ಈಗ ಉತ್ತರಪ್ರದೇಶ ಮುಖ್ಯಮಂತ್ರಿಯವರಿಗೆ ಆರ್ಥಿಕ ಸಲಹೆಗಾರರಾಗಿರುವ ಕೆ ವಿ ರಾಜು ಹಾಗೂ ಸಂಶೋಧಕಿ ಎಸ್ ಮಾನಸಿ ಅವರು ಭಾರತದಲ್ಲಿರುವ ಮತಧರ್ಮಗಳಲ್ಲಿ ಆಚರಣೆಯಲ್ಲಿರುವ ಅನ್ನದಾನದ ಸಂಪ್ರದಾಯದ ಕುರಿತು ನಡೆಸಿದ ಸಂಶೋಧನಾ ಗ್ರಂಥವನ್ನು ಮೂಲ ಇಂಗ್ಲಿಶಿನಿಂದ ಕನ್ನಡ, ಹಿಂದಿ, ಮರಾಠಿ, ಉರ್ದು, ಗುಜರಾತಿ, ಬಂಗಾಳಿ, ತೆಲುಗು, ತಮಿಳು ಮತ್ತು ಸಂಸ್ಕೃತ – ಈ ಒಂಬತ್ತು ಭಾಷೆಗಳಿಗೆ ಅನುವಾದಿಸುವ ಸಮನ್ವಯಕಾರನಾಗಿ ಕೆಲಸ ಮಾಡಿ ಮುಗಿಸಿದೆ!
ಎರಡು ವರ್ಷಗಳ ಕಾಲಾವಧಿಯಲ್ಲಿ 120ಕ್ಕೂ ಹೆಚ್ಚು ಅನುವಾದಕರನ್ನು ಪಟ್ಟಿ ಮಾಡಿ ಒಂಬತ್ತು ಭಾಷೆಗಳಿಗೆ ಹೇಗೋ ಅನುವಾದಕರನ್ನು ಹೊಂದಿಸಿ, ಒಟ್ಟಾರೆ ಸುಮಾರು ಎ4 ಗಾತ್ರದ 1800 ಪುಟಗಳನ್ನು ನಾನೇ ಸ್ವತಃ (ಉರ್ದು ಹೊರತುಪಡಿಸಿ) ಇನ್‌ಡಿಸೈನ್ ಬಳಸಿ ಪುಟ ವಿನ್ಯಾಸ ಮಾಡಿ, ಕರಡು ತಿದ್ದಿ, ಮುಖಪುಟ ರೂಪಿಸಿ ಅಂತಿಮ ಡಿಜಿಟಲ್ ಪ್ರತಿಗಳನ್ನು ಸಿದ್ಧಪಡಿಸಿದ ಹೆಮ್ಮೆ ನನ್ನದು. ಉರ್ದು ಪ್ರತಿಯನ್ನು ತನ್ನ ತೀವ್ರ ಅನಾರೋಗ್ಯದ ನಡುವೆಯೂ ಸಿದ್ಧಪಡಿಸಿದ ನನ್ನ ಸಿಐಐಎಲ್ ಕಾಲದ ಮಿತ್ರ ಶ್ರೀ ಮೊಹಮ್ಮದ್ ಅನ್ವರ್ ಗೆ ನನ್ನ ಪ್ರೀತಿ ಭರಿತ ಸಲಾಂ!
ಆದರೆ ಈ ಯೋಜನೆಯನ್ನು ರೂಪಿಸಿದ ಡಾ. ಕೆ ವಿ ರಾಜು ಅವರ ಬೆಂಬಲ ಮತ್ತು ಸಹನೆಯನ್ನು ಎಂದೂ ಮರೆಯಲಾರೆ!! ಹೆಜ್ಜೆ ಹೆಜ್ಜೆಗೂ ಅವರು ನೀಡಿದ ಧೈರ್ಯ, ಸಲಹೆ, ಸೂಚನೆಗಳೇ ಈ ಯೋಜನೆಯನ್ನು ದಡ ತಲುಪಿಸಿದವು.
ಅನುವಾದಕರು ಮತ್ತು ಪುಸ್ತಕ ಪರಾಮರ್ಶೆ ಮಾಡಿದವರನ್ನೂ ನಾನು ಇಲ್ಲಿ ವಿನಯಪೂರ್ವಕ ಸ್ಮರಿಸುವೆ.
