೧೯೬೨ರ ಭಾರತ – ಚೀನಾ ಸಮರ ಸನ್ನಿವೇಶ ರಿಪೀಟ್ ಆಗುತ್ತಿದೆಯೆ? ಅರುಣಾಚಲದ ಜೊತೆಗೆ ಮಣಿಪುರದ ಗಡಿಯಲ್ಲೂ ೧೫ ಸಾವಿರ ಸೈನಿಕರ ನಿಯುಕ್ತಿ. ಅರುಣಾಚಲದಲ್ಲಿ ೩೦ ಸಾವಿರ ಸೈನಿಕರ ಜಮಾವಣೆ. ಲಡಾಖ್ನಲ್ಲಿ ಎರಡು ಸಲ ಗಡಿ ಉಲ್ಲಂಘನೆ ಮಾಡಿದ ಚೀನಾ ತಂದಿಟ್ಟ ತಲೆನೋವಿಗೆ ಭಾರತದ ರಕ್ಷಣಾ ಮುಖ್ಯಸ್ಥರಲ್ಲಿ ಗಡಿಬಿಡಿ; ಆತಂಕ. ಹೊರಗೇನೋ ಸಮಾಧಾನದ ಮುಖ; ಒಳಗೆ ಕುದಿಯುತ್ತಿದೆ ಉದ್ವೇಗ.
ಈ ವಿವರಗಳನ್ನು ನೀವು ಪಾಕಿಸ್ತಾನದ ‘ಡೈಲಿ ಟೈಮ್ಸ್’ನಲ್ಲಿ ಒದಬಹುದು. ಗಡಿಗುಂಟ ಚೀನಾ ನಿರ್ಮಿಸಿರುವ ಹೆದ್ದಾರಿ, ೫೦ ಸಾವಿರ ಸೈನಿಕರೊಂದಿಗೆ ಟಿಬೆಟ್ – ಭಾರತ ಗಡಿಯುದ್ದಕ್ಕೂ ನಡೆಸಿರುವ ತುಂಟಾಟಗಳು ಏನು ಹೇಳುತ್ತಿವೆ? ಭಾರತವು ಮತ್ತೆರಡು ಡಿವಿಜನ್ಗಳನ್ನು ಕಟ್ಟಲು ರಜೆಯಲ್ಲಿದ್ದ ಸೇನಾ ಸಿಬ್ಬಂದಿಗಳಿಗೆ ತುರ್ತು ಕರೆ ಕಳಿಸಿದೆಯಂತೆ. ೧೯೬೨ರ ಪ್ರಮಾಣದಲ್ಲಿ ಅಲ್ಲದಿದ್ದರೂ, ಅಂದಿನಂತೆಯೇ ಚೀನಾ ಏನೋ ಭಾನಗಡಿ ನಡೆಸಲು ಮುಂದಾಗಿದೆ ಎಂದು ರಕ್ಷಣಾ ತಜ್ಞರು ಎಚ್ಚರಿಸಿದ್ದಾರಂತೆ. ಅಕ್ಟೋಬರಿನಲ್ಲಿ ಇವೆಲ್ಲವೂ ನಿರ್ಣಾಯಕ ಘಟ್ಟಕ್ಕೆ ಬಂದು.॒.. ಚಕಮಕಿ ಶುರುವಾಗಿ….
ಹೌದೆ? ಮತ್ತೆ ಚೀನಾ – ಭಾರತ ಯುದ್ಧ ನಡೆಯುವುದೆ? ಪಾಕಿಸ್ತಾನ ಏನು ಮಾಡುತ್ತೆ? ಅಮೆರಿಕಾ ಸುಮ್ಮನಿರುತ್ತ? ರಶ್ಯಾ ನೆರವಿಗೆ ಬರುತ್ತ? ಚೀನಾಗೆ ಅಷ್ಟೆಲ್ಲ ಶಕ್ತಿ ಇದೆಯೆ? ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಅನುಮಾನಗಳು ಹಬ್ಬುತ್ತಿವೆ.
