿನ 30 ಅಡಿ ಮೂರ್ತಿಯ ಪಕ್ಕದಲ್ಲೇ ಕಾಣಬಹುದು ಅನ್ನೋದು ನಿಮಗೆ ಗೊತ್ತ?
- ಒಡಿಶಾದ ಸುಂದರಗಢದಲ್ಲಿ, ಇಂದಿರಾಗಾಂಧಿ ಸಮಾಧಿ ಸ್ಥಳದಲ್ಲೇ ಕಬ್ಬಿಣ ಪಟ್ಟಿಯುಕ್ತ ಕಲ್ಲಿನ ರಚನೆ ಇರೋದು ನಿಮಗೆ ಗೊತ್ತ?
- ಚಿತ್ರದುರ್ಗ ಜಿಲ್ಲೆಯ ತಾಳ್ಯದ ಸುತ್ತಮುತ್ತ ಇರೋ 270 ಕೋಟಿ ವರ್ಷಗಳ ಹಿಂದಿನ ಮಣ್ಣುಕಲ್ಲುಗಳು ಮತ್ತು ಮರಳುಗಲ್ಲುಗಳು ಭಾರತ ಉಪಖಂಡದಲ್ಲಿ ಉಂಟಾದ ಹಿಮಯುಗದ ಅತಿಪುರಾತನ ಸಾಕ್ಷಿಗಳನ್ನು ಹೊಂದಿವೆ ಅನ್ನೋದು ನಿಮಗೆ ಗೊತ್ತ?
ಹೀಗೆ ನಿಮಗೆ ಗೊತ್ತಿಲ್ಲದ ನೂರಾರು ಸಂಗತಿಗಳನ್ನು ಒಂದು ಚೆಂದದ ನಿಸರ್ಗದ ಕತೆಯ ರೂಪದಲ್ಲಿ ಹೇಳುತ್ತ ಭಾರತದ ನೈಸರ್ಗಿಕ ಇತಿಹಾಸವನ್ನು ಕಟ್ಟಿಕೊಟ್ಟಿದ್ದಾರೆ ಪ್ರಣಯ್ ಲಾಲ್. ಇಂಡಿಕ: ಎ ಡೀಪ್ ನ್ಯಾಚುರಲ್ ಹಿಸ್ಟರಿ ಆಫ್ ದ ಇಂಡಿಯನ್ ಸಬ್‌ಕಾಂಟಿನೆಂಟ್ ಪುಸ್ತಕವು (ಪೆಂಗ್ವಿನ್ ಬುಕ್ಸ್ ನ ಅಲೆನ್ ಲೇನ್ ಇಂಪ್ರಿಂಟ್, ಬೆಲೆ ರೂ.900, 464 ಪುಟಗಳು) ಬಹುಶಃ ಭಾರತದ ಕಲ್ಲು, ಮಣ್ಣಿನ ಪುರಾತನ ಕತೆಗಳನ್ನು, ಕೋಟಿಗಟ್ಟಳೆ ವರ್ಷಗಳ ರೂಪಾಂತರದ ಅವತಾರಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುವ ಅದ್ಭುತ ಗ್ರಂಥ. ಇದನ್ನು ಒಂದಕ್ಷರವೂ ಬಿಡದೆ ನಿಧಾನವಾಗಿ ಓದಿ ಖುಷಿಪಟ್ಟ ನನ್ನ ಸಲಹೆ ಎಂದರೆ: ಪ್ರತಿಯೊಬ್ಬ ಹೈಸ್ಕೂಲು ವಿದ್ಯಾರ್ಥಿಯೂ ಈ ಪುಸ್ತಕವನ್ನು ಹೇಗಾದರೂ ಮಾಡಿ ಓದಬೇಕು. ಅದರ ಮೂಲಕ ನಾವು ನಿಂತ ನೆಲ ಎಷ್ಟು ಹಳೆಯದು, ಈ ಭೂಮಿಯ ಈಗಿನ ಒಟ್ಟಾರೆ ಸ್ವರೂಪಕ್ಕೆ ಭಾರತ ಉಪಖಂಡವೂ ಹೇಗೆ ಕಾರಣ – ಇಂತ ಹಲವು ಅಚ್ಚರಿಯ ಸಂಗತಿಗಳನ್ನು ತಿಳಿಯಬೇಕು. ಮನುಕುಲದ ಇತಿಹಾಸದಷ್ಟೇ ನಿಸರ್ಗದ ಇತಿಹಾಸವೂ ಮುಖ್ಯ, ಏಕೆಂದರೆ ಕೋಟಿಗಟ್ಟಳೆ ವರ್ಷದ ನಿಸರ್ಗವನ್ನು ನೂರುಗಟ್ಟಳೆ ವರ್ಷಗಳಲ್ಲೇ ಹಾಳುಗೆಡಹುತ್ತಿರುವುದು ಈ ಮನುಷ್ಯರೇ!
