ಈ ವಾರ (ಸೆಪ್ಟೆಂಬರ್ ೨೦೧೫) ಭಾರತದ ಪತ್ರಿಕೆಗಳಲ್ಲಿ ಇಂಟರ್ನೆಟ್ ಆರ್ಗ್ನ ಜಾಹೀರಾತುಗಳು ಬರುತ್ತಿವೆ. ಅದರಲ್ಲಿ ಗಾಳಿಗಿರಣಿಯನ್ನು ಶೋಧಿಸಿದ ಇಬ್ಬರು ಗ್ರಾಮೀಣ ಹಿನ್ನೆಲೆಯ ವ್ಯಕ್ತಿಗಳ ಚಿತ್ರವಿದೆ. ಜಾಹೀರಾತು ಹೇಳಿದ್ದು ಇಷ್ಟು: ಇವರಿಬ್ಬರೂ ಇಂಟರ್ನೆಟ್ ಇಲ್ಲದೆಯೇ ಗಾಳಿಗಿರಣಿಯನ್ನು ಸಂಶೋಧಿಸಿದರು. ಇಂಟರ್ನೆಟ್ ಇದ್ದಿದ್ದರೆ ಏನೇನೆಲ್ಲಾ ಸಾಧಿಸಬಹುದಿತ್ತು? – ಇದು ಫೇಸ್ಬುಕ್ ಒಡೆತನದ ಈ ಅಭಿಯಾನದ ಜಾಹೀರಾತಿನ ಒಕ್ಕಣಿಕೆ. `ಹೆಚ್ಚು ಸಂಶೋಧಕರನ್ನು ನಾವು ಸಂಪರ್ಕಿಸಿದಷ್ಟೂ ಉತ್ತಮವಾದುದನ್ನು ನಾವು ಪಡೆಯುತ್ತೇವೆ’ ಎಂದು ಈ ಜಾಹೀರಾತು ಘೋಷಿಸಿದೆ.
ಇರಬಹುದು. ಆದರೆ ಇಂಟರ್ನೆಟ್ ಇಲ್ಲದಿರುವುದೇ ಅವರ ಸ್ವಂತಿಕೆಯು ಹೊರಹೊಮ್ಮಲು ಕಾರಣ ಎಂಬ ಸತ್ಯವನ್ನೂ ಈ ಜಾಹೀರಾತು ಹೇಳುತ್ತದೆ ಅಲ್ಲವೆ? ಹಾಗೆ ನೋಡಿದರೆ ಆಫ್ರಿಕಾ ಖಂಡದಲ್ಲಿ ಇಂಥದ್ದೇ ಗಾಳಿ ಗಿರಣಿಯಿಂದ ವಿದ್ಯುತ್ ಉತ್ಪಾದಿಸಿದ ವಿಲಿಯಂ ಕಾಂಕ್ವಾಂಬಾ ಕಥೆಯೂ ಅದೇ ಅಲ್ಲವೆ? ಆತ ಟೆಡ್ ಟಾಕ್ ಕೊಟ್ಟಿದ್ದೇ ತನ್ನ ಅನ್ವೇಷಣೆಗಾಗಿ. ಎಂದಮೇಲೆ ಇಂಟರ್ನೆಟ್ ಏಕೆ ಬೇಕು? ಯೋಚಿಸಿ. (ಕಾಂಕ್ವಾಂಬಾ ಬಗ್ಗೆ ಕನ್ನಡದಲ್ಲಿ ಬಂದ ಒಂದು ಒಳ್ಳೆಯ ಪುಸ್ತಕ – ಗಾಳಿ ಪಳಗಿಸಿದ ಬಾಲಕ – ವಿಮರ್ಶೆ ಇಲ್ಲಿದೆ ಓದಿ)
ಹಾಗಾದರೆ ನಮ್ಮ ಕಾಲದ ಶ್ರೇಷ್ಠ ಗಣಿತಜ್ಞ ಮತ್ತು ಕಂಪ್ಯೂಟರ್ ಪ್ರೋಗ್ರಾಮಿಂಗ್ ಪಿತಾಮಹ ಡೊನಾಲ್ಡ್ ಕನೂಥ್ ಒಬ್ಬ ಮೂರ್ಖ ವ್ಯಕ್ತಿ ಎನ್ನಬೇಕೆ? ಕಂಪ್ಯೂಟರ್ ಪ್ರೋಗ್ರಾಮಿಂಗ್ ಬಗ್ಗೆಯೇ ಆದಿ ಲೇಖಕರಾಗಿರುವ ಅವರು (೧೯೭೨ರಲ್ಲೇ ಅವರು ಈ ಕುರಿತ ನಾಲ್ಕು ಸಂಪುಟಗಳ ಗ್ರಂಥ ಬರೆದರು) ಈಗ ಈ ಮೈಲ್ ನೋಡುವುದು ಆರು ತಿಂಗಳಿಗೊಮ್ಮೆ! `ನೀವು ಕಾಗದದಲ್ಲಿ ಪತ್ರ ಬರೆದರೆ ಸರದಿಯಲ್ಲಿ ಗಮನಿಸುತ್ತೇನೆ; ಈ ಮೈಲ್ನ್ನು ಡಿಲೀಟ್ ಕೂಡಾ ಮಾಡಬಹುದು’ ಎಂದು ಅವರು ನೇರ ಎಚ್ಚರಿಕೆ ಕೊಟ್ಟಿದ್ದಾರೆ. ಅಂದರೆ ಡೊನಾಲ್ಡ್ ಕನೂಥ್ ಏಕೆ ಹೀಗಿದ್ದಾರೆ? ಅವರೇಕೆ ತಮ್ಮ ಮನೆಯಲ್ಲಿರುವ ೮೧೨ ಕೊಳವೆಗಳ ಆರ್ಗನ್ ವಾದ್ಯವನ್ನೇ ಬಾರಿಸಿ ಖುಷಿಪಡಲು ಮುಂದಾಗುತ್ತಾರೆ? ಯೋಚಿಸಿ.
ಇಷ್ಟಾಗಿ ಇಂಟರ್ನೆಟ್.ಆರ್ಗ್ ಎಂಬುದು ಹಳ್ಳಿಯವರ ಅಭ್ಯುದಯಕ್ಕಾಗಿ ಎಂಬ ಮುಖವಾಡ ಹೊತ್ತ ಫೇಸ್ಬುಕ್ ಮಾರುಕಟ್ಟೆ ತಾಣ ಎಂಬುದನ್ನು ಮರೆಯಬೇಡಿ. ಈ ಕುರಿತು ನಾನು ಕಳೆದ ಫೆಬ್ರುವರಿಯಲ್ಲಿ ಬರೆದ ಲೇಖನವನ್ನು ಓದಿ: ಇಂಟರ್ನೆಟ್.ORG : ಬಹು ಬಹು ರಾಷ್ಟ್ರೀಯ ಸಂಸ್ಥೆಗಳ (MMNC) ಸಂಘಟಿತ ಮಾರುಕಟ್ಟೆ ಜಾಲ)
ನಾನೂ ತಂತ್ರಜ್ಞಾನ ಪ್ರಿಯ. ನನ್ನ ದಿನವೆಲ್ಲ ಕಂಪ್ಯೂಟರ್ ಮುಂದೆಯೇ ಕಳೆದು ಹೋಗುತ್ತದೆ. ಆದರೆ ನಾನು ಗ್ಯಾಜೆಟ್ಗಳ ಗುಲಾಮನಲ್ಲ; ಆಪ್ಗಳೇ ನನ್ನ ಬದುಕು ಎಂದು ತಿಳಕೊಂಡವನಲ್ಲ. ನೀವು?
