‘ಕವಲು’ ಕಾದಂಬರಿ ಬಿಡುಗಡೆಯಾಗಿ ಒಂದೇ ವಾರದಲ್ಲಿ ಮೂರು ಮರುಮುದ್ರಣಗಳನ್ನು ಕಂಡಿದೆ. ಹಾಗಾದರೆ ಅದು ಕಾದಂಬರಿಯ ಯಶಸ್ಸು ಅಲ್ಲವೆ? ಇಷ್ಟಾಗಿಯೂ ಭೈರಪ್ಪನವರು ತಮ್ಮ ಕಾದಂಬರಿಗಳ ಮೇಲೆ `ಸರಿಯಾದ’ ವಿಮರ್ಶೆ ಆಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸುವುದೇಕೆ? ಕಾದಂಬರಿಯ ಯಶಸ್ಸಿನ ಮಾನದಂಡ ಯಾವುದು? ಅದರ ಮಾರಾಟವೋ, ಓದುಗರಲ್ಲಿ ಕಾದಂಬರಿಯನ್ನು ಓದಿದ ಮೇಲೆ ಮನಸ್ಸಿನಲ್ಲಿ ನಿಲ್ಲುವ ಭಾವುಕ ಕ್ಷಣಗಳೋ, ವಿಮರ್ಶಕರು ಅಳೆದು ತೂಗಿ ಬರೆದ ಮೌಲ್ಯಮಾಪನದ ಮಾತುಗಳೋ?
ಭೈರಪ್ಪನವರ ಕಾದಂಬರಿಗಳನ್ನು ನನ್ನ ಪ್ರೈಮರಿ ಶಾಲಾ ದಿನಗಳಿಂದಲೂ ಪದೇ ಪದೇ ಓದುತ್ತ ಬಂದಿರುವ ನನಗೆ ಈ ಪ್ರಶ್ನೆ ಮೂಡಲು ಕಾರಣ ಇಷ್ಟೆ: ನಾನೀಗ ಪತ್ರಕರ್ತ – ಬ್ಲಾಗರ್ ಆಗಿ, ಭೈರಪ್ಪನವರ ಕಾದಂಬರಿಗಳ ನಿಯಮಿತ ಓದುಗನೂ ಆಗಿ ‘ಕವಲು’ ಒಂದು ತೆವಲು ಮಾತ್ರ ಎಂದು ಬರೆಯುವ ಅಧಿಕಪ್ರಸಂಗಿತನ ತೋರಿದರೆ ಅದನ್ನು ಓದುಗರ ಅಭಿಪ್ರಾಯ ಎಂದು ತಿಳಿಯುತ್ತೀರೋ, ವಿಮರ್ಶಕನ ಮಾತು ಎಂದು ಬಗೆಯುತ್ತೀರೋ, ಅಥವಾ ಮಾರಾಟವನ್ನು ಕಂಡು ಕರುಬುತ್ತಿರುವ ಕಿಲುಬು ಮನಸ್ಸಿನವನೆಂದು ಹಳಿಯುತ್ತೀರೋ?
ನೀವು ಏನಾದರೂ ಮಾಡಿ, ನಾನಂತೂ ‘ಕವಲು’ ಕಾದಂಬರಿಯು ಹಳಸಲು, ಮತ್ತೆ ಮತ್ತೆ ಜಗಿದು ಜಗಿದು ರಸ ಬತ್ತಿ ಹೋಗಿರುವ ವಿಚಾರಗಳನ್ನು ಹೊಸ ಪಾತ್ರಗಳ ಮೂಲಕ ದಾಖಲಿಸಲು ಮಾಡಿದ ಒಂದು ತೆವಲು ಎಂದು ಕರೆಯುತ್ತೇನೆ.
`ಭಾರತೀಯ ಸಮಾಜದಲ್ಲಿ ಕವಲು ದಾರಿ ಹಿಡಿಯುತ್ತಿರುವ ಮೌಲ್ಯಗಳನ್ನು ಹೃದಯ ಕಲಕುವಂತೆ ಶೋಧಿಸುತ್ತಾ ಸಮಕಾಲೀನ ಜೀವನಕ್ಕೆ ಕನ್ನಡಿಯಾಗಿರುವ ಕಾದಂಬರಿ ಇದು’ ಎಂದು ಹೆಸರಿಲ್ಲದವರು / ಪ್ರಕಾಶಕರು ಕಾದಂಬರಿ ಓದುವ ಮೊದಲೇ ನಿಮ್ಮನ್ನು ಎಚ್ಚರಿಸುವ ಮಾತುಗಳು ‘ಕವಲು’ ಪುಸ್ತಕವನ್ನು ತೆರೆದ ಕೂಡಲೇ ಕಾಣಿಸುತ್ತವೆ. ಇದರರ್ಥ ಏನು? ಕಾದಂಬರಿಕಾರ ಎಷ್ಟೇ ಪ್ರಸಿದ್ಧನಾಗಿರಲಿ, ಇಂಥ ಸರ್ಟಿಫಿಕೇಟ್ ಯುಕ್ತ ಪುಟದೊಂದಿಗೆ ಪುಸ್ತಕವನ್ನು ಪ್ರಕಟಿಸಿದರೆ ಅದನ್ನು ನಂಬಬೇಕು ಎಂದಿದೆಯೆ? ಮೊದಲೇ ನಿಮ್ಮನ್ನು ಇದು ಇಂಥ ಮಹಾನ್ ಕಾದಂಬರಿ ಎಂದು ಎಚ್ಚರಿಸುವ ಕೆಲಸ. ಇದನ್ನು ಮಾಡಿದ ಮೇಲೆ ವಿಮರ್ಶೆ ಆಗಬೇಕು ಎಂದು ಹಪಹಪಿಸುವುದು ಎಷ್ಟು ಸರಿ?
ಇನ್ನು ಭೈರಪ್ಪನವರು ವಿಜಯ ಕರ್ನಾಟಕಕ್ಕೆ ನೀಡಿದ ಸಂದರ್ಶನದಲ್ಲಿ ಹೀಗೆ ಹೇಳಿದ್ದಾರೆ :
‘ಇತ್ತೀಚಿನ ವರ್ಷಗಳಲ್ಲಿ ನಮ್ಮ ಮೇಲೆ ಪ್ರಭಾವ ಬೀರಿದ ಹಲವು ಸಂಗತಿಗಳು ಪಶ್ಚಿಮ ಜಗತ್ತಿನದ್ದೇ. ಆ ಹಿನ್ನೆಲೆಯಲ್ಲಿ ಪ್ರಭಾವಿತರಾಗಿರುವ ನಾವು ಏನನ್ನು ಉಳಿಸಿಕೊಳ್ಳಬೇಕು? ಏನು ಬೇಡ ಎಂಬುದರ ಬಗ್ಗೆ ಯೋಚಿಸುತ್ತಿಲ್ಲ. ನಾವು ಆಧುನಿಕರಾಗಬೇಕು ನಿಜ. ಆದರೆ ಎಷ್ಟರಮಟ್ಟಿಗೆ? ಯಾವ ರೀತಿ? ಯಾವುದರಲ್ಲಿ ಎಂಬುದೂ ಸ್ಪಷ್ಟವಾಗಬೇಕಲ್ಲ? ಇದರ ಮಧ್ಯೆ ನಮ್ಮದೆನಿಸುವ ಮೌಲ್ಯಗಳನ್ನು ಹೇಗೆ ಉಳಿಸಿಕೊಳ್ಳಬೇಕೆಂಬುದೂ ಅವಶ್ಯ. ಈಗ ನಮ್ಮ ಕುಟುಂಬ ವ್ಯವಸ್ಥೆಯ ಮೇಲೆ ದೊಡ್ಡ ಪೆಟ್ಟು ಬಿದ್ದಿದೆ. ತಂದೆ-ತಾಯಿ-ಮಕ್ಕಳು, ಹಿರಿಯರು – ಮಗ – ಸೊಸೆ, ಗಂಡ – ಹೆಂಡತಿ… ಹೀಗೆ ಸಂಬಂಧಗಳು ಸಡಿಲವಾಗಿವೆ ಎನ್ನುವುದಕ್ಕಿಂತ ಪುಡಿಪುಡಿಯಾಗಿವೆ.’
‘ಕವಲು’ ಕಾದಂಬರಿಯನ್ನು ಓದುವವರು ಭೈರಪ್ಪನವರ ಈ ಮಾತುಗಳನ್ನು ಓದಿಕೊಂಡಿದ್ದರೆ, ನಾನು ಯಾಕೆ ಮತ್ತೆ ಅವನ್ನು ಇಲ್ಲಿ ಉದ್ಧರಿಸಿದೆ ಎಂದು ಗೊತ್ತಾಗುತ್ತದೆ. ‘ಕವಲು’ ಕಾದಂಬರಿಯು ಭೈರಪ್ಪನವರ ‘ತಂತು’ ಕಾದಂಬರಿಯ ಸಿಕ್ವೆಲ್ ಅನ್ನೋ ಥರ ಇದೆಯಷ್ಟೇ ಹೊರತು, ಅದರಲ್ಲೇನೂ ಹೊಸತಿಲ್ಲ.
