ಭಾರತದಲ್ಲಿ ಮಾರಾಟವಾಗುವ ಎಲ್ಲ ಐಟಿ ಸಾಧನಗಳಲ್ಲಿ ಭಾರತೀಯ ಭಾಷೆಗಳನ್ನು ಬಳಸುವ ತಂತ್ರಾಂಶಗಳನ್ನು ಮಾರಾಟಕ್ಕೆ ಮೊದಲೇ ಅಳವಡಿಸಿರಬೇಕು ಎಂಬ ಒತ್ತಾಯವನ್ನು ಮಾಡಿದ ಆನ್‌ಲೈನ್ ಅರ್ಜಿಯನ್ನು ನಾನು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ರವಿಶಂಕರ ಪ್ರಸಾದ್ ಅವರಿಗೆ ಇಂದು (೯ ಡಿಸೆಂಬರ್ ೨೦೧೬) ಹೊಸದಿಲ್ಲಿಯ ಎಲೆಕ್ಟ್ರಾನಿಕ್ಸ್ ಸದನದ ಅವರ ಕಚೇರಿಯಲ್ಲಿ ಖುದ್ದಾಗಿ ತಲುಪಿಸಿದೆ. ಈ ಅರ್ಜಿಗೆ ೪೭೫ ಜನರು ಸಹಿ ಹಾಕಿರುವುದನ್ನು ಅವರ ಗಮನಕ್ಕೆ ತಂದೆ. ಮಿತ್ರಮಾಧ್ಯಮ ಟ್ರಸ್ಟ್ ಮತ್ತು ಡೆವಲಪ್‌ಮೆಂಟ್ ಫೌಂಡೇಶನ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಾನು ಈ ಅರ್ಜಿಯನ್ನು ಹಲವು ನೀತಿ ನಿರೂಪಕರಿಗೆ ಸಲ್ಲಿಸಿದೆ.
ಭಾರತೀಯ ಭಾಷೆಗಳನ್ನು ತಂತ್ರಾಂಶಗಳ ಮೂಲಕ ಐಟಿ ಸಾಧನಗಳಲ್ಲಿ ಅಳವಡಿಸದೇ ಇದ್ದರೆ ಇಂಗ್ಲಿಶಿನ ಪ್ರಾಬಲ್ಯ ಹೆಚ್ಚಾಗುತ್ತದೆ ಎಂಬುದನ್ನೂ ಅವರ ಗಮನಕ್ಕೆ ತಂದೆ. ಈ ಕುರಿತು ಪ್ರತಿಕ್ರಿಯಿಸಿದ ಅವರು ಸೂಕ್ತ ಕ್ರಮವನ್ನು ಕೈಗೊಳ್ಳುವುದಾಗಿ ತಿಳಿಸಿದರಲ್ಲದೆ, ನನ್ನ ಮನವಿಯನ್ನು ಅಧ್ಯಯನ ಮಾಡುವಂತೆ ತಮ್ಮ ಅಧಿಕಾರಿಗಳಿಗೆ ಸೂಚಿಸಿದರು.
ಈ ಅರ್ಜಿಯ ಜೊತೆಗೇ ಭಾರತೀಯ ಭಾಷೆಗಳಿಗಾಗಿ ತಂತ್ರಜ್ಞಾನ ರೂಪಿಸುವ ಟೆಕ್ನಾಲಜಿ ಡೆವಲಪ್‌ಮೆಂಟ್ ಫಾರ್ ಇಂಡಿಯನ್ ಲಾಂಗ್ವೇಜಸ್ (ಟಿಡಿಐಎಲ್) ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ಏನೇನಾಗಬೇಕೆಂದು ಸೂಚಿಸುವ ೨೦ಕ್ಕೂ ಹೆಚ್ಚು ಕಾರ್ಯಸೂಚಿಯಿರುವ ಬೇಡಿಕೆ ಪತ್ರವನ್ನೂ ನಾನು ಶ್ರೀ ರವಿಶಂಕರ್ ಪ್ರಸಾದ್‌ರವರಿಗೆ ಸಲ್ಲಿಸಿದೆ. ಆಗಬೇಕಾದ ಒಂದು ಕೆಲಸದ ಉದಾಹರಣೆ ಕೊಡಿ ಎಂದು ಅವರು ನನ್ನನ್ನು ಕೇಳಿದಾಗ, ಬಹುಭಾಷಾ ಓಸಿಆರ್‌ನ್ನು ರೂಪಿಸಲಾಗಿದೆ ಎಂದು ಹತ್ತು ವರ್ಷಗಳ ವಾರ್ಷಿಕ ವರದಿಗಳಲ್ಲಿ ತಿಳಿಸಿರುವ ಸಿ-ಡ್ಯಾಕ್ ಸಾರ್ವಜನಿಕರಿಗೆ ಈಗಲೂ ಈ ಓಸಿಆರ್‌ನ್ನು ತಲುಪಿಸಿಲ್ಲ ಎಂದು ಉದಾಹರಿಸಿದೆ. (ಈ ಹೇಳಿಕ್‌ಎ ತಪ್ಪಿದ್ದರೆ ಇದನ್ನು ಓದಿದವರು ಸರಿಪಡಿಸಬಹುದು!!). ನನ್ನ ಈ ಉದಾಹರಣೆಯನ್ನು ಸಚಿವರು ಗಮನವಿಟ್ಟು ಕೇಳಿದರು.