ಈ ಯೋಜನೆಯನ್ನು ಮೊದಲು ರೂಪಿಸಿದ್ದು ಬೆಂಗಳೂರಿನ ಸೆಂಟರ್ ಫಾರ್ ಎಜುಕೇಶನಲ್ ಎಂಡ್ ಸೋಶಿಯಲ್ ಸ್ಟಡೀಸ್ (ಸೆಸ್). ಅದಾದ ಮೇಲೆ ಚಾಣಕ್ಯ ವಿವಿಯೂ ಇದರಲ್ಲಿ ಭಾಗಿಯಾಯ್ತು. ಇಡೀ ಯೋಜನೆಗೆ ಸಂಶೋಧನೆಯಿಂದ ಹಿಡಿದು ಅನುವಾದದವರೆಗೆ ಹಣಕಾಸಿನ ನೆರವು ನೀಡಿದ್ದು ಶತಮಾನ ಕಳೆದರೂ ಸಕ್ರಿಯವಾಗಿರುವ ದ ಮಿಥಿಕ್ ಸೊಸೈಟಿ ಸಂಸ್ಥೆ. ಅದರ ಅಧ್ಯಕ್ಷ ಶ್ರೀ ವಿ ನಾಗರಾಜ್ ಮತ್ತು ಅವರ ತಂಡವು ನೀಡಿದ ನೆರವನ್ನು ಅತ್ಯಂತ ವಿನೀತವಾಗಿ ಸ್ಮರಿಸುವೆ.
ಈ ಯೋಜನೆಯ ಜಾರಿಯಲ್ಲಿ ನನಗೆ ನೆರವಾದ (ನನ್ನ ಕಾಟವನ್ನು ಸಹಿಸಿಕೊಂಡ!) ನನ್ನ ಮಾಜಿ ಸಹಾಯಕ ಶ್ರೀ ಅಮಿತ್ ಹೊಸಮನಿಗೂ ನನ್ನ ಕೃತಜ್ಞತೆಗಳು.
ಈ ಪುಸ್ತಕದ ಮೂಲ ಆಂಗ್ಲ ಆವೃತ್ತಿಯು ಈ ಕೆಳಗಿನ ಕೊಂಡಿಯಲ್ಲಿ ಸಿಗುತ್ತದೆ.
ಇದರಲ್ಲಿ ಅಧ್ಯಯನ ಮಾಡಿದ ಪ್ರಕರಣಗಳ ಸಮಗ್ರ ಮಾಹಿತಿಯೂ ಇದೆ. ಅನುವಾದದ ಕೃತಿಯಲ್ಲಿ ಕೇವಲ ಸಂಶೋಧನಾ ಅಧ್ಯಾಯಗಳಿವೆ.
ಮೇಲೆ ತಿಳಿಸಿದ ಮೂರೂ ಸಂಸ್ಥೆಗಳು ಸದ್ಯದಲ್ಲೇ ಈ ಆವೃತ್ತಿಗಳನ್ನು ಮುಕ್ತವಾಗಿ ಆನ್‌ಲೈನ್ ಪ್ರತಿಗಳಾಗಿ ಬಿಡುಗಡೆ ಮಾಡಲಿವೆ.
ನನ್ನ ಧಾರವಾಡದ ವಾಸದ ಆರಂಭವನ್ನು ಹೀಗೆ (ಇನ್ನೂ ಕೆಲವು ಬರವಣಿಗೆ – ನಿರ್ವಹಣೆಯ ಯೋಜನೆಗಳೊಂದಿಗೆ) ಕ್ರಿಯಾಶೀಲವಾಗಿಸಿದ ಎಲ್ಲರಿಗೂ ನನ್ನ ಮನಃಪೂರ್ವಕ ಕೃತಜ್ಞತೆಗಳು.
ಅನ್ನದಾನ ನಮ್ಮ ನೆಲದ ಸಂಸ್ಕೃತಿ. ಹಿಂದು ಧರ್ಮ, ಜೈನ, ಬೌದ್ಧ, ಸಿಖ್, ಕ್ರೈಸ್ತ, ಇಸ್ಲಾಂ – ಈ ಮತಗಳಲ್ಲಿ ಇರುವ ಅನ್ನದಾನದ ಪರಂಪರೆ ಮತ್ತು ಸಮಕಾಲೀನ ಪ್ರಕಲ್ಪಗಳನ್ನು ಅಧ್ಯಯನ ಮಾಡಿ ಈ ಕೃತಿ ರೂಪಿಸಲಾಗಿದೆ.
