ಒಂದು ಬದಿ ಕಡಲು – ಕನ್ನಡದಲ್ಲಿ ಇತ್ತೀಚೆಗೆ ಬಂದ ಶಿಸ್ತಿನ ಬರವಣಿಗೆಯ ಕಾದಂಬರಿಯ ನಂತರ ಶ್ರೀ ವಿವೇಕ ಶಾನಭಾಗರು `ಊರು ಭಂಗ’ದ ಮೂಲಕ ತೆಂಕಣಕೇರಿಯ ಎಫೆಕ್ಟ್‌ನ್ನು ಹಬ್ಬಿಸುವ ಮೂಲಕ ಹಾಜರಾಗಿದ್ದಾರೆ. ಕಾದಂಬರಿಯ ರಚನಾ ತಂತ್ರದಲ್ಲೂ ಪ್ರಯೋಗ ಮಾಡಿದ್ದಾರೆ.
ಕ್ರಿಸ್ಟೋಫರ್ ನೋಲಾನ್‌ನ `ದ ಇನ್‌ಸೆಪ್‌ಶನ್’ ನೋಡಿದವರಿಗೆ ಒಂದೇ ಕಾಲದಲ್ಲಿ ಹಲವು ಕಾಲಗಳು ವಿವಿಧ ವೇಗದಲ್ಲಿ ಸರಿಯುವ ಕಥೆ ಗೊತ್ತಿದೆ. ಕನಸು ಮನಸುಗಳ ಒಳಗೆ ಕಳ್ಳತನ ಮಾಡುವ ವ್ಯಕ್ತಿಗಳ ಸಂಕೀರ್ಣ ಭಾವುಕ, ವೈಜ್ಞಾನಿಕ ಕಥೆ ಹೆಣೆದ ನೋಲಾನ್ ಪ್ರೇಕ್ಷಕರ ತಲೆಯನ್ನು ಸಿಕ್ಕಾಪಟ್ಟೆ ತಿನ್ನುತ್ತಾರೆ. ಯಾರು ಯಾವಾಗ ಏನು ಮಾಡಿದರು ಎಂದು ನೀವು ಸರಳವಾಗಿ ವಿವರಿಸಲು ಬರುವುದೇ ಇಲ್ಲ! ಅದೇ ಬಗೆಯ ಇನ್ನೊಂದು ತುದಿಗೆ ಹೋದ ನೋಲಾನ್ ಇತ್ತೀಚೆಗೆ ಮಾಡಿದ್ದು `ಇಂಟರ್‌ಸ್ಟೆಲ್ಲಾರ್’ ಸಿನೆಮಾ. ಇಲ್ಲೂ ಕಾಲ – ಅವಕಾಶಗಳ ವಿಪರೀತ ಸೂತ್ರಗಳ ವಿಜುಯಲೈಸೇಶನ್ ಇದೆ. ನಾನು ನೋಲಾನ್ ಬರೆದ ದೃಶ್ಯಗಳನ್ನೆಲ್ಲ ಕಲ್ಪಿಸಿಕೊಳ್ಳುತ್ತ, ನನ್ನೊಳಗೇ ಮಥಿಸುತ್ತಿರಬೇಕಾದರೆ `ಊರು ಭಂಗ’ನನ್ನ ಏಕಾಗ್ರತೆಗೆ ಭಂಗ ತಂದಿತು!
ನೋಲಾನ್ ಮಾದರಿಯಲ್ಲೇ ಕಾಲಚಕ್ರದ ವಿವಿಧ ಮಗ್ಗುಲುಗಳನ್ನು ವರ್ತಮಾನ ಮತ್ತು ಗತಕಾಲದ ಘಟನಾ ಸರಣಿಗಳೊಂದಿಗೆ ಜೋಡಿಸಿದ ವಿವೇಕ್ ಇಲ್ಲಿ ಅಚ್ಚಗನ್ನಡದ ಒಂದು ಸ್ಪೇಸ್ ಟೈಮ್ ಕಾದಂಬರಿ ಕೊಟ್ಟಿದ್ದಾರೆ.
