ನಾನು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ನೀಡಿದ ಪ್ರಶಸ್ತಿಯನ್ನು ಖಂಡಿತ ವಾಪಸು ಮಾಡುವುದಿಲ್ಲ. ಅದರಲ್ಲಿ ಒಂದು ಪ್ರಶಸ್ತಿ ಪತ್ರ, ೨೫ ಸಾವಿರ ರೂ. ಚೆಕ್ ಮತ್ತು ಶಾಲು, ಹೂಗುಚ್ಛ ಮತ್ತು ಹಣ್ಣಿನ ಬುಟ್ಟಿ ಇತ್ತು. ಬೆಂಗಳೂರಿನ ಹೊರವಲಯದ ಕಾಲೇಜೊಂದರಲ್ಲಿ ನಡೆದ ಸಮಾರಂಭದಲ್ಲಿ ವಿದ್ಯಾರ್ಥಿಗಳು ತಟ್ಟಿದ ಜೋರು ಚಪ್ಪಾಳೆಗಳೂ ಇದ್ದವು.
ನಾನು ನನ್ನ ಬಹುಮಾನದ ಹಣವನ್ನು ಆಗಲೇ ಸಾಮಾಜಿಕ ಕೆಲಸಕಾರ್ಯಗಳಿಗೆಂದೇ ಖರ್ಚು ಮಾಡಿದ್ದೇನೆ. ಹಾಗಂತ ನಾನು ನನ್ನ ಪ್ರಶಸ್ತಿ ಸ್ವೀಕೃತಿ ಭಾಷಣದಲ್ಲೂ ಘೋಷಿಸಿದ್ದೆ. ಆದ್ದರಿಂದ ನಾನು ಈ ಹಣವನ್ನು ಹಿಂದಿರುಗಿಸಲಾರೆ. (ನನಗೆ ಬಂದ ಪ್ರಕಟಿತ ಲೇಖನಗಳ ಗೌರವಧನದ ಬಹುಪಾಲನ್ನು ಪ್ರವಾಸದ ಭತ್ಯೆಗಳನ್ನು ಒಳಗೊಂಡಂತೆ – ನನಗೆ ಖರ್ಚಿಗೆ ಬೇಡ ಎಂದ ಸಂದರ್ಭಗಳಲ್ಲಿ – ಸಾಮಾಜಿಕ ಕಾರ್ಯಕ್ಕೇ ಕೊಟ್ಟಿದ್ದೇನೆ).
ನಾನು ಪ್ರಶಸ್ತಿ ಪಡೆದಿದ್ದು ಜೈವಿಕ ಇಂಧನದ ಕರ್ನಾಟಕದ ಪ್ರಯೋಗಗಳ ಕುರಿತ ಪ್ರತ್ಯಕ್ಷ ವರದಿಗಳ ಸಂಕಲನಕ್ಕಾಗಿ. ಆದ್ದರಿಂದ ಜೈವಿಕ ಇಂಧನಗಳ ಬಗ್ಗೆ ಜನಜಾಗೃತಿ ಮಾಡುವಲ್ಲಿ ನಾನೂ ಭಾಗವಹಿಸಿದ್ದೇನೆ ಎಂಬ ಅಭಿಮಾನ ನನಗಿದೆ. ಈ ಪ್ರಶಸ್ತಿಯು ನನಗೆ ಅರ್ಹತೆಯಿಂದಲೇ ಬಂದಿದೆ ಎಂದು ನಾನು ನಂಬಿದ್ದೇನೆ. ಈ ಪ್ರಶಸ್ತಿಯು ನನ್ನ ಜೀವನದ ಒಂದು ಪ್ರಮುಖ ಸಾರ್ವಜನಿಕ ಮನ್ನಣೆಯಾಗಿದೆ. ಹೀಗಾಗಿ ಈ ಪ್ರಶಸ್ತಿಯನ್ನು ನಾನು ಹಿಂದಿರುಗಿಸುವ ಪ್ರಶ್ನೆಯೇ ಇಲ್ಲ. ಹಿಂದಿರುಗಿಸಿದರೆ, ಪಡೆದುಕೊಂಡ ಸುದ್ದಿಯಾಗಲೀ, ಪುಸ್ತಕದ ಮರ್ಯಾದೆಯಾಗಲೀ ರದ್ದಾಗುವುದಿಲ್ಲ ಎಂಬುದು ನನ್ನ ನಂಬಿಕೆ. `ನೋಡಿ, ಇವರು ಇಂಥದ್ದಕ್ಕಾಗಿ ಕೊಟ್ಟ ಈ ಪ್ರಶಸ್ತಿಯನ್ನು ಈ ಕಾರಣಕ್ಕಾಗಿ ಹಿಂದಿರುಗಿಸಿದರು’ ಎಂದು ಜನ ಹೇಳಬಹುದೇ ವಿನಃ ಪ್ರಶಸ್ತಿ ಹಿಂದಿರುಗಿಸಿದಾಗ, ಪ್ರಶಸ್ತಿ ಕೊಟ್ಟ ಘಟನೆಯೇ ರದ್ದಾಗುವುದಿಲ್ಲ. ಸುದ್ದಿ? ಆಗಬಹುದು, ಆಗುತ್ತಿದೆ.
