ನನ್ನ ಕಥೆಯ ಕಥೆ
ನಾನು ಕಥೆಗಾರನಾಗಿದ್ದು ೧೯೮೨ರಲ್ಲಿ. ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಸೆಕೆಂಡ್ ಪಿಯುಸಿ ಓದುತ್ತಿದ್ದಾಗ ಕಾಲೇಜು ಕಥಾಸ್ಪರ್ಧೆಯಲ್ಲಿ ಡಿಗ್ರಿ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ ಪ್ರಥಮ ಬಹುಮಾನ ಪಡೆದ ಕಥೆ: ಪಲಾಯನ. ಎಲ್ಲ ನೆನಪುಗಳನ್ನೂ ಗಳಹಿದಂತೆ ಇದ್ದ ಈ ಕಥೆಯು `ಕನ್ನಡಪ್ರಭ`ದಲ್ಲಿ ೧೯೮೪ರ ಫೆಬ್ರುವರಿಯಲ್ಲಿ ಪ್ರಕಟವಾಯಿತು. ೨೦ ರೂ. ಸಂಭಾವನೆಯೂ ಮನಿಯಾರ್ಡರ್ ಮೂಲಕ ಬಂತು.
ಅನಂತರ ೩೧ ವರ್ಷಗಳಲ್ಲಿ ಬರೆದ ೧೯ ಕಥೆಗಳು ಇಲ್ಲಿವೆ. ಕಲಿಯಲು ಹೊರಟ ಇತರೆ ಎಲ್ಲ ಕಲೆಗಳಂತೆಯೇ ನಾನು ಕಥೆ ಬರೆಯುವುದರಲ್ಲಿಯೂ ವೃತ್ತಿಪರನಾಗಲಿಲ್ಲ ಎಂಬುದು ಇದರಿಂದ ಖಚಿತವಾಗುತ್ತದೆ. ಆದರೆ `ಕ್ಯಾಪ್ಸಿಕಂ ಮಸಾಲಾ’ ಕಥೆಯು ವಿಜಯ ಕರ್ನಾಟಕ ಕಥಾಸ್ಪರ್ಧೆಯಲ್ಲಿ ಮೂರನೇ ಬಹುಮಾನ ಪಡೆದಾಗ, ಗೋಪಾಲಕೃಷ್ಣ ಪೈಯವರಂಥ ಹಿರಿಯ ಜೊತೆಗೆ ನನ್ನ ಹೆಸರು ಸೇರಿದ್ದಕ್ಕೆ ಖುಷಿಯಾಗಿದ್ದೂ ನಿಜ. ನಮ್ಮ ಕಾಲದ ಶ್ರೇಷ್ಠ ಕಥೆಗಾರ ಶ್ರೀ ಯಶವಂತ ಚಿತ್ತಾಲರಿಂದ ಬಹುಮಾನ ಸ್ವೀಕರಿಸಿದ್ದು ಇನ್ನೊಂದು ಮಧುರ ನೆನಪು.
ಅದು ಬರೀ ನೆನಪು; ಏಕೆಂದರೆ ಅದರ ಛಾಯಾಚಿತ್ರವನ್ನು ಪಡೆಯಲು ನನಗೆ ಸಾಧ್ಯವಾಗಲೇ ಇಲ್ಲ!
ಕಥಾಸಂಕಲನವನ್ನು ಪ್ರಕಟಿಸುವುದಿರಲಿ, ಈಗ ಪುಸ್ತಕಗಳನ್ನು ಕಾಗದದ ಮೇಲೆ ಮುದ್ರಿಸುವ ಮತ್ತು ಮಾರುವ ವ್ಯವಹಾರದ ಬಗ್ಗೆಯೇ ನನಗೆ ಅನುಮಾನಗಳು ಹುಟ್ಟಿಕೊಂಡಿವೆ. ಸಂಗೀತ, ವಿಜ್ಞಾನ – ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಲವು ಪುಸ್ತಕಗಳನ್ನು, ಲೇಖನಗಳನ್ನು ಆನ್‌ಲೈನ್‌ನಲ್ಲೇ ಓದುತ್ತಿರುವ ನಾನು ಮುದ್ರಿತ ಕಥಾಸಂಕಲನಕ್ಕಾಗಿ ಹಾತೊರೆಯುವುದು, ಅದಕ್ಕಾಗಿ ಪ್ರಕಾಶಕರಿಗೆ ದುಂಬಾಲು ಬೀಳುವುದು ಸರಿ ಕಾಣಲಿಲ್ಲ. ಹಾಗಂತ ನಾನು ಮುದ್ರಿತ ಸಾಹಿತ್ಯದ ಕಡುವಿರೋಧಿಯೂ ಅಲ್ಲ. ಪ್ರಕಟಣಾ ತಂತ್ರಜ್ಞಾನವು ಬದಲಾವಣೆಯ ಹೊಸ್ತಿಲಿನಲ್ಲಿರುವಾಗ ಆನ್‌ಲೈನ್-ಮುದ್ರಣ ಎರಡನ್ನೂ ಒಪ್ಪಿಕೊಳ್ಳಬೇಕಾಗಿದೆ ಬಿಡಿ. ಆರೇಳು ವರ್ಷಗಳ ಹಿಂದೆಯೇ ನನ್ನ ಕಥೆಗಳನ್ನು ಪ್ರಕಟಿಸಲು ಒಬ್ಬರು ಪ್ರಕಾಶಕರು ಮುಂದೆ ಬಂದಿದ್ದರು; ಏಕೋ ನಾನೇ ಕೊಡಲಿಲ್ಲ.
