ಹೊಸ ಅಣೆಕಟ್ಟುಗಳನ್ನು ಕಟ್ಟುವುದಕ್ಕೇ ಅವಕಾಶ ಇಲ್ಲವಾಗಿರುವ ಭಾರತದಲ್ಲಿ ಹಳೆಯ ನೀರಾವರಿ ವ್ಯವಸ್ಥೆಯನ್ನು ಅರಿತು ನಡೆಯುವ ಕಾಲ ಒದಗಿದೆ. ಶತಮಾನಗಳಿಂದ ಸಕ್ರಿಯವಾಗಿರುವ ಹಲವು ಅಣೆಕಟ್ಟುಗಳಿರುವ ಭಾರತದಲ್ಲಿ ಹೊಸ ಅಣೆಕಟ್ಟುಗಳು, ನೀರಾವರಿ ವ್ಯವಸ್ಥೆಗಳು ವಿಫಲವಾಗಲು ಪರಂಪರೆಯ ವಿಸ್ಮರಣೆಯೇ ಕಾರಣ. ಅದರಲ್ಲೂ ಜಲಮೂಲಗಳನ್ನು ಸಂರಕ್ಷಿಸದ ಅಪರಾಧ ನಮ್ಮದು. ದೇಶ-ವಿದೇಶದ ಸಂಶೋಧಕರೂ ಇದನ್ನೇ ಹೇಳುತ್ತಾರೆ.
`ಬೆಂಗಳೂರು ಮಹಾನಗರದ ಪ್ರದೇಶದಲ್ಲಿ ಬೀಳುವ ಮಳೆನೀರೇ ನಾವು ಕಾವೇರಿ ನದಿಗೆ ನೂರಾರು ಕಿಮೀ ಉದ್ದದ ಕೊಳವೆ ಹಾಕಿ ಎಳೆಯುವ ನೀರಿನ ಪ್ರಮಾಣಕ್ಕಿಂತ ಎಷ್ಟೋ ಪಟ್ಟು ಜಾಸ್ತಿ ಇದೆ. ಕಾವೇರಿ ನೀರು ಎತ್ತುವುದಕ್ಕೆ ಬೇಕಾದ ವಿದ್ಯುತ್ತನ್ನು ಇನ್ನಾವುದೋ ಕಾಡಿನಲ್ಲಿ ಸ್ಥಾಪಿಸಿದ ಸ್ಥಾವರದಲ್ಲಿ ಉತ್ಪಾದಿಸುತ್ತೇವೆ. ಹೀಗೆ ತಂದ ದುಬಾರಿ ನೀರನ್ನು ಬೇಕಾಬಿಟ್ಟಿ ಬಳಸಿ ಕೊಳಕು ರಾಡಿ ಎಬ್ಬಿಸಿದ ಮೇಲೆ ಅದನ್ನು ಬೆಂಗಳೂರಿನಿಂದ ೫೦ ಕಿಮೀ ದೂರದ ಇನ್ನಾವುದೋ ಕೆರೆಗೆ ಹರಿಸಿಬಿಡುತ್ತೇವೆ. ಇದು ನಮ್ಮ ನಾಗರಿಕತೆಯೆ? ಇದೇನು ಅಭಿವೃದ್ಧಿಯೆ? ಇದನ್ನು ಸುಸ್ಥಿರ ಚಿಂತನೆ ಎಂದು ಕರೆಯಬಹುದೆ?’
ವೃತ್ತಿಯಲ್ಲಿ ಲ್ಯಾಂಡ್‌ಸ್ಕೇಪ್ ಇಂಜಿನಿಯರ್ ಆಗಿರುವ ಮೋಹನ್ ಎಸ್ ರಾವ್ ಈ ಪ್ರಶ್ನೆಗಳನ್ನು ಕೇಳುವುದಕ್ಕೆ ಕಾರಣವಿದೆ. ಕೆಲವೇ ವರ್ಷಗಳ ಹಿಂದಷ್ಟೆ ಅವರು ಎರಡು ಪ್ರಮುಖ ಅಂತರ್ಜಲ ಪುನಶ್ಚೇತನ ಯೋಜನೆಗಳಲ್ಲಿ ಭಾಗವಹಿಸಿದ್ದಾರೆ. ಎರಡೂ ಯೋಜನೆಗಳಲ್ಲಿ ಬೇಕಾದಷ್ಟು ನೀರು ಚಿಮ್ಮಿದ್ದನ್ನು ದಾಖಲಿಸಿದ್ದಾರೆ. ಪರಂಪರೆಯನ್ನು ಅರಿತರೆ, ಭೂಮಿಯ ಏರಿಳಿತಗಳನ್ನು ಅಳೆದರೆ, ತುಂಬಿಕೊಂಡಿದ್ದ ಹೂಳನ್ನು ಬದಿಗೆ ಸರಿಸಿದರೆ ಮತ್ತೆ ಜಲಮರುಪೂರಣ ಸಾಧ್ಯ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ.
ಅವರು ಉದಾಹರಿಸುವ ಮೊದಲ ಯೋಜನೆಯನ್ನು ನೀವು ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿಯಲ್ಲಿ ಕಾಣಬಹುದು. ಇಲ್ಲಿದ್ದ ಒಂದು ಪುಷ್ಕರಣಿಯನ್ನು ಪುನಶ್ಚೇತನಗೊಳಿಸಿ ನೀರು ತರಿಸಿದ ಬಹುಸಂಸ್ಥೆಗಳ ಕಾರ್ಯದಲ್ಲಿ ಮೋಹನ್‌ರಾವ್ ಕೂಡಾ ಭಾಗಿಯಾಗಿದ್ದರು. ಪುಷ್ಕರಣಿಯ ಸುತ್ತಮುತ್ತ ಇದ್ದ ಗುಡ್ಡಗಳಲ್ಲಿ ಶೇಖರವಾಗಿದ್ದ ನೀರು ಕ್ರಮೇಣ ಅಲ್ಲಿಗೆ ಹರಿದು ಸೇರುವ ಹೊತ್ತಿಗೆ ಸ್ಫಟಿಕಶುದ್ಧವಾಗಿದೆ! `ಇದೇನು ಮ್ಯಾಜಿಕ್ ಅಲ್ಲ, ಅಥವಾ ವಿಶೇಷವೂ ಅಲ್ಲ; ಈ ಪ್ರದೇಶದಲ್ಲಿ ನಮ್ಮ ಹಿರಿಯರು ಹೀಗೆ ಮಾಡಿರಬಹುದು ಎಂಬ ಊಹೆಯನ್ನು ಕಾರ್ಯಗತಗೊಳಿಸಿದ್ದಕ್ಕೇ ಇಷ್ಟು ನೀರು ಬಂದಿದೆ’ ಎಂದು ಮೋಹನ್‌ರಾವ್ ಕಣ್ಣರಳಿಸುತ್ತಾರೆ. ಒಂದು ಅಂದಾಜಿನ ಪ್ರಕಾರ, ಅಭ್ಯುದಯದ ಉತ್ತುಂಗದಲ್ಲಿದ್ದ ಶತಮಾನಗಳ ಹಿಂದಿನ ಹಂಪಿಯಲ್ಲಿ ಆರು ಲಕ್ಷ ಜನರಿದ್ದರು. ಆಗಲೇ ಇಂಥ ವೈಜ್ಞಾನಿಕ ಜಲವ್ಯವಸ್ಥೆ ಇತ್ತು. ಬರಗಾಲದ ಪ್ರದೇಶವಾಗಿಯೂ ಅಲ್ಲಿ ಸಮೃದ್ಧಿ ನೆಲೆಸಿತ್ತು. `ಐನೂರು ವರ್ಷಗಳ ಹಿಂದೆ ಹಂಪಿಯಲ್ಲಿ ಸಾಧ್ಯವಾಗಿದ್ದ ವ್ಯವಸ್ಥೆಯನ್ನು ನಾವು ಬೆಂಗಳೂರಿಗೆ ಕಲ್ಪಿಸಲಾರೆವೆ?’ ಎಂದು ಮೋಹನ್‌ರಾವ್ ಕೇಳುವುದು ಈ ಹಿನ್ನೆಲೆಯಲ್ಲಿ. `ನಮ್ಮ ಪೂರ್ವಜರು ಹಲವು ಪ್ರಯೋಗಗಳನ್ನು ಮಾಡಿ ಅವುಗಳಲ್ಲಿ ಯಶಸ್ವಿಯಾಗಿದ್ದನ್ನೇ ಅನುಷ್ಠಾನಕ್ಕೆ ತರ್‍ತಾ ಇದ್ದರು. ಆದರೆ ನಾವು ಅತಿವೇಗದ ಭರಾಟೆಗೆ ಸಿಕ್ಕಿಕೊಂಡು ರಾತ್ರೋರಾತ್ರಿ ನೀರು ತರುವ ಯೋಜನೆಗಳಿಗೆ ಸಹಿ ಹಾಕುತ್ತಿದ್ದೇವೆ. ಇದು ತಪ್ಪು’ ಎಂದು ಅವರು ಖಚಿತವಾಗಿ ನುಡಿಯುತ್ತಾರೆ.
ಹಂಪಿಯಲ್ಲಿ ನಾನು ಇದ್ದ ಹತ್ತೂ ವರ್ಷಗಳು ನಾನು ಪಾಠ ಕಲಿತ ದಿನಗಳೇ ಹೊರತು ಅಲ್ಲಿ ನಾನು ಹೊಸದೇನನ್ನೂ ಮಾಡಲಿಲ್ಲ ಎಂದು ಮೋಹನ್‌ರಾವ್ ಒಪ್ಪಿಕೊಳ್ಳುತ್ತಾರೆ. ಈ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಲು ಅವರು ಉಪಗ್ರಹ ಚಿತ್ರಗಳನ್ನು, ಭೂಮಾಹಿತಿ ವ್ಯವಸ್ಥೆಯನ್ನು (ಜಿಐಎಸ್), ವಿವಿಧ ಅಧ್ಯಯನಗಳನ್ನು ಅವಲಂಬಿಸಿದ್ದು ನಿಜ.
ಭಾರತದಲ್ಲಿ ಹಂಪಿಯಂಥ ಸಾವಿರಾರು ಪ್ರದೇಶಗಳಿವೆ. ಅವೆಲ್ಲ ಕಡೆಗಳಲ್ಲೂ ಹೀಗೆ ಯತ್ನಗಳಾದರೆ ಎಲ್ಲೆಡೆಯೂ ಮಳೆನೀರನ್ನು ವರ್ಷಪೂರ್ತಿ ಬಳಸುವ ವ್ಯವಸ್ಥೆ ಖಂಡಿತ ಸಾಧ್ಯ ಎಂದು ಮೋಹನ್‌ರಾವ್ ಹೇಳುತ್ತಾರೆ. ಬಯಲು, ಬೆಟ್ಟ, ನದಿ, ಕಾಡು, ನಗರ – ಇವುಗಳ ಸಂಬಂಧವನ್ನು ಸರಿಯಾಗಿ ಅರ್ಥ ಮಾಡಿಕೊಂಡರೇನೇ ಇವೆಲ್ಲ ಸಾಧ್ಯ ಎಂಬುದು ಅವರ ಸ್ಪಷ್ಟನುಡಿ.
ಹಾಥಿಗಾಂವ್ ಕಥೆ
ಮೋಹನ್‌ರಾವ್ ಭಾಗವಹಿಸಿದ್ದ ಇನ್ನೊಂದು ಮಹತ್ತ್ವದ ಜಲಮರುಪೂರಣದ ಕಥೆಯನ್ನು ಕೇಳಿ: ಜೋಧ್‌ಪುರದಿಂದ ೧೧ ಕಿಮೀ ದೂರದಲ್ಲಿರುವ ಅಂಬರ್ ಕೋಟೆಯ ಬಳಿ ಹಾಥಿಗಾಂವ್ ಎಂಬ ಊರಿದೆ. ಹೆಸರೇ ಹೇಳುವಂತೆ ಇಲ್ಲಿ ೧೫೦ಕ್ಕೂ ಹೆಚ್ಚು ಆನೆಗಳಿವೆ; ಅವುಗಳನ್ನೇ ಅವಲಂಬಿಸಿ ಪ್ರವಾಸೋದ್ಯಮದ ಮೂಲಕ ಜೀವನ ನಿರ್ವಹಣೆ ಮಾಡುತ್ತಿರುವ ಕುಟುಂಬಗಳಿವೆ. ದುರದೃಷ್ಟವಶಾತ್ ಈ ಆನೆಗಳಿಗೆ ಬೇಕಾದಷ್ಟು ನೀರು ಸಿಗದೇ ಸಮಸ್ಯೆ ಹುಟ್ಟಿಕೊಂಡಿತು. ಪರಿಹಾರಮಾರ್ಗಗಳನ್ನು ಹುಡುಕುವ ತಂಡದಲ್ಲಿ ಮೋಹನ್‌ರಾವ್ ಕೂಡಾ ಇದ್ದರು.
