ಸುಸ್ಥಿರ ಅಭ್ಯುದಯದ ಸೂತ್ರದಲ್ಲಿ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಲು ನಾಡಿನ ಗಣ್ಯರು ಮುಖ್ಯಮಂತ್ರಿಯವರಿಗೆ ಒಂದು ಬಹಿರಂಗ ಪತ್ರವನ್ನು ಬರೆದಿದ್ದಾರೆ. ಈ ಪತ್ರವು ಕನ್ನಡದ ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ನನಗೆ ತೀರ ಇತ್ತೀಚೆಗೆ ಪರಿಚಿತರಾದ ವಿದ್ಯುತ್ ವಿಶ್ಲೇಷಕ ಶ್ರೀ ಶಂಕರ್ ಶರ್ಮರವರು ಮೂಲತಃ ಸಿದ್ಧಪಡಿಸಿದ ಈ ಪತ್ರಕ್ಕೆ ರಾಷ್ಟ್ರಕವಿ ಜಿ ಎಸ್ ಎಸ್ ರಿಂದ ಹಿಡಿದು ಹಲವು ಹಿರಿಯರು, ತಜ್ಞರು, ಸಾಹಿತಿಗಳು ಸಹಿ ಹಾಕಿದ್ದಾರೆ. ಈ ಪತ್ರವನ್ನು ಓದಿ, ಇವೆಲ್ಲವೂ ತಮಗೆ ಸಮ್ಮತ ಎಂದು ಹೃತ್ಪೂರ್ವಕವಾಗಿ ತಿಳಿಸಿ ಸಹಿ ಹಾಕಿದ ಈ ಮಹನೀಯರು ಅಭ್ಯುದಯದ ಹಾದಿಯನ್ನು ಸರ್ಕಾರಕ್ಕೆ ನೆನಪು ಮಾಡಿಕೊಟ್ಟಿದ್ದಾರೆ.
ಈ ಪತ್ರದ ಪೂರ್ಣಪಾಠವನ್ನು ಪ್ರಕಟಿಸಲು ರಾಜ್ಯದ ದಿನಪತ್ರಿಕೆಗಳ ಸಂಪಾದಕರು, ಆಡಳಿತ ವರ್ಗದವರು ಅತ್ಯಂತ ಕಾಳಜಿಯಿಂದ ಮುಂದೆ ಬಂದಿದ್ದಾರೆ. ಅವರೆಲ್ಲರಿಗೂ ಬಹಿರಂಗ ಪತ್ರ ಬರೆದ ಎಲ್ಲರ ಪರವಾಗಿ ನನ್ನ ವಂದನೆಗಳು.
ಈ ಪತ್ರವನ್ನು ಮಿತ್ರಮಾಧ್ಯಮದ ಎಲ್ಲ ಓದುಗರೂ ಓದಿ ಪ್ರತಿಕ್ರಿಯಿಸಲು ಕೋರುತ್ತಿದ್ದೇನೆ. ರಚನಾತ್ಮಕ ಚರ್ಚೆಯ ಮೂಲಕ ನಾಡಿನ ವಿದ್ಯುತ್ ಸಮಸ್ಯೆಯ ಪರಿಹಾರದ ಬಗ್ಗೆ ನಾವೆಲ್ಲರೂ ಪುಟ್ಟ ಹೆಜ್ಜೆ ಇಡೋಣ ಬನ್ನಿ!
ಒಂದು ಬಹಿರಂಗ ಪತ್ರ
ಇವರಿಗೆ ದಿನಾಂಕ: ೧೦ ಮಾರ್ಚ್ ೨೦೧೦
ಸನ್ಮಾನ್ಯ ಮುಖ್ಯ ಮಂತ್ರಿಗಳು
ಕರ್ನಾಟಕ ರಾಜ್ಯ ಸರ್ಕಾರ
ಬೆಂಗಳೂರು.
ಮಾನ್ಯರೇ,
ವಿಷಯ: ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ವಿದ್ಯುತ್ ಶಕ್ತಿ ರಂಗದ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಮನವಿ
ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ವಿದ್ಯುತ್ ಶಕ್ತಿ ರಂಗವು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕಾದ ಅವಶ್ಯಕತೆ ಸರ್ವ ವಿದಿತವಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದ ರಾಜ್ಯದ ವಿದ್ಯುತ್ ಶಕ್ತಿ ರಂಗವು ಹಲವಾರು ಸಮಸ್ಯೆಗಳನ್ನು ಎದುರಿಸಿದೆ. ಆದರೆ ಅದು ಸದಾ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿದೆ ಎಂದು ಹೇಳಲಾಗುವುದಿಲ್ಲ. ೧೯೭೦ ರ ದಶಕದ ಮೊದಲ ಕೆಲವು ವರ್ಷಗಳನ್ನು ಹೊರತುಪಡಿಸಿದರೆ ಬಹುತೇಕ ಎಲ್ಲ ವರ್ಷಗಳಲ್ಲೂ ನಮ್ಮ ರಾಜ್ಯವು ವಿದ್ಯುತ್ ಸಮಸ್ಯೆಯನ್ನು ಎದುರಿಸಿದೆ. ನಮ್ಮ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅಪೇಕ್ಷಿತ ಮಟ್ಟದ ಅಭಿವೃದ್ಧಿ ಆಗದೇ ಇರಲು ವಿದ್ಯುತ್ ಸಮಸ್ಯೆಯು ಮುಖ್ಯ ಕಾರಣವಾಗಿದೆ. ಈ ಸಮಸ್ಯೆಯಿಂದಾಗಿಯೇ ಬಡತನ ಮತ್ತು ಸಾಮಾಜಿಕ ಅಸಮತೊಲನದ ನಿವಾರಣೆಯೂ ಅಸಾಧ್ಯವಾಗಿದೆ.
ರಾಜ್ಯದಲ್ಲಿ ವಿದ್ಯುತ್ ಸರಬರಾಜು ಅಸಮರ್ಪಕವಾಗಿದೆ ಎಂಬುದು ಸಾರ್ವತ್ರಿಕ ಅಭಿಪ್ರಾಯವಾಗಿದೆ. ಇದರ ಪರಿಣಾಮವಾಗಿ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಹಲವಾರು ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ಸಹ ತೀವ್ರವಾದ ಕೊರತೆ ಉಂಟಾಗಿದೆ. ಬೇಸಿಗೆಯ ತಿಂಗಳುಗಳಲ್ಲಿ ತಡೆಯಲಾರದ ಬಿಸಿಲಿನ ಬೇಗೆ; ಜೊತೆಗೇ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೂ, ರೈತ ಸಮುದಾಯಕ್ಕೆ ಕೃಷಿ ಚಟುವಟಿಕೆಗಳಿಗೂ ಭಾರಿ ಹಿನ್ನಡೆಯಾಗಿದೆ. ಸಮರ್ಪಕವಾದ ವಿದ್ಯುತ್ ಸರಬರಾಜು ದೊರೆಯುವುದೆಂಬ ಆಶ್ವಾಸನೆಯೊಂದಿಗೆ ಪ್ರಾರಂಭಗೊಂಡ ಬಹುತೇಕ ಕೈಗಾರಿಕಾ ಚಟುವಟಿಕೆಗಳಿಗೂ ಇದೇ ಸಮಸ್ಯೆ. ವಿದ್ಯುತ್ ಸರಬರಾಜಿನ ಮೇಲಿನ ನಂಬಿಕೆಯೇ ಹೊರಟುಹೋಗಿದೆ; ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳು – ಮಹಿಳೆಯರ ಅನಾರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತಲೇ ಇವೆ. ಬೃಹತ್ ವಿದ್ಯುತ್ ಉತ್ಪಾದನಾ ಸ್ಥಾವರಗಳ ಸಂಖ್ಯೆ ಮಿತಿ ಮೀರುತ್ತಿರುವುದರಿಂದ ಸಾಮಾಜಿಕ ಹಾಗೂ ಪರಿಸರ ಸಂಬಂಧಿ ಸಮಸ್ಯೆಗಳು ಉಲ್ಬಣಿಸುತ್ತಿವೆ.
ಉಚಿತವಾಗಿ ಅಥವ ಅತಿ ಕಡಿಮೆ ಬೆಲೆಯಲ್ಲಿ ವಿದ್ಯುತ್ ಪಡೆಯುತ್ತಿರುವ ರೈತ ಸಮುದಾಯಕ್ಕಾಗಲೀ ಅಥವ ಬಡತನ ರೇಖೆಗಿಂತ ಕೆಳಗಿರುವವರಿಗಾಗಿ ಇರುವ ಭಾಗ್ಯ ಜ್ಯೋತಿ/ಕುಟೀರ ಜ್ಯೋತಿಯನ್ನು ನಂಬಿಕೊಂಡಿರುವ ನಿವಾಸಿಗಳಿಗಾಗಲೀ ಅಥವ ವೆಚ್ಚಕ್ಕಿಂತ ಹೆಚ್ಚಿನ ದರ ಪಾವತಿಸುತ್ತಿರುವ ಕಾರ್ಖಾನೆಗಳಿಗಾಗಲೀ ಮತ್ತು ವ್ಯಾಪಾರಸ್ತರಿಗಾಗಲೀ ಸಮರ್ಪಕವಾದ ವಿದ್ಯುತ್ ಸರಬರಾಜು ಇಲ್ಲದಿರುವುದರಿಂದ ಎಲ್ಲ ಗ್ರಾಹಕ ವರ್ಗಗಳಿಗೂ ತೀವ್ರ ಅಸಮಾಧಾನ ಉಂಟಾಗಿದೆ.
೧೯೯೦ರ ದಶಕದಿಂದೀಚೆಗೆ ವಿದ್ಯುತ್ ಸಮಸ್ಯೆಗಳು ಗಂಭೀರ ಸ್ವರೂಪ ಪಡೆದಿವೆ. ಇದರ ಪರಿಹಾರಕ್ಕೆ ಸಮರೋಪಾದಿಯಲ್ಲಿ ಹೆಚ್ಚು ಗಮನ ಕೊಡಲೇಬೇಕಾದ ಅನಿವಾರ್ಯತೆ ಈಗ ಬಂದಿದೆ. ರಾಜ್ಯದ ವಿದ್ಯುತ್ ಶಕ್ತಿ ರಂಗವು ಇದುವರೆಗೆ ಸಾಗಿಬಂದ ವಿಧಾನವನ್ನು ಕೂಲಂಕಷವಾಗಿ ವಿಶ್ಲೇಷಿಸುವ ಮತ್ತು ಸುಸ್ಥಿರ ಅಭಿವೃಧ್ಧಿಗಾಗಿ ಸೂಕ್ತ ಕಾರ್ಯಕ್ರಮಗಳನ್ನು ಆದಷ್ಟು ಬೇಗ ಅಳವಡಿಸಿಕೊಳ್ಳುವುದು ರಾಜ್ಯ ಸರ್ಕಾರದ ಮುಖ್ಯ ಕರ್ತವ್ಯವಾಗಿದೆ.