ಕಾದಂಬರಿಯು ವರ್ತಮಾನದಲ್ಲಿ ಆರಂಭವಾಗಿ ಕೆಲವೇ ದಿನಗಳಲ್ಲಿ, ವರ್ತಮಾನದಲ್ಲೇ ಮುಗಿಯುತ್ತದೆ. ಆದರೆ ಅದರ ಹೊಟ್ಟೆಯೊಳಗೆ ಹುಟ್ಟಿ ವ್ಯಾಪಿಸುವ ಕಥೆಗಳು ಎಷ್ಟೋ ವರ್ಷಗಳ ಕಾಲ ನಡೆಯುತ್ತವೆ. ಅಲ್ಲೂ ಕಾಲಾನುಕ್ರಮ ಎಂದಿನಂತಿಲ್ಲ. ಮತ್ತೊಂದು ಪೀಠಿಕೆ, ಆಮೇಲೆ ಫ್ಲಾಶ್ ಬ್ಯಾಕ್ – ಹೀಗೆ ಕಾದಂಬರಿ ಓದುಗರನ್ನು ಹಿಗ್ಗಾಮುಗ್ಗಾ ಜಗ್ಗುತ್ತದೆ. ನೀವು ಮತ್ತೆ ವರ್ತಮಾನಕ್ಕೆ ಬಂದಿರಿ ಎನ್ನುವಾಗ ಉಳಿದೇ ಹೋದ ಭೂತಕಾಲದ ಕಥೆಯು ಇನ್ನೊಂದು ಆಯಾಮದಲ್ಲಿ ಬೆಳೆಯುತ್ತದೆ. ಇದನ್ನು ಕಥಾನಾಯಕ ಯಾರಿಗೆ ಹೇಳಿದರು ಎಂಬುದೂ ನಿಮ್ಮ ಊಹೆಗೇ ಬಿಟ್ಟಿದ್ದು! ಅಲ್ಲೂ ಒಂದು ಸಂಕೀರ್ಣ ದೃಶ್ಯ ಸರಪಳಿ ಇದೆ. ಅದಾದ ಮೇಲೆ ಮತ್ತೆ ಕಥಾ ನಾಯಕನಿಂದಲೇ ಕಥೆಗೆ ಒಂದು `ಅಂತ್ಯ’ ದೊರಕುತ್ತದೆ.
ಇದು `ಊರು ಭಂಗ’ಕಾದಂಬರಿಯ ನಿರೂಪಣಾ ತಂತ್ರದ ಬಗ್ಗೆ ನಾನು ಭಾವಿಸಿದ ವಿಚಾರ.
ಕಾದಂಬರಿಯನ್ನೇ ಇಡಿಯಾಗಿ ತೆಗೆದುಕೊಂಡರೆ, ಮತ್ತೆ ವಿವೇಕ ಶಾನಭಾಗರ ಬರೆಯುವ ಶಿಸ್ತು ಮತ್ತು ಉತ್ಪ್ರೇಕ್ಷೆಯ ಅಂಚಿಗೆ ಹೋಗದಂಥ ಎಚ್ಚರಿಕೆ, ಪದಗಳ ಬಳಕೆಯಲ್ಲಿ ಸಂಯಮ, – ಎಲ್ಲವೂ ಎಂದಿನಂತೆ ನಮ್ಮ ಮೆಚ್ಚುಗೆಗೆ ಪಾತ್ರವಾಗುತ್ತವೆ. ಸಮಕಾಲೀನ ಕಥೆಯಾಗಿ ಶುಗರ್‌ಡ್ಯಾಡಿ ಸಿಂಡ್ರೋಮ್ ಸಂಬಂಧಗಳು ಸಾಕಷ್ಟು ನಿರ್ಭಿಡೆಯಿಂದಲೇ ಕಾಣಿಸಿಕೊಳ್ಳುತ್ತವೆ. ಕಿಮಾನಿ ವಕೀಲರ ಕಥೆಯು ಭೂತಕಾಲದ ಮುಖ್ಯ ಪ್ರವಾಹವಾಗಿ ನಮ್ಮನ್ನು ಕಾಡುತ್ತದೆ.
ಇಷ್ಟಾಗಿಯೂ ಕಾದಂಬರಿಯು `ಒಂದು ಬದಿ ಕಡಲು’ಗಿಂತ ವಿಭಿನ್ನವಾಗಿ ನಿಲ್ಲುವುದು ಈ ಕಾಲಗಣನೆಯ ಅಂಶದಿಂದಲೇ. ಜೊತೆಗೆ ಎರಡು ವಿಭಿನ್ನ ಲೊಕೇಶನ್‌ಗಳ, ವಿಭಿನ್ನ ವೇಗದ ಮತ್ತು ವಿಭಿನ್ನ ಸಂಬಂಧಗಳ ಕಥೆಗಳನ್ನು ಒಂದಾದ ಮೇಲೆ ಇನ್ನೊಂದರಂತೆ ಹೆಣೆದಿರುವುದರಿಂದ ಸಾಮಾನ್ಯ ಓದುಗರು ಕಾದಂಬರಿಯ ಏಕಸೂತ್ರತೆಯ ಬಗ್ಗೆ ತಲೆ ಕೆಡಿಸಿಕೊಳ್ಳುವಂತೆ ಆಗಿದೆ! ಹೀಗೆ ಕಾದಂಬರಿಯನ್ನು ವಿಭಿನ್ನ ಕಾಲಾವಧಿಗಳಲ್ಲಿ ಹಿಗ್ಗಿಸುವ ಮತ್ತು ಕುಗ್ಗಿಸುವ ಉದ್ದೇಶವನ್ನೇ ಕಾದಂಬರಿಕಾರರು ಇಟ್ಟುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಓದಿದಾಗ `ಊರು ಭಂಗ’ಒಂದು ಒಳ್ಳೆಯ ಅನುಭವವನ್ನು ಕೊಡುತ್ತದೆ.
