‘ಚೀನೀಯರೆಲ್ಲ ಯಾಕೆ ಚೀನೀಯರ ಥರಾನೇ ಕಾಣುತ್ತಾರೆ?’ ಎಂಬ ಪ್ರಶ್ನೆಯನ್ನು ಕೆದಕಿದವರಿಗೆ ಅನೇಕ ಕರಾಳ ಸತ್ಯಗಳು ತೆರೆದುಕೊಳ್ಳುತ್ತವೆ. ಇಡೀ ಅಷ್ಟುದೊಡ್ಡ ಚೀನಾ ರಾಷ್ಟ್ರದಲ್ಲಿ ಚೀನೀ ಮುಖದವರನ್ನು, ಮಂಡಾರಿನ್ ಭಾಷಿಕರನ್ನು ಬಿಟ್ಟರೆ ಬೇರೆ ಯಾರೂ ಉಳಿಯದ ಹಾಗೆ ಸಾವಿರ ವರ್ಷಗಳ ಹಿಂದೆಯೇ ಬಹುದೊಡ್ಡ ಜನಾಂಗೀಯ ನರಮೇಧ ನಡೆದುಹೋಗಿತ್ತು. ಅದು ಹಿಟ್ಲರನ ನರಮೇಧಕ್ಕಿಂತ ವಿಶಾಲ ವ್ಯಾಪ್ತಿಯದೇ ಇದ್ದಿತ್ತೇನೋ….
ಇಪ್ಪತ್ತನೇ ಶತಮಾನದಲ್ಲೇ ಏಳು ಕೋಟಿ ಚೀನೀಯರೇ ಮಾವೋನ ವಿವಿಧ ಸಂಚುಗಳಿಗೆ, ಬರಗಾಲಕ್ಕೆ, ಹಸಿವಿಗೆ ಬಲಿಯಾಗಿದ್ದಾರೆ. ಚೀನೀಯಳೇ ಆದ ಜಂಗ್ ಚಾಂಗ್ ಮತ್ತು ಅವಳ ಪತಿ ಜಾನ್ ಹ್ಯಾಲಿಡೇ ಹತ್ತು ವರ್ಷ ಸಂಶೋಧಿಸಿ ಬರೆದ ‘ಮಾವೋ , ದಿ ಅನ್‌ನೌನ್ ಸ್ಟೋರಿ’ ಯನ್ನಾಗಲೀ, ಅವಳ ತಾಯಿ ಮತ್ತು ಅಜ್ಜಿಯ ಚರಿತ್ರೆಯೇ ಚೀನಾದ ಚರಿತ್ರೆಯೇ ಆಗಿರುವ ‘ದಿ ವೈಲ್ಡ್ ಸ್ವಾನ್ಸ್’ ಪುಸ್ತಕವನ್ನಾಗಲೀ ಓದಿದರೆ ಈ ಕಟು ಇತಿಹಾಸ ಗೋಚರಾಗುತ್ತದೆ. ಒಂದು ಸಂದರ್ಭದಲ್ಲಿ ತನ್ನ ಮಗಳನ್ನೇ ಕೊಂದು ತಿಂದ ತಂದೆಯ ತಪ್ಪೊಪ್ಪಿಗೆ ಎಂಥವರನ್ನೂ ನಡುಗಿಸುತ್ತದೆ.
೧೪ ವರ್ಷಗಳಿಂದ ಚೀನಾ ದೇಶವು ೬೦ ಸಾವಿರ ಮೂತ್ರಪಿಂಡಗಳನ್ನು , ೬ ಸಾವಿರ ಪಿತ್ತಜನಕಾಂಗಳನ್ನು, ೨೫೦ ಹೃದಯಗಳನ್ನು ಅವು ಬೇಕಾಗಿದ್ದ ರೋಗಿಗಳಲ್ಲಿ ಸ್ಥಾಪಿಸಿದೆ. ಇಲ್ಲಿ ಅಮೆರಿಕಾ ಬಿಟ್ಟರೆ ಚೀನಾ ದೇಶದ್ದೇ ದಾಖಲೆ! ಚೀನಾ ದೇಶದಲ್ಲಿ ಒಂದು ಮೂತ್ರಪಿಂಡಕ್ಕೆ ೩೫೦೦ ಪೌಂಡ್ ಅಂದರೆ ಸುಮಾರು ಎರಡೂವರೆ ಲಕ್ಷ ರೂಪಾಯಿ ಖರ್ಚಾಗುತ್ತದೆ. ಪಿತ್ತ ಜನಕಾಂಗಕ್ಕೆ ೧೨ ಲಕ್ಷ ರೂ. ; ವಿದೇಶಿಯರಿಗೆ ೧೬ ಲಕ್ಷ ರೂಪಾಯಿ.
