ನಿರ್ದಿಷ್ಟ ಕೆಲಸವಿಲ್ಲದೆ ಒಂದು ವರ್ಷ ಕಳೆದೇ ಹೋಯಿತು. ಅಥವಾ ಕೂಡಿಕೊಂಡಿತು ಎಂದರೂ ಸರಿಯೆ. ೨೦೦೯ರ ಮೇ ತಿಂಗಳಿನಿಂದ ಈ ದಿನದವರೆಗೆ ನಾನು ನಿರುದ್ಯೋಗಿಯಾಗಿ (ಅಂದರೆ ಸಂಬಳ ತರುವ ಕೆಲಸವನ್ನೂ ಮಾಡದೆ, ಫ್ರೀಲ್ಯಾನ್ಸ್ ಆಗಿಯೂ ದುಡಿಯದೆ) ಕಳೆದ ಕ್ಷಣಗಳು ನನ್ನೊಳಗೆ ಏನೆಲ್ಲ ಭಾವಗಳನ್ನು ಮೂಡಿಸುತ್ತಿವೆ… ನಿಮ್ಮೊಂದಿಗೆ ಅವನ್ನೆಲ್ಲ ಆದಷ್ಟೂ ಪ್ರಾಮಾಣಿವಾಗಿ ಹಂಚಿಕೊಳ್ಳಬೇಕು ಅನ್ನಿಸುತ್ತಿದೆ. ಸಾಮೂಹಿಕ ಆದರ್ಶಗಳನ್ನು ಬಲಿಹಾಕುವ ನನ್ನ ಯತ್ನದಲ್ಲಿ ನಾನೂ ಕೊಂಚ ಸ್ವಾರ್ಥಿಯಾಗಿ ಪರಿವರ್ತನೆಗೊಂಡಿರುವೆ; ಆದ್ದರಿಂದ ಪ್ರಾಮಾಣಿಕತೆಯೂ ಕೊಂಚ ನುಗ್ಗಾಗಿದೆ. ಕ್ಷಮಿಸಿ!
ಘಟ್ಟಸಾಲಿನಲ್ಲಿ ಕಳೆದ ಬಾಲ್ಯ
ನಿರುದ್ಯೋಗದ ಬೇಸರವನ್ನು ಮರೆಯಲು ನಾನು ಪಶ್ಚಿಮ ಘಟ್ಟದ ಹಲವು ಸ್ಥಳಗಳಲ್ಲಿ ನಾನು ಓದಿದ ಶಾಲೆಗಳಿಗೆ ಭೇಟಿಕೊಟ್ಟ ವಿಚಾರವನ್ನು ನೀವು ಈಗಾಗಲೇ ನನ್ನ ಬ್ಲಾಗುಗಳಲ್ಲಿ ಓದಿರಬಹುದು. ಈ ಎಲ್ಲ ಶಾಲೆಗಳೂ ಸರ್ಕಾರಿ ಶಾಲೆಗಳೇ. ನನ್ನ ಬಾಲ್ಯದ ಹೊರನಾಡು ಶಾಲೆ ಮಾತ್ರ ಗೊತ್ತಾಗಲಿಲ್ಲ. ಬಾಲವಾಡಿ ಓದಿದ ಕಳಸದ (ಚಿಕ್ಕಮಗಳೂರು ಜಿಲ್ಲೆ) ಶಾಲೆಯೂ ಹಾಗೆಯೇ ಇದೆ. ನನ್ನ ಒಂದನೇ ಕ್ಲಾಸಿನ ಏಕೋಪಾಧ್ಯಾಯ ಶಾಲೆ ಹೊಡಬಟ್ಟೆಯಲ್ಲಿ ಹಾಗೆಯೇ ಇದೆ. ಸಾಗರದ ಶಿವಪ್ಪ ನಾಯಕ ಮೀನು ಮಾರುಕಟ್ಟೆಯಲ್ಲಿದ್ದ ನನ್ನ ಎರಡನೇ ಕ್ಲಾಸಿನ ಶಾಲೆ ತುಂಬಾ ಚಂದವಾಗಿ ಕಾಣುತ್ತಿದೆ. ನನ್ನ ಮೂರನೇ ಕ್ಲಾಸಿನ ನಗರ (ಬಿದನೂರು) ಶಾಲೆಯೂ; ನನ್ನ ತೀರ್ಥಹಳ್ಳಿಯ ನಾಲ್ಕನೇ ಕ್ಲಾಸಿನ ಶಾಲೆಯೂ; ನನ್ನ ಐದನೇ ಕ್ಲಾಸಿನ ಸುಬ್ರಹ್ಮಣ್ಯದ ಶಾಲೆಯೂ; ಆರನೇ ಕ್ಲಾಸಿನ ವಿನೋಬಾನಗರದ ಶಾಲೆಯೂ;ಎಂಟು – ಒಂಬತ್ತನೇ ಕ್ಲಾಸಿನ ಸಾಗರದ ಹೈಸ್ಕೂಲೂ; ಹತ್ತನೇ ಕ್ಲಾಸಿನ ಪೊನ್ನಂಪೇಟೆಯ ಜ್ಯೂನಿಯರ್ ಕಾಲೇಜೂ…… ಎಲ್ಲವೂ ಅಲ್ಲಿಯೇ ಇವೆ. ಸಾವಿರಾರು ಮಕ್ಕಳಿಗೆ ಕಲಿಸುತ್ತಿವೆ. ಸರ್ಕಾರಿ ಶಾಲೆಯಲ್ಲಿ ಓದಿದ ಸಂತೋಷ ನನ್ನದು. ಆ ದಿನಗಳಲ್ಲಿ ಸರ್ಕಾರಿ ಶಾಲೆಗಳು ಎಷ್ಟು ಒಳ್ಳೆಯ ಶಿಕ್ಷಕರನ್ನು ಹೊಂದಿದ್ದವು, ಹೇಗೆ ಇಡೀ ನಾಡಿನ ವಿದ್ಯಾಕೇಂದ್ರಗಳಾಗಿದ್ದವು….. ಎಂಬ ಸತ್ಯವನ್ನು ನಾನು ಕಂಡುಕೊಂಡೆ. ಈಗಲೂ ಹಲವು ಶಾಲೆಗಳು ಚೆನ್ನಾಗಿಯೇ ಇವೆ. ಆದರೆ ಖಾಸಗೀಕರಣದಿಂದ ಸರ್ಕಾರಿ ಶಾಲೆಗಳು ಮಸಕಾಗಿವೆ.
