ಪಾಲೋ ಕೊಯೆಲ್ಹೋ ಬರೆದ ಕಾದಂಬರಿಗಳೆಲ್ಲವೂ ತುಂಬಾ ಚೆನ್ನಾಗಿವೆ ಅಂತೇನಿಲ್ಲ. ನಾನು ಇತ್ತೀಚೆಗೆ ಅವನ ಬ್ರೈಡಾ, ಬೈ ದಿ ರಿವರ್ ಪೆಡ್ರಾ, ಐ ಸ್ಯಾಟ್ ಎಂಡ್ ವೆಪ್ಟ್ ಮತ್ತು `ದಿ ವಿನ್ನರ್ ಸ್ಟಾಂಡ್ಸ್ ಅಲೋನ್’ ಕಾದಂಬರಿಗಳನ್ನು ಓದಿದೆ. ಮೊದಲೆರಡೂ ಕಾದಂಬರಿಗಳೂ ಹಳೆಯವೇ. ವಿನ್ನರ್ ಮಾತ್ರ ಹೊಸತು.
ಕೊಯೆಲ್ಹೋ ಕಾದಂಬರಿಗಳಲ್ಲಿ ಸಾಮಾನ್ಯವಾಗಿ ಕಳೆದುಕೊಂಡದ್ದನ್ನು ಪಡೆಯುವ ಯತ್ನವೇ ಕಾಣುತ್ತದೆ. ದಿ ಆಲ್‌ಕೆಮಿಸ್ಟ್‌ನಲ್ಲಿ ಸಿಗಲಾರದ್ದನ್ನು ಹುಡುಕುವ ಕಥೆ ಇದೆ. ಅಥವಾ `ವೆರೋನಿಕಾ ಡಿಸೈಡ್ಸ್ ಟಿ ಡೈ’ ಕಾದಂಬರಿಯಲ್ಲಿ ನಾಯಕಿ ಕಳೆದುಕೊಳ್ಳಲಿದ್ದ ಬದುಕನ್ನು ಮತ್ತೆ ಪಡೆಯುವ ಸಾಹಸವನ್ನೂ ಕಾಣಬಹುದು.
`ದಿ ವಿನ್ನರ್ ಸ್ಟಾಂಡ್ಸ್ ಅಲೋನ್’ ಕಾದಂಬರಿಯಲ್ಲೂ ಇಂಥದ್ದೇ ಕಥಾ ಹಂದರವಿದೆ. ಕ್ಯಾನೆ ಸಿನೆಮಾ ಉತ್ಸವದ ಕ್ಯಾನ್‌ವಾಸ್‌ನಲ್ಲಿ ಪಾಲೋ ಕೊಯೆಲ್ಹೋ ಒಂದು ವೈಚಾರಿಕ ಥ್ರಿಲ್ಲರ್ ಕಾದಂಬರಿಯನ್ನು ಹೆಣೆದಿದ್ದಾರೆ. ಇಗೋರ್ ಎಂಬ ರಶಿಯಾದ ಶ್ರೀಮಂತ ತನ್ನ ಇವಾ ಎಂಬ ಹೆಂಡತಿಯನ್ನು ಹಮೀದ್ ಎಂಬ ಫ್ಯಾಶನ್ ಜಗತ್ತಿನ ಜನಪ್ರಿಯ ವ್ಯಕ್ತಿಗೆ ಕಳೆದುಕೊಂಡಿದ್ದಾನೆ. ಇಗೋರ್, ಇವಾ, ಮೀದ್ ಮತ್ತು ಹತ್ತಾರು ಪಾತ್ರಗಳು ಕ್ಯಾನೆಗೆ ಬಂದಿವೆ. ಕ್ಯಾನೆ ಉತ್ಸವ ಎಂದರೆ ಕೇಳಬೇಕೆ?ನಿಮಗೆ ಬೇಕಾದಷ್ಟು ಬಗೆಬಗೆಯ ಪಾತ್ರಗಳು ಸಿಗುತ್ತವೆ.