ಉದಾಹರಣೆಗೆ
ನಾನು ಮೌಸ್ ಬದಲಿಗೆ ಪೆನ್ ಟ್ಯಾಬ್ಲೆಟ್ ಬಳಸ್ತೇನೆ. ಮೌಸನ್ನು ಅವುಚಿಕೊಂಡು ಹಿಡಿಯುವುದಕ್ಕಿಂತ ಪೆನ್ನನ್ನು ಹಿಡಿಯುವುದು ಹಿತಕರ! ಬಾಲ್ಯದಿಂದಲೂ ಪೆನ್ನು ಹಿಡಿದ ನನಗೆ ಈ ಡಿಜಿಟಲ್ ಪೆನ್ (ಸ್ಟೈಲಸ್)ನಿಂದ ಯಾವುದೇ RSI (Repetitive strain injury ) ಬರುವ ಸಾಧ್ಯತೆ ಕಡಮೆ.
ನಾನು ನನ್ನ ಮೊಬೈಲ್ನಲ್ಲಿ ಕನ್ನಡವನ್ನು ಬರೆಯುವ ಗೋಜಿಗೆ ಹೋಗುವುದಿಲ್ಲ. ಚಿಕ್ಕ ಕೀಲಿಮಣೆಯಲ್ಲಿ ಕನ್ನಡವನ್ನು ಕಷ್ಟಪಟ್ಟು ಬರೆಯುವ ಹಟ ನನಗಿಲ್ಲ. ಅದಕ್ಕೆಂದೇ ನಾನು ನನ್ನ ಮೊಬೈಲನ್ನು ಟೆಸ್ಕ್ಟಾಪ್ ಕಂಪ್ಯೂಟರಿಗೆ ಜೋಡಿಸಿ ಅಲ್ಲಿಂದಲೇ ವ್ಯಾಟ್ಸಪ್, ಎಸ್ಎಂಎಸ್, ಕಡತ ವರ್ಗಾವಣೆ ಎಲ್ಲವನ್ನೂ ಮಾಡುತ್ತೇನೆ. ಕರೆಯನ್ನು ಕೇಳಲೆಂದು ಮಾತ್ರ ಮೊಬೈಲನ್ನು ಹಿಡಿದಿರುತ್ತೇನೆ. ಮೊಬೈಲಿನಲ್ಲೇ ಎಲ್ಲವನ್ನೂ ಸಾಧಿಸಿಬಿಡಬೇಕೆಂಬ ಹಟ ನನಗಿಲ್ಲ.
ಈ ಹಿಂದೆ `ನನ್ನ ಡಿಜಿಟಲ್ ಬದುಕು’ ಎಂಬ ಶೀರ್ಷಿಕೆಯಡಿ ಬರೆಯಬೇಕೆಂದುಕೊಂಡಿದ್ದ ಲೇಖನದಲ್ಲಿ ಇಂಥ ಹಲವು ಉದಾಹರಣೆಗಳನ್ನು ಕೊಡಬೇಕೆಂದು ನಾನು ಕಲ್ಪಿಸಿಕೊಂಡಿದ್ದೆ. ಸನ್ನೆ ಭಾಷೆಯಲ್ಲೇ ಸಂವಾದ ಮಾಡಬೇಕಾದ ನನ್ನ ಹೆಂಡತಿಗಾಗಿ ಸ್ಕೈಪ್ ಮತ್ತು ಟೀಮ್ವ್ಯೂವರ್ ಕಾಂಬಿನೇಶನ್ ಬಳಕೆ, ಕಡತಗಳ ನಿರ್ವಹಣೆಗಾಗಿ ಕಳೆದ ೧೦ ವರ್ಷಗಳಿಂದ ಬಾಹ್ಯ ಹಾರ್ಡ್ ಡಿಸ್ಕ್ ಬಳಸುತ್ತಿರೋದು, ಅದರ ಕಡತಗಳ ಸಿಕ್ರನೈಸ್ ಮಾಡಲು ಸಿಂಕ್ಬ್ಯಾಕ್ ಬಳಸ್ತಾ ಇರೋದು, ಗೂಗಲ್ ಡಾಕ್ಯುಮೆಂಟ್ಗಳನ್ನು ನನ್ನ ಕಚೇರಿ ಕೆಲಸಗಳಿಗೆ ಬಳಸ್ತಿರೋದು, ಡೆಸ್ಕ್ಟಾಪಿನಲ್ಲೂ, ಮೊಬೈಲಿನಲ್ಲೂ ತಂಬೂರಿ ತಂತ್ರಾಂಶ, ಟ್ವೀಟ್ಗಳ ನಿರ್ವಹಣೆಗೆ ಟ್ವೀಟ್ಡೆಕ್, – ಒಂದೇ ಎರಡೆ? ಪಟ್ಟಿಗೆ ಮಿತಿಯಿಲ್ಲ.
ಆದರೆ ಆ ಲೇಖನ ಬರೆಯುತ್ತಿಲ್ಲ. ಬದಲಿಗೆ ಈ ಲೇಖನ ಬರೆಯುತ್ತಿದ್ದೇನೆ. ನನಗೆ ಆಪ್ಗಳಾಗಲೀ, ಗ್ಯಾಜೆಟ್ಗಳಾಗಲೀ ಮನುಷ್ಯನ ಸಂವೇದನೆಗಳಿಗಿಂತ ದೊಡ್ಡವು ಅನ್ನಿಸುತ್ತಿಲ್ಲ. ನಮ್ಮ ಬದುಕನ್ನು ದಿನದಿನವೂ ಅಸ್ತವ್ಯಸ್ತಗೊಳಿಸುವ, ನಾವು ಇನ್ನೊಬ್ಬರಿಗಿಂತ ಕೀಳು ಎಂಬ ಮನೋಭಾವವನ್ನು ಹುಟ್ಟಿಸುವ, ಪದೇಪದೇ ವಸ್ತು, ಉಡುಗೆ ಬದಲಾಯಿಸುವವರೇ ನಮ್ಮ ಆದರ್ಶ ಎಂಬ ಭ್ರಮೆಯನ್ನು ಹೇರುವ ಈ ಕೊಳ್ಳುಬಾಕ ವಿಕೃತಿಯಿಂದ ತಪ್ಪಿಸಿಕೊಂಡು ಬದುಕದಿದ್ದರೆ ನಮಗೂ,ನಮ್ಮ ಸಂಸ್ಕೃತಿಗೂ ಉಳಿಗಾಲವಿಲ್ಲ.
