(ವಿಜಯ ಕರ್ನಾಟಕದಲ್ಲಿ ೧೯.೮.೨೦೧೦ರಂದು ಪ್ರಕಟಿತ)
ಜುಲೈ ೨೬ರಂದು ಶ್ರೀ ವಿನಾಯಕ ಕೋಡ್ಸರರವರು ‘ಕವಲು’ ಕಾದಂಬರಿಯ ಬಗ್ಗೆ ಬರೆದ ಲೇಖನಕ್ಕೆ ನಾನು ಕಳಿಸಿದ ಪ್ರತಿಕ್ರಿಯೆಯನ್ನು ಪ್ರಕಟಿಸುವ ಬದಲು, ನಾನು ಉಲ್ಲೇಖವಾಗಿ ಕಳಿಸಿಕೊಟ್ಟ ‘ಕವಲು’ ಕುರಿತು ನಾನು ನನ್ನ ವೆಬ್‌ಸೈಟಿನಲ್ಲಿ ಬರೆದ ವಿಮರ್ಶೆಯನ್ನು – ಭೈರಪ್ಪನವರ ಒಳ್ಳೆಯ ಕಾದಂಬರಿಗಳ ಬಗ್ಗೆ ಉಲ್ಲೇಖಿಸಿದ ಸಾಲುಗಳನ್ನು ಕಡಿತಗೊಳಿಸಿ – ಜುಲೈ ೨೯ರಂದು ಪ್ರಕಟಿಸಿದ್ದೀರಿ; ಮರುದಿನವೇ ನನ್ನ ವೆಬ್‌ಸೈಟನ್ನು ಜಾಲಾಡಿ ನನ್ನ ಆತ್ಮರತಿಯ ಕೃತ್ಯಗಳನ್ನೆಲ್ಲ ಸಂಶೋಧಿಸಿ ಡಾ. ಅರ್ಪಿತಾ ಬಾಳೆನ್ ಬರೆದ ಪ್ರತಿಕ್ರಿಯೆಯನ್ನೂ ಪ್ರಕಟಿಸಿದ್ದೀರಿ.
ಡಾ. ಅರ್ಪಿತಾರವರು ಹೇಳಿದ ಹಾಗೆ ನಾನೇನೂ ವಿಜಯ ಕರ್ನಾಟಕಕ್ಕೆ ಎಂದು ಈ ವಿಮರ್ಶೆಯನ್ನು ಖಂಡಿತವಾಗಿಯೂ ಬರೆದಿಲ್ಲ. ನನ್ನ ಬ್ಲಾಗಿನಲ್ಲಿ ಈ ವಿಮರ್ಶೆಯನ್ನು ಜುಲೈ ೫ರಂದೇ ಪ್ರಕಟಿಸಿದ್ದೆ. ಇದೇ ವಿಮರ್ಶೆಯನ್ನು ‘ಅಗ್ನಿ’ ವಾರಪತ್ರಿಕೆ ಮತ್ತು ಕೆಂಡಸಂಪಿಗೆ ಡಾಟ್‌ಕಾಮ್‌ಗಳೂ ಪ್ರಕಟಿಸಿ ಹಲವು ದಿನಗಳಾಗಿದ್ದವು. ಇದನ್ನು ಮತ್ತೆ ಪ್ರಕಟಿಸಿದ ಹೊಣೆಗಾರಿಕೆ ತಮ್ಮದೇ ಆಗಿರುತ್ತದೆ.
