ಗಮನಿಸಿ: ಈ ಬ್ಲಾಗನ್ನು ಮರುಪ್ರಕಟ ಮಾಡುವುದಾಗಲೀ, ಹೈಪರ್‌ಲಿಂಕ್ ಮಾಡುವುದಾಗಲೀ ನಿಷಿದ್ಧ.
ನನ್ನ ಮಾತುಗಳು ಅಸಹನೀಯವಾಗುವಂತೆ, ನನ್ನ ಮೌನವೂ ಹಲವರಿಗೆ ಪ್ರಶ್ನೆಯಾಗಿದೆ. ಸೋತವರು ಮೌನವಾಗಿರುತ್ತಾರೆ ಎಂಬುದು ಪ್ರತೀತಿ. `ಕೆಲಸ ಬಿಟ್ಟಿರ? ನಮಗೆ ಗೊತ್ತಿತ್ತು ಬಿಡಿ’ ಎನ್ನುವವರು ಕೆಲವರು; `ನೀವು ತುಂಬಾ ದಿನ ಎಲ್ಲೂ ನಿಲ್ಲೊಲ್ಲ ಅಂತ ಮತ್ತೆ ಪ್ರೂವ್ ಆಯ್ತು ನೋಡಿ’ ಎಂದು ಹಲವರು – ಈ ಬಗೆಯ ಮಾತುಗಳು ಕೇಳಿಬಂದಿವೆ.ಬೇಜಾರಿಲ್ಲ.
ಸೆಲ್ಫ್ ಸೆಂಟರ್‌ಡ್ ಮನುಷ್ಯ ಎಂದುಕೊಂಡರೂ ಪರವಾಗಿಲ್ಲ, ಹೇಳಿಬಿಡುವೆ: ಈ ಕೆಲಸವನ್ನಾಗಲೀ, ಅದಕ್ಕಿಂತ ಹಿಂದಿನದನ್ನಾಗಲೀ, ಅದಕ್ಕಿಂತ ಮುಂಚಿನದಾಗಲೀ, ನಾನು ಕಾಡಿ ಬೇಡಿ ಪಡೆದಿದ್ದಲ್ಲ; ಆಶಯ ವ್ಯಕ್ತಪಡಿಸಿದ್ದೆ, ನಿಜ; ಆದರೆ ಎಂದೂ ಬೇಡಲಿಲ್ಲ. ನನ್ನ ಕೈಕಾಲುಗಳು ಸರಿ ಇರುವವರೆಗೂ ಅಂಥ ಬೇಡುವ ದರಿದ್ರತನ ಬರದು. ಇಷ್ಟಕ್ಕೂ ಕೆಲಸ ಸೇರುವುದು, ಅಲ್ಲೇನೋ ಸಮಸ್ಯೆ ಕಂಡರೆ, ಹುಟ್ಟಿದರೆ ಬಿಡುವುದು ನನಗೊಬ್ಬನಿಗೇ ಸೀಮಿತವಾಗಿಲ್ಲ.
ನಾನೆಂದೂ ಸಂಬಳಕ್ಕಾಗಿ ಕಾತರಿಸಿ, ಅದನ್ನೇ ನೆಗೋಶಿಯೇಟ್ ಮಾಡಿದವನೂ ಅಲ್ಲ; ನನ್ನ ನೆನಪಿನ ಮಟ್ಟಿಗೆ ಹೇಳುವುದಾದರೆ, ಸಂಬಳಕ್ಕಾಗಿ ನಾನು ಒತ್ತಾಯಿಸಿದ್ದು ಶಿರಸಿಯ ಸಚ್ಚಿದಾನಂದ ಹೆಗಡೆ ಎಂಬ ನನ್ನ ಎಂಪ್ಲಾಯರ್‌ಗೆ, ಅದೂ ೧೯೯೨ರಲ್ಲಿ. ಒಂದು ವರ್ಷದ ಮಗನನ್ನು ನೋಡಿಕೊಳ್ಳುತ್ತಿದ್ದ ಆ ಹೊತ್ತಿನಲ್ಲಿ (ಆಗ ನಾನು ಅವನಿಗೆ ಒಬ್ಬ ಅಪ್ಪ ಮತ್ತು ಅರ್ಧ ತಾಯಿಯಾಗಿದ್ದೆ) ನಾಲ್ಕು ತಿಂಗಳು ಸಂಬಳ ಪಡೆಯದೆ ಮುಷ್ಕರವನ್ನೂ ಹೂಡಿದ್ದೆ; ಅಲ್ಲಿ ಇಲ್ಲಿ, ಐವತ್ತು, ನೂರು ರೂಪಾಯಿ ಕೇಳಿ ಪಡೆದಿದ್ದೆ; ಹೇಗೋ ಬದುಕಿದ್ದೆ. ಇನ್ನು ಈ ಮನುಷ್ಯ ನನ್ನ ಲೆಕ್ಕ ಚುಕ್ತಾ ಮಾಡಲಾರ ಎಂದು ಗೊತ್ತಾದ ಕೂಡಲೇ ಹೊಸದಿಗಂತಕ್ಕೆ ಸೇರಿಕೊಂಡೆ. ಆತನ ಮೇಲೆ ದೂರು ಕೊಟ್ಟೆ; ನಾಲ್ಕು ವರ್ಷ ನ್ಯಾಯಾಲಯದಲ್ಲಿ ಅಲೆದೆ; ಒಂದು ಸಲವೂ ಆತ ಕಾರ್ಮಿಕ ಅಧಿಕಾರಿಯ ಕಚೇರಿಗೂ ಬರಲಿಲ್ಲ; ನ್ಯಾಯಾಲಯಕ್ಕೂ ಬರಲಿಲ್ಲ. ಕೊನೆಗೆ ವಿಚಿತ್ರ ಕಾರಣ ನೀಡಿ ತೀರ್ಪು ಹೊರಬಿತ್ತು. ಅಷ್ಟು ಹೊತ್ತಿಗೆ ನನ್ನ ಉದ್ದೇಶವೂ ಪೂರೈಸಿತ್ತು. ಅದು ಬಿಟ್ಟರೆ, ಡಾಟ್‌ಕಾಮ್ ಬಬಲ್‌ಗಂ ಯುಗದಲ್ಲಿ ಮಜಾ ತೆಗೆದುಕೊಳ್ಳಲು ನೆಗೋಶಿಯೇಟ್ ಮಾಡಿದೆ; ಹೆಚ್ಚಿನ ಸಂಬಳವನ್ನೂ ಪಡೆದೆ. ಆಮೇಲಿಂದ ಎಂದೂ ನಾನು ಇಷ್ಟೇ ಸಂಬಳ ಬೇಕೆಂದು ಒತ್ತಾಯಿಸಲಿಲ್ಲ. ಡಾಟ್‌ಕಾಮ್ ಕುಸಿದ ಮೇಲೆ ವಿಜಯ ಕರ್ನಾಟಕಕ್ಕೆ ಬಂದಾಗ ಸಂಬಳವೂ ಅರ್ಧ ಕುಸಿಯಿತು. ಹೊಂದಿಕೊಂಡೆ. ಅದಾಗಿ ಜೆ ಎಸ್ ಡಬ್ಲ್ಯು ಸ್ಟೀಲ್ ಲಿಮಿಟೆಡ್ ಸೇರಿದಾಗ, ಈಗಿನ ಕೆಲವು ಹಿರಿಯ ಹುದ್ದೆಯಲ್ಲಿರುವ ಪತ್ರಕರ್ತರು ಕಾಣುತ್ತಿರುವ ಸಂಬಳವನ್ನು ಪಡೆದೆ, ೨೦೦೭ರಲ್ಲಿ. ಅದಾದ ಮೇಲೆ ಒಂದೂವರೆ ವರ್ಷ ಕೆಲಸವೇ ಇರಲಿಲ್ಲ; ಆಗ ಯಾರೂ (ವಿಶೇಷವಾಗಿ ನೀವು ತುಂಬಾ ದಿನ ಎಲ್ಲೂ ನಿಲ್ಲೊಲ್ಲ ಎನ್ವನುವರು) ನನ್ನ ಬಳಿ ಬಂದು `ಅರೆ, ಒಂದೂವರೆ ವರ್ಷ ಕೆಲ್ಸ ಮಾಡೇ ಇಲ್ವಲ್ಲ’ ಎಂದು ಕೇಳಿಲ್ಲ.ಆಮೇಲೆ ಮತ್ತೆ ಒಳ್ಳೆ ಸಂಬಳವೇ ಇತ್ತು.