ಚೇಂಜ್ ಆರ್ಗ್ ನ ನಮ್ಮ ಆನ್‌ಲೈನ್ ಅರ್ಜಿಯನ್ನು ಹಿಂದಿನ ದಿನವೇ (೮ ಡಿಸೆಂಬರ್ ೨೦೧೬) ನಾನು ಪ್ರಧಾನಮಂತ್ರಿಯವರ ಕಚೇರಿಗೂ ಹೋಗಿ ಅನೌಪಚಾರಿಕವಾಗಿ ಸಲ್ಲಿಸಿದೆ. ಅಲ್ಲಿನ ಅಧಿಕಾರಿಯು ಈ ಬಗ್ಗೆ ಅಧಿಕೃತ ಮನವಿ ಸಲ್ಲಿಕೆಯಾದ ಕೂಡಲೇ ಗಮನ ಹರಿಸುವುದಾಗಿ ತಿಳಿಸಿದರು. ಆದರೆ ಹದಿನೈದು ನಿಮಿಷಗಳ ಕಾಲ ಅವರು ನನ್ನ ಈ ಮನವಿಯ ಬಗ್ಗೆ ಅತ್ಯಂತ ಕಾಳಜಿಯಿಂದ ವಿಚಾರಿಸಿ ಮಾಹಿತಿ ಪಡೆದುಕೊಂಡರು.
ಇದಲ್ಲದೆ ಈ ಅರ್ಜಿಯನ್ನು ನಾನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಹಾಯಕ ಸಚಿವ (ಸ್ವತಂತ್ರ ಖಾತೆ) ಶ್ರೀ ಧರ್ಮೇಂದ್ರ ಪ್ರಧಾನ್‌ರವರಿಗೂ ತಲುಪಿಸಿದೆ. ಹಣರಹಿತ ಆರ್ಥಿಕತೆಯತ್ತ ಸಾಗುವ ಯತ್ನದಲ್ಲಿ ಮೂಡುವ ಹೊಸ ಐಟಿ ಸಾಧನ ಮತ್ತು ಸಂವಹನಗಳಲ್ಲಿ ಭಾರತೀಯ ಭಾಷೆಗಳನ್ನು ಕಡೆಗಣಿಸಬಾರದು; ಇದರಲ್ಲಿ ಪ್ರತಿದಿನ ನಾಲ್ಕೂವರೆ ಕೋಟಿ ಗ್ರಾಹಕರೊಂದಿಗೆ ವ್ಯವಹರಿಸುವ ಪೆಟ್ರೋಲಿಯಂ ಇಲಾಖೆಯ ಪಾತ್ರ ಮಹತ್ವದ್ದು ಎಂದು ಅವರಿಗೆ ತಿಳಿಸಿದೆ. ನನ್ನ ಮನವಿಯನ್ನು ಅತ್ಯಂತ ಗಮನವಹಿಸಿ ಕೇಳಿದ ಅವರು ಆಗಷ್ಟೇ ನಡೆಯಲಿದ್ದ ಪೆಟ್ರೋಲಿಯಂ ಖಾತೆಯ ಹಣರಹಿತ ವ್ಯವಹಾರದ ವಿಮರ್ಶಾ ಸಭೆಗೆ ಕರೆದುಕೊಂಡು ಹೋದರು. ಅಲ್ಲಿ ಅವರು ನಾನು ಬಂದ ಉದ್ದೇಶವನ್ನು ದೇಶದ ಎಲ್ಲ ಸಾರ್ವಜನಿಕ ರಂಗದ ಪೆಟ್ರೋಲಿಯಂ ಕಂಪನಿಗಳ ಮುಖ್ಯಸ್ಥರಿಗೆ ತಿಳಿಸಿ ಪೆಟ್ರೋಲಿಯಂ ಇಲಾಖೆಯು ಮೊಟ್ಟಮೊದಲು ಭಾರತೀಯ ಭಾಷಾ ಸಂವಹನಕ್ಕೆ ಮುಂದಾಗಬೇಕು ಎಂದು ಸೂಚಿಸಿದರು. ಅಲ್ಲದೆ ಸಮಾಜತಾಣಗಳಲ್ಲೂ ಭಾರತೀಯ ಭಾಷೆಗಳನ್ನು ಬಳಸಬೇಕು ಎಂದು ಸೂಚಿಸಿದರು.