ನಾನು ನನ್ನ ವಿಮರ್ಶೆಯಲ್ಲಿ ಶ್ರೀ ಎಸ್. ಎಲ್. ಭೈರಪ್ಪನವರು ತೆವಲುಳ್ಳವರು ಎಂದಿಲ್ಲ; ಕಾದಂಬರಿಯಲ್ಲಿ ಈ ವಿಚಾರಗಳೆಲ್ಲ ಹಳೆ ಸಂಗತಿಗಳ ತೆವಲು ಎಂದಿರುವುದು ನಿಜ. ಭೈರಪ್ಪನವರ ಕಾದಂಬರಿಗಳನ್ನು ಓದಿಯೇ ಕೊಂಚ ಬರೆಯುವ ಶಕ್ತಿ ಪಡೆದ, ಕೆಲವು ವರ್ಷಗಳ ಹಿಂದೆ ಇದೇ ‘ವಿಜಯ ಕರ್ನಾಟಕ’ಕ್ಕಾಗಿ ಭೈರಪ್ಪನವರನ್ನು ಅವರ ಮನೆಯಲ್ಲಿಯೇ ಸಂದರ್ಶನ ಮಾಡಿದ ನನಗೆ ಭೈರಪ್ಪನವರ ಮೇಲೆ ಅಪಾರ ಗೌರವವಿದೆ. ಅವರನ್ನು ವೈಯಕ್ತಿಕವಾಗಿ ತೆಗಳಿ ಆಗಬೇಕಾಗಿದ್ದೇನೂ ಇಲ್ಲ. ಆದರೆ ಅದೇ ‘ತೆವಲು’ ಪದಕ್ಕೆ ಬದಲಿಯಾಗಿ ‘ನೀವು ಅವಿವೇಕಿ, ಅಜ್ಞಾನಿ, ಬಾಲಿಶತನವುಳ್ಳವ, ‘ಕವಲು’ ಕಾದಂಬರಿಯನ್ನು ಓದಿ ಪೌರುಷವೇ ಕಲಕಿ ಹೋದವ, ಮನಸ್ಸಿಗೆ ತೋಚಿದಂತೆ ಗೀಚುವವ, ಚೇಳು ಬಿಟ್ಟುಕೊಂಡವ, ವುಮನೈಸರ್ ಥರ ಕಾಣಿಸುತ್ತೀರಿ, ಬ್ಲಾಗಿನಲ್ಲಿ ಆತ್ಮರತಿ ಮಾಡಿಕೊಂಡವರು’ – ಇಂಥ ಮಾತುಗಳನ್ನು ಡಾ. ಅರ್ಪಿತಾ ಬರೆದಿದ್ದಾರೆ. ನಾನು ಕಾದಂಬರಿಯಲ್ಲಿ ಕಾದಂಬರಿಕಾರನ ವಿಚಾರಗಳ ಬಗ್ಗೆ ಕಾಮೆಂಟ್ ಮಾಡಿದರೆ, ಡಾ. ಅರ್ಪಿತಾರವರು ನನ್ನ ಮೇಲೇ ವಿಮರ್ಶೆ ಮಾಡಿದ್ದಾರೆ! ಅವರು ನನ್ನನ್ನು ಮೌಲ್ಯಮಾಪನ ಮಾಡಿದ ಬಗೆಗೆ ನಾನು ಹೇಳುವುದೇನೂ ಇಲ್ಲ; ಈ ಥರ ಚರ್ಚೆ ಮಾಡಲು ನನಗೆ ಸರ್ವಥಾ ಇಷ್ಟವಿಲ್ಲ.
ಕೇವಲ ಬ್ಲಾಗರ್ ಆಗಿರುವ ನನ್ನ ವಿಮರ್ಶೆಯನ್ನು ಅವಿವೇಕದ ಘಮಲು ಎಂದು ಬಿಟ್ಟುಬಿಡಿ. ‘ವಿಜಯ ಕರ್ನಾಟಕ’ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ‘ಕವಲು’ ಬಗ್ಗೆ ಬಂದ ವಿಮರ್ಶೆಗಳನ್ನೂ ಗಮನಿಸಿ. ಕಾದಂಬರಿಯ ಬಗ್ಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಚರ್ಚೆಯಲ್ಲಿ ಸ್ವತಃ ಶ್ರೀ ಭೈರಪ್ಪನವರೇ ಈ ಕಾದಂಬರಿಯ ವಿಷಯದ ಬಗ್ಗೆ ಮಾತಾಡಿದ್ದಾರೆ. ಇಂಥ ಘಟನೆಗಳು ಹೆಚ್ಚುತ್ತಿವೆ ಎಂದೂ ಅವರು ಹೇಳಿದ್ದಾರೆ. ‘ದೇಶದ ಜ್ವಲಂತ ಸಾಮಾಜಿಕ ವಿಷಯವು ಕಾದಂಬರಿಯ ಸತ್ವವಾಗಿದೆ’ ಎಂದಿದ್ದಾರೆ. ಒಟ್ಟಾರೆ, ಪುರುಷ ಶೋಷಣೆ ಮಾಡುವ ಸ್ತ್ರೀಯರೇ ಕಾಣಸಿಗುವ ಈ ಕಾದಂಬರಿಯ ಮೂಲಕ ‘ಕಾನೂನು ಬೇರೆ, ನ್ಯಾಯ ಬೇರೆ’ ಎಂಬ ಸಂಗತಿಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ ಎಂಬ ಮಾತು ಬಂದಿದೆ. ಒಟ್ಟಾರೆ, ‘ಕವಲು’ ಬರೆಯುವಾಗ ಭೈರಪ್ಪನವರಲ್ಲಿ ಈ ಸಾಮಾಜಿಕ ವಿಷಯ ಕಾಡುತ್ತಿತ್ತು ಎಂಬುದಂತೂ ನಿಜ.