ಪ್ರಶಸ್ತಿಯನ್ನು ನಾನು ಇಟ್ಟುಕೊಂಡರೆ ಸ್ವಾರ್ಥಿಯಾಗುತ್ತೇನೆ, ಸಮಾಜದ ಆಗುಹೋಗುಗಳಿಗೆ ಸ್ಪಂದಿಸದ ಜಡ ವ್ಯಕ್ತಿಯಾಗುತ್ತೇನೆ ಎಂಬ ಆರೋಪ ಬಂದರೆ ಅದಕ್ಕೆ ನಾನು ಹೊಣೆಯಲ್ಲ. ಏಕೆಂದರೆ, ಮೊದಲೇ ಹೇಳಿದ ಹಾಗೆ, ಸಮಾಜವು ಮುಂದೆ ಅನುಸರಿಸಬೇಕಾದ ಇಂಧನ ಬಳಕೆಯ ಶೈಲಿಯ ಬಗ್ಗೆ ಬರೆದ ಪುಸ್ತಕಕ್ಕೆ ಬಹುಮಾನ ಪಡೆದು, ಅದರ ನಗದು ಪಾಲನ್ನು ಸಮಾಜಕ್ಕೇ ಕೊಟ್ಟಿದ್ದೇನೆ. ಇನ್ನು ಇದರಲ್ಲಿ ನನ್ನದೇನು ಬಂತು?
ಈ ಪುಸ್ತಕವನ್ನು ಬರೆಯುವುದಕ್ಕೆ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯವರು ಫೆಲೋಶಿಪ್ ಕೊಟ್ಟಿದ್ದರು; ಪ್ರಯಾಣದ ಖರ್ಚುಗಳನ್ನು ನಿಭಾಯಿಸಿದ್ದರು. ಆ ದಿನಗಳಲ್ಲಿ ನನಗೆ ಬೇರೆ ಯಾವುದೇ ಆದಾಯ ಇಲ್ಲವಾಗಿದ್ದರಿಂದ ಫೆಲೋಶಿಪ್ ಹಣವನ್ನು ನನ್ನ ಜೀವನ ನಿರ್ವಹಣೆಗೆ ಬಳಸಿದ್ದೇನೆ.