ಈ ಪ್ರವಾಸದ ಅವಧಿಯಲ್ಲಿ ನಾನು ನನ್ನ ಎಸೆಸೆಲ್ಸಿ ಮೇಡಂ ಜಯಲಕ್ಷ್ಮಿಯವರನ್ನು ಅವರ ಮನೆಯಲ್ಲೇ ಭೇಟಿ ಮಾಡಿದೆ. ಅವರು ನನ್ನ ನೆನಪಿಟ್ಟಿರೋ ರೀತಿಗೆ ಬೆರಗಾದೆ. ಎಷ್ಟೋ ಸಾವಿರ ವಿದ್ಯಾರ್ಥಿಗಳಲ್ಲಿ ನೀನು ನೆನಪಿದ್ದೀಯ, ನೀನು ಕೂತಿದ್ದ ಡೆಸ್ಕ್ ಸಹಾ ನನಗೆ ನೆನಪಿದೆ ಎಂದು ಅವರು ಹೇಳಿದಾಗ ಕಣ್ಣು ತುಂಬಿತ್ತು. ಅಂಥ ಜಯಲಕ್ಷ್ಮಿ ಟೀಚರ್‌ನ್ನು ಪಡೆದ ನಾನು ಎಂಥ ಅದೃಷ್ಟವಂತ ಎನ್ನಿಸಿತು. ಅವರು ಪ್ರೀತಿಯಿಂದ ಕೊಟ್ಟ ಚಹಾದ ಆಹ್ಲಾದಕತೆಯನ್ನು ನಾನು ಮರೆಯಲಾರೆ. ದಾವಣಗೆರೆಯಲ್ಲಿ ನಾನು ಅನಾಥನಂತೆ ಬೀದಿ ತಿರುಗುತ್ತಿದ್ದಾಗ ಅವರ ನೆನಪೇ ನನ್ನನ್ನು ಉಳಿಸಿತ್ತು ಅನ್ನೋದು ನಿಜ. ಜೀವನದಲ್ಲಿ ಎಲ್ಲಿಯೋ ಎದುರಾದ ವ್ಯಕ್ತಿತ್ವಗಳು ಕೆಲವೊಮ್ಮೆ ಜೀವನಪೂರ್ತಿ ಪರಿಣಾಮ ಬೀರುತ್ತಾರೆ, ನನ್ನನ್ನು ಎಲ್ಲಿಯೋ ಎತ್ತುತ್ತಾರೆ ಎಂಬ ಖುಷಿಯನ್ನು ನಾನು ಕಂಡುಕೊಂಡೆ.
ನನ್ನ ಬಾಲ್ಯದ ಒಂದು ವರ್ಷವನ್ನು ಹೊರನಾಡಿನಲ್ಲಿ ಕಳೆದಿದ್ದೆ. ಈಗ ಅಲ್ಲಿಗೆ ಹೋಗಿ ನೋಡಿದರೆ, ನಾನಿದ್ದ ಮನೆಯ ಎದುರಿನ ಗುಡ್ಡಸಾಲು ಹಾಗೆಯೇ ಇದೆ! ನಾನು ಆ ಮಳೆಯ ದಿನಗಳಲ್ಲಿ ಆ ಬೆಟ್ಟವು ಪಕ್ಕಕ್ಕೆ ಸರಿದುಬಿಡಬಹುದೇ ಎಂದು ಸೀರಿಯಸ್ಸಾಗಿ ನೋಡುತ್ತಿದ್ದೆ. ಎಡಗಣ್ಣು, ಬಲಗಣ್ಣು ಮುಚ್ಚಿಕೊಂಡು ಪರೀಕ್ಷಿಸುತ್ತಿದ್ದೆ. ಕೆಲವು ಸಲ ಬೆಟ್ಟವು ಸರಿದಿದೆ ಅಂತ ಅನ್ನಿಸಿದ್ದೂ ಇದೆ. ಈಗ ನೋಡಿದರೆ, ಅದೇ ಬೆಟ್ಟ ಹಾಗೆಯೇ ಇದೆ. ಸ್ವಲ್ಪ ಬೇಜಾರೂ ಆಯಿತು. ಎಂಥ ಜಡಿಮಳೆ ಬಿದ್ದರೂ, ಎಷ್ಟೋ ವರ್ಷಗಳ ಕಾಲ ಈ ಬೆಟ್ಟಗಳು ಅಲುಗುವುದಿಲ್ಲ ಎಂಬ ಸತ್ಯವನ್ನು ನಾನು ಕಂಡುಕೊಂಡೆ.
ನನ್ನ ಪಿಯುಸಿ ಗೆಳತಿ ಎಂ ಎಲ್ ಸುಧಾ ಈಗ ಕೊಪ್ಪದಲ್ಲಿದ್ದಾಳೆ. ಅವಳ ಮನೆಯಲ್ಲಿ ಒಂದು ದಿನ ಉಳಿದೆ. ಕೊಪ್ಪ ಹೇಳಿ ಕೇಳಿ ಒಂದು ಕುಗ್ರಾಮವೇ. (ನಾನು ಅಡಿಕೆ ಪತ್ರಿಕೆಯ ಕೃಷಿ ಪತ್ರಿಕೋದ್ಯಮ ಶಿಬಿರದಲ್ಲಿ ಪಾಲ್ಗೊಂಡಿದ್ದೂ ಇಲ್ಲೇ; ರಮೇಶ್ – ರಮೇಶ್ ಭಟ್ ದ್ವಿಪಾತ್ರದ ನಟನೆಯ ಉಲ್ಟಾ ಪಲ್ಟಾ ಚಿತ್ರೀಕರಣ ನಡೆದದ್ದೂ ಇಲ್ಲಿಯೇ). ಆದರೆ ಅಲ್ಲೂ ನನ್ನ ಗೆಳತಿ ಸುಧಾ ಬೆಳಗಿನ ಝಾವವೇ ಎದ್ದು ತಡರಾತ್ರಿಯವರೆಗೂ ದಿನ ಕಳೆಯುವುದನ್ನು ಕಂಡೆ. ನಗರದ ಯಾವ ಆಕರ್ಷಣೆಯೂ ಇಲ್ಲದ ಆ ಹಳ್ಳಿಯಲ್ಲಿ ದಿನಕ್ಕೆ ಹದಿನೈದು ತಾಸು ದುಡಿಯುವವರೂ ಇದ್ದಾರೆ ಎಂಬುದನ್ನು ನಾನು ಕಂಡುಕೊಂಡೆ.
