ನಮ್ಮ ಸುತ್ತಲೂ ಇರುವ ಅನೇಕ ವಸ್ತುಗಳು ವಿಧವಿಧವಾದ ಬದಲಾವಣೆಗಳನ್ನು ಹೊಂದುತ್ತಿರುವುದು ನಿಮಗೆಲ್ಲರಿಗೂ ತಿಳಿದ ವಿಷಯವಾಗಿದೆ. ಪ್ರತಿದಿನವೂ ಸೂರ್ಯನು ಹುಟ್ಟಿ ಪ್ರಪಂಚಕ್ಕೆ ಬೆಳಕು ಶಾಖಗಳನ್ನು ಕೊಡುವನು. ಅವನು ಮುಳುಗಿದನಂತರ ಕತ್ತಲೆಯು ಕವಿದುಕೊಳ್ಳುವುದು. ಜೀವಿತ ವಸ್ತುಗಳು ಎಂದರೆ ಪ್ರಾಣಿಗಳು ಮತ್ತು ಸಸ್ಯಗಳು ಹುಟ್ಟುವವರು, ಬೆಳೆಯುವವು ಮತ್ತು ಕ್ರಮೇಣ ವೃದ್ಧಾವಸ್ಥೆಯನ್ನು ಹೊಂದಿ, ಸತ್ತು, ಜೀರ್ಣವಾಗುವುವು. ಸೂರ್ಯನ ಕಿರಣಗಳ ಶಾಖದಿಂದ ನೀರು ಆವಿಯಾಗಿ, ಗಾಳಿಯ ಸಹಾಯದಿಂದ ಮೇಲೇರಿ ಮೋಡವಾಗುವುದು. ಮೋಡಗಳು ತಂಪಾದಾಗ, ನೀರು ಹನಿಗಳ ರೂಪದಲ್ಲಿ ಮಳೆಯೆನಿಸಿಕೊಂಡು ಕೆಳಗೆ ಬೀಳುವುದು.
ಹೀಗೆ ಪ್ರಕೃತಿಯಲ್ಲುಂಟಾಗುವ ರೂಪಾಂತರಗಳನ್ನು ಪರಿಶೀಲಿಸಿದರೆ, ಅವುಗಳನ್ನು ಕೆಲವು ವರ್ಗಗಳಾಗಿ ವಿಭಾಗಿಸಬಹುದು. ಕೆರೆ ಕಟ್ಟೆಗಳ ನೀರು ಅಊರ್ಯನ ಶಾಖದಿಂದ ಆವಿಯಾಗುವಂತೆ, ನಾವು ನೀರನ್ನು ಕಾಯಿಸಿದಾಗ ಅದು ಅನಿಲ ರೂಪದ ಹಬೆಯಾಗುತ್ತದೆ. ಆ ಹಬೆಯನ್ನು ತಂಪು ಮಾಡಿದರೆ ಪುನಃ ನೀರಾಗುತ್ತದೆ ಮತ್ತು ನೀರನ್ನು ವಿಶೇಷವಾಗಿ ತಂಪು ಮಾಡಿದಾಗ ಅದು ಘನರೂಪದ ಮಂಜುಗಡ್ಡಯಾಗುತ್ತದೆ. ನೀರು, ಹಬೆ ಮತ್ತು ಮಂಜುಗಡ್ಡೆಗಳು ಒಂದೇ ವಸ್ತುವಿನ ಬೇರೆ ಬೇರೆ ರೂಪಗಳಾದರೂ, ಅವಗಳಲ್ಲಿರುವ ವಸ್ತುವು ಒಂದೇ ಆಗಿಸುತ್ತದೆ. ಅಕ್ಕಸಾಲಿಗನು ಆಭರಣಗಳನ್ನು ಮಾಡುವಾಗ ಘನರೂಪದ ಚಿನ್ನವನ್ನು ಒಂದು ಮೂಸೆಯಲ್ಲಿಟ್ಟು, ಕುಲುಮೆಯಲ್ಲಿ ಕಾಯಿಸಿ, ಅದು ಕೆಂಗಾದು ದ್ರವವಾದಾಗ ಎರಕ ಹೊಯ್ಯುವನು. ಇದರಿಂದ ರೂಪ ಬದಲಾಯಿತೇ ಹೊರತು, ಪದಾರ್ಥವು ಬೇರೆಯಾಗಲಿಲ್ಲ. ಮೇಲಿನ ಈ ರೂಪಾಂತರಗಳು ಭೌತ ಬದಲಾವಣೆಗಳಿಗೆ ಉದಾಹರಣೆಗಳಾಗಿವೆ. ಈ ಬದಲಾವಣೆಗಳಿಂದ ವಸ್ತುವಿನ ರೂಪ ಮಾತ್ರ ಬೇರೆಯಾಗುತ್ತದೆ; ಆದರೆ ರಾಸಾಯನ ಸಂಯೋಜನವು ಇದ್ದಂತೆಯೇ ಇರುತ್ತದೆ.