ಅದಿರಲಿ, ಭೈರಪ್ಪನವರು ತಮ್ಮ ಸರಿಸುಮಾರು ಎಲ್ಲ ಕಾದಂಬರಿಗಳಲ್ಲೂ ವಿಫಲ ಸಂಬಂಧಗಳು, ಅನುಕೂಲವಾದಿ ಸಂಬಂಧಗಳು, ಆಯ್ಕೆಯ ವಿವಾಹೇತರ ಸಂಬಂಧಗಳು, – ಇವನ್ನೇ ಪದೇ ಪದೇ ಬಿಂಬಿಸಿದ್ದಾರಲ್ಲ, ಇದನ್ನು ಮಾತ್ರವೇ ಸಮಕಾಲೀನ ಜೀವನ ಎಂದು ಕರೆಯಬೇಕೆ? ಭಾರತವೂ ಸೇರಿದಂತೆ ಇಡೀ ಪ್ರಪಂಚದಲ್ಲಿ ಇಂಥ ಸಂಬಂಧಗಳು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿವೆ. ಇಲ್ಲಿ ವಿಘಟನೆಯ ಮಾತೆಲ್ಲಿದೆ? ಸಮಾಜದ ಕಣ್ಣಲ್ಲಿ ಅಕ್ರಮ ಎಂದೆನಿಸುವ ಸಂಬಂಧಗಳು ಮಾತ್ರವೇ ಭಾರತೀಯ ಜೀವನದ ಮೌಲ್ಯದ ಅಧಃಪತನದ ಮಾನದಂಡ ಎನ್ನುವಂತೆ ಮತ್ತೆ ಮತ್ತೆ ಭೈರಪ್ಪನವರು ಇಂಥದ್ದೇ ಕಥೆಗಳನ್ನು ಲ್ಯಾಬೋರೇಟರಿಯಲ್ಲಿ ಸೃಷ್ಟಿಸಿದಂತೆ ಜಗತ್ತಿನ ಬೇರಾವ ಆಗುಹೋಗುಗಳಿಗೂ ಸಂಬಂಧವೇ ಇಲ್ಲದಂತೆ ಸೃಷ್ಟಿಸುತ್ತಾರಲ್ಲ, ಇದನ್ನು ನಾವು ಕವಲು ದಾರಿ ಹಿಡಿಯುತ್ತಿರುವ ಮೌಲ್ಯಗಳೆಂದು ಕರೆಯಬೇಕೆ? ವಿವಾಹೇತರ ಸಂಬಂಧಗಳ ಅದೇ ಹಳಸಲು ಕಥೆಯನ್ನು ಮತ್ತೊಂದಿಷ್ಟು ಸಮಕಾಲೀನವೂ ಅಲ್ಲದ ವಿಚಿತ್ರ ಪಾತ್ರಗಳ ಮತ್ತು ಸನ್ನಿವೇಶಗಳ ಮೂಲಕ ಓದುಗರ ಮುಂದಿಟ್ಟಿರುವ ಭೈರಪ್ಪನವರ ಈ `ವಿಕೃತ ಸಮಷ್ಟಿ ನೋಟ’ದಲ್ಲಿ ಕೇವಲ ಲೈಂಗಿಕ ಸಂಬಂಧಗಳೇ ಮೌಲ್ಯದ ಅಳಿವು – ಉಳಿವನ್ನು ನಿರ್ಧರಿಸುವ ಸಂಗತಿಗಳು ಎಂಬ ವಾದವಿದೆ. ಇವತ್ತಿನ ಸಂಕೀರ್ಣ ಜಗತ್ತನ್ನು ಗಮನಿಸಿದರೆ ಇದೆಂಥ ಸಂಕುಚಿತ ದೃಷ್ಟಿ ಎಂದು ನನಗೆ ಅನ್ನಿಸುತ್ತದೆ.
-
‘ಕವಲು’ ಕಾದಂಬರಿಯ ಪ್ರಮುಖ ಪಾತ್ರಧಾರಿ ಜಯಕುಮಾರ್ ಒಂದು ಕಾರ್ಖಾನೆ ನಡೆಸುತ್ತಿದ್ದಾನೆ. ಜಪ್ಪಯ್ಯ ಅಂದರೂ ನಮಗೆ ಈ ಕಾರ್ಖಾನೆಯಲ್ಲಿ ಏನು ತಯಾರಾಗುತ್ತಿದೆ ಎಂಬ ವಿವರ ಸಿಗುವುದಿಲ್ಲ. ಅಮೂರ್ತ ಉತ್ಪನ್ನಗಳ ಈ ಕಾರ್ಖಾನೆಯ ಏಳು ಬೀಳುಗಳನ್ನು ಗಮನಿಸಿದರೆ, ಇದೊಂದು ಬಾಲಿಶ ವರ್ಣನೆ ಅನ್ನಿಸುತ್ತದೆ.
-
ಮಹಿಳಾ ವಾದಿಗಳನ್ನು ಹೀಗಳೆಯುವ ರೀತಿಯಲ್ಲಿ ಇಲ್ಲಿ ಮಂಗಳೆ ಮತ್ತು ಇಳಾ ಎಂಬ ಎರಡು ಪಾತ್ರಗಳು ಬಂದಿವೆ. ಈ ಪಾತ್ರಗಳು ಯಾವುದೋ ಗಂಡನನ್ನು ಬೇಕಾಗಿಯೋ, ಬೇಡವಾಗಿಯೋ ಕಟ್ಟಿಕೊಂಡು ಬೇರೆಯವರ ಜೊತೆ ಕದ್ದು ಮುಚ್ಚಿ ಮಲಗುವುದೇ ಕಾದಂಬರಿಯ ಸಮಕಾಲೀನ ಘಟನೆಗಳು. ಇನ್ನು ಲೆಸ್‌ಬಿಯನ್ನರೂ (ಸ್ತ್ರೀ ಸಲಿಂಗ ಕಾಮಿಗಳು) ಮಹಿಳಾವಾದಿಗಳು ಎಂದು ಚಿತ್ರಿಸಲು ಸರಾಫ ಎಂಬ ಪಾತ್ರವಿದೆ.
-
ಜಯಕುಮಾರ್ – ವೈಜಯಂತಿ ಎಂಬ ಆದರ್ಶದ ಜೋಡಿಯಲ್ಲಿ ವೈಜಯಂತಿಯು ಗಂಡನ ಚಾಲನೆಯಲ್ಲಿದ್ದ ಕಾರಿನಲ್ಲೇ ಅಪಘಾತಕ್ಕೆ ಸಿಕ್ಕಿ ಸಾಯುತ್ತಾಳೆ. ಆದರೆ ಅಪಘಾತದಲ್ಲಿ ಮೆದುಳಿಗೆ ಪೆಟ್ಟಾದ ವತ್ಸಲೆ ಎಂಬ ಮಗಳ ಬೌದ್ಧಿಕ ಬೆಳವಣಿಗೆ ಕುಂಠಿತವಾಗುತ್ತದೆ. ವೈಜಯಂತಿಯೇ ಫ್ಯಾಕ್ಟರಿಗೆ ಸೇರಿಸಿಕೊಂಡ ಮಂಗಳೆ ಎಂಬ ಸೆಕ್ರೆಟರಿಯನ್ನು ಜಯಕುಮಾರ್ ಕಾಮಿಸುತ್ತಾನೆ. ಮಂಗಳೆಯೋ ಮಹಿಳಾವಾದಿ ಮತ್ತು ಸೈಕಿಕ್. ಅವಳಿಗೆ ಭಾವನೆಗಳೇ ಇಲ್ಲ. ತನ್ನ ಗಂಡನ ಮೊದಲ ಹೆಂಡತಿಯ ಮಗಳನ್ನು ಗಂಡ ಮುದ್ದಿಸಿದರೆ, ಅದರಲ್ಲೂ ಪುತ್ರಿ ಕಾಮಿಯನ್ನು ಕಾಣುವ ಮಂಗಳೆ, ಒಂದೊಮ್ಮೆ ತನ್ನಲ್ಲಿ ಗರ್ಭ ಕಟ್ಟಲು ಕಾರಣವಾಗಿದ್ದ ಪ್ರಭಾಕರ ಎಂಬ ಸಾರಿಗೆ ಅಧಿಕಾರಿಯನ್ನು ಮನೆಗೇ ಕರೆದು ಕೂಡುತ್ತಾಳೆ. ಒಮ್ಮೆಯಂತೂ ಜಯಕುಮಾರ್ ಬಂದರೂ, ಈ ಪ್ರಭಾಕರನು ಮಂಗಳೆಯ ಬಾತ್‌ರೂಮಿನಲ್ಲಿ ಅಡಗಿರುತ್ತಾನೆ.
-
ಈ ಪ್ರಭಾಕರ ಒಬ್ಬ ವುಮನೈಸರ್ ಎಂದು ಮಂಗಳೆಗೆ ಗೊತ್ತಾಗುತ್ತದೆ; ಅವಳಿಗೆ ಗೊತ್ತಾಗಿದೆ ಎಂದು ಪ್ರಭಾಕರನಿಗೂ ಗೊತ್ತಾಗುತ್ತದೆ. ಆದರೂ ಇಬ್ಬರೂ ಕಾಮಕ್ಕಾಗಿ ಕಾಂಪ್ರಮೈಸ್ ಆಗುತ್ತಾರೆ.