ಇನ್ನೂ ಕೆಲವು ಉದಾಹರಣೆಗಳು:
- ಚಂಡಿಗಢದಿಂದ ಶಿಮ್ಲಾಗೆ ಹೋಗುವಾಗ ನಿಮಗೆ ಸಿಗುವ ಗುಡ್ಡಗಳನ್ನು ತದೇಕಚಿತ್ತದಿಂದ ಗಮನಿಸಿದರೆ ನಿಮಗೆ ಬೂದು – ಹಸುರು ಬಣ್ಣದ ಕಲ್ಲುಗಳು ಕಾಣುತ್ತವೆ; ಅವುಗಳಲ್ಲಿ ಸಮುದ್ರಜೀವಿಗಳ ಅವಶೇಷಗಳನ್ನು ಕಾಣಬಹುದು! ಸಂಧಿಪದಿಯನ್ನು ಹೋಲುವ ಜೀವಿಗಳು ಉಳಿಸಿದ ಹೆಜ್ಜೆಗುರುತುಗಳನ್ನೂ ಇಲ್ಲಿ ನೀವು ಹುಡುಕಬಹುದು. ನಿಮ್ಮ ಅಕ್ಕಪಕ್ಕದ ಗುಡ್ಡದಲ್ಲಿ ಟಯರ್ ಗುರುತಿನ ಥರ ಏನಾದ್ರೂ ಕಣ್ಣಿಗೆ ಬಿದ್ದರೆ ಮೊಬೈಲ್ ಕ್ಲಿಕ್ ಮಾಡಲು ಮರೀಬೇಡಿ!
- ಹಿಮಾಚಲ ಪ್ರದೇಶದ ಸ್ಪಿಟಿಯ ಮುತ್ ಕಣಿವೆಯಲ್ಲಿ ಉದ್ದಿನ ವಡೆ ಥರದ ಉಬ್ಬುಗಳನ್ನು ನೋಡಬಹುದು. ಇವು ಮೈಕ್ರೋಬಿಯಲ್ ಹೊದಿಕೆಗಳಿಂದ ಹೊರಬಂದ ಅನಿಲದ ಉಬ್ಬರದಿಂದ ಆದವು.
- 13 ವರ್ಷಗಳ ಹಿಂದೆ ಡಾ| ಎಸ್ ಡಿ ಬಿಜು ಸಹ್ಯಾದ್ರಿಯ ಕಾಡಿನಲ್ಲಿ ಹುಡುಕಿದ ನೇರಳೆ ಬಣ್ಣದ ಕಪ್ಪೆಯು ಮಡಗಾಸ್ಕರ್, ಕೇರಳ ಶ್ರೀಲಂಕಾ, ಆಸ್ಟ್ರೇಲಿಯಾಗಳು ಹಿಂದೊಮ್ಮೆ ಜೋಡಣೆಯಾಗಿದ್ದವು ಎಂಬುದಕ್ಕೆ ನಿದರ್ಶನವಾಗಿವೆ.
- ಎಲ್ಲೋರದ ಕೈಲಾಶ್ ದೇವಸ್ಥಾನವನ್ನು ಒಂದೇ ಕಲ್ಲಿನಿಂದ ಕಟೆದಿದ್ದಾರೆ. ಇದಕ್ಕಾಗಿ 2 ಲಕ್ಷ ಟನ್ ಕಲ್ಲನ್ನು ಕೊರೆದು ಹೊರತೆಗೆದಿದ್ದಾರೆ. ಈ ಕಲ್ಲಿಗೆ 6.80 ಕೋಟಿ ವರ್ಷಗಳ ಇತಿಹಾಸ ಇದೆ.
- ಏಳು ಕೋಟಿ ವರ್ಷಗಳ ಹಿಂದೆ ದಖನ್ ಪ್ರದೇಶದಲ್ಲಿ ಲಾವಾ ಬುಗ್ಗೆಗಳು ಎದ್ದಿದ್ದವು; ಇವು 40 ಲಕ್ಷ ವರ್ಷಗಳ ಕಾಲ ಉರಿಯುತ್ತಲೇ ಇದ್ದವು.
- ಹಿಮಾವೃತವಲ್ಲದ ಹಿಮಾಲಯ ಪರ್ವತವನ್ನು ನೀವು ದಿಟ್ಟಿಸಿದರೆ 35 ಕೋಟಿ ವರ್ಷಗಳ ಹಿಂದಿನ ಭೂರಾಶಿಯನ್ನು ನೀವು ಕಾಣುವಿರಿ. ಅದರಲ್ಲಿ ನೂರಾರು ಜೀವ ಪ್ರಭೇದಗಳ ಪಳೆಯುಳಿಕೆಗಳಿವೆ. ಅವು ಒಂದು ಕಾಲದಲ್ಲಿ ಸಮುದ್ರತೀರದಲ್ಲಿ ಜೀವಿಸಿದ್ದವು.
ಹಿಮಾಲಯ ಪರ್ವತಶ್ರೇಣಿಯು ಈ ಭೂಮಿಯಲ್ಲಿ ಮತ್ತೆ ಮತ್ತೆ ಮೇಲೇಳುವ ಇಂಗಾಲವನ್ನು ಹೀರಿಕೊಳ್ಳುವ ಕಲ್ಲುಗಳನ್ನು ಹೊಂದಿ ಇಡೀ ಭೂಮಿಯ ಇಂಗಾಲದ ಡಯಾಕ್ಸೈಡ್‌ನ ಪ್ರಮಾಣವನ್ನು ನಿಯಂತ್ರಿಸುತ್ತಿವೆ. ಹೀಗೆ ಇಂಗಾಲ ಹೀರಿಕೊಂಡ ಕಲ್ಲುಗಳು ಕರಗಿ ಕರಗಿ ಸಮುದ್ರ ಸೇರುತ್ತಿವೆ. ಇವನ್ನೇ ಬಳಸಿ ಸಮುದ್ರಜೀವಿಗಳು ಶಂಖವನ್ನು ಉತ್ಪಾದಿಸುತ್ತವೆ. ಈ ಶಂಖಗಳಿಂದಲೇ ನೀವು ಭಾರತದ ಸಮುದ್ರತೀರಗಳಲ್ಲಿ ಹೊಳಪಿನ ದಂಡೆಗಳನ್ನು ಕಾಣುತ್ತೀರಿ! ಈ ಬಗೆಯ ನಿಸರ್ಗದ ಜೀವನ ಚಕ್ರವನ್ನು ಪ್ರಣಯ್‌ಲಾಲ್ ತುಂಬ ಸರಳವಾಗಿ ವಿವರಿಸಿದ್ದಾರೆ.
ಈ ಭೂಮಿಯ ಹುಟ್ಟಿನ ಕಥೆಯ ಜೊತೆಗೇ ಭಾರತ ಉಪಖಂಡದ ಕಥೆಯನ್ನೂ ನವಿರಾಗಿ ಹೆಣೆದ ಪ್ರಣಯ್, ಭಾರತವು ಹೇಗೆ ತೇಲುತ್ತ ತೇಲುತ್ತ ಯೂರೇಶ್ಯಾ ಖಂಡಕ್ಕೆ ಸೇರಿಕೊಂಡಿತು ಎಂಬ ಕಥೆಯನ್ನೂ ಹೇಳುತ್ತಾರೆ.
ಈ ಸುದೀರ್ಘ ಕಥನದಲ್ಲಿ ಕಂಡ ಕೆಲವೇ ಉದಾಹರಣೆಗಳನ್ನು ನಾನು ಇಲ್ಲಿ ಕೊಟ್ಟಿದ್ದೇನೆ. ಹೇಳುತ್ತ ಹೋದರೆ ಎಲ್ಲ ಪುಟಗಳನ್ನೂ ಉಲ್ಲೇಖಿಸಬೇಕು. ಅದರ ಬದಲು ನೀವೇ ಪುಸ್ತಕವನ್ನು ಖರೀದಿಸಿ ಓದುವುದೇ ಸೂಕ್ತ. ಹೈಸ್ಕೂಲು / ಪಿಯುಸಿ ಮಕ್ಕಳಿಗೆ ಇದನ್ನು ಉಡುಗೊರೆಯಾಗಿ ನೀಡಿದರೆ ಇನ್ನೂ ಚೆನ್ನು. ಈ ಪುಸ್ತಕದಲ್ಲಿ ಉಲ್ಲೇಖಿಸಿದ ಹಲವು ಯುಗಗಳ ಹೆಸರುಗಳು, ಡೈನಾಸಾರ್‌ಗಳ ಹೆಸರುಗಳನ್ನು ವಿದ್ಯಾರ್ಥಿಗಳು ಅದಾಗಲೇ ಕೊಂಚ ಓದಿರುತ್ತಾರೆ. ಆದ್ದರಿಂದ ಪುಸ್ತಕವನ್ನು ಅರಿಯುವುದು ಕಷ್ಟವೇನಿಲ್ಲ.
ಮುಖ್ಯವಾಗಿ ಈ ವಸುಂಧರೆಯಲ್ಲಿ ಹಲವು ಬಾರಿ ನಡೆದ ಗೋಳವ್ಯಾಪಿ ದುರಂತಗಳಿಂದ ಜೀವಸಂಕುಲವೇ ನಾಶವಾಗಿದ್ದು, ಅಳಿದುಳಿದ ಕೆಲವೇ ಜೀವಿಗಳು ಮತ್ತೆ ಛಲದಿಂದ ಬದುಕಿ ಈಗಿನ ಜೀವವೈವಿಧ್ಯಕ್ಕೆ ಕಾರಣವಾಗಿದ್ದು – ಇವನ್ನೆಲ್ಲ ಪ್ರಣಯ್ ಲಾಲ್ ತುಂಬ ವಿಶದವಾಗಿ ತಿಳಿಸಿದ್ದಾರೆ.
ಮನಸೆಳೆಯುವ ಹತ್ತಾರು ಚಿತ್ರಗಳ ಶೀರ್ಷಿಕೆಗಳೇ ಅರ್ಧ ಕತೆಹೇಳುತ್ತವೆ. ಈ ಪುಸ್ತಕಕ್ಕಾಗಿ ಸಂಗ್ರಹಿಸಿದ ಮಾಹಿತಿ ಮೂಲಗಳ ಬಗ್ಗೆ ಬರೆದ ಟಿಪ್ಪಣಿಯೇ ಇನ್ನೊಂದು ಕುತೂಹಲದ ಓದಿಗೆ ನಮ್ಮನ್ನು ಹಚ್ಚುತ್ತದೆ. ಪುಸ್ತಕದ ಜಾಕೆಟ್ ಅಂತೂ ಮನಮೋಹಕವಾಗಿದೆ. ಶ್ರೇಷ್ಠ ಮುದ್ರಣ ಗುಣಮಟ್ಟ. ಒಟ್ಟಾರೆ ನಾನು ಇತ್ತೀಚೆಗೆ ಓದಿದ, ಸ್ಪರ್ಶಿಸಿ ಅನುಭವಿಸಿದ ಒಂದು ಮುದ್ದಾದ ಪುಸ್ತಕ ಇದು ಎಂದು ಹೇಳಬಲ್ಲೆ.