ಮರವನ್ನು ಸುಟ್ಟರೆ, ಹೊಗೆ, ಬೆಳಕು, ಶಾಖ – ಇವುಗಳ ಉತ್ಪತ್ತಿಯಾಗಿ, ಕೊನೆಗೆ ಸ್ವಲ್ಪ ಬೂದಿಯು ಉಳಿದುಕೊಳ್ಳುತ್ತದೆ. ಈ ಬೂದಿಯಲ್ಲಿ ಮರದ ಗುಣಗಳಾವುವೂ ಇರುವುದಿಲ್ಲ. ಇದರಿಂದ ಪುನಃ ಮೊದಲಿನ ಪದಾರ್ಥವನ್ನು ಹೊಂದಲೂ ಸಾಧ್ಯವಿಲ್ಲ. ಹೊಳಪಾದ ಕಬ್ಬಿಣವನ್ನು ಕೆಲವು ದಿನ ಗಾಳಿಯಲ್ಲಿಟ್ಟರೆ, ಅದಕ್ಕೆ ತುಕ್ಕು ಹಿಡಿಯುತ್ತದೆ. ಸೂಜಿಗಲ್ಲು ಕಬ್ಬಿಣವನ್ನು ಸೆಳೆಯಬಲ್ಲದೇ ಹೊರತು ಕಂದುಬಣ್ಣದ ತುಕ್ಕಿನ ಪುಡಿಯನ್ನು ಆಕರ್ಷಿಸಲಾರದು. ಆದುದರಿಂದ ಕಬ್ಬಿಣ ಮತ್ತು ತುಕ್ಕು ಬೇರೆ ಬೇರೆ ಪದಾರ್ಥಗಳೆಂದಾಯಿತು. ಈ ರೀತಿಯ ಬದಲಾವಣೆಗಳಿಂದ ಪದಾರ್ಥಗಳ ಸಂಯೋಜನವು ಮಾರ್ಪಟ್ಟು, ಹೊಸ ಪದಾರ್ಥಗಳು ಉತ್ಪನ್ನವಾಗುತ್ತವೆ. ಇಂತಹ ಬದಲಾವಣೆಗಳನ್ನು ರಾಸಾಯನ ಬದಲಾವಣೆಗಳು ಎನ್ನುತ್ತಾರೆ.
ರಸಾಯನ ಶಾಸ್ತ್ರದಲ್ಲಿ ಪದಾರ್ಥಗಳ ಗುಣ ಲಕ್ಷಣಗಳು, ಅವುಗಳು ಹೇಗೆ ಉತ್ಪತ್ತಿಯಾಗುತ್ತವೆ ಮತ್ತು ಅವುಗಳನ್ನು ಬದಲಾಯಿಸಿ ಹೊಸ ಪದಾರ್ಥಗಳನ್ನು ಹೇಗೆ ಮಾಡಬಹುದು ಇವೇ ಮೊದಲಾದ ವಿಷಯಗಳನ್ನು ನಾವು ಕಲಿಯುತ್ತೇವೆ.