ಸಮಸ್ಯೆಗಳು
ರಾಜ್ಯದಲ್ಲಿನ ಎಲ್ಲ ರಂಗಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗದಿರಲು ವಿದ್ಯುತ್ ಸಮಸ್ಯೆಯು ಮುಖ್ಯ ಕಾರಣವಾಗಿದೆ; ಅಷ್ಟೇ ಅಲ್ಲ, ವಿದ್ಯುತ್ ರಂಗವು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸದಿರುವುದರಿಂದ ಸಾಮಾಜಿಕ ಹಾಗೂ ಪರಿಸರ ಸಂಬಂಧಿ ಸಮಸ್ಯೆಗಳು ಹೆಚ್ಚಿವೆ.
(೧) ಗ್ರಾಮೀಣ ಪ್ರದೇಶಗಳನ್ನು ಕಡೆಗಣಿಸಿ ನಗರ ಪ್ರದೇಶಗಳಿಗೆ ಹೆಚ್ಚು ಹೆಚ್ಚು ವಿದ್ಯುತ್ ಸೌಲಭ್ಯಗಳನ್ನು ಒದಗಿಸುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಬಹುತೇಕ ಕುಂಠಿತಗೊಂಡಿದೆ. ಇದರ ಪರಿಣಾಮವಾಗಿ ಗ್ರಾಮೀಣ ಪ್ರದೇಶಗಳ ನಿವಾಸಿಗಳು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವ ಪ್ರಕ್ರಿಯೆ ಹೆಚ್ಚಾಗುತ್ತಿದೆ. ಅಂದರೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಗ್ರಾಮೀಣ ಪ್ರದೇಶಗಳಿಂದ ದೊರಕಬೇಕಾಗಿದ್ದ ಅಪಾರ ಕೊಡುಗೆ ನಷ್ಟವಾಗುತ್ತಿದೆ. ಬದಲಿಗೆ ಬೆಂಗಳೂರಿನಂತಹ ನಗರಗಳು ಮಿತಿ ಮೀರಿ ಬೆಳೆಯುತ್ತಿದ್ದು ನಗರೀಕರಣವು ನಿರ್ವಹಣೆ ಮಾಡಲಾಗದ ಗತಿ ಒದಗಿದೆ; ಸಮಸ್ಯೆಗಳು ಉಲ್ಬಣಗೊಂಡಿವೆ. ಈ ಸಮಸ್ಯೆಗಳು ನಮ್ಮ ಸಮಾಜದ ಶೀಘ್ರ ಅವನತಿಗೆ ಕಾರಣವಾಗಲಿವೆ. ಆದ್ದರಿಂದ ಇವುಗಳ ಬಗ್ಗೆ ತತ್ಕ್ಷಣವೇ ಮುಂಜಾಗ್ರತೆ ವಹಿಸಬೇಕಾಗಿದೆ.
(೨) ದೇಶದ ಇತರೆ ಪ್ರದೇಶಗಳಂತೆ ನಮ್ಮ ರಾಜ್ಯದಲ್ಲೂ ಬಹುತೇಕ ಜನ ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಅಪೇಕ್ಷಿತ ಮಟ್ಟದ ಅಭಿವೃದ್ಧಿಯಾಗದಿರಲು ಮೂಲ ಸೌಕರ್ಯಗಳಾದ ಕುಡಿಯುವ ನೀರು, ಸಂಪರ್ಕ, ಶಿಕ್ಷಣ, ಆರೋಗ್ಯದಂತೆಯೇ ವಿದ್ಯುತ್ತಿನ ಅಭಾವವೂ ಮುಖ್ಯ ಕಾರಣವೆಂಬುದು ಈಗಾಗಲೇ ಸರ್ವ ವಿದಿತ. ಹೀಗೆ ಸ್ವಾತಂತ್ರ್ಯ ಬಂದಾಗಿನಿಂದಲೂ ನಮ್ಮ ಸರ್ಕಾರಗಳು ಗ್ರಾಮೀಣ ಪ್ರದೇಶಗಳನ್ನು ಕಡೆಗಣಿಸಿವೆ. ನಮ್ಮ ರಾಜ್ಯದಲ್ಲಿ ೧೯೯೯ ರಿಂದ ೨೦೦೯ರ ಅವಧಿಯಲ್ಲಿ ವಿದ್ಯುತ್ತಿನ ಉತ್ಪಾದನಾ ಸಾಮರ್ಥ್ಯವು ಸುಮಾರು ೫,೪೦೦ ಮೆಗಾವಾಟ್ನಿಂದ ಸುಮಾರು ೯,೨೦೦ ಮೆಗಾವಾಟ್ವರೆಗೆ ಏರಿಕೆಯಾಗಿದ್ದು, ವಾರ್ಷಿಕ ವಿದ್ಯುತ್ತಿನ ಬಳಕೆ ಸುಮಾರು ೧೬,೦೦೦ ದಶ ಲಕ್ಷ ಯೂನಿಟ್ಟುಗಳಿಂದ ಸುಮಾರು ೩೨,೦೦೦ ದಶ ಲಕ್ಷ ಯೂನಿಟ್ಟುಗಳಿಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ತಲಾವಾರು ವಾರ್ಷಿಕ ವಿದ್ಯುತ್ ಬಳಕೆ ೩೦೯ ಯೂನಿಟ್ಟುಗಳಿಂದ ೫೪೩ ಯೂನಿಟ್ಟುಗಳಿಗೆ ಏರಿದೆ. ಈ ದಶಕವೊಂದರಲ್ಲೇ ವಿದ್ಯುತ್ತಿನ ಲಭ್ಯತೆ ಶೇಕಡಾ ೭೦ರಷ್ಟು ಏರಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಶೇಕಡ ೨೨ ರಷ್ಟು ಕುಟುಂಬಗಳಿಗೆ ವಿದ್ಯುತ್ತಿನ ಸೌಲಭ್ಯ ಇನ್ನೂ ದೊರಕಿಲ್ಲ. ಬೆಂಗಳೂರಿನಂತಹ ನಗರಗಳಲ್ಲಿ ತಲಾವಾರು ವಾರ್ಷಿಕ ಬಳಕೆ ಸುಮಾರು ೨,೭೦೦ ಯೂನಿಟ್ಟುಗಳಿಗೆ ಏರಿಕೆಯಾಗಿದೆ. ಇದು ನಮ್ಮ ರಾಜ್ಯದ ಮತ್ತು ದೇಶದ ತಲಾ ವಾರ್ಷಿಕ ಬಳಕೆಯ ಸುಮಾರು ಐದು ಪಟ್ಟು ಹೆಚ್ಚು ಎಂಬುದು ಗಮನಾರ್ಹ. ಬೆಂಗಳೂರಿನಂತಹ ನಗರಗಳಲ್ಲಿ ಸಾಮಾನ್ಯವಾಗಿ ದಿನಂಪ್ರತಿ ೨೪ ಗಂಟೆಗಳ ಕಾಲವೂ ವಿದ್ಯುತ್ತಿನ ಸರಬರಾಜು ಸಮಾಧಾನಕರವಾಗಿ ಇದ್ದರೆ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ದಿನಂಪ್ರತಿ ೧೨ ಗಂಟೆಗಳ ಕಾಲವೂ ಸಹ ವಿದ್ಯುತ್ತಿನ ಸರಬರಾಜು ಸಮರ್ಪಕವಾಗಿ ಇರುವುದಿಲ್ಲ (೨೦೦೯ ರ ನವೆಂಬರ್ ಮಾಹೆಯಲ್ಲಿ ಬಿಡುಗಡೆಯಾದ ಗ್ರೀನ್ ಪೀಸ್ ಸಂಸ್ಥೆಯ ವರದಿ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ವಾರ್ಷಿಕ ವರದಿಗಳು ಮತ್ತು ಕರ್ನಾಟಕ ಆರ್ಥಿಕ ಸಮೀಕ್ಷೆ ೨೦೦೮-೦೯ ಗಳ ಆಧಾರ).
ತೀವ್ರವಾದ ಅಸಮಾನತೆಯ ಇಂತಹ ವಿಪರ್ಯಾಸಗಳನ್ನು ಏನೆಂದು ಕರೆಯಬೇಕು? ಇದು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ವಿಚಾರದಲ್ಲಿ ಸರ್ಕಾರದ ಮಲ ತಾಯಿ ಧೋರಣೆಗೆ ನಿಚ್ಚಳ ಉದಾಹರಣೆಯಾಗಿದೆ. ಅಲ್ಲದೇ ಕಳೆದ ೬೦ ವರ್ಷಗಳಲ್ಲಿ ಸರಾಸರಿ ದಶಕಕ್ಕೊಮ್ಮೆ ರಾಜ್ಯದ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು ದ್ವಿಗುಣಗೊಳ್ಳುತ್ತಿದ್ದರೂ ವಿದ್ಯುತ್ ಕಡಿತದ ಪ್ರಕ್ರಿಯೆ ಮುಂದುವರೆಯುತ್ತಲೇ ಇರುವುದರಿಂದ ವಿದ್ಯುತ್ ಕ್ಷೇತ್ರವು ತನ್ನ ಸಾಮಾಜಿಕ ಮತ್ತು ಆರ್ಥಿಕ ಜವಾಬ್ದಾರಿಯಲ್ಲಿ ವಿಫಲವಾಗಿದೆ ಎಂದೇ ಹೇಳಬೇಕಾಗುತ್ತದೆ.
