ಕನ್ನಡ ಸಾಹಿತ್ಯ ಪರಿಷತ್ತಿನ ೮೨ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ `ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು’ ಎಂಬ ವಿಷಯದ ಬಗ್ಗೆ ಮಾತನಾಡಲು ಅವಕಾಶ ಆಡಿಕೊಟ್ಟ ಸಂಸ್ಥೆಯ ಅಧ್ಯಕ್ಷ ಡಾ|| ಮನು ಬಳಿಗಾರ್ ಅವರಿಗೆ ನನ್ನ ವಂದನೆಗಳು.
ನನ್ನ ಈ ವಿಚಾರ ಮಂಡನೆಯಲ್ಲಿ ಮಾತೃಭಾಷೆ ಮತ್ತು ಮುಕ್ತಜ್ಞಾನ ಎಂಬ ಎರಡು ವಿಷಯಗಳಿವೆ. ಮಾತೃಭಾಷೆಯನ್ನು ನಾವು ತಾಯ್ನುಡಿ ಎಂದೂ ಕರೆಯಬಹುದು; ಪರಿಸರದ ಭಾಷೆ ಎಂಬ ವಿವರಣೆಯೂ ಇದೆ. ಕನ್ನಡದ ಉಪಭಾಷೆಯಾದ ಹವ್ಯಕ ಕನ್ನಡವನ್ನೇ ಬಾಲ್ಯದಿಂದ ಕಲಿತು, ಕನ್ನಡದಲ್ಲೇ ಪ್ರೌಢಶಾಲೆವರೆಗೆ ಓದಿದ ನಾನು ಇಂಗ್ಲಿಶ್ ಭಾಷೆಯನ್ನು ಕೇವಲ ಅನುಭವದಿಂದಲೇ ಕಲಿತಿದ್ದೇನೆ. ಆದರೂ ನಾನು ಇಂದಿಗೂ ಜಾಲತಾಣಗಳಲ್ಲಿ, ಸಮಾಜತಾಣಗಳಲ್ಲಿ ಕನ್ನಡವನ್ನೇ ಬಳಸುತ್ತೇನೆ.
೨೦೧೦ರಲ್ಲಿ ಕರ್ನಾಟಕ ಸರ್ಕಾರದ ಜ್ಞಾನ ಆಯೋಗದ ಯೋಜನೆಯಾದ `ಕಣಜ’ ಅಂತರಜಾಲ ಕನ್ನಡ ಜ್ಞಾನಕೋಶವನ್ನು ಒಂದು ವರ್ಷದ ಕಾಲ ಕಟ್ಟಿ ಬೆಳೆಸಿದ ಕಾಲಘಟ್ಟದಲ್ಲಿ ನಾನು ಮುಕ್ತಜ್ಞಾನದ ಅವಶ್ಯಕತೆಯನ್ನು ಮನಗಂಡೆ. ವಿಶ್ವವ್ಯಾಪಿ ಜಾಲವನ್ನು ರೂಪಿಸಿದ ಟಿಮ್ ಬರ್ನರ್ಸ್ ಲೀಯವರು ಮುಕ್ತಜ್ಞಾನದ ಬಗ್ಗೆ ಹೇಳಿದ ಮಾತುಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಕೆಲಸ ಮಾಡಿದೆ.