ಬೇಳೂರು ಬ್ಲಾಗ್‌ಗಾಗಿ ಮಾಡಿದ ಪ್ರಣಯ್ ಲಾಲ್ ಸಂದರ್ಶನ ಇಲ್ಲಿದೆ:
“ಪ್ರಾದೇಶಿಕವಾಗಿಯೂ ನಿಸರ್ಗದ ಇತಿಹಾಸ ಬರೆಯುವ ಯೋಚನೆ ಇದೆ”
ಈ ಪುಸ್ತಕದಲ್ಲಿ ಕರ್ನಾಟಕದ ಸುಪ್ರಸಿದ್ಧ ಕಲ್ಲಿನ ರಚನೆ ಯಾಣವನ್ನೇ ಮರೆತುಬಿಟ್ರಾ ಹೇಗೆ ಎಂದು ನಾನು ಈ ಮೈಲ್ ಸಂದರ್ಶನದಲ್ಲಿ ಪ್ರಣಯ್ ಲಾಲ್ ಅವರನ್ನು ಪ್ರಶ್ನಿಸಿದೆ. ‘ಯಾಣ ನಿಜಕ್ಕೂ ಒಂದು ಅದ್ಭುತ ಶಿಲಾರಚನೆ. ಅಂತಹ ಹಲವು ಪ್ರದೇಶಗಳನ್ನು ನಾನು ಉಲ್ಲೇಖಿಸಬಹುದಿತ್ತು. ಆದರೆ ನಾನು ಯಾವುದನ್ನು ಸೇರಿಸಬೇಕು ಅಥವಾ ಬಿಡಬೇಕು ಅನ್ನೋದರ ಬಗ್ಗೆ ಆದ್ಯತೆ ನೀಡಬೇಕಾಗಿತ್ತು. ಹೀಗೆ ಸ್ಥಳೀಯವಾಗಿ ಪ್ರಸಿದ್ಧವಾಗಿರೋ ಹಲವು ಪ್ರದೇಶಗಳ ಬಗ್ಗೆ ಇನ್ನೂ ಆಳವಾಗಿ ಓದಿ ಅವುಗಳ ಬಗ್ಗೇನೇ ಪುಸ್ತಕ ಬರೆಯಬಹುದಲ್ವಾ ಅನ್ನೋದು ನನ್ನ ಆಸೆ’ ಎಂದು ಉತ್ತರಿಸಿದ್ದಾರೆ.
ಭಾರತದಲ್ಲಿ ನಿಸರ್ಗದ ಇತಿಹಾಸ ಕುರಿತ ಅಧ್ಯಯನ ಹೇಗೆ ನಡೆದಿದೆ? ಇದನ್ನು ನಾವು ಹೇಗೆ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳಬಹುದು ಎಂದು ನಾನು ಪ್ರಣಯ್ ಲಾಲ್ ಅವರನ್ನು ಕೇಳಿದೆ. ಅದಕ್ಕೆ ಅವರು ಸುದೀರ್ಘ ಮತ್ತು ಸ್ಪಷ್ಟ ಉತ್ತರವನ್ನೇ ಕೊಟ್ಟಿದ್ದಾರೆ.
