ಜೆಹಾದಿ (ಇಸ್ಲಾಮಿಕ್ ಧರ್ಮಯುದ್ಧ ಎಂದುಕೊಳ್ಳುವಾ) ಅಂದಕೂಡಲೇ ಹಲವರ ಮನಸ್ಸಿನಲ್ಲಿ ಎಂಥದೋ ವಿಕ್ಷಿಪ್ತ ಭಾವ ಮೂಡುತ್ತೆ. ಸಹಜವೇ. ಇವತ್ತು ಜೆಹಾದಿ ಹೆಸರಿನಲ್ಲಿ ನಡೆಯುತ್ತಿರುವ ಭಯೋತ್ಪಾದನೆ, ತಾಲಿಬಾನ್, ಅಲ್ ಖೈದಾಗಳ ಉಗ್ರಗಾಮಿ ಕೃತ್ಯಗಳು ನಮ್ಮನ್ನು ಧೃತಿಗೆಡಿಸಿವೆ.
ಜೆಹಾದಿ ಅಂದರೆ ನಿಜಕ್ಕೂ ಏನಿರಬಹುದು ಎಂದು ತಿಳಿಯುವ ಹಂಬಲವಿದ್ದರೆ ನೀವು ‘ಓಮರ್ ಮುಖ್ತರ್: ದಿ ಲಯನ್ ಆಫ್ ದಿ ಡೆಸರ್ಟ್’ ಸಿನೆಮಾ ನೋಡಿ. ೧೯೮೧ರಲ್ಲಿ ಬಂದ ಈ ಸಿನೆಮಾ ಪಾಶ್ಚಾತ್ಯ ದೇಶಗಳಲ್ಲಿ ತಿರಸ್ಕೃತಗೊಂಡಿತ್ತು. ಇಟಲಿಯಲ್ಲಂತೂ ಈ ಸಿನೆಮಾ ನಿಷೇಧಿತವಾಗಿತ್ತು. ಇದನ್ನು ಬೆಂಗಳೂರಿಗೆ ಬಂದ ಹೊಸತರಲ್ಲಿ, ೧೯೮೪ರಲ್ಲಿ ನಾನು ಈ ಸಿನೆಮಾವನ್ನು ನೋಡಿದೆ. ಇವತ್ತಿಗೂ ಈ ಸಿನೆಮಾ ನನ್ನ ಟಾಪ್ ಟೆನ್ ಪಟ್ಟಿಯಲ್ಲಿದೆ. ಬಹುಶಃ ನಂಬರ್ ಒನ್ ಎಂದರೂ ತಪ್ಪಿಲ್ಲ.
ಓಮರ್ ಅಲ್ ಮುಖ್ತರ್ ಎಂಬ ನೈಜ ಪಾತ್ರವು ಲಿಬ್ಯಾ ದೇಶವನ್ನು ಇಟಲಿಯು ಆಕ್ರಮಿಸಿದ ವಿರುದ್ಧ ನಡೆಸಿದ ೧೦೦೦ ಯುದ್ಧಗಳ ಗಾಥೆಯನ್ನು ಸುಮಾರು ಮೂರು ತಾಸುಗಳ ಈ ಸಿನೆಮಾ ಹೇಳುತ್ತದೆ. ಓಮರ್ ಪಾತ್ರದಲ್ಲಿ ನಟಿಸಿದಾತ ಹಾಲಿವುಡ್‌ನ ಮಹಾನ್ ತಾರೆ ಆಂಥೋನಿ ಖ್ವಿನ್. ಓಮರ್‌ನ ವಯಸ್ಸಿನಷ್ಟೇ ಅಜ್ಜನಾಗಿದ್ದ ಖ್ವಿನ್ ಇಲ್ಲಿ ತನ್ನ ಜೀವಿತದ ಅಭಿನಯ ನೀಡಿದ್ದಾನೆ. ಜೊತೆಗೆ ಆಲಿವರ್ ರೀಡ್‌ನ ಘನತೆವೆತ್ತ ನಟನೆ. ಅದ್ಭುತವೆನ್ನುವ ಕ್ಯಾಮೆರಾ ಕಣ್ಣು. ನವಿರೇಳಿಸುವ ಗೆರಿಲ್ಲಾ ಯುದ್ಧದ ದೃಶ್ಯಗಳು. ಓಮರ್‌ನ ವಯೋವೃದ್ಧ, ಕ್ರಿಯಾಶೀಲ ಬದುಕಿನ ಕ್ಷಣಗಳು, ವೈರಿಗಳಿಗೂ ಅಚ್ಚರಿ ಹುಟ್ಟಿಸುವ ಸನ್ನಿವೇಶಗಳು, ಮರುಭೂಮಿ ಸಮರದ ವಿವಿಧ ಘಟನಾವಳಿಗಳು, ವಸಾಹತುಶಾಹಿಯು ಕ್ರೌರ್ಯ – ಹೀಗೆ ಹಲವು ಆಯಾಮಗಳಲ್ಲಿ ಇಡೀ ಸಿನೆಮಾ ಕಟ್ಟಿಕೊಡುವ ಜೆಹಾದೀ ಕಥೆಯನ್ನು ನೋಡಿದ ಮೇಲೆ ಜೆಹಾದಿಯ ಬಗ್ಗೆ ನಿಮಗೆ ತುಸು ಗೌರವ ಬಂದರೆ ಅಚ್ಚರಿಯಿಲ್ಲ!
