ಕರ್ನಾಟಕ ಸರ್ಕಾರದ ಜಾಲತಾಣಗಳು ಕನ್ನಡದಲ್ಲಿ ದೊರಕಬೇಕು, ಸುಲಭವಾಗಿ ಬಳಸುವಂತಿರಬೇಕು ಎಂಬ ಒತ್ತಾಸೆ ನನ್ನಲ್ಲಿ ಹಲವು ವರ್ಷಗಳಿಂದ ಇದೆ. ಇದಕ್ಕೆ ಪೂರಕವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಎಸ್ ಜಿ ಸಿದ್ಧರಾಮಯ್ಯನವರು ಈ ಮಾನದಂಡವನ್ನು ರೂಪಿಸಲು ನನಗೆ ಸೂಚಿಸಿದರು. ಅತ್ಯಂತ ಸಂತೋಷದಿಂದ ಈ ಕೆಲಸವನ್ನು ನನ್ನ ತಿಳಿವಿನ ಮಟ್ಟಿಗೆ ಮಾಡಿಕೊಟ್ಟಿದ್ದೇನೆ. ಸಾರ್ವಜನಿಕರು ಈ ವರದಿಯನ್ನು ಬೆಂಬಲಿಸಿ ಇದನ್ನು ಹೆಚ್ಚು ಬಲಪಡಿಸುವ ದೃಷ್ಟಿಯಿಂದ ಸಲಹೆಗಳನ್ನು ಕೊಡಲು ವಿನಂತಿ. ಈ ವರದಿಯನ್ನು ರಚಿಸಿ ಕೊಡಲು ನನಗೆ ಸಂಪೂರ್ಣ ಬೆಂಬಲ ಕೊಟ್ಟ ಪ್ರಾಧಿಕಾರದ ಅಧ್ಯಕ್ಷ ಶ್ರೀ ಎಸ್ ಜಿ ಸಿದ್ಧರಾಮಯ್ಯನವರಿಗೆ, ಕಾರ್ಯದರ್ಶಿ ಶ್ರೀ ಮುರಳೀಧರ, ಈ-ಆಡಳಿತ ಕೇಂದ್ರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಕೆ ನಾಗರಾಜ ಇವರಿಗೆ ನನ್ನ ಕೃತಜ್ಞತೆಗಳು.
ಬೇಳೂರು ಸುದರ್ಶನ / ೧೪ ಸೆಪ್ಟೆಂಬರ್ ೨೦೧೭
ಕರ್ನಾಟಕ ಸರ್ಕಾರದ ಎಲ್ಲಾ ಇಲಾಖೆಗಳ ಜಾಲತಾಣಗಳನ್ನು ಬಳಕೆದಾರ ಸ್ನೇಹಿ ಮತ್ತು ಸುಲಭ ಸಮಾನ ಮಾಹಿತಿಯನ್ನು ನೀಡುವ ವೇದಿಕೆಯಾಗಿ ರೂಪಿಸುವ ಕುರಿತಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಏಕರೂಪ ಶಿಷ್ಟತೆಯ ಕರಡು ಮಾರ್ಗಸೂಚಿಗಳನ್ನು ತಯಾರಿಸಲಾಗಿದ್ದು ಪ್ರಾಧಿಕಾರದ ಅಧಿಕೃತ ಜಾಲತಾಣವಾದ http://bit.ly/2h6vgj3 ರಲ್ಲಿ ಪ್ರಕಟಿಸಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ಮಾರ್ಗಸೂಚಿಯನ್ನು ತಯಾರಿಸುವಲ್ಲಿ ಶ್ರೀ ಬೇಳೂರು ಸುದರ್ಶನ ಹಾಗೂ ಈ-ಆಡಳಿತದ ಪ್ರತಿನಿಧಿಗಳ ಸೇವೆಯನ್ನು ಬಳಸಿಕೊಂಡಿದೆ. ದಿನಾಂಕ ೨೮.೦೯.೨೦೧೭ರ ಒಳಗೆ ಸಾರ್ವಜನಿಕರು ಈ ಕುರಿತಂತೆ ರಚನಾತ್ಮಕ ಸಲಹೆಗಳನ್ನು ನೀಡಬಹುದಾಗಿದ್ದು ಪ್ರಾಧಿಕಾರದ ಅಧಿಕೃತ ಮಿಂಚಂಚೆಗೆ secretary.kanpra@gmail.com ಕಳುಹಿಸಿಕೊಡಬಹುದಾಗಿದೆ.
ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ
ಮಾಹಿತಿ ತಂತ್ರಜ್ಞಾನದ, ಮಾಹಿತಿ ಸ್ಫೋಟದ ಯುಗ ಎಂದು ಕರೆಯುವ ಈ ಹೊತ್ತಿನಲ್ಲಿ ವಿಶ್ವವ್ಯಾಪಿ ಜಾಲದಲ್ಲಿ ಜಾಲತಾಣಗಳು ವಿವಿಧ ಮಾಹಿತಿಗಳನ್ನು ಒಪ್ಪ ಓರಣದಿಂದ ನೀಡುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿವೆ. ಅದರಲ್ಲೂ ಕೇಂದ್ರ/ ರಾಜ್ಯ ಸರ್ಕಾರದ ಜಾಲತಾಣಗಳು ಸಾಮಾನ್ಯ ಮಾಹಿತಿ, ಯೋಜನೆಗಳ ವಿವರ, ಸರ್ಕಾರದ ವಿವಿಧ ಇಲಾಖೆಗಳ ಪ್ರಗತಿ, ತತ್‌ಸಾಮಯಿಕ ಗ್ರಾಹಕ/ನಾಗರಿಕ ಸೇವೆಗಳ ಮಾಹಿತಿ, ದೂರು ನಿರ್ವಹಣೆ, ಪ್ರಕಟಣೆಗಳು, ಹಣಕಾಸು ವಿವರಗಳು, – ಹೀಗೆ ಹತ್ತು ಹಲವು ಬಗೆಯ ಮಾಹಿತಿಗಳನ್ನು, ಭಾರೀ ಪ್ರಮಾಣದ ಅಂಕಿ ಅಂಶಗಳನ್ನು ನೀಡುತ್ತಿವೆ. ಸಮಷ್ಟಿಹಿತದ ಉದ್ದೇಶ ಹೊತ್ತ ಈ ಜಾಲತಾಣಗಳು ಒಂದೆಡೆ ವಿಷಯ ತಜ್ಞರಿಗೆ ಬೇಕಾದ ಮಾಹಿತಿಗಳನ್ನೂ, ಇನ್ನೊಂದೆಡೆ ಸಾರ್ವಜನಿಕರಿಗೆ ಅಗತ್ಯವಾಗಿ ಮಾಹಿತಿಗಳನ್ನೂ ನೀಡುವ ಉದ್ದೇಶವನ್ನು ಹೊಂದಿವೆ. ೨೦೦೫ರಲ್ಲಿ ಮಾಹಿತಿ ಪಡೆಯುವ ಹಕ್ಕುಗಳನ್ನು ಸಾರ್ವಜನಿಕರು ಪಡೆದಾಗಿನಿಂದ ಈ ತಾಣಗಳ ಹೊಣೆಗಾರಿಕೆ ಇಮ್ಮಡಿಯಾಗಿದೆ.
ಜಾಲತಾಣಗಳು ಸರ್ಕಾರದ ಕಾರ್ಯದಕ್ಷತೆ, ಪಾರದರ್ಶಕತೆ, ನಾಗರಿಕಸ್ನೇಹಿತ್ವ, ಸಂವಹನಶೀಲತೆ – ಇವೆಲ್ಲವನ್ನೂ ಬಿಂಬಿಸುತ್ತವೆ. ಒಂದು ಜಾಲತಾಣವನ್ನು ಪ್ರವೇಶಿಸಿದ ಕೂಡಲೇ ಸಾರ್ವಜನಿಕರಿಗೆ ಆ ತಾಣವು ಮಾಹಿತಿಗಳನ್ನು ಸರಳವಾಗಿ ಮತ್ತು ಕ್ಷಿಪ್ರವಾಗಿ ಕೊಡಬೇಕಿದೆ. ಅದರಲ್ಲೂ ರಾಜ್ಯ ಸರ್ಕಾರದ ಜಾಲತಾಣಗಳು ರಾಜ್ಯದ ಅಧಿಕೃತ ಭಾಷೆಯಲ್ಲಿ ಎಲ್ಲ ಮಾಹಿತಿಗಳನ್ನೂ ನೀಡಬೇಕಾಗಿರುವುದು ಕಾನೂನಿನ ಅಗತ್ಯವೂ ಆಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ನಿಟ್ಟಿನಲ್ಲಿ ಸರ್ಕಾರದ ಎಲ್ಲ ಇಲಾಖೆಗಳಿಗೆ ಆಗಾಗ್ಗೆ ಪತ್ರ ಬರೆದು, ಸಭೆ ಕರೆದು ಜಾಲತಾಣಗಳಲ್ಲಿ ಕನ್ನಡದಲ್ಲೇ ಮಾಹಿತಿಗಳು ಇರಬೇಕು ಎಂದು ಸೂಚಿಸುತ್ತ ಬಂದಿದೆ. ಆದಾಗ್ಯೂ ಬಹುಪ್ರಮಾಣದಲ್ಲಿ ರಾಜ್ಯ ಸರ್ಕಾರದ ಜಾಲತಾಣಗಳು ಕನ್ನಡದಲ್ಲಿ ಪೂರ್ಣ ಮಾಹಿತಿ ಕೊಡುತ್ತಿಲ್ಲ ಎಂಬುದು ಗಂಭೀರವಾದ ಲೋಪವಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಜಾಲತಾಣಗಳಲ್ಲಿ ರಾಜ್ಯದ ನಾಗರಿಕರಿಗೆ ಸರಳವಾಗಿ ಮತ್ತು ಕನ್ನಡದಲ್ಲಿ ಮಾಹಿತಿ ನೀಡುವ ವ್ಯವಸ್ಥೆಯನ್ನು ರೂಪಿಸುವ ಉದ್ದೇಶದಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ವರದಿಯನ್ನು ಕೇಳಿತು. ಈ ವರದಿಯನ್ನು ರೂಪಿಸುವಾಗ ಕೆಳಕಂಡ ಉದ್ದೇಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಲಾಗಿದೆ:
- ಕನ್ನಡದಲ್ಲೇ ಮೊದಲ / ಗರಿಷ್ಠ ಮಾಹಿತಿ ವ್ಯವಸ್ಥೆ
- ಶಿಷ್ಟತೆ ಹೊಂದಿರುವ ಏಕರೂಪ ಮಾಹಿತಿ ವ್ಯವಸ್ಥೆ
- ಜಾಲತಾಣಗಳ ಸುಲಭಗ್ರಾಹ್ಯತೆ
ಜಾಲತಾಣಗಳನ್ನು ಕನ್ನಡದಲ್ಲೇ ಕೊಡಿ ಎಂದು ಹೇಳಿಬಿಟ್ಟರೆ ಮಾಹಿತಿ ಸಂವಹನದ ಮೂಲ ಉದ್ದೇಶ ಸಫಲವಾದ ಹಾಗಾಗುವುದಿಲ್ಲ. ಜಾಲತಾಣಗಳ ವಿನ್ಯಾಸವೇ ಕೆಟ್ಟದಾಗಿದ್ದು ಮಾಹಿತಿ ಹುಡುಕುವುದೇ ಕಷ್ಟವಾದರೆ ಏನೂ ಪ್ರಯೋಜನವಿಲ್ಲ. ಕನ್ನಡಕ್ಕೆ ಜಾಲತಾಣದ ಪುಟಗಳನ್ನು ಅನುವಾದಿಸುವಾಗ, ಸಮಾನವಾದ ಸೂತ್ರಗಳನ್ನು ಅನುಸರಿಸದೆ ಒಂದೊಂದು ತಾಣದಲ್ಲಿ ಒಂದೊಂದು ಪದವನ್ನು ಬಳಸಿದರೆ ಇಡೀ ಪ್ರಯತ್ನವೇ ದೊಡ್ಡ ಗೋಜಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ವರದಿಯು ಕೇವಲ ಕನ್ನಡ ಜಾರಿಯ ಅಂಶಗಳನ್ನಷ್ಟೇ ಅಲ್ಲ, ಜಾಲತಾಣದ ಮಾಹಿತಿ ಪ್ರಸರಣದ ಶಿಷ್ಟತೆಯ ಬಗ್ಗೆಯೂ ಶಿಫಾರಸುಗಳನ್ನು ಹೊಂದಿದೆ.
೧. ಕನ್ನಡದಲ್ಲೇ ಮೊದಲ / ಗರಿಷ್ಠ ಮಾಹಿತಿ ವ್ಯವಸ್ಥೆ
Unicode’s success at unifying character sets has led to its widespread and predominant use in the internationalization and localization of computer software. -UNITED NATIONS
೧. ಆಂಗ್ಲ ಪದಗಳ ದೇಸೀಕರಣ
೧. ಸರ್ಕಾರದ ಜಾಲತಾಣಗಳ ಕನ್ನಡೀಕರಣದ ದೊಡ್ಡ ಸವಾಲೆಂದರೆ ಇಂಗ್ಲಿಶಿಗೆ ಬದಲಿಯಾಗಿ ಸೂಕ್ತ ಕನ್ನಡ ಪದಗಳನ್ನು, ಪದಗುಚ್ಛಗಳನ್ನು ಬಳಸುವುದು. ಹೆಚ್ಚಿನೆಲ್ಲ ಜಾಲತಾಣಗಳನ್ನು ಹೊರಗುತ್ತಿಗೆ ಮೂಲಕವೋ, ಕೇವಲ ತಂತ್ರಜ್ಞರು ಮಾತ್ರವೇ ಇರುವ ಸಂಸ್ಥೆಗೋ ನೀಡಿ ವಿನ್ಯಾಸಗೊಳಿಸಲಾಗುತ್ತದೆ. ಈ ಸಂದರ್ಭದಲ್ಲಿ ಜಾಲತಾಣ ಒಡೆತನದ ಇಲಾಖೆ / ಕಚೇರಿಯು ಕನ್ನಡ ಅನುವಾದವನ್ನು ಮಾಡಿಸುತ್ತದೆ; ಅಥವಾ ಹೊರಗುತ್ತಿಗೆ ಮೂಲಕವೂ ಅನುವಾದ ನಡೆಯುತ್ತದೆ. ಈ ಸಂದರ್ಭದಲ್ಲಿ ಒಂದೊಂದು ಜಾಲತಾಣದಲ್ಲಿ ಒಂದೊಂದು ಭಾಷಾಶೈಲಿ,ಅನುವಾದಿತ ಪದಗಳನ್ನು ಬಳಸಲಾಗುತ್ತದೆ. ಇದು ತಪ್ಪಬೇಕು.
೨. ಪ್ರತಿಯೊಂದೂ ಇಲಾಖೆಗೆ / ಸಚಿವಾಲಯಕ್ಕೆ ಅದರದ್ದೇ ಒಂದು ಪರಿಭಾಷೆ ಇದ್ದೇ ಇರುತ್ತದೆ. ಹಲವು ವರ್ಷಗಳಿಂದ ಸಾವಿರಾರು ಪದಗಳು ಬಳಕೆಯಲ್ಲಿವೆ. ಇವೆಲ್ಲಕ್ಕೂ ಒಂದು ಶಿಷ್ಟತೆ ಮತ್ತು ಏಕರೂಪತೆ ಒದಗಿಸಬೇಕಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ಒಂದು `ತಂತ್ರಜ್ಞಾನ ದೇಸೀಕರಣ ಸಮಿತಿ’ಯನ್ನು (Software Localisation Committee) ರಚಿಸಬೇಕು. ಈ ಸಮಿತಿಯು ಸಂಗ್ರಹಿಸಿ, ಸಂಪಾದಿಸಿದ ವಿವಿಧ ಇಲಾಖೆಗಳ ಪದಕೋಶಗಳನ್ನು ಪ್ರಾಧಿಕಾರದ ಮೂಲಕ ಪ್ರಕಟಿಸಬೇಕು. ಈ ಕೋಶವು ಯುನಿಕೋಡ್ ಪಠ್ಯದ ರೂಪದಲ್ಲಿ ಪ್ರಾಧಿಕಾರದ ಜಾಲತಾಣದಲ್ಲಿ ಸೂಕ್ತ ವಿನ್ಯಾಸದ ಮೂಲಕ ಎಲ್ಲರಿಗೂ ಮುಕ್ತವಾಗಿ ಸಿಗುವಂತಿರಬೇಕು.
೩. ಒಮ್ಮೆ ಇಂಥ ಕ್ರೋಡೀಕೃತ ಪದಕೋಶವು ಪ್ರಕಟವಾದ ಮೇಲೆ, ಪ್ರತಿಯೊಂದೂ ಇಲಾಖೆ / ಕಚೇರಿಯು ತನಗೆ ಸಂಬಂಧಿಸಿದ ಪದಗಳನ್ನು ಕಾಲಕಾಲಕ್ಕೆ ಪರಿಷ್ಕರಿಸಿ ಪ್ರಾಧಿಕಾರದ ಜಾಲತಾಣದ ಮಾಹಿತಿಯನ್ನೇ ನವೀಕರಿಸುವ ಆನ್‌ಲೈನ್ ವ್ಯವಸ್ಥೆಯನ್ನು (ಸೂಕ್ತ ಸುರಕ್ಷಾ ಕ್ರಮಗಳೊಂದಿಗೆ) ರೂಪಿಸಿದರೆ, ವಿಕೇಂದ್ರೀಕೃತ ವ್ಯವಸ್ಥೆಯ ಮೂಲಕವೇ ಈ ಪದಸಂಚಯವನ್ನು ನಿರ್ವಹಿಸಬಹುದು.