ಟಿಂ ಹೇಳಿದ ಮಾತುಗಳಿವು: “ಶಿಕ್ಷಣ ನೀಡುವವರು ತಮ್ಮೆಲ್ಲ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ಆನ್‌ಲೈನ್‌ನಲ್ಲಿ ಬೃಹತ್ತಾದ ಮಾಹಿತಿಯ ಪೂರೈಕೆ ಮಾಡುತ್ತಾರೆ ಎಂಬ ನಿರೀಕ್ಷೆ ನನ್ನದು. ಅದರಲ್ಲೂ ಈ ಮಾಹಿತಿಗಳು ಹೆಚ್ಚಾಗಿ ಅಭಿವೃದ್ಧಿಶೀಲ ದೇಶಗಳಲ್ಲಿ ಇರುವವರಿಗೆ ಉಚಿತವಾಗಿಯೇ ಸಿಗಬೇಕು ಎಂಬುದು ನನ್ನ ಅಪೇಕ್ಷೆ ; ಏಕೆಂದರೆ ಅವರೆಲ್ಲ ಈ ಮಾಹಿತಿಗಳನ್ನು ಬೇರೆ ವಿಧಾನದಲ್ಲಿ ಪಡೆಯುವುದು ಕಷ್ಟ.“
ದೇಶದಲ್ಲೇ ಅತಿದೊಡ್ಡ ಪಠ್ಯ ಆಧಾರಿತ, ಸರ್ಕಾರಿ ನೆರವಿನ ಜ್ಞಾನಕೋಶವಾಗಿ `ಕಣಜ’ವನ್ನು ರೂಪಿಸಿದ ಸಂದರ್ಭದಲ್ಲಿ ನನ್ನ ನೆರವಿಗೆ ಮೊದಲು ಬಂದವರು ರಾಷ್ಟ್ರಕವಿ ಡಾ|| ಜಿ ಎಸ್ ಶಿವರುದ್ರಪ್ಪನವರು. ನಿಮ್ಮ ಎಲ್ಲ ಗ್ರಂಥಗಳನ್ನೂ ಕಣಜಕ್ಕೆ ಮುಕ್ತ ಪ್ರಕಟಣೆಗೆ ಕೊಡಿ ಎಂದು ವಿನಂತಿಸಿದಾಗ ಅತ್ಯಂತ ಪ್ರೀತಿಯಿಂದ ಮತ್ತು ಸಂತೋಷದಿಂದ ತಮ್ಮೆಲ್ಲ ಕೃತಿಗಳನ್ನೂ ತಕ್ಷಣವೇ ಕೊಟ್ಟ ಜಿಎಸ್‌ಎಸ್ ಕನ್ನಡದಲ್ಲಿ ಮುಕ್ತಜ್ಞಾನದ ಚಳವಳಿ ಆರಂಭಿಸಿದ ಮುಂಚೂಣಿ ಚೇತನ ಎಂದು ಈ ಸಂದರ್ಭದಲ್ಲಿ ಅತ್ಯಂತ ವಿನೀತವಾಗಿ ನೆನಪಿಸಿಕೊಳ್ಳಬಯಸುತ್ತೇನೆ. ಅವರ ಹಾದಿಯಲ್ಲೇ ಡಾ|| ಯು ಆರ್ ಅನಂತಮೂರ್ತಿಯವರು, ಡಾ|| ಚಂದ್ರಶೇಖರ ಕಂಬಾರರೂ ತಮ್ಮ ಕೃತಿಗಳನ್ನು ಕಣಜಕ್ಕೆ ಕೊಟ್ಟರು. ಕುವೆಂಪುರವರ ಕೃತಿಗಳನ್ನು ಅವರ ಪುತ್ರಿಯವರು ಮುಕ್ತ ಬಳಕೆಗೆ ಒದಗಿಸಿದರು. ಮುಕ್ತಜ್ಞಾನ ಚಳವಳಿಯ ಮೊದಲ ಹೆಜ್ಜೆಗಳನ್ನು ಇಟ್ಟವರು ಮೂವರು ಜ್ಞಾನಪೀಠ ಪುರಸ್ಕೃತರ ಮತ್ತು ರಾಷ್ಟ್ರಕವಿಗಳು ಎಂಬುದು ಕನ್ನಡಕ್ಕಷ್ಟೇ ಅಲ್ಲ, ಇಡೀ ಭಾರತಕ್ಕೆ ಅತ್ಯಂತ ಹೆಮ್ಮೆ ತರುವ ವಿಚಾರವಾಗಿದೆ. ಇವರ ಎಲ್ಲರ ಕೃತಿಗಳೂ ಅಪಾರ ಸಂಖ್ಯೆಯಲ್ಲಿ ಮಾರಾಟವಾಗುತ್ತಲೇ ಇವೆ. ಅಂತರಜಾಲದಲ್ಲಿ ಈ ಕೃತಿಗಳನ್ನು ಪ್ರಕಟಿಸಿರುವುದರಿಂದ ತಮಗೆ ನಷ್ಟವಾಗಿದೆ ಎಂದು ಈ ಸಾಹಿತಿಗಳ ಕಡೆಯಿಂದಾಗಲೀ, ಪ್ರಕಾಶಕರ ಕಡೆಯಿಂದಾಗಲೀ ಈ ಆರು ವರ್ಷಗಳಲ್ಲಿ ಯಾವುದೇ ದೂರು ಬಂದಿಲ್ಲ. ಅವರಂತೆಯೇ ಸುಮಾರು ಏಳುನೂರು ಕನ್ನಡ ಸಾಹಿತಿಗಳು ಕಣಜ ಜಾಲತಾಣಕ್ಕೆ ಆರು ವರ್ಷಗಳ ಹಿಂದೆಯೇ ಬೆಂಬಲ ಪ್ರಕಟಿಸಿದ್ದರು. ಆದ್ದರಿಂದ ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳನ್ನು ತೋರಿಸಿಕೊಟ್ಟ ಎರಡನೇ ರಾಜ್ಯ ಎಂಬುದು ನಮಗೆಲ್ಲರಿಗೂ ಖುಷಿ ತರುವ ಸಂಗತಿಯಾಗಿದೆ.
ಕಣಜ ಜಾಲತಾಣದ ಅನುಭವದಲ್ಲೇ ನಾನು ಈಗ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ `ಭಾರತವಾಣಿ’ ಯೋಜನೆಯ ಸಲಹೆಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಅಂದು ಒಂದು ಕನ್ನಡ ಭಾಷೆಗಾಗಿ ಕೆಲಸ ಮಾಡಿದ ನಾನು ಈಗ ಮೊದಲ ಹಂತದಲ್ಲಿ ೧೨೧ ಭಾರತೀಯ ಭಾಷೆಗಳಲ್ಲಿ ವಿಷಯ ಸಂಗ್ರಹ ಮಾಡುವ ಗುರಿಯನ್ನು ಹೊಂದಿದ್ದೇನೆ. ಅದರಲ್ಲಿ ೫೦ ಭಾಷೆಗಳಲ್ಲಿ ಒಂದಲ್ಲ ಒಂದು ಬಗೆಯ ಪ್ರಕಟಣೆ ಶುರುವಾಗಿದೆ. ಇನ್ನಷ್ಟು ಭಾಷೆಗಳ ಮಾಹಿತಿ ಸಂಗ್ರಹ ಭರದಿಂದ ಸಾಗಿದೆ. ಸಿರಿಗನ್ನಡದ ನೆಲೆಯಾದ ಮೈಸೂರಿನಲ್ಲಿ ಭಾರತೀಯ ಭಾಷೆಗಳ ಜ್ಞಾನಸಂಗ್ರಹ ಮತ್ತು ಮುಕ್ತ ಬಳಕೆಯ ಪ್ರಕಟಣೆ ಆಗುತ್ತಿರುವುದನ್ನು ಕಂಡರೆ ಭಾರತ ಜನನಿಯ ತನುಜಾತೆಯು ಜನನಿಗೇ ನೆರವಾಗುತ್ತಿದ್ದಾಳೆ ಎಂದೇ ಅನ್ನಿಸುತ್ತಿದೆ. ಹೆತ್ತ ತಾಯಿಗೆ ನೆರವಾಗುವ ಮಗಳು ನಮ್ಮ ಕನ್ನಡ ಮಾತೆ. ಮೈಸೂರು ವಿಶ್ವವಿದ್ಯಾಲಯ, ತುಳು, ಕೊಂಕಣಿ ಅಕಾಡೆಮಿಗಳು ಭಾರತವಾಣಿಯೊಂದಿಗೆ ಕೈ ಜೋಡಿಸಿವೆ. ಈ ಸಮ್ಮೇಳನದಲ್ಲಿ ಸಂಕ್ಷಿಪ್ತ ಕನ್ನಡ ನಿಘಂಟು ಆಂಡ್ರಾಯ್ಡ್ ಅಪ್ಲಿಕೇಶನ್ ಬಿಡುಗಡೆ ಮಾಡುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತೂ ಮುಕ್ತಜ್ಞಾನದತ್ತ ಹೆಜ್ಜೆ ಹಾಕಿದೆ. ಕೆಲವೇ ದಿನಗಳಲ್ಲಿ ಭಾರತವಾಣಿಗೆ ಕನ್ನಡ-ಕನ್ನಡ ನಿಘಂಟನ್ನೂ ಒದಗಿಸುವುದಾಗಿ ಕನ್ನಡ ಸಾಹಿತ್ಯ ಪರಿಷತ್ತು ಭರವಸೆ ನೀಡಿದೆ; ನಿರ್ಣಯ ಅಂಗೀಕರಿಸಿದೆ.
ಮುಕ್ತಜ್ಞಾನ ಅಭಿಯಾನದ ಭಾಗವಾದ ಭಾರತವಾಣಿ ಯೋಜನೆ ಮತ್ತು ಆಪ್ ಕುರಿತು ಕೆಲವು ಅಂಶಗಳನ್ನು ಇಲ್ಲಿ ಹಂಚಿಕೊಳ್ಳಬಯಸುತ್ತೇನೆ.
ಭಾರತವಾಣಿ ಪೋರ್ಟಲ್ ಈ ಕೆಳಗಿನ ಪ್ರಮುಖ ವಿಭಾಗಗಳಲ್ಲಿ ವಿಷಯಗಳನ್ನು ಪ್ರಕಟಿಸುತ್ತದೆ.
- ಪಠ್ಯಪುಸ್ತಕ ಕೋಶ: ಪಠ್ಯಪುಸ್ತಕಗಳು
- ಜ್ಞಾನಕೋಶ: ಜ್ಞಾನಾಧಾರಿತ (ಅಭಿವೃದ್ಧಿ ಹಂತದಲ್ಲಿದೆ)
- ಶಬ್ದಕೋಶ: ನಿಘಂಟುಗಳು
- ಭಾಷಾ ಕೋಶ: ಭಾಷಾ ಕಲಿಕೆ
- ಮಾಹಿತಿ ತಂತ್ರಜ್ಞಾನ: ಮಾಹಿತಿ ತಂತ್ರಜ್ಞಾನ ಸಾಧನಗಳು (ಟಿಡಿಐಎಲ್ ಗೆ ಲಿಂಕ್ ಮಾಡಲಾಗಿದೆ)
- ಬಹುಮಾಧ್ಯಮ ಕೋಶ: ಬಹುಮಾಧ್ಯಮ
- ಈ ಪೋರ್ಟಲ್ ನ ಮುಖಪುಟ (bharatavani.in) ಹಿಂದಿ-ಇಂಗ್ಲಿಶಿನಲ್ಲಿರುತ್ತದೆ. ನೀವು ಎಲ್ಲಾ ಲಭ್ಯ ಭಾಷೆಗಳಲ್ಲಿ language.bharatavni.in ತರಹದ ಬೇರೆ ಬೇರೆ ಉಪವಿಭಾಗಗಳನ್ನೂ ಗುರುತಿಸಬಹುದು. ಉದಾಹರಣೆಗೆ; kannada.bharatavani.in ನಲ್ಲಿ ಕನ್ನಡ ವಿಷಯ ಪ್ರಾಥಮಿಕವಾಗಿ ಲಭ್ಯವಿರುತ್ತದೆ.