(೩) ಗ್ರಾಮೀಣ ಪ್ರದೇಶಗಳ ಮತ್ತು ನಗರ ಪ್ರದೇಶಗಳ ನಡುವಿನ ಇಂತಹ ಅಸಮಾನತೆಯನ್ನು ಹೋಗಲಾಡಿಸುವ ಯಾವ ಪ್ರಯತ್ನಗಳೂ ಇದುವರೆಗೆ ಕಂಡುಬಂದಿಲ್ಲ. ದೊಡ್ಡ ವಿಪರ್ಯಾಸ ಎಂದರೆ ಸರ್ಕಾರಗಳು ವಿದ್ಯುತ್ತಿನ ಕೊರತೆಯ ನೆಪದಲ್ಲಿ ದೊಡ್ಡ ದೊಡ್ಡ ವಿದ್ಯುತ್ ಉತ್ಪಾದನಾ ಘಟಕಗಳಿಗಾಗಿ ಅಪಾರ ಪ್ರಮಾಣದ ಹಣವನ್ನು ಮತ್ತು ಅತಿ ಅಮೂಲ್ಯವಾದ ನೈಸರ್ಗಿಕ ಸಂಪನ್ಮೂಲಗಳನ್ನು ವೆಚ್ಚ ಮಾಡುತ್ತಿವೆ! ಇಷ್ಟಾಗಿಯೂ ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಸೌಲಭ್ಯ ಮಾತ್ರ ಉತ್ತಮಗೊಳ್ಳುತ್ತಿಲ್ಲ. ಹೆಚ್ಚುವರಿ ವಿದ್ಯುತ್ ಉತ್ಪಾದನೆಯ ಬಹುತೇಕ ಪ್ರಮಾಣವು ನಗರ ಪ್ರದೇಶಗಳ ಮಿತಿ ಮೀರಿದ ಹಾಗೂ ಅನಿವಾರ್ಯವಲ್ಲದ ಉದ್ದೇಶಗಳಿಗಾಗಿ ದುರ್ಬಳಕೆಯಾಗುತ್ತಿದೆ. ನಗರ ಪ್ರದೇಶಗಳ ನಿರಂಕುಶ ಬೇಡಿಕೆಯನ್ನು ಪೂರೈಸಲು ಗ್ರಾಮೀಣ ಪ್ರದೇಶಗಳ ಜನರು ಅಪಾರ ತ್ಯಾಗವನ್ನು ಮಾಡಬೇಕಾಗಿ ಬಂದಿದೆ. ದೊಡ್ಡ ದೊಡ್ಡ ವಿದ್ಯುತ್ ಉತ್ಪಾದನಾ ಘಟಕಗಳಿಗಾಗಿ ಹಾಗೂ ಅವುಗಳಿಗೆ ಸಂಬಂಧಿಸಿದ ಸಾಗಣೆ ಮಾರ್ಗಗಳಿಗಾಗಿ ಗ್ರಾಮೀಣ ಪ್ರದೇಶಗಳ ಜನರು ಫಲವತ್ತಾದ ಕೃಷಿ ಭೂಮಿ, ಸಮೀಪದ ಅರಣ್ಯ, ನೀರು ಮುಂತಾದ ಮೂಲಭೂತ ಅವಶ್ಯಕತೆಗಳಿಂದ ವಂಚಿತರಾಗಿದ್ದಾರೆ. ಹಲವಾರು ಕುಟುಂಬಗಳು ಕೆಲವೇ ದಶಕಗಳಲ್ಲಿ ಎರಡು ಅಥವಾ ಮೂರು ಬಾರಿ ಸ್ಥಳಾಂತರಗೊಂಡು ಅತಿ ದಾರುಣ ಸ್ಥಿತಿಯಲ್ಲಿ ಬದುಕುತ್ತಿರುವ ವರದಿಗಳೂ ಇವೆ.
(೪) ದಶಕಗಳ ಕಾಲದಿಂದ ಮುಂದುವರಿದುಕೊಂಡೇ ಬಂದಿರುವ ವಿದ್ಯುತ್ ರಂಗದ ಅದಕ್ಷತೆಯಿಂದಾಗಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಧಕ್ಕೆಯಾಗುತ್ತಿರುವ ಜೊತೆಗೇ ರಾಜ್ಯದ ಹಾಗೂ ದೇಶದ ಪರಿಸರಕ್ಕೆ ಆಗುತ್ತಿರುವ ಹಾನಿಯೂ ಅಪಾರ ಪ್ರಮಾಣದ್ದಾಗಿದೆ. ವಿದ್ಯುತ್ ರಂಗದ ಅದಕ್ಷತೆಯಿಂದಾಗಿ ಭೂ ತಾಪಮಾನದ ಏರಿಕೆ, ಹವಾಮಾನದಲ್ಲಿ ತೀವ್ರ ಬದಲಾವಣೆಯಾಗುತ್ತಿರುವುದರ ಜೊತೆ ಜೊತೆಗೇ ನಮ್ಮ ನೈಸರ್ಗಿಕ ಸಂಪನ್ಮೂಲಗಳಾದ ನದಿಗಳು, ಅರಣ್ಯಗಳು, ಸಮುದ್ರ, ಫಲವತ್ತಾದ ಭೂಮಿ ಮುಂತಾದವುಗಳು ಕೂಡ ಶೀಘ್ರ ಅವನತಿ ಹೊಂದುತ್ತಿವೆ.
(೫) ೨೫.೨.೨೦೧೦ ರಂದು ಸಂಸತ್ತಿನಲ್ಲಿ ೧೩ ನೇ ಹಣಕಾಸು ಆಯೋಗವು ಮಂಡಿಸಿದ ವರದಿಯಂತೆ ವಿದ್ಯುತ್ತಿನ ಸಾಗಣೆ ಮತ್ತು ವಿತರಣೆಯಲ್ಲಿ ತೊಡಗಿರುವ ಸಾರ್ವಜನಿಕ ಉದ್ಯಮಗಳ ದಕ್ಷತೆಯನ್ನು ಹೆಚ್ಚಿಸುವ ಕ್ರಮಗಳನ್ನು ಕೂಡಲೇ ತೆಗೆದುಕೊಳ್ಳದಿದ್ದರೆ ಅವುಗಳ ಒಟ್ಟು ನಿವ್ವಳ ನಷ್ಟವು ೨೦೧೦-೧೧ ರಲ್ಲಿ ರೂ. ೬೮,೬೪೩ ಕೋಟಿಗಳಿಂದ ೨೦೧೪ -೧೫ ರ ಹೊತ್ತಿಗೆ ಸುಮಾರು ರೂ ೧,೧೬,೦೮೯ ಕೋಟಿಗಳಿಗೆ ಹೆಚ್ಚಾಗಬಹುದಾಗಿದೆ. ಈ ಅವ್ಯವಹಾರಕ್ಕೆ ನಮ್ಮ ರಾಜ್ಯದ ಕೊಡುಗೆಯೂ ಅಪಾರವಾಗಿದ್ದು ಆತಂಕಕ್ಕೆ ಕಾರಣವಾಗಿದೆ.
(೬) ಛತ್ತೀಸ್ಗಢ ರಾಜ್ಯದಲ್ಲಿ ಒಂದು ಉಷ್ಣ ವಿದ್ಯುತ್ ಸ್ಥಾವರಕ್ಕೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿ ಹಾಕುವ ಸಮಯದಲ್ಲಿ ಮುಖ್ಯಮಂತ್ರಿಗಳಾದ ತಾವೇ ಹೇಳಿದಂತೆ ನಮ್ಮ ರಾಜ್ಯದಲ್ಲಿ ಕಲ್ಲಿದ್ದಲಿನ ನಿಕ್ಷೇಪವೇ ಇಲ್ಲದಿರುವುದರಿಂದ ನಮ್ಮಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು ಆರ್ಥಿಕವಾಗಿ ಸಮರ್ಥನೀಯ ಅಲ್ಲವೇ ಅಲ್ಲ. ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು ನೀರು, ಭೂಮಿ ಮತ್ತು ಗಾಳಿಯ ಮಾಲಿನ್ಯಕ್ಕೆ ಕಾರಣವಾಗುವುದರ ಜೊತೆಗೇ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಬಾರಿ ಒತ್ತಡ ಹೇರುತ್ತವೆ; ಆದ್ದರಿಂದ ಅವುಗಳು ನಮ್ಮ ರಾಜ್ಯಕ್ಕೆ ಸಾಮಾಜಿಕ ಮತ್ತು ಪರಿಸರ ಸಂಬಂಧಿ ಕಾರಣಗಳಿಂದಲೂ ಸೂಕ್ತವಲ್ಲ. ಪಶ್ಚಿಮ ಘಟ್ಟಗಳ ಸನಿಹದಲ್ಲಿ ಮತ್ತು ಕರಾವಳಿಯಲ್ಲಿ ಸರ್ಕಾರ ಯೋಜಿಸಿರುವ / ಅನುಮತಿಸಿರುವ ಹಲವಾರು ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು ಈ ಹಿನ್ನೆಲೆಯಲ್ಲಿ ರಾಜ್ಯದ ಹಿತ ದೃಷ್ಟಿಯಿಂದ ಹಾನಿಕಾರಕವಾಗಿವೆ. ಉಡುಪಿ, ತದಡಿ, ಚಾಮಲಾಪುರ, ಹಣುಕೋಣ ಮುಂತಾದೆಡೆ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳ ವಿರುದ್ಧ ನಡೆದ ಜನಾಂದೋಲನದ ಹಿಂದಿನ ಜನಾಭಿಪ್ರಾಯವನ್ನು ಸರ್ಕಾರವು ಗೌರವಿಸಬೇಕು.
(೭) ಹಲವಾರು ಅಣೆಕಟ್ಟು ಆಧಾರಿತ ಜಲವಿದ್ಯುತ್ ಯೋಜನೆಗಳಿಂದ ಪಶ್ಚಿಮ ಘಟ್ಟಗಳಲ್ಲಿನ ನಮ್ಮ ಅಪೂರ್ವ ಅರಣ್ಯ ಸಂಪತ್ತಿನ ಹಲವಾರು ಮುಖ್ಯ ಭಾಗಗಳು ಈಗಾಗಲೇ ನಾಶವಾಗಿವೆ. ಇದರಿಂದ ಊಹೆಗೆ ನಿಲುಕಲಾರದಷ್ಟು ನಷ್ಟವುಂಟಾಗಿದೆ. ಇಂತಹ ಯೋಜನೆಗಳನ್ನು ಮತ್ತೆಂದೂ ಕೈಗೆತ್ತಿಕೊಳ್ಳಬಾರದೆಂಬ ಜನಾಭಿಪ್ರಾಯ ಈಗಾಗಲೇ ವ್ಯಕ್ತವಾಗಿದೆ. ಬೇಡ್ತಿ ನದಿ ಮತ್ತು ಗುಂಡ್ಯ ನದಿ ಯೋಜನೆಗಳ ಸಂದರ್ಭದಲ್ಲಿ ಅಣೆಕಟ್ಟು ಆಧಾರಿತ ಜಲವಿದ್ಯುತ್ ಯೋಜನೆಗಳ ವಿರುದ್ಧವಾದ ಇಂತಹ ಜನಾಭಿಪ್ರಾಯ ಸ್ಪಷ್ಟವಾಗಿದೆ. ವಿದ್ಯುತ್ ರಂಗದ ಅತೀವ ಅದಕ್ಷತೆಯ ಪರಿಣಾಮವಾಗಿ ಹೆಚ್ಚು ಹೆಚ್ಚು ವಿದ್ಯುತ್ ಸ್ಥಾವರಗಳ ಸ್ಥಾಪನೆ ಮಾಡುತ್ತಿರುವುದರಿಂದ ನಾಡಿನ ಕರಾವಳಿ ಮತ್ತು ಪಶ್ಚಿಮ ಘಟ್ಟದ ಸೂಕ್ಷ್ಮ ಜೀವವೈವಿಧ್ಯಕ್ಕೆ ಹಿಂದಿರುಗಲಾರದಷ್ಟು ನಷ್ಟ ಉಂಟಾಗುತ್ತಿದೆ.