ನಿಸರ್ಗದ ಇತಿಹಾಸದ ಬಗ್ಗೆ, ಅದರಲ್ಲೂ ವಿಶೇಷವಾಗಿ ಜಲ-ಜೀವಗಳ ಬಗ್ಗೆ ಸಾಕಷ್ಟು ಬರವಣಿಗೆ ಆಗಿದೆ. ಅದರಲ್ಲೂ ವಿಕ್ಟೋರಿಯನ್ ಕಾಲದಲ್ಲಿ ಇದ್ದ ವಸಾಹತುಶಾಹಿ ಆಸಕ್ತಿಗಳಿಂದ ಸ್ಥಳವಿಶೇಷ ಪ್ರಾಣಿಗಳು ಮತ್ತು ಸಸ್ಯಗಳ ಬಗ್ಗೆ ಕುತೂಹಲ ಹೆಚ್ಚಾಗೇ ಇತ್ತು. 19ನೇ ಶತಮಾಣದಿಂದ ಹಿಡಿದು ಸ್ವಾತಂತ್ರ್ಯ ಬರೋವರೆಗೆ ಭೂಪ್ರದೇಶಗಳು, ಖನಿಜಗಳು, ಜನ, ಕಾಡುಪ್ರಾಣಿಗಳ ಬಗ್ಗೆ ಬರೆಯುತ್ತಿದ್ದವರು ಅವುಗಳನ್ನು ಶೋಷಿಸುವ ಸಂಸ್ಥೆಗಳನ್ನೂ ಹುಟ್ಟುಹಾಕಿದರು. 17ನೆಯ ಶತಮಾನದಿಂದ ಹಿಡಿದು 19ನೆಯ ಶತಮಾನದವರೆಗೆ ಕೆಲವು ಯುರೋಪಿಯನ್ ಸಂಶೋಧಕ-ಲೇಖಕರು ಮತ್ತು ಹವ್ಯಾಸಿ ನಿಸರ್ಗವಾದಿಗಳು ಭಾರತದ ಕಾಡಿನ ಅದ್ಭುತ ಮಾಹಿತಿಗಳನ್ನು ಕಲೆಹಾಕಿದರು. ಆದರೆ ಸ್ವಾತಂತ್ರ್ಯ ಬಂದಮೇಲೆ ಭಾರತದ ಶಿಕ್ಷಣ ವ್ಯವಸ್ಥೆಯೂ ಬ್ರಿಟಿಶರ ಹಾಗೆಯೇ ಪ್ರಕೃತಿಯನ್ನು ಶೋಷಿಸುವ ಕಡೆಗೇ ಹೆಚ್ಚು ಕೇಂದ್ರಿತವಾಗಿತ್ತು. ನಮ್ಮ ದೇಶವನ್ನು ಕಟ್ಟಿದವರು ಪ್ರಕೃತಿಯನ್ನು ಒಂದು ಸಂಪೂರ್ಣ ಕಾಯವಾಗಿ ಕಾಣಲೇ ಇಲ್ಲ; ಇಲ್ಲೇ ನಾವು ಸೋತೆವು. ಎಲ್ಲವನ್ನೂ ಬಂಡವಾಳಶಾಹಿ ಬೆಳವಣಿಗೆ ಮತ್ತು ಬಳಕೆಯನ್ನು ಹೆಚ್ಚಿಸುವ ಹಲವು ವಿಧಗಳಾಗಿ ಒಡೆಯಲಾಯಿತು. ನಮ್ಮ ಪ್ರಾಕೃತಿಕ ಜಗತ್ತಿನ ಸಮಗ್ರ ತಿಳಿವಳಿಕೆ, ಅದು ಹೇಗೆ ಕೆಲಸ ಮಾಡುತ್ತದೆ ಎಂಬ ಮಾಹಿತಿಯ ಕೊರತೆಯಿಂದಾಗಿ ನಾವು ನಿಸರ್ಗ ಪ್ರಕೋಪಗಳನ್ನು ಮತ್ತು ದುರಂತಗಳನ್ನು ನಿಲ್ಲಿಸುವಲ್ಲಿ ಮತ್ತೆ ಮತ್ತೆ ಸೋತಿದ್ದೇವೆ.
ನಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೇ ಅವರಲ್ಲಿ ಈಗಿರುವ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳುವಂತೆ ಕುತೂಹಲವನ್ನು ಬೆಳೆಸಬೇಕಿದೆ. ಏಕೆಂದರೆ ಮುಂದಿನ ಪೀಳಿಗೆಯು ಈಗಿನವರು ರೂಪಿಸಿದ ಹಲವು ಸಂಕೀರ್ಣ ಸಮಸ್ಯೆಗಳನ್ನು ನಿರ್ವಹಿಸಬೇಕಿದೆ.