ಮೊನ್ನೆ ಕೊಲ್ಕೊತಾದಲ್ಲಿ ಯು ಎ ಇ ದೇಶದ ವಿಮಾನವೊಂದು ಇಂಧನಕ್ಕಾಗಿ ಇಳಿದಾಗ, ಅದರಲ್ಲಿ ಚೀನಾಗೆ ಶಸ್ತ್ರಾಸ್ತ್ರಗಳನ್ನು ಒಯ್ಯುತ್ತಿದ್ದುದು ತಿಳಿದುಬಂತು. ಭಾರತವು ಗೂಢಚರ್ಯೆ ನಡೆಸುತ್ತಿದೆ ಎಂದು ಚೀನಾದ ರಕ್ಷಣಾ ತಜ್ಞ ಕಟುವಾಗಿ ಟೀಕಿಸಿದ್ದಾನೆ. ಚೀನಾದ ಕಮ್ಯನಿಸ್ಟ್ ಮುಖವಾಣಿ ದಿ ಪೀಪಲ್ಸ್ ಡೈಲಿಯಲ್ಲೂ ಇಂಥದ್ದೇ ಟೀಕೆ ಪ್ರಕಟವಾಗಿದೆ.
ಇತ್ತ ಉತ್ತರಾಖಂಡದಲ್ಲೂ ಚೀನಾ ಸೇನೆಯು ಗಡಿ ಉಲ್ಲಂಘಿಸಿದೆ ಎಂದು ಮುಖ್ಯಮಂತ್ರಿ ರಮೇಶ್ ಪೊಖ್ರಿಯಾಲ್ ಹೇಳಿದ್ದಾರೆ. ಗ್ಯಾ ಪರ್ವತದೊಳಕ್ಕೆ ಒಂದೂವರೆ ಕಿಮೀ ನುಗ್ಗಿದ ಚೀನೀಯರು ಅಲ್ಲೂ ಕಲ್ಲುಗಳ ಮೇಲೆ ‘ಚೀನಾ’ ಎಂದು ಕೆತ್ತಿದ್ದಾರೆ.
ಈ ವರ್ಷಗಳಲ್ಲಿ ಚೀನಾ ಸೇನಾಬಲವನ್ನು ಹೆಚ್ಚಿಸಿಕೊಂಡಿದೆ. ಆರ್ಥಿಕವಾಗಿ ಸುದೃಢವಾಗಿದೆ. ಈಗ ಅಮೆರಿಕಾದ ಏಶ್ಯಾ ನೀತಿಯಲ್ಲಿ ಚೀನಾಕ್ಕೇ ಮೊದಲ ಮಣೆ. ಭಾರತೀಯ ನೌಕಾಪಡೆಯ ನಿವೃತ್ತ ಮುಖ್ಯಸ್ಥ ಅಡ್ಮಿರಲ್ ಸುರೇಶ್ ಮೆಹ್ತಾ ಹೇಳುತ್ತಾರೆ: ಚೀನಾ ಭಾರತದ ನಡುವಣ ಕಂದರ ದಿನದಿನವೂ ಹೆಚ್ಚುತ್ತಲೇ ಇದೆ.
ರಕ್ಷಣಾ ಸನ್ನಿವೇಶದ ಬಗ್ಗೆಯೇ ಹೇಳುವುದಾದರೆ, ಎತ್ತರದ ಹಿಮಾಲಯ ಶ್ರೇಣಿಯಲ್ಲಿ ಚೀನೀಯರು ಕೂತಿದ್ದಾರೆ. ಅವರನ್ನೇನಾದರೂ ಬಗ್ಗು ಬಡಿಯಬೇಕೆಂದರೆ ಭಾರತೀಯ ಸೈನಿಕರು ಕತ್ತೆತ್ತಿ ನೋಡುತ್ತ ಮೇಲೆ ಹತ್ತಬೇಕು. ೪೦೫೭ ಕಿಮೀ ಗಡಿಯುದ್ದಕ್ಕೂ ಸರಿಸುಮಾರು ಇದೇ ಸ್ಥಿತಿ. ಅಂದಮೇಲೆ ಯುದ್ಧ ನಡೆದಿದ್ದೇ ಆದರೆ ಏನಾದೀತೆಂದು ಊಹಿಸುವುದು ಕಷ್ಟವೆ?