ಅಲ್ಲಿಯೂ ಮೋಹನ್‌ರಾವ್ ಮಾಡಿದ್ದಿಷ್ಟೆ: ಊರಿನ ಸುತ್ತಮುತ್ತಲ ಪ್ರದೇಶದ ನೂರಾರು ವರ್ಷಗಳ ಇತಿಹಾಸವನ್ನು ಓದಿಕೊಂಡರು; ಭೌಗೋಳಿಕ ಅಂಶಗಳನ್ನು ಅಧ್ಯಯನ ಮಾಡಿದರು; ಊರಿನ ಜೀವನಶೈಲಿಯನ್ನು ಅರಿತರು; ವರ್ಷಕ್ಕೊಮ್ಮೆ ಹಠಾತ್ತಾಗಿ ಬೀಳುವ ೨೦೦ ಮಿಮೀ ಮಳೆಯನ್ನೇ ಹಿಡಿದಿಟ್ಟುಕೊಳ್ಳುವುದು ಹೇಗೆ ಎಂದು ಯೋಚಿಸಿದರು. ಅದಕ್ಕೊಂದು ವ್ಯವಸ್ಥೆ ಕಲ್ಪಿಸಿದರು. ಅಂತಾರಾಷ್ಟ್ರೀಯ ಸೂತ್ರಗಳ ಪ್ರಕಾರ ಪ್ರತೀ ಮನುಷ್ಯನಿಗೆ ಬದುಕಲು ಪ್ರತಿದಿನ ೧೩೫ ಲೀಟರ್ ನೀರು ಸಾಕು. ಆದರೆ ಒಂದು ಆನೆಯು ದಿನಂಪ್ರತಿ ಸರಾಸರಿ ೪೦೦ ಲೀಟರ್ ನೀರನ್ನು ಕುಡಿಯುತ್ತದೆ. ಇನ್ನು ಅದರ ಸ್ನಾನಕ್ಕೆ ಮತ್ತಿತರ ಅಗತ್ಯಗಳಿಗೆ ಎಷ್ಟು ನೀರು ಬೇಕು ಎಂಬುದನ್ನು ನೀವೇ ಯೋಚಿಸಿ! ಹಾಥಿಗಾಂವ್‌ನ ಅಗತ್ಯಗಳಿಗೆ ಒಟ್ಟು ವಾರ್ಷಿಕ ೧೫ ಕೋಟಿ ಲೀಟರ್ ನೀರು ಬೇಕು ಎಂದು ಗುರುತಿಸಲಾಯಿತು.
ಹಲವು ತಿಂಗಳುಗಳ ಯತ್ನ ಮತ್ತು ಯೋಜನೆಯ ಬಳಿಕ ಅಲ್ಲಿನ ಹೊಳೆಯಲ್ಲಿ ನೀರಿದೆ. ಆನೆಗಳೂ, ಅವುಗಳನ್ನೇ ಆಧರಿಸಿದ ಕುಟುಂಬಗಳೂ ಅಲ್ಲೇ ವಾಸ್ತವ್ಯ ಮುಂದುವರಿಸಿವೆ. ಈಗ ಮೊದಲ ಹಂತದಲ್ಲಿ ಆನೆಗಳ ಬದುಕಿಗೆ ಬಲ ಬಂದಿದೆ. ಇನ್ನುಳಿದ ಆನೆಗಳಿಗೂ ಸದ್ಯದಲ್ಲೇ ನೀರು ಲಭ್ಯವಾಗಲಿದೆ ಎಂದು ಮೋಹನ್‌ರಾವ್ ಖುಷಿಯಿಂದ ಹೇಳುತ್ತಾರೆ.
ಎತ್ತಿನಹೊಳೆಯಿಂದಲೋ, ಶರಾವತಿ ನದಿಯಿಂದಲೋ ಬೆಂಗಳೂರಿಗೆ ನೀರು ತರುವ ಅತ್ಯಾಧುನಿಕ ಯೋಜನೆಗಳ ಬಗ್ಗೆ ಸುದ್ದಿಗಳು ಹೆಚ್ಚಾಗುತ್ತಿರುವ ಈ ಹೊತ್ತಿನಲ್ಲಿ ಇಂಥ ಯಶೋಗಾಥೆಗಳು ನಮಗೆ ಪ್ರೇರಣೆ ನೀಡುತ್ತವೆ.
ಪ್ರೊ|| ಕ್ಯಾಥಲೀನ್ ಅಧ್ಯಯನ ಹೇಳುವುದೇನು?
ಅದಿರಲಿ, ವಿಜಯನಗರ ಸಾಮ್ರಾಜ್ಯದ ನೀರಾವರಿ ವ್ಯವಸ್ಥೆಯನ್ನು ಅಧ್ಯಯನ ಮಾಡಿದ ಅಮೆರಿಕದ ಪುರಾತತ್ವಶಾಸ್ತ್ರಜ್ಞೆ, ಶಿಕಾಗೋ ವಿಶ್ವವಿದ್ಯಾಲಯದ ಪ್ರೊ|| ಕ್ಯಾಥಲೀನ್ ಡಿ ಮೋರಿಸನ್ ಎಂಬ ಸಂಶೋಧಕಿ ಹುಡುಕಿ ತೆಗೆದ ಅಂಶಗಳನ್ನಾಗಲೀ, ಸಾಂಚಿ ಸ್ತೂಪದ ಸುತ್ತಮುತ್ತಲ ನೀರಾವರಿ ವ್ಯವಸ್ಥೆಯನ್ನು ದಾಖಲಿಸಿದ ಜೂಲಿಯಾ ಶಾರವರ ಸಂಶೋಧನೆಗಳನ್ನಾಗಲೀ ನೀವು ಓದಲೇಬೇಕು. ಬಹುಶಃ ನಮ್ಮ ಆಡಳಿತಶಾಹಿಯ ಕಣ್ಣು ಆಗಲಾದರೂ ತೆರೆದೀತು.
ಪ್ರೊ|| ಕ್ಯಾಥಲೀನ್‌ರ ಡಾಕ್ಟರೇಟ್ ಪ್ರಬಂಧದ ಶೀರ್ಷಿಕೆಯೇ: `ವಿಜಯನಗರದಲ್ಲಿ ಉತ್ಪಾದನಾ ತೀವ್ರತೆ; ಕೃಷಿಭೂಮಿಗಳ ರೂಪಾಂತರ’. ಅದೇ ಪ್ರದೇಶದಲ್ಲಿರುವ ಕರಡಿಗಳ ಆವಾಸಸ್ಥಾನ ದರೋಜಿ ಕಣಿವೆಯಲ್ಲೂ ಪ್ರೊ|| ಕ್ಯಾಥಲೀನ್ ಅಡ್ಡಾಡಿದ್ದಾರೆ; ತುಂಗಭದ್ರಾ ಕಣಿವೆಯ ನಗರ ಸಮೀಕ್ಷೆಯನ್ನೂ ಅವರು ಮಾಡುತ್ತಿದ್ದಾರೆ. ಎರಡು ವರ್ಷಗಳ ಹಿಂದಷ್ಟೆ ಅವರು ನೆಹರೂ ಸ್ಮಾರಕ ಉಪನ್ಯಾಸದಲ್ಲಿ ಭಾಗವಹಿಸಿ ಬರೆದಿರುವ ಪ್ರಬಂಧದಲ್ಲಿ ಭಾರತದ ಪರಿಸರದ ಭವಿಷ್ಯಕ್ಕೆ ಗತಕಾಲವು ಎಷ್ಟು ಮಹತ್ತ್ವದ್ದು ಎಂಬುದನ್ನು ಸಂಶೋಧನಾ ಮಾಹಿತಿಗಳೊಂದಿಗೆ ವಿವರಿಸಿದ್ದಾರೆ.