ಸಿನೆಮಾದಲ್ಲಿ ಅಷ್ಟಾಗಿ ಕೊಟ್ಟಿರದ ಮಾಹಿತಿಯನ್ನು ಹಿನ್ನೆಲೆಯಾಗಿ ಕೊಡಬಯಸುವೆ:
೧೮೬೨ರಲ್ಲಿ ಹುಟ್ಟಿದ ಓಮರ್ ಹುಡುಗನಾಗಿದ್ದಾಗಲೇ ಕಣಿವೆಯ ಹಾದಿಯಲ್ಲಿದ್ದ ಸಿಂಹವನ್ನು ಕೊಂದ ದಂತಕಥೆಯ ನಾಯಕ. ಬಾಲ್ಯದಲ್ಲೇ ಖುರ್‌ಆನ್‌ನ್ನು ಬಾಯಿಪಾಠ ಮಾಡಿಕೊಂಡ ಓಮರ್ ಮುಂದೆ ಖುರ್‌ಆನ್ ಕಲಿಸುವ ಶಿಕ್ಷಕನಾದ. ಆಮೇಲೆ ಮೊದಲ ಮಹಾಯುದ್ಧದಲ್ಲಿ ಇಟಲಿ ವಿರುದ್ಧದ ಸಮರದಲ್ಲಿ ಭಾಗಿಯಾದ. ಅಷ್ಟುಹೊತ್ತಿಗೆ ವಸಾಹತುಶಾಹಿಯುಗ ಪರಾಕಾಷ್ಠೆ ತಲುಪಿತ್ತು. ಇಟಲಿಯು ಲಿಬ್ಯಾ ದೇಶವನ್ನು ಆಕ್ರಮಿಸತೊಡಗಿತು. ೧೯೧೧ರಿಂದಲೂ ನಡೆದ ಈ ಆಕ್ರಮಣದ ವಿರುದ್ಧ ಓಮರ್ ಸೆಟೆದೆದ್ದ. ಇಟಲಿ ಸರ್ಕಾರ ಅವನಿಗೆ ಆಮಿಷಗಳನ್ನೊಡ್ಡಿತು. ಹಣ, ಮನೆ, ಎಲ್ಲವನ್ನೂ ಕೊಡಲು ಮುಂದೆ ಬಂತು. ‘ ನಾನು ನೀವು ಸುಲಭವಾಗಿ ನುಂಗಬಹುದಾದ ತುತ್ತಲ್ಲ. ನನ್ನ ನಂಬಿಕೆ ಮತ್ತು ಅಭಿಮತವನ್ನು ಬದಲಿಸಲು ಅವರೆಷ್ಟೇ ಯತ್ನಿಸಿದರೂ ಅಲ್ಲಾಹ್‌ನು ಅವರನ್ನು ಇಳಿಸಿಯೇ ಇಳಿಸುತ್ತಾನೆ’ ಎಂದು ಓಮರ್ ನುಡಿದ. ‘ಒಂದೋ ನೀವು ದೇಶ ಬಿಟ್ಟು ತೊಲಗಿ, ಇಲ್ಲವೇ ಈ ಜೀವ ನನ್ನಿಂದ ಹೊರಹೋಗಲಿ. ನನಗೆ ಎಲ್ಲಕ್ಕಿಂತ ಸಾವೇ ಸನಿಹ’ ಎಂದು ಗುಡುಗಿದ.
ಅಷ್ಟು ಹೊತ್ತಿಗೆ ಓಮರ್‌ನಿಗೆ ೬೩ರ ವಯಸ್ಸು. ಸಿನೆಮಾ ಶುರುವಾಗುವುದೇ ಈ ಅಜ್ಜನ ದೃಶ್ಯಗಳಿಂದ.