೪. `ತಂತ್ರಜ್ಞಾನ ದೇಸೀಕರಣ ಸಮಿತಿ’ಯ ಎರಡನೇ ಅತ್ಯಂತ ಮಹತ್ವದ ಕಾರ್ಯ: ಆದೇಶ ಪಟ್ಟಿಗಳ, ಜಾಲತಾಣ ಸಂವಹನ ಸಂಬಂಧಿತ ದೇಸೀಕರಣ (ಮೆನ್ಯು ಮತ್ತು ವೆಬ್‌ಸೈಟ್ ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್ ಲೋಕಲೈಸೇಶನ್). ಇದಕ್ಕಾಗಿ ಸಮಿತಿಯು ಕನ್ನಡ ಐಟಿ ಕಾರ್ಯಕರ್ತರ ಸಮುದಾಯದ ಜೊತೆಗೆ ಕೆಲಸ ಮಾಡಬೇಕಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ಚಾಲ್ತಿಯಲ್ಲಿರುವ ವಿವಿಧ ದೇಸೀಕರಣ ಯೋಜನೆಗಳನ್ನೂ ಗಮನಕ್ಕೆ ತೆಗೆದುಕೊಂಡು ಸಮಿತಿಯು ಈ ಪದಸಂಚಯವನ್ನೂ ಮೇಲೆ ತಿಳಿಸಿದ ಆನ್‌ಲೈನ್ ಪದಕೋಠಿಯ ಮೂಲಕವೇ ನಿರ್ವಹಿಸಬೇಕು.
೫. ಜಾಲತಾಣ ದೇಸೀಕರಣದ ಬಗ್ಗೆ ಸಿ-ಡ್ಯಾಕ್ ಸಂಸ್ಥೆಯು ಒಂದು ಮುಖ್ಯವಾದ ದಾಖಲೆಯನ್ನು ಪ್ರಕಟಿಸಿದೆ. (http://www.localisation.gov.in/index.php/training-resources?download=4:localisation-guidelines&start=10) ಈ ದಾಖಲೆಯ ಪ್ರಕಾರ ಭಾರತೀಯ ಭಾಷೆಗಳನ್ನು ಯುನಿಕೋಡ್ ಆಧಾರಿತ ವ್ಯವಸ್ಥೆಯ ಮೂಲಕ ಬಳಸಿಕೊಂಡು ಜಾಲತಾಣವನ್ನು ಸಂಪೂರ್ಣವಾಗಿ ಕನ್ನಡದಲ್ಲಿ ರೂಪಿಸಬಹುದಾಗಿದೆ. ಸಕಾಲ ಭಾರತಿ ಯುನಿಕೋಡ್ ಫಾಂಟ್ ಈಗ ೨೨ ಭಾರತೀಯ ಭಾಷೆಗಳ ಲಿಪಿಗಳಿಗೆ ಬೆಂಬಲ ಕೊಡುತ್ತಿದೆ. ಅದನ್ನು ಬಳಸಿಕೊಂಡು ಸರ್ಕಾರದ ತಾಣಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕನ್ನಡವನ್ನು ತರಬಹುದಾಗಿದೆ; ಲಿಪ್ಯಂತರಣವೂ ಸುಲಭವಾಗುತ್ತದೆ. ಸಿ-ಡ್ಯಾಕ್‌ನ ಈ ದಾಖಲೆಯನ್ನು ತಜ್ಞರ ಮೂಲಕ ಚರ್ಚಿಸಿ ಈ ಕುರಿತು ಕನ್ನಡದ ಮಾನದಂಡಗಳನ್ನು ರೂಪಿಸಬೇಕು. ಇದನ್ನು ಮುಖ್ಯತಃ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಇ-ಆಡಳಿತ ಇಲಾಖೆ ಜಂಟಿಯಾಗಿ ಮಾಡಬೇಕಿದೆ. ಈ ಕಾರ್ಯದಲ್ಲಿ ಸಮುದಾಯವನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮಕಾಲೀನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕನ್ನಡವನ್ನು ತಳಮಟ್ಟದಲ್ಲೂ ಬಳಸಬಹುದು. ಜಾಲತಾಣಗಳಲ್ಲಿ ಭಾಷೆಯನ್ನು ಬಳಸಬೇಕಾದಾಗ ಅನುಸರಿಸಬೇಕಾದ ಶೈಲಿ ಸೂತ್ರಗಳ ಬಗ್ಗೆಯೂ ಸಿ-ಡ್ಯಾಕ್‌ನ ಈ ದಾಖಲೆಯಲ್ಲಿ ಮಹತ್ವದ ಉಲ್ಲೇಖಗಳಿವೆ. ಭಾಷೆಗಳನ್ನು ಆನ್‌ಲೈನ್‌ಗೆ ತರುವಾಗ ಯುನಿಕೋಡ್ ಕನ್ಸಾರ್ಶಿಯಂ (http://unicode.org/consortium/consort.html) ಬಳಸಿದ ಶೈಲಿಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಇದನ್ನು ಆಚರಣೆಗೆ ತರುವುದು ತಾಂತ್ರಿಕವಾಗಿ ಕ್ಲಿಷ್ಟಕರ ಎಂದು ಭಾಸವಾಗುತ್ತದೆ. ಆದರೆ ಚೀನಾ, ಜಪಾನ್, ಯುರೋಪಿನ ಹಲವು ಜಾಲತಾಣಗಳು ಇವನ್ನು ಅತ್ಯಂತ ಸಲೀಸಾಗಿ ಅನ್ವಯಿಸಿಕೊಂಡಿವೆ. ಕೇವಲ ಜಾಲತಾಣಕ್ಕಾಗಿ ಮಾತ್ರವಲ್ಲ, ಕನ್ನಡದ ಪದಸಂಚಯವು ಸಮಕಾಲೀನ ಆಗುಹೋಗುಗಳಿಗೆ ತೆರೆದುಕೊಳ್ಳುವಲ್ಲಿ ಇಂಥ ಯತ್ನಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಸಿ-ಡ್ಯಾಕ್‌ನ ದಾಖಲೆಯನ್ನು ಈ ವರದಿಯ ಪ್ರಮುಖ ಭಾಗವೆಂದು ಪರಿಗಣಿಸಿ ಅದನ್ನು ಗಂಭೀರವಾಗಿ ಪರಿಶೀಲಿಸಬೇಕು.
೨. ಕನ್ನಡದಲ್ಲಿ ಒಳಪುಟಗಳು, ಆದೇಶಗಳು
೧. ಸರ್ಕಾರದ ಹಲವು ಜಾಲತಾಣಗಳಲ್ಲಿ ಕಂಡ ಪ್ರಮುಖ ಭಾಷಾ ಸಮಸ್ಯೆಗಳು ಹೀಗಿವೆ:
೧. ಕೇವಲ ಮುಖಪುಟದ ಕೆಲವೇ ಅಂಶಗಳು ಕನ್ನಡದಲ್ಲಿ ಇರುವುದು.
೨. ಒಳಪುಟಗಳಲ್ಲಿ ಕೇವಲ ಇಂಗ್ಲಿಶ್ ಬಳಕೆ
೩. ಕೋಷ್ಟಕ, ನಕಾಶೆ, ಪಟ್ಟಿಗಳು, – ಹೀಗೆ ವಿವಿಧ ಬಗೆಯ ಮಾಹಿತಿ ವಿಧಾನಗಳಲ್ಲಿ ಕೇವಲ ಇಂಗ್ಲಿಶಿನ ಬಳಕೆ
೨. ಕನ್ನಡ ಆದೇಶ ಪಟ್ಟಿ ಇದ್ದರೂ ಒಳಗಡೆ ಇರುವ ಆದೇಶಗಳು, ಅದಿಸೂಚನೆಗಳು, ಪ್ರಕಟಣೆಗಳು ಇಂಗ್ಲಿಶಿನಲ್ಲಿರುವುದು. ಇದು ಸುತ್ತೋಲೆಗಳ ಕುರಿತ ಸಂಗತಿಯಾಗಿದ್ದು ನೇರವಾಗಿ ಜಾಲತಾಣಗಳ ಕನ್ನಡೀಕರಣ ವಿಷಯಕ್ಕೆ ಸಂಬಂಧಿಸಿದ್ದಲ್ಲ. ಈ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಪ್ರತ್ಯೇಕವಾದ ಪ್ರಯತ್ನವನ್ನು ನಡೆಸಬೇಕಾಗುತ್ತದೆ. ಬೇರೆ ರಾಜ್ಯಗಳಿಗೆ ಸಂಬಂಧಿಸಿದ ಸುತ್ತೋಲೆಗಳು ಮಾತ್ರವೇ ಇಂಗ್ಲಿಶಿನಲ್ಲಿ ಇರಬಹುದು. ಹೊರತಾಗಿ, ಎಲ್ಲ ಸುತ್ತೋಲೆಗಳೂ ಕನ್ನಡದಲ್ಲೇ ಇರಬೇಕು. ಇಂಗ್ಲಿಶಿನ ಸುತ್ತೋಲೆಗಳಿಗೆ ಕನ್ನಡದಲ್ಲಿ ಮುಖ್ಯಾಂಶಗಳನ್ನು ಕೊಡಬೇಕು. ಸುತ್ತೋಲೆಗಳ ದೃಢೀಕೃತ ಪಠ್ಯದ ಯುನಿಕೋಡ್ ಆವೃತ್ತಿಯನ್ನೂ (ಲಿಬ್ರೆ ಆಫೀಸ್‌ನಂತಹ ಮುಕ್ತ ತಂತ್ರಾಂಶದ ಮೂಲಕವೇ ಸುತ್ತೋಲೆಗಳನ್ನು ರೂಪಿಸಿದರೆ ಇದು ಸುಲಭಸಾಧ್ಯ) ಕೊಡುವಂತಹ ತಂತ್ರಜ್ಞಾನ ವ್ಯವಸ್ಥೆಯನ್ನು ರೂಪಿಸಿದರೆ ಗೂಗಲ್ ಸರ್ಚ್ ಇಂಜಿನ್‌ನಂತಹ ಹುಡುಕಾಟದಲ್ಲಿ ಸರ್ಕಾರದ ಸುತ್ತೋಲೆಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತವೆ. ಇವುಗಳಿಂದ ಜಾಲತಾಣಗಳನ್ನು ಭೇಟಿ ಮಾಡುವವರ ಸಂಖ್ಯೆಯೂ ಗಮನಾರ್ಹವಾಗಿ ಹೆಚ್ಚುತ್ತದೆ.
೩. ರಾಜ್ಯ ಸರ್ಕಾರದ ಬಹ್ವಂಶ ಜಾಲತಾಣಗಳು ಯಾವುದೇ ವಿನ್ಯಾಸದ ಚೌಕಟ್ಟು ಇಲ್ಲದೆಯೇ ಎರ್ರಾಬಿರ್ರಿಯಾದ ಪುಟಗಳನ್ನು ಹೊಂದಿವೆ. ಹಲವು ಜಾಲತಾಣಗಳಂತೂ ಈಗಲೂ ಹಳೆಯ ಎಚ್‌ಟಿಎಂಎಲ್ ಪುಟಗಳನ್ನೇ ಹೊಂದಿವೆ. ಈಗಿನ ಸ್ಮಾರ್ಟ್‌ಫೋನ್‌ಗಳಲ್ಲಿ, ಟ್ಯಾಬ್ಲೆಟ್‌ಗಳಲ್ಲಿ ಈ ಜಾಲತಾಣಗಳನ್ನು ಅಕರಾಳ, ವಿಕರಾಳವಾಗಿ ಕಾಣಿಸುತ್ತವೆಯಲ್ಲದೆ, ಬಳಕೆದಾರರಿಗೆ ಅತೀವ ಕಿರಿಕಿರಿ ಉಂಟುಮಾಡುತ್ತವೆ. ಯಾವುದೇ ಪುಟವನ್ನೂ ಸ್ಪಷ್ಟವಾಗಿ ತೋರಿಸಲು ಬರುವುದಿಲ್ಲ. ಇಂತ ಜಾಲತಾಣಗಳನ್ನು ಆಮೂಲಾಗ್ರ ಬದಲಾಯಿಸಿ ಕನ್ನಡ ಮುಖಪುಟದ ಸ್ಪಂದನಾತ್ಮಕ (ರೆಸ್ಪಾನ್ಸಿವ್) ಪರದೆ ಅನುಕೂಲ ಇರುವ ಜಾಲತಾಣಗಳನ್ನು ರೂಪಿಸಬೇಕು.
೪. ಎಲ್ಲ ಜಾಲತಾಣಗಳಲ್ಲೂ ಕನ್ನಡ ತಂತ್ರಾಂಶಗಳ ಡೌನ್‌ಲೋಡ್ ಸೌಲಭ್ಯ ಇರಬೇಕು : ಸರ್ಕಾರದ, ಖಾಸಗಿ ಸಂಸ್ಥೆಗಳ ತಂತ್ರಾಂಶಗಳನ್ನು (ಯುನಿಕೋಡ್‌ಗೆ ಆದ್ಯತೆ ನೀಡುವ) ಪಟ್ಟಿ ಮಾಡಿ ಕೊಡಬಹುದು. ಹಾಗೆಯೇ ಕನ್ನಡದ ಇತರೆ ತಂತ್ರಾಂಶಗಳನ್ನೂ ನೀಡಬಹುದು. ಇಲ್ಲಿ ಅಬಾಧ್ಯತೆ ಪ್ರಕಟಣೆ ನೀಡಿ ಖಾಸಗಿ ಪುಟಗಳ ಕೊಂಡಿಯನ್ನು ಕೊಡಲು ಸಮಸ್ಯೆ ಇಲ್ಲ.
೫. ರಾಜ್ಯ ಸರ್ಕಾರದ ಪ್ರಮುಖ ವೆಬ್‌ಸೈಟ್‌ಗಳ ಕೊಂಡಿ (ಗೇಟ್‌ವೇ ಜಾಲತಾಣ karnataka.gov.in) ಇರಬೇಕು.
೬. ರಾಜ್ಯಪಾಲರು, ಮುಖ್ಯಮಂತ್ರಿ, ವಿಧಾನಸೌಧ, ವಿಧಾನಮಂಡಲ ಜಾಲತಾಣಗಳ ಪಟ್ಟಿಯನ್ನು ಕೊಡಬೇಕು.
೭. ಕನ್ನಡದಲ್ಲಿ ಮಾಹಿತಿ ಇಲ್ಲದಿದ್ದರೆ ದೂರು ಕೊಡುವ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಒಂದು ಆಪ್ ರೂಪಿಸಬಹುದು / ಫೇಸ್‌ಬುಕ್ ಪುಟ, ವೆಬ್‌ಸೈಟ್ ದೂರು ಸಲ್ಲಿಕೆ ಪುಟ ರೂಪಿಸಬಹುದು. ಈ ದೂರುಗಳನ್ನು ಸಮರ್ಥವಾಗಿ ನಿರ್ವಹಿಸುವ ತಂಡವೂ ಇರಬೇಕಾಗುತ್ತದೆ. ಅಲ್ಲದೆ ದೂರುಗಳನ್ನು ಪರಿಹರಿಸಿದ ಬಗ್ಗೆ ಉತ್ತರಗಳನ್ನು ಪಡೆದು ಈ ಒಟ್ಟಾರೆ ದೂರು ಸಲ್ಲಿಕೆ – ಇತ್ಯರ್ಥದವರೆಗಿನ ಸುತ್ತನ್ನು ಮುಗಿಸುವ ಸಮರ್ಥ ಕಾರ್ಯವ್ಯವಸ್ಥೆ ಇರಬೇಕಾಗುತ್ತದೆ.
೮. ರಾಜ್ಯ ಸರ್ಕಾರದ ಯಾವುದೇ ಜಾಲತಾಣದ ಹೊರಪುಟ, ಒಳಪುಟಗಳಲ್ಲಿ ಕನ್ನಡದ ಪುಟಗಳು ಇಲ್ಲದ ಪಕ್ಷದಲ್ಲಿ ಅಂಥ ಜಾಲತಾಣಗಳ ನಿರ್ವಹಣಾ ಸಂಸ್ಥೆಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಿಗದಿಪಡಿಸಿ ಕಾಲಾವಧಿಯ ನಂತರವೂ ಸಂಪೂರ್ಣ ಕನ್ನಡೀಕರಣ ಆಗದಿದ್ದರೆ, ಅಂಥ ಜಾಲತಾಣಗಳ ಪ್ರಕಟಣೆಯನ್ನೇ ತಡೆಹಿಡಿಯುವ ಅಧಿಕಾರವನ್ನು ಇ-ಆಡಳಿತಕ್ಕೆ ವಹಿಸತಕ್ಕದ್ದು.