ಮದುವೆಯನ್ನೇ ಶೋಷಣೆ ಮಾಡಲು ಅಸ್ತ್ರವಾಗಿ ಬಳಸಿಕೊಂಡ ಮಹಿಳೆಯರು ಭಾರತದ ಕೆಲವು ನಗರಗಳಲ್ಲಿ ಇದ್ದಾರೆ ಎಂಬುದು ವಾಸ್ತವ. ಈ ವಾಸ್ತವದ ಹಿಂದಿನ ಇನ್ನಷ್ಟು ವಾಸ್ತವಗಳನ್ನು ಹುಡುಕುವ, ಆ ಬಗ್ಗೆ ಚರ್ಚೆ ನಡೆಯುವ ಅಗತ್ಯವಿದೆ. ಅದಿಲ್ಲದೇ ಹೋದರೆ, ಈ ‘ಜ್ವಲಂತ’ ಸಮಸ್ಯೆಯನ್ನು ಪೂರ್ತಿಯಾಗಿ ಚರ್ಚಿಸಿದಂತಾಗುವುದಿಲ್ಲ. ಹಿರಿಯರಾದ ಭೈರಪ್ಪನವರು ಈ ವಿಷಯವನ್ನು ಎತ್ತಿದ್ದೇನೂ ತಪ್ಪಲ್ಲ; ಅವರ ವಾದಕ್ಕೆ ಹಿನ್ನೆಲೆಯಾಗಿ ಅನಿವಾಸಿ ಭಾರತೀಯರು ನಡೆಸುತ್ತಿರುವ ಅಭಿಯಾನವೂ ಇದೆ. ‘ಕವಲು’ ಕಾದಂಬರಿಯಲ್ಲಿ ಉಲ್ಲೇಖವಾದ ಪುರುಷ ಶೋಷಣೆಯ ವಿರುದ್ಧದ ಬೆಳವಣಿಗೆಗಳು ಸಮಾಜದಲ್ಲಿ ಈಗಾಗಲೇ ನಡೆಯುತ್ತಿವೆ.