ಇತ್ತೀಚೆಗೆ ಕಣಜವನ್ನು ಬಿಟ್ಟಿದ್ದೂ ಸಂಬಳಕ್ಕಾಗಿ ಅಲ್ಲ; ವಾರದಲ್ಲಿ ಐದು ದಿನದ ಕೆಲಸವನ್ನು ಬಿಟ್ಟು, ಏಳೂ ದಿನ ತಲೆ ಕೆಡಿಸಿಕೊಳ್ಳುವ ದಿನಪತ್ರಿಕೆ ಕೆಲಸಕ್ಕೆ ಯಾಕೆ ಬರಬೇಕು ಹೇಳಿ? ನನ್ನ ಸಂಗೀತದ ಅರೆಹುಚ್ಚು, ಸಿನಿಮಾ ನೋಡುವ ಚಟ, – ಇವೆಲ್ಲಕ್ಕೂ ವಿದಾಯ ಹೇಳಿ ಬಂದೆ; ಅಭ್ಯುದಯ ಪತ್ರಿಕೋದ್ಯಮದ ಹಿಡನ್ ಅಜೆಂಡಾ ಇಟ್ಟುಕೊಂಡಿದ್ದೆ. ಈಗ ಕೆಲಸಕ್ಕೆ ರಾಜಿನಾಮೆ ಕೊಟ್ಟು ಹೊರಬಂದೆ. ಕಳೆದ ಇಪ್ಪತ್ತು ದಿನಗಳಲ್ಲಿ ನಾನು ಕಲಿತಿದ್ದೇನು, ಅರಿತಿದ್ದೇನು ಎಂಬುದನ್ನೆಲ್ಲ ಸದ್ಯ ಹೇಳಲಾರೆ. ಕಲಿಯುವುದೇ ಬದುಕಿನ ದಿನಚರಿ ಎಂದು ತಿಳಿದ ನನಗೆ ಈ ಹಠಾತ್ ಬೆಳವಣಿಗೆ ಶಾಕ್ ತಂದೂ ಇಲ್ಲ; ಇದು ನನ್ನ ವಿಧಿಯನ್ನೇ ನಿಯಂತ್ರಿಸುತ್ತಿದೆ ಎಂದು ನಂಬಿಯೂ ಇಲ್ಲ.
ಇನ್ನು ಜಾಬ್ ಮಾರ್ಕೆಟ್‌ನಲ್ಲಿ ನಿಮ್ಮ ಹೆಸರು ಕೆಡಲಿಲ್ಲವೆ? – ಈ ಪ್ರಶ್ನೆಯನ್ನು ಕೇಳುವವರೂ ಇದ್ದಾರೆ. ನಾನು ಎಂದೂ ಜಾಬ್ ಮಾರ್ಕೆಟ್ ಬಗ್ಗೆ ವರಿ ಮಾಡಿಕೊಂಡಿಲ್ಲ. ಜಾಬ್ ಮಾಡುವವರಿಗೆ ಮಾರ್ಕೆಟ್ ಇದ್ದೇ ಇರುತ್ತದೆ – ಇದು ನನ್ನ ನಂಬಿಕೆ.
ಈ ಬ್ಲಾಗನ್ನು ಓದುವ ಎಷ್ಟು ಜನ ಪತ್ರಕರ್ತರಿದ್ದೀರೋ ಗೊತ್ತಿಲ್ಲ; ಆದರೆ ಒಂದೇ ಪ್ರಶ್ನೆ: ಸಂಬಳದ ಕೆಲಸದ ಹೊರತಾಗಿಯೂ ನಿಮಗೆ ಬದುಕೊಂದು ಇದೆ ಎಂದು ಅನ್ನಿಸಿಲ್ಲವೆ? ಬದುಕಿನಲ್ಲಿ ಸಂಬಳದ ಕೆಲಸವೊಂದೇ ದಿನಚರಿ ಆಗಿಬಿಟ್ಟಿದ್ದರೆ ನಮಗೂ ಸರ್ಕಾರಿ ಕಚೇರಿಯಲ್ಲಿ ಜಾಬ್ ಸೆಕ್ಯುರಿಟಿಯೇ ಮುಖ್ಯವಾಗಿರೋ ಕಾರಕೂನರಿಗೂ ವ್ಯತ್ಯಾಸ ಇರುತ್ತದೆಯೆ? ವೃತ್ತಿ ಕುರಿತಂತೆ ಒಂದು ನಂಬಿಕೆ, ಒಂದು ನೇರ ನಡೆ, ಒಂದು ಗಟ್ಟಿ ನಿಲುವು, ಸಮಾಜದ ಬಗ್ಗೆ ಒಂದಷ್ಟು ಗಮನ, ವ್ಯಕ್ತಿಗತ ಕಲಿಕೆಗೆ ಸದಾ ಹಾತೊರೆವ ಮನ – ಇವೆಲ್ಲ ಅಸಹಜವೆ?