ಈ ಕಾದಂಬರಿಯಲ್ಲಿ ಇರುವ ಕೆಲವೇ ಕೆಲವು ಉಪಮೆಗಳನ್ನು ಕಾರ್ಯಕ್ರಮದಲ್ಲೇ ಶ್ರೀ ಜಯಂತ ಕಾಯ್ಕಿಣಿಯವರು ಉಲ್ಲೇಖಿಸಿದ್ದಾರೆ. ಅವುಗಳ ಹೊರತಾಗಿಯೂ ಕಾದಂಬರಿಯು ನಮ್ಮನ್ನು ಕಾಡುವುದು ವಿವೇಕ್ ಇಲ್ಲಿ ಹೇಳದೇ ಉಳಿಸಿದ ಹಲವು ಮುಖ್ಯ ವಿಚಾರಗಳಿಂದ! ಹೇಳಿದಂತೆ ಮಾಡಿ, ಹೇಳದೆಯೂ ಉಳಿದು, ನಿಮಗೆ ಓದಿನ ಖುಷಿಯನ್ನೂ ಕೊಡಬಲ್ಲ ಅಪರೂಪದ ನಿರೂಪಣೆಯನ್ನು ವಿವೇಕ್ ಸಾಧಿಸಿದ್ದಾರೆ. ಉದಾಹರಣೆಗೆ ರೇವತಿ, ಸನ್ಯಾಲ್, ಸಮೀರ್ ಸಾಹು – ಈ ಪಾತ್ರಗಳು ಏನೋ ಹೇಳುತ್ತ, ಮತ್ತೇನನ್ನೋ ಅಡಗಿಸುತ್ತ ಹೋಗುತ್ತವೆ ಎಂದು ಭಾಸವಾಗುತ್ತದೆ.
ವಿವೇಕ್ `ಒಂದು ಬದಿ ಕಡಲು’ವಿನಲ್ಲಿ ಘಟನೆಗಳು ಶಾಂತ ಸಮುದ್ರದಲ್ಲಿ ನಡೆದಂತೆ ಅನ್ನಿಸಿದರೆ, ಇಲ್ಲಿರುವ ಘಟನೆಗಳು ಹುಚ್ಚುಹೊಳೆಯಂತೆ ಏರಿಳಿತಗಳನ್ನು, ತಿರುವುಗಳನ್ನು ಕಾಣುತ್ತ ಹೊರಳುತ್ತವೆ. `ಕಡಲು’ ಓದಿದ ನಂತರ ಉಳಿಯುವ ಕ್ಷೇಮಭಾವ ಇಲ್ಲಿಲ್ಲ.
ಎರಡೂ ಕಾದಂಬರಿಗಳು ವಿಭಿನ್ನವಾಗಿ ಓದಿಸಿಕೊಳ್ಳುತ್ತವೆ; ಆದ್ದರಿಂದಲೇ ಎರಡನ್ನೂ ಹೋಲಿಸಿ ಬರೆದೆ.