ಮುಖ್ಯವಾಗಿ, ಅನಿವಾಸಿ ಭಾರತೀಯ ಯುವಕರು ಭಾರತಕ್ಕೆ ಅರ್ಜೆಂಟಾಗಿ ಬಂದು, ಬ್ರೋಕರ್‌ಗಳ ಮೂಲಕ ‘ಅರೆಂಜಡ್ ಮ್ಯಾರೇಜ್’ ಮಾಡಿಕೊಳ್ಳುತ್ತಾರೆ; ಇಂಥ ಹಲವು ಮದುವೆಗಳಲ್ಲಿ, ಭೈರಪ್ಪನವರು ಬಣ್ಣಿಸಿದಂಥ ಘಟನೆಗಳು ನಡೆದಿವೆ, ನಡೆಯುತ್ತಿವೆ ಎಂದು ಇದೇ ಶೋಷಣೆಗೆ ಒಳಗಾದ ಪುರುಷರು ಮತ್ತು ಅವರ ಕುಟುಂಬದವರು ನಡೆಸುತ್ತಿರುವ ವೆಬ್‌ಸೈಟ್‌ಗಳಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದೆ. ಹಣಪಿಪಾಸು ಕುಟುಂಬಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಗೋಜಿಗೆ ಹೋಗದೆ ಮದುವೆಯಾಗಿ, ಆಮೇಲೆ ಹೆಣ್ಣಿನ ಮನೆಯವರಿಂದ ೪೯೮ಎ ಕೇಸಿಗೆ ಸಿಕ್ಕಿಕೊಂಡು ಅಮೆರಿಕಾ – ಕೆನಡಾಗೆ ಹೋಗಲಾಗದೆ ಮಾನಸಿಕವಾಗಿ ಕುಸಿದುಹೋದ, ಕಾನೂನಿನ ದುರುಪಯೋಗಕ್ಕೆ ಒಳಗಾದ ಪುರುಷರು ಭಾರತೀಯ ದಂಡಸಂಹಿತೆ ಕಲಂ ೪೯೮ಎ ವಿರುದ್ಧ ಈಗಾಗಲೇ ವೇದಿಕೆ ರಚಿಸಿಕೊಂಡು ಹೋರಾಟ ನಡೆಸುತ್ತಿದ್ದಾರೆ. ಹಾಗಂತ ದುರುಪಯೋಗದ ಕಾರಣಕ್ಕಾಗಿ ಈ ಕಲಂನ್ನು ರದ್ದು ಮಾಡಲಾಗದು ಎಂದು ಸರ್ವೋಚ್ಚ ನ್ಯಾಯಾಲಯವೂ ಸ್ಪಷ್ಟವಾಗಿ ಹೇಳಿದೆ. ೪೯೮ಎ ಕಲಮನ್ನು ಲಿಂಗಮುಕ್ತ ಕಲಂ (ಈಗ ಇದು ಸ್ತ್ರೀಯರ ಮೇಲಿನ ಶೋಷಣೆಗೆ ಮಾತ್ರ ಸೀಮಿತವಾಗಿದೆ) ಮಾಡಬೇಕು ಎಂಬ ವಾದವೂ ಕೇಳಿಬಂದಿದೆ.
ಶೋಷಿತ ಪುರುಷರು ಉಲ್ಲೇಖಿಸುವ ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋದ ೨೦೦೮ರ ವರದಿಯ ಪ್ರಕಾರವೇ ಇಂಥ ೪೯೮ಎ ಕೇಸುಗಳು ಹೆಚ್ಚಾಗುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಮೊದಲನೆಯದು ಪಶ್ಚಿಮ ಬಂಗಾಳ (೧೩೬೬೩), ಆಮೇಲೆ ಉತ್ತರಪ್ರದೇಶ (೮೩೧೨), ರಾಜಸ್ಥಾನ (೮೧೧೩), ಮಹಾರಾಷ್ಟ್ರ(೭೮೨೯) ಬರುತ್ತವೆ. ಮಹಿಳಾ ಸಾಕ್ಷರತೆಯಲ್ಲಿ (ರಾಷ್ಟ್ರೀಯ ಸಾಕ್ಷರತಾ ಮಿಶನ್ ೨೦೦೧ರ ಜನಗಣತಿ ಪ್ರಕಾರ), ಈ ರಾಜ್ಯಗಳ ಪೈಕಿ (ಕೇಂದ್ರಾಡಳಿತ ಪ್ರದೇಶ ಸೇರಿದಂತೆ) ಪಶ್ಚಿಮ ಬಂಗಾಳವು (ಶೇ.೬೦.೨೨) ೧೯ನೇ ಸ್ಥಾನದಲ್ಲಿದ್ದರೆ ಉಳಿದವು ಅನುಕ್ರಮವಾಗಿ ೩೨, ೨೯ ಮತ್ತು ೧೧ನೇ ಸ್ಥಾನದಲ್ಲಿವೆ. ದಿಲ್ಲಿ, ಹೈದರಾಬಾದ್, ಲಖ್ನೋ, ಕಾನ್ಪುರ, ಮುಂಬಯಿ, ನಗರಗಳಲ್ಲಿ ಅತೀ ಹೆಚ್ಚು ೪೯೮ಎ ಕೇಸುಗಳು ದಾಖಲಾಗಿವೆ. ೪೯೮ಎ ಕಲಮನ್ನು ದುರುಪಯೋಗ ಮಾಡಿಕೊಂಡ ಕೇಸುಗಳೇ ಹೆಚ್ಚು ಎಂದು ಶೋಷಿತ ಪುರುಷರು (ಹೆಚ್ಚಾಗಿ ಅರೆಂಜಡ್ ಮ್ಯಾರೇಜ್‌ನಿಂದಲೇ ಇದಕ್ಕೆ ಸಿಕ್ಕಿದವರು) ವಾದಿಸಿದ್ದಾರೆ; ಅವನ್ನೆಲ್ಲ ಖಚಿತವಾಗಿ ಪರಿಶೀಲಿಸಿಯೇ ಒಪ್ಪಬೇಕಾಗುತ್ತದೆ.