ಉದಾಹರಣೆಗೆ, ಸಂಗೀತದ ಸಾಧನಗಳನ್ನೇ ತೆಗೆದುಕೊಳ್ಳಿ. ಅವುಗಳು ಆಪ್ಗಳ ಹಾಗೆ ವಾರವಾರವೂ ಬದಲಾಗುವವೇ? ಖಂಡಿತ ಇಲ್ಲ. ಪನ್ನಾಲಾಲ್ ಘೋಶ್ – ಹರಿಪ್ರಸಾದ್ ಚೌರಸಿಯಾ – ಹೀಗೆ ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಬಾನ್ಸುರಿಯ ಬದಲಾವಣೆಯು ಅತ್ಯಂತ ನಾಜೂಕಿನಿಂದ ಮತ್ತು ವಿಕಾಸವಾದದ ಶಿಸ್ತಿನಿಂದ ಆಗಿದೆಯೇ ಹೊರತು, ಆಪ್ಗಳ ಹಾಗೆ ಬೇಕಾಬಿಟ್ಟಿ ಬದಲಾಗಿಲ್ಲ. ಚೌರಸಿಯಾರ ಕೊಳಲು ಬಿಡಿ, ಅದರ ನಾದವೂ ಬದಲಾಗಿಲ್ಲ. ಏಕೆಂದರೆ ನಮ್ಮ ಮೆದುಳಿಗೆ ಹಿತವೆನಿಸುವ ತರಂಗಗಳನ್ನು ನಮ್ಮ ಋಷಿಮುನಿಗಳು ಸಹಸ್ರಾರು ವರ್ಷಗಳ ಹಿಂದೆಯೇ ಯಾವುದೇ ಗ್ಯಾಜೆಟ್ / ತರಂಗ ಶೋಧಕ ಇಲ್ಲದೆಯೇ ಹುಡುಕಿಟ್ಟಿದ್ದಾರೆ. ಆ ತರಂಗಗಳ ಹೊರತಾಗಿ ಬೇರಾವ ತರಂಗವನ್ನೂ ನಾವು ಇದುವರೆಗೂ ಹುಡುಕಲಾಗಿಲ್ಲ! ನಾವು ಹುಡುಕಿದ್ದೆಲ್ಲ ದೇಹಕ್ಕೆ ಹಾನಿಕರವಾದ ತರಂಗಗಳನ್ನು ಮಾತ್ರ! ನಾವು ಹುಡುಕಿದ ಮೈಕ್ರೋವೇವ್ ತರಂಗಗಳು ನಮ್ಮ ಜೀವ ಸಂಕುಲಕ್ಕೆ ಹಾನಿ ಮಾಡಿದ್ದನ್ನು ಗಮನಿಸಿ.
ಇತ್ತೀಚೆಗೆ ಆನ್ಲೈನ್ನಲ್ಲಿ, ಮುದ್ರಣ ಮಾಧ್ಯಮಗಳಲ್ಲಿ ಆಪ್ಗಳ ಬಗ್ಗೆ ವ್ಯಾಪಕ ಪ್ರಚಾರದ ಲೇಖನ ಸುದ್ದಿಗಳು ಬರುತ್ತಿವೆ. ವಾಣಿಜ್ಯ ಉತ್ಪನ್ನಗಳ ಮಾಹಿತಿ, ವಿಮರ್ಶೆ ಬರೆಯುವುದೇ ಪತ್ರಿಕೋದ್ಯಮವಾಗಿದೆ. ಕೆಲವು ಪತ್ರಿಕೆಗಳಲ್ಲಿ ಪುಟಗಟ್ಟಳೆ ಆಪ್ಗಳ ವರ್ಣನೆಗಳು ಸಿಗುತ್ತವೆ. ಆಂಡ್ರಾಯ್ಡ್ನಲ್ಲಿ ೧೪ ಲಕ್ಷ ಆಪ್ಗಳಿವೆ. ಆಪಲ್ ಓಎಸ್ನಲ್ಲಿ ೧೨ ಲಕ್ಷ ಆಪ್ಗಳಿವೆ. ಇವುಗಳಲ್ಲಿ ಎಷ್ಟು ಆಪ್ಗಳನ್ನು ನೀವು ಇನ್ಸ್ಟಾಲ್ ಮಾಡಿಕೊಳ್ಳುವಿರಿ? ಎಷ್ಟು ಆಪ್ಗಳ ಬಗ್ಗೆ ತಿಳಿದುಕೊಳ್ಳುವಿರಿ? ಈಗ ವಿಶ್ವದಾದ್ಯಂತ ೨೦೦ಕ್ಕೂ ಹೆಚ್ಚು ಕಂಪೆನಿಗಳ ಎಂಟು ಲಕ್ಷ ಮೊಬೈಲ್ ಮಾದರಿಗಳಿವೆ. ೨೦೧೦-೧೫ರ ನಡುವೆ ತಯಾರಾದ ಮೊಬೈಲ್ಗಳ ಸಂಖ್ಯೆಗಾಗಿ ಕೆಳಗಿನ ಕೋಷ್ಟಕ ನೋಡಿ.
ಇವುಗಳನ್ನು ನೀವು ಖರೀದಿಸುತ್ತಲೇ ಇರುತ್ತೀರಾ? ನಿಮ್ಮ ಮೊಬೈಲನ್ನು ಬದಲಾಯಿಸುತ್ತಲೇ ಇರುವಿರಾ? ಯೋಚಿಸಿ.
ಈ ಮೊಬೈಲ್ಗಳ ಮಾದರಿ ಬಿಡಿ, ಒಂದೇ ಮೊಬೈಲ್ನಲ್ಲಿ ಆಂಡ್ರಾಯ್ಡ್ ಆಪರೇಟಿಂಗ್ ತಂತ್ರಾಂಶವನ್ನು ಸ್ಥಾಪಿಸುವ ತಾಪತ್ರಯ ಗೊತ್ತು ತಾನೆ? ಪ್ರತಿಯೊಂದೂ ಮೊಬೈಲಿನ ಕ್ಯಾಮೆರಾದ ಮೆಗಾ ಪಿಕ್ಸೆಲ್ನಿಂದ ಹಿಡಿದು, ಬ್ಯಾಟರಿಯ ಬಾಳಿಕೆ, ಪರದೆಯ ತಾಳಿಕೆ ಕುರಿತು ಪುಂಖಾನುಪುಂಖವಾಗಿ ಬರುತ್ತಿರುವ ವಿಶ್ಲೇಷಣೆಗಳನ್ನು ಗಮನಿಸಿ. ಇವೆಲ್ಲವೂ ನಮಗೆ ದಿನಾಲೂ ಬೇಕೆ? ಈ ಮಾಹಿತಿಯ ಬಗ್ಗೆ ಬರೆಯುವುದೇ ನಮ್ಮ ಕೆಲಸವಾಗಬೇಕೆ? ಬದುಕಿನ ಹಲವು ಆಯಾಮಗಳ ಬಗ್ಗೆ ನುಡಿಚಿತ್ರ, ಸಂದರ್ಶನ, ಪ್ರತ್ಯಕ್ಷದರ್ಶನದ ಲೇಖನ, ಅಂಕಿ ಅಂಶ ಸಂಗ್ರಹ – ಇವೆಲ್ಲವನ್ನೂ ನಾವು ಮರೆಯಬಹುದೆ? ಯೋಚಿಸಿ.