ನನಗೂ ಎಂ ಎಂ ಕಲಬುರಗಿಯವರ ಕೊಲೆಯ ಬಗ್ಗೆ, ದಿನನಿತ್ಯ ನಡೆಯುತ್ತಿರುವ ಗಲಭೆಗಳ ಬಗ್ಗೆ ಆಕ್ರೋಶವಿದೆ. ಹತ್ತಿರದ ಊರುಗಳಲ್ಲೇ ಕಾಣುವ ನೂರಾರು ರೈತರ ಆತ್ಮಹತ್ಯೆಗಳನ್ನೇ ವಿಶ್ಲೇಷಿಸಲು ಅರ್ಹತೆ ಮತ್ತು ಅನುಭವ ಇಲ್ಲದ ನಾನು ದೂರದ ಊರುಗಳಲ್ಲಿ ನಡೆದ ಘಟನೆಗಳ ಬಗ್ಗೆ ಕೇವಲ ಮಾಧ್ಯಮಗಳ ವರದಿಗಳಿಂದ ನಿಷ್ಕರ್ಷೆಗೆ ಬರುವ ಮುಗ್ಧನಲ್ಲ. ಮಾಧ್ಯಮಗಳು ಹೇಳಿದ್ದೆಲ್ಲವೂ ಸತ್ಯ ಎಂದು ನಂಬುವುದಾದರೆ, ಈ ನಾಡಿನಲ್ಲಿ ಯಾರೂ, ಹೇಗೆ ಬೇಕಾದರೂ, ಎಂತೆಂಥ ಕಾನೂನುಗಳನ್ನು ಬೇಕಾದರೂ ತಮಗೆ ತಕ್ಕಂತೆ ಮಣಿಸಿಕೊಂಡು, ಕುಣಿಯಬಹುದಿತ್ತು. ಒಬ್ಬ ಮಾಜಿ ಪತ್ರಕರ್ತನಾಗಿ ಮಾಧ್ಯಮಗಳ ಬಗ್ಗೆ ನನಗೆ ಅಪಾರವಾದ ಗೌರವ ಮತ್ತು ವಿಶ್ವಾಸವಿದೆ. ಆದರೆ ಅವುಗಳು ಬರೆದಿದ್ದೆಲ್ಲವೂ ಸತ್ಯ ಎಂದು ನಂಬಿಬಿಡುವವ ನಾನಲ್ಲ. ಉದಾಹರಣೆಗೆ ನಾನು ಹಲವು ವರ್ಷಗಳಿಂದ `ದ ಹಿಂದೂ’ ಪತ್ರಿಕೆಯನ್ನು ತರಿಸುತ್ತಿದ್ದೇನೆ. ಅದರಲ್ಲಿರುವ ಸುದ್ದಿಗಳು ನನಗೆ ಬೇಕು; ಅದರ ಅಭಿಪ್ರಾಯ ನಿರೂಪಣೆ ನನಗೆ ಬೇಡ. ಈ ಆಯ್ಕೆ ನನ್ನದು.
ಈ ದೇಶದಲ್ಲೀಗ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂಬ ಆರೋಪಗಳಲ್ಲಿ ನನಗೆ ಸುತಾರಾಂ ನಂಬಿಕೆಯಿಲ್ಲ. ಭೂ ಕಾಯ್ದೆಯಂಥ ವಿಷಯದಲ್ಲಿ ರೈತರ ಪರವಾಗಿಯೇ ಸಂಘ ಪರಿವಾರದ ಪ್ರಮುಖ ಸಂಘಟನೆಗಳು ನಿಂತು, ಕಾಯ್ದೆಯನ್ನು ರದ್ದು ಮಾಡಿಸಿದ ಬಗ್ಗೆ ನನಗೆ ಸಂತಸವಿದೆ. ಇಂಥ ಆಂತರಿಕ ಪ್ರಜಾತಂತ್ರ ಹೊಂದಿರುವ ಸಂಘಟನೆಗಳು ಸಮಾಜದಲ್ಲಿ ಮಾತ್ರ ಸರ್ವಾಧಿಕಾರಿ ಧೋರಣೆಯನ್ನು ತೋರುತ್ತವೆ ಎಂಬ ವಾದದಲ್ಲಿ ಹುರುಳಿಲ್ಲ. ಘೋಷಿತ ತುರ್ತುಸ್ಥಿತಿಯಲ್ಲಿ ನಡೆದ ಘಟನೆಗಳು ಮತ್ತು ಸ್ವಾತಂತ್ರ್‍ಯ ದಮನದ ಸನ್ನಿವೇಶಗಳನ್ನು ನೆನಪಿಸಿಕೊಂಡರೆ, ಸಮಾಜತಾಣಗಳ ಈ ಯುಗದಲ್ಲಿ ಅಘೋಷಿತ ತುರ್ತುಸ್ಥಿತಿ ಎಂಬುದು ನಮ್ಮ ಮಿದುಳಿನಲ್ಲಿ ಇರುವ ಗಟ್ಟಿ ಒಣ ಕಸವೇ ಹೊರತು ಇನ್ನೇನೂ ಅಲ್ಲ ಎಂಬುದು ನನ್ನ ಅನಿಸಿಕೆ. ಚುನಾವಣೆ ನಡೆದ ಮೇಲೆ, ಫಲಿತಾಂಶ ಬರುವ ಮುನ್ನವೇ ಇಂಥ ಎಡವಾದಿಯೊಬ್ಬರು ತುರ್ತುಸ್ಥಿತಿ ಬಂದೇ ಬರುತ್ತದೆ ಎಂದು ವಾದಿಸಿದ್ದರು; ಬಹುಶಃ ಇದೊಂದು ತುರ್ತುಸ್ಥಿತಿಯನ್ನು ನೆನಪಿಸುವ ಇನ್ನೊಂದು ಹುನ್ನಾರ ಎಂದೇ ನಾನು ಹೇಳುತ್ತೇನೆ.