೩. ಕನ್ನಡ – ಇಂಗ್ಲಿಶ್ ಅದಲು ಬದಲು ಯುಆರ್‌ಎಲ್ ವ್ಯವಸ್ಥೆ
೧. ಕನ್ನಡ – ಇಂಗ್ಲಿಶ್ ದ್ವಿಭಾಷಾ ಸೂತ್ರವನ್ನು ಅನುಸರಿಸಿದಂತೆ ಕಾಣುವ ರಾಜ್ಯ ಸರ್ಕಾರದ ಬಹುತೇಕ ಜಾಲತಾಣಗಳ ಪುಟಗಳ ದೊಡ್ಡ ಸಮಸ್ಯೆ ಎಂದರೆ ಒಳಪುಟಗಳನ್ನು ತನ್ನಿಂತಾನೇ ಭಾಷಾ ಬದಲಾವಣೆ ಮಾಡಲು ಸಾಧ್ಯವಾಗದೇ ಇರುವುದು. ಒಮ್ಮೆ ಒಳಪುಟಕ್ಕೆ ಪ್ರವೇಶಿದ ನಂತರ, ಆ ಪುಟವು ಇಂಗ್ಲಿಶಿನಲ್ಲಿ ಬೇಕೆಂದರೆ ಮತ್ತೆ ಮುಖಪುಟಕ್ಕೆ ಬಂದು ಅದೇ ವಿಭಾಗದ ಅದೇ ಉಪವಿಭಾಗದ ಪುಟವನ್ನು ಹುಡುಕುವ ಅನಿವಾರ್ಯತೆ ಈಗ ಇದೆ. ಯೂನಿವರ್ಸಲ್ ರಿಸೋರ್ಸ್ ಲೊಕೇಟರ್ (URL) ಎಂದೇ ಸಾಮಾನ್ಯವಾಗಿ ಕರೆಯುವ ಇಂಥ ಎಲ್ಲ ಒಳಪುಟಗಳನ್ನೂ ಮತ್ತೆ ಮುಖಪುಟಕ್ಕೆ ಹಿಂದಿರುಗದೆಯೇ ಭಾಷಾಂತರಣ ಮಾಡಿಕೊಳ್ಳುವ ವ್ಯವಸ್ಥೆಯನ್ನು ಹೊಂದಲು ತಂತ್ರಜ್ಞಾನವು ಅವಕಾಶ ಮಾಡಿಕೊಟ್ಟಿದೆ. ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಜಾಲತಾಣಗಳ ವಸ್ತು ವಿಷಯ ನಿರ್ವಹಣಾ ವ್ಯವಸ್ಥೆ ಪುಟಗಳಲ್ಲಿ (ಕಂಟೆಂಟ್ ಮ್ಯಾನೇಜ್‌ಮೆಂಟ್ ಸಾಫ್ಟ್‌ವೇರ್‌ನ ಡ್ಯಾಶ್‌ಬೋರ್ಡ್‌ಗಳಲ್ಲಿ) ಕನ್ನಡ – ಇಂಗ್ಲಿಶ್ ಎರಡೂ ಭಾಷೆಗಳಲ್ಲಿ ಮಾಹಿತಿಗಳನ್ನು ಏಕಕಾಲದಲ್ಲಿ, ಒಂದೇ ಪುಟದ ಭಾಗವಾಗಿ ಪ್ರಕಟಿಸುವ ವ್ಯವಸ್ಥೆಯನ್ನು ರೂಪಿಸಬೇಕು. ಆಗ ಕನ್ನಡ / ಇಂಗ್ಲಿಶ್ ಭಾಷೆಗಳ ಪುಟಗಳು ಎಲ್ಲಿ ಬೇಕಾದರೂ ಅದಲು ಬದಲಾಗುವ ಅವಕಾಶ ಒದಗುತ್ತದೆ.
೨. ಸಾಮಾನ್ಯವಾಗಿ ವರ್ಡ್‌ಪ್ರೆಸ್ ಸಿಎಂಎಸ್‌ನಲ್ಲಿ ಈ ಬಗೆಯ ಬಹುಭಾಷಾ ಟ್ಯಾಬ್ ಆಧಾರಿತ ಡ್ಯಾಶ್‌ಬೋರ್ಡ್ ಸೌಲಭ್ಯವನ್ನು ರೂಪಿಸಿಕೊಳ್ಳಬಹುದು. ಇಂಥ ವ್ಯವಸ್ಥೆಯಲ್ಲಿ ಮಾಹಿತಿಯನ್ನು, ಅದಕ್ಕೆ ಸಂಬಂಧಿಸಿದ ಕಡತ, ಚಿತ್ರ, ವಿಡಿಯೋ, ಪಠ್ಯ – ಎಲ್ಲವನ್ನೂ ಒಂದೇ ಸಲ ಜೋಡಿಸಿದರೆ ಸಾಕು; ಇಂಗ್ಲಿಶಿಗಾಗಿ ಎರಡನೇ ಸಲ ಪುಟ ರೂಪಿಸುವ ಅಗತ್ಯ ಬರುವುದಿಲ್ಲ. ಇತರೆ ಸಿಎಂಎಸ್‌ಗಳಲ್ಲೂ ಈ ಬಗೆಯ ವ್ಯವಸ್ಥೆಗಳನ್ನು ರೂಪಿಸಲು ಸಾಧ್ಯವಿದೆ.
೩. ಕನ್ನಡ / ಇಂಗ್ಲಿಶ್ ಭಾಷೆಯ ತಾಣಗಳ ಆಯ್ಕೆಯ ಗುಂಡಿಯು ಪರದೆಯ ಮೇಲ್ಭಾಗದಲ್ಲಿ ಇರಬೇಕು. (ಅಕ್ಷರ ಗಾತ್ರ ಹೆಚ್ಚಿಸು ಇತ್ಯಾದಿ ಗುಂಡಿಗಳ ಜೊತೆಗೆ)
೪. ಕನ್ನಡ ತಂತ್ರಾಂಶ ಮತ್ತು ಜ್ಞಾನ ಸಾಧನಗಳ ಪಟ್ಟಿ
೧. ತಂತ್ರಾಂಶ ನೆರವಿನ ಕೊಂಡಿಗಳು: ರಾಜ್ಯ ಸರ್ಕಾರದ ಎಲ್ಲ ಜಾಲತಾಣಗಳಲ್ಲಿ ವಿವಿಧ ಸ್ವತಂತ್ರ ಮತ್ತು ಮುಕ್ತ ಕನ್ನಡ ತಂತ್ರಾಂಶಗಳು, ಫಾಂಟ್‌ಗಳನ್ನು ಡೌನ್‌ಲೋಡ್ ಮಾಡಲು ಸೂಕ್ತವಾದ ಜಾಗವನ್ನು ಮೀಸಲಿಡಬೇಕು. ರಾಜ್ಯ ಸರ್ಕಾರದ ಯಾವುದೇ ತಾಣಕ್ಕೆ ಹೋದರೂ ಈ ಪುಟ ಸಿಗಬೇಕು. ಕನ್ನಡ ತಂತ್ರಾಂಶಗಳನ್ನು ಬಳಸುವ ಆಸಕ್ತಿ ಇರುವವರು ತಂತ್ರಾಂಶಕ್ಕೆಂದೇ ಮತ್ತೊಂದು ಪುಟವನ್ನು ಹುಡುಕಿಕೊಂಡು ಹೋಗುವ ಅನಿವಾರ್ಯತೆ ಬರಬಾರದು.
೧. ಜಾಲತಾಣಗಳನ್ನು ರೂಪಿಸಲು ಬಳಸಬಹುದಾದ ಸಮಕಾಲೀನ ಸಿಎಂಎಸ್‌ಗಳ ಬಗ್ಗೆ ಮಾಹಿತಿ ಮತ್ತು ಡೌನ್‌ಲೋಡ್ ಕೊಂಡಿಗಳು
೧. ವರ್ಡ್‌ಪ್ರೆಸ್: https://wordpress.com/
೨. ದ್ರುಪಲ್: https://www.drupal.org/
೩. ಝೂಮ್ಲಾ: https://www.joomla.org/
೨. ಯುನಿಕೋಡ್ ಪರಿವರ್ತಕಗಳು
೩. ಆನ್‌ಲೈನ್ / ಆಫ್‌ಲೈನ್ ಲಿಪ್ಯಂತರಣ ಸೌಲಭ್ಯ
೪. ಕನ್ನಡದ ಯುನಿಕೋಡ್ ಫಾಂಟ್‌ಗಳು
೫. ಕನ್ನಡ ತಂತ್ರಾಂಶಗಳು (ನುಡಿ, ಬರಹ, ಅಲ್ಲದೆ ವಿವಿಧ ಖಾಸಗಿ ಉತ್ಪನ್ನಗಳನ್ನೂ ಹೆಸರಿಸಬಹುದು). (ಈ ಕೊಂಡಿಗಳನ್ನು ಕ್ಲಿಕ್ ಮಾಡಿದರೆ ಡೌನ್‌ಲೋಡ್ ಆಗಬೇಕಾದ ತಂತ್ರಾಂಶಗಳು ಸದಾ ನವೀಕರಣಗೊಂಡು ದೊರಕುವ ವ್ಯವಸ್ಥೆಯನ್ನು ಇ-ಆಡಳಿತ ಇಲಾಖೆಯು ನೋಡಿಕೊಳ್ಳಬೇಕು)
೬. ಕನ್ನಡ ಮತ್ತು ಇಂಗ್ಲಿಶ್ ಪಠ್ಯದಿಂದ ಧ್ವನಿಗೆ ಪರಿವರ್ತನೆ ತಂತ್ರಾಂಶ
೭. ಈ ವರದಿಯನ್ನು ಆಧರಿಸಿ ಜಾಲತಾಣ ಶಿಷ್ಟತೆ, ಸುಲಭಗ್ರಾಹ್ಯತೆ ಕುರಿತು ರೂಪಿಸಿ ಅನುಮೋದಿತವಾದ ನೀತಿ ಸಂಹಿತೆಯ ಸಂಪೂರ್ಣ ಪಠ್ಯ
೮. ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳು ಜಾಲತಾಣ ವಿನ್ಯಾಸ ಮಾಡುವಾಗ / ನವೀಕರಿಸುವಾಗ ಅನುಸರಿಸಬೇಕಾದ ತಂತ್ರಾಂಶ ಶಿಷ್ಟತೆಯನ್ನು ರೂಪಿಸಿ ಪ್ರಕಟಿಸುವುದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಇ-ಆಡಳಿತ ಇಲಾಖೆಯ ಸಹಯೋಗದೊಂದಿಗೆ ನಿರ್ವಹಿಸಬೇಕಾದ ಪ್ರಮುಖ ಕೆಲಸವಾಗಿದೆ. ಭಾರತ ಸರ್ಕಾರವು ನೀಡುವ ಶಿಷ್ಟತೆ ಕುರಿತ ಜಾಲತಾಣ ಕೊಂಡಿ: http://guidelines.gov.in
೯. ಕರ್ನಾಟಕ ಸರ್ಕಾರದ ಕಚೇರಿಗಳಲ್ಲಿ ಬಳಸಬಹುದಾದ ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳ ಪಟ್ಟಿ
೧೦. ಪ್ರತಿಯೊಂದೂ ಜಾಲತಾಣವು ಸಾರ್ವಜನಿಕರಿಗೆ ನೀಡಬೇಕಾದ ಜಾಲತಾಣ ಪಠ್ಯ/ಫಾಂಟ್ ಕುರಿತ ಸೂಚನೆಗಳ ಕಡತ
೨. ಜ್ಞಾನ ನೀಡಿಕೆಯ ಕೊಂಡಿಗಳು: ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಕುರಿತ ಪುಟ, ಕನ್ನಡ ಮುಕ್ತಜ್ಞಾನ ತಾಣ ಇದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಿರ್ಣಯಿಸಬಹುದಾಗಿದೆ. ಹೀಗೆ ಎಲ್ಲಾ ತಾಣಗಳಲ್ಲೂ ಇರಬೇಕಾದ ಸಾಂಕೇತಿಕ ಪಟ್ಟಿ ಹೀಗಿದೆ:
೧. ಕನ್ನಡ ಕಲಿಕೆಯ ಆಪ್‌ಗಳು, ಕೋರ್ಸ್‌ಗಳು, ಪಠ್ಯಪುಸ್ತಕಗಳು
೨. ಕನ್ನಡ ಭಾಷೆಯ ವಿವಿಧ ಆನ್‌ಲೈನ್ ನಿಘಂಟುಗಳು
೩. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಾಲತಾಣದ ಕೊಂಡಿ
೪. ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯು ರೂಪಿಸಿದ ಕನ್ನಡ ತಂತ್ರಾಂಶಗಳ ಪಟ್ಟಿ
೫. ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳ ಬಳಕೆ
೧. ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳನ್ನು ಬಳಸಲು ರಾಜ್ಯ ಸರ್ಕಾರವು ಆದೇಶಿಸುವುದು ಪ್ರತ್ಯೇಕವಾದ ಕಾರ್ಯವಾಗಿದ್ದರೂ, ಈ ವರದಿಯಲ್ಲಿ ಈ ಶಿಫಾರಸನ್ನು ಸೇರಿಸಿರುವುದಕ್ಕೆ ಬಲವಾದ ಕಾರಣವಿದೆ: ಬಹ್ವಂಶ ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳ ಆದೇಶ ಪಟ್ಟಿಯನ್ನು (ಮೆನ್ಯು) ಕನ್ನಡಕ್ಕೆ ದೇಸೀಕರಣ ಮಾಡಬಹುದು. ಇದರಿಂದ ಸರ್ಕಾರಿ ಕಚೇರಿಗಳಲ್ಲಿ ಇಂಗ್ಲಿಶ್ ತಿಳಿಯದವರೂ ಕನ್ನಡದಲ್ಲೇ ಎಲ್ಲ ತಂತ್ರಾಂಶಗಳ ಆಯ್ಕೆಗಳನ್ನು ಅರಿಯಬಹುದು ಮತ್ತು ಒಟ್ಟಾರೆಯಾಗಿ ಕನ್ನಡದ ವಾತಾವರಣವನ್ನು ಕಂಪ್ಯೂಟರುಗಳ ಒಳಗೂ ನಿರ್ಮಿಸಬಹುದು. ಈ ಕುರಿತ ಒಂದು ಮಾರ್ಗದರ್ಶಿ ಪಟ್ಟಿಯನ್ನು ಇಲ್ಲಿ ಕೊಡಲಾಗಿದ್ದು ಇದನ್ನು ಕಾಲಕಾಲಕ್ಕೆ ಪರಿಷ್ಕರಿಸಬಹುದಾಗಿದೆ.
೨. ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳಲ್ಲಿ ಕನ್ನಡದ ಅಕ್ಷರಜೋಡಣೆ ಸಂದರ್ಭದಲ್ಲಿ ತಂತ್ರಾಂಶವೇ ಪದಗಳ ಬಗ್ಗೆ ಮುನ್ಸೂಚನೆ ನೀಡುವುದರಿಂದ ಅಕ್ಷರ ಜೋಡಣೆಯ ವೇಗವೂ ಹೆಚ್ಚುತ್ತದೆ. ಅಲ್ಲದೆ ಸರ್ಕಾರದ ಆಡಳಿತ ಪದಕೋಶ, ಕನ್ನಡ ನಿಘಂಟು ಮುಂತಾದವುಗಳನ್ನು ಈ ತಂತ್ರಾಂಶಗಳ ಒಳಗೆ ಮುಕ್ತವಾಗಿ ಮತ್ತು ನಿರ್ಬಂಧವಿಲ್ಲದೆ ಅಳವಡಿಸಲು ಅವಕಾಶ ಇರುವುದರಿಂದ ಮುಂದಿನ ದಿನಗಳಲ್ಲಿ ಸಂಪೂರ್ಣ ಕನ್ನಡ ನಿಘಂಟು ನೆರವು, ವ್ಯಾಕರಣ ತಿದ್ದುಪಡಿ, ಕಾಗುಣಿತ ತಿದ್ದುಪಡಿ – ಇವುಗಳೆಲ್ಲವನ್ನೂ ಒಳಗೊಂಡ ತಂತ್ರಾಂಶ ಪರಿಸರವನ್ನು ನಿರ್ಮಿಸಬಹುದು.
ತಂತ್ರಾಂಶದ ಕೆಲಸ |
ಪಾವತಿಸಬೇಕಾದ ತಂತ್ರಾಂಶ |
ಸ್ವತಂತ್ರ / ಮುಕ್ತ ತಂತ್ರಾಂಶ |
ಪದ ಸಂಸ್ಕಾರಕಗಳು | ಮೈಕ್ರೋಸಾಫ್ಟ್ ಆಫೀಸ್ (ವರ್ಡ್, ಎಕ್ಸೆಲ್, ಪವರ್‌ಪಾಯಿಂಟ್ ಇತ್ಯಾದಿ) | ಲಿಬ್ರೆ ಆಫೀಸ್, ಓಪನ್ ಆಫೀಸ್ www.libreoffice.org www.openoffice.org |
ಚಿತ್ರ ಸಂಪಾದನೆ | ಅಡೋಬ್ ಫೋಟೋಶಾಪ್ | ಗಿಂಪ್, ಕ್ರಿಟಾ
www.gimp.org |
ಗ್ರಾಫಿಕ್ ವಿನ್ಯಾಸಗಳು | ಕೋರೆಲ್ ಡ್ರಾ | ಇಂಕ್‌ಸ್ಕೇಪ್
inkscape.org |
ಲೆಕ್ಕಪತ್ರ ನಿರ್ವಹಣೆ | ಟ್ಯಾಲಿ | ಗ್ನು ಖಾತಾ
www.gnukhata.in |
ಪುಸ್ತಕ ವಿನ್ಯಾಸ / ಪೇಜಿನೇಶನ್ | ಅಡೋಬ್ ಇನ್‌ಡಿಸೈನ್ | ಸ್ಕ್ರೈಬಸ್
www.scribus.net |
ಆನ್‌ಲೈನ್ ಶಿಕ್ಷಣ ವ್ಯವಸ್ಥೆಗೆ | ಬಗೆಬಗೆಯ ತಂತ್ರಾಂಶಗಳಿವೆ | ಮೂಡಲ್ ಸಿಎಂಎಸ್
www.moodle.org |
೬. `ಕಣಜ’ (www.kanaja.in) ), ಭಾರತವಾಣಿ (kannada.bharatavani.in ) ಮುಂತಾದ ಜ್ಞಾನವರ್ಧನೆಯ ಕನ್ನಡ ಜಾಲತಾಣಗಳು.
೫. ಲಿಪ್ಯಂತರಣದ ಮೂಲಕ ಕನ್ನಡೇತರರಿಗೂ ಅನುಕೂಲ
೧. ರಾಜ್ಯ ಸರ್ಕಾರದ ಜಾಲತಾಣಗಳು ಕೇವಲ ಕನ್ನಡದಲ್ಲೇ ಇರಬೇಕೆಂಬುದು ಅವಶ್ಯಕವಾದರೂ, ಕನ್ನಡ ಲಿಪಿ ಅರಿಯದ, ಆದರೆ ಕನ್ನಡ ಭಾಷೆಯನ್ನು ಬಲ್ಲ ಸಾರ್ವಜನಿಕರಿಗೆ ಈ ತಾಣಗಳನ್ನು ಬಳಕೆಸ್ನೇಹಿಯಾಗಿ ಮಾಡುವುದೂ ಸರ್ಕಾರದ ಕರ್ತವ್ಯ. ಇಂದಿನ ಯುನಿಕೋಡ್ ಪಠ್ಯದ ವ್ಯವಸ್ಥೆಯಲ್ಲಿ ಈ ಸಮಸ್ಯೆಯನ್ನು ಅತಿ ಸುಲಭವಾಗಿ ಬಗೆಹರಿಸಬಹುದು. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇ-ಆಡಳಿತ ಇಲಾಖೆ, ಮಾಹಿತಿ ತಂತ್ರಜ್ಞಾನ ಇಲಾಖೆ – ಈ ಇಲಾಖೆಗಳು ಪರಸ್ಪರ ಸಮನ್ವಯದ ಮೂಲಕ ಆನ್‌ಲೈನ್ ಭಾರತೀಯ ಭಾಷಾ ಲಿಪ್ಯಂತರಣ ವ್ಯವಸ್ಥೆಯನ್ನು ರೂಪಿಸಿಕೊಳ್ಳಬಹುದು. ಪಠ್ಯಗಳನ್ನು ಒಂದು ಭಾರತೀಯ ಲಿಪಿಯಿಂದ ಇನ್ನೊಂದು ಲಿಪಿಗೆ ಪರಿವರ್ತನೆ ಮಾಡುವ ಲಿಪ್ಯಂತರಣ ತಂತ್ರಾಂಶಗಳು ಈಗಾಗಲೇ ಮುಕ್ತವಾಗಿ / ಖಾಸಗಿಯಾಗಿ / ಸಮುದಾಯಗಳಲ್ಲಿ ಲಭ್ಯವಿವೆ. ಈ ತಂತ್ರಾಂಶಗಳಲ್ಲಿ ಇರಬಹುದಾದ ಲಿಪ್ಯಂತರಣದ ಚಿಕ್ಕಪುಟ್ಟ ಲೋಪಗಳನ್ನು ಸರಿಪಡಿಸಿದರೆ, ಕರ್ನಾಟಕದ ಎಲ್ಲ ಜಾಲತಾಣಗಳಲ್ಲೂ ಈ ವ್ಯವಸ್ಥೆಯನ್ನು ನೀಡಬಹುದು. ಇದರ ಪ್ರಕಾರ, ಜಾಲತಾಣಗಳಲ್ಲಿ ಕನ್ನಡದ ಲಿಪಿ ಇರುವ ಕಡೆಗಳಲ್ಲಿ ಅನ್ಯ ಭಾಷಿಗರು ತಮ್ಮ ಆಯ್ಕೆಯ ಭಾಷೆಯ ಲಿಪಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಅನ್ಯ ಭಾಷಿಗರಿಗೆ ಕನ್ನಡವನ್ನು ಕಲಿಸುವ ಪರೋಕ್ಷ ವಿಧಾನವೂ ಆಗುತ್ತದೆ.
೬. ಆನ್‌ಲೈನ್ ಸ್ವಯಂ ಅನುವಾದದ ಯತ್ನ
೧. ಜಾಲತಾಣಗಳ ಪುಟಗಳನ್ನು ಅಲ್ಲಲ್ಲೇ ಅನುವಾದಿಸಲು ಅನುಕೂಲ ಮಾಡಿಕೊಡುವ ‘ಗೋ ಟ್ರಾನ್ಸ್‌ಲೇಟ್ ಎಂಬ ಕ್ರೋಮ್ ವಿಸ್ತರಣಾ ತಂತ್ರಾಂಶವನ್ನು ಭಾರತ ಸರ್ಕಾರದ ಸಂಸ್ಥೆಯಾದ ಸಿ-ಡ್ಯಾಕ್ ಅಭಿವೃದ್ಧಿಪಡಿಸಿದೆ ((https://www.cdac.in/index.aspx?id=ev_corp_gist_go_translate). ಈ ತಂತ್ರಾಂಶವು ಕನ್ನಡದ ಮಟ್ಟಿಗೆ ಕೆಲಸ ಮಾಡುವುದೇ ಎಂದು ಪರಿಶೀಲಿಸಿ ಇದನ್ನೂ ಕೊಡಮಾಡಿದರೆ ಕನ್ನಡದ ಎಲ್ಲ ಪಠ್ಯಗಳನ್ನೂ ಅವರವರ ಆಯ್ಕೆಯ ಭಾಷೆಗೆ ಅನುವಾದಿಸಿಕೊಂಡು ಓದುವುದು ಸಾಧ್ಯವಿದೆ.
೭. ಜಾಲತಾಣಗಳಲ್ಲೇ ಕನ್ನಡ ಅಕ್ಷರ ಜೋಡಣೆ ವ್ಯವಸ್ಥೆ
೧. ಜಾಲತಾಣಕ್ಕೆ ಭೇಟಿ ಕೊಟ್ಟ ಸಾರ್ವಜನಿಕರು ಯಾವುದೇ ಅರ್ಜಿ ಸಲ್ಲಿಕೆ (ದೂರು, ಹಿಮ್ಮಾಹಿತಿ, ಅರ್ಜಿ ಇತ್ಯಾದಿ) ಮಾಡುವಾಗ ಕನ್ನಡದಲ್ಲೇ ಅಕ್ಷರ ಜೋಡಿಸುವ ಅನುಕೂಲವು ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಇಲ್ಲವೇ ಇಲ್ಲ ಎಂದರೂ ತಪ್ಪಿಲ್ಲ. ಇಂಥ ತೇಲು-ಯುನಿಕೋಡ್-ವರ್ಚುಯಲ್-ಕನ್ನಡ/ಬಹುಭಾಷಾ-ಆನ್‌ಲೈನ್ ಕೀಲಿಮಣೆಯನ್ನು ಕೂಡಾ ಸಿಡ್ಯಾಕ್ ರೂಪಿಸಿದೆ. ಆದರೆ ಇದರಲ್ಲಿ ಕೇವಲ ಇನ್‌ಸ್ಕ್ರಿಪ್ಟ್ ಕೀಲಿಮಣೆ ಇರುವುದು ನವ ಗಣಕ ಸಾಕ್ಷರರಿಗೆ ಅನುಕೂಲಕರವಾಗಿಲ್ಲ. ಆದ್ದರಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ಕೀಲಿಮಣೆಯ ಮೂಲಸಂಕೇತ ಕಡತವನ್ನು ಪಡೆದು ಅದನ್ನು ಫೋನೆಟಿಕ್ / ಕಗಪ ಕೀಲಿಮಣೆಗೆ ತಕ್ಕಂತೆ ರೂಪಿಸಬೇಕು. ಈ ಬಗ್ಗೆಯೂ ಕನ್ನಡ ಐಟಿ ಕಾರ್ಯಕರ್ತರೂ ಕೆಲವು ತಂತ್ರಾಂಶಗಳನ್ನು ರೂಪಿಸಿದ್ದು ಅವುಗಳನ್ನು ವಿಶೇಷವಾಗಿ ಕನ್ನಡದ ಅಕ್ಷರ ಜೋಡಣೆಯು ಬಳಕೆದಾರ ಸ್ನೇಹಿಯಾಗಿದೆ. ಈ ಸಮುದಾಯ ಯತ್ನಗಳಿಂದ ರೂಪಿತವಾಗಿರುವುದನ್ನೂ ಸೂಕ್ತವಾಗಿ ಅಳವಡಿಸಿಕೊಂಡರೆ ಯಾವುದೇ ಜಾಲತಾಣದಲ್ಲೂ ಯಾರು ಬೇಕಾದರೂ, ತಕ್ಷಣವೇ ಕನ್ನಡದಲ್ಲೇ ಮಾಹಿತಿ ಸಲ್ಲಿಸಬಹುದು. ಕರ್ನಾಟಕ ಸರ್ಕಾರದ ಅಡಿಯಲ್ಲಿರುವ ಎಲ್ಲ ಜಾಲತಾಣಗಳಲ್ಲೂ ಈ ಬಗೆಯ ತೇಲು ಕೀಲಿಮಣೆಗಳ ವ್ಯವಸ್ಥೆಯನ್ನು ಕಲ್ಪಿಸತಕ್ಕದ್ದು.
೮. ಸಮಾಜತಾಣಗಳಲ್ಲಿ ಕನ್ನಡದ ಬಳಕೆ
೧. ಇದು ಸಮಾಜತಾಣಗಳ ಕಾಲ. ಹಲವು ಇಲಾಖೆಗಳು ಸಾರ್ವಜನಿಕ ಸಂಪರ್ಕ, ಗ್ರಾಹಕ ಸಂವಹನದ ದೃಷ್ಟಿಯಿಂದ ಫೇಸ್‌ಬುಕ್, ಟ್ವಿಟರ್ ಮುಂತಾದ ಸಮಾಜತಾಣಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿವೆ. ವಿಶೇಷವಾಗಿ ಸಂಚಾರ ಇಲಾಖೆ, ಪೊಲೀಸ್ ಇಲಾಖೆಗಳ ಸಮಾಜತಾಣಗಳು ತುಂಬಾ ಜನಪ್ರಿಯವಾಗಿವೆ. ಸಾರ್ವಜನಿಕರು ಫೇಸ್‌ಬುಕ್ ಮೂಲಕವೂ ದೂರು ಸಲ್ಲಿಸಿ ಪರಿಹಾರ ಪಡೆದ ಉದಾಹರಣೆಗಳೂ ಇವೆ.
೨. ಈ ಹಿನ್ನೆಲೆಯಲ್ಲಿ ಸಮಾಜತಾಣಗಳಲ್ಲಿ ಕನ್ನಡದಲ್ಲೇ ಸಂದೇಶಗಳನ್ನು ಪ್ರಕಟಿಸುವುದಕ್ಕೆ ಆದ್ಯತೆ ನೀಡಬೇಕು. ಸಮಾಜತಾಣದ ಸಂದೇಶಗಳು ಕನ್ನಡೇತರರಿಗೂ ಭಾರೀ ಪ್ರಮಾಣದಲ್ಲಿ ಅನ್ವಯವಾಗುವಂತಿದ್ದರೆ (ಸಂಚಾರ ಇಲಾಖೆ, ಪೊಲೀಸ್ ಇಲಾಖೆ), ಸದಾಕಾಲವೂ ತುರ್ತು ಸಂದೇಶಗಳನ್ನು ಬೀರುವ ಅವಶ್ಯಕತೆ ಇದ್ದರೆ ಮಾತ್ರ ಇಂಗ್ಲಿಶಿನಲ್ಲಿ ಸಂದೇಶಗಳನ್ನು ಪ್ರಕಟಿಸಬಹುದು. ಸರ್ಕಾರದ ವಿವಿಧ ಸಾರ್ವಜನಿಕ ಸೇವೆಗಳನ್ನು ಸಹಜವಾಗಿ ಪ್ರಕಟಿಸುವ ಎಲ್ಲ ಜಾಲತಾಣಗಳ ಸಮಾಜತಾಣಗಳಲ್ಲಿ ಕನ್ನಡದಲ್ಲೇ ಸಂದೇಶ ಇರಬೇಕು. ಈ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಒಂದು ಪಟ್ಟಿಯನ್ನು ರೂಪಿಸಿ ಕೇವಲ ಕನ್ನಡ, ಕನ್ನಡ-ಇಂಗ್ಲಿಶ್ ದ್ವಿಭಾಷಾ ಸಂದೇಶ ಮತ್ತು ಕೇವಲ ಇಂಗ್ಲಿಶ್ ಸಂದೇಶ – ಹೀಗೆ ಯಾವ ಸಮಾಜತಾಣವು ಯಾವ ಸೂತ್ರ ಅನುಸರಿಸಬಹುದು ಎಂಬುದನ್ನು ಪಟ್ಟೀಕರಿಸಿ ಪ್ರಕಟಿಸಬಹುದು. ಈ ಪಟ್ಟಿಯನ್ನು ಅಗತ್ಯಕ್ಕೆ ಅನುಸಾರವಾಗಿ, ಸಮರ್ಥನೀಯ ಕಾರಣಗಳಿದ್ದರೆ ಬದಲಾಯಿಸಬಹುದು.
೩. ಸಮಾಜತಾಣಗಳನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬ ಬಗ್ಗೆ ಭಾರತ ಸರ್ಕಾರವು ನೀಡಿರುವ ಮಾರ್ಗದರ್ಶಿ ಸೂತ್ರಗಳನ್ನು (http://meity.gov.in/writereaddata/files/Approved%20Social%20Media%20Framework%20and%20Guidelines%20_2_.pdf) ಅನುಸರಿಸಬೇಕು.
೯. ಮಾಹಿತಿ ಹಕ್ಕು ಕಾಯ್ದೆ ಮಾಹಿತಿಗಳು
೧. ರಾಜ್ಯ ಸರ್ಕಾರದ ಎಲ್ಲ ಜಾಲತಾಣಗಳಲ್ಲೂ ಸೂಕ್ತವಾಗಿ ತತ್‌ಸಾಮಯಿಕಗೊಳಿಸಿದ ಮಾಹಿತಿ ಹಕ್ಕಿನಡಿ ನೀಡುವ ಮಾಹಿತಿಗಳನ್ನು ಯಾವುದೇ ವಿಳಂಬ ಮಾಡದೇ ಸೂಕ್ತವಾಗಿ, ಪ್ರಮುಖವಾಗಿ ಪ್ರಕಟಿಸಬೇಕು. ಈ ಮಾಹಿತಿಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ಮತ್ತು ಪರ್ಯಾಯ ಮಾಹಿತಿಯಾಗಿ ಇಂಗ್ಲಿಶಿನಲ್ಲಿ ಕೊಡಬಹುದು.
೧೦. ಕನ್ನಡದಲ್ಲೇ ನಾಗರಿಕ ಸನ್ನದು
೧. ಹಲವು ಜಾಲತಾಣಗಳಲ್ಲಿ ನಾಗರಿಕ ಸನ್ನದು ದಾಖಲೆಯನ್ನು ಪ್ರಕಟಿಸಿದ್ದಾರೆ. ಆದರೆ ಬಹುತೇಕ ತಾಣಗಳಲ್ಲಿ ಇದಿಲ್ಲ. ನಾಗರಿಕರಿಗೆ ತಮ್ಮ ಕಚೇರಿಯು ನೀಡುವ ಸೇವೆ ಮತ್ತಿತರೆ ಮಾಹಿತಿಗಳ ಬಗ್ಗೆ ಒಂದು ಸಾಮಾಜಿಕ, ಕಾನೂನಾತ್ಮಕ ವಾಗ್ದಾನವಾಗಿರುವ ಈ ನಾಗರಿಕ ಸನ್ನದನ್ನು ಕನ್ನಡದಲ್ಲಿ ಪ್ರಕಟಿಸುವುದನ್ನು ಕಡ್ಡಾಯ ಮಾಡಬೇಕು. ಅವಶ್ಯಕತೆ ಇದ್ದಲ್ಲಿ ಇದನ್ನು ಇಂಗ್ಲಿಶಿನಲ್ಲಿಯೂ ಪರ್ಯಾಯ ಮಾಹಿತಿಯಾಗಿ ಪ್ರಕಟಿಸಬಹುದು.
೧೧.ಕನ್ನಡದಲ್ಲೇ ಈಮೈಲ್ ಬಳಕೆ
೧. ಜಾಲತಾಣಗಳ ಮೂಲಕ ವ್ಯವಹರಿಸುವಾಗ ಮತ್ತು ಸಾಮಾನ್ಯ ಈಮೈಲ್ ಸಂವಹನ ನಡೆಸುವಾಗ ಎಲ್ಲವೂ ಮುದ್ರಿತ ದಾಖಲೆಗಳಲ್ಲಿ ಅನುಸರಿಸಬೇಕಾದ ನಿಯಮದಂತೆಯೇ ಕನ್ನಡದಲ್ಲೇ ವ್ಯವಹರಿಸಬೇಕು.
೧೨. ಕನ್ನಡದಲ್ಲಿ ಟೆಂಡರ್‌ಗಳು
೧. ಸರ್ಕಾರಿ ತಾಣಗಳಲ್ಲಿ ಟೆಂಡರ್ ಪ್ರಕಟಣೆಯು ಒಂದು ಮುಖ್ಯ ಚಟುವಟಿಕೆ. ಹಲವಾರು ತಾಣಗಳು ಸಕ್ರಿಯವಾಗಿದ್ದರೆ ಅದಕ್ಕೆ ಟೆಂಡರ್‌ಗಳ ಪ್ರಕಟಣೆಯೇ ಕಾರಣ ಎಂಬ ಮಾತೂ ಇದೆ. ಸರ್ಕಾರಕ್ಕೆ ವಿವಿಧ ಬಗೆಯ ಉತ್ಪನ್ನ ಮತ್ತು ಸೇವೆಗಳನ್ನು ನೀಡುವವರಿಗೆ ಈ ಪುಟ ತುಂಬಾ ಮುಖ್ಯ. ಈಗ ರಾಜ್ಯ ಸರ್ಕಾರವೂ ಇ-ಪ್ರೊಕ್ಯೂರ್‌ಮೆಂಟ್‌ನ್ನು ಜಾರಿಗೊಳಿಸಿದೆ (https://eproc.karnataka.gov.in/eportal/index.seam). ಆದರೆ ಇಲ್ಲಿ ಕನ್ನಡದ ಅನುಷ್ಠಾನ ತುಂಬಾ ತೊಡಕಿನ ಸಂಗತಿಯೂ ಹೌದು. ಟೆಂಡರ್‌ಗಳನ್ನು ಕನ್ನಡೇತರರೂ ಓದಬೇಕಾಗುತ್ತದೆ. ಇಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸೂಕ್ತ ಅಧ್ಯಯನ ನಡೆಸಿ ಯಾವ ಬಗೆಯ ಟೆಂಡರ್‌ಗಳನ್ನು ದ್ವಿಭಾಷೆ (ಕನ್ನಡ – ಇಂಗ್ಲಿಶ್)ನಲ್ಲಿ ಕೊಡಬೇಕು ಎಂದು ನಿರ್ಧರಿಸಿ ಪಟ್ಟೀಕರಣ ಮಾಡಬೇಕು. ಇಂಥ ಟೆಂಡರ್‌ಗಳನ್ನು ಸಾರ್ವಜನಿಕ ಮಾಹಿತಿಗಳ ನಡುವೆ ಪ್ರಕಟಿಸದೆಯೇ ಪ್ರತ್ಯೇಕವಾಗಿ ಪ್ರಕಟಿಸುವುದು ಕಡ್ಡಾಯ.
