ಈ ಪ್ರಪಂಚದಲ್ಲಿ ಸೈಕಲ್ ತುಳೀತಾನೇ ಸಾಗಬಹುದಾದ ಅತಿ ಉದ್ದದ ಮಾರ್ಗ ಎಂದರೆ ಅಲಾಸ್ಕಾದಿಂದ ಅರ್ಜೆಂಟೈನಾದ ಪಟಗೋನಿಯಾವರೆಗಿನ ಹಾದಿ. ಆಸ್ಟ್ರಿಯಾದ ಖ್ಯಾತ ಸೈಕ್ಲಿಸ್ಟ್ ಮೈಖೇಲ್ ಸ್ಟ್ರಾಸರ್ ಜುಲೈ 23 ರಿಂದ ಈ ಹಾದಿಯಲ್ಲಿ ಎಡಬಿಡದೆ ಸೈಕಲ್ ತುಳಿಯುತ್ತಿದ್ದಾರೆ. ನಮಗೆಲ್ಲ ಒಂದು ಸಂದೇಶ ಕೊಡುತ್ತಿದ್ದಾರೆ. ಹವಾಗುಣ ವೈಪರೀತ್ಯವನ್ನು ನಿಭಾಯಿಸುವಲ್ಲಿ ನಮ್ಮ ಸುಸ್ಥಿರ ವಾಹನದ ಆಯ್ಕೆಯೂ ತುಂಬಾ ಮುಖ್ಯ ಎಂಬುದು ಸ್ಟ್ರಾಸರ್ ಪ್ರತಿಪಾದನೆ. ಇದೇನೂ ಅಂತಹ ರಹಸ್ಯ ವಿಚಾರವೇನಲ್ಲ. ಆದರೆ 23 ಸಾವಿರ ಕಿಲೋಮೀಟರ್ ದೂರವನ್ನು ಸೈಕಲ್ನಲ್ಲೇ ಕ್ರಮಿಸಿಯೇ ಹೇಳುವಾಗ ಇದಕ್ಕೊಂದು ಜಾಗತಿಕ ಮಹತ್ವ ಬರುತ್ತದೆ ಅಲ್ಲವೆ?
ಐಸ್2ಐಸ್ ಎಂದು ಹೆಸರಿಟ್ಟಿರುವ ಈ ವಿಶ್ವದಾಖಲೆಯ ಮೂಲಕ ಸ್ಟ್ರಾಸರ್ ವಿಶ್ವಸಂಸ್ಥೆಯ ಪರ್ವತ ನಾಯಕರ ಅಭಿಯಾನದಲ್ಲಿ ಗುರುತಿಸಿಕೊಂಡಿದ್ದಾರೆ. ಸ್ಕಿ ಸಾಹಸಿ ಕೀನ್ಯಾದ ಸಬ್ರಿನಾ ಸಿಮಾದರ್ ಮತ್ತು ಬ್ರಿಟಿಶ್ ಪರ್ವತಾರೋಹಿ ಬೆನ್ ಫೋಗಲ್ – ಇವರು ಈಗಾಗಲೇ ಈ ಅಭಿಯಾನದಲ್ಲಿ ಗುರುತಿಸಿಕೊಂಡಿದ್ದಾರೆ.
ಹವಾಗುಣ ವೈಪರೀತ್ಯವು ಆರ್ಕಟಿಕ್ ಮತ್ತು ಅಂಟಾರ್ಕಟಿಕ ಪ್ರದೇಶಗಳನ್ನಲ್ಲದೆ ಪರ್ವತ ಪ್ರದೇಶಗಳ ಮೇಲೂ ದುಷ್ಪರಿಣಾಮ ಬೀರಲಿದೆ. 1960 ಮತ್ತು 2003 ರ ನಡುವೆ ಪಟಗೋನಿಯಾ ಮತ್ತು ಅಲಾಸ್ಕಾದ ನಡುವಣ ಪ್ರದೇಶದಲ್ಲಿ ಇದ್ದ ಗ್ಲೇಸಿಯರ್ಗಳು 25 ರಿಂದ 35 ಮಿಲಿಮೀಟರ್ ತೆಳ್ಳಗಾಗಿವೆ. ಇದೇನು ಚಿಕ್ಕ ವಿಚಾರವಲ್ಲ.
23 ಸಾವಿರ ಕಿಲೋಮೀಟರ್ ಪಯಣದಲ್ಲಿ ಸ್ಟ್ರಾಸರ್ ಸಮುದ್ರ ಮಟ್ಟದಿಂದ ಒಟ್ಟು 185 ಕಿಲೋಮೀಟರ್ ಎತ್ತರವನ್ನು ಕ್ರಮಿಸಲಿದ್ದಾರೆ. `ನಾವೆಲ್ಲರೂ ಹೀಗೆ ಚಿಕ್ಕ ಚಿಕ್ಕ ಕೊಡುಗೆ ನೀಡಿದರೆ ಅದರಿಂದಲೇ ದೊಡ್ಡ ಪರಿಣಾಮ ಉಂಟಾಗುತ್ತೆ’ ಎಂದು ಸ್ಟ್ರಾಸರ್ ಹೇಳುತ್ತಾರೆ.
ಖಚಿತವಾಗಿ ಹೇಳೋದಾದ್ರೆ ಅಲಾಸ್ಕಾದ ಪ್ರುಧೋ ಕೊಲ್ಲಿಯಿಂದ ಸ್ಟ್ರಾಸರ್ ಪಯಣ ಆರಂಭವಾಗಿದೆ. ಅಲ್ಲಿಂದ ಅವರು ಅರ್ಜೆಂಟೈನಾದ ಪಟಗೋನಿಯಾದ ಉಶೂಐಯ ತಲುಪಬೇಕಿದೆ. ಈ ಹೊತ್ತಿನಲ್ಲಿ ಇಂಥ ದಾಖಲೆ ಇರುವುದು ಡೀನ್ ಸ್ಕಾಟ್ ಹೆಸರಿನಲ್ಲಿ. ಅವರು 2018 ರ ಮೇ ತಿಂಗಳಿನಲ್ಲಿ ಪಾನ್-ಮೆರಿಕನ್ ಹೈವೇಯನ್ನು (14 ಸಾವಿರ ಕಿಮೀ) 99 ದಿನ, 12 ತಾಸು ಮತ್ತು 56 ನಿಮಿಷಗಳಲ್ಲಿ ಕ್ರಮಿಸಿದ್ದಾರೆ.
ಸ್ಟ್ರಾಸರ್ ಪಯಣದ ಈ ಸಾಹಸದಲ್ಲಿ ಅವರ ಹಲವು ಗೆಳೆಯರು – ಗೆಳತಿಯರು ಸಹಕರಿಸಿದ್ದಾರೆ. ತನ್ನ ತಂದೆ-ತಾಯಿ ಮತ್ತು ಕುಟುಂಬವನ್ನೂ ಸ್ಟ್ರಾಸರ್ ಪ್ರೀತಿಯಿಂದ ಸ್ಮರಿಸಿಕೊಳ್ಳುತ್ತಾರೆ.
ಸ್ಟ್ರಾಸರ್ ಜಾಲತಾಣ: https://strassermichael.at