ಚೀನಾಗೆ ಯಾಕೆ ಈ ಭೂಕಬಳಿಕೆ ಹಸಿವು? ಅದರ ಹೊಟ್ಟೆ ಇನ್ನೂ ತುಂಬಿಲ್ಲವೆ? ಸ್ವಿಜರ್ಲ್ಯಾಂಡ್ ಗಾತ್ರದ ಆಕ್ಸಾಯ್ ಚಿನ್ ಪ್ರದೇಶವನ್ನು ಕಬಳಿಸಿಯಾಗಿದೆ. ಐವತ್ತರ ದಶಕದಲ್ಲೇ ಟಿಬೆಟನ್ನೇ ನುಂಗಿ ನೀರು ಕುಡಿದ ಚೀನಾಗೆ ಆಕ್ಸಾಯ್ ಚಿನ್ ತಿಂದಮೇಲೆ ತೇಗು ಬರಬೇಕಿತ್ತಲ್ಲವೆ?
ಹಾಗಾಗುವುದಿಲ್ಲ. ಮಾವೋ ಯಾವಾಗಲೋ ಹೇಳಿದ್ದಾನೆ: ನೇಪಾಳ, ಲಡಾಖ್, ಭೂತಾನ್, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳು ಚೀನಾದ ಐದು ಬೆರಳುಗಳು. ಇದಾವುದೂ ಇನ್ನೂ ಚೀನಾ ವಶವಾಗಿಲ್ಲ. ನೇಪಾಳದಲ್ಲಿ ಮಾವೋವಾದಿಗಳ ಪ್ರಭಾವದ ಬಗ್ಗೆ ಸೆಪ್ಟೆಂಬರ್ ೧೩ರ ಸಾಪ್ತಾಹಿಕದಲ್ಲಿ ಬಂದ ಲೇಖನ ನೋಡಿ. ಭೂತಾನ್ ಹೇಳಿಕೇಳಿ ಭಾರತದ ನೆರಳಿನಲ್ಲೇ ಇರುವ ಹೊಸ ಪ್ರಜಾತಂತ್ರ. ಸಿಕ್ಕಿಂ, ಅರುಣಾಚಲ ಮತ್ತು ಲಢಾಖ್ – ಮೂರೂ ಭಾರತದ ಅವಿಭಾಜ್ಯ ಅಂಗವಾಗಿವೆ.
೧೯೮೧ರಿಂದಲೂ ಚೀನಾ – ಭಾರತದ ಗಡಿ ವಿವಾದ ಚರ್ಚೆ ಈಗಲೂ ನಡೆಯುತ್ತಲೇ ಇದೆ. ಈ ಮಾತುಕತೆ ಆಧುನಿಕ ದೇಶಗಳ ಇತಿಹಾಸದಲ್ಲೇ ಒಂದು ದಾಖಲೆ ನಿರ್ಮಿಸಿದೆ: ವಿಪರೀತ ವಿಳಂಬಕ್ಕಾಗಿ! ಈ ಚರ್ಚೆಯ ಮೇಲೆ ಪೂರ್ಣ ಹಿಡಿತ ಸಾಧಿಸುವುದೇ ಚೀನಾದ ಕುತಂತ್ರ ಎಂದು ರಕ್ಷಣಾ ತಜ್ಞರು ಹೇಳುತ್ತಾರೆ. ಚೀನಾಜ ಬೇಡಿಕೆ ಸರಳ: ಅರುಣಾಚಲ ಪ್ರದೇಶದ ಕೇವಲ ಶೇ. ೨೮ರಷ್ಟು ಪ್ರದೇಶವನ್ನು ಕೊಟ್ಟರೆ ಸಾಕು. ಇದು ಚೀನಾ ಇನ್ನೂ ನುಂಗಬೇಕಿರುವ ಟೈವಾನ್ ದೇಶದ ಗಾತ್ರಕ್ಕೆ ಸಮ!