———
ಇದೇನು, ರಸಾಯನ ಶಾಸ್ತ್ರದ ಪಾಠವನ್ನೇ ನುಡಿಚಿತ್ರ ಮಾಡಿದಿರೆ ಎಂದು ಮೂಗು ಮುರಿಯಬೇಡಿ. ಸ್ವಾತಂತ್ರ್ಯ ಬಂದ ಹೊಸತರಲ್ಲಿ ಪ್ರಕಟವಾದ ಹತ್ತನೇ ತರಗತಿಯ (ಎಸೆಸೆಲ್ಸಿ) ಪಠ್ಯಪುಸ್ತಕದ ಪೀಠಿಕೆ ಇದು. ಹಲವು ವರ್ಷಗಳಿಂದ (ಕೆಲವು ದಶಕಗಳಿಂದ ಎನ್ನಿ) ಈ ಪುಸ್ತಕವನ್ನು ನಾನು ಹೇಗೋ ಕಾಪಾಡಿಕೊಂಡು ಬಂದಿದ್ದೇನೆ. ಈಗ ಅದರ ಮೊದಲ ಮತ್ತು ಕೊನೆಯ ಪುಟಗಳಿಲ್ಲ. ಪಠ್ಯಪುಸ್ತಕ ಎಂದರೆ ಹಾಗಿರಬೇಕು, ಹೀಗಿರಬೇಕು ಎನ್ನುವ ನಾವು ಈ ಪಠ್ಯಪುಸ್ತಕದ ಶೈಲಿ, ನಿರೂಪಣೆಯನ್ನು ನೋಡಿದರೆ, ಅಚ್ಚರಿಯಾಗುತ್ತದೆ.
ಉದಾಹರಣೆಗೆ ಇದರಲ್ಲಿ ಇರುವ ಎಲ್ಲ ಪಾಠಗಳೂ ಪ್ರಯೋಗಗಳಿಂದಲೇ ಆರಂಭವಾಗುತ್ತವೆ. 5 ಗ್ರಾಂ ಮರಳನ್ನೂ, 5 ಗ್ರಾಂ ಉಪ್ಪನ್ನೂ ಚೆನ್ನಾಗಿ ಬೆರೆಯುವಂತೆ ಕಲ್ಲುಪತ್ತಿನಲ್ಲಿ ಅರೆಯಿರಿ ಎಂದು ಮೂರನೇ ಅಧ್ಯಾಯ ಆರಂಭವಾದರೆ, ಕಡಲೆಕಾಳಿನ ಗಾತ್ರದ ಸೋಡಿಯಂ ತುಂಡನ್ನು ಕತ್ತರಿಸಿ [ಎಚ್ಚರಿಕೆ] ನೀರಿನಲ್ಲಿ ಹಾಕಿದರೆ ಏನಾಗುತ್ತದೆ ಎಂಬ ಪ್ರಶ್ನೆಯಿಂದ ಏಳನೇ ಅಧ್ಯಾಯ ಆರಂಭವಾಗುತ್ತದೆ. ಎಚ್ಚರಿಕೆ ಎಂಬ ಚೌಕಾವರಣದಲ್ಲಿ ಇರುವ ಪದಕ್ಕೆ ವಿವರಣೆಯೂ ಹಾಗೆಯೇ ಬರುತ್ತದೆ.