ಪುತ್ತೂರಿಗೆ ಹೋದ ನಾನು ನನ್ನ ಚಿಕ್ಕಮ್ಮ ಜಯ ಚಿಕ್ಕಿಯ ಮನೆಗೆ ಹೋಗಿದ್ದನ್ನೂ ಈಗಾಗಲೇ ಬರೆದಿರುವೆ. ಚಿಕ್ಕಪ್ಪ ವೆಂಕಟ್ರಾಮ ದೈತೋಟ ಕೂಡಾ ಇದ್ದರು. ಅವರಲ್ಲಿಗೆ ರೋಗಿಗಳು ಬರುತ್ತಲೇ ಇದ್ದರು. ಆದರೂ ಚಿಕ್ಕಿ ನಮಗಾಗಿ ಅರಶಿನದ ಎಲೆಯಲ್ಲಿ ಮಾಡಿದ ಕಡುಬನ್ನು ಬಡಿಸಿ ಉಣಿಸಿದಳು. ಅವಳ ಜೀವನೋತ್ಸಾಹಕ್ಕೆ, ಆತ್ಮವಿಶ್ವಾಸಕ್ಕೆ ನಾವೆಲ್ಲರೂ ಬೆರಗಾದೆವು. ಗುಡ್ಡ ಬೆಟ್ಟದಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲದ ಮನೆಯೊಂದು ನಾಡಿನ ಸುಪ್ರಸಿದ್ಧ ವೈದ್ಯಶಾಲೆಯಾಗಬಹುದು ಎಂಬುದನ್ನು ನಾನು ಕಂಡುಕೊಂಡೆ. ಅವರಲ್ಲಿಗೆ ಆಯುರ್ವೇದ ಚಿಕಿತ್ಸೆಯನ್ನು ಕಲಿಯಲು ಬರುತ್ತಿರುವ ಮಹಿಳೆಯೂ ಎಲ್ಲೋ ಕೆಲಸ ಮಾಡಿಕೊಂಡು ಇರುವ ಸಾಮಾನ್ಯ ವ್ಯಕ್ತಿ. ಆಕೆಯಲ್ಲೂ ಅತ್ಯಂತ ಶಿಸ್ತಿನ ಕಲಿಕೆಯ ಮನೋಧರ್ಮ ಇರುವುದನ್ನು ತಿಳಿದೆ. ಕಲಿಯುವ ಮನಸ್ಸಿದ್ದರೆ ಯಾರೂ ಏನೂ ಕಲಿಯಬಹುದು ಎಂದು ನನಗಾಗ ಅನ್ನಿಸಿತು.
ಬೆಟ್ಟಗಳ ತುದಿಯಲ್ಲಿ ಅರೆಕ್ಷಣದ ಧ್ಯಾನ
ಬಿಳಿಗಿರಿ ರಂಗನ ಬೆಟ್ಟ, ಕೊಡಚಾದ್ರಿ ಮತ್ತು ಮುಳ್ಳಯ್ಯನ ಗಿರಿಯನ್ನು ಏರಿದ ನನಗೆ ನಮ್ಮ ಪೂರ್ವೀಕರು ಯಾಕೆ ಗುಡ್ಡದ ತುದಿಯಲ್ಲಿ ದೇಗುಲ ಕಟ್ಟುತ್ತಾರೆ ಎಂದು ತಿಳಿಯಿತು. ಮುಂದೊಂದು ದಿನಗಳಲ್ಲಿ ಇವೆಲ್ಲವೂ ಖನಿಜದ ಲೂಟಿಯ ತಾಣಗಳಾಗಬಾರದು ಎಂದು ಅವರು ಮಾಡಿದ ಈ ಉಪಾಯ ಎಷ್ಟೆಲ್ಲ ಫಲಕಾರಿಯಾಗಿರಬಹುದೋ ಗೊತ್ತಿಲ್ಲ. ಏನಾದರೂ ಸರಿಯೆ, ನಮ್ಮ ಹಿರಿಯರು ದೇಗುಲಗಳನ್ನು ಶಿಖರಾಗ್ರದಲ್ಲಿ ಸ್ಥಾಪಿಸಿ ನಮಗೆಲ್ಲರಿಗೂ ಪ್ರಕೃತಿಯ ರಮ್ಯ ತಾಣಗಳ ಗೂಢ ಸಂದೇಶಗಳನ್ನು ಅರಿಯುವುದಕ್ಕೆ ಅನುವು ಮಾಡಿಕೊಟ್ಟರಲ್ಲ ಎಂದನ್ನಿಸಿತು. ಪರ್ವತಗಳೆತ್ತರಕ್ಕೆ ಏರುವ ನಾವು ನಮ್ಮ ಮನಸ್ಥಿತಿಯಲ್ಲೂ ಅದೇ ಔನ್ನತ್ಯ ಸಾಧಿಸಲು ಸಾಧ್ಯವೇ ಇಲ್ಲವೇನೋ ಎಂಬುದನ್ನೂ ನಾನು ಈ ದಿನಗಳಲ್ಲಿ ಕಂಡುಕೊಂಡೆ.