ನಾನೂ ಈ ಹಿಂದೆ ಇಂಥ ಗ್ಯಾಜೆಟ್ಗಳೇ ನಮ್ಮ ಭವಿಷ್ಯದ ಮಾರ್ಗದರ್ಶಕಗಳು ಎಂದು ಭಾವಿಸಿದ್ದೆ. ಟ್ಯಾಬ್ಲೆಟ್ಗಳು ಕಾಲಿಟ್ಟಾಗ ಕವರ್ಪೇಜ್ ಬರೆದು ಆಪ್ಗಳನ್ನು ಬಣ್ಣಿಸಿದ್ದೆ. ನಿಜ, ಸ್ಮಾರ್ಟ್ಫೋನ್ಗಳು ಬಂದಾಗಿನಿಂದ ನಮ್ಮ ಬದುಕಿನಲ್ಲಿ ಹಲವು ಅನುಕೂಲಗಳು ಮೂಡಿವೆ. ನಾನೂ ಮೊಬೈಲಿನಲ್ಲಿ ತಂಬೂರಿ ಮೀಟುತ್ತೇನೆ; ನನ್ನ ಪ್ರಿಯ ಹಾಡುಗಳು ಅದರಲ್ಲಿವೆ. ಇಂಥ ಕೆಲವು ನಿತ್ಯ ಬದುಕಿನ ಕಡತ ಮತ್ತು ತಂತ್ರಾಂಶಗಳನ್ನು ಬಿಟ್ಟರೆ ನಾನು ಬಳಸುವುದು ಎಸ್ಎಂಎಸ್ ಮಾತ್ರ.
ಈ ಹಿಂದೆ ನಾನು ಬರೆದ ಬ್ಲಾಗ್ ಬದುಕಿನ ಕುರಿತ ನೀಳ್ ಲೇಖನದಲ್ಲಿ (ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ ) ಜೆರೋಮ್ ಲೇನಿಯರ್ ಬಗ್ಗೆ ಪ್ರಸ್ತಾಪಿಸಿದ್ದೆ. `ಯೂ ಆರ್ ನಾಟ್ ಎ ಗ್ಯಾಜೆಟ್’ ಎಂಬ ಪುಟ್ಟ ಪುಸ್ತಕದಲ್ಲಿ ಆತ ಬರೆದಿದ್ದನ್ನೆಲ್ಲ ನೀವೂ ಓದಿ.
ನಾನು ಆಗ ಬರೆದಿದ್ದನ್ನೇ ಇಲ್ಲಿ ಉಲ್ಲೇಖಿಸುವುದಾದರೆ:
ಆನ್ಲೈನ್ ಸಮೂಹದ ಹುಚ್ಚು ಚಟುವಟಿಕೆಗಳಿಗಿಂತ ಖಾಸಗಿ ಸೃಜನಶೀಲತೆಯೇ ಹೆಚ್ಚು ಮೌಲಿಕ ಎಂದು ‘ಭ್ರಮಾವಾಸ್ತವ’ದ (ವರ್ಚುಯಲ್ ರಿಯಾಲಿಟಿ) ರೂವಾರಿ ಜೆರೋನ್ ಲೇನಿಯೆರ್ ತನ್ನ ‘ಯೂ ಆರ್ ನಾಟ್ ಎ ಗ್ಯಾಜೆಟ್’ ಪುಸ್ತಕದಲ್ಲಿ ಪ್ರತಿಪಾದಿಸಿದ್ದಾರೆ. ಜಗತ್ತನ್ನೇ ಆಳುತ್ತಿರುವ ವಿಕಿಪೀಡಿಯಾವು ಖಾಸಗಿ ಧ್ವನಿಗಳನ್ನು ಹತ್ತಿಕ್ಕುತ್ತದೆ; ಫೇಸ್ಬುಕ್ ತಾಣವು ಹಲವು ಚಹರೆಗಳಿಗೆ ದಾರಿ ಮಾಡುತ್ತದೆ; ಜನ ಗೂಗಲ್ ಸರ್ಚ್ನ ಮೊದಲ ಪುಟದಲ್ಲಿ ಬಂದಿದ್ದನ್ನೇ ನಂಬುವ ಮೋಸದ ಬೆಳವಣಿಗೆ ಕಂಡಿದೆ; – ಇದು ಲೇನಿಯೆರ್ ವಾದ. ಇದೇನು ಹೊಸದಲ್ಲ. ಭೌತಿಕ ಜಗತ್ತಿನಲ್ಲಿ ಇರುವ ಎಲ್ಲ ಲೋಪದೋಷಗಳೂ, ಕ್ಷುದ್ರ ವ್ಯಕ್ತಿತ್ವಗಳೂ, ವ್ಯವಹಾರಗಳೂ ಇಂಟರ್ನೆಟ್ ಲೋಕದಲ್ಲೂ ಇರುವುದು ಸಹಜ. ಆದ್ದರಿಂದ ಒಳ್ಳೆಯದನ್ನಷ್ಟೇ ಹುಡುಕುವ ಜಾಯಮಾನ ಬೆಳೆಸಿಕೊಳ್ಳುವುದಷ್ಟೇ ಮುಖ್ಯ!
ಅಂದಹಾಗೆ ಜೆರೋನ್ ಲೇನಿಯರ್ ಒಬ್ಬ ಜಾನಪದ ಸಂಗೀತಗಾರನೂ ಹೌದು; ವರ್ಚುಯಲ್ ರಿಯಾಲಿಟಿಯ ಪ್ರವರ್ತಕನೂ ಹೌದು.
ಆದರೆ ಮೊಬೈಲ್ ಎಂದರೆ ಕೇವಲ ಸೆಲ್ಫೀಗಳನ್ನು ತೆಗೆಯುವ ಸಾಧನ ಎಂದು ನಾನು ತಿಳಿದಿಲ್ಲ. ಸೆಲ್ಫೀ ಬಗ್ಗೆ ದಟ್ಸ್ಕನ್ನಡದ ಶ್ಯಾಮಣ್ಣ ಬರೆದಿದ್ದರು; ಸೆಲ್ಫೀ ಒಂದು ರೋಗವೂ ಹೌದು ಎಂಬುದನ್ನು ಉಲ್ಲೇಖಿಸಿದ್ದರು. ಅದು ಬಿಡಿ. ಸೆಲ್ಫೀಯ ಇನ್ನೊಂದು ಮುಖ ನೋಡಿ. ನೀವು ಯಾವುದೋ ಜನನಿಬಿಡ ಪ್ರದೇಶದಲ್ಲಿದ್ದರೂ ಹೊಸಬರ ಪರಿಚಯ ಮಾಡಿಕೊಳ್ಳದೆಯೇ ಫೋಟೋ ತೆಗೆಯುವ ಅವಕಾಶದ ಪರಿಣಾಮವೇನು? ಮೊದಲೇ ಮೊಬೈಲ್ನಲ್ಲಿ ಮುಳುಗಿದ್ದ ನಾವು ಹೊರಗೆ ಬಂದಾಗಲೂ ಇನ್ನೊಬ್ಬರ ಸಹವಾಸ ಮಾಡುವ ಅತಿ ಚಿಕ್ಕ ಅವಕಾಶವನ್ನೂ ಕಳೆದುಕೊಂಡು, ನಮಗೆ ನಾವೇ ಫೋಟೋ ತೆಗೆದುಕೊಂಡು ಬೀಗುತ್ತಿದ್ದೇವೆ!! ಈಗಾಗಲೇ ಸಾಕುಬೇಕಾಗಿರುವ ದ್ವೀಪ ಮಾನಸಿಕತೆಗೆ ಈ ಸೆಲ್ಫೀಯೂ ಸೇರಿಕೊಂಡಿದೆ ಅನ್ನಿಸುವುದಿಲ್ಲವೆ?