-
ಮಂಗಳೆ ಮತ್ತು ಇಳಾರಿಗೆ ಗಂಡಸರನ್ನು ‘ರ್‍ಯಾಸ್ಕಲ್, ಲೋಫರ್, ಎಕ್ಸ್‌ಪ್ಲಾಯ್ಟರ್’ ಎಂದು ಕರೆಯವುದು ಎಂದರೆ ತೀರಾ ಸಹಜ.
-
ಇತ್ತ ಮಂಗಳೆಯಿಂದ ಶೋಷಣೆಗೊಳಗಾದ (ಆಸ್ತಿ ಜಗಳ, ದೈಹಿಕ ಹಲ್ಲೆಯ ಪೊಲೀಸ್ ದೂರು ಇತ್ಯಾದಿ) ಜಯಕುಮಾರ್ ತನ್ನ ಏಕೈಕ ಆತ್ಮೀಯ ಶೇಖರಪ್ಪನ ಸಲಹೆಯಂತೆ ೪೮ರ ವಯಸ್ಸಿನಲ್ಲೂ ೨೪ರ ಯೌವ್ವನವನ್ನು ಸಾಬೀತುಪಡಿಸಿಕೊಳ್ಳಲು ದಿಲ್ಲಿಯ ಹೋಟೆಲಿನಲ್ಲಿ ಕಾಲ್‌ಗರ್ಲ್‌ಗಳೊಂದಿಗೆ ಕೂಡತೊಡಗುತ್ತಾನೆ. ಅಲ್ಲೂ ಪೊಲೀಸರ ರೈಡ್ ಆಗಿ ವಾರಗಟ್ಟಳೆ ಜೈಲಿನಲ್ಲಿ ಇರುತ್ತಾನೆ.
-
ಈ ಪ್ರಭಾಕರ ಮತ್ತು ಮಂಗಳೆಯ ಶಿಕ್ಷಕಿ, ಮಹಿಳಾ ವಾದಿ ಇಳಾ ಎಂಬಾಕೆ ವಿನಯಚಂದ್ರ ಎಂಬುವವನ್ನು ಮದುವೆಯಾಗಿರುತ್ತಾಳೆ. ಅವಳಿಗೂ ಮದುವೆ ಸರಿಬರುವುದಿಲ್ಲ. ಮಗಳೊಂದಿಗೆ ಬೇರೆ ಇರುವ ಆಕೆ ಕೊನೆಗೆ ದೊರೆರಾಜು ಎಂಬ ಸಚಿವನನ್ನು ವಿದೇಶದಲ್ಲಿ ಕೂಡಿ, ಅಲ್ಲಿಂದ ಬೆಂಗಳೂರಿನ ಫಾರ್ಮ್‌ಹೌಸಿನಲ್ಲಿ ಝಂಡಾ ಹೂಡುತ್ತಾಳೆ. ಆಮೇಲೆ ಆಕೆ ಮತ್ತು ದೊರೆರಾಜು ನಡುವಣ ರತಿಕ್ರೀಡಾ ಚಿತ್ರಗಳನ್ನು ವಿನಯಚಂದ್ರನು ಡೈವೋಸ್‌ಗೋಸ್ಕರವೇ ತೆಗೆಸಿ ಬ್ಲಾಕ್‌ಮೇಲ್ ಮಾಡುತ್ತಾನೆ. ಈ ಚಿತ್ರಗಳನ್ನು ದೊರೆರಾಜುರವರು ತಮ್ಮ ಇಲಾಖೆಯ ಸಮರ್ಥ ಅಧಿಕಾರಿ ಪ್ರಭಾಕರ (ಇವನೇ ಮಂಗಳೆಯ ಗೆಳೆಯ)ನಿಗೆ ಕೊಟ್ಟು ಇಳಾಳನ್ನು ಫಾರ್ಮ್‌ಹೌಸಿನಿಂದ ಹೊರಗೆ ಕಳಿಸಲು ಯತ್ನಿಸುತ್ತಾರೆ. ಈ ದೊರೆರಾಜು ಫಾರ್ಮ್‌ಹೌಸ್ ಕಟ್ಟಿಸಿದ್ದೇ ಹೀಗೆ ಹೆಂಗಸರೊಂದಿಗೆ ಮಜಾ ಮಾಡಲು.
-
ಜಯಕುಮಾರನ ಅಕ್ಕನ ಮಗ ನಚಿಕೇತನ ಕಥೆಯೂ ಸಮಕಾಲೀನ ಅಮೆರಿಕಾ ಬದುಕಿನ ಚಿತ್ರಣ ಎಂದು ನಾವು ನಂಬಬೇಕು. ಇಲ್ಲಿ ನಚಿಕೇತ ಹೇಗೆ ಇಬ್ಬರು ಬಿಳಿ ಹೆಣ್ಣುಗಳಿಂದ ಯಾಮಾರಿಸಿಕೊಂಡ ಎಂಬ ಕಥೆ ಇದೆ. ಆಮೇಲೆ ಇದೇ ನಚಿಕೇತ ಬುದ್ಧಿ ಬೆಳೆಯದ ಮಂಗಳೆಯನ್ನು ಮದುವೆಯಾಗಿ ಆದರ್ಶ ಮೆರೆಯುತ್ತಾನೆ.
-
ಜಯಕುಮಾರ್‌ನ ತಾಯಿಯು ವರದಕ್ಷಿಣೆ ಆರೋಪಕ್ಕೆ ಒಳಗಾಗಿ ಸೆರೆಮನೆಗೆ ಸೇರಿದವರು ಅಲ್ಲಿಂದಲೇ ಎಲ್ಲೆಲ್ಲೋ ಹೋಗಿ ನಾಪತ್ತೆಯಾಗಿರುತ್ತಾರೆ. ಆಮೇಲೆ ಸಿಗುತ್ತಾರೆ ಕೂಡಾ. ಇದು ಭೈರಪ್ಪನವರ ಹಲವಾರು ಕಾದಂಬರಿಗಳಲ್ಲಿ ಕಂಡುಬರುವ ಡ್ರಾಮಾ. ನಾಪತ್ತೆಯಾಗುವುದು- ಮೂವತ್ತು ವರ್ಷಗಳಾದ ಮೇಲೆ ಎಲ್ಲೋ ಕಾಣಸಿಗುವುದು – ಇದು ಸಾಮಾನ್ಯ.
-
ಈ ಮಧ್ಯೆ ಮಹಿಳಾವಾದಿ ವಕೀಲೆಯರು, ವೈದ್ಯೆಯರು, – ಇತರರೂ ಬಂದು ಹೋಗುತ್ತಾರೆ ಅನ್ನಿ. ಅವರ ಬಗ್ಗೆ ನಮಗೆ ಹೆಚ್ಚಿನ ವಿವರಗಳನ್ನು ಭೈರಪ್ಪನವರು ದಯಪಾಲಿಸಿಲ್ಲ.
ಇಡೀ ಕಾದಂಬರಿಯಲ್ಲಿ ಇಂಥ ಶಯನೋತ್ಸವದ ಸನ್ನಿವೇಶಗಳನ್ನೇ ಬಣ್ಣಿಸಿ ಬಣ್ಣಿಸಿ ತುಂಬಿಸಿರುವ ಭೈರಪ್ಪನವರು ಕೇವಲ ಲೈಂಗಿಕ ಸಂಗತಿಗಳೇ ಸಮಕಾಲೀನ ಬದುಕು ಎಂದು ತಿಳಿದಿರುವುದೇ ಹಾಸ್ಯಾಸ್ಪದ. ಅದಕ್ಕೇ ನಾನು ಈ ಕಾದಂಬರಿಯ ಇಂಥ ಸನ್ನಿವೇಶಗಳನ್ನು ಪಟ್ಟಿ ಮಾಡಿರುವೆ.
`ವಿಜಯ ಕರ್ನಾಟಕ’ದಲ್ಲಿ ಭೈರಪ್ಪನವರು ಈ ಮಾತುಗಳನ್ನೂ ಹೇಳಿದ್ದಾರೆ: ಯಾವುದೇ ಮೌಲ್ಯವನ್ನು ನಿಷ್ಠೆಯಿಂದ ಅನುಸರಿಸಿದರೆ ಉಳಿಸಿಕೊಳ್ಳಲು ಸಾಧ್ಯ. ಆ ಮನಸ್ಸು ನಿಷ್ಠೆ ನಮ್ಮಲ್ಲಿರಬೇಕು. ಇಲ್ಲದೇ ಹೋದರೆ ನಾವು ಎತ್ತ ಹೋಗುತ್ತಿದ್ದೇವೆ ಎಂಬುದೇ ತಿಳಿಯದು.
ಅರೆ!! ಮೌಲ್ಯ ಎಂದರೆ ಯಾವುದು? ಗಂಡ ಹೆಂಡತಿ ನಿಷ್ಠರಾಗಿ, ಬೇರೊಬ್ಬರೊಂದಿಗೆ ಮಲಗದಿರುವುದೆ? ಅದೊಂದೇ ಜೀವಿತದ ಪರಮೋದ್ದೇಶವೆ? ಸಮಕಾಲೀನ ಬದುಕು, ಮೌಲ್ಯ ಎಂದರೆ ಇಷ್ಟೇನೆ?