[youtube=http://www.youtube.com/watch?v=i2lYatYX_2U&w=436&h=304]
೧೯೬೯ರಿಂದಲೂ ಲಿಬ್ಯಾ ದೇಶವನ್ನು ಮುಮ್ಮರ್ ಗಢಾಫಿ ಆಳುತ್ತಿದ್ದಾನೆಂಬುದು ನಿಮಗೆ ಗೊತ್ತೇ ಇದೆ. ಓಮರ್‌ನಂಥ ರಾಷ್ಟ್ರೀಯ ನಾಯಕನ ಬಗ್ಗೆ ಸಿನೆಮಾ ಮಾಡಬೇಕೆಂದು ಗಢಾಫಿ ೩೦ ಮಿಲಿಯ ಡಾಲರ್ ಕೊಟ್ಟು ಮೊಸ್ತಾಫಾ ಅಕ್ಕಾಡ್‌ನಿಂದ ಈ ಸಿನೆಮಾ ತಯಾರಿಸಿದ. ಗಢಾಫಿ ಒಬ್ಬ ಭಯೋತ್ಪಾದಕ ಎಂದು ಅಮೆರಿಕಾ ಗದರಿದ್ದು, ದಾಳಿ ನಡೆಸಿದ್ದು, ಗಢಾಫಿ ಈಗ ತನ್ನ ಆಡಳಿತ ಶೈಲಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಂಡು ಪಾಶ್ಚಾತ್ಯ ದೇಶಗಳ ಶ್ಲಾಘನೆಗೆ ಪಾತ್ರವಾಗುತ್ತಿರುವುದು, ಲಿಬ್ಯಾ ಈಗ ಜಗತ್ತಿನಲ್ಲೇ ಆರ್ಥಿಕವಾಗಿ ಅತಿ ಬಲಿಷ್ಠವಾದ, ಸಿರಿವಂತ ದೇಶವಾಗಿರುವುದು, – ಹೊಸ ಇತಿಹಾಸ.
ಓಮರ್ ಮುಖ್ತರ್ ಹೇಗೆ ಬಲವಾದ ಇಟಲಿ ಸೇನೆಯನ್ನು ತನ್ನ ಜುಜುಬಿ ಅಶ್ವದಳದ ಮೂಲಕವೇ ಮಣಿಸುತ್ತಾನೆ, ಏನೆಲ್ಲ ತಂತ್ರಗಳನ್ನು ಬಳಸಿ ವೈರಿ ಸೇನೆ ತತ್ತರಿಸುವಂತೆ ಮಾಡುತ್ತಾನೆ, ಕೊನೆಗೆ ಹೇಗೆ ಸೆರೆಸಿಕ್ಕಿದರೂ ತನ್ನ ನಿಲುವು ಬಿಡದೆ ಹೇಗೆ ನೇಣುಗಂಬವನ್ನೇರುತ್ತಾನೆ….. ಇದೆಲ್ಲ ಸನ್ನಿವೇಶಗಳನ್ನು ಸವಿಯುವುದಕ್ಕೆ ನಿಮಗೆ ಕೊಂಚ ಸಹನೆಯೂ ಬೇಕು. ಯಾಕೆಂದರೆ ಸಿನೆಮಾ ಒಮ್ಮೆ ವೇಗವಾಗಿ ಸಾಗುತ್ತದೆ. ಮತ್ತೊಮ್ಮೆ ನಿಧಾನವಾಗುತ್ತದೆ. ಓಮರ್‌ನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ ಖ್ವಿನ್‌ನ ಮುಖದಲ್ಲೇ ಮಡುಗಟ್ಟಿದ ನಿರ್ಧಾರಗಳನ್ನು ನೋಡುವುದೇ ಒಂದು ಸೊಗಸು. ಪ್ರತೀ ಸನ್ನಿವೇಶದಲ್ಲೂ ಓಮರ್ ನಿರ್ಧಾರ ತೆಗೆದುಕೊಳ್ಳುವ ರೀತಿಯೂ ಅನನ್ಯ.