ವರ್ಷಕ್ಕೆ ಹೆಚ್ಚೆಂದರೆ ೫೦೦ ಮಿಮೀ ಮಳೆಯಾಗುವ ಈ ಪ್ರದೇಶದಲ್ಲಿ ಯಾವಾಗಲೂ ಗರಿಷ್ಠ ನೀರು ಬೇಡುವ ಭತ್ತ ಮತ್ತು ಬಾಳೆ ಕೃಷಿಯನ್ನೇ ಇಲ್ಲಿನ ಜನರು ಆಗಲೂ, ಈಗಲೂ ಮಾಡುತ್ತಿದ್ದಾರೆ ಎಂದರೆ ಯೋಚಿಸಿ! ವಿಜಯನಗರ ಸಾಮ್ರಾಜ್ಯವು ಸ್ಥಾಪನೆಯಾದ ೧೪ನೇ ಶತಮಾನದ ಆರಂಭದಲ್ಲಿ ಇದ್ದ ಭತ್ತದ ಕೃಷಿಯು ೧೬ನೇ ಶತಮಾನದಲ್ಲಿ ಹೆಚ್ಚಾಯಿತು; ಜೊತೆಗೇ ಒಣಭೂಮಿ ಬೇಸಾಯವೂ ವಿಸ್ತರಿಸಿತು.
ದರೋಜಿ ಬೆಟ್ಟಪ್ರದೇಶವನ್ನು ಜಾಗತಿಕ ಜೀವವೈವಿಧ್ಯದ ತಾಣವೆಂದು (ಹಾಟ್‌ಸ್ಪಾಟ್) ಘೋಷಿಸಬೇಕು ಎಂದೂ ಮೋರಿಸನ್ ಒತ್ತಾಯಿಸುತ್ತಾರೆ. ಇಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಂತೂ ಇಡೀ ಪ್ರದೇಶದ ಜೀವವೈವಿಧ್ಯವನ್ನಷ್ಟೇ ಅಲ್ಲ, ಸಾಂಸ್ಕೃತಿಕ ಮತ್ತು ಪ್ರಾಚ್ಯವಸ್ತುಗಳಿಗೇ ಧಕ್ಕೆ ತರುತ್ತಿದೆ ಎಂದು ಅವರು ದುಃಖಿಸುತ್ತಾರೆ.
ಸಾಂಚಿ ಸಂಶೋಧಕಿ ಜ್ಯೂಲಿಯಾ ಶಾ
ಲಂಡನ್ನಿನ ಯುನಿವರ್ಸಿಟಿ ಕಾಲೇಜ್‌ನ ಪ್ರಾಚ್ಯಶಾಸ್ತ್ರ ವಿಭಾಗದದಲ್ಲಿ ದಕ್ಷಿಣ ಏಶ್ಯಾ ಪ್ರಾಚ್ಯಶಾಸ್ತ್ರದ ಪ್ರಾಧ್ಯಾಪಿಕೆಯಾಗಿರುವ ಶ್ರೀಮತಿ ಜೂಲಿಯಾ ಶಾ ಕೂಡಾ ಭಾರತದ ಮಧ್ಯ ಮತ್ತು ಪಶ್ಚಿಮ ಪ್ರದೇಶಗಳಲ್ಲಿನ ಪ್ರಾಚೀನ ನೀರಾವರಿ ವ್ಯವಸ್ಥೆಗಳ ಬಗ್ಗೆ ವ್ಯಾಪಕ ಅಧ್ಯಯನ ಮಾಡಿದ್ದಾರೆ. ಮುಖ್ಯವಾಗಿ ಮಧ್ಯಪ್ರದೇಶದ ಸಾಂಚಿ ಸುತ್ತಮುತ್ತಲಿನ ನೀರಾವರಿ ವ್ಯವಸ್ಥೆಯ ಬಗ್ಗೆ ಹಲವು ವರ್ಷಗಳ ಕಾಲ ಸಂಶೋಧನೆ ನಡೆಸಿರುವ ಜೂಲಿಯಾ ಕೂಡಾ ನಮ್ಮ ದೇಶದ ನೀರಾವರಿ ವ್ಯವಸ್ಥೆಯ ಪ್ರೌಢತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾಂಚಿಯ ಗೂಗಲ್ ನಕಾಶೆ. ಮೇಲಿನ ಚಿತ್ರದಲ್ಲಿ ಸಾಂಚಿ ಮತ್ತು ಪ್ರಾಚೀನ ಭಾರತದ ಬೌದ್ಧ ಮತ್ತು ಇತರೆ ಐತಿಹಾಸಿಕ ತಾಣಗಳು. ಇಲ್ಲೆಲ್ಲ ನೀರಿನ ವ್ಯವಸ್ಥೆ ಚೆನ್ನಾಗಿಯೇ ಇತ್ತು ಎಂದು ಜ್ಯೂಲಿಯಾ ಶಾ ಹೇಳುತ್ತಾರೆ.
ಗುಜರಾತಿನ ಜುನಾಗಢದ ಹತ್ತಿರವೇ ಸುದರ್ಶನ ಹೆಸರಿನ ಅಣೆಕಟ್ಟು ಇತ್ತೆಂದೂ, ಅದನ್ನು ಕ್ರಿಸ್ತ ಪೂರ್ವ ೩೨೦-೩೩೫ರ ಅವಧಿಯಲ್ಲಿ ಚಂದ್ರಗುಪ್ತ ಮೌರ್ಯನು ದುರಸ್ತಿ ಮಾಡಿದನೆಂದೂ, ಅನಂತರ ಕ್ರಿ.ಶ. ೪೫೫ರಲ್ಲಿ ಸ್ಕಂದಗುಪ್ತನು ಅದನ್ನು ಮತ್ತೆ ದುರಸ್ತಿ ಮಾಡಿದನೆಂದೂ ಇತಿಹಾಸ ಹೇಳುತ್ತದೆ. ಇನ್ನು ಜುನಾಗಢದಲ್ಲಿ ಹಲವು ಬಾವೊಲಿ (ಬಾವಡಿ)ಗಳೂ ಇದ್ದವು. ೧೧ನೇ ಶತಮಾನದಲ್ಲಿ ಆದಿ ಚಾಡಿ ವಾವ್‌ನಲ್ಲಿ ೧೭೨ ಮೆಟ್ಟಿಲುಗಳ ಬಾವೋಲಿ ಇದೆ. ಇದಲ್ಲದೆ ಅಹಮದಾಬಾದ್‌ನಲ್ಲಿ ಹತ್ತಾರು ಬಾವೋಲಿಗಳಿವೆ.
ಇನ್ನು ಸಂಶೋಧಕರಾದ ಚಕ್ರವರ್ತಿ ಮುಂತಾದವರು ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರದಲ್ಲಿ ಹಲವು ಐತಿಹಾಸಿಕ ಸಾಂಪ್ರದಾಯಿಕ ನೀರಾವರಿ ವ್ಯವಸ್ಥೆ ಇದ್ದವು ಎಂಬುದನ್ನು ದಾಖಲಿಸಿದ್ದಾರೆ.