ಆಮೇಲೆ ನಾನು ನನ್ನ ಸಂಗೀತ ಕಲಿಕೆಯತ್ತ ಮತ್ತೆ ಹೆಚ್ಚಿನ ಗಮನ ಹರಿಸಿದೆ. ಧ್ಯಾನಿಸುವ ಮನಸ್ಸು ಇಲ್ಲದಿದ್ದರೆ ಸಂಗೀತವನ್ನು ಕಲಿಯಲೇ ಆಗುವುದಿಲ್ಲ ಎಂಬುದನ್ನು ನಾನು ತಿಳಿದುಕೊಂಡೆ. ಸ್ವರಗಳ ಕಂಪನ, ಆಂದೋಲನ, ಖಟ್ಕಾ, ಕಣ್‌ಸ್ವರ- ಯಾವುದೇ ಇದ್ದರೂ ಅಲ್ಲಿ ಭಾವದ ಮಿಳಿತವಾಗದೇ ಇದ್ದರೆ ಅದು ಸರಿಯಾಗಿ ಕೇಳಿಸುವುದೇ ಇಲ್ಲ. ದಿನಾಲೂ ಅಭ್ಯಾಸ ಮಾಡದೇ ಇದ್ದರೆ ಸಂಗೀತದ ಕಲಿಕೆಯ ಏಕಾಗ್ರತೆಗೆ ಭಂಗ ಬರುತ್ತದೆ. ಸಂಗೀತ ಕಲಿಯುವುದರಲ್ಲಿ ಕೇಳುವುದಕ್ಕೂ ಪ್ರಾಮುಖ್ಯವಿದೆ….. ಹೀಗೆ ಎಷ್ಟೋ ಸಂಗತಿಗಳನ್ನು ನಾನು ಕಲಿತೆ. ಸಂಗೀತ ಕಲಿಯುವ ಹಾದಿಯಲ್ಲಿ ನಾನು ಕಲಿತಿದ್ದು ಇಷ್ಟೇ ಅಲ್ಲ; ಎಲ್ಲವನ್ನೂ ಇಲ್ಲಿ ಬರೆಯುವಷ್ಟು ಸಾಮರ್ಥ್ಯ ನನಗಿಲ್ಲ.
ಜನ ಸಮುದಾಯದ ನಡುವೆ ಕಲಿಕೆ
ಈ ಮಧ್ಯೆ ನಾನು ಸಾರ್ವಜನಿಕ ಆಸಕ್ತಿಯ ಹಲವು ವಿಷಯಗಳ ಬಗ್ಗೆ ಅಧ್ಯಯನ ಮಾಡಿದೆ. ಗೋ ಹತ್ಯಾ ನಿಷೇಧ ಕಾಯ್ದೆ, ರಾಜ್ಯದ ವಿದ್ಯುತ್ ಸಮಸ್ಯೆ, ಅಕ್ಷಯಪಾತ್ರೆಯ ಮಧ್ಹಾಹ್ನದೂಟ ಹಗರಣ, ಬಿಟಿ ಬದನೆಯ ಅಪಾಯ, ಜೀತದಾಳುಗಳ ದಾರುಣ ಬದುಕು, ಸಾವಯವ ಕೃಷಿಕರ ಬವಣೆ, ಖಾದಿ ಬಟ್ಟೆ ನೇಯುವವರ ಬದುಕಿನ ಕಥೆ, ಪತ್ರಿಕೋದ್ಯಮದಿಂದ ಕೃಷಿಗೆ ಹೋದ ಸ್ನೇಹಿತನ ಕಥೆ….. ಎಲ್ಲವನ್ನೂ ತಿಳಿದುಕೊಂಡೆ.
ಬಿಟಿ ಬದನೆ ವಿಷಯದಲ್ಲಿ ರಾಜ್ಯಸರ್ಕಾರವು ಒಂದು ಅಧಿಕೃತ ನಿಲುವನ್ನು ತೆಗೆದುಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂಬ ಹೆಮ್ಮೆ ನನಗಿದೆ. ಈ ಹೋರಾಟದ ಸಂದರ್ಭದಲ್ಲಿ ಸ್ವಯಂಸೇವಾ ಸಂಘಟನೆಗಳು ಯಾಕೆ ಇಂಥ ವಿಷಯಗಳ ಬಗ್ಗೆ ವಿರೋಧ ವ್ಯಕ್ತಪಡಿಸುತ್ತವೆ ಎಂಬ ವಿಚಾರದ ಬಗ್ಗೆಯೂ ಸಾಕಷ್ಟು ತಿಳಿದುಕೊಂಡೆ. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳಂತೆಯೇ ಸಾರ್ವಜನಿಕ ಸೇವೆ ಮಾಡುವವರಿಗೂ ಸಾಕಷ್ಟು ಸಂಸ್ಥೆಗಳು ನೆರವಾಗುತ್ತವೆ. ನಿಧಿ ಒದಗಿಸುತ್ತವೆ. ಹಲವು ಸ್ವಯಂಸೇವಾ ಸಂಘಟನೆಗಳು ಈ ನಿಧಿಯನ್ನು ದುರುಪಯೋಗ ಪಡಿಸಿಕೊಂಡರೂ, ಕೆಲವು ಮಾತ್ರ ಈ ಹಣವನ್ನು ಸರಿಯಾಗಿ, ಜನರಿಗಾಗಿ ಬಳಸುತ್ತವೆ. ನಮ್ಮ ಯುವ ಸಮುದಾಯವು ಕೇವಲ ಸೋಶಿಯಲ್ ನೆಟ್‌ವರ್ಕಿಂಗ್‌ನಲ್ಲಿ ಮುಳುಗಿಲ್ಲ, ಸಮಾಜದ ಬೆಳವಣಿಗೆಗೆ ಶ್ರಮಿಸಲೂ ಮುಂದಾಗಿದೆ ಎಂಬ ಸತ್ಯವನ್ನು ನಾನು ಬಿಟಿ ಬದನೆ ವಿರುದ್ಧದ ಹೋರಾಟದಲ್ಲಿ ತಿಳಿದುಕೊಂಡೆ.