ಮಜಾ ಅಂದ್ರೆ ಇಲ್ಲಿ ಕೊಯೆಲ್ಹೋ ಥ್ರಿಲ್ಲರ್ ರೂಪದಲ್ಲಿ ತನ್ನ ವೈಚಾರಿಕ ಉಪನ್ಯಾಸವನ್ನು ಹರಿಯಬಿಟ್ಟಿರುವುದು. ಅವರ ಎಲ್ಲಾ ಕಾದಂಬರಿಗಳಲ್ಲೂ ಒಂಥರ ಕ್ರೈಸ್ತ ಹಿನ್ನೆಲೆಯ ನೀತಿ ವಾಕ್ಯಗಳು, ಬೋಧನೆಗಳು, ಬದುಕನ್ನು ಬದಲಿಸಬೇಕೆಂಬ ಹುಮ್ಮಸ್ಸುಳ್ಳ ಪ್ಯಾರಾಗಳನ್ನು, ಸಂಭಾಷಣೆಗಳನ್ನು ಕಾಣಬಹುದು. ಇಲ್ಲೂ ಇಂಥ ವೈಚಾರಿಕ ಪ್ರವಾಹ ಹರಿದಿದೆ. ಇಗೋರ್ ಹ್ಯಾಗೆ ಹ್ಯಾಗೆ ತಣ್ಣಗೆ ಕೊಲೆ ಮಾಡುತ್ತಾನೆ ಎಂಬುದರ ವಿವರಣೆಗಳು ನಿಜಕ್ಕೂ ಕೋಲ್ಡ್ ಆಗಿವೆ. ನೀವು ಪಾಲೋ ಕೊಯೆಲ್ಹೋ ಒಬ್ಬ ಥ್ರಿಲ್ಲರ್ ಕಾದಂಬರಿಕಾರ ಎಂದುಕೊಂಡರೆ ಅಷ್ಟಕ್ಕೇ ಸೀಮಿತಗೊಳಿಸಿಕೊಂಡು ಈ ಕಾದಂಬರಿಯ ಕೆಲವೇ ಪುಟಗಳನ್ನು ಓದಬಹುದು. ನಿಮಗೆ ಪಾಲೋ ಕೊಯೆಲ್ಹೋನ ಈಗಿನ ವಿಚಾರಧಾರೆ ಏನು ಎಂಬುದನ್ನು ತಿಳಿಯಬೇಕು ಎಂಬ ಇರಾದೆ ಇದ್ದರೆ, ಘಟನೆಗಳ ನಡುವೆ ಅವರು ಕೊಡುವ ಪುಟಗಟ್ಟಳೆ ವಿವರಣೆಗಳನ್ನು ಓದಬಹುದು. `ನಿನಗಾಗಿ ಪ್ರಪಂಚವನ್ನು ನಾಶ ಮಾಡುತ್ತಿದ್ದೇನೆ’ ಎಂದು ಇಗೋರ್ ತನ್ನನ್ನು ಬಇಟ್ಟುಹೋದ ಹೆಂಡತಿ ಇವಾಗೆ ಎಸ್ ಎಂ ಎಸ್ ಕಳಿಸುತ್ತಾನೆ ಎನ್ನುವಲ್ಲಿಗೆ ಈ ಕಾದಂಬರಿಯ ಕಾಲಘಟ್ಟ ಅತ್ಯಂತ ಕಾಂಟೆಂಪೊರರಿ ಎಂದು ನೀವೆಲ್ಲ ಭಾವಿಸಬಹುದು. ಸಾಮಾನ್ಯವಾಗಿ ಪಾಲೋ ಕಾದಂಬರಿಗಳಲ್ಲಿ ನಮಗೆ ಕಾಲಘಟ್ಟದ ಅರಿವಾಗುವುದು ಕಷ್ಟ. ಇಲ್ಲಿ ಹಾಗೇನಿಲ್ಲ. ಕ್ಯಾನೆ ಉತ್ಸವ, ಮೊಬೈಲ್, ಎಲ್ಲವೂ ೨೧ನೇ ಶತಮಾನದ ಕಾಲವನ್ನು ಮುಚ್ಚುಮರೆಯಿಲ್ಲದೆ ಸ್ಥಾಪಿಸುತ್ತವೆ.