ಆಗ್ನೇಯ ಮಹಾರಾಷ್ಟ್ರದಲ್ಲಿ ಹಲವು ಬಾಂದಾರಗಳಿದ್ದವು. ಇವುಗಳನ್ನು ೧೪-೧೬ನೇ ಶತಮಾನದಲ್ಲಿ ಫಾರೂಕಿ ರಾಜರು ಕಟ್ಟಿಸಿದ್ದರು. ಆಗಿನ ನಾಲೆ ವ್ಯವಸ್ಥೆಯು ೧೦ ಕಿಮೀಗಳಿಗಿಂತ ಉದ್ದವಿದ್ದವು. ನೀರಿನ ಬಳಕೆಯ ಮಿತಿಯನ್ನೂ ನಿಗದಿಪಡಿಸಲಾಗಿತ್ತು.
ಕೀರ್ತನೆ ಮತ್ತು ಗಾಂಧಿ (೨೦೦೬) ಇವರ ಸಂಶೋಧನೆಯಲ್ಲಿ ಈಗಿನ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಭಾಗವಾಗಿರುವ ಬುಂದೇಲಖಂಡದಲ್ಲಿ ಹಲವು ನೀರಾವರಿ ವ್ಯವಸ್ಥೆಗಳಿದ್ದವು. ಚಾಂದೇಲ ರಾಜರ ಆಲ್ವಿಕೆಯಲ್ಲಿ ಖಜುರಾಹೋ ಮತ್ತು ಚಾಂದೇರಿಯಲ್ಲಿ ಬೃಹತ್ ಕೆರೆಗಳನ್ನು ಕಟ್ಟಲಾಗಿತ್ತು. ಹಲವು ಕೆರೆಗಳ ದಡದಲ್ಲಿ ದೇವಸ್ಥಾನಗಳನ್ನೂ ಕಟ್ಟಲಾಗಿತ್ತು. ಮುಂಗಾರು ಮಳೆಯ ಹೊತ್ತಿನಲ್ಲಿ ಹೊಲಗಳಲ್ಲಿ ನೀರು ನಿಲ್ಲುವಂತೆ ಕಟ್ಟುಗಳನ್ನು ನಿರ್ಮಿಸುತ್ತಿದ್ದರು.
೧೭ನೇ ಶತಮಾನದಲ್ಲಿ ಶಹಜಹಾನ್ ದೊರೆಯು ಪರ್ಶಿಯನ್ ಭೂಗರ್ಭಶಾಸ್ತ್ರಜ್ಞನ ಸಲಹೆಯ ಮೇರೆಗೆ ಸತ್ಪುರ ಪ್ರದೇಶದ ಅಂತರ್ಜಲವನ್ನು ಬಳಸಿಕೊಳ್ಳಲೆಂದು ಬುರ್‌ಹಾನ್‌ಪುರದ ಬಳಿ ಇರುವ ತಪತಿ ನದಿಯಿಂದ ನೀರು ಸೆಳೆಯಲು ಆಯತಾಕಾರದ ಸುರಂಗಗಳನ್ನು ತೋಡಿದ್ದ.
ನಾಗಪುರದ ಬಳಿ ರಾಮ್‌ಟೆಕ್‌ನಲ್ಲಿ ಬೃಹತ್ ಗಾತ್ರದ ಯೋಜನೆಯೊಂದನ್ನು ಕಾಣಬಹುದು ಎಂದೂ ಜೂಲಿಯಾ ಶಾ ಹೇಳುತ್ತಾರೆ. ಅಲ್ಲಿ ಕ್ರಿ.ಶ. ೫೫೦ರ ಕಾಲದ ಶಿಲಾಶಾನವೊಂದು ರಾಮಿಗಿರಿಯ ಬಳಿ ಒಂದು ದೊಡ್ಡ ಅಣೆಕಟ್ಟನ್ನು ನಿರ್ಮಿಸಿರುವ ಉಲ್ಲೇಖ ಸಿಗುತ್ತದೆ.
ಜೂಲಿಯಾ ಶಾರ ದೊಡ್ಡ ಕೆಲಸ ಎಂದರೆ ಸಾಂಚಿ ಸ್ತೂಪದ ಸುತ್ತಮುತ್ತಲ ಪ್ರದೇಶದ ನೀರಾವರಿ ವ್ಯವಸ್ಥೆಯ ಅಧ್ಯಯನ. ಇದಕ್ಕಾಗಿ ಅವರು ೩೫ ಬೌದ್ಧ ಪ್ರದೇಶಗಳನ್ನು, ೧೪೫ ವಸತಿ ಪ್ರದೇಶಗಳನ್ನು, ೧೦೦೦ಕ್ಕೂ ಹೆಚ್ಚು ಶಾಸನ/ದಾಖಲೆಪತ್ರಗಳನ್ನು, ಹತ್ತಾರು ಶಿಲಾಲೇಖಗಳನ್ನು ಮತ್ತು ೧೬ ಅಣೆಕಟ್ಟುಗಳನ್ನು ಅಧ್ಯಯನ ಮಾಡಿದ್ದಾರೆ. ಅವರ ಸಂಶೋಧನೆಯ ಫಲಿತಾಂಶಗಳನ್ನು ಹೀಗೆ ಹೇಳಬಹುದು:
ಕ್ರಿಸ್ತಪೂರ್ವ ಮೂರು ಮತ್ತು ಒಂದನೆಯ ಶತಮಾನದ ಅವಧಿಯಲ್ಲಿ ಅಣೆಕಟ್ಟುಗಳ ನಿರ್ಮಾಣ ಆರಂಭವಾಗಿದ್ದವು. ಈ ಅಣೆಕಟ್ಟುಗಳು ಮುಖ್ಯವಾಗಿ ನೀರಾವರಿಗಾಗಿ ಬಳಕೆಯಾಗುತ್ತಿದ್ದವು. ಈ ಅಣೆಕಟ್ಟುಗಳ ಎತ್ತರ ೧ ಮೀಟರಿನಿಂದ ಹಿಡಿದು ೬ ಮೀಟರ್‌ವರೆಗೆ ಇದ್ದವು; ಇವು ೮೦ರಿಂದ ೧೪೦೦ ಮೀಟರ್‌ಗಳವರೆಗೆ ಅಗಲವಾಗಿದ್ದವು. ಈ ಅಣೆಕಟ್ಟುಗಳಲ್ಲಿ ದೊಡ್ಡದೆಂದರೆ ದೇವರಾಜಪುರದ ಅಣೆಕಟ್ಟು. ಇದರ ಉದ್ದ ೧ ಕಿಮೀಗಿಂತ ಹೆಚ್ಚು. ಇವುಗಳ ಸಾಮರ್ಥ್ಯವು ೩೦ ಸಾವಿರದಿಂದ ೪೭ ಲಕ್ಷ ಘನ ಮೀಟರ್‌ವರೆಗೆ ಇದ್ದವು. ಈ ಪೈಕಿ ಕೇವಲ ಎರಡು ಅಣೆಕಟ್ಟುಗಳು ಮಾತ್ರ ಈಗ ಉಳಿದುಕೊಂಡಿವೆ. ಈ ಎಲ್ಲಾ ಅಣೆಕಟ್ಟುಗಳನ್ನೂ ಮಣ್ಣಿನಿಂದಲೇ ಕಟ್ಟಿ ಅವುಗಳ ಮೇಲೆ ಮರಳುಕಲ್ಲುಗಳನ್ನು ಜೋಡಿಸಿದ್ದರು. ಸಾಂಚಿಯ ಒಂದೆರಡು ಅಣೆಕಟ್ಟುಗಳಲ್ಲಿ ಪ್ರವಾಹವನ್ನು ಎದುರಿಸಲು ಕೋಡಿಗಳನ್ನೂ ಬಿಟ್ಟಿದ್ದರು.