ಇನ್ನು ಎಂ- ಕಾಮರ್ಸ್ ವಿಚಾರಕ್ಕೆ ಬರೋಣ. ಮೊಬೈಲಿನಿಂದಲೇ ಎಲ್ಲವನ್ನೂ ಖರೀದಿಸಬಹುದು. ಈಗಂತೂ ಮೊಬೈಲ್ನಿಂದ ಮಾತ್ರವೇ ಖರೀದಿಸಬಹುದಾದ ಬೃಹತ್ ಮಾಲ್ಗಳು ಬಂದಿವೆ. ಕೆಲವು ಕಂಪನಿಗಳು ತಮ್ಮ ಡೆಸ್ಕ್ಟಾಪ್ ಅಂಗಡಿಗಳನ್ನು ಮುಚ್ಚಿ ಮೊಬೈಲ್ ಓನ್ಲಿ ಅಂಗಡಿಗಳನ್ನು ತೆರೆದಿವೆ. ದಿನಸಿಗೂ, ಬಟ್ಟೆಗೂ, ಬೂಟಿಗೂ ಆನ್ಲೈನ್ ಖರೀದಿಯ ಅನುಕೂಲ. ಯಾವುದೋ ಲ್ಯಾಪ್ಟಾಪ್ ಖರೀದಿಯಲ್ಲಿ ಸಿಕ್ಕಿದ್ದ ಉಡುಗೊರೆ ಕೂಪನ್ ಮೂಲಕ ಆನ್ಲೈನ್ನಲ್ಲಿ ತರಿಸಿದ್ದ ಬೂಟುಗಳನ್ನು ಹಾಕಿಕೊಳ್ಳಲು ನನ್ನ ಮಗನಿಗೂ ಆಗಲಿಲ್ಲ; ನನಗೂ ಕಷ್ಟವಾಗಿದೆ. ಇನ್ನು ಸೀರೆ, ಚೂಡಿದಾರ್, ತರಕಾರಿ, ದಿನಸಿಗಳನ್ನು ಯಾವ ನಂಬಿಕೆಯ ಮೇಲೆ ಆನ್ಲೈನ್ನಲ್ಲಿ ಖರೀದಿಸಬಹುದು? ಅವುಗಳ ಗುಣಮಟ್ಟ ಬಿಡಿ, ಅವುಗಳನ್ನು ಖರೀದಿಗೆ ಮುನ್ನ ಮುಟ್ಟಿ / ನೋಡಿ/ ಅನುಭವಿಸಿ ಖರೀದಿಸುವ ಮಾನವ ಗುಣವನ್ನು ನಾವು ಮರೆಯಬಹುದೆ? ಯೋಚಿಸಿ.
ನನ್ನ ಮಿತ್ರರು ಹೇಳಿದಂತೆ ಮತ್ತು ನಾನೂ ಮಾಡುವಂತೆ, ಕೆಲವೊಮ್ಮೆ ನಮಗೆ ಬೇಕಾದ ನಿರ್ದಿಷ್ಟ ಪುಸ್ತಕವನ್ನು ಆನ್ಲೈನ್ ಮೂಲಕ ಖರೀದಿಸಿದರೆ ತಪ್ಪಿಲ್ಲ; ಅದರಲ್ಲೂ ಸಂಚಾರದಟ್ಟಣೆ, ಪಾರ್ಕಿಂಗ್ ಮತ್ತು ಸಮಯಾಭಾವದ ಹಿನ್ನೆಲೆಯಲ್ಲಿ ಹೀಗೆ ಮಾಡಬಹುದು. ಆದರೆ ಪುಸ್ತಕದ ಅಂಗಡಿಗೇ ಹೋಗದೇ ವರ್ಷ ಕಳೆಯಬಹುದೆ? ಪುಸ್ತಕಗಳನ್ನು ಕಾಗದದ ಮೇಲೆ ಹೆಚ್ಚು ಮುದ್ರಿಸಬಾರದು ಎಂಬ ಚಿಂತನೆಯ ನಾನೇ ಮಿತ್ರಮಾಧ್ಯಮ ಟ್ರಸ್ಟ್ ನಿಂದ ಉಚಿತ ಪುಸ್ತಕ ಚಳವಳಿ ಮಾಡಿ ಆನ್ಲೈನ್ ಉಚಿತ ಪುಸ್ತಕಗಳ ಮಳಿಗೆಯನ್ನೂ ತೆರೆದಿದ್ದೇನೆ (www.freebookculture.com). ಹಾಗಂತ ಪುಸ್ತಕದ ಮುದ್ರಿತ ಮತ್ತು ಸಾಫ್ಟ್ ಪ್ರತಿಗಳ ಸ್ತಿತ್ಯಂತರದ ಈ ಹೊತ್ತಿನಲ್ಲಿ ನನ್ನಲ್ಲೂ ಕೊಂಚ ಗೊಂದಲ ಇರುವುದು ನಿಜ. ಪುಸ್ತಕದ ಮಳಿಗೆಯಲ್ಲಿ ಖರೀದಿಗೆ ಮುನ್ನ ಎಲ್ಲಾ ಪುಟಗಳನ್ನೂ ತಿರುವಿ ಹಾಕಬಹುದು. ಆನ್ಲೈನ್ನಲ್ಲಿ ಈ ಅವಕಾಶ ಕಡಿಮೆ. ಯಾವುದೋ ಪುಸ್ತಕ ಹುಡುಕುತ್ತ ಇನ್ನೊಂದು ಪುಸ್ತಕ ಸಿಗುವ ಘಟನೆಗಳು ಆಫ್ಲೈನ್ನಲ್ಲೂ, ಆನ್ಲೈನ್ನಲ್ಲೂ ವಿಭಿನ್ನವಾಗಿರುತ್ತವೆ.
- ಮಾಹಿತಿ ತಂತ್ರಜ್ಞಾನವು ನಮ್ಮ ಸಂಸ್ಕೃತಿಯನ್ನು ಉಳಿಸಬೇಕು ಎಂದರೆ ಏನೇನಾಗಬೇಕು ಎಂಬುದನ್ನು ನೋಡೋಣ.