ಗಂಡೊಂದು ಹೆಣ್ಣಿನೊಂದಿಗೆ, ಹೆಣ್ಣೊಂದು ಗಂಡಿನೊಂದಿಗೆ ಸುಖಿಸುವ ಬಯಕೆ ಸರ್ವಕಾಲೀನ; ಪ್ರಕೃತಿ ಗಂಡು ಹೆಣ್ಣನ್ನು ಸೃಷ್ಟಿಸಿದ್ದೇ ಪ್ರಜನನದ ಪರಮ ಉದ್ದೇಶದಿಂದ. ಕಾಂಡೋಮ್ ಕಂಡುಹಿಡಿದು ಈ ಪ್ರಜನನಕ್ಕೆ ತಡೆ ಒಡ್ಡಬಹುದು ಎಂದು ಗೊತ್ತಾದ ಮೇಲೆಯೇ ಸೋ ಕಾಲ್ಡ್ ಅನೈತಿಕ ಸಂಬಂಧಗಳು ಹುಟ್ಟಲಿಲ್ಲ. ಇಂಥ ಸಂಬಂಧಗಳು ಎಂದಿನಿಂದಲೂ ಇದ್ದವು; ಈಗಲೂ ಇವೆ. ಮುಂದೆಯೂ ಇರುತ್ತವೆ. ಇದನ್ನು ಸಮಕಾಲೀನ ಎಂದು ತಿಳಿದರೆ ಅದಕ್ಕಿಂತ ಮೂರ್ಖತನ ಇನ್ನೊಂದಿಲ್ಲ. `ಸಮಾಜದ ಕಟ್ಟುಪಾಡುಗಳು’ ಅತ್ಯಂತ ಕಟ್ಟುನಿಟ್ಟಾಗಿ ಜಾರಿಯಲ್ಲಿದ್ದ ಸಮಯದಲ್ಲೂ ಇಂಥ ಸಂಬಂಧಗಳು ನಡೆದಿವೆ. ಸಮಾಜದ ಕಟ್ಟುಪಾಡುಗಳು ಎನ್ನುವುದು ಒಂದು ದಿಕ್ಸೂಚಿಯೇ ಹೊರತು, ಅದೇನೂ ಇಡೀ ಜಗತ್ತನ್ನು ಆಳುವುದಕ್ಕೆ ಇರುವ ದಂಡಸಂಹಿತೆಯಲ್ಲ; ಈ ಕಟ್ಟುಪಾಡುಗಳು ೧೦೦% ಜಾರಿಯಾಗಿದ್ದ ಕ್ಷಣಗಳು ಇತಿಹಾಸದಲ್ಲಿ ಇಲ್ಲವೇ ಇಲ್ಲ. ಇವತ್ತು ಸಲಿಂಗಕಾಮಿಗಳು, ಹಿಜಡಾಗಳು ತಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದಾರೆ. ಕಾನೂನೂ ಬದಲಾಗುತ್ತಿದೆ. ಆದ್ದರಿಂದ ಲೈಂಗಿಕ ಕಟ್ಟುಪಾಡುಗಳು ಎಂದೂ ಶಾಶ್ವತವೂ ಆಗಿರಲಿಲ್ಲ; ಸರ್ವಮಾನ್ಯವೂ ಆಗಿರಲಿಲ್ಲ. ಆದ್ದರಿಂದ ಈಗ ಪುಡಿಪುಡಿಯಾಗಿದೆ ಎಂದು ಹೇಳುವುದಕ್ಕೆ ಸಾಧ್ಯವೇ ಇಲ್ಲ.
ಇಷ್ಟೆಲ್ಲ ಮಾತುಗಳನ್ನು ನಾನು ಸಮಕಾಲೀನ ಬದುಕೆಂದರೆ ಕೇವಲ ಲೈಂಗಿಕ ತೃಷೆಯೊಂದೇ ಅಲ್ಲ ಎಂದು ಹೇಳಲಷ್ಟೇ ಬರೆದಿದ್ದೇನೆ.
ಹಾಗಾದರೆ ಸಮಕಾಲೀನ ಬದುಕು ಎಂದರೆ ಯಾವುದು? ನನ್ನ ಪ್ರಕಾರ ಸಮಕಾಲೀನ ಬದುಕಿನಲ್ಲಿ ಎರಡು `ಕವಲು’ಗಳಿವೆ: ನಗರದ ಸಂಬಂಧಗಳು ಮಾಹಿತಿ ತಂತ್ರಜ್ಞಾನದ, ಸಂಪರ್ಕ ಕ್ರಾಂತಿಯ ಪರಿಣಾಮವಾಗಿ ಇನ್ನಿಲ್ಲದಂತೆ ಚಹರೆ ಬದಲಿಸಿಕೊಂಡಿದ್ದು. ಗ್ರಾಮೀಣ ಸಂಬಂಧಗಳು ಕೂಡಾ ಮೊಬೈಲ್, ಟಿವಿ ಚಾನೆಲ್, ಎಸ್ ಎಂ ಎಸ್ ಇತ್ಯಾದಿ ಕೈಗೆಟಕುವ ತಂತ್ರಜ್ಞಾನದಿಂದ ಬದಲಾಗುತ್ತಿರೋದು; ವ್ಯವಸ್ಥೆಯಲ್ಲಿ ಎಲ್ಲವೂ ರಾಜಕೀಯ, ಉದ್ಯಮ, ಮಾಫಿಯಾ, ಇಂಟೆಲ್ಲೆಕ್ಚುಯಲಿಸಂ, ಜರ್ನಲಿಸಂ – ಎಲ್ಲವೂ ಬೆರಕೆಯಾಗಿ ನಾವೆಂದೂ ಊಹಿಸದಂಥ ಆಳುವ ವ್ಯವಸ್ಥೆಯೊಂದು ರೂಪುಗೊಂಡಿರೋದು. ಜಗತ್ತಿನ ಕೆಲವೇ ಶಕ್ತಿಗಳು (ಸರ್ಕಾರಗಳು ಮತ್ತು ಕಾರ್ಪೋರೇಟ್‌ಗಳು) ಒಂದು ಮಾಫಿಯಾ ಥರ ಇಡೀ ಮನುಕುಲ, ಜೀವಸಂಕುಲದ ಒಡೆತನವಿರುವ ನೈಸರ್ಗಿಕ ಸಂಪನ್ಮೂಲಗಳ ನಿಯಂತ್ರಣ ಪಡೆದು ಅವುಗಳ ಬಳಕೆಯ ಕಂಟ್ರೋಲ್ ಇಟ್ಟುಕೊಂಡಿರುವುದು; ಒಬ್ಬ ಮಧ್ಯಮ ವರ್ಗದ ವ್ಯಕ್ತಿಯೂ ಈಗ ಹಲವಾರು ಬಗೆಯ ವ್ಯಕ್ತಿಗಳ ನಿರಂತರ ಸಂಪರ್ಕದಲ್ಲಿರೋದು; ಶ್ರೀಸಾಮಾನ್ಯನೂ ಟಿವಿ ಚಾನೆಲ್‌ಗೆ ಅನುಭವಿಯಂತೆ ಬೈಟ್ ಕೊಡೋದು; ಹಳ್ಳಿಯ ಅನಕ್ಷರಸ್ಥ ಮಹಿಳೆಯರೂ ಧೈರ್ಯದಿಂದ ವಿಡಿಯೋಗ್ರಫಿ ಬ್ಯುಸಿನೆಸ್ ಮಾಡುತ್ತಿರೋದು, ಜೀತದಾಳುಗಳು ಮುಕ್ತರಾಗಿ ಗ್ರಾಮ ಪಂಚಾಯತ್ ಪ್ರತಿನಿಧಿಗಳಾಗಿರೋದು, ಸೂಳೆಯೊಬ್ಬಳು ತನ್ನ ಕಥೆಯನ್ನು ಹಿಂದೂ ಪತ್ರಿಕೆಯ ವರದಿಗಾರ್ತಿಗೆ ವಿವರಿಸೋದು; ಹೆದ್ದಾರಿಗಳಿಗೆಂದೇ ನಮ್ಮ ಹಳ್ಳಿಗಳು ಬದಲಾಗಿರೋದು, ನಗರದ ಮಕ್ಕಳು ಅತಿಯಾಗಿ ಜಂಕ್ ಫುಡ್ ತಿನ್ನೋದು, ಹಳ್ಳಿಯ ಮಕ್ಕಳು ಈಗಲೂ ಕ್ಯಾಮೆರಾ ಕಂಡರೆ ರೋಮಾಂಚನಗೊಳ್ಳೋದು. ವಿಡಿಯೋ-ರೇಡಿಯೋ-ಬ್ಲಾಗ್ ಮೂಲಕ ಜನ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹೇಳೋದು. ಛತ್ತೀಸ್‌ಗಢದ ಶೋಷಿತ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ದೂರವಾಣಿ ಮೂಲಕ ಇಂಟರ್‌ನೆಟ್‌ನಲ್ಲಿ ಬಿತ್ತರಿಸೋದು, ದಿಲ್ಲಿಯ ಅನುಭವೀ ಪತ್ರಕರ್ತರು ಹಳ್ಳಿಗಳಿಗಾಗಿ ಪತ್ರಿಕೆ ತರೋದು; ಕಾಡಿನಲ್ಲೇ ಬದುಕು ಸವೆಸುವ ನಕ್ಸಲೀಯರು ಆಜಾದ್ ತೀರಿಕೊಂಡ ಕೆಲಕ್ಷಣಗಳಲ್ಲೇ ತಮ್ಮ ಆಬಿಪ್ರಾಯವನ್ನು ದಾಖಲಿಸಿ ಅದನ್ನು ಪ್ರಕಟಿಸೋದು….. ಈ ಪಟ್ಟಿಯನ್ನು ನೀವೂ ಬೆಳೆಸಬಹುದು. ಇಂಥ (ಇದೇ ಥರದ) ಒಂದಾದರೂ ನಿದರ್ಶನವನ್ನು ಭೈರಪ್ಪನವರು ತಮ್ಮ ಕಾದಂಬರಿಯಲ್ಲಿ ಕೊಟ್ಟಿದ್ದರೆ ಅದನ್ನು ಸಮಕಾಲೀನ ಎಂದು ಕರೆಯಬಹುದಿತ್ತು.