ಸಾಂಚಿ ಪ್ರದೇಶದಲ್ಲಿ ಆಗಿನ ಕಾಲದಲ್ಲಿ ಭತ್ತವನ್ನು ಬೆಳೆಯುತ್ತಿದ್ದರು; ಅಲ್ಲಿ ಹೆಕ್ಟೇರಿಗೆ ಸರಾಸರಿ ೧೦೦೦-೧೫೦೦ ಕಿಲೋಗ್ರಾಂ ಇಳುವರಿ ಇತ್ತು ಎಂಬುದು ಜೂಲಿಯಾ ಶಾರವರ ಅಭಿಮತ. ಈಗ ಈ ಪ್ರದೇಶದಲ್ಲಿ ಭತ್ತವನ್ನೇ ಬೆಳೆಯುತ್ತಿಲ್ಲ ಎಂಬುದನ್ನು ಗಮನಿಸಿ!
ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯಲ್ಲಿ ಕಾವೇರಿ ನದಿಗೆ ಕಟ್ಟಿರುವ ಕಲ್ಲಣೈ ಅಣೆಕಟ್ಟು ವಿಶ್ವದ ಅತಿಪ್ರಾಚೀನ ಅಣೆಕಟ್ಟುಗಳಲ್ಲಿ ನಾಲ್ಕನೆಯದು! ಕ್ರಿಸ್ತಶಕ ೧ನೇ ಶತಮಾನದಲ್ಲಿ ಚೋಳ ದೊರೆ ಕರಿಕಾಳನ್ ಕಾಲದಲ್ಲಿ ಕಟ್ಟಿದ ಈ ಅಣೆಕಟ್ಟು ಈಗಲೂ ತನ್ನ ಹೊಣೆಗಾರಿಕೆಯನ್ನು ನಿಭಾಯಿಸುತ್ತಿದೆ! ೧೦೭೯ ಅಡಿಗಳ ಉದ್ದವಿರುವ ಈ ಅಣೆಕಟ್ಟು ಸಂಗ್ರಹಿಸಿದ ನೀರನ್ನು ನಾಲೆಗಳ ಮೂಲಕ ಕಾವೇರಿ ಮುಖಜ ಭೂಮಿಗೆ ಹರಿಸುವುದೇ ಗುರಿ. ಒಟ್ಟು ೪ ಲಕ್ಷ ಹೆಕ್ಟೇರ್‌ಗಳಷ್ಟು ಭೂಮಿಗೆ ಈ ಅಣೆಕಟ್ಟು ನೀರು ಒದಗಿಸುತ್ತಿದೆ.
ಮೈಸೂರಿನ ಯಾದವನದಿಗೆ ಅಡ್ಡಲಾಗಿ ಕಟ್ಟಿದ ತೊನ್ನೂರು ಕೆರೆ ಅಥವಾ ಮೋತಿ ತಲಾಬ್ ಅಣೆಕಟ್ಟು ಕೂಡಾ ಹಳೆಯದೇ. ೧೨ನೇ ಶತಮಾನದಲ್ಲಿ ವೈಷ್ಣವ ಸಂತ ಶ್ರೀ ಆಸೂರಿ ರಾಮಾನುಜಾಚಾರ್ಯ ಕಟ್ಟಿಸಿದರು ಎನ್ನಲಾದ ಈ ಅಣೆಕಟ್ಟು ಈಗಲೂ ನೀರಾವರಿಗೆ ಬಳಕೆಯಾಗುತ್ತಿದೆ. ೨೩೦ ಮೀಟರ್ ಎತ್ತರ, ೧೪೫ ಮೀಟರ್ ಉದ್ದ ಇರುವ ಈ ಅಣೆಕಟ್ಟು ಜಗತ್ತಿನಲ್ಲೇ ಸುಸ್ಥಿತಿಯಲ್ಲಿರುವ ಒಂಬತ್ತನೇ ಅಣೆಕಟ್ಟು.
ವಿಶ್ವದ ಇತರೆ ಪ್ರಾಚೀನ ಅಣೆಕಟ್ಟುಗಳ ಪಟ್ಟಿ ಹೀಗಿದೆ:
- ಸಿರಿಯಾದ ಖ್ಯಾಟಿನಾ ಅಣೆಕಟ್ಟು (ಕ್ರಿಸ್ತಪೂರ್ವ ೧೩೧೯-೧೩೦೪)
- ಸ್ಪೈನ್ ದೇಶದ ಪ್ರಾಸರ್ಪಿನಾ ಅಣೆಕಟ್ಟು (ಕ್ರಿಸ್ತಶಕ ೧ನೇ ಶತಮಾನ)
- ಸ್ಪೇನ್ ದೇಶದ ಕಾರ್ನಾಲ್ವೋ ಅಣೆಕಟ್ಟು (ಕ್ರಿಸ್ತಶಕ ೧-೨ನೇ ಶತಮಾನ)
- ಜಪಾನಿನ ಕೀರುಮತಾಯ್ಕೆ ಅಣೆಕಟ್ಟು (ಕ್ರಿಸ್ತಶಕ ೧೬೨)
- ಜಪಾನಿನ ಸಾಯಾಮಾಯ್ಕೆ ಅಣೆಕಟ್ಟು (ಕ್ರಿಸ್ತಶಕ ೭ನೇ ಶತಮಾನ)
- ಜಪಾನಿನ ಮಾನೋಯ್ಕೆ ಅಣೆಕಟ್ಟು (ಕ್ರಿಸ್ತಶಕ ೭೦೧)
- ಇರಾನಿನ ಸದ್-ಇ- ಕೋಬರ್ ಅಣೆಕಟ್ಟು (ಕ್ರಿಸ್ತಶಕ ೧೦ನೇ ಶತಮಾನ)
- ಸ್ಪೇನ್ ದೇಶದ ಅಲ್ಮಾನ್ಸಾ ಅಣೆಕಟ್ಟು (ಕ್ರಿಸ್ತಶಕ ೧೩೮೪)
ಚಿರಾಪುಂಜಿ: ಭಾರೀ ಮಳೆಯಲ್ಲೂ ನೀರಿನ ಕೊರತೆ
ಮೇಘಾಲಯದ ಈಸ್ಟ್ ಖಾಸಿ ಜಿಲ್ಲೆಯು ಬಾಂಗ್ಲಾ ದೇಶದ ಗಡಿಯಲ್ಲಿದೆ. ಈ ಜಿಲ್ಲೆಯಲ್ಲಿಯೇ ವಿಶ್ವದಲ್ಲಿಯೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾದ ಚಿರಾಪುಂಜಿ ಇದೆ. ಆದರೆ ಮಳೆ ಬೀಳದ ಋತುವಿನಲ್ಲಿ ಇಲ್ಲೆಲ್ಲ ನೀರಿನ ಕೊರತೆಯೇ ಸುದ್ದಿ! ಈಗಲೂ ಇಲ್ಲಿ ಜಡಿಮಳೆ ಬೀಳುವುದಕ್ಕೇನೂ ಕಡಮೆಯಿಲ್ಲ. ಆದರೆ ಜನರ ನೀರಿನ ಬವಣೆ ತಪ್ಪಿದ್ದಲ್ಲ.