(೮) ರಾಜ್ಯದಲ್ಲಿ ವಿದ್ಯುತ್ತಿನ ತೀವ್ರ ಕೊರತೆ ಮತ್ತು ನೀರಿನ ಸಮಸ್ಯೆ ಇರುವಾಗಲೂ ಇಂತಹ ಮೂಲಭೂತ ಸೌಕರ್ಯಗಳ ಅನಿವಾರ್ಯತೆ ಇರುವ ಹಲವಾರು ಬೃಹತ್ ಉದ್ಯಮಗಳನ್ನು ಸ್ವಾಗತಿಸಲಾಗುತ್ತಿದೆ. ಉದ್ಯೋಗಸೃಷ್ಟಿಯ ಆಯಾಮದಲ್ಲಿ ಉದ್ದಿಮೆಗಳು ಬರಬೇಕೆನ್ನುವುದು ಸಹಜ ಅಭಿಪ್ರಾಯವಾಗಿದ್ದರೂ ಸುಸ್ಥಿರ ಅಭ್ಯುದಯದ ದೃಷ್ಟಿಯಿಂದ ಇಂತಹ ಎಷ್ಟು ಬೃಹತ್ ಉದ್ಯಮಗಳನ್ನು ನಮ್ಮ ರಾಜ್ಯದ ಸಂಪನ್ಮೂಲಗಳು ಪೋಷಿಸಬಹುದಾಗಿದೆ ಎಂಬುದನ್ನೂ ಪರಾಮರ್ಶಿಸಬೇಕಾಗಿದೆ.
ಹಲವಾರು ದಶಕಗಳಿಂದಲೂ ನಮ್ಮ ರಾಜ್ಯವನ್ನು ಕಾಡುತ್ತಿರುವ ವಿದ್ಯುತ್ ರಂಗದ ಈ ಎಲ್ಲ ಸಮಸ್ಯೆಗಳಿಗೆ ಸುಸ್ಠಿರ ಪರಿಹಾರ ಪಡೆಯುವುದಕ್ಕಾಗಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಮತ್ತು ಅತಿ ಮುಖ್ಯವಾದ ಪರಿಸರದ ಅಳಿವು /ಉಳಿವಿನ ಹಿನ್ನೆಲೆಯಲ್ಲಿ, ವಿದ್ಯುತ್ ರಂಗದ ಈವರೆಗಿನ ನೀತಿಗಳನ್ನು ಸಮಗ್ರವಾಗಿ ಪರಿಶೀಲಿಸಲೇಬೇಕಾದ ಅತಿ ತುರ್ತು ಸಂದರ್ಭ ಈಗ ಒದಗಿದೆ.
ಸಾಂವಿಧಾನಿಕ ಮತ್ತು ಕಾನೂನಿನ, ಹಾಗೂ ಅಂತರ ರಾಷ್ಟ್ರೀಯ ವರದಿಗಳ ಹಿನ್ನೆಲೆ
(೯) ನಮ್ಮ ಸಂವಿಧಾನದಲ್ಲಿ (ಪರಿಚ್ಛೇದ ೪೮ (ಎ)) ಹೇಳಿರುವಂತೆ ಪರಿಸರವನ್ನು ರಕ್ಷಿಸಲು ಮತ್ತು ಅಭಿವೃದ್ಧಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿರುವುದು ಸರ್ಕಾರದ ಒಂದು ಮೂಲಭೂತ ಕರ್ತವ್ಯವಾಗಿದೆ. ಸಂವಿಧಾನದಲ್ಲಿ (ಪರಿಚ್ಛೇದ ೫೧(ಎ) (ಜಿ)) ಹೇಳಿರುವಂತೆ ನದಿಗಳು, ಸರೋವರಗಳು, ಅರಣ್ಯ, ವನ್ಯಮೃಗಗಳೂ ಸೇರಿದಂತೆ ನೈಜ ಪರಿಸರವನ್ನು ರಕ್ಷಿಸಿ ಬೆಳೆಸಿ ಅಭಿವೃದ್ಧಿಪಡಿಸುವುದು ಮತ್ತು ಪ್ರಾಣಿ ದಯೆಯು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಇದರಲ್ಲಿ ರಾಜ್ಯ ಸರ್ಕಾರಗಳ ಮತ್ತು ಕೇಂದ್ರ ಸರ್ಕಾರದ ಪಾತ್ರವೇ ಬಹಳ ಪ್ರಮುಖವಾಗಿರುವುದರಿಂದ ದೊಡ್ಡ ದೊಡ್ಡ ವಿದ್ಯುತ್ ಉತ್ಪಾದನಾ ಘಟಕಗಳಿಗಾಗಿ ಹಾಗೂ ಅವುಗಳಿಗೆ ಸಂಬಂಧಿಸಿದ ಸಂಪರ್ಕ ಮಾರ್ಗಗಳಿಗಾಗಿ ಫಲವತ್ತಾದ ಕೃಷಿ ಭೂಮಿ, ಅರಣ್ಯ, ನೀರು ಮುಂತಾದ ನೈಸರ್ಗಿಕ ಸಂಪನ್ಮೂಲಗಳನ್ನು ಈವರೆಗೆ ಬಳಸಿರುವ ಪರಿಯನ್ನು ವಿಶ್ಲೇಷಿಸಿದರೆ ಸಂವಿಧಾನದ ಈ ಕರ್ತವ್ಯದ ಪಾಲನೆಯ ವಿಷಯದಲ್ಲಿ ನಮ್ಮ ಕರ್ತವ್ಯ ಚ್ಯುತಿ ನಿಚ್ಚಳವಾಗಿ ಗೋಚರಿಸುತ್ತದೆ.
(೧೦) ಭಾರತೀಯ ವಿದ್ಯುತ್ ಕಾಯ್ದೆ ೨೦೦೩, ಕರ್ನಾಟಕ ವಿದ್ಯುತ್ ಸುಧಾರಣಾ ಕಾಯ್ದೆ ೨೦೦೦, ಮತ್ತು ರಾಷ್ಟ್ರೀಯ ವಿದ್ಯುತ್ ನೀತಿಗಳಲ್ಲಿ ಪ್ರತಿಪಾದಿಸಿರುವ ಪ್ರಮುಖ ಅಂಶಗಳಾದ ದಕ್ಷತೆ, ಆರ್ಥಿಕ ಮಿತವ್ಯಯ, ನೈಸರ್ಗಿಕ ಸಂಪನ್ಮೂಲಗಳ ಜವಾಬ್ದಾರಿಯುತವಾದ ಬಳಕೆ, ಗ್ರಾಹಕರ ಹಿತರಕ್ಷಣೆ, ನಂಬಲರ್ಹವಾದ ವಿದ್ಯುತ್ ಸರಬರಾಜು, ಪರಿಸರ ಸಂರಕ್ಷಣೆ ಮುಂತಾದ ವಿಷಯಗಳಲ್ಲಿ ನಮ್ಮ ರಾಜ್ಯದ ವಿದ್ಯುತ್ ಕ್ಷೇತ್ರದಲ್ಲಿನ ವಿಫಲತೆಯು ಆತಂಕ ಹುಟ್ಟಿಸಿದೆ.
(೧೧) ರಾಷ್ಟ್ರೀಯ ಅರಣ್ಯ ನೀತಿಯಲ್ಲಿ ಭೂ ಭಾಗದ ಶೇಕಡ ೩೩% ರಷ್ಟು ಪ್ರದೇಶದಲ್ಲಿ ಅರಣ್ಯ ಮತ್ತು ಮರಗಳಿರುವುದು ಅವಶ್ಯಕವೆಂದು ಹೇಳಿದ್ದರೆ, ರಾಜ್ಯದಲ್ಲಿ ಪ್ರಸಕ್ತ ಅರಣ್ಯ ಮತ್ತು ಮರಗಳಿರುವ ಭೂ ಭಾಗವು ಶೇಕಡ ೨೦% ಕ್ಕಿಂತ ಕಡಿಮೆಯಿರುವುದರಿಂದ ವಿದ್ಯುತ್ ಉತ್ಪಾದನೆ ಹಾಗೂ ಸಾಗಾಣಿಕೆಗೆ ಹೆಚ್ಚು ಹೆಚ್ಚು ಅರಣ್ಯ ಭೂಮಿಯನ್ನು ಬಳಸುವುದು ಸಂವಿಧಾನ ವಿರೋಧಿ ಕ್ರಮವಾಗಿದೆ.
(೧೨) ನಿಸರ್ಗವನ್ನು ಸಂರಕ್ಷಿಸುವ ಪ್ರಯತ್ನದಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ೧೯೮೨ ರಲ್ಲಿ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿತ್ತು. ಅದರಂತೆ ಕೆಲವು ಮಾರ್ಗದರ್ಶಿ ಸೂತ್ರಗಳು ಹೀಗಿವೆ: (ಅ) ನಿಸರ್ಗಕ್ಕೆ ಸರಿಪಡಿಸಲಾರದಷ್ಟು ಹಾನಿಯಾಗುವ ಚಟುವಟಿಕೆಗಳನ್ನು ನಿರ್ಬಂಧಿಸಬೇಕು; (ಆ) ನಿಸರ್ಗಕ್ಕೆ ಗಣನೀಯವಾದ ಅಪಾಯದ ಶಂಕೆಯಿರುವ ಸಂದರ್ಭದಲ್ಲಿ ಕೂಲಂಕಷವಾದ ಅಧ್ಯಯನ ನಡೆಸಿ, ಅಂತಹ ಚಟುಟಿಕೆಗಳಿಂದ ಆಗುವ ಲಾಭವು ನಷ್ಟಕ್ಕಿಂತಲೂ ಗಣನೀಯ ಎನ್ನಿಸದಿದ್ದರೆ, ಅಥವಾ ನಿಸರ್ಗಕ್ಕೆ ಆಗಬಹುದಾದ ಅಪಾಯದ ಬಗ್ಗೆ ಪೂರ್ಣ ತಿಳುವಳಿಕೆಯಿಲ್ಲದಿದ್ದರೆ ಅಂತಹ ಚಟುವಟಿಕೆಗಳನ್ನು ನಿಲ್ಲಿಸಬೇಕು. ಇಲ್ಲಿಯವರೆಗೆ ವಿದ್ಯುತ್ ಕ್ಷೇತ್ರದಲ್ಲಿನ ಯೋಜನೆಗಳನ್ನು ಪರಾಮರ್ಶಿಸಿದಾಗ ಬಹುತೇಕ ಯೋಜನೆಗಳಲ್ಲಿ ಈ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗುತ್ತದೆ.