ಆದರೂ ವಿಶ್ವದ ಎಲ್ಲ ರೋಗಿಗಳು ಈಗ ಚೀನಾಕ್ಕೇ ಮುತ್ತಿಗೆ ಹಾಕಿದ್ದಾರೆ. ಆದರೆ ಈ ಮೂತ್ರಪಿಂಡ, ಪಿತ್ತಜನಕಾಂಗಗಳು, ಈ ಹೃದಯಗಳು ಎಲ್ಲಿಂದ ಬರುತ್ತವೆ?
ಚೀನಾದಲ್ಲಿ ಇವುಗಳನ್ನು ಕಿತ್ತುಕೊಳ್ಳುವುದು ಸುಲಭ. ಯಾಕೆಂದರೆ ಮೆದುಳನ್ನೇ ಖರ್ಚು ಮಾಡದೆ ಯಂತ್ರಗಳ ಹಾಗೆ ದಿನದ ೧೮ ತಾಸು ದುಡಿಯುವ ಕಾರ್ಮಿಕರನ್ನು ನಾವು ಚೀನಾದಲ್ಲಿ ಮಾತ್ರ ಕಾಣಬಹುದು. ವರ್ಷಕ್ಕೆ ೬೦೦೦ ಜನರನ್ನು ನೇಣಿಗೆ ಹಾಕುವ `ನ್ಯಾಯ’ವನ್ನು ಚೀನಾದಲ್ಲಿ ಮಾತ್ರ ಕಾಣಬಹುದು. ಅವರು ಸಾಯುವಾಗ, ಸತ್ತ ಮೇಲೆ ಅವರ ಅಂಗಾಂಗಗಳೂ ಬಿಕರಿಯಾಗುತ್ತವೆ. ವಿಶ್ವದ ಆರೋಗ್ಯ ಸುಧಾರಿಸುತ್ತದೆ…
ಈ ಕಾರ್ಮಿಕರಿಗೆ ಮನೆ ಇಲ್ಲ. ಈ ಕಾರ್ಮಿಕರಿಗೆ ತಮ್ಮದೇ ಆದ ಸಂಸಾರವಿಲ್ಲ. ಕೆಲಸದಿಂದ ಹೊರತಾದ ಯಾವ ಕ್ಷಣವೂ ಇವರಿಗೆ ಇಲ್ಲ. ಇವರೆಲ್ಲರೂ `ಲಾಗೋಯ್’ ಎಂದು ಕರೆಯಲಾಗುವ ಯಾತನಾಶಿಬಿರಗಳಲ್ಲಿ ಭಾರತದ, ಅಮೆರಿಕಾದ ಮತ್ತು ಎಲ್ಲ ವಿದೇಶಗಳ ಗ್ರಾಹಕರಿಗಾಗಿ ಎಲೆಕ್ಟ್ರಾನಿಕ್ ಸಾಧನಗಳನ್ನು ತಯಾರಿಸುತ್ತಾರೆ, ಜೋಡಿಸುತ್ತಾರೆ.
ಆದರೆ ಅವರು ಎಲ್ಲಿ ಉಳಿಯುತ್ತಾರೆ ಅನ್ನೋದನ್ನ ಈ ಚಿತ್ರ ನೋಡಿಯೇ ತಿಳಿಯಬಹುದು. ಅವರ ಮಾಸಿಕ ವೇತನವನ್ನು ಯಾರು ಲೆಕ್ಕ ಹಾಕುತ್ತಾರೆ, ಹೇಗೆ ಲೆಕ್ಕ ಹಕುತ್ತಾರೆ ಎಂದು ಅವರಾರಿಗೂ ತಿಳಿದಿಲ್ಲ. ೧೮ ತಾಸು ದುಡಿದ ಮೇಲೆ ಎಲ್ಲರೂ ಸಾಲಾಗಿ ಕೂತು ಕೊಟ್ಟಿದ್ದನ್ನು ಉಣ್ಣುತ್ತಾರೆ/ ಮುಕ್ಕುತ್ತಾರೆ. ಸಾಲು ಹಾಸಿಗೆಗಳ ಇಕ್ಕಟ್ಟಾದ ಕೋಣೆಗಳಲ್ಲಿ ಒರಗುತ್ತಾರೆ ; ದಿನಗಳ ಲೆಕ್ಕವಿಲ್ಲದೆ, ವರ್ಷಗಳ ಖುಷಿಯಿಲ್ಲದೆ. ಈ ಬಲಹೀನ ಮನುಷ್ಯರನ್ನು ಕಟ್ಟೆಚ್ಚರದಿಂದ ಕಾಯಲಾಗುತ್ತದೆ. ಲಾಗೋಯ್‌ಗಳ ಸುತ್ತಮುತ್ತ ತಂತಿಬೇಲಿ ಇದೆ. ಅವುಗಳಿಗೆ ವಿದ್ಯುತ್ ಹಾಯಿಸಲಾಗಿದೆ. ಜೀವಂತ ಹೆಣಗಳಿಗೆ ಭಾರೀ ಭದ್ರತೆ!