೨. ಜಾಲತಾಣವನ್ನು ರೂಪಿಸುವ ಸಂಸ್ಥೆಗಳಲ್ಲಿ ಕನ್ನಡ ಬಲ್ಲ ಕನ್ನಡಿಗ ತಂತ್ರಜ್ಞರು ಇದ್ದಾರೆಯೆ? ಕನ್ನಡದಲ್ಲಿ ಪಠ್ಯವನ್ನು ಓದಬಲ್ಲ, ಕನಿಷ್ಠಪಕ್ಷ ಕನ್ನಡದ ಶೀರ್ಷಿಕೆಗಳನ್ನು ಡಿಟಿಪಿ ಮಾಡಬಲ್ಲ ಕನ್ನಡಿಗರು ಇದ್ದಾರೆಯೆ? ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಕನ್ನಡ ಜಾಲತಾಣ ರೂಪಿಸುವ ಹಿನ್ನೆಲೆಯಲ್ಲಿ ಸರ್ಕಾರವು ಕನ್ನಡಿಗ ತಜ್ಞರಿರುವ ಸೇವಾ ನೀಡಿಕೆ ಸಂಸ್ಥೆಗಳಿಗೆ ಆದ್ಯತೆ ನೀಡುವುದನ್ನು ಪರಿಶೀಲಿಸಬಹುದು.
೨. ಶಿಷ್ಟತೆ ಹೊಂದಿರುವ ಏಕರೂಪ ಮಾಹಿತಿ ವ್ಯವಸ್ಥೆ
೧೩. ಸಿಎಂಎಸ್ ಶಿಕ್ಷಣ, ತರಬೇತಿ
೧. ರಾಜ್ಯ ಸರ್ಕಾರದ ಜಾಲತಾಣಗಳನ್ನು ನ್ಯಾಶನಲ್ ಇನ್‌ಫಾರ್ಮಾಟಿಕ್ಸ್ ಸೆಂಟರ್‌ನ ಪ್ರಾದೇಶಿಕ ವಿಭಾಗ ಅಥವಾ ಖಾಸಗಿ ಜಾಲತಾಣ ವಿನ್ಯಾಸ ಸಂಸ್ಥೆಗಳು ರೂಪಿಸುತ್ತವೆ. ಈವರೆಗೂ ಎಚ್‌ಟಿಎಂಎಲ್ ಆಧಾರಿತ ಮತ್ತು ಪ್ರತಿಯೊಂದೂ ಮಾಹಿತಿಗೂ ಒಂದೊಂದು ಪುಟವನ್ನು ರೂಪಿಸಿ ಕೊಂಡಿ ಹಾಕುವ ಸಾಂಪ್ರದಾಯಿಕ ವ್ಯವಸ್ಥೆಯು ಚಾಲ್ತಿಯಲ್ಲಿರುವುದು ಕಂಡುಬಂದಿದೆ. ಆದರೆ ಈಗ ಲ್ಯಾಂಪ್ (ಲಿನಕ್ಸ್, ಅಪಾಚೆ, ಎಂಎಸ್‌ಕ್ಯೂಎಲ್, ಪಿಎಚ್‌ಪಿ) ಆಧಾರಿತ , ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳೂ ಆಗಿರುವ ವಸ್ತುವಿಷಯ ನಿರ್ವಹಣಾ ತಂತ್ರಾಂಶಗಳು (ಕಂಟೆಂಟ್ ಮ್ಯಾನೇಜ್‌ಮೆಂಟ್ ಸಾಫ್ಟ್‌ವೇರ್‌ಗಳು – ಸಿಎಂಎಸ್) ವಿಶ್ವದಾದ್ಯಂತ ಜನಪ್ರಿಯವಾಗಿವೆ. ಈ ತಂತ್ರಜ್ಞಾನವು ಹೆಚ್ಚಿನ ಸುರಕ್ಷತೆಯನ್ನು ಹೊಂದಿರುವುದನ್ನೂ ಸಮೀಕ್ಷೆಗಳು ಖಚಿತಪಡಿಸಿವೆ. ಈ ಕುರಿತು ಒಂದು ಸ್ವತಂತ್ರ ತಂತ್ರಾಂಶ ಪಟ್ಟಿಯನ್ನೇ ರೂಪಿಸಿ ಪ್ರಕಟಿಸಬಹುದು.
೨. ವರ್ಡ್‌ಪ್ರೆಸ್, ಝೂಮ್ಲಾ, ದ್ರುಪಲ್ ಇತ್ಯಾದಿ ಹೆಸರುಗಳಲ್ಲಿರುವ ಈ ತಂತ್ರಜ್ಞಾನವು ಸಾಂಪ್ರದಾಯಿಕ ಜಾಲತಾಣಗಳಿಗಿಂತ ಹಲವು ಪಟ್ಟು ಹೆಚ್ಚು ದಕ್ಷ. ಉದಾಹರಣೆಗೆ ಎಚ್‌ಟಿಎಂಎಲ್ ಪುಟಗಳ ವ್ಯವಸ್ಥೆಯಲ್ಲಿ ಒಂದೊಂದು ಪ್ರಕಟಣೆಯನ್ನೂ ಪ್ರತ್ಯೇಕವಾಗಿ ರೂಪಿಸಿ ಅದನ್ನು ನಿರ್ದಿಷ್ಟವಾದ ಪುಟಕ್ಕೆ ಜೋಡಿಸುವ ಕೆಲಸವನ್ನು ನಿಪುಣ ತಂತ್ರಜ್ಞರೇ ಮಾಡಬೇಕಾಗುತ್ತದೆ. ಇದಕ್ಕಾಗಿ ಹಲವು ಇಲಾಖೆಗಳು ಬಾಹ್ಯ ಜಾಲತಾಣ ನಿರ್ವಾಹಕರನ್ನೇ ಅವಲಂಬಿಸಿವೆ. ಈ ಸನ್ನಿವೇಶವನ್ನು `ವೆಂಡರ್ ಲಾಕ್‌ಡ್ ಎಂದು ಕರೆಯುತ್ತಾರೆ. ಒಂದೊಂದು ಪುಟವನ್ನು ಪ್ರಕಟಿಸುವಾಗ, ಒಂದೊಂದು ತಪ್ಪನ್ನೂ ತಿದ್ದುವಾಗ ಇಲಾಖೆಗಳು ಈ ನಿರ್ವಾಹಕರನ್ನೇ ಬೇಡಿಕೊಳ್ಳುವ ವ್ಯವಸ್ಥೆಯಿಂದಾಗಿಯೇ ಸರ್ಕಾರದ ಹಲವು ತುರ್ತು ಪ್ರಕಟಣೆಗಳೂ ಅತೀ ವಿಳಂಬವಾಗಿ ಪ್ರಕಟವಾಗುತ್ತಿವೆ. ಕೆಲವು ಜಾಲತಾಣಗಳನ್ನು ಈ ಸೇವಾ ನೀಡಿಕೆದಾರರು ಕೀಲಿ ಹಾಕಿ ರಹಸ್ಯ ಪದವನ್ನೂ ಇಟ್ಟುಕೊಂಡಿರುವುದನ್ನು ಪ್ರಾಧಿಕಾರವೇ ಗಮನಿಸಿರುವುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.
೩. ಆದರೆ ಸ್ವತಂತ್ರ ಸಿಎಂಎಸ್‌ಗಳು ಈ ಬಗೆಯ ಬಂಧನದಿಂದ ಇಲಾಖೆಗಳಿಗೆ ಮುಕ್ತಿ ನೀಡುತ್ತವೆ. ಹೀಗೆ ತಂತ್ರಜ್ಞರಲ್ಲದವರೂ ಕೆಲವೇ ಗಂಟೆಗಳಲ್ಲಿ ಕಲಿಯಬಹುದಾದ ಜಾಲತಾಣ ನಿರ್ವಹಣೆಯ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ತರಬೇತಿಗಳನ್ನು ಏರ್ಪಡಿಸಬೇಕು. (ಈ ತರಬೇತಿಗಳಲ್ಲಿ ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳ ಬಳಕೆಯ ಬಗ್ಗೆಯೂ ವಿಷಯಗಳನ್ನು ಸೇರಿಸಿಕೊಳ್ಳಬಹುದು). ಈ ತರಬೇತಿಗಳಿಗೆ ಕನ್ನಡ ಭಾಷೆಯನ್ನು ಬಲ್ಲ ಸಿಎಂಎಸ್ (ವರ್ಡ್‌ಪ್ರೆಸ್, ಝೂಮ್ಲಾ, ದ್ರುಪಲ್ ಇತ್ಯಾದಿ) ತಜ್ಞರನ್ನು ಕರೆಸಿ ತರಬೇತಿ ನೀಡಬೇಕು. ಈ ಕುರಿತ ಹಲವು ಮಾರ್ಗದರ್ಶಿ ಪುಸ್ತಕಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಇ-ಆಡಳಿತದ ಧನಸಹಾಯದೊಂದಿಗೆ ಪ್ರಕಟಿಸಬೇಕು.
೧೪. ದತ್ತಾಂಶ ನಿರ್ವಹಣೆ ಮತ್ತು ಡಾಟಾ ವಿಜುಯಲೈಸೇಶನ್
೧. ದತ್ತಾಂಶ ನಿರ್ವಹಣೆ ಎಂಬುದು ಈಗ ವಿಶ್ವದಾದ್ಯಂತ ಹೆಚ್ಚಿನ ಮಾನ್ಯತೆ ಪಡೆದ ಆನ್‌ಲೈನ್ ಚಟುವಟಿಕೆ. ಭಾರತ ಸರ್ಕಾರವೂ ಈಗ ದತ್ತಾಂಶಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿ ಕೊಡುವ ಪ್ರಕ್ರಿಯೆಯನ್ನು ಆರಂಭಿಸಿದೆ. ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಹೆಚ್ಚಾಗಿ ಕಾರ್ಯಪ್ರವೃತ್ತವಾಗಿಲ್ಲ. ಕರ್ನಾಟಕ ಸರ್ಕಾರವೂ ಮುಕ್ತ ದತ್ತಾಂಶ ಅಭಿಯಾಣದಲ್ಲಿ ಪಾಲ್ಗೊಳ್ಳಬೇಕಿದೆ. ಕೇವಲ ಪಿಡಿಎಫ್ ಆಧಾರಿತ ಪುಸ್ತಕಗಳಲ್ಲಿ ಇರುವ ಅಂಕಿ ಅಂಶಗಳನ್ನು ಸಾರ್ವಜನಿಕರು ವಿಶ್ಲೇಷಿಸುವುದು ಕಷ್ಟ. ಅಲ್ಲದೆ ಹಲವು ಸಾಮಾಜಿಕ, ಆರ್ಥಿಕ ಸಂಶೋಧನಾ ಸಂಸ್ಥೆಗಳು ಈ ದತ್ತಾಂಶಗಳನ್ನು ತಮ್ಮ ಸಂಶೋಧನೆಗಳಿಗೆ ಬಳಸಿಕೊಂಡು ಅಮೂಲ್ಯವಾದ ಹೊಸ ಫಲಿತಾಂಶಗಳನ್ನು ನೀಡುವ ಸಾಧ್ಯತೆ ಇದೆ. ಸಮುದಾಯಗಳೊಂದಿಗೆ ಅಭ್ಯುದಯ ಕಾರ್ಯಕ್ರಮಗಳನ್ನು ಮಾಡುತ್ತಿರುವ ಸರ್ಕಾರವು ಸಮುದಾಯಗಳೊಂದಿಗೆ ದತ್ತಾಂಶಗಳನ್ನೂ (ಸಾರ್ವಜನಿಕವಾಗಿ ಹಂಚಿಕೊಳ್ಳಬಹುದಾದ) ಹಂಚಿಕೆ ಮಾಡಿಕೊಂಡರೆ ತಪ್ಪಿಲ್ಲ.
೧೫. ಸಂಬಂಧಿಸಿದ ಜಾಲತಾಣಗಳ ಪಟ್ಟಿ
೧. ಸರ್ಕಾರಿ ಜಾಲತಾಣಗಳಲ್ಲಿ ಇರಲೇಬೇಕಾದ ಇನ್ನೊಂದು ಅಂಶವೆಂದರೆ, ಸಂಬಂಧಿತ ಜಾಲತಾಣಗಳ ಕೊಂಡಿಗಳು. ಒಂದೆಡೆ ಮೇಲಿನ ಹಂತದಲ್ಲಿ ಇರುವ ಕಚೇರಿಗಳ ಜಾಲತಾಣಗಳು, ಇನ್ನೊಂದೆಡೆ ಈ ಜಾಲತಾಣವನ್ನು ಪ್ರತಿನಿಧಿಸುವ ಕಚೇರಿಯ ಕೆಳಗಿನ ಹಂತಗಳಲ್ಲಿ ಇರುವ ಕಚೇರಿಗಳ ಜಾಲತಾಣಗಳು – ಹೀಗೆ ಎರಡೂ ದಿಕ್ಕಿನಲ್ಲಿ ಬೆಳೆಯುವ ಪಟ್ಟಿಯನ್ನು ಕೊಡಬೇಕು. ಆಗ ಸಾರ್ವಜನಿಕರಿಗೆ ಪ್ರತಿಯೊಂದೂ ವಿಭಾಗಕ್ಕೆ ಸಂಬಂಧಿಸಿದ ಜಾಲತಾಣಗಳನ್ನು ಒಂದೇ ಹಂತದಲ್ಲಿ ವೀಕ್ಷಿಸುವುದಕ್ಕೆ ಸಾಧ್ಯವಿದೆ.
೨. ಕರ್ನಾಟಕ ಸರ್ಕಾರದ ಮಹಾದ್ವಾರ ಎಂದೇ ಕರೆಯಬಹುದಾದ karnataka.gov.in ನಲ್ಲಿ ಈ ಜಾಲತಾಣಗಳ ಪಟ್ಟಿಯನ್ನು ಮರ-ಕೊಂಬೆ ವಿನ್ಯಾಸದಡಿ (ಇಂಡೆಕ್ಸ್ ಟ್ರೀ) ಕೊಡಬೇಕು. ಈಗಿರುವ ವಿಷಯವಾರು ಪಟ್ಟಿಯನ್ನು ಕೊಡುವುದನ್ನೂ ನಿಲ್ಲಿಸಕೂಡದು.
೧೬. ಸಿಬ್ಬಂದಿಗಳ ಪ್ರವೇಶ ಮತ್ತು ಇತರೆ ಮಾಹಿತಿಗಳು
೧. ಹಲವು ಜಾಲತಾಣಗಳಲ್ಲಿ ಆಯಾ ಕಚೇರಿಯ ಅಧಿಕಾರಿ – ಸಿಬ್ಬಂದಿ ವರ್ಗದವರು ಕೂಡಾ ತಂತಮ್ಮ ಆನ್‌ಲೈನ್ ಕಾರ್ಯಗಳಿಗಾಗಿ ಲಾಗಿನ್ ಆಗಬೇಕಾದ ಅನಿವಾರ್ಯತೆಯೂ ಇರಬಹುದು. ಇಂಥ ಆಡಳಿತಾತ್ಮಕ ಒಳಪ್ರವೇಶದ ಕೊಂಡಿಗಳನ್ನು ಆದಷ್ಟೂ ರಹಸ್ಯವಾಗಿ ಮತ್ತು ಸಂಕೇತಾತ್ಮಕವಾಗಿ (ಎನ್‌ಕ್ರಿಪ್ಟೆಡ್ ಯುಆರ್‌ಎಲ್ / ಹಿಡನ್ ಯುಆರ್‌ಎಲ್) ನೀಡುವುದೇ ಹೆಚ್ಚು ಸೂಕ್ತ. ಈಗ ಇರುವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಹ್ಯಾಕ್ ಮಾಡುವ ಸಾಧ್ಯತೆ ಹೆಚ್ಚಾಗಿದೆ. ರಹಸ್ಯ ಮತ್ತು ಸಂಕೇತಪದಗಳಿರುವ ಪುಟಗಳಿಂದಲೇ ಈ ಸಿಬ್ಬಂದಿ ಪ್ರವೇಶವನ್ನು ನಿರ್ಬಂಧಿಸಿದರೆ, ಅತಿಕ್ರಮ ಪ್ರವೇಶವನ್ನೂ ನಿಯಂತ್ರಿಸಬಹುದು. ಈ ಬಗೆಯ ಪ್ರವೇಶಾವಕಾಶಗಳನ್ನು ಸಾರ್ವಜನಿಕರಿಗೂ ಕಾಣುವಂತೆ ಇಟ್ಟರೆ, ಸಹಜವಾಗಿಯೇ ಅನಧಿಕೃತ ಲಾಗಿನ್ ಯತ್ನಗಳು ನಡೆಯುವ ಸಾಧ್ಯತೆ ಇದೆ.