(೧೩) ದೊಡ್ಡ ಅಣೆಕಟ್ಟುಗಳಿಂದ ಜೀವ ವೈವಿಧ್ಯದ ಮೇಲೆ ಆಗುವ ದುಷ್ಪರಿಣಾಮಗಳು ಎಂಬ ಅಂತರ ರಾಷ್ಟ್ರೀಯ ಸ್ತರದ ವರದಿಯಂತೆ ಪರಿಸರದಿಂದ ನಮಗೆ ಲಭ್ಯವಾಗುವ ಸರಕುಗಳ ಮತ್ತು ಸೇವೆಗಳ ಒಟ್ಟು ಮೌಲ್ಯವು ಪ್ರಪಂಚದ ವಾರ್ಷಿಕ ಉತ್ಪನ್ನದ ಸುಮಾರು ಎರಡರಷ್ಟಾಗುತ್ತದೆ. ಇದರ ಹಿನ್ನೆಲೆಯಲ್ಲಿ ನಮ್ಮ ರಾಜ್ಯದಲ್ಲಿನ ಜೀವ ವೈವಿಧ್ಯದ ಒಟ್ಟು ಆರ್ಥಿಕ ಮೌಲ್ಯವು ರಾಜ್ಯದ ವಾರ್ಷಿಕ ಉತ್ಪನ್ನದಷ್ಟು ಎಂದೇ ಅಂದಾಜು ಮಾಡಿದರೂ ಸಾಕು, ಸತತವಾಗಿ ನಶಿಸುತ್ತಿರುವ ಜೀವ ವೈವಿಧ್ಯದಿಂದ ರಾಜ್ಯಕ್ಕೆ ಒದಗುತ್ತಿರುವ ಅಪಾರ ನಷ್ಟದ ಅರಿವಾಗುತ್ತದೆ. ಜೀವ ವೈವಿಧ್ಯಕ್ಕೆ ಸಂಬಂಧಿಸಿದ ಅಂತಾರಾಷ್ಟ್ರೀಯ ಒಡಂಬಡಿಕೆಯೊಂದರ ಅನ್ವಯ ಜೀವ ವೈವಿಧ್ಯದ ಸಣ್ಣ ಸಣ್ಣ ಅಂಗಗಳು ಅಳಿದು ಹೋಗುವ ಮೊದಲೇ ಅವುಗಳನ್ನು ಸಂರಕ್ಷಿಸುವುದು ಸೂಕ್ತವಾದ ಮುನ್ನೆಚ್ಚರಿಕೆಯ ಕ್ರಮ.
(೧೪) ಭೂಮಿಯ ತಾಪಮಾನ ಹೆಚ್ಚಳ ಮತ್ತು ಹವಾಮಾನ ವೈಪರೀತ್ಯವನ್ನು ಕಡಿಮೆಗೊಳಿಸುವಲ್ಲಿ ಅರಣ್ಯಗಳ ಪಾತ್ರವು ಬಹು ಮುಖ್ಯ ಎಂಬುದು ಅಂತರ ರಾಷ್ಟ್ರೀಯ ವೇದಿಕೆಗಳಲ್ಲಿ ಖಚಿತಗೊಂಡಿದೆ. ಈ ಹಿನ್ನೆಲೆಯಲ್ಲಿ ನಮ್ಮ ಅರಣ್ಯಗಳ ವಿಸ್ತಾರ ಮತ್ತು ಗುಣ ಮಟ್ಟ ಕಡಿಮೆಯಾಗುತ್ತಿರುವುದು ಬಹಳ ಆತಂಕದ ವಿಷಯವಾಗಿದೆ. ನಮ್ಮ ಅರಣ್ಯಗಳನ್ನು ಸಂರಕ್ಷಿಸುವ ಸಲುವಾಗಿ ರಾಜ್ಯಗಳಿಗೆ ಆರ್ಥಿಕ ಉತ್ತೇಜನವನ್ನು ನೀಡಲು ಕೇಂದ್ರ ಸರ್ಕಾರವು ಇತ್ತೀಚೆಗೆ ಚಿಂತನೆ ನಡೆಸಿದ್ದನ್ನು ಗಮನಿಸಿಯಾದರೂ ನಮಗೆ ಅರಣ್ಯಗಳ ಮಹತ್ವದ ಅರಿವಾಗಬೇಕಾಗಿದೆ.
ಸುಸ್ಥಿರ ವಿದ್ಯುತ್ ಸರಬರಾಜಿನೆಡೆಗೆ : ನವೀಕರಿಸಬಹುದಾದ ಇಂಧನ ಮೂಲಗಳು ಮತ್ತು ಇತರೆ ಪರ್ಯಾಂಯಗಳು
ವಿದ್ಯುತ್ ಶಕ್ತಿ ರಂಗದ ಈ ಎಲ್ಲ ಸಮಸ್ಯೆಗಳಿಗೆ ಸುಸ್ಠಿರ ಪರಿಹಾರ ಪಡೆಯುವ ದಿಸೆಯಲ್ಲಿ ಈ ರಂಗದಲ್ಲಿನ ಪ್ರಸಕ್ತ ಧೋರಣೆಗಳಲ್ಲಿ ಮೂಲಭೂತ ಬದಲಾವಣೆಯ ಅವಶ್ಯಕತೆಯನ್ನು ರಾಜ್ಯವು ಮೊದಲು ಮನಗಾಣಬೇಕು. ವಿದ್ಯುತ್ತಿನ ನಿಜವಾದ ಬೇಡಿಕೆ ಎಷ್ಟಿದೆ? ವಿದ್ಯುತ್ತಿನ ಉತ್ಪಾದನೆ, ವಿತರಣೆ ಮತ್ತು ಬಳಕೆಯಲ್ಲಿನ ನಮ್ಮ ರಾಜ್ಯದ ದಕ್ಷತೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೊಯ್ಯಲು ಸಾಧ್ಯವಿಲ್ಲವೇ? ವಿದ್ಯುತ್ತಿನ ವಿವಿಧ ಗ್ರಾಹಕರಿಗೆ ಮಾರಾಟ ದರ ಸೂಕ್ತವಾಗಿದೆಯೇ? ಸಾಂಪ್ರದಾಯಿಕ ಇಂಧನ ಮೂಲಗಳಿಂದ ನಮಗೆ ಸುಸ್ಥಿರವಾಗಿ/ಸತತವಾಗಿ ವಿದ್ಯುತ್ ದೊರೆಯುತ್ತದೆಯೇ? ಅವುಗಳಿಗೆ ಸೂಕ್ತ ಪರ್ಯಾಯಗಳಿವೆಯೇ? ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಅಸಮಾನತೆಯನ್ನು ಹೋಗಲಾಡಿಸುವುದು ಹೇಗೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರವನ್ನು ಪಡೆಯಬೇಕಿದೆ.
(೧೫) ವಿದ್ಯುತ್ತಿನ ನಿಜವಾದ ಬೇಡಿಕೆ ಎಷ್ಟಿದೆ ಎಂಬುದರ ಬಗ್ಗೆ ತಜ್ಞರಲ್ಲೇ ಒಮ್ಮತವಿಲ್ಲ. ಈ ವಿಚಾರದಲ್ಲಿ ಸರ್ಕಾರದ ವಿವಿಧ ಅಂಗಗಳೂ, ಸಚಿವರೂ ಬೇರೆ ಬೇರೆ ಲೆಕ್ಕಗಳನ್ನು ನೀಡುತ್ತಿದ್ದಾರೆ. ವಿದ್ಯುತ್ ಕಂಪನಿಗಳೂ ತಮ್ಮ ಅನುಕೂಲಕ್ಕಾಗಿ ಬೇಡಿಕೆಯನ್ನು ಉತ್ಪ್ರೇಕ್ಷೆ ಮಾಡುತ್ತಿದ್ದಾರೆ ಎಂಬ ವಾದವೂ ಇದೆ. ನಮ್ಮ ರಾಜ್ಯದಲ್ಲಿ ಸಾಂಪ್ರದಾಯಿಕ ವಿದ್ಯುತ್ತಿನ ಉತ್ಪಾದನಾ ಸಾಮರ್ಥ್ಯಕ್ಕೆ ಮಿತಿ ಇರುವುದರಿಂದ ವಿದ್ಯುತ್ತಿನ ನಿಜವಾದ (ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ಪೂರಕವಾದ) ಬೇಡಿಕೆಯನ್ನು ಸಾಧ್ಯವಾದ ಮಟ್ಟಿಗೆ ಮಿತಿಗೊಳಿಸುವವರೆಗೂ ವಿದ್ಯುತ್ ಉತ್ಪಾದನೆ ಕ್ಷೇತ್ರದಲ್ಲಿನ ಸಮಸ್ಯೆಗಳು ಮುಂದುವರೆಯುತ್ತವೆ ಎಂಬುದಾಗಿ ತಜ್ಞರ ಸಹಮತವಾಗಿದೆ.
(೧೬) ಮಾಧ್ಯಮಗಳಲ್ಲಿ ಅಥವ ಸರ್ಕಾರದ ವರದಿಗಳಲ್ಲಿ ಸಾಮಾನ್ಯವಾಗಿ ಉಲ್ಲೇಖವಾಗುವ ವಿದ್ಯುತ್ತಿನ ಬೇಡಿಕೆ ನೈಜವಾದದ್ದೇ ? ಈ ಎಲ್ಲ ಬೇಡಿಕೆಯೂ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಅವಶ್ಯವೇ ? – ಈ ಪ್ರಶ್ನೆಗಳನ್ನು ಪ್ರಾಮಾಣಿಕವಾಗಿ ಪರಿಶೀಲಿಸಿದಾಗ ಅಚ್ಚರಿಯ ಸಂಗತಿಗಳು ಹೊರಬೀಳುತ್ತವೆ: ರಾತ್ರಿ ಹೊತ್ತಿನ ಕ್ರೀಡೆಗಳು; ಬೆಂಗಳೂರು, ಮೈಸೂರಿನಂತಹ ತಂಪಾದ ನಗರಗಳಲ್ಲೂ ಹವಾ ನಿಯಂತ್ರಿತ ನಿವಾಸಗಳು, ವಸತಿ ಸಮುಚ್ಚಯಗಳು ಹಾಗೂ ವ್ಯಾಪಾರ ಮಳಿಗೆಗಳು; ವ್ಯಾಪಾರ ಮಳಿಗೆಗಳಲ್ಲಿನ ಮಿತಿಮೀರಿದ ಅಲಂಕಾರಿಕ ದೀಪಗಳು; ಜಾಹಿರಾತು ಫಲಕಗಳಲ್ಲಿನ ಅತಿ ಪ್ರಕಾಶಮಾನವಾದ ದೀಪಗಳು, ಇಂತಹ ಹಲವಾರು ಉದ್ದೇಶಗಳಿಗೆ ಗಣನೀಯ ಪ್ರಮಾಣದಲ್ಲಿ ವಿದ್ಯುತ್ತಿನ ಬಳಕೆಯಾಗುತ್ತಿದೆ. ಈ ಚಟುವಟಿಕೆಗಳಿಂದ ಎಂತಹ ಅಭಿವೃದ್ಧಿಯಾಗುತ್ತಿದೆ ಮತ್ತು ಸಮಾಜದ ಯಾವ ವರ್ಗದವರಿಗೆ ಉಪಯೋಗವಾಗುತ್ತಿದೆ ಎಂಬುದನ್ನು ವಸ್ತುನಿಷ್ಠವಾಗಿ ವಿಮರ್ಶಿಸಿದರೆ ನಮ್ಮ ವಿದ್ಯುತ್ ಬೇಡಿಕೆಯನ್ನು ತಗ್ಗಿಸಲು ಅಪಾರ ಅವಕಾಶಗಳಿವೆ ಎಂಬುದು ನಿಚ್ಚಳವಾಗುತ್ತದೆ.