ಚೀನಾದ ಎಲ್ಲಾ ರಾಜ್ಯಗಳಲ್ಲೂ ಲಾಗೋಯ್‌ಗಳಿವೆ. ಇವುಗಳ ಒಟ್ಟು ಸಂಖ್ಯೆ ೧೦೪೫ ಇರಬಹುದು ಎಂದು ಲಾಗೋಯ್ ಸಂಶೋಧನಾ ಪ್ರತಿಷ್ಠಾನ ಲೆಕ್ಕ ಹಾಕಿದೆ. ಈ ಲಾಗೋಯ್‌ಗಳಲ್ಲಿ ಒಟ್ಟು ೬೮ ಲಕ್ಷ ಖೈದಿಗಳು ಉಸಿರಾಡುತ್ತಿದ್ದಾರೆ. ಯಾವುದೋ ಅಪರಾಧಕ್ಕೆ ಶಿಕ್ಷೆ ಅನುಭವಿಸಲು, ನೇಣಿಗೆ ಕೊರಳು ಕೊಡಲು ಕಾಯುತ್ತಿರುವವರಿಂದ ಹಿಡಿದು ರಾಜಕೀಯ `ಅಪರಾಧ’ ಮಾಡಿದವರು ಇಲ್ಲಿದ್ದಾರೆ. ಕಳೆದ ಆರು ದಶಕಗಳಿಂದ ಚೀನಾದಲ್ಲಿ ನಡೆದದ್ದು ಈ ಬಗೆಯ ಬಲವಂತದ ಕಾರ್ಮಿಕ ಕ್ರಾಂತಿಗಳೇ ಹೊರತು ಮತ್ತೇನಲ್ಲ.
ಇವರು ಮಾಡಿದ ಎಲೆಕ್ಟ್ರಾನಿಕ್ ಸಾಧನಗಳನ್ನು ನಾವು `ಅಗ್ಗದ’ ಬೆಲೆಗೆ ಕೊಳ್ಳುತ್ತೇವೆ. ಅವುಗಳಿಂದ ಸುಮಧುರ ಹಾಡು ಕೇಳುತ್ತೇವೆ. ಸಿನೆಮಾ ನೋಡುತ್ತೇವೆ. ಬಟ್ಟೆ ಒಗೆಯುತ್ತೇವೆ. ಹಬ್ಬದ, ಸ್ನೇಹದ ಎಸ್ ಎಂ ಎಸ್ ಕಳಿಸುತ್ತೇವೆ. ಅವರ ಬೈಕ್‌ಗಳಲ್ಲಿ ಊರೂರು ತಿರುಗುತ್ತೇವೆ; ಜಲಪಾತದ ಸೌಂದರ್ಯ ಹೀರುತ್ತೇವೆ.
ಮಾತೆತ್ತಿದರೆ ಚೀನಾದ ಆರ್ಥಿಕ ಕ್ರಾಂತಿಯನ್ನು ಎರ್ರಾಬಿರ್ರಿಯಾಗಿ ಹೊಗಳುವ ರಾಜಕಾರಣಿಗಳು, ಬುದ್ಧಿಜೀವಿಗಳು ಲಾಗೋಯ್‌ಗಳಿಗೆ ಭೇಟಿ ನೀಡಿದ ಉದಾಹರಣೆಯನ್ನು ನಾವು ಕಾಣಲಾರೆವು. ಯಾಕೆಂದರೆ ಲಾಗೊಯ್‌ಗಳೇ ಇಲ್ಲ ಎಂಬಂತೆ ಚೀನಾ ವರ್ತಿಸುತ್ತದೆ. ಲಾಗೋಯ್ ಸಂಶೋಧನಾ ಪ್ರತಿಷ್ಠಾನವು ಈಗಾಗಲೇ ಚೀನಾದಲ್ಲಿ ಇರುವ ಲಾಗೋಯ್‌ಗಳ ಪಟ್ಟಿ ತಯಾರಿಸಿದೆ. ಅವುಗಳಲ್ಲಿ ತಯಾರಾಗುತ್ತಿರೋ ವಸ್ತುಗಳು ಯಾವುವು ಎಂದು ಪತ್ತೆ ಹಚ್ಚುತ್ತಿದೆ.