೧೭. ಏಕಪುಟ-ಸರ್ವ ಸಾಮಾನ್ಯ ಮಾಹಿತಿ ವ್ಯವಸ್ಥೆ
೧. ಕರ್ನಾಟಕ ಸರ್ಕಾರದ ಎಲ್ಲ ಇಲಾಖೆಗಳ ಎಲ್ಲ ಸುತ್ತೋಲೆಗಳು ಒಂದೇ ಕಡೆಯಲ್ಲಿ, ತತ್‌ಸಾಮಯಿಕವಾಗಿ ಕನ್ನಡದಲ್ಲಿ ಸಿಗುವ ಒಂದು ವ್ಯವಸ್ಥೆಯನ್ನು ಆರಂಭಿಸಬೇಕು. ಇದನ್ನುDPAR ನಲ್ಲಿ ಹಾಕಬಹುದು. ಹೊಸ ಸುತ್ತೋಲೆ, ಕಾಯ್ದೆ, ಮಸೂದೆಗಳನ್ನೆಲ್ಲ ಇಲ್ಲಿ ಇಲಾಖಾವಾರು ಪ್ರಕಟಿಸಬೇಕು. ಇದರಿಂದ ಸಾರ್ವಜನಿಕರಿಗೆ ಹೊಸ ಬೆಳವಣಿಗೆಗಳ ಬಗ್ಗೆ ಒಂದೇ ಕಡೆ ಮಾಹಿತಿ ಸಿಗುತ್ತದೆ. ಇದಕ್ಕೆ ಹೆಚ್ಚಿನ ಶ್ರಮವನ್ನು ಹಾಕದೆಯೇ ಎಲ್ಲ ಜಾಲತಾಣಗಳಲ್ಲೂ ಸಮಾನ ತಂತ್ರಜ್ಞಾನ ಬಳಸಿ ತನ್ನಿಂತಾನೇ ಪ್ರಕಟವಾಗುವಂತೆ ಮಾಡಬಹುದು. (ಕೊನೇ ಪಕ್ಷ ಗೂಗಲ್ ಹಾಳೆಯಲ್ಲಿ ಪ್ರಕಟಿಸುವ ವ್ಯವಸ್ಥೆಯನ್ನಾದರೂ ಮಾಡಬಹುದು) ಆಗ ಎಲ್ಲ ಇಲಾಖೆಯವರೂ ಪ್ರತಿದಿನವೂ ಈ ಸುತ್ತೋಲೆಗಳ ಪಟ್ಟಿಯನ್ನು ಯುಆರ್‌ಎಲ್ ಸಹಿತ ಇಲ್ಲಿ ಪ್ರಕಟಿಸಿದರೆ ಸಾಕು. ಇದಕ್ಕಾಗಿ ಒಂದು ಪುಟ್ಟ ನಿರ್ವಹಣಾ ವ್ಯವಸ್ಥೆಯನ್ನು ರೂಪಿಸಬಹುದು. ಪ್ರತಿಯೊಂದೂ ಇಂಥ ಪ್ರಕಟಣೆಯನ್ನು ಈ ಘಟಕಕ್ಕೆ ಪ್ರಕಟಣೆಗಾಗಿ ನೀಡುವ ಒಂದು ರೂಢಿಯನ್ನು ಜಾರಿಗೊಳಿಸಬೇಕು.
೨. ಸರ್ಕಾರದ ದೂರವಾಣಿ ಸಂಖ್ಯೆಗಳು, ಸಂಪರ್ಕ ವಿಳಾಸಗಳು,ಅಧಿಕಾರಿ ವರ್ಗ, ಆಡಳಿತ ವ್ಯವಸ್ಥೆಯ ಸಿಬ್ಬಂದಿ – ಹೀಗೆ ಎಲ್ಲಾ ಮಾಹಿತಿಗಳನ್ನು ಪ್ರತ್ಯೇಕವಾಗಿ ಸಮಾನ ರೂಪದಲ್ಲಿ ಪ್ರಕಟಿಸಬೇಕು. ಇವೂ ಕೂಡ ಒಂದೇ ಕಡೆ ಸಿಗುವಂತೆ ಮಾಡುವುದು ಸಾಧ್ಯವಿದೆ. ವಿವಿಧ ಜಾಲತಾಣಗಳ ಯುಆರ್‌ಎಲ್‌ಗಳನ್ನು ಹುಡುಕಿ,ಅದರೊಳಗೆ ಹೆಸರುಗಳನ್ನು ಹುಡುಕುವುದಲ್ಲದೆ, ಹೀಗೆ ಸಂಚಯಿತ ಪುಟದಲ್ಲೂ ಮಾಹಿತಿ ಸಿಕ್ಕಿದರೆ ಹೆಚ್ಚಿನ ಪಾರದರ್ಶಕತೆ ಬರುತ್ತದೆ. ಈ ವರದಿಯಲ್ಲಿ ನಮೂದಿತವಾದ ಕ್ರೋಡೀಕೃತ ಮಾಹಿತಿಗಳ ಪಟ್ಟಿ ಹೀಗಿದೆ:
೧. ವಿವಿಧ ಇಲಾಖೆಗಳ ಎಲ್ಲಾ ಆಪ್‌ಗಳ ಪಟ್ಟಿ
೨. ಇಲಾಖಾವಾರು ವಿಳಾಸಪಟ್ಟಿ
೩. ಇಲಾಖಾವಾರು ಸುತ್ತೋಲೆಗಳ ಪಟ್ಟಿ
೪. ಇಲಾಖಾವಾರು ವಾರ್ಷಿಕ ವರದಿಗಳ ಪಟ್ಟಿ
೩. ಈ ಬಗೆಯ ಕೇಂದ್ರೀಕೃತ ಮಾಹಿತಿ ಪುಟವನ್ನು ತೆರೆಯುವುದರ ಜೊತೆಗೇ ಆಯಾ ಜಾಲತಾಣಗಳಲ್ಲಿ ಕೂಡಾ ಇದೇ ಮಾಹಿತಿಯು ಏಕಕಾಲಕ್ಕೆ ಸಿಗುವಂತಿರಬೇಕು. ಎರಡೂ ಕಡೆ ಕಾಣುವ ಮಾಹಿತಿಯನ್ನು ಒಂದೇ ಕಡತದ ಮೂಲಕ ನಿರ್ವಹಿಸಿ ಗೊಂದಲಗಳನ್ನು ತಪ್ಪಿಸಬೇಕು.
೪. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಇಂಥ ಸರ್ವಸಾಮಾನ್ಯ ಮಾಹಿತಿಗಳ ಕುರಿತು ಆಮೂಲಾಗ್ರ ಚಿಂತನೆ ಆಗಬೇಕಿದೆ. ಅಲ್ಲದೆ, ವಿವಿಧ ಜಾಲತಾಣಗಳ ಆಂತರಿಕ ತಂತ್ರಾಂಶ ಮತ್ತು ಕೋಡಿಂಗ್ ಎಲ್ಲವೂ ಏಕರೂಪದಲ್ಲಿದ್ದರೆ ಮಾತ್ರ ಈ ಮಾಹಿತಿಗಳ ಅಂತರ್ ತಾಣ ಕೊಡುಕೊಳ್ಳುವಿಕೆ ಸಾಧ್ಯ. ಈ ಬಗ್ಗೆ ಒಂದು ಸಭೆಯನ್ನೇ ಕರೆದು ಸೂಕ್ತ ತಾಂತ್ರಿಕ ಪರಿಹಾರ ಕಂಡುಕೊಳ್ಳಬೇಕು.
೧೮. ಕರ್ನಾಟಕ ಆಪ್ ತಾಣ
೧. ರಾಜ್ಯಸರ್ಕಾರದ ವಿವಿಧ ಇಲಾಖೆಗಳು ಬಗೆಬಗೆಯ ಆಪ್‌ಗಳನ್ನು ಗೂಗಲ್ ಪ್ಲೇಸ್ಟೋರ್‌ನಲ್ಲಿ ಪ್ರಕಟಿಸಿವೆ. ಇವುಗಳನ್ನು ಸಾಮಾನ್ಯವಾಗಿ ಪ್ಲೇಸ್ಟೋರ್‌ನಲ್ಲಿ ಹುಡುಕಿ ಸ್ಥಾಪಿಸಿಕೊಳ್ಳುವ ವ್ಯವಸ್ಥೆ ಇದ್ದೇ ಇದೆ. ಕರ್ನಾಟಕದ ಸಾರ್ವಜನಿಕರಿಗೆ ಇವೆಲ್ಲವೂ ಒಂದೆಡೆ ಸಿಕ್ಕಿದರೆ ಅವರು ಒಂದೊಂದು ಆಪ್‌ಗೆ ಒಂದೊಂದು ಜಾಲತಾಣಕ್ಕೆ ಭೇಟಿ ಕೊಡುವ ಅಗತ್ಯ ಬೀಳುವುದಿಲ್ಲ.
೨. ಈ ಎಲ್ಲ ಆಪ್‌ಗಳನ್ನು ಸಂಕ್ಷಿಪ್ತ ವಿವರಣೆ ಸಹಿತ ಕರ್ನಾಟಕ ಸರ್ಕಾರದ ಇ-ಆಡಳಿತ ಜಾಲತಾಣದಲ್ಲಿ ಪಟ್ಟೀಕರಿಸಿ ಕೊಡಬಹುದಾಗಿದೆ.
೩. ಈ ಆಪ್‌ಗಳನ್ನು ಆಯಾ ಜಾಲತಾಣಗಳಲ್ಲಿ ಪ್ರತ್ಯೇಕವಾಗಿ ಕೊಡುವ ವ್ಯವಸ್ಥೆಯನ್ನು ಮುಂದುವರಿಸಬಹುದು. ಜೊತೆಗೆ ಜಾಲತಾಣಕ್ಕೆ ಭೇಟಿ ಕೊಟ್ಟವರಿಗೆ ಈ ಆಪ್‌ಗಳು ಸಿಗುತ್ತವೆ ಎಂಬ ಸೂಚನೆ ಕೊಡುವ ಪಾಪ್‌ಅಪ್ ಪ್ರಕಟಣೆಗಳನ್ನೂ ನೀಡಬೇಕು.
೪. ಈ ಆಪ್‌ಗಳನ್ನು ಗೂಗಲ್ ಪ್ಲೇಸ್ಟೋರ್ / ವಿಂಡೋಸ್ ಸ್ಟೋರ್ / ಆಪಲ್ ಸ್ಟೋರ್‌ಗಳ ಮೂಲಕವೇ ಸ್ಥಾಪಿಸಿಕೊಳ್ಳುವ ಅನುಕೂಲ ಇರಬೇಕೇ ವಿನಃ ನೇರವಾಗಿ ಸ್ಥಾಪಿಸಿಕೊಳ್ಳುವ ವ್ಯವಸ್ಥೆ ಇರಕೂಡದು. ಆಯಾ ಖಾಸಗಿ ಆಪ್ ಸ್ಟೋರ್‌ಗಳು ಸೂಚಿಸುವ ಸುರಕ್ಷತಾ ಕ್ರಮಗಳನ್ನು ಕೈಗೊಂಡರೇನೇ ಸಾರ್ವಜನಿಕರಿಗೆ ಆಪ್ ಬಳಕೆಯ ಬಗ್ಗೆ ವಿಶ್ವಾಸ ಮೂಡುತ್ತದೆ.
೫. ಸರ್ಕಾರದ ಆಪ್‌ಗಳನ್ನು ಕಾಲಕಾಲಕ್ಕೆ (ಸಾಮಾನ್ಯವಾಗಿ ತಿಂಗಳಿಗೊಮ್ಮೆ) ಪರಾಮರ್ಶಿಸಿ ಅವುಗಳನ್ನು ಮೇಲ್ದರ್ಜೆಗೇರಿಸುವ ಯತ್ನಗಳನ್ನು ಮಾಡಬೇಕು.
೬. ಈ ಆಪ್‌ಗಳ ಸಹಜ ಲಿಪಿ ಮತ್ತು ಭಾಷೆ ಕನ್ನಡ ಆಗಿರಬೇಕು. ಇಂಗ್ಲಿಶನ್ನು ಎರಡನೇ ಮಾಧ್ಯಮವಾಗಿ ಬಳಸಬಹುದು. ಕನ್ನಡೇತರರಿಗಾಗಿ ಸ್ವಯಂ ಲಿಪ್ಯಂತರಣ ವ್ಯವಸ್ಥೆಯನ್ನು ಕಲ್ಪಿಸಬೇಕು. ಇದರಿಂದಾಗಿ ಕನ್ನಡ ಭಾಷೆಯನ್ನು ಬಲ್ಲ ಇತರ ಭಾಷಾ ನಾಗರಿಕರೂ ಆಪ್‌ನ್ನು ಸುಲಭವಾಗಿ ಬಳಸಬಹುದು.
೩. ಜಾಲತಾಣಗಳ ಸುಲಭಗ್ರಾಹ್ಯತೆ
೧೯. ಜಾಲತಾಣಗಳನ್ನು ರೂಪಿಸುವಾಗ ಅನುಸರಿಸಬೇಕಾದ ಬಹುಮುಖ್ಯ ಅಂಶಗಳ ಪಟ್ಟಿ
೧. ಈ ಪಟ್ಟಿಯನ್ನು ಭಾರತ ಸರ್ಕಾರವು ರೂಪಿಸಿ ಹಲವು ರಾಜ್ಯಗಳು ಅನುಸರಿಸುತ್ತಿರುವ ಪಟ್ಟಿಯಿಂದಲೇ ಆರಿಸಿ (http://guidelines.gov.in/Compliancematrix/index)) ರೂಪಿಸಲಾಗಿದೆ. ಮೂಲ ಪಟ್ಟಿಯ ಇನ್ನಿತರೆ ಅಂಶಗಳೂ ಪಾಲನೆಗೆ ಅರ್ಹವಾಗಿದ್ದು ಅವುಗಳನ್ನು ಇಲ್ಲಿ ಪಡೆಯಬಹುದಾಗಿದೆ. ಈ ವರದಿಯ ಮಿತಿಯಲ್ಲಿ ಮುಖ್ಯವಾದ ಅಂಶಗನ್ನಷ್ಟೆ ಇಲ್ಲಿ ನೀಡಲಾಗಿದೆ. ಕನ್ನಡಕ್ಕೆ ಮಾತ್ರ ಸಂಬಂಧಿಸದೆ ಜಾಲತಾಣದ ಸುಲಭಗ್ರಾಹ್ಯತೆಯ ಅಂಶಗಳೂ ಇದರಲ್ಲಿವೆ. ಈ ಎಲ್ಲಾ ಅಂಶಗಳನ್ನೂ ಕನ್ನಡದ ಹಿನ್ನೆಲೆಯಿಂದ ಗಮನಿಸಬೇಕು ಎಂಬ ಹಿನ್ನೆಲೆಯಲ್ಲಿ ನೀಡಲಾಗಿದೆ.
೧. ಜಾಲತಾಣದ ಮುಖಪುಟದಲ್ಲಿ ಕರ್ನಾಟಕ ಸರ್ಕಾರದ ಅಧಿಕೃತ ಲಾಂಛನವನ್ನು ಪ್ರಮುಖವಾಗಿ ಪ್ರದರ್ಶಿಸಬೇಕು. ಈ ಲಾಂಛನದ ವಿವಿಧ ಕಡತ ನಮೂನೆಗಳ (ಪಿಎನ್‌ಜಿ, ಪಿಎಸ್‌ಡಿ, ಜೆಪೆಗ್, ಎಸ್‌ವಿಜಿ ಇತ್ಯಾದಿ ಪೈಲ್ ಫಾರ್ಮಾಟ್‌ಗಳು), ವಿವಿಧ ಗಾತ್ರಗಳ ಕಡತಗಳನ್ನು ಸರ್ಕಾರದ ಮಹಾದ್ವಾರ ಜಾಲತಾಣದಲ್ಲಿ ಸುಲಭವಾಗಿ ಸಿಗುವಂತೆ ಇಟ್ಟಿರಬೇಕು. ವಿವಿಧ ಜಾಲತಾಣ ವಿನ್ಯಾಸಗಾರರು ಬೇರೆ ಬೇರೆ ಕಡತಗಳನ್ನು ಬಳಸುವ ಬದಲು ಈ ಅಧಿಕೃತ ಲಾಂಛನದ ಕಡತಗಳನ್ನೇ ಬಳಸುವಂತೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಬೇಕು.
೨. ಈ ಜಾಲತಾಣವು ಯಾವ ಕಚೇರಿಗೆ, ಯಾವ ಸಂಥೆಯ / ಇಲಾಖೆಯ ಒಡೆತನಕ್ಕೆ ಸೇರಿದೆ ಎಂಬುದನ್ನು ಸಾಮಾನ್ಯವಾಗಿ ಜಾಲತಾಣದ ಅಡಿಟಿಪ್ಪಣಿಯಾಗಿ (ಫುಟರ್ ಬ್ಯಾನರ್) ಕೊಡಬೇಕು. ಇಲ್ಲಿ ಸಂಸ್ಥೆಯ ವಿಳಾಸ, ಸಂಪರ್ಕ ದೂರವಾಣಿ ಸಂಖ್ಯೆಗಳು, ಈಲ್ ವಿಳಾಸಗಳು ಎಲ್ಲವೂ ಇರಬೇಕು. ಫುಟರ್‌ನಲ್ಲಿ ಸಾಮಾನ್ಯವಾಗಿ ಜಾಲತಾಣದ ಕಾನೂನಾತ್ಮಕ ವಿಷಯಗಳು, ಅಬಾಧ್ಯತೆಗಳು, ಸಂಬಂಧಿತ ಕೊಂಡಿಗಳು, ಕನ್ನಡ ತಂತ್ರಾಂಶ / ಜ್ಞಾನತಾಣಗಳ ಪಟ್ಟಿ ಇವೆಲ್ಲವನ್ನೂ ನೀಡಬಹುದು.