ಸುಸ್ಥಿರ ಮಾದರಿಯಲ್ಲಿ ನಮಗೆ ಸದಾಕಾಲವೂ ನೀರು ಸಿಗುವಂತೆ ಮಾಡಬಹುದೇ ಎಂದು ಹಳ್ಳಿಯ ಸಮುದಾಯಗಳು ಕೋರಿದ ಮೇರೆಗೆ ಮೋಹನ್‌ರಾವ್ ಅಲ್ಲಿಗೆ ಹೋಗಿ ಅಧ್ಯಯನ ಆರಂಭಿಸಿದ್ದಾರೆ. ಈ ಪ್ರದೇಶದ ಹಳ್ಳಿಗಳ ಕೃಷಿ ವಿಧಾನಗಳು, ನೈಸರ್ಗಿಕ ವ್ಯವಸ್ಥೆಯ ಸ್ಥಿತಿ-ಗತಿ – ಎಲ್ಲವನ್ನೂ ಅವರು ಅಭ್ಯಸಿಸಿದ್ದಾರೆ.
ಈ ಜಿಲ್ಲೆಯಲ್ಲಿ ಭೂಪ್ರದೇಶವು ಬಹುತೇಕ ಇಳಿಜಾರಾಗಿಯೇ ಇರುವುದರಿಂದ ಮೇಲ್ಮಣ್ಣು ನಿಲ್ಲುವುದೇ ಇಲ್ಲ; ನೀರೂ ಕೆಳಕ್ಕೆ ಹರಿದುಹೋಗುತ್ತದೆ. ಕಳೆದ ಎರಡು ದಶಕಗಳಿಂದ ಈ ಪ್ರದೇಶದ ರೈತರು ಬೇರೆಲ್ಲ ಬೆಳೆಗಳನ್ನೂ ಬಿಟ್ಟು `ಝಾರು’ ಹುಲ್ಲನ್ನು ಬೆಳೆಯುತ್ತಿದ್ದಾರೆ. ಝಾರು/ ಝಾಡು ಗೊತ್ತಲ್ಲ? ಮಾರುಕಟ್ಟೆಯಲ್ಲಿ ಸಿಗುವ ಉದ್ದ ಹುಲ್ಲಿನ ಕಸಬರಿಗೆ. ಮೊದಲೇ ಈ ಪ್ರದೇಶವೆಲ್ಲ ರೈತರ `ಒಕ್ಕು-ಸುಡು’ ಕೃಷಿ ವಿಧಾನದ ಬೀಡು. ಕೃಷಿಗಾಗಿ ಸದಾ ಭೂಮಿಯನ್ನು ಸುಡುವ ಪದ್ಧತಿ ಮೊದಲಿನಿಂದಲೂ ಇದೆ.
ಈ ಮೊದಲು ಜಿಲ್ಲೆಯಲ್ಲಿ ಹಣ್ಣು ಮತ್ತು ಇತರೆ ಬೆಳೆಗಳನ್ನು ಮಿಶ್ರಬೆಳೆಯಾಗಿ ಬೆಳೆಯುತ್ತಿದ್ದರು. ಅಡಿಕೆ, ಬಿದಿರು, ಹಲಸು – ಎಲ್ಲವೂ ಅವರ ಕೃಷಿಪಟ್ಟಿಯಲ್ಲಿದ್ದವು. ಈ ಮಿಶ್ರಬೆಳೆಯ ವಿಧಾನದಿಂದಾಗಿ ಹೊಲಗಳಲ್ಲಿ ೨೦-೩೦ ಮೀಟರ್ ಎತ್ತರದವರೆಗೆ ಮೇಲ್ಚಪ್ಪರ ಮೂಡುತ್ತಿತ್ತು. ಇದು ನಿತ್ಯ ಹರಿದ್ವರ್ಣ ರಕ್ಷಾಕವಚವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಮಳೆನೀರು ನೆಲ ಸೇರುವ ಮೊದಲು ರಭಸ ಕಳೆದುಕೊಂಡು ಮರಳುಕಲ್ಲಿನ ನೆಲದಲ್ಲಿ ಇಂಗುತ್ತಿತ್ತು; ಬಿದ್ದ ಎಲೆಗಳ ದಪ್ಪ ಪದರದಿಂದಾಗಿ ಮಳೆನೀರು ಅಲ್ಲೂ ಸಂಗ್ರಹವಾಗುತ್ತಿತ್ತು. ರಂಧ್ರಗಳಿಂದ ತುಂಬಿದ್ದ ಮರಳುಗಲ್ಲಿನಲ್ಲಿ ಸೇರಿಕೊಂಡಿದ್ದ ನೀರು ಕಾಲಕ್ರಮೇಣ ಕೆಳಗೆ ಹರಿದು ತೊರೆಗಳನ್ನು ಸೇರುತ್ತಿತ್ತು. ಅಕ್ಟೋಬರ್ ತಿಂಗಳ ವೇಳೆಗೆ ನಿಲ್ಲುತ್ತಿದ್ದ ರಭಸದ ಮಳೆಯಿಂದಾಗಿ ಫೆಬ್ರುವರಿ – ಮಾರ್ಚ್‌ವರೆಗೂ ನೀರು ದೊರಕುತ್ತಿತ್ತು.
ಝಾರು ಬೆಳೆ ಆರಂಭವಾದ ಮೇಲೆ ಆಗಿದ್ದೇನು? ಮಳೆಯ ನೀರು ನೇರವಾಗಿ ಝಾರು ಗಿಡಗಳ ಮೇಲೆ ಬೀಳತೊಡಗಿತು. ಝಾರು ಬೆಳೆ ಮತ್ತು ಪದೇ ಪದೇ ಕೀಳುವ ಕಳೆ, ಎಲೆ- ಇದರಿಂದಾಗಿ ಭೂಸವಕಳಿ ಹೆಚ್ಚಾಯಿತು. ದೊಡ್ಡ ತೊರೆಗಳು ಮಳೆ ನಿಂತ ಕೂಡಲೇ ತೆಳುವಾದವು; ಚಿಕ್ಕ ತೊರೆಗಳಂತೂ ಒಂದು ವಾರವೂ ನಿಲ್ಲಲಿಲ್ಲ. ಇದೆಲ್ಲದರ ಪರಿಣಾಮವಾಗಿ ಝಾರು ಫಸಲೂ ಕಡಮೆಯಾಯಿತು.