ಭಾರತದಲ್ಲಿ ಇಂಥ ಒಂದೇ ಒಂದು ಲಾಗೋಯ್‌ನ್ನು ನಾವು ಕಂಡಿದ್ದೇವೆಯೆ? ಹಿಟ್ಲರ್‌ನನ್ನೂ ಮೀರಿಸಿದ ಯಾತನಾಶಿಬಿರಗಳಿವು. ಚೀನಾ ಎಂಬ ಡ್ರಾಗನ್‌ನ ಬಣ್ಣಗಳು ನಿಮ್ಮನ್ನು ಆಕರ್ಷಿಸಬಹುದು. ಆದರೆ ಅದರ ಹೊಟ್ಟೆಯೊಳಗೆ ೬೮ ಲಕ್ಷ ಜನ ಉಸಿರುಗಟ್ಟಿ ಕೂತಿದ್ದಾರೆ.
ಆಂತರಿಕ ವಲಸೆಯಲ್ಲಿ ವಿಶ್ವದಾಖಲೆ
‘ಚೀನಾ ಬ್ಲೂ’ ಎಂಬ ಸಾಕ್ಷ್ಯ ಚಿತ್ರವಿದೆ. ಅಂತಾರಾಷ್ಟ್ರೀಯ ಕಾರ್ಮಿಕ ಕಾಯ್ದೆಗಳನ್ನು ಉಲ್ಲಂಘಿಸಿ ಈ ದೇಶದಲ್ಲಿ ಜೀನ್ಸ್ ಉದ್ದಿಮೆ ಹೇಗೆ ಬೆಳೆದಿದೆ ಎಂಬುದನ್ನು ಖಾಸಗಿ ಟಿವಿ ಕಾರ್ಯಕ್ರಮ ತಯಾರಿಕಾ ಸಂಸ್ಥೆಯೊಂದು ಈ ಚಿತ್ರವನ್ನು ನಿರ್ಮಿಸಿದೆ. ಬೆಳಗ್ಗೆ ಎಂಟರಿಂದ ರಾತ್ರಿ ಏಳರವರೆಗೆ ನಿಯಮಿತ ಕೆಲಸ. ಆಮೇಲೆ ಬೆಳಗ್ಗೆ ಮೂರರ ಝಾವದವರೆಗೆ ಓವರ್‌ಟೈಮ್ ಕೆಲಸ ಮಾಡಲೇಬೇಕಾದ್ದು ಅನಿವಾರ್ಯ. ಇಂಥ ಅಗ್ಗದ ಸಂಬಳದ ಕೆಲಸಕ್ಕಾಗಿ ಚೀನಾದ ೧.೩ ಕೋಟಿ ಹದಿಹರೆಯದ ಯುವಕರು – ಯುವತಿಯರು ನಗರಗಳಿಗೆ ವಲಸೆ ಬಂದಿದ್ದಾರೆ. ಇಂಥ ವಲಸೆ ಇಡೀ ಜಗತ್ತಿನಲ್ಲೇ ಅತಿ ದೊಡ್ಡದು ಎಂದು ಈ ಸಿನೆಮಾ ಹೇಳುತ್ತದೆ.
ಒಂದು ಯಶಸ್ವೀ ಕ್ರಾಂತಿಯ ಚಿತ್ರಣ ನೀಡಲು ಚೀನಾ ಇಷ್ಟೆಲ್ಲ ನರಮೇಧಕ್ಕೆ ಮುಂದಾಗಿರುವುದು ಮನುಕುಲದ ಘೋರ ಬೆಳವಣಿಗೆ. ಚೀನಾಗೆ ಭೇಟಿ ನೀಡುವ ನಮ್ಮ ರೈತರಿಗೆ, ರಾಜಕಾರಣಿಗಳಿಗೆ ಪೂರ್ವಸಿದ್ಧ ಪ್ರವಾಸ, ಪೂರ್ವನಿಗದಿತ ಭೇಟಿ ಇರುವುದರಿಂದ ಚೀನಾದ ಈ ಪಾತಕ ಕೃತ್ಯಗಳು ಗೊತ್ತಾಗುವುದೇ ಇಲ್ಲ. ವಿಷಾದದ ಎಳೆಗಳಿಗೆ ಸುಣ್ಣ – ಬಣ್ಣ ಹಚ್ಚಿ ಮಾರುವ ಚೀನಾ ಸರ್ಕಾರದ ಅಧಿಕೃತ ಕೃತಕ ಹೇಳಿಕೆಗಳನ್ನೇ ದೇಶದ ಪ್ರಮುಖ ಆಂಗ್ಲ ಪತ್ರಿಕೆಗಳು ಸ್ವತಂತ್ರ ಲೇಖನವೆಂಬಂತೆ ಪ್ರಕಟಿಸುತ್ತವೆ!
ಈಗ ಹೇಳಿ, ಚೀನಾ ನಮ್ಮ ಆದರ್ಶವಾಗಬೇಕೆ?
—–
ಉದಯವಾಣಿಯಲ್ಲಿ ೧೭.೯.೨೦೦೯ರಂದು ಪ್ರಕಟವಾದ ಲೇಖನ