ನನ್ನ ಕಥೆಗಳು ಕಲ್ಪನೆ ಮತ್ತು ವಾಸ್ತವಗಳ ಮಿಶ್ರಣ ಎಂದು ಹೇಳುವುದಕ್ಕೆ ಹಿಂಜರಿಕೆಯಿಲ್ಲ. ಕವಿಯಾಗಿ ಆರಂಭಿಸಿ, ಕಥೆಗಾರನಾಗಿ, ಈಗ ಬಿಡಿ ಬ್ಲಾಗರ್ ಆದ ಹೊತ್ತಿನವರೆಗೆ ಹಿಂದಿರುಗಿ ನೋಡಿದಾಗ, ಇವೆಲ್ಲ ಕ್ಷುದ್ರ ಚಟುವಟಿಕೆಗಳಿಗೆ ಇಷ್ಟೆಲ್ಲ ಸಮಯ ಖರ್ಚಾಯಿತಲ್ಲ ಎನ್ನಿಸುತ್ತದೆ. ಸಂಗೀತದಲ್ಲಿ ಶ್ರುತಿ ಕಲಿತ ಮೇಲೆ ಸ್ವರ, ಶ್ವಾಸ, ಅದಾದ ಮೇಲೆ ರಾಗ, ಭಾವ, ನಾದ, ಲಯ – ಲಾಸ್ಯ, ನಾದೋನ್ಮತ್ತತೆಯ ಉತ್ತುಂಗ – ಇವನ್ನೆಲ್ಲ ಕಲಿಯುವ ಪ್ರತಿಯೊಂದು ಹಂತವೂ ಎಷ್ಟೆಲ್ಲ ಆಳ ಮತ್ತು ಅಗಲ ಎಂದು ಗೊತ್ತಾದ ದಿನದಿಂದ ಈ ಕ್ಷುದ್ರಭಾವ ಆವರಿಸಿದೆ. `ಸಾಹಿತ್ಯಕ್ಕೆ ಪ್ರಮಾಣವಿಲ್ಲ, ಸಂಗೀತಕ್ಕೆ ಇದೆ’ ಎಂದು ಪಂಡಿತ ಶ್ರೀ ರಾಜೀವ ತಾರಾನಾಥರು ಹಿಂದೊಮ್ಮೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹೇಳಿದ್ದು ಯಾವಾಗಲೂ ನೆನಪಾಗುತ್ತಿದೆ.
ಇಷ್ಟಾಗಿಯೂ ಬರವಣಿಗೆಯೇ ನನಗೆ ಬದುಕು ಕಟ್ಟಿಕೊಟ್ಟಿದೆ. ಆದ್ದರಿಂದ ಸಂಗೀತದ ಹಾದಿಯಲ್ಲಿ ಪುಟ್ಟ ಹೆಜ್ಜೆ ಇಡುತ್ತಲೇ ಸಾಹಿತ್ಯದ ಸಂಕಲನಗಳನ್ನೆಲ್ಲ ಪುಸ್ತಕಗಳನ್ನಾಗಿ ಮಾಡುವ ಯೋಚನೆ ಬಂದು… ಒಂದೊಂದಾಗಿ ನಿಮ್ಮ ಮುಂದಿವೆ.