ಇಷ್ಟಕ್ಕೂ ತುರ್ತುಸ್ಥಿತಿಯನ್ನು ಈ ಕಮ್ಯುನಿಷ್ಟರು ಅಧಿಕೃತವಾಗಿಯೇ ಬೆಂಬಲಿಸಿದ್ದರು. ಅಂಥದ್ದೇ ತುರ್ತುಸ್ಥಿತಿ ಈಗ ಒದಗಿದ್ದರೆ ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ! (ಈ ಕುರಿತು https://www.marxists.org/ ಎಂಬ ಮಾಕ್ಸಿಸ್ಟ್ ವೆಬ್‌ಸೈಟಿನಲ್ಲಿ ಪ್ರಕಟವಾಗಿರುವ Dictatorship in India ಎಂಬ ಪುಸ್ತಕವನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಂಡು ಓದಿ.) ತಾನು ಕಳ್ಳ, ಪರರ ನಂಬ! ಆ ದುರ್ಭರ ಗಳಿಗೆಯಲ್ಲಿ ಆರೆಸೆಸ್ ಏನೂ ಸರ್ವಾಧಿಕಾರದ ವಿರುದ್ಧ ಹೋರಾಡುವ ಗುತ್ತಿಗೆಯನ್ನು ಹರಾಜಿನಲ್ಲಿ ಖರೀದಿಸಲಿಲ್ಲ; ಉಳಿದವರ ನಿಷ್ಕ್ರಿಯತೆಯನ್ನು ಗಮನಿಸಿ ತನಗೆ ತೋಚಿದ ರೀತಿಯಲ್ಲಿ ಹೋರಾಡಿತು. ಎಡಪಕ್ಷಗಳನ್ನೂ ಸೇರಿಸಿಕೊಂಡು ಜನತಾ ಪಾರ್ಟಿಯನ್ನು ಕಟ್ಟಿದ್ದು ಜೆಪಿ, ನಾನಾಜಿ ದೇಶಮುಖರಂಥ ಮುತ್ಸದ್ದಿಗಳೇ ಹೊರತು ಒಣ ಕಮ್ಯುನಿಷ್ಟರಲ್ಲವಲ್ಲ?
ಪ್ರಶಸ್ತಿಗಳನ್ನು ಹಿಂದಿರುಗಿಸಿದ ಮೇಲೆ ಮತ್ತೇನು? ಕಲಬುರಗಿಯವರ ಹತ್ಯೆ ತನಿಖೆ ಮಾಡಲು ಒಂದು ಅಧಿಕೃತ ತನಿಖಾ ಸಂಸ್ಥೆಯನ್ನು ನೇಮಿಸಿದ ಮೇಲೆ ಅಕಾಡೆಮಿಗಳು ಇನ್ನೇನು ಮಾಡಬೇಕು? ತಡವಾಗಿಯಾದರೂ ಒಂದು ಕಾರ್ಯಕಾರಿ ಸಮಿತಿ ನಿರ್ಣಯ ಮಾಡಬಹುದು; ಬಿಟ್ಟರೆ ಬೇರೇನೂ ಮಾಡಲಾಗದು. ಕೋರ್ಟಿನಲ್ಲಿ ಈ ಕೊಲೆ ಆರೋಪಿಗಳ (ಅವರು ಸಿಕ್ಕಿಬಿದ್ದ ನಂತರದ ಸನ್ನಿವೇಶವನ್ನು ಊಹಿಸಿ) ಕುರಿತು ನಡೆಯುವ ವಾದ ವಿವಾದಗಳಲ್ಲಿ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದು ಎಂದಿಗೂ ಒಂದು ಸಾಕ್ಷ್ಯವಾಗಲಾರದು; ಶಿಕ್ಷೆಗೆ ಸಮರ್ಥನೆಯೂ ಆಗಲಾರದು.