- ಆನ್ಲೈನ್ನಲ್ಲೂ ನಮ್ಮ ಭಾಷೆ, ಸಂಸ್ಕೃತಿ, ಪರಂಪರೆಗಳು ಮೂಡಬೇಕು. ನಾವು ನಮ್ಮ ಭಾಷೆಯಲ್ಲಿಯೇ ತಂತ್ರಜ್ಞಾನದ ಮಾತನಾಡಬೇಕು.
- ಮಾಹಿತಿ ತಂತ್ರಜ್ಞಾನ ಎಂದರೆ ಕೇವಲ ಗ್ಯಾಜೆಟ್ಗಳಲ್ಲ; ಆಪ್ಗಳಲ್ಲ. ನಾವು ಭೌತಿಕವಾಗಿ ಬದುಕುವುದು ಮುಖ್ಯ. ಆದ್ದರಿಂದ ನಾವು ದಿನನಿತ್ಯದ ಬದುಕಿನಲ್ಲಿ ಮೊಬೈಲ್ ಮತ್ತು ಟ್ಯಾಬ್ಲೆಟ್ಗಳತ್ತಲೇ ಮುಖ ಮಾಡಿ ಬದುಕುವ ಬದಲು ಹೊರಗಣ ಬದುಕನ್ನೂ ಅನುಭವಿಸಬೇಕು.
- ಮಾಹಿತಿ ತಂತ್ರಜ್ಞಾನವು ಸಮುದಾಯದ ಅಗತ್ಯಗಳಿಗೆ ಸ್ಪಂದಿಸಬೇಕು ಮತ್ತು ಮುಕ್ತವಾಗಿರಬೇಕು.
ಹೀಗೆಂದಕೂಡಲೇ ನಾವು ಫೇಸ್ಬುಕ್ ಇದೆಯಲ್ಲ ಎಂದುಬಿಡುತ್ತೇವೆ. ನಾನು ಪ್ರಾಚೀನ ಬ್ಲಾಗ್ಗಳ ಕಾಲದಿಂದಲೂ ಹೇಳುತ್ತಿದ್ದೇನೆ: ನಮ್ಮದೇ ಒಂದು ವೆಬ್ಸೈಟ್ ಇದ್ದರೆ ಮಾತ್ರ ಅದನ್ನು ಸ್ವತಂತ್ರ ವೇದಿಕೆ ಎನ್ನಬಹುದು ಎಂದು. ಬ್ಲಾಗ್ಗಳಾಗಲೀ, ಫೇಸ್ಬುಕ್, ಟ್ವಿಟರ್ಗಳಾಗಲೀ ಎಂದಿಗೂ ಖಾಸಗಿ ವೇದಿಕೆಗಳು. ಅವುಗಳಲ್ಲಿ ನಿಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ನೀವು ಕಲ್ಪಿಸಿಕೊಂಡಿದ್ದೀರಿ ಅಷ್ಟೆ. ಫೇಸ್ಬುಕ್ ಖಾತೆ ತೆರೆಯುವಾಗಲೇ ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ, ನಿಮ್ಮ ಛಾಯಾಚಿತ್ರಗಳ ಹಕ್ಕು ಸ್ವಾಮ್ಯ, ನಿಮ್ಮ ಖಾಸಗಿ ಮಾಹಿತಿಗಳು – ಎಲ್ಲವನ್ನೂ ಮೂಟೆ ಕಟ್ಟಿ ಮಾರ್ಕ್ ಝುಕರ್ಬರ್ಗ್ಗೆ ನೀಡಿದ್ದೀರಿ ಎಂಬುದು ನಿಮಗೆ ಮರೆತೇ ಹೋಗುತ್ತದೆ. ಹೀಗೆ ಕೊಳ್ಳುಬಾಕ ಮಾರುಕಟ್ಟೆಗೆ ಬೇಕಾದ ಎಲ್ಲ ಅಂಶಗಳಿಗೂ ಶರಣೆಂದ ಮೇಲೆ ನೀವು ನಿಮ್ಮ ವಾಲ್ನಲ್ಲಿ ಏನು ಬರೆದುಕೊಂಡರೂ ಝುಕರ್ಬರ್ಗ್ ಕ್ಯಾರೇ ಎನ್ನುವುದಿಲ್ಲ. ಏಕೆಂದರೆ ನಾವು ಖಾತೆ ತೆರೆದ ಕೂಡಲೇ ಅವನ ನಮ್ಮ ಸಂಬಂಧ ಮುಗಿದುಹೋಗಿದೆ. ನಾವೇನಿದ್ದರೂ ನಮ್ಮ ಕ್ಷುಲ್ಲಕ ಜಗಳಗಳಿಗಾಗಿ, ನಮ್ಮ ಮಾತುಗಳನ್ನು ಇಡೀ ಜಗತ್ತು ಆಲಿಸುತ್ತಿದೆ ಎಂಬ ಭ್ರಮೆಗಾಗಿ ಬದುಕಲು ಆರಂಭಿಸುತ್ತೇವೆ. ಲೈಕ್ಗಳಿಂದ, ಕಾಮೆಂಟ್ಗಳಿಂದ, ರೀಚ್ಗಳಿಂದ ಮಾನ ಮರ್ಯಾದೆಗಳನ್ನು ಅಳೆಯತೊಡಗುತ್ತೇವೆ.
ಹೀಗೆ ನಮ್ಮ ಅಭಿವ್ಯಕ್ತಿಯನ್ನು ವ್ಯಕ್ತಪಡಿಸಲು ದಶಕಗಳ ಹಿಂದೆಯೂ ವೇದಿಕೆಗಳಿದ್ದವು. ಫೇಸ್ಬುಕ್ ಬಂದ ಕಾಲದಲ್ಲೇ ಇನ್ನೂ ನೂರಿನ್ನೂ ಇಂಥದ್ದೇ ಸಮಾಜತಾಣಗಳು ಬಂದಿದ್ದವು. ಯಾವ್ಯಾವುದೋ ಕಾರಣಕ್ಕೆ ಫೇಸ್ಬುಕ್ ಪ್ರಸಿದ್ಧವಾಯಿತು. ಹೊರತು ಫೇಸ್ಬುಕ್ ಒಂದೇ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ವೇದಿಕೆ ಎಂದು ತಿಳಿದಿರುವುದು ನಮ್ಮ ಮೂರ್ಖತನ.
(ವಿಷಯಾಂತರ: ಅದರಲ್ಲೂ ಎಡಪಂಥೀಯ, ಕಮ್ಯುನಿಸ್ಟ್ ಫೇಸ್ಬುಕ್ ಖಾತೆದಾರರು ಬಂಡವಾಳಶಾಹಿಗಳನ್ನು ಬಗ್ಗು ಬಡಿಯುವ ಪರಮ ಧ್ಯೇಯವನ್ನು ಉಳ್ಳವರು. ಅವರು ಏಕೆ ಫೇಸ್ಬುಕ್ ಖಾತೆ ಹೊಂದಿ ಜಾಗತಿಕ ಬಂಡವಾಳಶಾಹಿಗಳಿಗೆ ಮಣೆ ಹಾಕಬೇಕು? ಅವರೇಕೆ ಜಿಮೈಲ್ ಬಳಸಬೇಕು? ಕ್ಯಾಪಿಟಲಿಸಂ ವಿರೋಧಿಸಿ ಮಾತನಾಡುವವರು ಫೇಸ್ಬುಕ್ ಬಳಸುವುದು ನಾಚಿಕೆಗೇಡಿನ ಸಂಗತಿ. ಇಂಥ ಎಡಪಂಥೀಯರು ತಮ್ಮದೇ ಆದ ಸಮಾಜತಾಣವನ್ನು ರೂಪಿಸಿಕೊಂಡು ಇದ್ದರೆ ನನ್ನದೇನೂ ತಕರಾರಿಲ್ಲ!)
ಅದೇನೇ ಇರಲಿ, ಫೇಸ್ಬುಕ್ನಂಥ ಖಾಸಗಿ ವೇದಿಕೆಗಳನ್ನು ನಮ್ಮ ಮುಕ್ತ ಅಭಿವ್ಯಕ್ತಿಯ ವೇದಿಕೆಗಳು ಎಂದು ತಿಳಿಯುವ ಅಗತ್ಯವಿಲ್ಲ. ಹೆಚ್ಚೆಂದರೆ ಅವುಗಳು ಸಂವಹನ ಸಾಧನಗಳು. ಅವುಗಳನ್ನು ನಮ್ಮ ಮಿತಿಯಲ್ಲಿ ಸಂವಹನಕ್ಕಾಗಿ ಬಳಸಿದರೆ ಪರವಾಗಿಲ್ಲ. ಯೋಚಿಸಿ.
ನಮ್ಮ ಪತ್ರಿಕೋದ್ಯಮವಂತೂ ಈಗ ಇಂಗ್ಲಿಶ್ಮಯವಾಗಿದೆ. ಮೊದಲು ಟಿವಿ ಚಾನೆಲ್ಗಳಲ್ಲಿ ಇಂಗ್ಲಿಶ್ ಬಂತು. ಈಗ ಕನ್ನಡದ ಮುಖ್ಯವಾಹಿನಿ ಪತ್ರಿಕೆಗಳೇ ಪುಟಶೀರ್ಷಿಕೆಯಿಂದ ಹಿಡಿದು ಎಲ್ಲಾ ಅಂಕಣಗಳು, ಶೀರ್ಷಿಕೆಗಳು, ಸುದ್ದಿಪಠ್ಯಗಳು – ಎಲ್ಲೆಲ್ಲೂ ಇಂಗ್ಲಿಶನ್ನು ಬೇಕಾಬಿಟ್ಟಿಯಾಗಿ, ಇಂಗ್ಲಿಶ್ ಲಿಪಿಯಲ್ಲೇ ಬಳಸುತ್ತಿವೆ. ಇದನ್ನು ಪ್ರಶ್ನೆ ಮಾಡಿದರೆ `ಜನ ಬಯಸಿದ್ದಾರೆ’ ಎಂಬ ಉತ್ತರ ಸಿಗುತ್ತದೆ. ಹಾಗಾದರೆ ನಮ್ಮ ಸಂಸ್ಕೃತಿ, ಭಾಷೆಯನ್ನು ಉಳಿಸುವ ಕೆಲಸ ಯಾರದ್ದು? ಕೇವಲ ಸರ್ಕಾರದ್ದೆ? ಖಾಸಗಿ ಮಾಧ್ಯಮಗಳೇ ಭಾಷೆಯನ್ನು ಮೂಲೆಗುಂಪು ಮಾಡಿದರೆ, ಕನ್ನಡದ ಕಂಪಿನ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾದರೂ ಏಕೆ? ತಂತ್ರಜ್ಞಾನವು ಭಾಷೆಗಳನ್ನು ಬೆಳೆಸುವ ಬದಲು ಅಳಿಸಬೇಕೆ? ಯೋಚಿಸಿ.
ವಾಟ್ಸಪ್ ಎಂಬ ಹೊಸ ರೋಗವನ್ನೇ ತೆಗೆದುಕೊಳ್ಳಿ. ಎಲ್ಲರನ್ನೂ ಯಾರು ಬೇಕಾದರೂ ಸೇರಿಸಿಕೊಳ್ಳಬಹುದು ಎಂಬ ಸ್ವಾತಂತ್ರ್ಯ ಸಿಕ್ಕಿದ್ದೇ ತಡ, ಹತ್ತಾರು ಗುಂಪುಗಳು. ಅವುಗಳಲ್ಲಿ ನೂರಾರು ಸಂದೇಶಗಳು. ನೀವು ಅಂಥ ಒಂದು ಗುಂಪಲ್ಲಿದ್ದರೆ ಒಂದು ದಿನ ತಡ ಮಾಡಿದರೂ ಸಾಕು, ನೂರಾರು ಓದಿರದ ಸಂದೇಶಗಳ ಪಟ್ಟಿ ಸಿಗುತ್ತದೆ. ಒಮ್ಮೆ ಒಂದೇ ದಿನದಲ್ಲಿ ನನಗೆ ಒಂದು ಗುಂಪಿನಲ್ಲಿ ೫೮೭ ಓದಿರದ ಸಂದೇಶಗಳಿದ್ದವು! ಇದರಲ್ಲಿ ಏನೋ ಮುಖ್ಯವಾಗಿರೋದು ಇದೆ ಎಂದು ಭಾವಿಸಿ ಓದಿದರೆ ಎಷ್ಟೆಲ್ಲ ಸಮಯ ಬೇಕು? ಹಾಗಾದರೆ ನಮ್ಮೆಲ್ಲ ಅನಿಸಿಕೆಗಳನ್ನು ಹೀಗೆ ಪಠ್ಯರೂಪದಲ್ಲೇ ಹೇಳುತ್ತ ಕೂರೋಣವೆ? ಸೂರ್ಯಾಸ್ತದ ಚಿತ್ರಗಳನ್ನು ಲೈಕ್ ಮಾಡುತ್ತಲೇ ಇರಬೇಕೋ ಅಥವಾ ನಾವೂ ಒಮ್ಮೆ ನಿಜ ಸೂರ್ಯಾಸ್ತದ ಸುಖವನ್ನು ಅನುಭವಿಸಬೇಕೋ? ಮೊನ್ನೆ ಜೋಗಿಯವರು ಎತ್ತಿದ್ದೂ ಇದೇ ಪ್ರಶ್ನೆ.