ಶತಮಾನಗಳಿಂದ ನಮ್ಮ ದೇಶದ ಲಕ್ಷಗಟ್ಟಳೆ ಹಳ್ಳಿಗಳಲ್ಲಿ, ಅರೆಪಟ್ಟಣಗಳಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ, ಕಾನೂನನ್ನು ರಾಜಾರೋಷವಾಗಿ ಕಸದ ಬುಟ್ಟಿಗೆ ಎಸೆದು ಮಾಡುತ್ತಿರುವ ದೌರ್ಜನ್ಯಗಳು ಜ್ವಲಂತವಾಗಲಾರದೆ? ಮೂವತ್ತು ವರ್ಷಗಳಲ್ಲಿ ಮಾತ್ರವೇ, ಇಂಥ ಕಟು ವರ್ತನೆಯ ಸ್ತ್ರೀಯರಿಂದಲೇ ಸಮಾಜವು ಕಲುಷಿತಗೊಂಡಿತು ಎಂಬ ಭೈರಪ್ಪನವರ ಮಾತನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕು.
ಸೆಕ್ಸ್ ಸಂಬಂಧಗಳು ನೈತಿಕವೋ, ಅನೈತಿಕವೋ, ಅವೆಲ್ಲವೂ ಸಮಾಜದ ಬೇಸಿಕ್ ವರ್ತನೆಗಳೇ ಹೊರತು, ಭೂಮಿಯ ಮೇಲಣ ಸಂಕೀರ್ಣ ಸಮಕಾಲೀನ ಆಗುಹೋಗುಗಳ ಮಾನದಂಡವಾಗಲಾರದು. ಸೆಕ್ಸನ್ನು ಅತ್ಯಂತ ಪ್ರಾಥಮಿಕ ಘಟಕ ಎಂದು ಬದಿಗಿರಿಸಿದಾಗಲೇ ನೀವು ಸಮಕಾಲೀನ ಸಂಗತಿಗಳ ಬಗ್ಗೆ ಯೋಚಿಸಬಹುದು. ಆದ್ದರಿಂದಲೇ ಸೆಕ್ಸ್ ಸಂಬಂಧಗಳ ಕುರಿತಂತೆ ಒಂದೊಂದು ದೇಶದಲ್ಲಿ ಒಂದೊಂದು ಕಾನೂನಿದೆ. ಅದನ್ನು ಪ್ರಶ್ನಿಸುವುದೇ ಕಾದಂಬರಿಯ ವಿಷಯವಾದರೆ ಅದನ್ನು ಅಜೆಂಡಾ ಅನ್ನದೆ ಇರಲು ಸಾಧ್ಯವಾಗದು.
‘ಕವಲು’ ಎತ್ತಿರುವ ಈ ಸಾಮಾಜಿಕ ವಿಷಯಗಳ ಬಗ್ಗೆ ಚರ್ಚೆ ನಡೆಯಲು ‘ವಿಜಯ ಕರ್ನಾಟಕ’ ವೇದಿಕೆಯಾಗಲಿ; ಹೊರತು ವೈಯಕ್ತಿಕ ನಿಂದನೆಯ ಸಾಧನವಾಗದಿರಲಿ ಎಂದಷ್ಟೆ ಆಶಿಸುವೆ.