ಚೇತನ್ ಭಗತ್ ಎಷ್ಟೇ ಕೆಟ್ಟ ಇಂಗ್ಲೀಶಿನಲ್ಲೇ ಆದರೂ, ಎಂ ಎಸ್ ಆಫೀಸ್‌ನ ಸ್ಪೆಲ್‌ಚೆಕ್ ಸಾಧನವನ್ನು ಬಳಸಿಯೇ ವಿಶ್ವಪ್ರಸಿದ್ಧ ಕಾದಂಬರಿಕಾರ ಆಗಿರೋದಕ್ಕೆ ಕೇವಲ ಅವರ ಕಥೆಯೇ ಕಾರಣ. ಅವರ ಎರಡು ಕಾದಂಬರಿಗಳನ್ನು ಓದಿದ ನಾನು ಅವರನ್ನು ಖಂಡಿತವಾಗಿಯೂ ಸಮಕಾಲೀನ ಕುಟುಂಬ ವ್ಯವಸ್ಥೆಯನ್ನು ಬಿಂಬಿಸಿದ ಕಾದಂಬರಿಕಾರ ಎಂದು ಕರೆಯುತ್ತೇನೆ. ‘ಕವಲು’ ಕಾದಂಬರಿಯಲ್ಲಿ ಭೈರಪ್ಪನವರು ಕೇವಲ ಹಾಸಿಗೆ ಹೊದಿಕೆಯ ಬದಲಾವಣೆಯನ್ನೇ `ಹೃದಯ ಕಲಕುವಂಥ’ ವಿಷಯಗಳೆಂದು ಬಿಂಬಿಸಿರುವುದು ಅನುಕಂಪ ತರುವ ಸಂಗತಿ. ಜಗತ್ತಿನ ವ್ಯವಹಾರಗಳನ್ನು ತೂಗುವ ಎಷ್ಟೋ ಆಂತಾರಾಷ್ಟ್ರೀಯ ಕಾನೂನುಗಳು ನಮ್ಮ ಸಮಾಜವನ್ನೇ ಜಗ್ಗುತ್ತಿವೆ; ನಮ್ಮ ದೇಶದ ಹತ್ತಾರು ಕಾನೂನುಗಳು ನಮ್ಮ ಸಮಾಜದ ವಿವಿಧ ಅಂಗಗಳ ಮೇಲೆ ಇನ್ನಿಲ್ಲದಂಥ ದುಷ್ಪರಿಣಾಮ ಮಾಡಿವೆ; ಆದರೆ ಭೈರಪ್ಪನವರಿಗೆ ಇನ್ನೂ ಡೈವೋರ್ಸ್ ಕಾಯ್ದೆಯ ಬಗ್ಗೆಯೇ ಅಪಾರ ಪ್ರೀತಿ.
ವಂಶವೃಕ್ಷ, ನಾಯಿ ನೆರಳು, ಗ್ರಹಣ, ಪರ್ವ, ಅಂಚು, ತಂತು, ಸಾರ್ಥ, ಮಂದ್ರ – ಇವೆಲ್ಲದರಲ್ಲೂ ಇರುವ ಅದೇ ಲೈಂಗಿಕ ಸಂಬಂಧಗಳ ವಿಚಾರಗಳನ್ನು ಮತ್ತೆ `ಕವಲು’ನಲ್ಲಿ ಬಿಂಬಿಸಿರುವ ಭೈರಪ್ಪನವರು ಯಾವ ಸಮಕಾಲೀನ ಸಂಗತಿಯನ್ನು ಎತ್ತಿಹಿಡಿದಿದ್ದಾರೆ ಎಂದು ನನಗೆ ಗೊತ್ತಾಗಿಯೇ ಇಲ್ಲ. ಹೇಗೆ ತಿಣುಕಿದರೂ ೮೦ರ ದಶಕಕ್ಕಿಂತ ಹೊಸತಾಗಿ ಕಾಣಿಸದ ಕಥಾ ಹಂದರ ಇರುವ ‘ಕವಲು’ ನಿಜಕ್ಕೂ ಹಳಸಲು ವಿಚಾರಗಳ ತೆವಲು ಎಂದು ಕರೆಯಲು ಏನೂ ಅಡ್ಡಿಯಿಲ್ಲ.
ಸಮಕಾಲೀನ ವಿದ್ಯಮಾನಗಳನ್ನು ಸಾಂಕೇತಿಕವಾಗಿ ಬಿಂಬಿಸಿದ ‘ದಿವ್ಯ’ (ಡಾ. ಯು ಆರ್ ಅನಂತಮೂರ್ತಿ) ಮತ್ತು ‘ಶಿಖರ ಸೂರ್ಯ’ (ಡಾ. ಚಂದ್ರಶೇಖರ ಕಂಬಾರ) ಕಾದಂಬರಿಗಳೂ ತಮ್ಮ ಸಂಕೇತದ ಭಾರದಿಂದಲೇ ಸೋತಿವೆ. ಸಮಕಾಲೀನ ಸಂಗತಿಗಳನ್ನು ಇದ್ದಹಾಗೇ ಬರೆಯುವಂತೆ ತೋರುವ ಭೈರಪ್ಪನವರೂ ‘ಕವಲು’ನಲ್ಲಿ ತಮ್ಮ ಮಿತಿಯನ್ನು ಸ್ಪಷ್ಟವಾಗಿ ದಾಖಲಿಸಿ ‘ನಾನು ಬರೆಯುವುದೇ ಹೀಗೆ’ ಎಂದು ತೋರಿಸಿಬಿಟ್ಟಿದ್ದಾರೆ. `ಭುಜಂಗಯ್ಯನ ದಶಾವತಾರ’ (ಶ್ರೀಕೃಷ್ಣ ಆಲನಹಳ್ಳಿ) ಮತ್ತು ಬಂಡಾಯ (ವ್ಯಾಸರಾಯ ಬಲ್ಲಾಳ) ದಂಥ ಕಾದಂಬರಿಗಳ ಮುಂದೆಯಂತೂ `ಕವಲು’ ಅತಿ ಪೇಲವ.
ಕನ್ನಡದಲ್ಲಿ ಇತ್ತೀಚೆಗೆ ಬಂದ ಕೆಲವು ಕಾದಂಬರಿಗಳಲ್ಲಿ ಮುಖ್ಯವಾಗಿರೋದು ‘ಒಂದು ಬದಿ ಕಡಲು’. ಆದರೆ ಇದೊಂದು ಪೀರಿಯಡ್ ನಾವೆಲ್. ಹಾಗೆಯೇ ಇತ್ತೀಚೆಗೆ ವಸುಧೇಂದ್ರ ಬರೆದ ‘ಹರಿಚಿತ್ತ ಸತ್ಯ’ವೂ ಒಂದು ಪೀರಿಯಡ್ ನೋವೆಲ್ಲಾ (ಕಿರು ಕಾದಂಬರಿ). ಸೂರಿ ಬರೆದ ‘ಎನ್ನ ಭವದ ಕೇಡು’ ವಿದೇಶಿ ಕೃತಿಯೊಂದರ ಸ್ಫೂರ್ತಿ. `ಬಿಳಿಯ ಚಾದರ’ (ಗುರುಪ್ರಸಾದ ಕಾಗಿನೆಲೆ)ಯೊಂದೇ ಹಾಗೆ ಸಮಕಾಲೀನ ಬದುಕನ್ನು ಮುಂದಿಟ್ಟ ಹೊಸ ಕಾದಂಬರಿ. ಎಚ್. ನಾಗವೇಣಿಯವರ ‘ಗಾಂಧಿ ಬಂದ’ ಕೃತಿಯೂ, ಗೋಪಾಲಕೃಷ್ಣ ಪೈಯವರ ‘ಸ್ವಪ್ನ ಸಾರಸ್ವತ’ವೂ ಇಂಥದ್ದೇ ಒಂದು ಪೀರಿಯಡ್ ಡಾಕ್ಯುಂಬರಿಗಳು. ತೇಜಸ್ವಿಯವರ ‘ಮಾಯಾಲೋಕ’ವು ಇನ್ನೂ ಆರಂಭದ ಹಂತದಲ್ಲೇ ಕಣ್ಮರೆಯಾಯಿತು.