೨೦೦೯ರ ಮಧ್ಯಭಾಗದಿಂದ ನಾನು ರಾಜ್ಯದ ವಿದ್ಯುತ್ ಸಮಸ್ಯೆಗಳ ಬಗ್ಗೆ ಹೆಚ್ಚು ಮಾಹಿತಿ ಕಲೆ ಹಾಕಲು ಆರಂಭಿಸಿದೆ. ಶ್ರೀ ಶಂಕರ ಶರ್ಮರಂಥ ತಜ್ಞರ ಪರಿಚಯವಾಯಿತು. ಈ ಪರಿಚಯವೇ ಮುಂದೆ ೨೦೧೦ರ ಮಾರ್ಚ್ ೧೧ರಂದು ಮಾಧ್ಯಮಗಳಲ್ಲಿ ಮುಖ್ಯಮಂತ್ರಿಯವರಿಗೆ ವಿದ್ಯುತ್ ಸಮಸ್ಯೆಗಳ ಬಗ್ಗೆ ಬಹಿರಂಗ ಪತ್ರ ಬರೆಯವುದಕ್ಕೆ ಕಾರಣವಾಯಿತು. ಈ ಪತ್ರದ ಪ್ರಕಟಣೆಯ ನಂತರ ರಾಜ್ಯದ ವಿದ್ಯುತ್ ಸಮಸ್ಯೆಯ ಬಗ್ಗೆ ಬಂದ ಎಲ್ಲ ವರದಿಗಳನ್ನೂ ನೀವು ಗಮನಿಸಿರಬಹುದು. ರಾಜ್ಯಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ; ಅರೆಬರೆ ಚಿಂತನೆಯ ದಿಢೀರ್ ಯೋಜನೆಗಳಿಂದ ಸಮಸ್ಯೆಯ ಪರಿಹಾರವೂ ಆಗುವುದಿಲ್ಲ ಎಂಬುದನ್ನು ನಾನು ಅರಿತುಕೊಂಡೆ. ಅದಕ್ಕೆಂದೇ ಈಗಲೂ ವಿದ್ಯುತ್ ಸಮಸ್ಯೆ ಬಗ್ಗೆ ರ್‍ಯಾಡಿಕಲ್ ಚಿಂತನೆ ಮತ್ತು ದೂರಗಾಮಿ ಯೋಜನೆಗಳ ಅಗತ್ಯವಿದೆ ಎಂದು ರಾಜ್ಯ ಸರ್ಕಾರಕ್ಕೆ ಮನಗಾಣಿಸಲು ಯತ್ನಿಸುತ್ತಿದ್ದೇನೆ. ಈಗ ರಾಜ್ಯ ಸರ್ಕಾರವು ಪ್ರಕಟಿಸಿದ ಯೋಜನೆಗಳನ್ನು ಗಮನಿಸಿದರೆ ಹತಾಶೆಯಾಗುತ್ತಿದೆ. ಜೂನ್ ತಿಂಗಳಿನಲ್ಲಿ ನಡೆಯುವ ವಿಶ್ವ ಹೂಡಿಕೆದಾರರ ಸಮಾವೇಶಕ್ಕಾಗಿ ಇಂಥ ಹಲವಾರು ಸಾರ ಕೋಟಿ ರೂ.ಗಳ ಯೋಜನೆಗಳು ಪ್ರಕಟವಾಗುತ್ತಿವೆ. ಸಮಾವೇಶ ಮುಗಿದ ಮೇಲೆ ಇವೆಲ್ಲ ಏನಾಗುತ್ತದೆ ಎಂಬುದು ದೊಡ್ಡ ಪ್ರಶ್ನೆ. ಮಾನೋ ರೈಲಿನ ಹೊಸ ಬೆಳವಣಿಗೆಯನ್ನೂ ಇದೇ ನಿಟ್ಟಿನಲ್ಲಿ ನೋಡಬಹುದು. ಆದರೆ ಸುಸ್ಥಿರ ಮಾದರಿಗಳಿಂದ ರಾಜ್ಯದ, ದೇಶದ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಬಹುದು ಎಂಬ ವಿಶ್ವಾಸವನ್ನು ನಾನು ಪಡೆದಿದ್ದೇನೆ.
ಬಿಟಿ ಬದನೆ ಮತ್ತು ವಿದ್ಯುತ್ ಸ್ಥಾವರಗಳ ಹಿನ್ನೆಲೆಯಲ್ಲಿ ನಾನು ಕೇಂದ್ರ ಸಚಿವ ಶ್ರೀ ಜೈರಾಂ ರಮೇಶ್‌ರವರ ಮೇಲೆ ಬಿದ್ದಿರುವ ಅಗಾಧ ಹೊಣೆಗಾರಿಕೆ ಮತ್ತು ಒತ್ತಡವನ್ನೂ ತಿಳಿದುಕೊಂಡೆ. ಅದಕ್ಕೇ ದೇಶದ ಹಲವು ಗಣ್ಯರು ಸೇರಿ ಜೈರಾಂ ರಮೇಶ್‌ರವರಿಗೆ ಬೆಂಬಲ ಸೂಚಿಸಿ ಪ್ರಧಾನ ಮಂತ್ರಿಯವರಿಗೆ ಮತ್ತು ಸೋನಿಯಾ ಗಾಂಧಿಯವರಿಗೆ ಬರೆದ ಪತ್ರವನ್ನು ನಾನೂ ಬೆಂಬಲಿಸಿದೆ. ಇಂಥ ಸಾರ್ವಜನಿಕ ಜನಾಭಿಪ್ರಾಯ ರೂಪಿಸುವುದರಿಂದ ಏನಾದರೂ ಪ್ರಯೋಜನ ಆಗಬಹುದು ಎಂದು ನನಗನ್ನಿಸಿದೆ. ಸಚಿವರಾಗಿದ್ದ ಶಶಿ ತರೂರ್ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಏನಾದರೂ ಸಾರ್ವಜನಿಕ ಬೆಂಬಲ ಪಡೆದಿದ್ದರೆ ಅವರು ರಾಜೀನಾಮೆ ಕೊಡಬೇಕಿರಲಿಲ್ಲ. ಈಗ ನೋಡಿ, ಜೈರಾಂ ರಮೇಶ್ ಮೇಲೆ ಹಲವು ಸಚಿವರೇ ಸಿಟ್ಟಾಗಿದ್ದಾರೆ; ಆದರೂ ರಮೇಶ್ ಸದ್ಯಕ್ಕಂತೂ ಬಚಾವಾಗಿದ್ದಾರೆ. ಅವರು ಸದ್ಯಕ್ಕಂತೂ ನಾಡಿನ ಪರಿಸರ ಸಂರಕ್ಷಣೆಗೆ ಪಣ ತೊಟ್ಟಿರುವ ಏಕೈಕ ಸಚಿವರು ಎಂದು ಕಾಣುತ್ತದೆ. ಈವರೆಗಂತೂ ಅವರ ನಡೆ ಸ್ವಾಗತಾರ್ಹವಾಗಿದೆ. ರಾಜಕೀಯ ದೃಢತೆ ಇದ್ದರೆ ಬಿಟಿ ಬದನೆಯನ್ನು ಕೇಂದ್ರದ ಸಚಿವರೇ ತಡೆಯಬಹುದು ಎಂದು ಈಗ ಗೊತ್ತಾಗಿದೆ.
