ಮೇ ೧೫ ನನ್ನ ಪಾಲಿಗೆ ಅವಿಸ್ಮರಣೀಯ ದಿನ. ಅವತ್ತು ನಾನು ನನ್ನ ಎಸೆಸೆಲ್ಸಿ ಮ್ಯಾಥ್ಸ್ ಮೇಡಂ ಜಯಲಕ್ಷ್ಮಿಯವರನ್ನು ಅವರ ಮನೆಯಲ್ಲೇ ಭೇಟಿ ಮಾಡಿದೆ. ಬಾಗಿಲು ತೆರೆದವರೇ ಗುರುತಿದೆಯಾ ಮಾರಾಯಾ ಎಂದು ಅಚ್ಚರಿ ಮತ್ತು ಪ್ರೀತಿಯಿಂದ ವಿಚಾರಿಸಿಕೊಂಡರು. ಎಂದಿನಂತೆ ಪ್ರಾಕ್ಟಿಕಲ್ ಮಾತುಗಳು.
ಪೊನ್ನಂಪೇಟೆಯಿಂದ ಕುಂದಕ್ಕೆ ಹೋಗುವ ಹಾದಿಯಲ್ಲಿ ಮೇಡಂ ಮನೆ. ಪೊನ್ನಂಪೇಟೆ ಜ್ಯೂನಿಯರ್ ಕಾಲೇಜಿನಿಂದ ನಿವೃತ್ತಿಯಾಗಿ ಎರಡು ವರ್ಷಗಳಾಗುತ್ತ ಬಂತು. ಆದರೆ ಅವರ ದಿನಚರಿಯಲ್ಲಿ ಅಂಥ ಬದಲಾವಣೆಯಿಲ್ಲ. ಅವರೀಗ ಮನೆಯಲ್ಲಿ ತುಂಬಾ ಬ್ಯುಸಿ. ಹತ್ತಾರು ವರ್ಷಗಳಿಂದ ಜೊತೆಯಲ್ಲೇ ಇರುವ ಅಕ್ಕನ ಮಗನನ್ನು ಅಕ್ಕರೆಯಿಂದ ನೋಡಿಕೊಳ್ಳುವುದರಲ್ಲೇ ಅವರ ಅರ್ಧ ಸಮಯ ಕಳೆದುಹೋಗುತ್ತದೆ. ಅಪ್ಪ ನಿಧನರಾಗಿ ಎಂಟು ವರ್ಷಗಳಾದವು.
ನೀನು ಬಿ ಎಂ ಸುದರ್ಶನ ಅಲ್ವ? ನೋಡು ನಂಗೆ ನಿನ್ನ ಇನಿಶಿಯಲ್ ಕೂಡಾ ನೆನಪಿದೆ ಎಂದು ಮೇಡಂ ಚಾ ಕೊಡುತ್ತ ಹೇಳಿದರು. ೩೭ ವರ್ಷ ಸರ್ವಿಸ್ ಮಾಡಿದೆ. ಪ್ರತಿದಿನ ಇದೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಈಗ ಈ ರಸ್ತೆಗೆ ಜೊತೆಯಿಲ್ಲ ಅಂತ ಜನ ಮಾತಾಡ್ತಾರೆ…. ಮೇಡಂಗೂ ಈ ರಸ್ತೆಯ ಮೇಲಿನ ಪ್ರೀತಿ ಕಳೆದೇ ಇಲ್ಲ ಅನ್ನಿಸಿತು.
ಮೇಡಂ ಅಪ್ಪ ನಾರಾಯಣ್ ಕೂಡಾ ಅದೇ ಜ್ಯೂನಿಯರ್ ಕಾಲೇಜಿನಲ್ಲಿ ಮ್ಯಾಥ್ಸ್ ಮತ್ತು ಹಿಂದಿ ಟೀಚರ್ ಆಗಿದ್ದರು. ಅವರೂ ೩೭ ವರ್ಷ ಈ ಕಾಲೇಜಿಗೆ ಸರ್ವಿಸ್ ಕೊಟ್ಟಿದ್ದಾರೆ. ಅರ ಕೊನೆಯ ಎರಡು ವರ್ಷಗಳಲ್ಲಿ ನನ್ನ ಮೇಡಂ ಕೂಡಾ ಸರ್ವಿಸ್ ಸೇರಿದ್ದರು. ಅಂದರೆ ಈ ಕುಟುಂಬ ಒಂದೇ ಶಾಲೆಗೆ ೭೪ ವರ್ಷಗಳ ನಿರಂತರ ಸೇವೆ ನೀಡಿದೆ ! ಇದು ಯಾವ ಥರದ ದಾಖಲೆ ಎಂದು ನೀವೇ ಲೆಕ್ಕ ಹಾಕಿ. ಇಂಥ ದಾಖಲೆಯನ್ನು ನೀವ್ಯಾರಾದ್ರೂ ಮಾಡೋದಕ್ಕೆ ೭೫ ವರ್ಷ ಬೇಕು!
ಮನೆಯಿಂದ ಹೊರಟಾಗಲೂ ಮೇಡಂ ಮತ್ತೆ `ನನ್ನ ನೆನಪು ಈಗಲೂ ಇದೆಯಲ್ಲ ಮಾರಾಯ’ ಎಂದು ಪ್ರೀತಿ ತೋರಿಸಿದರು. `ಮೇಡಂ, ನಿಮ್ಮನ್ನು ನಾನು ಮರೆಯೋದು ಸಾಧ್ಯವೆ?’ ಎಂದು ಹೇಳಿ ಅವರ ಅದೇ ಕಣ್ಣು, ಅದೇ ಮಾತು, ಅದೇ ಪ್ರೀತಿ ಮತ್ತು ಅದೇ ಜೀವನೋತ್ಸಾಹವನ್ನು ಮೊಗೆದುಕೊಳ್ಳುತ್ತ ಕಾರು ಹತ್ತಿದೆ. ನಾನು ಕಳೆದ ದಿನಗಳನ್ನು ನೆನಪಿಸಿದ ಜ್ಯೂನಿಯರ್ ಕಾಲೇಜು ಅಲ್ಲೇ ದಿವ್ಯಸಾಕ್ಷಿಯಾಗಿತ್ತು.
ಆಮೇಲೆ ನಾನು ಎಸೆಸೆಲ್ಸಿ ಓದಿದ್ದ ಮನೆಯನ್ನೂ ವಾರೆನೋಟದಿಂದ ಕ್ಲಿಕ್ಕಿಸಿಕೊಂಡು ಪೊನ್ನಂಪೇಟೆಯಿಂದ ಮಡಿಕೇರಿಗೆ ಪ್ರಯಾಣ ಬೆಳೆಸಿದೆ.
೨೩ ವರ್ಷಗಳಿಂದ ನನ್ನೊಳಗಿದ್ದ ಮೇಡಂ ಬಿಂಬ ಸಾಕಾರವಾದ ಮತ್ತು ನನ್ನ ಮುಂದಿನ ದಿನಗಳಿಗೆ ಬೆಳಕಾದ ಸಮಾಧಾನವೊಂದೇ ನನಗಿದೆ. ಹೆಚ್ಚು ಮಾತಿಗಿಂತ ಮೌನವೇ ಇಲ್ಲಿ ನನಗೆ ಪ್ರಿಯವಾಗಿದೆ.