ಉದಾಹರಣೆಗೆ, ಇಟಾಲಿಯನ್ ಪಡೆಯನ್ನು ಉಧ್ವಸ್ಥಗೊಳಿಸಿದ ಒಂದು ಘಟನೆಯಲ್ಲಿ ಇಬಬ್ರು ಇಟಲಿ ಜವಾನರು ಸಿಕ್ಕಿಬೀಳುತ್ತಾರೆ. `ಹುಡುಗ’ ಎಂದು ಕರೆದು ಯುವ ಜವಾನನನ್ನು ಓಮರ್ ಬಿಟ್ಟು ಬಿಡುತ್ತಾನೆ. ‘ನಾವು ಖೈದಿಗಳನ್ನು ಕೊಲ್ಲಬಾರದು’ ಎನ್ನುತ್ತಾನೆ. ಅವನ ಬಂಟರು ‘ಅವರು ನಮ್ಮನ್ನು ಕೊಲ್ಲುತ್ತಾರಲ್ಲ?’ ಎಂದು ಪ್ರಶ್ನಿಸಿದರೆ ಓಮರ್ ಗಟ್ಟಿಯಾಗಿ ಉತ್ತರಿಸುತ್ತಾನೆ: ‘ಅವರು ನಮ್ಮ ಶಿಕ್ಷಕರಲ್ಲ!’ ಇಂಥ ಹತ್ತು ಹಲವು ಡೈಲಾಗುಗಳನ್ನು ನೀವು ಈ ಸಿನೆಮಾದಲ್ಲಿ ಕಾಣಬಹುದು. ಮೂವತ್ತು ವರ್ಷಗಳ ಹಿಂದೆ ತಯಾರಾದ ಈ ಸಿನೆಮಾ ದೃಶ್ಯಗಳನ್ನು ನಿಧಾನವಾಗಿ ಕಟ್ಟಿಕೊಡುವ ಬಗೆ ಈಗಿನ ಕಾಲಕ್ಕೆ ಕೊಂಚ ಸ್ಲೋ ಅನ್ನಿಸಿದರೂ, ಗೆರಿಲ್ಲಾ ಸಮರದ ರಸಘಟ್ಟಿಗಳೆಂದು ಸ್ವೀಕರಿಸಬಹುದು!
ಓಮರ್‌ನ ಕನ್ನಡಕವನ್ನು ಬಾಲಕನೊಬ್ಬ ವಧಾಸ್ಥಾನದಿಂದ ತೆಗೆದುಕೊಳ್ಳುವ ದೃಶ್ಯ, ಅದಕ್ಕಿಂತ ಮೊದಲು ಅದೇ ಬಾಲಕನಿಗೆ ಓಮರ್ ಹೇಳಿಕೊಟ್ಟ ಪಾಠ – ಇವೆಲ್ಲ ಈ ಸಿನೆಮಾದ ಭಾವುಕ ಸನ್ನಿವೇಶಗಳು.
ಇಟಲಿಯ ನೂತನ ಜನರಲ್ ಆಗಿದ್ದ ಗ್ರಾಝಿಯಾನಿ (ಆಲಿವರ್ ರೀಡ್‌ನ ಪಾತ್ರ) ಮುಂದೊಮ್ಮೆ ಓಮರ್‌ನನ್ನು ಮನಸಾರೆ ಹೊಗಳುತ್ತಾನೆ.
೧೯೩೧ರ ಸೆಪ್ಟೆಂಬರ್ ೧೧ರಂದು ಓಮರ್‌ನನ್ನು ಬಂಧಿಸಿದರು ಎನ್ನುವುದಕ್ಕೂ, ೨೦೦೧ರ ಸೆಪ್ಟೆಂಬರ್ ೧೧ರಂದು ಅಮೆರಿಕಾದ ಕಟ್ಟಡಗಳ ಮೇಲೆ ಇಸ್ಲಾಮಿಕ್ ಭಯೋತ್ಪಾದಕರ ದಾಳಿ ನಡೆಯಿತು ಎನ್ನುವುದಕ್ಕೂ ಸಂಬಂಧ ಇದೆಯೆಂದು ಸಿ ಐ ಎ ಕೂಡಾ ಹೇಳಿದ ನೆನಪಿಲ್ಲ. ಇದೊಂದು ‘ಕಾಕತಾಳೀಯ ಸಂಬಂಧ’ ಎಂದಾದರೂ ಸರಿಯೆ, ಈ ಮಾಹಿತಿಯನ್ನು ಹುಡುಕಿದ ಕೀರ್ತಿ ನನಗೆ ಸಲ್ಲುತ್ತದೆ! (ಇದನ್ನು ಇನ್ನೊಬ್ಬರು ಹೇಳಿದ್ದಾರೆ ಎಂದು ಗೊತ್ತಾಗುವವರೆಗೆ!!). ಓಮರ್ ಗಲ್ಲಿಗೇರಿದ್ದು ೧೯೩೧ರ ಸೆಪ್ಟೆಂಬರ್ ೧೬ರಂದು.