ಇದೇ ರೀತಿ ನಾನು ಭಾರತದ ಮಾರುಕಟ್ಟೆಗೆ ಬರುವ ಎಲ್ಲ ಸಿದ್ಧ ಪೊಟ್ಟಣಗಳ ಮೇಲೆ ಒಂದಾದರೂ ಭಾರತೀಯ ಭಾಷೆಯಲ್ಲಿ ಶೀರ್ಷಿಕೆ ಮತ್ತು ಮುಖ್ಯ ಮಾಹಿತಿ ಇರಬೇಕು ಎಂಬ ಒತ್ತಾಯವನ್ನು ಮಾಡಿ, ಈ ಕುರಿತ ಮನವಿ ಪತ್ರವನ್ನು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಖಾತೆ ಸಹಾಯಕ ಸಚಿವೆ (ಸ್ವತಂತ್ರ ಖಾತೆ) ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್‌ರವರಿಗೆ ಸಲ್ಲಿಸಿದೆ.
ಈ ಕುರಿತು ನೀತಿ ಆಯೋಗಕ್ಕೂ ಒಂದು ಮನವಿಯನ್ನು ಸಿದ್ಧಪಡಿಸಿಕೊಂಡು ಹೋಗಿದ್ದ ನನಗೆ ಅಲ್ಲಿನ ಮುಖ್ಯಸ್ಥರನ್ನು ಭೇಟಿ ಮಾಡಲಾಗಲಿಲ್ಲ.
ನಾನು ಸಚಿವರುಗಳಿಗೆ ಸಲ್ಲಿಸಿದ ಈ ಆನ್‌ಲೈನ್ ಅರ್ಜಿಗೆ ಸಹಿ ಹಾಕಿದ ಎಲ್ಲರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ಮುಂದಿನ ದಿನಗಳಲ್ಲಿ ಈ ಅರ್ಜಿಯ ಬೇಡಿಕೆಗಳು ವಸ್ತುಶಃ ಜಾರಿಯಾಗುವಂತೆ ಪ್ರಯತ್ನವನ್ನು ಮುಂದುವರಿಸುತ್ತೇನೆ ಎಂದು ಈ ಮೂಲಕ ತಿಳಿಸಬಯಸುತ್ತೇನೆ.
ನನ್ನ ದಿಲ್ಲಿ ಪ್ರವಾಸಕ್ಕೆ ಸಹಕರಿಸಿದ ಒಬ್ಬ ಅರ್ಜಿದಾರ ಶ್ರೀ ಎಂ ಪಿ ಕುಮಾರ್ (ಗ್ಲೋಬಲ್ ಎಡ್ಜ್ ಸಾಫ್ಟ್‌ವೇರ್ ಸಂಸ್ಥೆಯ ಮುಖ್ಯಸ್ಥರು ಮತ್ತು ನನ್ನ ಸ್ನೇಹಿತರು), ದಿಲ್ಲಿಯಲ್ಲಿ ನನಗೆ ಸಂಪರ್ಕಗಳನ್ನು ಒದಗಿಸಿದ ಜೈವಿಕ ಇಂಧನ ಕಾರ್ಯಪಡೆಯ ಅಧ್ಯಕ್ಷ ಶ್ರೀ ವೈ ಬಿ ರಾಮಕೃಷ್ಣ ಇವರಿಗೆ, ನನ್ನೆಲ್ಲ ಸಾರ್ವಜನಿಕ ಹಿತಾಸಕ್ತಿಯ ಕೆಲಸಗಳಿಗೆ ಸದಾ ಬೆಂಬಲ ಕೊಡುತ್ತ ಬಂದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ಶ್ರೀ ದತ್ತಾತ್ರೇಯ ಹೊಸಬಾಳೆಯವರಿಗೆ ನನ್ನ ವಿಶೇಷ ವಂದನೆಗಳು.
=============================================================
9 DEC 2016 — Today (9 December 2016) I met Shri Ravishankar Prasad, Union Minister for Electronics and Information Technology, Government of India, at his New Delhi Office and submitted the Online Petition. I explained him the reason behind this important demand and sensitised him about the dangers of losing our language, if English hegemony is spread in the coming days.
He listened to my concerns with patience and promised that my petition would be looked into seriously. He also instructed his Officer to take note of and make a documentation.
Friends, this is just a small beginning of a long campaign as we have to ensure proper legislation / Executive Order towards fulfilling our demand. Let us work together. With all the support from you, I am confident of taking this issue forward.
I am forwarding this petition to Shri Ram Vilas Paswan, Union Minister for Consumer Affairs, Food and Public Distribution, as his ministry is responsible for making suitable orders.
Regards
Beluru Sudarshana