ಒಟ್ಟಿಗೆ ಊಟ ಮಾಡುವುದು ಜನರಲ್ಲಿ ಬಾಂಧವ್ಯ ಬೆಳೆಸುತ್ತದೆ ಮತ್ತು ದೈಹಿಕ, ಸಾಮಾಜಿಕ ಮತ್ತು ಭಾವನಾತ್ಮಕವಾಗಿ ಅವರ ಮೇಲೆ ಪರಿಣಾಮ ಬೀರುತ್ತದೆ. ಆಹಾರ ಹಂಚಿಕೆಯ ಆಚರಣೆಗಳು ಮತ್ತು ಪರಂಪರೆಯ ಬಗ್ಗೆ ಈ ಪುಸ್ತಕವು ಬೆಳಕು ಚೆಲ್ಲುತ್ತದೆ. ಭಾರತದ ಪ್ರಮುಖ ಧರ್ಮಗಳಾದ ಹಿಂದೂ, ಬೌದ್ಧ, ಜೈನ, ಸಿಖ್, ಕ್ರಿಶ್ಚಿಯನ್ ಮತ್ತು ಇಸ್ಲಾಂಗಳಲ್ಲಿ ಇರುವ ಆಚರಣೆಗಳ ಬಗ್ಗೆ ಗಮನ ಹರಿಸಲಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆ, ಹವಾಮಾನ ಬದಲಾವಣೆ, ಕೃಷಿ ಬಿಕ್ಕಟ್ಟು, ಯುದ್ಧಗಳು ಮತ್ತು ಸಂಘರ್ಷಗಳು ಮತ್ತು ಕೊವಿಡ್-19 ಪಿಡುಗಿನಿಂದಾಗಿ ಜಗತ್ತಿನ ಎಲ್ಲ ದೇಶಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಪೈಕಿ ಆಹಾರದ ಆತಂಕವು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಭಾರತದ ವಿವಿಧೆಡೆಗಳಿಂದ ಸಂಗ್ರಹಿಸಿದ ನಿರ್ದಿಷ್ಟ ಪ್ರಕರಣಗಳ ನಿದರ್ಶನ ಅಧ್ಯಯನ (ಕೇಸ್ ಸ್ಟಡಿ) ಸೇರಿದಂತೆ ಈ ಪುಸ್ತಕವು ಆಹಾರ ಹಂಚಿಕೆಯ ಪಾರಂಪರಿಕ ಆಚರಣೆಗಳನ್ನು ಪರಿಶೀಲಿಸುತ್ತದೆ. ಹಲವು ಮಹತ್ವದ ವಿಷಯಗಳೊಂದಿಗೆ ದೇಗುಲಗಳು, ಮಸೀದಿ ಮತ್ತು ಗುರುದ್ವಾರಗಳಲ್ಲಿರುವ ಪದ್ಧತಿಗಳನ್ನು ಪರಿಶೀಲಿಸಲಾಗಿದೆ.
ಸಮಾಜದಲ್ಲಿ ಸಂಕಷ್ಟ ಅನುಭವಿಸುತ್ತಿರುವ ವರ್ಗಗಳ ಸಾಮಾಜಿಕ ಮತ್ತು ಐಹಿಕ ಬದುಕಿನಲ್ಲಿ ಇಂಥ ಆಚರಣೆಗಳ ಮಹತ್ವದ ಬಗ್ಗೆ ಒತ್ತಿ ಹೇಳಲಾಗಿದೆ. ಮುಖ್ಯವಾಗಿ ಕೊವಿಡ್-19 ಪಿಡುಗು ವ್ಯಾಪಿಸಿದ್ದ ಸಂದರ್ಭದಲ್ಲಿ ಆಹಾರ ಹಂಚಿಕೆಗೆ ಸಂಬಂಧಿಸಿದ ಪಾರಂಪರಿಕ ಧಾರ್ಮಿಕ ಆಚರಣೆಗಳು ಹಸಿವಿನ ಬಿಕ್ಕಟ್ಟನ್ನು ನಿರ್ವಹಿಸಲು ಹೇಗೆ ನೆರವಾಯಿತು ಎಂಬುದನ್ನು ಈ ಕೃತಿಯು ವಿವರಿಸುತ್ತದೆ. ಹಸಿವು ಮತ್ತು ಆಹಾರ ಬಿಕ್ಕಟ್ಟಿಗೆ ದೀರ್ಘಾವಧಿ ಪರಿಹಾರಗಳನ್ನು ಸೂಚಿಸಲಾಗಿದೆ.
ಭಾರತದಲ್ಲಿ ಆಹಾರ ಹಂಚಿಕೆ ಮತ್ತು ದಾನದ ಆಚರಣೆಯನ್ನು ಅಧ್ಯಯನಕ್ಕೆ ಒಳಪಡಿಸಿರುವ ಮೊದಲ ಕೃತಿ ಇದು. ಸಮಾಜಶಾಸ್ತ್ರ, ಮಾನವಶಾಸ್ತ್ರ, ಆಹಾರ ಅಧ್ಯಯನ, ಧರ್ಮಶಾಸ್ತ್ರ, ಭದ್ರತಾ ಅಧ್ಯಯನ, ರಾಜಕೀಯ ಅರ್ಥಶಾಸ್ತ್ರ, ಸಾರ್ವಜನಿಕ ನೀತಿ ಮತ್ತು ದಕ್ಷಿಣ ಏಷ್ಯಾದ ಇತಿಹಾಸ ಹಾಗೂ ಸಂಸ್ಕೃತಿಯಲ್ಲಿ ಆಸಕ್ತಿಯಿರುವ ವಿದ್ವಾಂಸರು ಹಾಗೂ ಸಂಶೋಧಕರು ಓದಲೇಬೇಕಾದ ಪುಸ್ತಕ ಇದು.