ಈ ಮಧ್ಯೆ ನಾನು ಬಿಜೆಪಿಯ ಹಲವು ನಡೆಗಳನ್ನು ವಿರೋಧಿಸಿ ಬ್ಲಾಗ್ ಬರೆದೆ. ಹಾಗೆ ಬ್ಲಾಗ್ ಬರೆದಿದ್ದಕ್ಕೇ ಕೆಲಸ ಕಳೆದುಕೊಂಡಿದ್ದರೂ, ಆಮೇಲೂ ಬ್ಲಾಗುಗಳನ್ನು ಬರೆದೆ. ಪರಿವಾರದಲ್ಲೇ ಇರುವ ಹಲವು ಸ್ನೇಹಿತರು ನನ್ನನ್ನು ಬೆಂಬಲಿಸಿದ್ದಾರೆ. ಹಲವರು ಆಕ್ರೋಶಗೊಂಡಿದ್ದಾರೆ. ಆದರೆ ಸಾಮೂಹಿಕ ಆದರ್ಶಗಳನ್ನು ಪಠಿಸಿ ಮಂಗನಾಗುವುದಕ್ಕಿಂತ ವೈಯಕ್ತಿಕ ನೆಲೆಯಲ್ಲಿ ಸಾರ್ವಜನಿಕ ಹಿತದ ಕೆಲಸಗಳ ಬಗ್ಗೆ ಲಾಬಿ ಮಾಡುವುದು ಹೆಚ್ಚು ಪ್ರಯೋಜನಕಾರಿ ಎಂಬುದನ್ನು ಕಂಡುಕೊಂಡಿದ್ದೇನೆ. ವಿಷಯಗಳ ಬಗ್ಗೆ ಭಾಷಣ ಬಿಗಿಯುವ ಬದಲು, ವಿಷಯಗಳನ್ನು ದಾಖಲೀಕರಣ ಮಾಡಿ ಮುಂದಿಟ್ಟರೆ ಎಂಥವರೂ ಕೇಳಿಸಿಕೊಳ್ಳಲೇಬೇಕಾಗುತ್ತದೆ. ವಿದ್ಯುತ್ ಸಮಸ್ಯೆ, ಬಿಟಿ ಬದನೆ, ಮನೋಹರ ಮಸ್ಕಿಯ ಕರ್ಮಕಾಂಡ – ಎಲ್ಲದರ ಬಗ್ಗೆಯೂ ನಾನು ದಾಖಲೆಗಳನ್ನು ಸಂಗ್ರಹಿಸಿದೆ. ಭಾವುಕ ಭಾಷಣಗಳಿಗಿಂತ ದಾಖಲೆಗಳೇ ಮೇಲು ಎಂಬುದನ್ನು ನಾನು ಕಂಡುಕೊಂಡಿದ್ದೇನೆ.
ಸಾವಯವ ಕೃಷಿ ಅಧ್ಯಯನ
ಸಾವಯವ ಕೃಷಿ ಮತ್ತು ದೇಸಿ ಉತ್ಪನ್ನಗಳ ಬಗ್ಗೆ ತಿಳಿದುಕೊಳ್ಳಲು ನಾನು ಹಲವಾರು ಊರುಗಳಿಗೆ ಭೇಟಿ ಕೊಟ್ಟ ದಿನಗಳು ಅವಿಸ್ಮರಣೀಯ. ಮೊದಲ ಹಂತದಲ್ಲಿ ನಾನು ಹೊಸಪೇಟೆ, ಕೊಪ್ಪಳ, ಕಿನ್ಹಾಳ, ಇಳಕಲ್, ಭಾಗ್ಯನಗರ, ಹಂಪಿ, ಕಂಪ್ಲಿಯಲ್ಲಿ ತಿರುಗಿದೆ. ಸುಗಂಧಿ ಬಾಳೆ ಹಣ್ಣು ಬೆಳೆಯುವ ಕಂಪ್ಲಿಯ ಅಜ್ಜನಿಂದ ಹಿಡಿದು, ನೇಕಾರನಾಗಿ ವಿನ್ಯಾಸ ಮಾಡವ ಇಳಕಲ್ಲಿನ ದಿನಗೂಲಿಯವರೆಗೆ ನಾನು ಹಲವರನ್ನು ಭೇಟಿ ಮಾಡಿದೆ. ಆಮೇಲೆ ನಾನು ಹುಬ್ಬಳ್ಳಿ, ಗದಗ, ಧಾರವಾಡ, ಬಿಜಾಪುರ, ಸಿಂಧಗಿ ಊರುಗಳಲ್ಲಿ ತಿರುಗಿದೆ. ಸಾವಯವವೇನು, ನಿಸರ್ಗಕೃಷಿ ಮಾಡಿ ದ್ರಾಕ್ಷಿ ಬೆಳೆಯುವ ರೈತನನ್ನೂ ಕಂಡೆ. ಸಾವಯವ ಮತ್ತು ನಿಸರ್ಗ ಕೃಷಿಕರ ನಡುವೆ ಇರುವ ಸಂಘರ್ಷವನ್ನು ತಿಳಿದೆ. ಸಾವಯವ ಉತ್ಪನ್ನಗಳ ಬೆಲೆಯಲ್ಲಿ ಅಪಾರ ಏರುಪೇರುಗಳಿರುವುದನ್ನು ಅರಿತೆ.
ಗದಗದಲ್ಲಿ ಎಚ್ ಕೆ ಪಾಟೀಲ್ ನೇತೃತ್ವದ ಗ್ರಾಮೀಣ ಅಭಿವೃದ್ಧಿ ಕೇಂದ್ರದ ಭೇಟಿ ತುಂಬಾ ಚೆನ್ನಾಗಾಯಿತು. ಹುಲಕೋಟಿಯಂಥ ಹಳ್ಳಿಯಲ್ಲಿ ನಡೆಯುತ್ತಿರುವ ಈ ಮೌನಕ್ರಾಂತಿಯನ್ನು ನೋಡಿ ಅನ್ನಿಸಿದ್ದಿಷ್ಟೆ: ಎಲ್ಲ ರಾಜಕಾರಣಿಗಳೂ ಪಾಟೀಲರಂತೆ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತೆ! ಆದರೆ ಅವರು ಚುನಾವಣೆಗಳಲ್ಲಿ ಸೋತರು; ಈಗಷ್ಟೆ ಅರ್ಬನ್ ಬ್ಯಾಂಕ್ ಫೆಡರೇಶನ್ ಚುನಾವಣೆಯಲ್ಲಿ ಮನೋಹರ ಮಸ್ಕಿಯ ವಿಶ್ವಾಸದ್ರೋಹದ / ಮಿತ್ರದ್ರೋಹದ ನಡುವೆಯೂ ಗೆದ್ದು ಬಂದಿರುವುದು ಸಮಾಧಾನದ ವಿಷಯ.