ಕರ್ನಾಟಕದಲ್ಲಿ ಐನೂರಕ್ಕೂ ಹೆಚ್ಚು ರೈತರು (ನೋಡಿ, ಅವರೀಗ ಸುಮಾರು ಇಷ್ಟು ಎಂಬ ಅಂಕಿ ಅಂಶಗಳಾಗಿಬಿಟ್ಟಿದ್ದಾರೆ!) ಆತ್ಮಹತ್ಯೆ ಮಾಡಿಕೊಂಡಿದ್ದರೆ, ನಾವು ದೂರದಲ್ಲೆಲ್ಲೋ ನಡೆಯುವ ಘಟನೆಗಳ ಬಗ್ಗೆ ತೀರ್ಪು ಕೊಟ್ಟಂತೆ ಮಾತನಾಡುವುದು ಅಧಿಕಪ್ರಸಂಗಿತನ ಎಂದು ನನಗೆ ಅನ್ನಿಸುತ್ತದೆ. ಈ ಬಗ್ಗೆ ಕಲಬುರಗಿಯವರು ಹತ್ಯೆಯಾಗುವ ಮುನ್ನವೂ ಸುದ್ದಿಗಳಿದ್ದವು. ಆದರೆ ಆಗ ನಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಲು ಇವರಾರೂ ಮನಸ್ಸು ಮಾಡಲಿಲ್ಲವಲ್ಲ? ತುಲನೆ ಮಾಡುವುದು ಸಲ್ಲದು. ಆದರೆ ಕಲಬುರಗಿಯವರ ಜೀವದಷ್ಟೇ ಈ ಬೆನ್ನೆಲುಬುಗಳ ಉಸಿರೂ ನಮಗೆ ಮುಖ್ಯವಲ್ಲವೆ? ಅವರನ್ನು ಉದಾಹರಿಸಿ ಪ್ರಶಸ್ತಿ ಹಿಂದಿರುಗಿಸಬಹುದು ಎಂಬುದು ನಮ್ಮ ತಲೆಗೆ ಏಕೆ ಹೊಳೆಯುವುದಿಲ್ಲ? (ಆಗಲೂ ನಾನು ನನ್ನ ಪ್ರಶಸ್ತಿಯನ್ನು ಹಿಂದಿರುಗಿಸಲಾರೆ. ಈ ಪ್ರಶ್ನೆಯನ್ನು ಪ್ರಶಸ್ತಿ ಹಿಂದಿರುಗಿಸುವ ಮಾನಸಿಕತೆ ಹೊಂದಿರುವವರಿಗೆ ಕೇಳುತ್ತಿದ್ದೇನೆ, ಅಷ್ಟೆ.)
`ಖಡ್ಗಕ್ಕಿಂತ ಲೇಖನಿ ಹರಿತ’ ಎಂಬ ಮಾತನ್ನು ನಾನು ಮೊದಲು ಕೇಳಿದ್ದು ಕಮ್ಯುನಿಷ್ಟ್ ಮಿತ್ರರಿಂದಲೇ. ಈಗ ಪ್ರಶಸ್ತಿಗಳನ್ನು ಹಿಂದಿರುಗಿಸುವ ಬೆದರಿಕೆಗಳೇ ಲೇಖನಿಗಿಂತ ಹರಿತ ಆಗಿಬಿಟ್ಟಿದೆಯೆ? (ಕ್ಷಮಿಸಿ; ಈ ಪ್ರಶಸ್ತಿ ಹಿಂದಿರುಗಿಸಿದವರಲ್ಲಿ ನಾನು ಮೆಚ್ಚಿದ ಹಲವು ಲೇಖಕರೂ ಇದ್ದಾರೆ. ನಾನು ಅವರ ಕೃತಿಗಳ ಬಗ್ಗೆ ಮಾತನಾಡುತ್ತಿಲ್ಲ).