ಕಳೆದ ಜೂನ್ನಲ್ಲಿ ಪೀಪಲ್ಸ್ ಡೈಲಿಯಲ್ಲಿ ಚೀನಾದ ದೃಢನಿಲುವು ಪ್ರಕಟವಾಗಿದೆ: ‘ಭಾರತದ ಜೊತೆಗಿನ ಗಡಿ ವಿವಾದದಲ್ಲಿ ಚೀನಾ ಯಾವುದೇ ರಾಜಿಯನ್ನೂ ಮಾಡಿಕೊಳ್ಳುವುದಿಲ್ಲ’.
೧೯೪೯ರಲ್ಲಿ ಶಿನ್ಜಿಯಾಂಗ್ ವಶ, ೧೯೫೦ರಲ್ಲಿ ಟಿಬೆಟ್ ಆಕ್ರಮಣ, ಅದೇ ವರ್ಷ ದಕ್ಷಿಣ ಕೊರಿಯಾದ ಮೇಲೆ ದಾಳಿ, ೧೯೬೨ರಲ್ಲಿ ಭಾರತದ ಮೇಲೆ ಏಕಾಏಕಿ ಆಕ್ರಮಣ, ೧೯೬೯ರಲ್ಲಿ ಸೋವಿಯೆತ್ ರಶ್ಯಾದೊಂದಿಗೆ ಮಿಲಿಟರಿ ಸಂಘರ್ಷ, ೧೯೭೯ರಲ್ಲಿ ವಿಯೆಟ್ನಾಮ್ ಮೇಲೆ ದಾಳಿ….. ಇವಿಷ್ಟು ಹೊಸ ಚೀನಾದ ರಕ್ತದಾಹಿ ಇತಿಹಾಸ.
ಚೀನಾ ಎಂದರೆ ಮಾದರಿ ದೇಶ ಎಂದೆಲ್ಲ ಹಾಡಿ ಹೊಗಳುವವರು, ಚೀನಾದ ಗ್ರಾಮೀಣ ಕ್ರಾಂತಿಯ ಬಗ್ಗೆ ಗಂಟೆ ಬಜಾಯಿಸುವವರು, ಚೀನಾ ಎಂದರೆ ಸಮಾಜವಾದದ ಬೃಹತ್ ಯಶಸ್ಸು ಎಂದು ಘೋಷಿಸುವವರು – ಎಲ್ಲರೂ ಚೀನಾದ ನಿಜಬಣ್ಣವನ್ನು ಅರಿತರೆ ಬೆಚ್ಚಿಬಿದ್ದಾರು.