- ಭಾಷೆಯ ಪ್ರತಿಯೊಂದು ಉಪವಿಬಾಗವೂ ಮೇಲೆ ತಿಳಿಸಿರುವಂತೆ ಪ್ರಮುಖ ವಿಭಾಗಗಳನ್ನು ಹೊಂದಿದ್ದು, ಅದೇ ವಿಷಯ ಪದ, ಲಿಪಿ ಮತ್ತು ವಿಷಯಗಳ ಮೂಲಕ ಬೇರೆ ಭಾಷೆಗಳ ಜತೆಗೆ ಜೋಡಿಸಿದ್ದರೆ ಬೇರೆ ಭಾಷೆಗಳಲ್ಲಿಯೂ ದೊರೆಯುತ್ತದೆ. ಉದಾಹರಣೆಗೆ; ಬೆಂಗಾಲಿ-ನೇಪಾಲಿ ನಿಘಂಟನ್ನು ನೀವು ಎರಡೂ ಉಪವಿಭಾಗಗಳಲ್ಲಿಯೂ ಗುರುತಿಸಬಹುದು.
- ನಿಮ್ಮ ಆಯ್ಕೆಯ ಪುಸ್ತಕವನ್ನು ಗುರುತಿಸಲು ಶೋಧಕಗಳಿವೆ. ಅವುಗಳನ್ನು ಸೂಕ್ತವಾಗಿ ಬಳಸಿ. ಬೃಹತ್ ದತ್ತಾಂಶದ ಅಪ್ ಲೋಡ್ ಮಾಡುವ ಗಣಕೀಕರಣ ಪ್ರಕ್ರಿಯೆ ನಡೆಯುತ್ತಿದೆ.
ಮುಖ್ಯ ವಿಭಾಗಗಳನ್ನು ಕುರಿತ ಸಂಕ್ಷಿಪ್ತ ವಿವರ
- ಪಠ್ಯಪುಸ್ತಕ ಕೋಶ: ಪಠ್ಯಪುಸ್ತಕಗಳು
- ಬೇರೆ ಬೇರೆ ಸರ್ಕಾರಗಳ ಹಲವಾರು ಪುಸ್ತಕ ಪ್ರಾಧಿಕಾರಗಳು ನೀಡಿರುವ ಪಠ್ಯಪುಸ್ತಕಗಳನ್ನು ಪುಸ್ತಕಗಳ ಗ್ಯಾಲರಿಯಲ್ಲಿ ಒದಗಿಸಲಾಗುತ್ತಿದೆ. ಇವುಗಳನ್ನು ನೀವು ತರಗತಿ, ಭಾಷೆ, ವಿಷಯ ಮತ್ತು ರಾಜ್ಯವಾರು ಶೋಧಿಸಬಹುದು. ಡೌನ್ ಲೋಡ್ ಮಾಡಿಕೊಂಡು ಬಳಸಿ.
- ಜ್ಞಾನಕೋಶ: ಜ್ಞಾನಾಧಾರಿತ (ಅಭಿವೃದ್ಧಿಪಡಿಸಬೇಕಿದೆ)
- ಈ ವಿಭಾಗ ಅಭಿವೃದ್ಧಿ ಹಂತದಲ್ಲಿದ್ದು, ಈಗಾಗಲೆ ಗಮನಾರ್ಹ ಪ್ರಮಾಣದ ದತ್ತಾಂಶವನ್ನು ಸಂಗ್ರಹಿಸಲಾಗಿದೆ, ಅದರ ಗಣಕೀಕರಣ ಕಲಸ ಆಗಬೇಕಾಗಿದ್ದು ಆನಂತರ ಇದನ್ನು ಅನುಕ್ರಮಸೂಚಿಯಲ್ಲಿ ಪ್ರಕಟಿಸಲಾಗುತ್ತದೆ. ದಯಮಾಡಿ ನಮ್ಮ ಜತೆ ಸಹಿಸಿಕೊಳ್ಳಿ.
- ