ನನ್ನ ಮಗ, ಸುಧಾಂಶು ಮಿತ್ರನಿಗೆ ಈಗ ೨೩ರ ಹರೆಯ. ಅವನು ಎರಡು ವರ್ಷಗಳ ಹಿಂದಷ್ಟೆ ಇಂಜಿನಿಯರಿಂಗ್ ಪದವಿ ಶಿಕ್ಷಣ ಮುಗಿಸಿದ. ಝಿಂಗಾ ಎಂಬ ಹೊಸ ಕಾಲದ ಕಂಪನಿ ಸೇರಿದ. ಅಲ್ಲಿ ಎರಡು ವರ್ಷಗಳನ್ನು ಕಳೆದ ಮೇಲೆ ಯಾವುದೇ ಆತಂಕವಿಲ್ಲದೆ ಮತ್ತು ಹೆಚ್ಚಿನ ಸಂಬಳದ ಆಕರ್ಷಣೆಯೂ ಇಲ್ಲದೆ ರಾಜೀನಾಮೆ ಕೊಟ್ಟ. ಈಗ ಹರ್‍ಯಾನಾದ ಸೋನಿಪತ್‌ನಲ್ಲಿರುವ ಅಶೋಕ ಯೂನಿವರ್ಸಿಟಿಯಲ್ಲಿ ಒಂದು ವರ್ಷದ `ಲಿಬರಲ್ ಸ್ಟಡೀಸ್’ ಸ್ನಾತಕೋತ್ತರ ಕೋರ್ಸಿಗೆ ಸೇರಿದ್ದಾನೆ. ಜುಲೈ ೧೫ರಿಂದ ಅವನ ಕಲಿಕೆ ಆರಂಭ. ಈ ಕೋರ್ಸಿಗೆ ಯಂಗ್ ಇಂಡಿಯಾ ಫೆಲೋಶಿಪ್ ಎಂದೂ ಕರೆಯುತ್ತಾರೆ.
ಅವನ ಬಗ್ಗೆ ಯೂನಿವರ್ಸಿಟಿಯ ವೆಬ್‌ಸೈಟಿನಲ್ಲಿ ಪ್ರಕಟವಾಗಿರುವ ವ್ಯಕ್ತಿಚಿತ್ರ ಹೀಗಿದೆ:
ಒಂದೆರಡು ವರ್ಷಗಳ ಹಿಂದೆ ಹೀಗೆಯೇ ಹೋಟೆಲೊಂದರಲ್ಲಿ ಕೂತುಗೊಂಡಾಗ, `ಈ ಬದುಕಿಗೆ ಗುರಿ ಇದೆಯೆ? ಇರಬೇಕೆ?’ ಎಂದು ಪ್ರಶ್ನಿಸಿ ನನ್ನನ್ನು ತಬ್ಬಿಬ್ಬುಗೊಳಿಸಿದ್ದ. `ಗುರಿ ಇರುತ್ತೋ ಇಲ್ಲವೋ, ನಾವಂತೂ ಆದಷ್ಟೂ ಕಲಿಯುವ ಮನಸ್ಸು ಹೊಂದಿ ಬದುಕಬೇಕು. ಆಗ ಬೇಸರ ಬರುವುದಿಲ್ಲ’ ಎಂದಿದ್ದೆ.