ಇಲ್ಲಿ ಪಾತ್ರಗಳ ಮೂಲಕವೇ ಅವರ ಗುಣಾವಗುಣಗಳು ಬಹಿರಂಗವಾಗುವುದು ಈ ಕಾದಂಬರಿಯ ಇನ್ನೊಂದು ಮುಖ್ಯ ಅಂಶ. ಸಾಮಾನ್ಯವಾಗಿ ಪಾತ್ರಗಳು ಒಳ್ಳೆಯವು, ಕೆಟ್ಟವು ಎಂದೆಲ್ಲ ಗಮನಿಸುವಂಥ ಸ್ಥಿತಿಗೆ ಇಂದಿನ ಕಾದಂಬರಿ ಪ್ರಪಂಚ ಬಂದಿದೆ. ಆದರೆ ವ್ಯಕ್ತಿಗಳನ್ನು ಅವರವರ ಚಹರೆಗಳೊಂದಿಗೆ ನೇರವಾಗಿ ಕಾದಂಬರಿಯ ಕ್ಯಾನ್‌ವಾಸಿನಲ್ಲಿ ತಂದಿಡುವ ಕೆಲಸ ಕಷ್ಟದ್ದೇ. ಇಲ್ಲಿ ವಿವೇಕ್ ಗೆದ್ದಿದ್ದಾರೆ. ಕಥಾ ನಿರೂಪಕನ ಪಾತ್ರದ ಆತ್ಮ ವಿಶ್ಲೇಷಣೆ ಹಲವೆಡೆ ಇರುವುದು ನಿಜ. ಆದರೆ ಅಲ್ಲೆಲ್ಲೂ ಆತ ತನ್ನ ಪಾತ್ರವನ್ನು ಸಮರ್ಥಿಸಿಕೊಳ್ಳುವ ಪ್ರತಿಪಾದನೆಯನ್ನು ಮಾಡಿಲ್ಲ. ಕಾರ್ಯಕಾರಣಕ್ಕೆ ಸಂಬಂಧ ಇರದ ಹಲವು ನಡೆಗಳನ್ನು ಅವನಿಂದ ನಾವು ಕಾಣುತ್ತೇವೆ. ಕಾದಂಬರಿಯ ಒಳಸಂದೇಶದ ಆಳಕ್ಕಿಳಿಯದೇ ಹೊರನೋಟದಿಂದ ನೋಡಿದರೆ, ಒಮ್ಮೆ ವಿಪರೀತ ಕಿರಿಕಿರಿ ಎನಿಸಿದ ಹುಡುಗಿಯನ್ನು ಮತ್ತೆ ಕಾಣಲು ಹೋದ ಈ ನಾಯಕನ ಕಥೆಯು ‘ಶುಗರ್‌ಡಾಡಿ’ ಲವ್ ಆಸಕ್ತರಿಗೆ ದೊಡ್ಡ ಪಾಠವೇ. ಕೊನೆಯ ಪುಟಗಳಲ್ಲಿ ಕಾಣುವ ಚಂದು ಪಾತ್ರವಂತೂ ಫಾಸ್ಟ್ ಫಾರ್ವರ್ಡ್ ಮಾದರಿಯಲ್ಲಿ ಇಡೀ ಕಾದಂಬರಿಗೆ ಮೂರನೆಯ ಕಾಲಪದರವನ್ನು ಒದಗಿಸಿದೆ.
ವ್ಯಕ್ತಿ, ಸಮುದಾಯ – ಎಲ್ಲವೂ ಭಂಗವಾಗುತ್ತ ಹೋಗುವ ಪ್ರಕ್ರಿಯೆಯನ್ನು ಏರುಪೇರಾದ/ ಅದಲು ಬದಲಾದ ಕಾಲಪದರಗಳಲ್ಲಿ ಕೊಡುತ್ತ, ಅಲ್ಲಲ್ಲಿ ಮೊನಚು ಹಾಸ್ಯವನ್ನು ಗಂಭೀರವಾಗಿ ತುಳುಕಿಸುತ್ತ, ಭಾಷೆಯ ಮೇಲೆ ಹಿಡಿತ ಸಾಧಿಸುತ್ತಲೇ ಪಾತ್ರಗಳ ಚಿತ್ರಣವನ್ನು ನಾಜೂಕಾಗಿ ಮಾಡುತ್ತ ಹೋಗುವ ವಿವೇಕ ಶಾನಭಾಗರು ಕನ್ನಡಕ್ಕೆ ಒಳ್ಳೆಯ ಕಾದಂಬರಿಯನ್ನು ಕೊಟ್ಟಿದ್ದಾರೆ, ಅಭಿನಂದನೆಗಳು. ಜಾತ್ರೆಗೆ ಮೂರು ಮಾರು ನೇಯ್ದಂತೆ ಮಾಡದೆ, ಕನ್ನಡದ ತೇರಿಗೆ ಒಪ್ಪವಾಗಿ ಕೂಡುವಂತೆ ಶ್ರದ್ಧೆಯಿಂದ ಕಟ್ಟಿಕೊಟ್ಟ ಹೂಮಾಲೆ ಇದು. ದುಂಡುಮಲ್ಲಿಗೆ ಮೊಗ್ಗಿನ ಮಾಲೆಯನ್ನು ಕಟ್ಟಿದಂತೆ ಘಟನೆಗಳ ಜೋಡಣೆಯಿದೆ. ಕಾದಂಬರಿ ಬರೆಯಬೇಕು ಎನ್ನುವವರಿಗೆ ಒಳ್ಳೆಯ `ಚಾಲೆಂಜಿಂಗ್’ ಮತ್ತು ಶಿಸ್ತಿನ ಮಾದರಿ ಎನ್ನಬಹುದು.