ಈ ವಾರವಿಡೀ ನಾನು ಪರ್ವತಾರೋಹಣದ ಮೂರು ಮತ್ತು ಭೂಗರ್ಭದೊಳಗಣ ಮಹಾನ್ ಗುಹೆ ಹೊಕ್ಕವರ ಒಂದು ಸಿನೆಮಾ ನೋಡಿದೆ. ಬದುಕುವ ಛಲ ಇದ್ದರೆ ಹೇಗೂ ಬದುಕಬಹುದು ಎಂಬ ಕಥೆಗಳನ್ನು ಹೇಳಿದ ಈ ಸಿನೆಮಾಗಳು ನೈಜ ಘಟನೆಗಳನ್ನೇ ಆಧರಿಸಿದವು. ಅವುಗಳನ್ನು ನೋಡಿದ ಮೇಲೆ ನನಗೆ ಈ ಸಂಬಳ, ಈ ಕೆಲಸ, ಈ ಪ್ರಾವಿಡೆಂಟ್ ಫಂಡ್, ಈ ಹುದ್ದೆ, ಈ ವೃತ್ತಿವೈಷಮ್ಯ – ಎಲ್ಲವೂ ಎಷ್ಟು ಕ್ಷುಲ್ಲಕ ಎನ್ನಿಸಿದ್ದು ನಿಜ. ಬದುಕುವ ಬಗೆಯನ್ನು ಎರಡೇ ತಾಸುಗಳಲ್ಲಿ ಈ ಸಿನೆಮಾಗಳು ಕಲಿಸುತ್ತವೆ. ಆಳಕ್ಕೆ ಇಳಿಯುವ ಮತ್ತು ಎತ್ತರಕ್ಕೆ ಏರುವ ವ್ಯಕ್ತಿಗಳಲ್ಲಿ ಇರಬೇಕಾದ್ದು ಕಾರಕೂನಿಕೆಯಲ್ಲ, ಆ ಕ್ಷಣದ ನಿರ್ಧಾರಗಳು ಮಾತ್ರ ಎಂಬುದನ್ನು ನಾನು ಕಲಿತುಕೊಂಡೆ ಅನ್ನಿಸಿತು.
ನಾನು ಕೆಲಸ ಬಿಟ್ಟ ದಿನ (ಮಾರ್ಚ್ ೧೦) ಒಬ್ಬ ಮನುಷ್ಯ ನನ್ನನ್ನು ಕೇಳಿದ: `ಬಹಳ ವರ್ಷಗಳ ಹಿಂದೆ ಚಾಮರಾಜಪೇಟೆಯ ಸಿಂಡಿಕೇಟ್ ಬ್ಯಾಂಕಿನ ಹತ್ತಿರ ನಿಂತ ನಿನಗೆ ೧೦ ಸಾವಿರ ರೂಪಾಯಿ ಕೊಟ್ಟಿದ್ದು ಯಾರು ಗೊತ್ತೆ? ನನ್ನ ಹೆಂಡತಿ!’. `ಅರೆ, ಅದೇನು ಆಕೆ ನನಗೆ ಸಾಲ ನೀಡಿದಳೆ?’ ಎಂದು ಕೇಳಿದೆ. `ಇಲ್ಲ, ನಿನ್ನ ಸ್ನೇಹಿತನ ಪರವಾಗಿ ಕೊಟ್ಟಿದ್ದು’ ಎಂದ. ಆ ಹಣವು ನನ್ನ ಮತ್ತು ನನ್ನ ಗೆಳೆಯನ ನಡುವಣ ವ್ಯವಹಾರದ ಭಾಗವಾಗಿತ್ತು. `ಸರಿ, ಆತ ನಿಮಗೆ ಹಣ ವಾಪಸು ಕೊಡಲಿಲ್ಲವೆ?’ ಎಂದು ಕೇಳಿದೆ. `ಮರುದಿನವೇ ಕೊಟ್ಟ’ ಎಂದ. ಹಾಗಾದರೆ ಇಲ್ಲಿ ಈಗ ಈ ಮಾತು ಏಕೆ ಬಂತು ಎಂದು ಪ್ರಶ್ನಿಸಿದೆ. `ಸುಮ್ಮನೆ’ ಎಂದ ಆತ ತಾನೆಷ್ಟು ಉದಾರಿ ಎಂದೆಲ್ಲ ಉದಾಹರಣೆಗಳನ್ನು ಕೊಡತೊಡಗಿದ. ಅಂದು ನಾನು ನಿರ್ಗತಿಕನಾಗಿ ನಿಂತಾಗ ತನ್ನ ಹೆಂಡತಿ ಬಂದು ಹಣ ಕೊಟ್ಟು ಸಹಾಯ ಮಾಡಿದಳು ಎಂದು ಆತ ಹೇಳಬಯಸುತ್ತಿದ್ದ ಅನ್ನಿಸಿತು. ನನ್ನ ಕಡುಬಡತನದ ದಿನಗಳಲ್ಲಿ ಹಣ ಕೇಳದೆ ಬಾಳೆ ಹಣ್ಣು ಕೊಟ್ಟ ದಾವಣಗೆರೆಯ ಗಾಡಿ ಅಂಗಡಿಯ ಅಜ್ಜ, ನನ್ನ ಅನಾಥ ಕ್ಷಣಗಳಲ್ಲಿ ದಿನ ಬೆಳಗಾದರೆ ಸಾಕು, ಹಣ ಕೇಳದೆ ಪಲಾವ್ ಕೊಟ್ಟ ಕಾಟನ್‌ಪೇಟೆಯ ಗೂಡು ಹೋಟೆಲ್‌ನ ಮನುಷ್ಯನನ್ನೇ ನಾನು ಇಂದಿಗೂ ಮರೆಯಲಾಗಿಲ್ಲ. ಅಂದಮೇಲೆ ನನಗೆ ನಿಜಕ್ಕೂ ಸಾಲ ಕೊಟ್ಟಿದ್ದರೆ ಮರೆಯುತ್ತಿದ್ದೆನೆ?
ಫುಟ್‌ಪಾತಿನಲ್ಲಿ ಔದಾರ್ಯವಂತ ಜೀವಗಳನ್ನೂ, ಹವಾನಿಯಂತ್ರಿತ ಕೋಣೆಗಳಲ್ಲಿ ಕ್ಷುದ್ರ ಮನಸ್ಸುಗಳನ್ನೂ ಕಾಣಬಹುದು ಎಂಬಲ್ಲಿಗೆ ಈ ಬದುಕು ಬಂದು ನಿಂತಿದೆ. ಬದುಕಿನಲ್ಲಿ ನೀವು ವರ್ಗೀಕರಿಸಬೇಕಾದ್ದು ಇಷ್ಟೆ: ಅನ್ನಗಳ್ಳರು ಮತ್ತು ಅನ್ನ ಕೊಡುವವರು. ಈ ಮಾತುಗಳನ್ನು ಇನ್ನು ಹತ್ತು ವರ್ಷಗಳ ನಂತರ ಮೆಲುಕು ಹಾಕಲೂ ನಾನು ಸಿದ್ಧ.
ಈ ಬ್ಲಾಗನ್ನು ನನ್ನ ಬಗ್ಗೆ ಅನುಮಾನ ಇರುವವರಿಗಾಗಿ ಬರೆದಿರುವೆ. ನನ್ನನ್ನು ಅರಿತವರು ಇದನ್ನು ಓದಿ `ಯಾಕೆ ಬರೆದ?’ ಎಂದು ಪ್ರಶ್ನಿಸುತ್ತಾರೆ. ಅನುಮಾನ ಇರುವವರು `ಇವನಿಗೆಷ್ಟು ಧಿಮಾಕು?’ ಎನ್ನುತ್ತಾರೆ ಎಂಬ ಅರಿವೂ ನನಗಿದೆ.
ಇಷ್ಟು ಓದಿದಿರಲ್ಲ, ವಂದನೆಗಳು.
ಮತ್ತೆ ಸಿಗೋಣ.