ಹೆಚ್ಚು ಮಾತನಾಡದ, ಸದಾ ಒಂದು ಬಗೆಯ ಟ್ರಾನ್ಸ್‌ನಲ್ಲಿ ಇರುವಂತೆ ಕಾಣುವ ಸುಧಾಂಶು ಮಿತ್ರನಿಗೆ `ಮಿತ್ರ’ ಎಂದು ಹೆಸರಿಟ್ಟಿದ್ದೇ ಕೊನೇ ಪಕ್ಷ ಇವನಾದರೂ ನನಗೆ ಮಿತ್ರನಾಗಿ ಉಳಿದಾನು ಎಂಬ ನಿರೀಕ್ಷೆಯಲ್ಲಿ! ಅವನ ಪಿಯುಸಿ ದಿನಗಳ ನಂತರ ಅವನನ್ನು ಮಿತ್ರನಾಗಿಯೇ ಕಾಣಲು ಪ್ರಯತ್ನಿಸಿದ್ದೇನೆ; ಅವನ ಮೊದಲ ರಾಕ್‌ಪಾರ್ಟಿ ಭೇಟಿಗೆ ಅನುಮತಿ ನೀಡಿದ್ದು, ಅವನ ಮೊದಲ ಬೈಕ್ ಸವಾರಿ, ಅವನ ಮೊದಲ ಟ್ರೆಕಿಂಗ್, – ಎಲ್ಲವೂ ನನಗೆ ನೆನಪಿವೆ. ಆದರೆ ದಿನ ಕಳೆದಂತೆ ಅವನ ಪ್ರಪಂಚ ಹಿಗ್ಗುತ್ತ ಹೋಯಿತು. ಅವನು ಏನೆಲ್ಲ ಚಟುವಟಿಕೆಗಳನ್ನು ಮಾಡಿದ ಎಂಬುದನ್ನು ನಾನು ಸಂಪೂರ್ಣ ಗಮನಿಸಲಿಲ್ಲ; ಆ ಬಗೆಯ ನಿಗಾ ಅನಗತ್ಯ ಎಂದೇ ತಿಳಿದೆ. ಇವತ್ತು ಅವನ ವ್ಯಕ್ತಿಚಿತ್ರಣ ನೋಡಿದ ಮೇಲೆ ಖುಷಿಯಾಗುತ್ತಿದೆ. `ನನಗಿಂತ ಒಳ್ಳೆ ಪ್ರೊಫೈಲ್ ಇರೋ ತುಂಬಾ ಜನ ನನ್ನ ಬ್ಯಾಚಿನಲ್ಲಿದ್ದಾರೆ. ನಾನೇನೂ ಅಲ್ಲ’ ಎಂದು ಮಿತ್ರ ಹೇಳಿದ್ದಾನೆ. ಹೀಗೆ ವಿಭಿನ್ನ ಕಲಿಕೆಗೆ ಪಕ್ಕಾಗಬೇಕೆಂಬ ತವಕ ಇರುವ ಎಲ್ಲರಿಗೂ ನನ್ನ ಅಭಿನಂದನೆಗಳು.
ಮೌನವನ್ನೂ `ಮಾತೃಭಾಷೆ’ಯಾಗಿ ಕಲಿತ ಸುಧಾಂಶು ಮಿತ್ರನ ಈ ಕಲಿವ ತವಕವನ್ನು ಕಂಡು ನನಗೆ ತುಂಬಾ ಖುಷಿಯಾಗಿದೆ. ನಿಜ, ಕೆಲಸ ಬಿಟ್ಟಿದ್ದರಿಂದ ಲಕ್ಷಗಟ್ಟಳೆ ರೂಪಾಯಿ ಆದಾಯ ನಿಂತಿದೆ. ನನ್ನ ಆರ್ಥಿಕ ಲೆಕ್ಕಾಚಾರವನ್ನೂ ನಾನು ಹೊಂದಿಸಬೇಕಿದೆ. ಕಲಿವ ತವಕದ ಮುಂದೆ ಅವೆಲ್ಲ ನಗಣ್ಯ. ಬದುಕಿನಲ್ಲಿ ನಮಗೆ ಇರಬೇಕಾದ್ದು ಬದುಕುವ ಉತ್ಸಾಹವೇ ಹೊರತು, ದುಡ್ಡು ಹೊಂಚುವ ಇರಾದೆಯಲ್ಲ. ಬದುಕಿಗೆ ಬೇಕಾದ ಆರ್ಥಿಕ ವ್ಯವಸ್ಥೆಯನ್ನು ಮಾಡಿಕೊಳ್ಳಲೇಬೇಕು; ಆದರೆ ಅದೇ ವ್ಯವಸ್ಥೆಯ ನೆಪದಲ್ಲೇ ನಾವು ವರಮಾನದ ಸರಪಳಿಗೆ ಜೋತು ಬೀಳಬಾರದು. ಇದು ನನ್ನ ಆರ್ಥಿಕ ನೀತಿ. ದುಡಿದು ಸಂಪಾದಿಸಬೇಕು. ಬದುಕಿನ ಆನಂದಗಳನ್ನು ಅನುಭವಿಸಬೇಕು. ಆದರೆ ಸಂಪಾದಿಸಲೆಂದೇ ಬದುಕುವುದು ಬೇಡ; ಅನಗತ್ಯದ ಐಷಾರಾಮಿ ಜೀವನ ಬೇಡವೇ ಬೇಡ.