೩. ಜಾಲತಾಣದ ಮುಖಪುಟದಲ್ಲಿ ಸಂಸ್ಥೆಯ ಸಂಪೂರ್ಣ ಹೆಸರನ್ನು ಕನ್ನಡದಲ್ಲಿ (ಮತ್ತು ಅಗತ್ಯವಿದ್ದರೆ ಅಲ್ಲೇ ಇಂಗ್ಲಿಶಿನಲ್ಲಿ) ಬರೆದು ಅದರ ಮೇಲಿನ ಹಂತದ ಇಲಾಖೆಯ ಹೆಸರನ್ನು ಈ ಶೀರ್ಷಿಕೆಯ ಕೆಳಗೆ ಬರೆಯಬೇಕು.
೪. ಕರ್ನಾಟಕ ಸರ್ಕಾರದ ಅಧೀನದ ಎಲ್ಲ ಜಾಲತಾಣಗಳನ್ನೂ ಞಚಿಡಿ.ಟಿiಛಿ.iಟಿ ಇದರ ಕೆಳಗೇ ನೋಂದಾಯಿಸಬೇಕು. ಇದಲ್ಲದೆ ಬೇರೆ ಡೊಮೈನ್‌ಗಳು ಇದ್ದರೆ ಹೊಸದಾಗಿ ಅಂಥದ್ದೇ ಡೊಮೈನ್‌ಗಳನ್ನು ಸರ್ಕಾರದ ವ್ಯವಸ್ಥೆಯಡಿಯಲ್ಲೇ ರಚಿಸಿ, ಈ ತಾಣಗಳಿಗೆ ಮರುನಿರ್ದೇಶಿಸಬೇಕು.
೫. ಎಲ್ಲ ಜಾಲತಾಣಗಳಲ್ಲೂ ಕರ್ನಾಟಕ ಸರ್ಕಾರದ ಪ್ರಧಾನ / ಹೆದ್ದಾರಿ ಜಾಲತಾಣಕ್ಕೆ ಸಂಪರ್ಕ ನೀಡಿರಬೇಕು.
೬. ಜಾಲತಾಣದ ಫುಟರ್‌ನಲ್ಲೇ ತಾಣದ ಹಕ್ಕುಸ್ವಾಮ್ಯ ವಿಚಾರಗಳ ಕೊಂಡಿಯೂ ಇರಬೇಕು. ಈ ಹಕ್ಕುಸ್ವಾಮ್ಯದ ಘೋಷಣೆಯ ಒಂದು ಮಾದರಿಯನ್ನು ಕರ್ನಾಟಕ ಸರ್ಕಾರದ ಮುಖ್ಯತಾಣದಲ್ಲಿ ಕೊಟ್ಟಿರಬೇಕು. ಆಯಾ ತಾಣಗಳಲ್ಲಿ ಈ ಹಕ್ಕುಸ್ವಾಮ್ಯಗಳನ್ನು ಅಧಿಕೃತವಾದ ಅನುಮೋದನೆಯ ಬಳಿಕವೇ ಪ್ರಕಟಿಸಬೇಕು.
೭. ಹಕ್ಕುಸ್ವಾಮ್ಯ ಇರುವ ವಸ್ತುವಿಷಯವನ್ನು ಪ್ರಕಟಿಸುವುದಾದಲ್ಲಿ ಸೂಕ್ತ ಪರವಾನಗಿಯನ್ನು ಪಡೆದಿರಲೇಬೇಕು.
೮. ತಾಣದಲ್ಲಿ ಪ್ರಕಟವಾಗಿವ ಯಾವುದೇ ದಾಖಲೆಗೆ ಮೂಲಾಧಾರ ಯಾವುದು ಎಂಬ ಮಾಹಿತಿಯನ್ನೂ ಕೊಡಬೇಕು.
೯. ಕರ್ನಾಟಕ ಸರ್ಕಾರವು ತನ್ನ ಎಲ್ಲ ತಾಣಗಳಲ್ಲಿ ನೀಡುವ ಹೈಪರ್‌ಲಿಂಕ್ ಕೊಂಡಿಗಳ ಬಗ್ಗೆ ಒಂದು ಸಮಗ್ರ ನೀತಿಯನ್ನು ರೂಪಿಸಬೇಕು. ಇಲ್ಲಿ ಯಾವುದೇ ಸರ್ಕಾರೇತರ ತಾಣಕ್ಕೆ ನಿರ್ದೇಶನವಿದ್ದರೆ ಅದನ್ನು ಖಚಿತವಾಗಿ ನಮೂದಿಸಬೇಕು.
೧೦. ಹೈಪರ್‌ಲಿಂಕ್ ಆದ ಕೊಂಡಿಗಳು ಸಕ್ರಿಯವಾಗಿವೆಯೇ ಎಂದು ಪರಿಶೀಲಿಸಲು ಆಯಾ ತಾಣಗಳ ಒಡೆತನವನ್ನು ಹೊಂದಿದ ಕಚೇರಿಗಳು ಸೂಕ್ತವಾದ ಆಂತರಿಕ ವ್ಯವಸ್ಥೆಯನ್ನು ಹೊಂದಿರಬೇಕು.
೧೧. ತುಂಡುಕೊಂಡಿಗಳು (ಬ್ರೋಕನ್ ಲಿಂಕ್) ಮತ್ತು `ಪುಟ ಸಿಕ್ಕಿಲ್ಲ ಘೋಷಣೆಯ ಪುಟಗಳಲ್ಲಿ ಯಾವ ರೀತಿಯ ಪ್ರಕಟಣೆ ಇರಬೇಕೆಂಬುದನ್ನು ಏಕರೂಪದಲ್ಲಿ ಪ್ರಕಟಿಸಬೇಕು. ಕರ್ನಾಟಕ ಸರ್ಕಾರವು ಈ ಪುಟಗಳಲ್ಲಿ ಇರಬೇಕಾದ ಮಾಹಿತಿಯ ಮಾದರಿಯನ್ನು ಅಧಿಕೃತವಾಗಿ ರೂಪಿಸಿರಬೇಕು.
೧೨. ಪ್ರತಿಯೊಂದೂ ಜಾಲತಾಣದಲ್ಲಿ ಷರತ್ತುಗಳು ಮತ್ತು ನಿಯಮಗಳ ಕುರಿತ ಹೇಳಿಕೆಯನ್ನು ನೀಡಿರಬೇಕು. ಕರ್ನಾಟಕ ಸರ್ಕಾರವು ಈ ಪುಟಗಳಲ್ಲಿ ಇರಬೇಕಾದ ಮಾಹಿತಿಯ ಮಾದರಿಯನ್ನು ಅಧಿಕೃತವಾಗಿ ರೂಪಿಸಿರಬೇಕು. ಈ ನಿಯಮಗಳಲ್ಲಿ ತಾಣದಲ್ಲಿರುವ ಮಾಹಿತಿಗಳು ಎಷ್ಟರಮಟ್ಟಿಗೆ ಕಾನೂನಾತ್ಮಕ ದಾಖಲೆಗಳು, ಎಷ್ಟರಮಟ್ಟಿಗೆ ಅಲ್ಲ ಎಂಬುದರ ಖಚಿತ ಮಾಹಿತಿಯನ್ನೂ ನೀಡಬೇಕು.
೧೩. ಜಾಲತಾಣಗಳಲ್ಲಿ ಮತ್ತು ಅದರ ಎಲ್ಲಾ ಪುಟಗಳಲ್ಲಿ ಖಾಸಗಿತನ ನೀತಿಯನ್ನು (ಪ್ರೈವಸಿ ಪಾಲಿಸಿ)ಯನ್ನು ಪ್ರಕಟಿಸಬೇಕು. ಈ ನೀತಿಯ ಮಾದರಿ ಪ್ರತಿಯನ್ನು ಕರ್ನಾಟಕ ಸರ್ಕಾರದ ಅಧಿಕೃತ ಹೆದ್ದಾರಿ ತಾಣದಲ್ಲಿ ಪ್ರಕಟಿಸಿರಬೇಕು.
೧೪. ಈ ತಾಣಗಳಲ್ಲಿ ನಡೆಯಬಹುದಾದ ಯಾವುದೇ ಎಲೆಕ್ಟ್ರಾನಿಕ್ ಹಣಕಾಸು ವ್ಯವಹಾರವು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕಾದದ್ದು ಆಯಾ ತಾಣಗಳ ಒಡೆತನದ ಸಂಸ್ಥೆಯ ಹೊಣೆಗಾರಿಕೆಯಾಗಿರುತ್ತದೆ.
೧೫. ತಾಣದಲ್ಲಿ ಇಲಾಖೆ ಕುರಿತ ಮಾಹಿತಿಗಳು, ನಾಗರಿಕರಿಗೆ ತಿಳಿಸಬೇಕಾದ ಮಾಹಿತಿಗಳು, `ನಮ್ಮ ಬಗ್ಗೆ’ ಪುಟ ಇವೆಲ್ಲವೂ ಕಾಲಕಾಲಕ್ಕೆ ತಾಜಾ ಆಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅದರಲ್ಲೂ ಕಚೇರಿಯ ಸಂಪರ್ಕ ದೂರವಾಣಿ, ಸಕ್ರಿಯ ಈಮೈಲ್ ವಿಳಾಸಗಳು ಮತ್ತು ಅಧಿಕಾರಿಗಳ ಪಟ್ಟಿಯನ್ನು ತಿಂಗಳಿಗೊಮ್ಮೆಯಾದರೂ ಪರಿಶೀಲಿಸಿ ಸರಿಪಡಿಸಬೇಕು.
೧೬. ಯಾವುದೇ ಯೋಜನೆಯ ಸಂಕ್ಷಿಪ್ತ ನಾಮದ ಜೊತೆಗೇ ಅದರ ಸಂಪೂರ್ಣ ಹೆಸರನ್ನು ಕಡ್ಡಾಯವಾಗಿ ನಮೂದಿಸಿರಬೇಕು.
೧೭. ಯಾವುದೇ ಜನೋಪಯೋಗಿ ಯೋಜನೆ ಇದ್ದಾಗ, ಅದರ ವಿವರ, ಅದನ್ನು ಪಡೆಯುವ ಹಂತಹಂತದ ಕ್ರಮಗಳು, ಅರ್ಜಿಯ ಜೊತೆಗೆ ಸಲ್ಲಿಸಬೇಕಾದ ದಾಖಲೆಗಳ ವಿವರ, ಅದರಿಂದಾಗುವ ಲಾಭಗಳು ಎಲ್ಲವನ್ನೂ ನೀಡಿರಬೇಕು.
೧೮. ಯೋಜನೆಗಳ ಕಾಲಾವಧಿಯನ್ನು ಸ್ಪಷ್ಟವಾಗಿ ನಮೂದಿಸಿರಬೇಕು.
೧೯. ಯಾವುದೇ ಕಾಯ್ದೆಯ ಹೆಸರನ್ನು ಸಂಪೂರ್ಣವಾಗಿ ನಮೂದಿಸಿರಬೇಕು.
೨೦. ಯಾವುದೇ ಕಡತದ ಹೆಸರನ್ನು ಡೌನ್‌ಲೋಡ್ ಕಡತದಲ್ಲಾಗಲೀ, ತಾಣದಲ್ಲಾಗಲೀ, ಸಂಪೂರ್ಣವಾಗಿ ನಮೂದಿಸಿರಬೇಕು.
೨೧. ಯಾವುದೇ ಸುತ್ತೋಲೆಯ ಕಾಲಾವಧಿಯನ್ನು ಸಾಧ್ಯವಿದ್ದಷ್ಟೂ ನಮೂದಿಸಿರಬೇಕು. ಹಲವು ಜಾಲತಾಣಗಳಲ್ಲಿ ಕಾಲಬಾಹಿರವಾದ ಸುತ್ತೋಲೆಗಳು,ಪ್ರಕಟಣೆಗಳನ್ನು ಆರ್ಕೈವ್ ಮಾಡಲು ವ್ಯವಸ್ಥೆಯೇ ಇಲ್ಲದಿರುವುದನ್ನು ಗಮನಿಸಲಾಗಿದೆ. ಕಾಲಬಾಹಿರವಾದ ಸುತ್ತೋಲೆಗಳನ್ನು ಪತ್ರಾಗಾರ ವಿಭಾಗದಲ್ಲಿ ಇಟ್ಟಿರಬೇಕು.
೨೨. ಇಲಾಖೆಯ ಎಲ್ಲ ಟೆಂಡರ್‌ಗಳು, ಪ್ರಕಟಣೆಗಳು, ಸುತ್ತೋಲೆಗಳು – ಕನ್ನಡದಲ್ಲಿ ಮತ್ತು ಅಗತ್ಯಬಿದ್ದರೆ ಮಾತ್ರ ಇಂಗ್ಲಿಶಿನಲ್ಲಿ ಪ್ರಕಟವಾಗುವಂತೆ ನೋಡಿಕೊಳ್ಳಬೇಕು. ಟೆಂಡರ್‌ಗಳನ್ನು ಪ್ರಕಟಿಸುವಾಗ ಅವುಗಳಿಗೆ ಅರ್ಜಿ ಹಾಕುವ ವಿಧಾನವನ್ನು ವಿವರವಾಗಿ ನಮೂದಿಸಿರಬೇಕು.
೨೩. `ನಮ್ಮನ್ನು ಸಂಪರ್ಕಿಸಿ’ ಎಂಬ ಪುಟವನ್ನು ರೂಪಿಸಿ ಅದರ ಕೊಂಡಿಯನ್ನು ಪ್ರಮುಖವಾಗಿ ಮುಖಪುಟದಲ್ಲೇ ಪ್ರಕಟಿಸಬೇಕಲ್ಲದೆ ಒಳಪುಟಗಳಲ್ಲೂ ಇದು ಸಿಗುವಂತೆ ಮಾಡಬೇಕು. ಈ ಪುಟದಲ್ಲಿ ಕಚೇರಿಯ ಎಲ್ಲ ಪ್ರಮುಖ ಅಧಿಕಾರಿಗಳ ಹೆಸರು, ಹುದ್ದೆ, ವಿಳಾಸ ಮತ್ತು ದೂರವಾಣಿ ಸಂಖ್ಯೆ / ಈ ಮೈಲ್‌ಗಳನ್ನು ನಮೂದಿಸಿರಬೇಕು.
೨೪. ಜಾಲತಾಣದ ಬಳಕೆದಾರರಿಂದ ಅರ್ಜಿಗಳನ್ನು ಪಡೆಯುವ, ಹಿಮ್ಮಾಹಿತಿ ಪಡೆಯುವ ವ್ಯವಸ್ಥೆಗಳನ್ನು ರೂಪಸಿರಬೇಕು.
೨೫. ಪ್ರತಿಯೊಂದು ಜಾಲತಾಣ ಪುಟದಲ್ಲೂ ಜಾಲತಾಣ ನಕಾಶೆ ಮತ್ತು ಸಹಾಯ ಪುಟಗಳನ್ನು ರೂಪಿಸಿ, ತಾಣದಲ್ಲಿ ಯಾವ ಮಾಹಿತಿಗಳನ್ನು ಯಾವ ಪುಟದಲ್ಲಿ ಪಡೆಯಬಹುದು ಎಂಬಿತ್ಯಾದಿ ವಿವರಗಳನ್ನು ನೀಡಬೇಕು.
೨೬. ಜಾಲತಾಣಗಳಲ್ಲಿ ಡೌನ್‌ಲೋಡ್ ಮಾಡಲೆಂದು ಪ್ರಕಟಿಸುವ ಪ್ರತಿಯೊಂದೂ ಕಡತದ ಕಡತ ನಮೂನೆ ಮತ್ತು ಕಡತದ ಗಾತ್ರವನ್ನು ನಮೂದಿಸಿರಬೇಕು.
೨೭. ಡೌನ್‌ಲೋಡ್ ಮಾಡುವಂತಹ ಕಡತಗಳಲ್ಲಿ ಯಾವುದೇ ವೈರಸ್ ಇರದಂತೆ ಎಚ್ಚರಿಕೆ ವಹಿಸಬೇಕು.
೨೮. ಪ್ರತಿಯೊಂದು ಪುಟದ ಕೆಳಗೂ ಆ ಪುಟವನ್ನು ಇತ್ತೀಚೆಗೆ ಬದಲಾಯಿಸಲಾದ ದಿನಾಂಕವನ್ನು ತನ್ನಿಂತಾನೇ ಮೂಡಿಸಿರಬೇಕು.
೨೯. ಜಾಲತಾಣದ ವಸ್ತುವಿಷಯಗಳನ್ನು ಕಾಲಕಾಲಕ್ಕೆ ಪರಾಮರ್ಶಿಸುವ ವ್ಯವಸ್ಥೆಯನ್ನು ಆಂತರಿಕವಾಗಿ ರೂಪಿಸಿರಬೇಕು.