ಸೂರ್ಯನ ಬೆಳಕಿನಲ್ಲೂ ಬೆಳಗುವ ಬೀದಿ ದೀಪಗಳು; ರಾತ್ರಿ ಹೊತ್ತಿನಲ್ಲಿ ಅತಿಹೆಚ್ಚು ಪ್ರಕಾಶಮಾನವಾದ ಬೀದಿ ದೀಪಗಳು; ಮನೆಗಳಲ್ಲಿ, ಕಛೇರಿಗಳಲ್ಲಿ, ಕಾರ್ಖಾನೆಗಳಲ್ಲಿ, ವ್ಯಾಪಾರ ಮಳಿಗೆಗಳಲ್ಲಿ, ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅವಶ್ಯಕವಾದ್ದಕ್ಕಿಂತ ಹೆಚ್ಚು ಪ್ರಕಾಶಮಾನವಾದ ದೀಪಗಳು ಹಾಗೂ ಅನಿವಾರ್ಯತೆಯಿಲ್ಲದ ಸಮಯದಲ್ಲೂ ಬೆಳಗುವ ದೀಪಗಳು – ಇವೆಲ್ಲವನ್ನೂ ನಿಯಂತ್ರಿಸುವುದು ನಮ್ಮ ವಿದ್ಯುತ್ ಬೇಡಿಕೆಯನ್ನು ತಗ್ಗಿಸಲು ಇರುವ ಅಪಾರ ಅವಕಾಶಗಳಾಗಿವೆ. ಕೇಂದ್ರ ಸರ್ಕಾರದ ಇಂಧನ ಮಂತ್ರಾಲಯದ ಲೆಕ್ಕಾಚಾರದಂತೆ ಬೆಳಕಿಗಾಗಿ ಬಳಕೆಯಾಗುತ್ತಿರುವ ವಿದ್ಯುತ್ತಿನ ಪ್ರಮಾಣವೇ ದೇಶದ ಒಟ್ಟು ವಿದ್ಯುತ್ ಬಳಕೆಯ ಸುಮಾರು ಶೇಕಡ ೧೬ ರಿಂದ ೧೯ ರಷ್ಟು; ಇದರಲ್ಲಿ ವ್ಯರ್ಥವಾಗುತ್ತಿರುವ ವಿದ್ಯುತ್ತಿನ ರೂಪದಲ್ಲಿ ಒಟ್ಟು ಬಳಕೆಯ ಶೇಕಡ ಸುಮಾರು ೫ ರಿಂದ ೮ ರಷ್ಟನ್ನು ಉಳಿಸಬಹುದಾಗಿದೆ. ಹೆಚ್ಚು ದಕ್ಷತೆಯ ಸಿ.ಎಫ್.ಎಲ್ ಮತ್ತು ಎಲ್.ಇ.ಡಿ ದೀಪಗಳ ಉಪಯೋಗದಿಂದ ಮತ್ತು ಸಾರ್ವಜನಿಕ ತಿಳಿವಳಿಕೆ ಅಭಿಯಾನದಿಂದ ಇಂತಹ ಉಳಿತಾಯವನ್ನು ತುರ್ತಾಗಿ ಸಾಧಿಸಲೇಬೇಕಾದ ಅನಿವಾರ್ಯತೆ ಬಂದಿದೆ.
(೧೭) ನಮ್ಮ ರಾಜ್ಯದಲ್ಲಿ /ದೇಶದಲ್ಲಿ ವಿದ್ಯುತ್ತಿನ ಒಟ್ಟು ಬಳಕೆಯ ಶೇಕಡ ಸುಮಾರು ೩೫ ರಿಂದ ೪೦ ರಷ್ಟು ಕೃಷಿ ಕ್ಷೇತ್ರವೊಂದರಲ್ಲೇ ಬಳಕೆಯಾಗುತ್ತಿದ್ದು ಈ ಕ್ಷೇತ್ರದಲ್ಲಿ ವಿದ್ಯುತ್ ಬಳಕೆಯ ದಕ್ಷತೆಯು ಶೇಕಡ ಸುಮಾರು ೫೦ ರಷ್ಟು ಮಾತ್ರವಿದೆ. ರೈತ ಸಮುದಾಯಕ್ಕೆ ಅವಶ್ಯವಾದ ಮಾರ್ಗದರ್ಶನಗಳ ಜೊತೆಗೇ ನೀರಾವರಿಗಾಗಿ ಅವರು ಉಪಯೋಗಿಸುವ ವಿದ್ಯುತ್ ಯಂತ್ರಗಳ ದಕ್ಷತೆಯನ್ನು ಹೆಚ್ಚಿಸುವುದರ ಮೂಲಕ ಮತ್ತು ಅತಿ ಕಡಿಮೆ ಘರ್ಷಣೆಯುಳ್ಳ ನೀರಿನ (PVC) ಕೊಳವೆಗಳ ಉಪಯೋಗದ ಮೂಲಕ ಕೃಷಿ ಕ್ಷೇತ್ರದಲ್ಲಿ ವಿದ್ಯುತ್ ಪೋಲಾಗುವುದನ್ನು ಮಿತಿಗೊಳಿಸಲು ಸಾಧ್ಯವಿದ್ದು ಇದರಿಂದಾಗಿ ನಮ್ಮ ರಾಜ್ಯದಲ್ಲಿ ವಿದ್ಯುತ್ತಿನ ಒಟ್ಟು ಬಳಕೆಯ ಶೇಕಡ ಸುಮಾರು ೧೫ ರಿಂದ ೧೯ ರಷ್ಟು ಉಳಿಸಲು ಅವಕಾಶವಿದೆ. ಇದಕ್ಕಾಗಿ ಬಂಡವಾಳ ವೆಚ್ಚವಾಗುತ್ತದಾದರೂ, ಸರ್ಕಾರ ಮತ್ತು ರೈತ ಸಮುದಾಯಕ್ಕೆ ಒಂದು ಸಲ ಮಾತ್ರ ತಗಲುವ ಈ ವೆಚ್ಚದಿಂದ ಅಪಾರ ಪ್ರಮಾಣದ ಲಾಭವಿದೆ; ಇದರ ಪ್ರಯೋಜನಗಳಂತೂ ನಿರಂತರವಾಗಿವೆ. ಇದರಿಂದಾಗಿ ಸರ್ಕಾರಕ್ಕೆ, ರೈತ ಸಮುದಾಯಕ್ಕೆ ಹಾಗೂ ವಿಶಾಲ ಸಮಾಜಕ್ಕ್ಕೆ ನಿರಂತರವಾಗಿ ತಗಲುವ ವೆಚ್ಚಗಳು ಉಳಿತಾಯವಾಗುತ್ತವೆ, ಮತ್ತು ವಿದ್ಯುತ್ ಸರಬರಾಜಿನ ವ್ಯವಸ್ಥೆಯ ಮೇಲೆ ಈಗಿರುವ ಭಾರಿ ಒತ್ತಡವೂ ಕಡಿಮೆಯಾಗುತ್ತದೆ.
(೧೮) ಕಾರ್ಖಾನೆಗಳಲ್ಲಿ ಮತ್ತು ಸಣ್ಣ ಸಣ್ಣ ಉದ್ದಿಮೆಗಳಲ್ಲಿ ವಿದ್ಯುತ್ ಬಳಕೆಯಲ್ಲಿನ ದಕ್ಷತೆಯನ್ನು ಹೆಚ್ಚಿಸುವುದರ ಮೂಲಕ ರಾಜ್ಯದಲ್ಲಿ ವಿದ್ಯುತ್ತಿನ ಒಟ್ಟು ಬಳಕೆಯಲ್ಲಿ ಶೇಕಡ ಸುಮಾರು ೫ ರಿಂದ ೮ ರಷ್ಟು ಉಳಿಸಲು ಅವಕಾಶಗಳಿವೆ ಎಂದು ವರದಿಗಳು ತಿಳಿಸುತ್ತವೆ. ಇದರೆಡೆಗೆ ಹೆಚ್ಚು ಒತ್ತು ನೀಡಿದಲ್ಲಿ ನಮ್ಮ ವಿದ್ಯುತ್ ಬೇಡಿಕೆಯನ್ನು ತಗ್ಗಿಸಲು ವಿಪುಲ ಅವಕಾಶವಿದೆ.
(೧೯) ರಾಜ್ಯದಲ್ಲಿ ಲಭ್ಯವಿರುವ ಒಟ್ಟು ವಿದ್ಯುತ್ತಿನ ಶೇಕಡ ಸುಮಾರು ೨೫ ರಿಂದ ೩೦ ರಷ್ಟು ಸಾಗಣೆ ಮತ್ತು ವಿತರಣೆಯಲ್ಲಿ ವ್ಯಯವಾಗುತ್ತಿದೆ. ಅಂತರ ರಾಷ್ಟ್ರೀಯ ಸ್ತರದಲ್ಲಿ ಈ ಕಾರಣದಿಂದ ವ್ಯಯವಾಗುತ್ತಿರುವ ವಿದ್ಯುತ್ತಿನ ಪ್ರಮಾಣವು ಕೇವಲ ೫ ರಿಂದ ೮ ರಷ್ಟಿದ್ದು, ಈ ದಿಸೆಯಲ್ಲಿ ಸರ್ಕಾರವು ಪ್ರಾಮಾಣಿಕ ಪ್ರಯತ್ನ ಮಾಡಿದರೆ ನಮ್ಮ ರಾಜ್ಯದಲ್ಲಿ ಶೇಕಡ ಸುಮಾರು ೧೫ ರಿಂದ ೨೦ ರಷ್ಟು ವಿದ್ಯುತ್ತನ್ನು ಅತಿ ಕಡಿಮೆ ವೆಚ್ಚದಲ್ಲಿ ಉಳಿಸಬಹುದು. ಇಂತಹ ಪ್ರಕ್ರಿಯೆಗೆ ತಗಲುವ ವೆಚ್ಚವು ಹೊಸದಾದ ವಿದ್ಯುತ್ ಉತ್ಪಾದನಾ ಕೇಂದ್ರವೊಂದರ ವೆಚ್ಚಕ್ಕೆ ಹೋಲಿಕೆಯಲ್ಲಿ ಶೇಕಡ ಸುಮಾರು ೨೦ ರಷ್ಟು ಮಾತ್ರ; ಅಲ್ಲದೆ ಈ ಪ್ರಕ್ರಿಯೆಯಲ್ಲಿ ಯಾವುದೇ ಸಾಮಾಜಿಕ ಮತ್ತು ಪರಿಸರ ಸಂಬಂಧಿ ಸಮಸ್ಯೆಗಳಿಲ್ಲದಿರುವುದರಿಂದ ಇದಕ್ಕೆ ಬಹಳ ಪ್ರಾಮುಖ್ಯವನ್ನು ನೀಡಬೇಕಿದೆ.