ದಾಟು, ಅನ್ವೇಷಣ, ಗೃಹಭಂಗ, ಜಲಪಾತ – ಈ ಥರ ಒಳ್ಳೆಯ ಕಾದಂಬರಿಗಳನ್ನು ಕೊಟ್ಟಿರುವ ಭೈರಪ್ಪನವರು ಸಾರ್ಥ, ಆವರಣ ದಂಥ `ಡಾಕ್ಯಂಬರಿ’ಗಳನ್ನೂ ಬರೆದಿದ್ದಾರೆ. ದಾಖಲೆಗಳ ಆಧಾರದಲ್ಲಿ ಮಾಹಿತಿಗಳನ್ನು ಪೋಣಿಸಿ ಕಥೆಯ ರೂಪದಲ್ಲಿ ಬರೆಯುವುದನ್ನು ನಾನು ಡಾಕ್ಯುಂಬರಿ ಎಂದು ವರ್ಗೀಕರಿಸಿದ್ದೇನೆ).
`ಕವಲು’ನಲ್ಲಿ ಯಾರ ಮನ ಕಲಕುವ ಸಂಗತಿಗಳೂ ಇಲ್ಲ; ಅದು ಸಮಕಾಲೀನ ಬದುಕಿನ ಬಿಂಬವೂ ಇಲ್ಲ. ಅದು ಭಾರತೀಯ ಸಮಾಜದ ಪ್ರಾತಿನಿಧಿಕ ಕಾದಂಬರಿಯಂತೂ ಅಲ್ಲವೇ ಅಲ್ಲ. ಕಲ್ಪನೆಗಿಂತ ಗೋಜಲಾಗಿರುವ ವಾಸ್ತವಿಕ ಜಗತ್ತನ್ನು (ಕೊನೇ ಪಕ್ಷ ಭಾರತದ ಸಮಕಾಲೀನ ಜಗತ್ತನ್ನು) ಕಾಣುವಲ್ಲಿ ಭೈರಪ್ಪನವರು ವಿಪರೀತವಾಗಿ ಸೋತಿದ್ದಾರೆ. ಮನುಕುಲ ಹುಟ್ಟಿದಾಗಿನಿಂದ ಇರುವ ಲೈಂಗಿಕ ಹಗರಣಗಳೇ ಮೌಲ್ಯಯುತ ಸಾಮಾಜಿಕ ಬದುಕಿನ ಕಪ್ಪುಚುಕ್ಕೆಗಳು ಎಂದು ವಾದಿಸುವ ಹಾದಿಯಲ್ಲಿ ಭೈರಪ್ಪನವರು ಸಾಗಿದ್ದಾರೆ. ಈ ಓಬ್ಸೆಶನ್‌ನಿಂದ ಅವರು ಎದ್ದು ಬರದಿದ್ದರೆ ಬೇರೇನೂ ಆಗುವುದಿಲ್ಲ: ಅವರ ಕಾದಂಬರಿಗಳ ಮಾರಾಟಕ್ಕೂ, ಕಾದಂಬರಿಯ ಗುಣಮಟ್ಟಕ್ಕೂ ಇರುವ ಕಂದರ ಇನ್ನಷ್ಟು ಹೆಚ್ಚಾಗುತ್ತದೆ, ಅಷ್ಟೆ!
8 Comments
ನಿಮ್ಮ ವಿಮರ್ಶೆಯನ್ನು ಒಪ್ಪುತ್ತೇನೆ. ಭೈರಪ್ಪನವರಂತಜ್ಞಾನಿಗಳು ಮತ್ತು ಇತಿಹಾಸವನ್ನು ಶೋದಿಸುವ ಸಾಮರ್ಠ್ಯನಿರುವವರು ಪ್ರಚಲಿತಸಮಾಜದ ಸಮಸ್ಯಗಳಿಗೇಕೆ ನಮ್ಮ ಇತಿಹಾಸದಲ್ಲಿ ಪರಿಹಾರವನ್ನು ಹುಡುಕಬಾರದು ಎಂದು ಯೋಚಿಸಿದ್ದೇನೆ. ಉದಾಹರಣೆಗೆ ನಮ್ಮ ಪರಿಸರವನ್ನು ಕಾಪಾಡುವ ದಿಸೆಯಲ್ಲಿ ಸುಸ್ತಿರಕ್ರಮಗಳನ್ನು ಹೆಕ್ಕಿ ತಿಳಿಸಬಹುದು.
ಇಂತಹ ಉತ್ತಮ ಕಾರ್ಯಗಳಿಗೆ ಸಮಾಜವು ಅವರಿಗೆ ಆಭಾರಿಯಾಗಿರುತ್ತದೆ.
ಆಧುನಿಕತೆಯಿಂದಾಗಿ ಕುಟುಂಬಗಳು ಒಡೆಯುತ್ತಿರುವುದು ವಾಸ್ತವ ಹಾಗೂ ಸಮಕಾಲೀನ. ನೀವು ಹೇಳಿದಂತೆ ಲೈಂಗಿಕ ಶೋಷಣೆಗಳು ಹಾಗೂ ಅಕ್ರಮಗಳು ಹಿಂದಿನಿಂದಲೇ ಇದ್ದರು ಅದು ಸಂಸಾರಗಳನ್ನು ಒಡೆದದ್ದು ಕಡಿಮೆ. ಇಲ್ಲವೇ ಇಲ್ಲ ಅಂತಲ್ಲ. ಆದರೂ ಅದು ‘ನಿಷಿಧ್ಧ’ ಎಂಬ ಚೌಕಟ್ಟಿನೊಳಗೆ ಇದ್ದುದರಿಂದ ವ್ಯಾಪಕವಾಗಿ ಬೆಳೆಯಲಿಲ್ಲ. ಈಗ ಆಧುನಿಕ ಭಾಷೆಯಲ್ಲಿ ಇಂತಹ ಮನೆ ಒಡೆಯುವ ಕೆಲಸಗಳೆಲ್ಲವೂ ಸಹಜ ಹಾಗೂ ಕಾನೂನಿನ ಪ್ರಕಾರ ಸರಿ ಎಂದು ಬದಲಾಗಿದ್ದು ಸಮಕಾಲಿನವಲ್ಲವೇ? ಅದು ಸರಿಯೋ ತಪ್ಪೋ ಎಂದು ವಿಮರ್ಶಿಸುವುದು ಬೇರೆ ಮಾತು, ಆದರೆ ಸಮಕಾಲೀನ ಅಲ್ಲ ಎಂಬುವುದನ್ನು ಒಪ್ಪುವುದು ಕಷ್ಟ.
ಭೈರಪ್ಪನವರ ಕೃತಿಗಳು ಸರಿಯಾಗಿ ವಿಮರ್ಶೆಯಾಗುತ್ತಿಲ್ಲ ಎಂಬ ಅವರ ಕೊರಗಿಗೆ ದಿಟ್ಟ ಉತ್ತರ ಇದು.. ಅತ್ಯುತ್ತಮವಾಗಿದೆ ವಿಮರ್ಶೆ!
ಈ ಕಾದಂಬರಿಯಲ್ಲಿ ಬರುವ ಎಲ್ಲಾ ಕುಟುಂಬಗಳದ್ದೂ ಒಂದೇ ಕಥೆ! ’ಹೇಳಿದ್ದೇ ಹೇಳೋ ಕಿಸಬಯ್ಯ ದಾಸ’ ಅನ್ನುವಷ್ಟರ ಮಟ್ಟಿಗೆ ವಿಷಯ ಪುನರಾವರ್ತಿಯಾಗಿದೆ.