೩೦. ಕರ್ನಾಟಕ ಸರ್ಕಾರದ ಜಾಲತಾಣಗಳು ಒಂದೇ ಬಗೆಯ ವಿನ್ಯಾಸವನ್ನು ಹೊಂದಿರಬೇಕು. ಈ ಕುರಿತ ಕರಡು ಪಟ್ಟಿ ಹೀಗಿದೆ: (ಇದನ್ನು ಕೇವಲ ಸೂಚ್ಯ ಮಾದರಿ ಎಂದು ಬಗೆದು, ಸಾರ್ವಜನಿಕರಿಂದ ಪ್ರತಿಕ್ರಿಯೆ ಪಡೆದ ಮೇಲೆ ಬದಲಾವಣೆಗಳನ್ನು ಮಾಡಬೇಕಿದೆ)
೧. ಪುಟದ ಮೇಲ್ತುದಿಯ ಸಾಲಿನ ಚಿಕ್ಕ ಕೊಂಡಿಗಳು: ಕನ್ನಡ/ಇಂಗ್ಲಿಶ್ ಭಾಷೆಗೆ ಪುಟ ಪರಿವರ್ತನೆ, ಅಕ್ಷರಗಾತ್ರ ಹಿಗ್ಗಿಸು-ಕುಗ್ಗಿಸು, ಲಾಗಿನ್, ಲಿಪ್ಯಂತರಣ, ಹುಡುಕಾಟ (ಸರ್ಚ್). ಸಮಾಜತಾಣ ಕೊಂಡಿಗಳು ಇತ್ಯಾದಿ
೨. ಮುಖಪುಟದ ಮೇಲ್ಭಾಗದ(ಟಾಪ್) ಮೆನ್ಯುಗಳು: ನಮ್ಮ ಬಗ್ಗೆ, ಚಟುವಟಿಕೆಗಳು, ಯೋಜನೆಗಳು, ಸಾರ್ವಜನಿಕ ಮಾಹಿತಿಗಳು, ಸಂಪರ್ಕ ಮಾಹಿತಿ, ಮಾಹಿತಿ ಹಕ್ಕು ಕೊಂಡಿ,
೩. ಎಡಭಾಗ/ಬಲಭಾಗದ ಮೆನ್ಯುಗಳು (ಸೈಡ್ ಬಾರ್): ಜಾಲತಾಣಕ್ಕೆ ಸಂಬಂಧಿಸಿದ ಇತರೆ ಕೊಂಡಿಗಳು.
೪. ಕೆಳಭಾಗದ (ಫುಟರ್) ಮೆನ್ಯು: ಅಬಾಧ್ಯತೆ, ಹಕ್ಕುಸ್ವಾಮ್ಯ, ಹಿಮ್ಮಾಹಿತಿ, ಕನ್ನಡ ತಂತ್ರಾಂಶ/ಜ್ಞಾನ ಕೊಂಡಿ ಇತ್ಯಾದಿ
೩೧. ರಾಜ್ಯ ಸರ್ಕಾರದ, ಭಾರತ ಸರ್ಕಾರದ ಲಾಂಛನಗಳು, ಬಣ್ಣಗಳು ಎಲ್ಲವೂ ಅಧಿಕೃತವಾಗಿಯೇ ಇರುವಂತೆ ಖಾತ್ರಿಪಡಿಸಿಕೊಳ್ಳಬೇಕು.
೩೨. ಜಾಲತಾಣಗಳನ್ನು ರೂಪಿಸಿದ ಮೇಲೆ ಅವುಗಳು ಪ್ರಮುಖ ಬ್ರೌಸರ್‌ಗಳಲ್ಲಿ ಚೆನ್ನಾಗಿ ತೆರೆಯುತ್ತವೆಯೇ ಎಂದು ಪರಿಶೀಲಿಸಬೇಕು (ಗೂಗಲ್ ಕ್ರೋಮ್, ಮೈಕ್ರೋಸಾಫ್ಟ್ ಎಡ್ಜ್, ಒಪೆರಾ, ಮೊಝಿಲ್ಲಾ ಫೈರ್‌ಫಾಕ್ಸ್ ಇತ್ಯಾದಿ)
೩೩. ಜಾಲತಾಣವನ್ನು ಈಗಿನ ಮಾನದಂಡವಾದ ಎಚ್‌ಟಿಎಂಎಲ್೫ರ ಅನುಸಾರವೇ ರೂಪಿಸಿರಬೇಕಲ್ಲದೆ ಅವುಗಳ ಪಠ್ಯಗಳನ್ನು, ಗಾತ್ರವನ್ನು ಬೇಕಾದ ಹಾಗೆ ಹಿಗ್ಗಿಸುವ-ಕುಗ್ಗಿಸುವ ಅನುಕೂಲವನ್ನು ಅಡಕಗೊಳಿಸಿರಬೇಕು.
೩೪. ಜಾಲತಾಣದ ಪುಟಗಳು ಸಮಪರ್ಕಕವಾಗಿ ಎ೪ ಗಾತ್ರದಲ್ಲೇ ಮುದ್ರಣವಾಗುವಂತಹ ವ್ಯವಸ್ಥೆಯನ್ನು ಅಡಕಗೊಳಿಸಿರಬೇಕು.
೩೫. ಪಠ್ಯ ಮತ್ತು ಹಿನ್ನೆಲೆ ಬಣ್ಣಗಳು ಸೂಕ್ತವಾಗಿದ್ದು ಅಕ್ಷರಗಳು ಓದಲು ಬರುವಂತೆ ಸ್ಫುಟವಾಗಿರಬೇಕು.
೩೬. ಬಣ್ಣಗಳಲ್ಲಿ ಕೊಟ್ಟ ಮಾಹಿತಿಯು ಬಣ್ಣವಿಲ್ಲದೆಯೂ ಸಿಗುವ ವ್ಯವಸ್ಥೆ ಇರಬೇಕು.
೩೭. ಪಠ್ಯೇತರ ಮಾಹಿತಿಗಳಿಗೆ (ಧ್ವನಿ, ಚಿತ್ರ, ವಿಡಿಯೋ) ಪರ್ಯಾಯ ಪಠ್ಯಗಳನ್ನು ಕನ್ನಡದಲ್ಲಿ ಒದಗಿಸಬೇಕು. ಇವೆಲ್ಲವೂ ಪಠ್ಯದಿಂದ ಧ್ವನಿಗೆ ಪರಿವರ್ತಿತವಾಗಿ ಓದುವಂತೆ ಇರಬೇಕು. ಕನ್ನಡ ಯನಿಕೋಡ್ ಪಠ್ಯವನ್ನು ಧ್ವನಿಯಾಗಿ ಪರಿವರ್ತಿಸುವ ಈ-ಸ್ಪೀಕ್ ಎಂಬ ಮುಕ್ತ ತಂತ್ರಾಂಶವನ್ನು ಇಲ್ಲಿ ಎಲ್ಲ ಜಾಲತಾಣಗಳಲ್ಲೂ ನೀಡಿರಬೇಕು. ಅಥವಾ ಯುನಿಕೋಡ್ ಓದಬಲ್ಲ ಯಾವುದೇ ಒಂದು ಸರಳ ಮತ್ತು ಕಡಿಮೆ ಗಾತ್ರದ ತಂತ್ರಾಂಶವನ್ನು ಕರ್ನಾಟಕ ಸರ್ಕಾರವು ನೀಡಬೇಕು.
೩೮. ಧ್ವನಿ ಮತ್ತು ವಿಡಿಯೋ ಕಡತಗಳಿಗೆ ಪರ್ಯಾಯವಾಗಿ ಸಂಪೂರ್ಣ ಪಠ್ಯವನ್ನು ನೀಡುವ ವ್ಯವಸ್ಥೆಯನ್ನು ರೂಪಿಸಿರಬೇಕು.
೩೯. ಪ್ರತಿಯೊಂದೂ ಧ್ವನಿಕಡತಕ್ಕೆ ಸೂಕ್ತವಾದ ಶೀರ್ಷಿಕೆಯನ್ನು ಪಠ್ಯದಲ್ಲಿ, ಕನ್ನಡದಲ್ಲಿ ನೀಡಿರಬೇಕು.
೪೦. ಯಾವುದೇ ಬಗೆಯ ಸ್ಕ್ರಾಲಿಂಗ್ ಮತ್ತು ಮಿಟುಕಿಸುವ (ಬ್ಲಿಂಕಿಂಗ್) ವಿಷಯಗಳನ್ನು ನಿಯಂತ್ರಿಸುವ ವ್ಯವಸ್ಥೆ ಇರಬೇಕು.
೪೧. ಧ್ವನಿ ಮತ್ತು ವಿಡಿಯೋ ಕಡತಗಳನ್ನು ಬೇಕಾದಾಗ ಆರಂಭಿಸಿ ಬೇಕೆಂದಲ್ಲಿ ನಿಲ್ಲಿಸುವ ವ್ಯವಸ್ಥೆ ಇರಬೇಕು. ಎಲ್ಲಾ ಧ್ವನಿ ಮತ್ತು ವಿಡಿಯೋ ಕಡತಗಳನ್ನು ಬಾಹ್ಯ ತಾಣದಲ್ಲಿ (ಯೂಟ್ಯೂಬ್, ಯುವರ್‌ಲಿಸನ್ ಇತ್ಯಾದಿ) ಹಾಕದೆಯೇ ತಾಣದ ಸರ್ವರ್‌ನಲ್ಲೇ ಹಾಕಿರಬೇಕು. ಮುಂದಿನ ಹಕ್ಕುಸ್ವಾಮ್ಯ ಮತ್ತು ಆವೃತ್ತಿ ನಿಯಂತ್ರಣದ (ವರ್ಶನ್ ಕಂಟ್ರೋಲ್) ದೃಷ್ಟಿಯಿಂದ ಇದು ಮುಖ್ಯ. ಈ ಕಡತಗಳೇ ಮುಖ್ಯವಾಗಿರುವ ತಾಣವಾಗಿದ್ದರೆ ಅವುಗಳಲ್ಲಿ ಮೀಡಿಯಾ ಸರ್ವರ್ ಸೌಲಭ್ಯವನ್ನು ಹಾಕಿರಬೇಕು. ಇದರಿಂದಾಗಿ ಯಾವುದೇ ಮಟ್ಟದ ಬಳಕೆದಾರರು ಯಾವುದೇ ಗುಣಮಟ್ಟದ ಕಡತವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅನುಕೂಲವಾಗುತ್ತದೆ.
೪೨. ಜಾಲತಾಣದ ಎಲ್ಲ ಪುಟಗಳಲ್ಲೂ ಮುಖ್ಯಪುಟಕ್ಕೆ ಬರುವಂತಹ ಕೊಂಡಿಯನ್ನು ನೀಡಿರಬೇಕು.
೪೩. ಕರ್ನಾಟಕ ಸರ್ಕಾರದ ಎಲ್ಲ ಜಾಲತಾಣಗಳಲ್ಲೂ ಏಕರೂಪದ ಆದೇಶ ಪಟ್ಟಿ ಪದಗಳನ್ನು (ಮೆನ್ಯು ಕಮ್ಯಾಂಡ್) ಬಳಸಬೇಕು. ಈ ಕುರಿತು ಮುಖ್ಯ ವರದಿಯಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.
೪೪. `ಪುಟವನ್ನು ರೂಪಿಸಲಾಗುತ್ತಿದೆ’ ಎಂಬ ಪುಟಗಳು ಇರದಂತೆ ಖಾತ್ರಿಪಡಿಸಿಕೊಳ್ಳಬೇಕು. ಹಾಗೆಯೇ ಯಾವುದೇ ಲೋಪ ಸಂದೇಶ (ಎರರ್ ೪೦೪ ಇತ್ಯಾದಿ) ಬರದಂತೆ ನೋಡಿಕೊಳ್ಳಬೇಕು.
೪೫. ಎಲ್ಲ ಜಾಲತಾಣಗಳಲ್ಲೂ ಹುಡುಕಾಟದ ಅವಕಾಶವು ಸ್ಪಷ್ಟವಾಗಿರಬೇಕು. ಈ ಹುಡುಕಾಟವು ಕೇವಲ ಇಂಗ್ಲಿಶಿನಲ್ಲಿ ಅಲ್ಲದೆ, ಕನ್ನಡ ಯುನಿಕೋಡ್ ಪದಗಳ ಹುಡುಕಾಟಕ್ಕೂ ಅನುಕೂಲಕರವಾಗಿರಬೇಕು. ಸಹಜವಾಗೇ ಹುಡುಕಾಟದ ಕ್ಷೇತ್ರದ ಖಾಲಿ ಜಾಗದಲ್ಲಿ `ಇಲ್ಲಿ ಹುಡುಕಿ’ ಎಂಬ ಕನ್ನಡ ಪದಗುಚ್ಛವನ್ನು ಹಾಕಿರಬೇಕು.
೪೬. ಜಾಲತಾಣಗಳ ನಿರ್ವಹಣೆಗೆ ಪ್ರತಿಯೊಂದೂ ಕಚೇರಿಯಲ್ಲಿ / ಇಲಾಖೆಯಲ್ಲಿ ಸೂಕ್ತವಾದ ಅರ್ಹತೆಗಳಿರುವ ಸಿಬ್ಬಂದಿ ಇರಬೇಕು.
೪೭. ಎಲ್ಲಾ ಜಾಲತಾಣಗಳಲ್ಲಿ ಕರ್ನಾಟಕ ರಾಜ್ಯದ ಪುಟಗಳಿಗೆ ಅನ್ವಯವಾಗುವ É http://guidelines.gov.in/assets/gigw-manual.pdf ಇಲ್ಲಿರುವ ಸೂತ್ರಗಳನ್ನು ಅನುಸರಿಸಬೇಕು. ಆದರೆ ಈ ಅನುಸರಣೆಯಲ್ಲಿ ಹಳೆಯ ತಂತ್ರಾಂಶಗಳ ಬಳಕೆಯನ್ನು ಕೈಬಿಡಬೇಕಲ್ಲದೆ, ರಾಜ್ಯಕ್ಕೆ ಅನ್ವಯಿಸದ ಸೂತ್ರಗಳನ್ನು ಸೂಕ್ತವಾಗಿ ಮಾರ್ಪಡಿಸಿಕೊಳ್ಳಬೇಕು.
————————————————————-
ವರದಿ ರೂಪಿಸಿದವರು
ಬೇಳೂರು ಸುದರ್ಶನ
ದೂರವಾಣಿ: ೯೭೪೧೯೭೬೭೮೯
ಮಿಂಚಂಚೆ: beluru@beluru.com
ಪತ್ರ;
ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ
ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ
೧೦ ಆಗಸ್ಟ್ ೨೦೧೭
ವರದಿ ರೂಪಿಸಿದವರು: ಬೇಳೂರು ಸುದರ್ಶನ
ಇವರಿಗೆ,
ಮಾನ್ಯ ಅಧ್ಯಕ್ಷರು
ಕನ್ನಡ ಅಭಿವೃದ್ಧಿ ಪ್ರಾಧಿಕಾರ
ವಿಧಾನಸೌಧ, ಬೆಂಗಳೂರು
ಮಾನ್ಯರೇ,
ವಿಷಯ: ಆಡಳಿತ ಹಾಗೂ ತಂತ್ರಾಂಶಗಳಲ್ಲಿ ಕನ್ನಡ ಅನುಷ್ಠಾನ ಕುರಿತಂತೆ
ಉಲ್ಲೇಖ: ತಮ್ಮ ಪತ್ರ ಸಂಖ್ಯೆ ಕಅಪ್ರಾ/ಕಾ೫(ಕಾ೨)ಜಾ.ಶಿ.ಮಾ.೩೩/೨೦೧೫-೧೬/ ದಿನಾಂಕ ೦೭.೦೬.೨೦೧೭
ತಾವು ನನಗೆ ಸೂಚಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರದ ಜಾಲತಾಣಗಳಲ್ಲಿ ಕನ್ನಡದ ಬಳಕೆ ಮತ್ತು ಏಕರೂಪತೆ, ಶಿಷ್ಟತೆ ಮತ್ತು ಸುಲಭಗ್ರಾಹ್ಯತೆ ಕುರಿತಾಗಿ ಒಂದು ಸಂಕ್ಷಿಪ್ತ ವರದಿಯನ್ನು ಸಲ್ಲಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ.
ಇಂಥ ಕನ್ನಡ ಸಂಬಂಧಿ ಆನ್‌ಲೈನ್ ಚಟುವಟಿಕೆಗಳ ಬಗ್ಗೆ ಸಮುದಾಯದ ಅಭಿಪ್ರಾಯ ತುಂಬಾ ಮುಖ್ಯ. ಈ ವರದಿಯನ್ನು ತಮ್ಮ ಜಾಲತಾಣದಲ್ಲಿ ಪ್ರಕಟಿಸಿ ಕನಿಷ್ಟಪಕ್ಷ ಒಂದು ತಿಂಗಳ ಕಾಲಾವಧಿ ನೀಡಿ ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸಿ, ಮುಖ್ಯ ಸಲಹೆಗಳನ್ನು ಈ ವರದಿಯ ಸಂಬಂಧಿತ ವಿಭಾಗದಲ್ಲಿ ಅಡಕಗೊಳಿಸಿ ಈ ವರದಿಯನ್ನು ಅನುಮೋದಿಸಬೇಕೆಂದು, ಇದನ್ನು ಸಕ್ಷಮ ಇಲಾಖೆಯ ಮೂಲಕ ಇಡೀ ರಾಜ್ಯ ಸರ್ಕಾರದ ಎಲ್ಲ ಜಾಲತಾಣಗಳ ನಿರ್ವಹಣಾ ಸಂಸ್ಥೆಗಳಿಗೆ ಅನ್ವಯಗೊಳಿಸಬೇಕೆಂದು ನಾನು ವಿನಂತಿಸುತ್ತೇನೆ.
ಈ ಕಾರ್ಯಕ್ಕಾಗಿ ಯಾವುದೇ ಗೌರವ ಸಂಭಾವನೆಯನ್ನೂ ನಾನು ಪಡೆಯಬಯಸುವುದಿಲ್ಲ ಎಂದು ವಿನಮ್ರವಾಗಿ ತಿಳಿಸಬಯಸುತ್ತೇನೆ.
ತಮ್ಮ ವಿಶ್ವಾಸಿ
(ಬೇಳೂರು ಸುದರ್ಶನ)
ದೂರವಾಣಿ: ೯೭೪೧೯೭೬೭೮೯
ಮಿಂಚಂಚೆ: beluru@beluru.com