ಈ ಎಲ್ಲ ವಿಧಾನಗಳಿಂದ ಉಳಿತಾಯವಾಗುವ ವಿದ್ಯುತ್ತಿನ ಪ್ರಮಾಣವು ರಾಜ್ಯದಲ್ಲಿ ಲಭ್ಯವಿರುವ ಒಟ್ಟು ವಿದ್ಯುತ್ತಿನ ಶೇಕಡ ಸುಮಾರು ೪೦ ರಿಂದ ೫೦ ರಷ್ಟಾಗಬಹುದಾಗಿದ್ದು ನಮ್ಮ ರಾಜ್ಯದ ವಿದ್ಯುತ್ ಸರಬರಾಜಿನ ವ್ಯವಸ್ಥೆಯ ಮೇಲೆ ಅತ್ಯಧಿಕ ಪ್ರಮಾಣದಲ್ಲಿ ಧನಾತ್ಮಕ ಪರಿಣಾಮ ಬೀರಲು ಸಾಕಷ್ಟು ಅವಕಾಶವಿದೆ. ಪ್ರಸಕ್ತ ನಮ್ಮ ರಾಜ್ಯದಲ್ಲಿ ವಿದ್ಯುತ್ ಕೊರತೆಯ ಪ್ರಮಾಣವು ಶೇಕಡ ೧೫ ರಷ್ಟಿದೆ ಎಂದರೂ ಸಹ ಮೇಲೆ ಹೇಳಿದ ಸುಧಾರಣಾ ಕ್ರಮಗಳಿಂದ ಈ ಕೊರತೆಯನ್ನು ಸಂಪೂರ್ಣ ನೀಗಿಸಿ ಮುಂದಿನ ಕೆಲವು ವರ್ಷಗಳ ವಿದ್ಯುತ್ ಬೇಡಿಕೆಯನ್ನೂ ಸಮಾಧಾನಕರವಾಗಿ ಈಡೇರಿಸಬಹುದು. ಸೋಜಿಗದ ಸಂಗತಿಯೆಂದರೆ ಇಂತಹ ಹಲವಾರು ಸುಧಾರಣಾ ಕ್ರಮಗಳಿಗೆ ತಗಲುವ ಒಟ್ಟು ವೆಚ್ಚವು ಹೊಸದಾದ ವಿದ್ಯುತ್ ಉತ್ಪಾದನಾ ಕೇಂದ್ರಗಳ ವೆಚ್ಚದ ಅರ್ಧಕ್ಕಿಂತಲೂ ಕಡಿಮೆಯಾಗಬಹುದು. ಈ ವಿಚಾರಗಳನ್ನು ತಜ್ಞರು ೧೯೮೦ರ ದಶಕದಿಂದಲೇ ಹೇಳುತ್ತ ಬಂದಿದ್ದರೂ ರಾಜ್ಯ ಸರ್ಕಾರಗಳು ಈ ದಿಸೆಯಲ್ಲಿ ಕಾರ್ಯ ಪ್ರವೃತ್ತರಾಗದಿರುವುದು ಅಕ್ಷಮ್ಯವಾಗಿದೆ. ವಿದ್ಯುತ್ ಕ್ಷೇತ್ರದ ದಕ್ಷತೆಯನ್ನು ಹೆಚ್ಚಿಸುವ ಇಂತಹ ಸುಲಭೋಪಾಯಗಳ ಪೂರ್ಣ ಪ್ರಯೋಜನ ಪಡೆಯದೆಯೇ ಪ್ರತಿ ವರ್ಷ ಸಾವಿರಾರು ಕೋಟಿಗಳಷ್ಟು ಹಣವನ್ನೂ ಮತ್ತು ನೈಸರ್ಗಿಕ ಸಂಪತ್ತನ್ನೂ ಹೊಸದಾದ ವಿದ್ಯುತ್ ಉತ್ಪಾದನಾ ಕೇಂದ್ರಗಳಿಗಾಗಿ ವ್ಯಯ ಮಾಡುವುದು ನಮ್ಮ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಮಾರಕವಾಗುತ್ತದೆ ಎಂಬ ಅಂಶವನ್ನು ಸರ್ಕಾರವು ಈಗಲೂ ಒಪ್ಪದಿದ್ದರೆ ಸಮಾಜ ದ್ರೋಹವೆನ್ನಿಸಿಕೊಳ್ಳುತ್ತದೆ.
ಮೇಲೆ ಹೇಳಿದ ಸುಧಾರಣಾ ಕ್ರಮಗಳ ಜೊತೆಗೇ ನವೀಕರಿಸಬಹುದಾದ (ಖeಟಿeತಿಚಿbಟe) ಇಂಧನ ಮೂಲಗಳಿಂದಲೂ ನಮಗೆ ಮುಂದಿನ ವರ್ಷಗಳಲ್ಲಿ ಬೇಕಾದ ಬಹುತೇಕ ಹೆಚ್ಚುವರಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ದೊರಕಲು ಸಾಧ್ಯ; ಆದ್ದರಿಂದ ಸಾಮಾಜಿಕ ಹಾಗೂ ಪರಿಸರ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತಿರುವ ಸಾಂಪ್ರದಾಯಿಕ (ನವೀಕರಿಸಲಾಗದ) ವಿದ್ಯುತ್ ಉತ್ಪಾದನಾ ವ್ಯವಸ್ಥೆಗಳಾದ ಅಣೆಕಟ್ಟು ಆಧಾರಿತ ಜಲ ವಿದ್ಯುತ್, ಕಲ್ಲಿದ್ದಲು ಆಧಾರಿತ ವಿದ್ಯುತ್ ಮತ್ತು ಅಣುಶಕ್ತಿ ಆಧಾರಿತ ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸಲು ಯೋಚಿಸುವ ಮೊದಲು ಸಂಬಂಧಪಟ್ಟ ಎಲ್ಲ ವಿಷಯಗಳಲ್ಲೂ ವಸ್ತುನಿಷ್ಠವಾದ ಕೂಲಂಕಷ ಅಧ್ಯಯನವನ್ನು ನಡೆಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ.
(೨೦) ಉಷ್ಣ ವಲಯದ ದೇಶದ ಭಾಗವಾದ್ದರಿಂದ ಕರ್ನಾಟಕದಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳು ವಿಪುಲವಾಗಿದ್ದು ಅವುಗಳ ಸದುಪಯೋಗದಿಂದ ವಿದ್ಯುತ್ ಸರಬರಾಜಿನ ವ್ಯವಸ್ಥೆಯ ಮೇಲೆ ಈಗಿರುವ ಭಾರೀ ಒತ್ತಡವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಲು ಸಾಧ್ಯವಿದೆ.
ನಮ್ಮ ರಾಜ್ಯದಲ್ಲಿ ಪವನ ಶಕ್ತಿ, ಕಿರು ಜಲ ವಿದ್ಯುತ್, ಸೌರ ಶಕ್ತಿ, ಜೈವಿಕ ಇಂಧನ ಮೂಲಗಳು ಮತ್ತು ಸಮುದ್ರದ ಅಲೆಗಳ ಶಕ್ತಿ ಮೂಲಗಳು – ಇವುಗಳ ಒಟ್ಟು ಸಾಮರ್ಥ್ಯವು ಅಪಾರವಾಗಿದೆ; ಇವುಗಳನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಪರಿಣಾಮಕಾರಿಯಾಗಿ ಬಳಸುವುದರಿಂದ ವಿದ್ಯುತ್ ಕ್ಷೇತದ ಬಹುತೇಕ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ, ಹಾಗೂ ಭಾರಿ ಗಾತ್ರದ ಕೇಂದ್ರೀಕೃತ ಸ್ಥಾವರಗಳ ಅನಿವಾರ್ಯತೆಯಿಂದ ಖಂಡಿತವಾಗಿಯೂ ಹೊರಬರಬಹುದು.
(೨೧) ನವೀಕರಿಸಬಹುದಾದ ಇಂಧನ ಮೂಲಗಳು ಸಣ್ಣ ಸಣ್ಣ ಗಾತ್ರಗಳಲ್ಲಿಯೇ ನಮ್ಮ ಸಮಾಜಕ್ಕೆ ಅತ್ಯಂತ ಪ್ರಯೋಜನಕಾರಿಯಾ ಗುವಂತಹವು. ವಿದ್ಯುತ್ ಸರಬರಾಜಿನ ಪ್ರಸಕ್ತ ವ್ಯವಸ್ಥೆಯ ಮುಖ್ಯ ಸಮಸ್ಯೆಗಳನ್ನು (ಭಾರಿ ಗಾತ್ರದ ಕೇಂದ್ರೀಕೃತ ಸ್ಥಾವರಗಳ ದುಷ್ಪರಿಣಾಮಗಳು ಮತ್ತು ಸಾಗಣೆ ಮತ್ತು ವಿತರಣೆಯಲ್ಲಿನ ನಷ್ಟಗಳು) ಮನೆಯ ಮೇಲೆ ಸ್ಥಾಪಿಸಲ್ಪಟ್ಟ ಸೌರ ವಿದ್ಯುತ್ ಕೋಶಗಳು / ಪವನ ಯಂತ್ರಗಳು, ಸಮುದಾಯ ಕೇಂದ್ರಗಳಲ್ಲಿ ಸ್ಥಾಪಿಸಲ್ಪಟ್ಟ ಸೌರ ವಿದ್ಯುತ್ ಕೋಶಗಳು ಅಥವ ಜೈವಿಕ ಇಂಧನ ಸ್ಥಾವರಗಳ ಮೂಲಕ ನಿವಾರಿಸಬಹುದು. ಭಾರಿ ಗಾತ್ರದ ಕೇಂದ್ರೀಕೃತ ಸ್ಥಾವರಗಳಿಂದ ಸಮಾಜಕ್ಕೆ ಹಾಗೂ ಸರ್ಕಾರಕ್ಕೆ ತಗಲುವ ಅಗಾಧವಾದ ಬಂಡವಾಳವನ್ನೂ; ಅರಣ್ಯಗಳ, ನದಿಗಳ ಅಥವಾ ಕೃಷಿ ಭೂಮಿಯ ಅವನತಿಯನ್ನೂ; ಮತ್ತು ಪರಿಸರದ ಮೇಲಿನ ದುಶ್ಪರಿಣಾಮಗಳನ್ನೂ ಇಂತಹ ಸಣ್ಣ ಪ್ರಮಾಣದ ಸ್ಥಾವರಗಳ ಸಹಾಯದಿಂದ ಅತ್ಯಂತ ಕಡಿಮೆಗೊಳಿಸಬಹುದು. ಇಂತಹ ಸಣ್ಣ ಪ್ರಮಾಣದ ಸ್ಥಾವರಗಳಿಂದ ಮಾತ್ರ ಗ್ರಾಮೀಣ ಪ್ರದೇಶಗಳಲ್ಲಿ ಇಂಧನ ಸ್ವಾವಲಂಬನೆಯು ದೊರೆತು ಅವುಗಳ ಸರ್ವಾಂಗೀಣ ಪ್ರಗತಿ ಸಾಧ್ಯವಾಗುತ್ತದೆ ಹಾಗೂ ನಗರ ಪ್ರದೇಶಗಳಿಗೆ ವಲಸೆ ಹೋಗುವುದು ತಪ್ಪುತ್ತದೆ.