ಈಗಿನ ಅಭಿವೃದ್ಧಿ ಕಾರ್ಯಗಳಿಂದ ಸಹಜವಾಗೇ ನಿಸರ್ಗದ ಇತಿಹಾಸ ಹೇಳುವ ಕಲ್ಲುಗಳ ರಚನೆಗಳು ಹಾಳಾಗುತ್ತವೆ. ಇದಕ್ಕೇನಾದ್ರೂ ಪರಿಹಾರ ಇದೆಯೆ? ಈ ಪ್ರಶ್ನೆಗೆ ಪ್ರಣಯ್ ಲಾಲ್ `ನಮ್ಮ ಎಲ್ಲ ಭೂಪ್ರದೇಶಗಳನ್ನೂ ಸಂರಕ್ಷಿಸಲೇಬೇಕು; ಇದರಲ್ಲಿ ಹಣದ ಪ್ರಶ್ನೆ ಬರೋದೇ ಇಲ್ಲ. ಈಗ ಮೊದಲು ಸಂಪನ್ಮೂಲಗಳನ್ನು ಪಡೆದು ಆಮೇಲೆ ಪರಿಹಾರಕ್ಕಾಗಿ ಯತ್ನಿಸೋದು ಮೂರ್ಖತನ’ ಎಂದಿದ್ದಾರೆ.
ಭಾರತದ ಎಲ್ಲಾ ಪ್ರದೇಶಗಳ ಸಂಕ್ಷಿಪ್ತ ಇಸರ್ಗ ಇತಿಹಾಸ ಬರೆಯುವುದೇ ತನ್ನ ಆಸೆ ಎಂದು ತಿಳಿಸಿರುವ ಪ್ರಣಯ್ ಲಾಲ್, ತನ್ನ ಪ್ರವಾಸ ಮತ್ತು ಬರವಣಿಗೆಯನ್ನು ಹೀಗೆಯೇ ಮುಂದುವರಿಸುವುದಾಗಿ ತಿಳಿಸಿದ್ದಾರೆ. ನಿಜಕ್ಕೂ ಸಂತೋಷದ ಸಂಗತಿ.
ಹೆಚ್ಚುವರಿ ಓದಿಗೆ:
- ಪ್ರಣಯ್ ಲಾಲ್ ಸಂದರ್ಶನ:https://www.thehindu.com/lit-for-life/pranay-lal-talks-of-the-importance-of-conserving-indias-natural-history-in-museums-and-outside/article22374029.ece
- ` ದ ಹಿಂದು’ ಪತ್ರಿಕೆಯಲ್ಲಿ ಇಂಡಿಕ ಪುಸ್ತಕದ ವಿಮರ್ಶೆ : https://www.thehindu.com/books/books-reviews/on-the-origin-of-species-in-india/article17449619.ece
ಇಂಡಿಕ ಪುಸ್ತಕವನ್ನು ಓದಿದ ಮೇಲೆ ನಿಸರ್ಗ ಇತಿಹಾಸದ ಪುಸ್ತಕಗಳ ಹುಚ್ಚು ಹತ್ತಿ ಈ ಕೆಳಗಿನ ಪುಸ್ತಕಗಳ ಮೇಲೂ ಕಣ್ಣಾಡಿಸಿದೆ. ನೀವೂ ಓದಿ!
Ethnobotany of India: Volume 1-5: T. Pullaiah, K. V. Krishnamurthy, Bir Bahadur (Apple Academic Press, 2017)
Provides an informative overview of human-plant interrelationships in this southern area of India. The volume looks at the ethnic diversity, ethnobotany, ethnomedicine, ethnoveterinary medicine, and ethnic food of various regions. With chapters written by experts in the field, the book provides comprehensive information on the tribals (the indigenous populations of the region) and knowledge on plants that grow around them.