ಈ ಕಥೆಗಳನ್ನು ನಿಮಗೆ ಜೋಡಿಸಿಕೊಡಲು ಕಾರಣ: ಜೋಡಿಸಿ ಕೊಡಬಹುದು ಎಂಬುದು ಮಾತ್ರ; ಹೊರತು ಈ ಕಥೆಗಳ ಶ್ರೇಷ್ಠತೆಯ ಬಗ್ಗೆ ನನಗೇ ಅನುಮಾನವಿದೆ. ಯಾವುದಕ್ಕೂ ಒಂದು ಕಡೆ ಎಲ್ಲ ಕಥೆಗಳೂ ಸಿಗಲಿ ಎಂಬ ಉದ್ದೇಶದಿಂದ ಸಂಕಲನವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಿದ್ದೇನೆ. ಈ ಕಥೆಗಳಿಂದ ನನಗೆ ಬರುವ ರಾಯಧನ ಅಷ್ಟರಲ್ಲಿಯೇ ಇದೆ. ಅದಕ್ಕಿಂತ ಮುಖ್ಯವಾಗಿ ಬೇಕಾಗಿರುವುದು – ಕಥೆಗಳ ಮೌಲ್ಯಮಾಪನ, ಚರ್ಚೆ, ಪ್ರತಿಕ್ರಿಯೆ. ಆದ್ದರಿಂದ ಉಚಿತವಾಗಿ ಕೊಡುವಾಗಲೂ, ಗುಣಮಟ್ಟದ ಬಗ್ಗೆ ಗಮನ ಇರಬೇಕಾದ್ದು ನನ್ನಂಥ ಆನ್‌ಲೈನ್ ಬರಹಗಾರರ ಕರ್ತವ್ಯ. ಪ್ರಮಾಣವಿರುವ ಸಂಗೀತದ ಹಾಗೆಯೇ ಪ್ರಮಾಣವಿಲ್ಲದ ಸಾಹಿತ್ಯದ ಪ್ರಕಟಣೆಯ ಬಗ್ಗೆ ಸ್ವನಿಯಂತ್ರಣ ಬೇಕೇ ಬೇಕು. ಮುದ್ರಿತ ಸಾಹಿತ್ಯವಾದರೂ ಒಂದೆರಡು ಸಾವಿರ ಪ್ರತಿಗಳಿಗೇ ಸೀಮಿತ! ವಿಮರ್ಶೆ, ಬಹುಮಾನಗಳ ಮೂಲಕ ಮುದ್ರಿತ ಪುಸ್ತಕಗಳು ಪ್ರಸಿದ್ಧವಾಗುವುದು ನಿಜ. ಈ ಮೂಲಕ ಇಂಥ ಕೆಟ್ಟ ಪುಸ್ತಕವನ್ನು ಮುದ್ರಿಸಿ ಕಾಗದ ಖರ್ಚು ಮಾಡಿದೆ ಎಂಬ ಆರೋಪದಿಂದಲೂ ತಪ್ಪಿಸಿಕೊಂಡಿದ್ದೇನೆ!
`ಕೇವಲ ಆನ್‌ಲೈನ್’ ಕೃತಿಗಳನ್ನು (ಫಿಕ್ಷನ್, ನಾನ್ ಫಿಕ್ಷನ್) ಕೂಡಾ ಇಂಥ ಸ್ಪರ್ಧೆಗಳಿಗೆ ಸೇರಿಸುವ ಮನೋಭಾವ ಬರುವವರೆಗೆ ನಾವು ಆನ್‌ಲೈನ್ ಬರವಣಿಗೆಯ ಮೂಲಕ ಯಾವುದೇ ವೇದಿಕೆ ಹತ್ತುವುದು ಇನ್ನೂ ಕಷ್ಟವೇ. ಸಾಹಿತ್ಯವೆಂದರೆ ಅಭಿವ್ಯಕ್ತಿ; ಅದು ಯಾವುದೇ ಮಾಧ್ಯಮದಲ್ಲೂ ಪ್ರಕಟವಾಗಬಹುದು ಎಂಬ ಮಾತು ಸಹಜವಾಗುವುದಕ್ಕೆ ಇನ್ನೂ ಸಾಕಷ್ಟು ಕಾಲ ಬೇಕು. ಬ್ಲಾಗುಗಳೂ ಆಗಿರುವ ಈ ಕಥೆಗಳನ್ನು ಆನ್‌ಲೈನ್ ಪುಸ್ತಕದ ರೀತಿಯಲ್ಲಿ ಪ್ರಕಟಿಸಿದರೆ, ಈ ಮಾನ್ಯತೆಯ ಕಾಲ ಬೇಗ ಬರಬಹುದು; ಮುಂದಿನ ಪೀಳಿಗೆಯ ಆನ್‌ಲೈನ್ ಕಥೆಗಾರರಿಗೆ ಮನ್ನಣೆ ಸಿಗಬಹುದು ಎಂಬ ಹುಸಿನಂಬಿಕೆ ನನ್ನದು!
– ಬೇಳೂರು ಸುದರ್ಶನ
೨೫ ಫೆಬ್ರುವರಿ ೨೦೧೫
beluru@beluru.com
www.beluru.com