ಆಮೇಲೆ ನಾನು ಶಿವಮೊಗ್ಗ, ಸಾಗರ, ಬೇಳೂರು, ಸಿದ್ದಾಪುರ, ಓಣಿಕೇರಿ, ಬೆಂಗ್ಳೆ, ಕಿಲಾರ, ಕೇಶವಪುರ, ಸುಬ್ರಹ್ಮಣ್ಯಪುರ, ತೀರ್ಥಹಳ್ಳಿ, – ಹೀಗೆ ಹಲವು ಊರುಗಳನ್ನು ತಿರುಗಿದೆ. ಸಾವಯವ ಕೃಷಿಕರನ್ನು ಭೇಟಿಯಾದೆ. ಕೆಲವರ ಮನೆಗಳಲ್ಲೇ ಉಳಿದು ಅವರ ಬದುಕಿನ ಪರಿಯನ್ನು ಅರಿತೆ.
ಈ ತಿಂಗಳ ಮೊದಲ ವಾರ ನಾನು ಹೆಗ್ಗಡದೇವನ ಕೋಟೆ ತಾಲೂಕಿನಲ್ಲಿ ಹಲವು ಜೀತದಾಳುಗಳನ್ನು ಭೇಟಿಯಾಗಿದ್ದೆ. ಅವರ ಬಗ್ಗೆ ಇನ್ನೊಂದು ವಿವರವಾದ ಬ್ಲಾಗ್ ಬರೆಯುತ್ತಿದ್ದೇನೆ. ಜೀತ ಸಮಸ್ಯೆ ಇನ್ನೂ ಜೀವಂತವಾಗಿರುವುದನ್ನು ಖುದ್ದಾಗಿ ನೋಡಿದ ನನಗೆ ಆಘಾತವಾಯಿತು. ಬಿಜೆಪಿ ರಾಜ್ಯ ಸರ್ಕಾರವು ಕೊನೇ ಪಕ್ಷ ಜೀತ ವಿಮುಕ್ತಿಗೆ ಸಂಬಂಧಿಸಿದಂತೆ ಸಿದ್ಧವಾಗಿರುವ ಕ್ರಿಯಾಯೋಜನೆಯನ್ನು ಜಾರಿಗೊಳಿಸಿದರೆ ಸಾಕು ಅನ್ನಿಸಿತು. ಜೀತ ಸಮಸ್ಯೆಯನ್ನು ನಿಕಟವಾಗಿ ನೋಡಿದ ನನಗೆ ತುಂಬಾ ಬೇಜಾರಾಗಿದೆ; ಮಧ್ಯಮವರ್ಗವಾಗಿ ನಾವು ಸದಾ ಸೌಕರ್ಯಗಳ ಬಗ್ಗೆ ಚರ್ಚೆ ಮಾಡುತ್ತೇವೆ; ಸಿರಿವಂತ ವರ್ಗವಾಗಿ ಮಾಲ್‌ಗಳಿಗೆ ಹೋಗಲು ತವಕಿಸುತ್ತೇವೆ. ಆದರೆ ನಮ್ಮ ಬದುಕಿಗೆ ಮೂಲಾಧಾರವೆನ್ನುವಂತೆ ಹಗಲು ರಾತ್ರಿ ಜೀತಕ್ಕೆ ದುಡಿಯುವವರನ್ನು ಮರೆತಿದ್ದೇವೆ. (ಈ ಅನುಭವದಲ್ಲೇ ಬರೆದ ಕಥೆ ಜೀತ ಮತ್ತು ಈ ಕಥೆಯ ಪಾತ್ರಧಾರಿ ರಾಬಿನ್ ಸಾವಿನ ಕುರಿತ ಬ್ಲಾಗ್ ಇಲ್ಲಿದೆ)
ಕಳೆದವರು, ಉಳಿದವರು
ಈ ವರ್ಷ ನನಗೆ ಹಲವು ಹೊಸ ಸ್ನೇಹಿತರು ದಕ್ಕಿದ್ದಾರೆ; ಕೆಲವರನ್ನು ನಾನು ಕಳೆದುಕೊಳ್ಳುತ್ತಿದ್ದೇನೆ. ಇದೆಲ್ಲ ಯಾವಾಗಲೂ ಆಗಿದ್ದೇ; ನಿರುದ್ಯೋಗ ಪರ್ವದಲ್ಲೂ ಹೀಗಾಯಿತು ಅಷ್ಟೆ. ಏನಾದರಾಗಲಿ, ನನ್ನ ನಿರುದ್ಯೋಗ ಪರ್ವದಲ್ಲಿ ಕೆಲವು ಗೆಳೆಯರು ನನ್ನ ಜೊತೆಗೆ ಗಟ್ಟಿಯಾಗಿ ನಿಂತರು; ನನಗೆ ಸಾಂತ್ವನ ಹೇಳಿದರು. ನನ್ನನ್ನು ಕರೆದು ನನ್ನ ಆರ್ಥಿಕ ಸ್ಥಿತಿಯ ಬಗ್ಗೆ ವಿಚಾರಿಸಿಕೊಂಡರು. ಅವರೆಲ್ಲರಿಗೂ ನನ್ನ ವಂದನೆಗಳು.
ಸುಮ್ಮನಿರಲಾರದೆ ತಯಾರಿಸಿದ ಕೊಳಲು!