ಇತ್ತೀಚೆಗೆ ನನ್ನೊಳಗೆ ಉಂಟಾದ ತುಮುಲವನ್ನೆಲ್ಲ ಒಂದು ಕಡೆ ಜೋಡಿಸಿ ಕೊಡಲು ಯತ್ನಿಸಿದ್ದೇನೆ. ಇದನ್ನೂ ನಾನು ಆನ್ಲೈನ್ನಲ್ಲೇ ಪ್ರಕಟಿಸುವ ಅನಿವಾರ್ಯತೆ ಉಂಟಾಗಿರೋದು ವಿಪರ್ಯಾಸವೇ ಹೌದು. ಆದರೆ ಹತ್ತು ವರ್ಷಗಳಿಂದಲೂ ನನ್ನದೇ ವೆಬ್ಸೈಟ್ ಹೊಂದಿದ್ದೇನೆ ಎಂಬ ಕಿರು ಸಮಾಧಾನ ನನ್ನದು. ಮೊದಲು ಅಲ್ಲೇ ಈ ಲೇಖನ ಪ್ರಕಟಿಸಿ ಸಂವಹನದ ಮೊದಲ ಪಾಠವನ್ನು ಅನುಸರಿಸುತ್ತೇನೆ. ಆಮೇಲೆ ಉಳಿದೆಲ್ಲ ಕಡೆಗೆ ಅದೇ ಹರಿದುಹೋಗುವಂತೆ ವ್ಯವಸ್ಥೆ ಮಾಡಿದ್ದೇನೆ.
ಓದುಗರೆ, ಪತ್ರಿಕೋದ್ಯಮದಲ್ಲಿ ಮೊದಲ ಪೀಳಿಗೆಯ ಮೊದಲ ಬ್ಲಾಗಿಗರಲ್ಲಿ ಒಬ್ಬನಾಗಿ, ನನ್ನ ಓರಗೆಯವರಲ್ಲೇ ಬಹುಮೊದಲೇ ಮೊಬೈಲ್ ಖರೀದಿಸಿದವನಾಗಿ, ಪತ್ರಿಕಾರಂಗದಲ್ಲಿ ಅತಿ ಹೆಚ್ಚು ಕಂಪ್ಯೂಟರ್ ಗೀಳಿನವನು ಎಂಬ ಹೊಗಳಿಕೆ / ತೆಗಳಿಕೆಗೆ ಪಾತ್ರನಾದವನಾಗಿ, ಇಂಟರ್ನೆಟ್ನಿಂದಲೇ ನನ್ನ ವಿಷಯಜ್ಞಾನವನ್ನು ಹೆಚ್ಚಿಕೊಂಡವನಾಗಿ, ಡಿಜಿಟಲ್ ಜರ್ನಲಿಸಂ, ಡಾಟಾ ಜರ್ನಲಿಸಂ ಪಾಠಗಳನ್ನು ಓದಿದವನಾಗಿ, ಗೂಗಲ್ ಸರ್ಚ್ನಲ್ಲಿ ನುರಿತವನು ಎಂಬ ಹಣೆಪಟ್ಟಿ ಪಡೆದವನಾಗಿ – ಇಷ್ಟೆಲ್ಲ ಆದರೂ ನನಗೀಗ ಮಣ್ಣಿನ ವಾಸನೆಯ ಭೌತಿಕ ಬದುಕೇ ಹೆಚ್ಚು ಹತ್ತಿರ ಎಂದು ಅನ್ನಿಸಲಿಕ್ಕೆ ವಯಸ್ಸೇ ಕಾರಣವೋ, ಖರೀದಿ ಸಾಮರ್ಥ್ಯ ಇಲ್ಲದಿರುವುದೇ ಕಾರಣವೋ, ಇನ್ನೇನು ಕಾರಣವೋ ಗೊತ್ತಿಲ್ಲ.ಇಷ್ಟಾಗಿಯೂ ಹೊಸ ಅವಕಾಶಗಳಿಗೆ ತೆರೆದುಕೊಳ್ಳಲು ಕಾರಣವಾದ ಇಂಟರ್ನೆಟ್, ಸ್ಮಾರ್ಟ್ಫೋನ್ಗಳನ್ನು ವಂದಿಸುತ್ತಲೇ ನಾವು ನಮ್ಮ ಬದುಕಿನ ರಿ-ಇಂಜಿನಿಯರಿಂಗ್ ಮಾಡಿಕೊಳ್ಳಬೇಕೆಂಬ ತುಡಿತವನ್ನೂ ವ್ಯಕ್ತಪಡಿಸುತ್ತಿದ್ದೇನೆ! ಇದು ಒಂದು ಬಗೆಯ ಡೈಕಾಟಮಿ / ದ್ವಂದ್ವ ಇರಬಹುದು. ಆದರೆ ಈ ಗೊಂದಲವನ್ನಾದರೂ ಹಂಚಿಕೊಳ್ಳೋಣ ಎಂದು ಇಷ್ಟೆಲ್ಲ ಬರೆದೆ.
ಯಾಕೋ ನಾವು ಗ್ಯಾಜೆಟ್- ಆಪ್ಗಳ, ಫೇಸ್ಬುಕ್ ತಾಣಗಳ ಗೋಜಲಿನಲ್ಲಿ ಬೇಕಾದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಿಕ್ಕಿಕೊಂಡ ಹಾಗೆ ಅನ್ನಿಸುತ್ತಿದೆ. ಯೋಚಿಸಿ.
ಈ ಸಿಕ್ಕಿನಿಂದ ತಪ್ಪಿಸಿಕೊಳ್ಳಲು ಏನು ಮಾಡಬಹುದು?
- ದಿನಾಲೂ ನಮ್ಮ ವೃತ್ತಿ ಸಂಬಂಧಿತ ಆನ್ಲೈನ್ ಕೆಲಸಗಳನ್ನು ಮಾಡಲು ಮಾಹಿತಿ ತಂತ್ರಜ್ಞಾನ ಬಳಸೋಣ.
- ಮೊಬೈಲನ್ನು ಮಾಹಿತಿ ಸಂವಹನಕ್ಕಾಗಿ ಬಳಸೋಣ.
- ಸ್ಥಳೀಯ ವ್ಯಕ್ತಿಗಳ ಜೊತೆಗೆ ಆನ್ಲೈನ್ ಚಾಟ್ ಬದಲಿಗೆ ಮಾತನಾಡೋಣ (ಗೂಗಲ್/ವಾಟ್ಸಪ್/ಫೇಸ್ಬುಕ್ ಇತ್ಯಾದಿ)
- ಬೆಂಗಳೂರಿನ ಗುಂಡಿಗಳನ್ನು ಮರೆಯೋಣ. ಗ್ರಾಮೀಣ ಬದುಕನ್ನು ಮರೆಯದಿರೋಣ.
- ಇಂಗಾಲದ ಹೆಜ್ಜೆಗುರುತುಗಳನ್ನು ಆದಷ್ಟೂ ಕಡಿಮೆ ಮಾಡೋಣ.
ವಂದನೆಗಳು.
ನನ್ನ ಚಿಂತನಾಲಹರಿಯಲ್ಲಿ ಇದೇ ರೀತಿ ಬರೆದ ಇನ್ನೆರಡು ಸುದೀರ್ಘ ಲೇಖನಗಳು ಇಲ್ಲಿವೆ. ಆಸಕ್ತಿ ಇದ್ದರೆ ಓದಿ
-
- ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ (ಈಗಲೂ ನಾನು ಬ್ಲಾಗಿಂಗ್ನ್ನು ಬೆಂಬಲಿಸುವವನೇ)
- ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?