ಚೀನಾದಲ್ಲಿ ಹಸಿವೆಯೇ ಇಲ್ಲ ಎಂದು ಇತ್ತೀಚೆಗಷ್ಟೆ ನಮ್ಮ ಒಬ್ಬ ಹಿರಿಯ ಪ್ರಾಧ್ಯಾಪಕರು ಲೇಖನ ಬರೆದು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಅವರಿಗೆ ‘ಲಾಗೋಯ್’ ಗೊತ್ತಿಲ್ಲವೇನೋ. ಚೀನಾದ ಜನಸಂಖ್ಯಾ ನೀತಿಯನ್ನು ನಮ್ಮ ಮುಖ್ಯಮಂತ್ರಿ ಯೆಡ್ಯೂರಪ್ಪ ಕರ್ನಾಟಕದಲ್ಲೂ ಪ್ರಕಟಿಸಲಿದ್ದಾರಂತೆ; ಚೀನೀ ಹಾನ್ ಜನಾಂಗವೇ ಮೆರೆಯಬೇಕೆಂದು ಚೀನಾ ಸರ್ಕಾರ ನಡೆಸಿದ ಮನುಕುಲದ ಅತಿ ಭೀಕರ ಜನಸಂಖ್ಯಾ ಅದಲು ಬದಲಿನ ಸಂಚುಗಳು ಅವರಿಗೆ ಅರಿವಿಲ್ಲವೇನೋ.
ದೇಶದ ಪ್ರಮುಖ ಆಂಗ್ಲ ಪತ್ರಿಕೆಯ ಸಂಪಾದಕರೊಬ್ಬರು ‘ಕೆಲವು ಕಲ್ಲುಗಳ ಮೇಲೆ ಚೀನಾ ಅಂತ ಬರೆದಿದ್ದಕ್ಕೇ ಇಷ್ಟು ಗಾಬ್ರಿಯಾಗ್ಬೇಕಾ? ನಮ್ಗೆಲ್ಲ ಚೀನಾ ಅನ್ನೋದು ಫೋಬಿಯಾ ಆಗ್ಬಿಟ್ಟಿದೆ ಕಣ್ರೀ, ಸುಮ್ನೆ ನೀವೆಲ್ಲ ಓವರ್ ರಿಯಾಕ್ಟ್ ಮಾಡ್ತಿದೀರಾ’ ಎಂದು ಮುಖ್ಯಲೇಖನ ಬರೆದೇಬಿಟ್ಟಿದ್ದಾರೆ. ಹೋದರೆ ಹೋಗಲಿ, ಒಂದಷ್ಟು ಕಲ್ಲು ಎಂಬುದು ಅವರ ಅಭಿಮತ !
೨೦೧೦ರಲ್ಲಿ ಭಾರತವು ‘ಚೀನಾ ಮಿತ್ರದೇಶವಾದ ೬೦ನೇ ವರ್ಷ’ವನ್ನು ಅದ್ಧೂರಿಯಿಂದ ಆಚರಿಸಲು ತೀರ್ಮಾನಿಸಿದೆ. ಹೌದು ಬಿಡಿ, ಚೀನಾವು ಟಿಬೆಟನ್ನು ನುಂಗಿ ೬೦ ವರ್ಷಗಳಾಗುತ್ತವೆ!
ಚೀನಾ ನೋಡಲು ಭವ್ಯ, ದಿವ್ಯ. ಅದರೊಳಗಿನ ದೃಶ್ಯಗಳು ವಿವರಿಸಲೇ ಅಸಹ್ಯ. ಮುಂದಿನ ಮೂರು ದಿನ ಚೀನಾನ ನಿಜ ಸನ್ನಿವೇಶವನ್ನು ಅಂಗೈ ಹುಣ್ಣಿನಂತಿರುವ ಸಾಕ್ಷ್ಯಾಧಾರಗಳ ಮೇಲೆ ತಿಳಿಯೋಣ. ೧೯೬೨ರಲ್ಲಿ ಭಾರತವನ್ನು ಬಗ್ಗುಬಡಿದಿದ್ದ ಚೀನಾ ಎಂದಿಗೂ ನಂಬಲನರ್ಹ ನೆರೆದೇಶ ಎಂಬುದನ್ನು ಮರೆಯದಿರೋಣ.
1 Comment
olledide, udayvaniyallu nodide. sandarbhika kuda. maha kalla chinao nijabanna yarigu gottillla. bay bay annutta bennige iriyudu adra chaly. e bagge jagrthi agbku. adke budhi kalisbku. inthha barahagalu innu barali.