ಸುಬ್ರಹ್ಮಣ್ಯಪುರದ ಕೃಷಿಕರೊಬ್ಬರ ತೋಟದಲ್ಲಿದ್ದ ವಾಟೆ ಬಿದಿರನ್ನು ತಂದಿಟ್ಟವನು ಕಳೆದ ವಾರ ಸುಮ್ಮನಿರಲಾದರೆ ಅದಕ್ಕೆ ತೂತು ಕೊರೆದೆ. ಮನೆಯಲ್ಲೇ ಇದ್ದ ವಸ್ತುಗಳನ್ನು ಬಳಸಿ ಅದನ್ನು ಒಂದು ಕೊಳಲಾಗಿ ಪರಿವರ್ತಿಸಿದೆ. ಕಾಡಿನಲ್ಲಿದ್ದ ಒಂದು ಬಿದಿರಿನ ಗೆಣ್ಣು ಈಗ ಅಂಥ ಗಂಭೀರ ಲೋಪಗಳಿಲ್ಲದ, ಕೆಲವಾದರೂ ಸ್ವರಗಳನ್ನು ಮಧುರವಾಗಿ ಹೊಮ್ಮಿಸುವ ಕೊಳಲಾಗಿದ್ದನ್ನು ಕಣ್ಣಾರೆ ಕಂಡೆ. ಎಂಥ ಸೃಷ್ಟಿ ಇದು ಎಂದು ಬೆರಗಾದೆ. ಈ ಪ್ರಪಂಚದಲ್ಲಿ ಸಂಗೀತ ಮೊದಲೇ ಇತ್ತು; ನಮ್ಮ ಹಿರಿಯರು ಅದನ್ನು ಆವಿಷ್ಕರಿಸಿದರಷ್ಟೆ ಎಂದೆನ್ನಿಸಿತು. ಅಮೆಝಾನ್ ನದೀ ತಟದಲ್ಲಿರುವ ಶಮಾನ್‌ಗಳು ಹೇಳುವಂತೆ ಇಡೀ ವಿಶ್ವದ ಆಗುಹೋಗುಗಳು ಮೊದಲೇ ಬರೆಯಲ್ಪಟ್ಟಿವೆ ಎಂದೆನ್ನಿಸಿದೆ. ನಾವೆಲ್ಲ ಇರುವುದನ್ನೇ ಹುಡುಕಲಾಗದೇ ಇರುವ ಕ್ಷುಲ್ಲಕ ಜೀವಿಗಳು. ಇಲ್ಲೇ ಇರುವ ಪ್ರೀತಿ ಪ್ರೇಮಗಳನ್ನು ಅರಿಯದವರು.
ನಿರುದ್ಯೋಗ ಪರ್ವದ ಒಂದು ವರ್ಷ ಮುಗಿದ ಈ ಹೊತ್ತಿನಲ್ಲಿ ಇಷ್ಟು ಬರೆದು ನಿಮ್ಮಲ್ಲಿ ಇದನ್ನೆಲ್ಲ ಹಂಚಿಕೊಂಡಿದ್ದೇನೆ. ಸುಮ್ಮನೆ. ದಿನ ಕಳೆಯಲು ಆಗದೇ ಹೋದಾಗ ನಾನೇ ತಯಾರಿಸಿದ ಕೊಳಲು ಹಿಡಿದು ಕೂರುವೆ. ಮನಸ್ಸಿಗೆ ಬಂದಿದ್ದನ್ನು ಹಾಡುವೆ. ಅದೇ ನನ್ನ ಬೇಸರದ ಏಕತಾನತೆಯನ್ನು ಕರಗಿಸುತ್ತದೆ. ಬಿರುಬೇಸಗೆಯ ಈ ದಿನಗಳಲ್ಲಿ ಸುಮ್ಮನೆ ಶ್ರುತಿ ಹಿಡಿದೇ ತಾಸುಗಟ್ಟಳೆ ಕೂರುವುದು ಸುಖ ಕೊಡುತ್ತದೆ. ಬದುಕಿನ ಶ್ರುತಿಯನ್ನೂ ಹೀಗೆಯೇ ಹಿಡಿಯಲು ಸಾಧನಗಳಿದ್ದರೆ ಎಷ್ಟು ಚೆನ್ನು ಅನ್ನಿಸುತ್ತದೆ. ಸಂಗೀತ ಮತ್ತು ಬದುಕಿನ ಶ್ರುತಿಗಳನ್ನು ಪರಸ್ಪರ ಬೆಸೆದು ಎಲ್ಲರಿಗೆ ಬೇಕಾಗಿ ಬಾಳಿದವರು ವಿರಳ ಎಂಬ ವಾಸ್ತವವನ್ನೂ ನಾನು ಕಂಡುಕೊಂಡೆ. ಅದೇನು ಹೊಸತಲ್ಲ; ಇತಿಹಾಸವನ್ನು ಕೆದಕಿದರೆ ಎಷ್ಟೋ ಕಥೆಗಳು ಹೊರಬರುತ್ತವೆ.
ಈ ವರ್ಷ ಎಷ್ಟೋ ಪುಸ್ತಕಗಳನ್ನು ಓದಿದೆ. ನನ್ನ ಮೇಲೆ ಪರಿಣಾಮ ಬೀರಿದ್ದು ಇವು: ದಿ ಎಂಪೈರ್‍ಸ್ ಆಫ್ ಇಂಡಸ್; ಥ್ರೀ ಕಪ್ಸ್ ಆಫ್ ಟೀ; ಎ ಬ್ಯೂಟಿಫುಲ್ ಮೈಂಡ್; ಮಂದ್ರ; ಬನ್ನಿ, ಯಂತ್ರಗಳನ್ನು ಕಳಚೋಣ; ಹಂಪಿಯಿಂದ ಹರಪ್ಪಾವರೆಗೆ; … ನೋಡಿದ ಸಿನೆಮಾಗಳಿಗೆ ಲೆಕ್ಕವಿಲ್ಲ. ಸಾಂಗತ್ಯದಲ್ಲಿ ಕೆಲವು ವಿಮರ್ಶೆ ಬರೆದಿದ್ದೇನೆ. ಉಳಿದವನ್ನು ನಿರೀಕ್ಷಿಸಿ.
ನಿರುದ್ಯೋಗ ಪರ್ವದ ಎರಡನೇ ವರ್ಷ ಏನೇನು ಕಾದಿದೆ ಎಂಬ ಕುತೂಹಲ ನನಗಂತೂ ಇದೆ.
1 Comment
ಉತ್ತಮ ಲೇಖನ. ಜೀವನ ಅನುಭವ ಮುದ ನೀಡಿತು.