ಹಾಗೆ ನೋಡಿದರೆ, ಪ್ರಯೋಗಗಳನ್ನು ಒಂದಾದ ಮೇಲೆ ಇನ್ನೊಂದರಂತೆ ಮಾಡಲು ವಿದ್ಯಾರ್ಥಿಗಳಿಗೆ ಸೂಚಿಸುವುದೇ ಈ ಪಠ್ಯಪುಸ್ತಕದ ಪ್ರಮುಖ ನಿರೂಪಣಾ ಶೈಲಿ. ಆಮೇಲೆ ಈ ಪ್ರಯೋಗಗಳನ್ನು ಸಿದ್ಧಾಂತಕ್ಕೆ ಅಳವಡಿಸಿ ವಿವರಣೆ ನೀಡಲಾಗಿದೆ. ಇನ್ನು ಪ್ರಶ್ನೆಗಳೂ ಪ್ರಯೋಗಗಳನ್ನು ಆಧರಿಸಿರುವಂಥವೆ!
ನನ್ನ ಪ್ರಕಾರ ಈ ಪಠ್ಯಪುಸ್ತಕವನ್ನು ಕಪ್ಪು ಹಲಗೆಯ ತರಗತಿಯಲ್ಲಿ ಓದುವುದಕ್ಕಿಂತ ಪ್ರಯೋಗಾಲಯದಲ್ಲೇ ಓದುವ ಅನಿವಾರ್ಯತೆ ವಿದ್ಯಾರ್ಥಿಗೆ ಒದಗುತ್ತದೆ.
ರಸಾಯನಶಾಸ್ತ್ರವೆಂದರೆ ಪ್ರಯೋಗಗಳ ಮೂಲಕ ಅರಿತುಕೊಳ್ಳಬೇಕಾದ ಸಂಗತಿಗಳ ಸಂಕಲನ ಎಂಬ ಸಂದೇಶವನ್ನು ಈ ಪುಸ್ತಕ ಕೊಡುತ್ತದೆ. ಪುಸ್ತಕದಲ್ಲಿ ಅಡಿಟಿಪ್ಪಣಿಗಳಿವೆ; ಎಚ್ಚರಿಕೆಗಳಿವೆ; ಚಿತ್ರಗಳಿವೆ.
ಎಲ್ಲಕ್ಕಿಂತ ಮುಖ್ಯವಾಗಿ ಪುಸ್ತಕದ ಕೊನೆಗೆ ಶಬ್ದಕೋಶ ಮತ್ತು ವಿಷಯಸೂಚಕವನ್ನು ಏಕೀಕರಿಸಿ ನೀಡಲಾಗಿದೆ. (ಈ ಪಟ್ಟಿಯನ್ನು ಮುಂದೆ ಅಕ್ಷರಜೋಡಿಸಿ ಪ್ರಕಟಿಸುವೆ). ಇದಕ್ಕೂ ಒಂದು ಅಡಿಟಿಪ್ಪಣಿ ಇದೆ: ಪಾರಿಭಾಷಿಕ ಶಬ್ದಗಳ ವಿಚಾರವಾಗಿ ಇಲಾಖೆಯಿಂದ ನೇಮಿಸಲ್ಪಟ್ಟ ಕಮಿಟಿಯವರು ಸಲಹೆ ಕೊಟ್ಟ ಪದಗಳು ಚೌಕ ಕಂಸಗಳಲ್ಲಿ (ಚೌಕಾವರಣ) ತೋರಿಸಲ್ಪಟ್ಟಿರುತ್ತವೆ. ಉದಾಹರಣೆಗೆ ಸಬ್ಲಿಮೇಶನ್ ಗೆ (sublimation)ಗೆ ಉತ್ಪತನ ಎಂಬ ಅರ್ಥದ ಜೊತೆಗೆ ಉತ್ತಾರಣ ಎಂಬ ಪದವನ್ನೂ ಚೌಕ ಕಂಸದಲ್ಲಿ ಕೊಟ್ಟಿದ್ದಾರೆ.
ಈ ಶಿಸ್ತಿನ ಪುಸ್ತಕದ ಸಂಪಾದಕೀಯ ತಂಡದ ಬಗ್ಗೆ ಯಾರಾದರೂ ಗೊತ್ತಿದ್ದವರು, ಹಿರಿಯರು ಬೆಳಕು ಚೆಲ್ಲಿದರೆ ಒಳ್ಳೆಯದು.