ಗಾಂಧಿ ಹತ್ಯೆ ಮಾಡಿದವರಾರು ಇವರು ಇವರು ಎಂದು ಪದೇ ಪದೇ ಚುಚ್ಚಿ ಹೇಳುವ ಇವರು, ಲೋಹಿಯಾ ಕೂಡಾ ಮೆಚ್ಚಿದ ದೀನದಯಾಳ ಉಪಾಧ್ಯಾಯರ ಹತ್ಯೆ ಮಾಡಿದವರಾರು ಎಂದು ಒಮ್ಮೆಯೂ ಕೇಳಲಿಲ್ಲ. ಆರ್ಯರೇ ಬೇರೆ, ದ್ರಾವಿಡರೇ ಬೇರೆ ಎಂಬ ಬಿಳಿ ವಸಾಹತುಶಾಹಿಗಳ ಷಡ್ಯಂತ್ರದ ಮಾತುಗಳನ್ನೇ ಇವರೆಲ್ಲ ಉದುರಿಸಿದರೇ ಹೊರತು, ಆರ್ಯ -ದ್ರಾವಿಡ ವಾದವು ಪೊಳ್ಳು ಎಂಬ ಅಂಬೇಡ್ಕರರ ಮಾತು ಕಣ್ಣಿಗೆ ಕಾಣಲಿಲ್ಲ. `ರಾಮಜನ್ಮಭೂಮಿಯು ಶ್ರದ್ಧೆಯ ವಿಷಯ’ ಎಂದಾಗ ನ್ಯಾಯಾಲಯದ ತೀರ್ಪೇ ಅಂತಿಮ ಎಂದರೇ ಹೊರತು, ಯಾಕೂಬ್ ಮೆಮನ್‌ಗೆ ಗಲ್ಲು ಶಿಕ್ಷೆಯಾದಾಗ ಅದು ನ್ಯಾಯವ್ಯವಸ್ಥೆಯ ಅಂತಿಮ ತೀರ್ಮಾನ ಎಂಬುದನ್ನು ಒಪ್ಪಿಕೊಳ್ಳುವುದಕ್ಕೆ ಮನಸ್ಸು ಮಾಡಲಿಲ್ಲ. ಗತಕಾಲವನ್ನು ಪಾಠವಾಗಿ ಪರಿಗಣಿಸಬಾರದು ಎಂದು ಬಾಬರನ ಕೃತ್ಯಗಳನ್ನು ಮರೆಯಲು ಹೇಳಿದರೇ ಹೊರತು, ಔರಂಗಜೇಬ್ ರಸ್ತೆಯ ಹೆಸರನ್ನು ಕಲಾಂ ಎಂದು ಬದಲಿಸುವಾಗ ಇತಿಹಾಸ ಮರೆಯಲು ಸುತಾರಾಂ ಒಪ್ಪಲಿಲ್ಲ.
ಈ ದ್ವಂದ್ವ ನನಗಿಲ್ಲ.
ಸಮಾಜದ ಆಗುಹೋಗುಗಳಿಗೆ ನಾನು ನನ್ನ ಮಿತಿಯಲ್ಲಿ ಸ್ಪಂದಿಸುತ್ತ, ಖಾಸಗಿ ಅಥವಾ ಸಾಮುದಾಯಿಕ ಸೇವೆಗಳಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ಒಳ್ಳೆಯ ವಾತಾವರಣ ಮೂಡಿಸಲು ನಾನು ಬಯಸುತ್ತೇನೆಯೇ ಹೊರತು; ಸದಾ ಇನ್ನೊಬ್ಬರನ್ನು ದೂರುತ್ತ ಕೂರುವುದಿಲ್ಲ. ನಾನು ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ರೂಪಿಸಲು ಪೋಸ್ಟ್‌ಮಾಡುತ್ತೇನೆಯೇ ಹೊರತು, ಅದನ್ನೇ ನನ್ನ ನಿತ್ಯ ಕಾಯಕ ಮಾಡಿಕೊಂಡಿಲ್ಲ.