ಒಂದೇ ವರ್ಷದ ಕಲಿಕೆಯಿಂದ ಸುಧಾಂಶು ಮಿತ್ರನಲ್ಲಿ `ಭಯಂಕರ’ ಬದಲಾವಣೆ ಆಗುತ್ತದೆ ಎಂಬ ಭ್ರಮೆ ನನಗೂ ಇಲ್ಲ, ಅವನಿಗೂ ಇಲ್ಲ. ಆದರೆ ಇಂಜಿನಿಯರಿಂಗ್ ಓದಿದ ಮಾತ್ರಕ್ಕೇ ದುಡಿಯುವ ಯಂತ್ರವಾಗಿಬಿಡಬೇಕು ಎಂಬ ಸೂತ್ರವನ್ನು ಕಡಿದು ಈ ಕಲಿಕೆಗೆ ಹೋಗುತ್ತಿರುವುದೇ ಮಹತ್ವದ ಬೆಳವಣಿಗೆ ಎಂದು ನಾನು ನಂಬಿದ್ದೇನೆ.
ಈ ಕಾಲದ ಒಳ್ಳೆಯ ಇಂಗ್ಲಿಶ್ ಭಾಷೆಯಲ್ಲಿ ಕವನವನ್ನೂ ಬರೆಯುವ, ಮನಸ್ಸು ಬಂದಾಗ ಗಿಟಾರಿನಲ್ಲಿ ಯಾವುದೋ ಹಾಡನ್ನು ಗುನುಗುನಿಸುವ, ನಾರುಟೋ ಸೀರಿಯಲ್ ನೋಡಿದ ಮೇಲೆ ನಾರುಟೋ ಗೇಂಸ್‌ನ್ನೂ ಅಷ್ಟೇ ಆಸಕ್ತಿಯಿಂದ ಆಡುವ, ಒಳ್ಳೆಯ ಸಿನೆಮಾ ಬಂದರೆ ನೋಡು ಎಂದು ಶಿಫಾರಸು ಮಾಡುವ, ಹರೂಕಿ ಮುರಾಕಾಮಿಯಿಂದ ಆರಂಭಿಸಿ ಹೊಸ ಕಾಲದ ಹಲವರ ಪುಸ್ತಕಗಳನ್ನೂ, ಕ್ಲಾಸಿಕಲ್ ಕಾದಂಬರಿಗಳನ್ನೂ ಎಡಬಿಡದೆ ಓದುವ, ಮೋದಿ ಭಾಷಣಕ್ಕೂ, ಕೇಜ್ರಿವಾಲ್ ಭಾಷಣಕ್ಕೂ ತಾರತಮ್ಯ ಮಾಡದೆ ಹೋಗುವ ಸುಧಾಂಶು ಮಿತ್ರನ ಹೊಸ ಕಲಿಕೆಯು ಅವನಿಗೂ, ಈ ಸಮಾಜಕ್ಕೂ ಒಳ್ಳೇದು ಮಾಡಲಿ ಎಂದು ಆಶಿಸುತ್ತೇನೆ.
ಈ ಬೆಳವಣಿಗೆಯು ನನ್ನಲ್ಲೇನಂಥ ಬದಲಾವಣೆ ತರಲಿದೆ ಎಂಬ ಬಗ್ಗೆ ನಿಮಗೆ ಇರುವಷ್ಟೇ ಕುತೂಹಲ ನನಗಿದೆ!