ಅದಿರಲಿ, ೧೯೨೮ – ೩೨ರ ಅವಧಿಯಲ್ಲಿ ಇಟಲಿಯ ವಸಾಹತುಶಾಹಿ ಸರ್ಕಾರವು ಲಿಬ್ಯಾ ದೇಶದ ಅರ್ಧಕ್ಕರ್ಧ ಜನರನ್ನು ಯಾತನಾಶಿಬಿರಗಳಿಗೆ ದೂಡಿ ಹಸಿವಿನಿಂದಲೇ ಸಾಯಿಸಿದ್ದೂ ಈಗ ಇತಿಹಾಸ. ಈ ಇತಿಹಾಸದ ಅಪರಾಧಕ್ಕೆ ಪ್ರಾಯಶ್ಚಿತ್ತವಾಗಿ ೫ ಬಿಲಿಯ ಡಾಲರ್‌ಗಳನ್ನು ಲಿಬ್ಯಾಗೆ ಕೊಡಲು ಇಟಲಿ ೨೦೦೮ರಲ್ಲಿ ಒಪ್ಪಿಕೊಂಡಿದೆ. ಇದೇ ಸಾಕಲ್ಲ, ಓಮರ್‌ನ ಧರ್ಮಯುದ್ಧ ನಿಜಕ್ಕೆ ಹತ್ತಿರವಾಗಿತ್ತು ಎನ್ನಲಿಕ್ಕೆ? ಆದರೂ ಈ ಸಿನೆಮಾದ ಬಗ್ಗೆ ಪಾಶ್ಚಾತ್ಯ ವಿಮರ್ಶೆಗಳು ವಕ್ರವಾಗಿಯೇ ಇವೆ. ಗಢಾಫಿ ಮಾಡಿದ್ದೆಲ್ಲ ತಪ್ಪು ಎನ್ನುವ ಕಾಲವದು. ಆಗಿನ ತಪ್ಪುಗಳನ್ನು ಈಗ ಗಢಾಫಿಯೇ ಒಪ್ಪಿಕೊಂಡಿದ್ದಾನೆ. ಇರಾಖಿನ ಸದ್ದಾಂ ಥರ ವಧೆಯಾಗುವುದಕ್ಕೆ ಗಢಾಫಿಗೆ ಇಷ್ಟವಿಲ್ಲ.
ಎಪ್ಪತ್ತು ಸಮೀಪಿಸಿದ ಓಮರ್ ಅಲ್ ಮುಖ್ತರ್ ಎಂಬ ಅಜ್ಜನ ಹೋರಾಟದ ಕಥೆಗೂ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ಹೋಲಿಕೆಯಿಲ್ಲ. ಆದರೆ ಬಂದೂಕಿನ ಆಕ್ರಮಣಕ್ಕೆ ಬಂದೂಕಿನಿಂದಲೇ ಉತ್ತರ ಕೊಡಬೇಕಾಗುತ್ತದೆ ಎಂಬ ಐತಿಹಾಸಿಕ ಅನಿವಾರ್ಯತೆಗೆ ಸಿಲುಕಿದ ಓಮರ್‌ನನ್ನು ಮುಕ್ತವಾಗಿ ಬೆಂಬಲಿಸಬಹುದು ಅನ್ನಿಸುತ್ತದೆ. ಭಾರತದ ನೇತಾಜಿ ಸುಭಾಷ್ ಚಂದ್ರ ಬೋಸ್‌ರನ್ನು ನೆನಪಿಸುವ ‘ಓಮರ್ ಮುಖ್ತರ್’ ಇಂದಿಗೂ ನನ್ನ ಮನಃಪಟಲದಲ್ಲಿ ಅಚ್ಚೊತ್ತಿದ ಮುಖ.
ಓಮರ್‌ನನ್ನು ಹೀಗೆ ಸಜೀವವಾಗಿ ಪರಿಚಯಿಸಿದ ಆಂಥೋನಿ ಖ್ವಿನ್‌ಗೆ ಅಭಿವಂದನೆ ಹೇಳೋಣ.
ಈಗ ನಿಮಗೆ ಖ್ವಿನ್ ಬಗ್ಗೆ ಕುತೂಹಲ ಹುಟ್ಟಿದ್ದರೆ ಅವನದೂ ಒಂದು ಮುಖ್ತ ವಿಕ್ಷಿಪ್ತ ಪಾತ್ರವಿರುವ, ಡೇವಿಡ್ ನಿವೆನ್, ಗ್ರೆಗೊರಿ ಪೆಕ್ ಮುಂತಾದ ಘಟಾನುಘಟಿಗಳು ನಟಿಸಿದ ‘ದಿ ಗನ್ಸ್ ಆಫ್ ನೆವರೋನ್’ ನೋಡಲು ಮರೆಯದಿರಿ!
[youtube=http://www.youtube.com/watch?v=Vy0ReNSffjA&w=445&h=364]