(ಇತರರ ವಾದಗಳನ್ನು ವಿರೋಧಿಸಲು ನಾನು ನನ್ನದು ಎಂಬ ಹಲವು ವಿಚಾರಗಳನ್ನು ಬಯಲು ಮಾಡಬೇಕಾಯಿತು; ಹೊರತು ಈ ವಿಷಯಗಳನ್ನು ಬಹಿರಂಗಗೊಳಿಸುವ ಯಾವ ಇರಾದೆಯೂ ನನಗಿರಲಿಲ್ಲ)
ಸಮೂಹ ಚಳವಳಿಗೆ ಪ್ರಸಿದ್ಧರಾಗಿದ್ದ ಎಡಪಂಥೀಯರು ಈಗ ಪ್ರಶಸ್ತಿ ಪಡೆದವರು ಮಾತ್ರವೇ ಸಮೂಹ ಮತ್ತು ಅವರ ಅಭಿಪ್ರಾಯಗಳೇ ಸಮಾಜದ ಅಭಿಮತ ಎಂದು ಬಿಂಬಿಸುವ ಕೃತ್ಯದಲ್ಲಿ ತೊಡಗಿರುವುದು ಶೋಚನೀಯ. ಪ್ರಶಸ್ತಿಗಳನ್ನು ಕೈಬಿಡುವ ಬದಲು `ಹೋರಾಟದ ಹಾದಿ’ ಹಿಡಿದು ಸಾವಿರಗಟ್ಟಳೆ ಜನರನ್ನು ಸಂಘಟಿಸಿ ಪ್ರತಿಭಟನೆ ಮಾಡಿ ಒತ್ತಡ ತರಲು ಇವರನ್ನು ಯಾರೂ ಅಡ್ಡಗಟ್ಟಿಲ್ಲ. ಇಂಥ ಸಂಘಟನಾ ಚಾತುರ್ಯವಾಗಲೀ, ಆಸಕ್ತಿಯಾಗಲೀ ಇವರಲ್ಲಿ ಇಲ್ಲ ಎನ್ನುವುದು ಸ್ಪಷ್ಟ. ಕೈಲಾಗದವರು ಮೈ ಪರಚಿಕೊಳ್ಳುವಂತೆ, mass movementನ ನೈಜ ಅರ್ಥವನ್ನೇ ಕಳಚಿಕೊಂಡಮೇಲೆ ಇವರಿಂದ ಬೇರಿನ್ನೇನೂ ನಿರೀಕ್ಷಿಸಲು ಸಾಧ್ಯವಿಲ್ಲ!
ಇವರೆಲ್ಲ ೧೯೭೫-೭೭ರ ತುರ್ತುಸ್ಥಿತಿಯ ಹಿಂಸೆಯನ್ನು ತಾಳಿ ಬಾಳಿದ ಹಲವರಲ್ಲಿ ಹೋಗಿ ಅನುಭವ ಕೇಳಿಕೊಂಡು ಬರಲಿ; ಆಮೇಲೆ `ಚೆಡ್ಡಿಗಳು’ ಇಂದಿರಾಗಾಂಧಿಯ ಬಂಟರಿಂದ ಕುಂಡೆಮೇಲೆ ಹೊಡೆಸಿಕೊಂಡಂತೆ ಹೊಡೆಸಿಕೊಳ್ಳಲಿ; ಏರೋಪ್ಲೇನ್ ಹತ್ತಲಿ; ಅದಾದ ಮೇಲೆ ಮತ್ತೆ `ಘೋಷಿತ ಮತ್ತು ಅಘೋಷಿತ’ ತುರ್ತುಸ್ಥಿತಿಗಳ ತುಲನಾತ್ಮಕ ಅಧ್ಯಯನ, ಸಂಕಿರಣ, ಸೆಮಿನಾರು, ಕಮ್ಮಟ, ಚರ್ಚೆ… ಎಲ್ಲ ಮಾಡುವ!