ಯಾವುದೇ ಪಾತ್ರಗಳು ಮಾನಸಿಕ ಬೆಳವಣಿಗೆಯನ್ನೇ ಕಾಣುವುದಿಲ್ಲ. ಎಲ್ಲಾ ಪಾತ್ರಗಳದ್ದೂ ಏಕಪಕ್ಷೀಯ ವಾದ! ಇಂತಹ ಪಾತ್ರಗಳು ಇದ್ದರೂ, ಇದು ಸಮಕಾಲೀನ ಜನರ ಬದುಕು ಎಂಬುದು ಅತ್ಯಂತ ಪೇವಲ ವಾದ! ಅಂತಹ ವ್ಯಕ್ತಿಗಳಿದ್ದರೂ, ಆ ವ್ಯಕ್ತಿತ್ವ ಬೆಳೆಸಿಕೊಂಡಿರಬಹುದಾದ ಕಾರಣ, ಹಿನ್ನಲೆ ಯಾವುದೂ ಭೈರಪ್ಪನವರ ಹಿಡಿತಕ್ಕೆ, ಅನುಭವಕ್ಕೆ ಸಿಕ್ಕಿಲ್ಲ! ಸಾಮಾನ್ಯವಾಗಿ ಎಲ್ಲವನ್ನೂ ರಿಸರ್ಚ್ ಮಾಡೇ ಬರೆಯುವರು ಎಂಬ ಹೆಗ್ಗಳಿಕೆ ಪಡೆದಿರುವ ಭೈರಪ್ಪನವರಿಗೆ, ಬಹುಷಃ ವಯಸ್ಸಿನ ಕಾರಣದಿಂದಲೋ ಏನೋ, ಈ ವಿಷಯದ ಬಗ್ಗೆ ಅವರಿಗೆ ಆಳವಾದ ಸಂಶೋಧನೆ ಮಾಡಲಾಗಿಲ್ಲ.(ಅವರ ಅನುಭವಕ್ಕೆ ಬಂದಿರುವ ಸಾಧ್ಯತೆಯಂತೂ ಬಹಳ ಕಡಿಮೆ!). ಪೂರ್ವಾಗ್ರಹ ಪೀಡಿತರಾಗಿ, ತಮ್ಮ ಪೀಳಿಗೆ ಒಪ್ಪದ ಅಥವಾ ತಮ್ಮ ಪೀಳಿಗೆಯ ಅರ್ಥ ಸಾಮರ್ಥ್ಯಕ್ಕೆ ನಿಲುಕದ ಒಂದು ವಿಷಯವನ್ನು ವಿರೋಧಿಸಲು, ಅಸಹಜ ಪಾತ್ರಗಳನ್ನು ಸೃಷ್ಟಿಸಿ ಅಥವಾ ಸಹಜ ಪಾತ್ರಗಳೇ ಆದರೂ ತಾವು ಈ ಕಾದಂಬರಿಯಲ್ಲಿ ವಿರೋಧಿಸುತ್ತಿರುವ ಜೀವನ ಕ್ರಮವನ್ನು/ಶೈಲಿಯನ್ನು ಅನುಸರಿಸುತ್ತಿರುವವರು/ಅನುಕರಿಸುತ್ತಿರುವರು ಯಾರೂ ಸರಿ ಇಲ್ಲ ಎಂಬ ಏಕಪಕ್ಷೀಯ ವಾದವನ್ನು ಮುಂದಿಟ್ಟು ಸೋತಿದ್ದಾರೆ ಎನ್ನಬಹುದು! ಸಾಮಾನ್ಯವಾಗಿ ಇಂಗ್ಲೀಷ್ ನಲ್ಲಿ ಕರೆಯುವ ಫಿಕ್ಷನ್ – ಕಾಲ್ಪನಿಕ ಕಾದಂಬರಿ ಎಂಬ ವಿಭಾಗಕ್ಕೆ ಸೇರಿಸಿದರೂ, ಓದುವಾಗ ಅಷ್ಟೇನೂ ಸಂತಸವನ್ನು ಕೊಡದ ಪುಸ್ತಕ ಎನ್ನಬಹುದು!
ನಿಮ್ಮ ಈ ಕೊನೆಯ ಸಾಲುಗಳು
“ಕವಲು’ನಲ್ಲಿ ಯಾರ ಮನ ಕಲಕುವ ಸಂಗತಿಗಳೂ ಇಲ್ಲ; ಅದು ಸಮಕಾಲೀನ ಬದುಕಿನ ಬಿಂಬವೂ ಇಲ್ಲ. ಅದು ಭಾರತೀಯ ಸಮಾಜದ ಪ್ರಾತಿನಿಧಿಕ ಕಾದಂಬರಿಯಂತೂ ಅಲ್ಲವೇ ಅಲ್ಲ. ಕಲ್ಪನೆಗಿಂತ ಗೋಜಲಾಗಿರುವ ವಾಸ್ತವಿಕ ಜಗತ್ತನ್ನು (ಕೊನೇ ಪಕ್ಷ ಭಾರತದ ಸಮಕಾಲೀನ ಜಗತ್ತನ್ನು) ಕಾಣುವಲ್ಲಿ ಭೈರಪ್ಪನವರು ವಿಪರೀತವಾಗಿ ಸೋತಿದ್ದಾರೆ. ಮನುಕುಲ ಹುಟ್ಟಿದಾಗಿನಿಂದ ಇರುವ ಲೈಂಗಿಕ ಹಗರಣಗಳೇ ಮೌಲ್ಯಯುತ ಸಾಮಾಜಿಕ ಬದುಕಿನ ಕಪ್ಪುಚುಕ್ಕೆಗಳು ಎಂದು ವಾದಿಸುವ ಹಾದಿಯಲ್ಲಿ ಭೈರಪ್ಪನವರು ಸಾಗಿದ್ದಾರೆ. ಈ ಓಬ್ಸೆಶನ್‌ನಿಂದ ಅವರು ಎದ್ದು ಬರದಿದ್ದರೆ ಬೇರೇನೂ ಆಗುವುದಿಲ್ಲ: ಅವರ ಕಾದಂಬರಿಗಳ ಮಾರಾಟಕ್ಕೂ, ಕಾದಂಬರಿಯ ಗುಣಮಟ್ಟಕ್ಕೂ ಇರುವ ಕಂದರ ಇನ್ನಷ್ಟು ಹೆಚ್ಚಾಗುತ್ತದೆ, ಅಷ್ಟೆ!”
ನೂರಕ್ಕೆ ನೂರು ಸತ್ಯ!
ಬೇಳೂರು ಸುದರ್ಶನ ಅವರ ‘ವಿಮರ್ಶೆ’ ಕೆಲವೊಂದು ‘ಅರ್ಧ ಸತ್ಯ’ ಗಳನ್ನೂ ಒಳಗೊಂಡಿದೆ. ಸಮಕಾಲೀನ ಬದುಕಿನಲ್ಲಿ ‘ಲೈನ್ಕಿಗತೆ’ ಮಾತ್ರ ಇರುವುದಲ್ಲ ಎನ್ನುವುದು ಸರಿಯೇ ಆದರೂ, ಒಂದು ಸಂಬಂಧ (ಗಂಡ-ಹೆಂಡತಿ, ಬಾಯ್ ಫ್ರೆಂಡ್- ಗರ್ಲ್ ಫ್ರೆಂಡ್) ಹಳಸಿದೆ ಎನ್ನುವುದು ಪ್ರಪಂಚ ಮುಖಕ್ಕೆ ಗೊತ್ತಾಗುವುದು ಅಥವಾ, ಹಾಗೆ ಹಳಸಿದ್ದನ್ನು ಪ್ರಚುರಪಡಿಸುವ ತುರಿಯಾವಸ್ತೆ/ಪರಾಕಾಷ್ಟೆ ಯನ್ನು ಕಾಣುವುದು, ಬಾಹ್ಯ ಲೈಂಗಿಕ ಸಂಬಂಧಗಳ ಮೂಲಕ. ಮಾತ್ರವಲ್ಲ, ಲೈಂಗಿಕ ಕ್ರಿಯೆಗೆ ಅತಿ ಪ್ರಾಮುಖ್ಯತೆ ಕೊಡುವ ಭಾರತದಂತಹ ಸಮಾಜದಲ್ಲಿ, ಕೂಡುವಿಕೆಗು, ಜೋಡುವಿಕೆಗೂ, ಪ್ರೀತಿಗೂ (ಅದು ದಯಪಾಲಿಸುವ ಭೀತಿಗೂ), ಮಾಧ್ಯಮ ಎಂದರೆ ಲೈಂಗಿಕ ಸಂಬಂಧ. ಆದ ಕಾರಣ, ಒಂದು ಸಂಬಂಧ ಹಳಸಿದೆ ಎನ್ನುವುದನ್ನು ಕಾದಂಬರಿಯಲ್ಲಿ ಲೈಂಗಿಕ ಸಂಬಂಧಗಳ ಮುಖೀನ ವ್ಯಕ್ತಪಡಿಸುವುದು ಒಂದು ಐಕಾನಿಕ್ ಮಾತ್ರ. ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ, ಶುಧ್ಧ ಪ್ರೇಮದ ನಡುವೆ ಉದ್ಭವಿಸುವ ಲೈಂಗಿಕ ಕ್ರಿಯೆಯನ್ನೂ, ಸುದರ್ಶನ ಅವರ ಪರಿಭಾಷೆಯಲ್ಲಿ ‘ಗಂಡ ಹೆಂಡತಿ ಕೂಡಿ ಮಂಚ ಮುರಿದರು’ ಎನ್ನಬಹುದು ಅಲ್ಲವೇ?. ಇನ್ನು, ಮದುವೆಯಾಚೆಗಿನ ಸಂಬಂಧಗಳು, ಹಿಂದೂ ಇದ್ದವು, ಮುಂದು ಇರುವವು, ಅದರಲ್ಲೇನು ವಿಶೇಷವಿಲ್ಲ, ಮಾತ್ರವಲ್ಲ, ಆ ಕುರಿತಾದ ಪರಿಧಿ ಅಗತ್ಯವೇ ಇರಲಿಲ್ಲ ಎಂದಿರಿ. ಇದು ಅವಸರದ ನಿರ್ಧಾರ. ಅಂತಹ ಸಂಬಂಧಗಳು, ಹಿಂದಿಗಿಂತ ಈಗ ಹೆಚ್ಚಾಗಿವೆ ಅದಕ್ಕೆ ಪ್ರಮುಖ ಕಾರಣ, ಆಧುನಿಕ ಬದುಕು ಕೊಡುವ ಬಹುಮುಖಿ ಸಾಧ್ಯತೆಗಳು. ಅಂತಹ ಸಂಬಂದಗಳು ಹಿಂದೆ ಎಲ್ಲೋ ಬೆರಳೆಣಿಕೆಯಲ್ಲಿ ಇದ್ದಾರೆ, ಇಂದು ಸಮಕಾಲೀನ ಬದುಕು ಕೊಡಮಾಡುವ ಬಹು ಸಾದ್ಯತೆಗಳಿಂದ ಅದು ಹಿಂದಿಗಿಂತಲೂ ಹೆಚ್ಚಾಗಿವೆ. ಯಥಾರ್ಥ ಹೇಳಬೇಕೆಂದರೆ, ಸಮಕಾಲೀನ ಬದುಕಿನ ಬಹುತೇಕ ಸಮಸ್ಯೆಗಳಿಗೆ, ಸಂಕೀರ್ನತೆಗಳಿಗೆ ಮೂಲ ಕಾರಣ – ಸಮಕಾಲೀನ ಬದುಕು ದಯಪಾಲಿಸುವ ಅಸಂಖ್ಯ ಹಾಗು ವೈವಿಧ್ಯಮಯ ಸಾಧ್ಯತೆಗಳು. ಬದುಕಿನ ಸಾಧ್ಯತೆಗಳು ಹೆಚ್ಚಾದಾಗ, ಆಯ್ಕೆಯ ಜವಾಬ್ದಾರಿ ಕೂಡ ಹೆಚ್ಚಾಗುತ್ತದೆ. ಆದರೆ ಆಧುನಿಕ ಬದುಕು ನಮಗೆ ಆಯ್ಕೆಯ ಕುರಿತಾದ ಜ್ಞಾನ, ವಿವೇಕಗಳನ್ನು ಕೊಡುವಲ್ಲಿ ಎಡವಿದೆ. ಮಾತ್ರವಲ್ಲ, ಈ ಸಾಧ್ಯತೆಗೆ ಮತ್ತೊಂದು ಮುಖವೂ ಇದೆ. ಬೇಳೂರೆನ್ನುವ ಕು(ಸು)ಗ್ರಾಮದಲ್ಲಿ ಜನಿಸಿದ, ಬೆಳೆದ ಸುದರ್ಶನ್ ಅವರು, ಇಂದು ಜಾಗತಿಕ ವಿಷಯಗಳ ಕುರಿತಾಗಿ ಬರೆಯುವನ್ತಾಗಿದ್ದು, ಅಂತೆಯೇ, ದೊಡ್ಡೇರಿ ಎನ್ನುವ ಕುಗ್ರಾಮದಲ್ಲಿ ಜನಿಸಿದ ನಾನು ಇಂದು ಲಂಡನ್ ನಲ್ಲಿ ನನೋತೆಚ್ನೋಳೋಗ್ಯ ಕುರಿತಾಗಿ ಸಂಶೋಧನೆ ಮಾಡುತ್ತಿರುವುದು ಕೂಡಾ ಬದುಕು ಕೊಡಮಾಡಿದ ಅಸಂಕ್ಯ ವೈವಿಧ್ಯಮಯ ಸಾಧ್ಯತೆಗಳೇ ಅಲ್ಲವೇ?. ಇನ್ನು, ಭ್ಯ್ರಪ್ಪನವರು ಕಾದಂಬರಿಯಲ್ಲಿ ಸಮಕಾಲೀನ ಸಮಸ್ಯೆಗಲೆಲ್ಲವನ್ನುಇಉ ಕುರಿತು ಬರೆಯಬೇಕಾಗಿತ್ತು ಎನ್ನುವುದು ಹಾಸ್ಯಾಸ್ಪದ. ಬಹುಷಃ, ಕಾದಂಬರಿಯ ವಸ್ತು, ಸಮಕಾಲೀನ ಬದುಕಿನಲ್ಲಿ ಮನುಷ್ಯ ಸಂಬಂಧ ಆಗಿರಬಾರದೇಕೆ? Dr.D.M.Sagar
ಪ್ರಿಯ ಸುದರ್ಶನ, ನಿಮ್ಮ ವಿಮರ್ಶೆ ನನ್ನ 250 ರೂಪಾಯಿ ಉಳಿಸಿದೆ. ನೀವು ಪಟ್ಟಿಮಾಡಿದ ಕಾದMಬರಿಗಳು ಸ್ವಲ್ಪ ಹಳೆಯದಾದುವು. ಇತ್ತೀcಇನದು ಪೈಗಳದ್ದು ಮಾತ್ರ. ಮಿತ್ರಮಾಧ್ಯಮ ಖುಷಿಕೊಟ್ಟಿತು. ನಿಮ್ಮ ಬ್ಲಾಗ್ ಕೆMಡಸMಪಿಗೆಯ ಲಿMಕ್ ಇಲ್ಲದಿದ್ದರೆ ತಿಳಿಯುತ್ತಿರಲಿಲ್ಲ.
ಸುದರ್ಶನ ಅವರೆ,
ಉಡುಪಿಯಿಂದ ಮೂರು-ನಾಲ್ಕು ಗೆಳೆಯರು ಕವಲು ಕೃತಿಗಾಗಿ ಮೊನ್ನೆಯಿಂದ ಕೇಳುತ್ತಿದ್ದರು. ನಾನು ಹತ್ತಿರದ ಪುಸ್ತಕ ಮಳಿಗೆಗೆ ಹೋಗಿ ವಿಚಾರಿಸಿದರೆ ಖಾಲಿಯಾಗಿದೆ ಎಂದರು. ನಿಮ್ಮ ಬರಹ ನೋಡಿ ಖುಷಿಯಾಯಿತು. ಪಾಪ ನಿಮ್ಮಗೆ ೨೫೦ರೂ. ಭಾರವಾದರೆ, ಅದನ್ನು ದಯವಿಟ್ಟು ನನಗೆ ನೀಡಿ. ಓದಲು ಉತ್ಸುಕರಾಗಿರುವವರಿಗೆ ತಲುಪಿಸುತ್ತೇನೆ. ಅಂದಹಾಗೆ ೨೫೦ರೂ.ಗೆ ಪುಸ್ತಕ ಖರೀದಿಸುವೆ
ಇಂತಿ
ವಿನಾಯಕ ಕೋಡ್ಸರ
—————————————————————————————————————-
beluru sudarshana’s response: ನಿಮ್ಮ ಸ್ನೇಹಿತರೇನು, ನನ್ನ ಹಲವು ಸ್ನೇಹಿತರೂ ಕೊಡಯ್ಯ ಕಡ, ಓದಿಕೊಡ್ತೇವೆ; ಅದೆಂಥ ದರಿದ್ರ ಕಾದಂಬರಿ ನೋಡೇ ಬಿಡುವಾ ಅಂತಿದ್ದಾರೆ. ಆದ್ದರಿಂದ ಸದ್ಯ ಮಾರುವುದಿಲ್ಲವಾದರೂ ಖಂಡಿತ ಆ ಬಗ್ಗೆ ನಿಮಗೆ ಮೇಲ್ ಮಾಡುತ್ತೇನೆ. ೨೫೦ ರೂ. ಜೊತೆ ಸಿದ್ಧವಾಗಿರಿ.
—————————————————————————————————————-
ಸುದರ್ಶನ್,
it was very difficult for me to type in kannada. i am used to nudi. anyhow , i readyour vimarshe in vijaya karnataka. thanks for that. i was a bhyrappa’s reader upto ‘mandra’. after that i stopped reading his writing. but whenever his new book is published and the interviews, views, comments, hot discussions reflect in media, i used to feel that i may ‘miss’ something. certain vimarshes and views are so complex, finally i was not able to decide whether it is good or bad., whether to buy or not! adyavudo arthavagada navyakavyadanthe iruthe. otherwise, abhiprayagalu ‘naskuni’yanthe yaarigu thattadanthe-muttadanthe iruthave. hagagi , vimrsheyu beda, kadambariyu beda antha hayagi iddubitte!
indina nimma vimarshe khadak agi, saralavagi, neravagi,samayochithavagi thlisabekaddannu namage thiliside. namage enthaha kadambarigala agathya ide embudara jothege vimarshe hegiddare nammanthaha bahusankhyatha ordinary oduga samudayakke arthavaguthade embudu saha vimarsha sankulakke manadattaguttadembudu nanna anisike!.
thanks once again
ಬೇಳೂರು ಅವರು ಎಸ ಎಲ್ ಬೈರಪ್ಪ ಅವರನ್ನ ಬೈಯ್ಯಬೇಕು ಅಂತಾನೆ ಕಾದಂಬರಿ ಓದಿರೋ ಥರ ಇದೆ……
ಒಬ್ಬರ ಏಳ್ಗೆಯನ್ನು ಕಂಡು ಇಸ್ಟೊಂದು ಅಸೂಯೆ ಪಡೋದು ಒಳ್ಳೇದಲ್ಲ ಬೇಳೂರು ಅವರೇ……..
ನಾವು ಭಾರತೀಯರು, ಯಾವ ಸಂಸ್ಕೃತಿಯನ್ನ ಯಾವ ರೀತಿ ಅನುಸರಿಸಬೇಕು ಅನ್ನೋದನ್ನೇ ಮರ್ತಿದ್ದೇವೆ ಅನ್ನೋದೇ ಕವಲಿನ ಸಾರಾಂಶ….
ಸ್ವಲ್ಪ ಲೈಂಗಿಕ ವಿಷಯಗಳ ವಿವರಣೆ ಜಾಸ್ತಿ ಆಯಿತು ಅನ್ನಿಸಿದ್ರೂ… ಅವರು ಏನು ಹೇಳ್ಬೇಕು ಅನ್ನೋದನ್ನ ಅರ್ಥ ಮಾಡ್ಕೊಂಡ್ರೆ, ಅದು ಗೌಣವಾಗುತ್ತೆ