ಪರಿಹಾರ? ಅಲ್ಪಾವಧಿ ಕ್ರಮವಾಗಿ ಮಣ್ಣಿನ ಫಲವತ್ತತೆ ಹೆಚ್ಚಿಸುವ ಮತ್ತು ನೀರಿನ ಲಭ್ಯತೆ ಉಳಿಸುವ ವಿಧಾನಗಳನ್ನು ರೂಪಿಸಬೇಕಿದೆ. ದೂರಗಾಮಿ ಯೋಜನೆಯಲ್ಲಿ ಪಾಳುಬಿದ್ದ ಭೂಮಿಯನ್ನೆಲ್ಲ ಮತ್ತೆ ಸತ್ತ್ವಯುತಗೊಳಿಸಬೇಕಿದೆ. ಇದಕ್ಕಾಗಿ ಸಮಗ್ರ ಮಣ್ಣು ಮತ್ತು ನೀರು ನಿರ್ವಹಣಾ ವ್ಯವಸ್ಥೆಯನ್ನು ಜಾರಿಗೆ ತರಬೇಕಿದೆ. ಜೀವವೈವಿಧ್ಯವನ್ನು ಪ್ರೋತ್ಸಾಹಿಸಬೇಕಿದೆ. ಸಾಂಪ್ರದಾಯಿಕ ತೋಟಗಾರಿಕಾ ವಿಧಾನಕ್ಕೆ ಮರುಹುಟ್ಟು ನೀಡಬೇಕಿದೆ.
ನೋಡಿ, ಪರಂಪರೆಯನ್ನು ತೊರೆದರೆ, ಭೋರೆಂದು ಸುರಿವ ಮಳೆನೀರೂ ನಮ್ಮನ್ನು ತೊರೆಯುತ್ತದೆ!
ಕರ್ನಾಟಕವನ್ನೇ ಗಮನಿಸಿ: ರಾಜ್ಯದ ಮಲೆನಾಡಿನಲ್ಲಿ ಶುಂಠಿ ಕೃಷಿ ವಿಪರೀತವಾಗಿದೆ. ಪಾರಂಪರಿಕ ಕೃಷಿ ಪದ್ಧತಿಯನ್ನೇ ಕೈಬಿಡಲಾಗಿದೆ. ನೀರಾವರಿಗೆ ಮನಸೋತು ಭತ್ತ, ಕಬ್ಬು – ಹೀಗೆ ಏಕಬೆಳೆಯನ್ನೇ ಬೆಳೆಯುವ ಪ್ರದೇಶಗಳು ಸಾಕಷ್ಟಿವೆ. ಹೀಗೆ ಮಾನೋಕಲ್ಚರ್ ಕೃಷಿ ಮಾಡುವುದರಿಂದ ಅಪಾಯ ತಪ್ಪಿದ್ದಲ್ಲ. ಹೆಚ್ಚು ನೀರು ಬೇಡುವ ಬೆಳೆಗಳ ಬದಲು ಕಡಮೆ ನೀರಿನಲ್ಲೂ ಪೌಷ್ಟಿಕತೆ ನೀಡುವ ಕಿರುಧಾನ್ಯಗಳನ್ನು, ವೈವಿಧ್ಯಮಯ ತರಕಾರಿಗಳನ್ನು, ಎಸ್‌ಆರ್‌ಐ ಮಾದರಿಯಲ್ಲಿ ಭತ್ತವನ್ನು, ಭತ್ತದ ಗದ್ದೆಯಲ್ಲಿ ಮೀನನ್ನು – ಹೀಗೆ ಪರಂಪರೆಯನ್ನು ಮುಂದುವರಿಸುವುದು ನಮಗೆಲ್ಲರಿಗೂ ಒಳಿತು.
೨೦೧೫ರ ಜೂನ್ ಮೊದಲವಾರದ ಈ ಸುದ್ದಿ ಓದಿ: ವಿಶ್ವ ಪರಂಪರೆಯ ತಾಣವಾದ ಹಂಪಿ ಪ್ರದೇಶದಲ್ಲಿ ಭತ್ತ ಮತ್ತು ಕಬ್ಬು ಬೆಳೆಯಿಂದಾಗಿ ಅಲ್ಲಿನ ಸ್ಮಾರಕಗಳ ರಕ್ಷಣೆಗೆ ಸಮಸ್ಯೆಯಾಗಿದೆ ಎಂದು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘಟನೆ (ಯುನೆಸ್ಕೋ) ಎಚ್ಚರಿಕೆ ನೀಡಿದೆ. ಈ ಕೃಷಿಯಿಂದಾಗಿ ನೀರು ನಿಂತುಕೊಂಡು ಸ್ಮಾರಕಗಳ ಬುಡವೇ ಅಲುಗಾಡುತ್ತಿದೆ; ಹಲವು ಸ್ಮಾರಕಗಳು ಮುಳುಗಡೆಗೂ ತುತ್ತಾಗುತ್ತಿವೆ ಎಂದು ಯುನೆಸ್ಕೋ ಎಚ್ಚರಿಸಿದೆ. ಆದ್ದರಿಂದ ಈ ಪ್ರದೇಶದಲ್ಲಿ ರೈತರು ಭತ್ತ ಮತ್ತು ಕಬ್ಬಿನ ಕೃಷಿಯನ್ನು ಬಿಡುವ ಬಗ್ಗೆ ಶಿಕ್ಷಣ ನೀಡಬೇಕು ಎಂದು ಅದು ಹಂಪಿ ವಿಶ್ವ ಪರಂಪರೆ ಪ್ರದೇಶ ಅಭಿವೃದ್ಧಿ ನಿರ್ವಹಣಾ ಪ್ರಾಧಿಕಾರಕ್ಕೆ (ಎಚ್‌ಡಬ್ಲ್ಯುಎಚ್‌ಎಎಂಎ) ಸಲಹೆ ನೀಡಿದೆ.
ಕಾಲ ಬದಲಾದಂತೆ ನಾವೂ ಬದಲಾಗಬೇಕಿದೆ. ಹಳೆ ತಿಳಿವಳಿಕೆಯ ಹಿನ್ನೆಲೆಯಲ್ಲಿ ಹೊಸ ಹೆಜ್ಜೆ ಇಡಬೇಕಿದೆ.
ಈ ಲೇಖನ ರೂಪಿಸಲು ನೆರವಾದ ವಿಜಯನಗರ ಇತಿಹಾಸ ಸಂಶೋಧಕ ಶ್ರೀ ಜಾನ್ ಫ್ರಿಟ್ಜ್, ಪ್ರೊ|| ಕ್ಯಾಥಲೀನ್ ಡಿ ಮೋರಿಸನ್, ಶ್ರೀ ಮೋಹನ್‌ರಾವ್‌ಗೆ ಕೃತಜ್ಞತೆಗಳು.
(ಉತ್ಥಾನ ಮಾಸಪತ್ರಿಕೆಯ ೨೦೧೫ ಜುಲೈ ಸಂಚಿಕೆಯಲ್ಲಿ ಪ್ರಕಟಿತ)