ಮುಗ್ಧ ಹೆಣ್ಣು ಮಕ್ಕಳನ್ನು ಇಗೋರ್ ತಣ್ಣಗೆ, ಹಠಾತ್ತನೆ ಕೊಲೆ ಮಾಡುವ ಸನ್ನಿವೇಶಗಳು ಮಾತ್ರ ನನ್ನನ್ನು ಹೆದರಿಸಿದವು. ವಿಚಾರಧಾರೆಯೊಂದನ್ನು ಪ್ರತಿಪಾದಿಸಲು ಪಾಲೋ ಯಾಕೆ ಹೀಗೆ ಕೊಲೆ ದೃಶ್ಯಗಳನ್ನು ತರುತ್ತಾರೆ ಎಂದು ನನಗೆ ಅರ್ಥವಾಗಲಿಲ್ಲ.
ಸರಿ ಎಂದು ಇಂಟರ್‌ನೆಟ್‌ನಲ್ಲಿ ಈ ಪುಸ್ತಕದ ಬಗ್ಗೆ ಬಂದ ವಿಮರ್ಶೆಗಳು ಏನು ಹೇಳುತ್ತವೆ ಎಂದು ಹುಡುಕಿದೆ. ಅದನ್ನೆಲ್ಲ ನೀವು ಮತ್ತೆ ಹುಡುಕುವ ಅಗತ್ಯವಿಲ್ಲ! ಸುಮಾರಾಗಿ ನಾನು ಹೇಳಿದಂತೆಯೇ ಪುಸ್ತಕದ ಬಗ್ಗೆ ಮಿಶ್ರ ಆಬಿಪ್ರಾಯಗಳಿವೆ. ಸಿಕ್ಕಾಪಟ್ಟೆ ಬೋರ್ ಹೊಡೆಸುತ್ತದೆ ಎಂದು ಹಲವರು ಹೇಳಿದ್ದಾರೆ. ಫೋಕಸ್ ಇಲ್ಲದ ಕಾದಂಬರಿ ಎಂದು ಗಂಭೀರವಾಗಿ ಟೀಕಿಸಿದ್ದಾರೆ. ಪಾಲೋ ಹೊಸ ಶೈಲಿಯಲ್ಲಿ ಕಾದಂಬರಿ ಬರೆದ ಬಗ್ಗೆ ಕೆಲವು ಅಚ್ಚರಿ ತೋರಿಸಿದ್ದಾರೆ. ಹತ್ತಾರು ಪಾತ್ರಗಳ ಮೂಲಕ ಪಾಲೋ ಏನು ಹೇಳಲು ಹೊರಟಿದ್ದಾರೆ ಎಂದು ಕೆಲವರು ಪ್ರಶ್ನಿಸಿದ್ದಾರೆ.
ಪಾಲೋ ವಾಸ್ತವವಾಗಿ ಕ್ಯಾನೆ ಉತ್ಸವದ ಬಣ್ಣನೆಯ ಮೂಲಕ ಈ ಸಮಕಾಲೀನ ಜಗತ್ತಿನ ವಿಷಾದದ, ಸ್ವಾರ್ಥದ, ಸ್ಯಂಕೇಂದ್ರಿತ ಬದುಕಿನ ಬಗ್ಗೆ ವಿವರಿಸಲು ಹೊರಟಿದ್ದಾರೆ ಎಂದು ನಾನು ಭಾವಿಸಿಕೊಂಡಿದ್ದೇನೆ. ಅದೇನೂ ತಪ್ಪಲ್ಲ. ಆದರೆ ಅವರ ಹಿಂದಿನ ಕಾದಂಬರಿಗಳಲ್ಲಿ ನೇರ ಕಥನ ಇರುತ್ತಿತ್ತು; ಒಂದೇ ಕಥೆಯನ್ನು ನೀಟಾಗಿ ಹೇಳುತ್ತಿದ್ದರು. ಇಲ್ಲಿ ಎಲ್ಲಾ ಪಾತ್ರಗಳೂ ಏನೋ ಒಂಥರ ದುಃಖವನ್ನೇ ಹೊತ್ತುಕೊಂಡಿವೆ. ತುಂಬಾ ಮಿಕ್ಸಪ್ ಆಗಿದೆ. ಇಗೋರ್ ಒಬ್ಬನೇ ಇಲ್ಲಿ ತಲೆ ಸರಿ ಇದ್ದುಕೊಂಡು ವರ್ತಿಸುವ ವ್ಯಕ್ತಿ ಅನ್ನಿಸಿದರೂ ಆಶ್ಚರ್ಯವಿಲ್ಲ! ಆದರೆ ಅವನು ಈ ಕಾದಂಬರಿಯ ಸರಣಿ ಕೊಲೆಗಾರ ಎಂಬ ಸತ್ಯವನ್ನು ನೀವು ಒಪ್ಪಿಕೊಳ್ಳಬೇಕು. ಶಿಸ್ತಿನಿಂದ, ಸಂಯಮದಿಂದ ಮತ್ತು ಸಮಯಕ್ಕೆ ಸರಿಯಾಗಿ ಕೊಲೆ ಮಾಡುವ ಅವನ ಚಾಕಚಕ್ಯತೆಯನ್ನು ಮೆಚ್ಚಲೇಬೇಕು.
ನನ್ನ ಅತ್ಯಂತ ವಿಷಾದದ ಕ್ಷಣದಲ್ಲಿ ಈ ಕಾದಂಬರಿಯನ್ನು ಓದಲು ಆರಂಭಿಸಿದ ಪ್ರಂದ ಬಂದಮೇಲೆ ಮುಗಿಸಿದೆ. ಬದುಕು ಬದಲಿಸುವ ಯಾವ ಮಹಾನ್ ಸಾಮರ್ಥ್ಯವೂ ಇದರಲ್ಲಿಲ್ಲ. ಆದರೆ ಪಾಲೋ ಕಾದಂಬರಿ ಸರಣಿಯನ್ನು ತಪ್ಪಿಸಿಕೊಳ್ಳಬಾರದೆಂಬ ನಿಯಮ ಇಟ್ಟುಕೊಂಡಿದ್ದರೆ ಖರೀದಿಸಿ. ಅದಿಲ್ಲವಾದರೆ ಎರವಲು ಓದೇ ಬೆಟರ್.
ಈಗ ಇನ್ನೊಂದು ವಿಚಿತ್ರ, ಸಾಮಾಜಿಕ ಥ್ರಿಲ್ಲರ್ ನಾನ್ ಫಿಕ್ಷನ್ ಓದುತ್ತಿದ್ದೇನೆ. ನೀವು ಈ ವೆಬ್‌ಸೈಟಿಗೆ ಮುಂದಿನ ವಾರ ಬಂದರೆ ಈ ಕುತೂಹಲಕಾರಿ ಪುಸ್ತಕದ ಬಗ್ಗೆ ವಿವರವಾದ ವಿಮರ್ಶೆ ಓದಬಹುದು. ಮೊದಲು ಏನೋ ಇತಿಹಾಸ ಅಂದು ಓದಿದೆ; ಆದರೆ ಈಗ ಪುಟ ಪುಟವೂ ರೋಚಕವಾಗಿದೆ. ವಾಸ್ತವ ಬದುಕನ್ನು, ಇತಿಹಾಸದೊಂದಿಗೆ ಮಿಕ್ಸ್ ಮಾಡಿ ಹೀಗೆ ಬರೆಯಬಹುದು ಎಂದು ನನಗೆ ಅನ್ನಿಸಿಯೇ ಇರಲಿಲ್ಲ. `ವಿನ್ನರ್’ ಕಾದಂಬರಿ ಥರ ಪುಟ ಹಾರಿಸುವುದಕ್ಕೆ ಇಲ್ಲಿ ಸಾಧ್ಯವಾಗುತ್ತಿಲ್ಲ.