ಕರ್ನಾಟಕದಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳ ಸಾಮರ್ಥ್ಯ
(ಆಧಾರ: ಕೇಂದ್ರ ಸರ್ಕಾರದ ನವೀಕರಿಸಬಹುದಾದ ಇಂಧನ ಮೂಲಗಳ ಇಲಾಖೆ)
ಈ ಎಲ್ಲ ಸುಧಾರಣಾ ಪ್ರಕ್ರಿಯೆಗಳಿಂದ ರಾಜ್ಯದ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಿ ವಿದ್ಯುತ್ ಸರಬರಾಜನ್ನು ಸುಸ್ಥಿರ, ಪರಿಸರ ಸ್ನೇಹಿ, ಮತ್ತು ಜನಪರ ತಳಹದಿಯ ಮೇಲೆ ಸ್ಥಾಪಿಸಬಹುದು. ಭಾರಿ ಗಾತ್ರದ ವಿದ್ಯುತ್ ಉತ್ಪಾದನಾ ಸ್ಥಾವರಗಳ ಸಂಖ್ಯೆಯನ್ನು ಎಷ್ಟು ಹೆಚ್ಚಿಸಿದರೂ ನಗರ ವಾಸಿಗಳ ಮಿತಿಯಿಲ್ಲದ ವಿದ್ಯುತ್ ಬೇಡಿಕೆಯನ್ನು ಈಡೇರಿಸಲು ಸಾಧ್ಯವೇ ಇಲ್ಲ. ಹಾಗೂ ವಿದ್ಯುತ್ ಕ್ಷೇತ್ರದ ಪ್ರಸಕ್ತ ವ್ಯವಹಾರದಲ್ಲಿ ಭ್ರಷ್ಟತೆ ತಾಂಡವವಾಡುತ್ತಿದೆ ಎಂಬ ಸಾರ್ವಜನಿಕರ ಖಚಿತ ಅಭಿಪ್ರಾಯದ ಹಿನ್ನೆಲೆಯಲ್ಲಿ ಸರ್ಕಾರದ ದೃಷ್ಟಿಕೋನವನ್ನು ಅಮೂಲಾಗ್ರವಾಗಿ ಬದಲಾಯಿಸಲೇಬೇಕಾಗಿದೆ.
ಸಾರ್ವಜನಿಕರ ನಿರೀಕ್ಷೆಗಳು
(೨೧) ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮೇಲಿನ ಸಾರ್ವಜನಿಕರ ನಿರೀಕ್ಷೆಗಳು ಕೆಳಕಂಡಂತಿದೆ:
(ಅ) ರಾಜ್ಯದ ವಿದ್ಯುತ್ ಬೇಡಿಕೆ/ಸರಬರಾಜಿನ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸಲು ತಜ್ಞರ ಒಂದು ತಂಡ ರಚಿಸಿ ಪರಿಣಾಮಕಾರಿ ಸಾರ್ವಜನಿಕ ಸಮಾಲೋಚನೆಯ ಮೂಲಕ ಸುಸ್ಥಿರ, ಪರಿಸರ ಸ್ನೇಹಿ, ಮತ್ತು ಜನಪರ ವಿದ್ಯುತ್ ನೀತಿಯನ್ನು ತಯಾರಿಸಬೇಕು.
(ಆ) ರಾಜ್ಯದ ನಿಜವಾದ ವಿದ್ಯುತ್ ಬೇಡಿಕೆಯನ್ನು ಮತ್ತು ಬೇಡಿಕೆಯ ಏರಿಕೆಯ ಗತಿಯನ್ನು ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ಪೂರಕವಾದ ಮತ್ತು ನೈಸರ್ಗಿಕ ಸಂಪನ್ಮೂಲಗಳ ಜವಾಬ್ದಾರಿಯುತವಾದ ಬಳಕೆಯ ಮಿತಿಯ ಹಿನ್ನೆಲೆಯಲ್ಲಿ ಗುರುತಿಸಬೇಕು. ಈ ಹಿನ್ನೆಲೆಯಲ್ಲಿ ವಿದ್ಯುತ್ ಬೇಡಿಕೆಯನ್ನು ಸರ್ವಾಂಗೀಣ ಪ್ರಗತಿಗೆ ಹಿನ್ನಡೆಯಾಗದಂತೆ ಮಿತಿಗೊಳಿಸುವ ವಿಧಾನಗಳನ್ನೂ ಸಹ ಶೀಘ್ರದಲ್ಲಿ ಅನುಷ್ಠಾನಗೊಳಿಸಬೇಕು.
(ಇ) ಸಣ್ಣ ಗಾತ್ರದ ನವೀಕರಿಸಬಹುದಾದ ಇಂಧನ ಸ್ಥಾವರಗಳ ಬಳಕೆಯನ್ನು ರಾಜ್ಯದ ಎಲ್ಲೆಡೆ ಜನಪ್ರಿಯಗೊಳಿಸಲು ಸಾಧ್ಯವಾದ ಪ್ರಯತ್ನಗಳೆಲ್ಲವನ್ನೂ ಮಾಡಬೇಕು. ಅವಶ್ಯವಾದರೆ ಸಹಾಯ ಧನವನ್ನೂ ಪರಿಣಾಮಕಾರಿಯಾಗಿ ಬಳಸಬೇಕು.
(ಈ) ಕಲ್ಲಿದ್ದಲು ಆಧಾರಿತ ಅಥವಾ ಅಣೆಕಟ್ಟು ಆಧಾರಿತ ಜಲ ವಿದ್ಯುತ್ ಅಥವ ಪರಮಾಣು ಇಂಧನ ಆಧಾರಿತ ಉತ್ಪಾದನ ಸ್ಥಾವರಗಳನ್ನು ಸ್ಥಾಪಿಸುವ ಮೊದಲು ಬೇರೆಲ್ಲ ಪರ್ಯಾಯಗಳನ್ನೂ ಸಂಪೂರ್ಣವಾಗಿ ಬಳಸಿ, ನಂತರ ಆಗಿನ ಪರಿಸ್ಥಿತಿಯನ್ನು ವಸ್ತುನಿಷ್ಠವಾಗಿ ಪರಿಶೀಲಿಸಿ ಪರಿಣಾಮಕಾರಿಯಾದ ಸಾರ್ವಜನಿಕ ಸಮಾಲೋಚನೆಯ ಮೂಲಕವೇ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕು.
(ಉ) ವಿದ್ಯುತ್ ಶಕ್ತಿ ಕಂಪನಿಗಳು ದಕ್ಷತೆಯಿಂದ ಹಾಗೂ ಸಾಮಾಜಿಕ ಬದ್ದತೆಯಿಂದ ಕೆಲಸ ನಿರ್ವಹಿಸುವಂತೆ ಮಾಡಲು ಅವುಗಳಿಗೆ ಬೇಕಾದ ಸ್ವಾತಂತ್ರ್ಯವನ್ನು ನೀಡಿ, ಅವುಗಳನ್ನು ಸಮಾಜಕ್ಕೆ ನಿಜವಾದ ಉತ್ತರದಾಯಿಗಳನ್ನಾಗಿಯೂ ಮಾಡಬೇಕು.
ತಮ್ಮ ವಿಶ್ವಾಸಿಗಳಾದ
೧. ಡಾ. ಜಿ. ಎಸ್. ಶಿವರುದ್ರಪ್ಪ, ಕವಿ.
೨. ನ್ಯಾ. ಎಂ. ರಾಮಾ ಜೋಯಿಸ್, ರಾಜ್ಯಸಭಾ ಸದಸ್ಯರು
೩. ಡಾ. ಚಂದ್ರಶೇಖರ ಕಂಬಾರ, ಸಾಹಿತಿ,
೪. ಡಾ. ರಾಜೀವ ತಾರಾನಾಥ, ಸಂಗೀತಗಾರರು
೫. ಪ್ರೊ. ಬಿ. ಎಂ. ಕುಮಾರಸ್ವಾಮಿ, ರಾಷ್ಟ್ರೀಯ ಸಹ ಸಂಚಾಲಕರು, ಸ್ವದೇಶಿ ಜಾಗರಣ ಮಂಚ್
೬. ಶ್ರೀ ನಾಗೇಶ ಹೆಗಡೆ, ಪತ್ರಕರ್ತ, ಸೂಲಿಕೆರೆ
೭. ಶ್ರೀ ಎ.ಎನ್. ಯೆಲ್ಲಪ್ಪರೆಡ್ಡಿ, ಅರಣ್ಯ ಅಧಿಕಾರಿ (ನಿವೃತ್ತ)
೮. ಶ್ರೀ ಬರಗೂರು ರಾಮಚಂದ್ರಪ್ಪ, ಸಾಹಿತಿ.
೯. ಮೇಜರ್ ಜನರಲ್ (ನಿ) ಎಸ್.ಜಿ. ವೊಂಬತ್ಕೆರೆ, ಅಧ್ಯಕ್ಷರು, ಮೈಸೂರು ಗ್ರಾಹಕರ ಪರಿಷತ್
೧೦. ಶ್ರೀ ವೈ.ಬಿ.ರಾಮಕೃಷ್ಣ, ಅಧ್ಯಕ್ಷರು, ಸಮಗ್ರ ವಿಕಾಸ
೧೧. ಶ್ರೀ ಶಂಕರ ಶರ್ಮ, ವಿದ್ಯುತ್ ರಂಗದ ವಿಶ್ಲೇಷಕರು, ತೀರ್ಥಹಳ್ಳಿ
೧೨. ಶ್ರೀ ಜಿ. ಕೃಷ್ಣಪ್ರಸಾದ, ಸಹಜ ಸಮೃದ್ಧ ಸಾವಯವ ಕೃಷಿ ಸಮೂಹ
೧೩. ಶ್ರೀ ಬೇಳೂರು ಸುದರ್ಶನ, ಫ್ರೀಲ್ಯಾನ್ಸ್ ಪತ್ರಕರ್ತ.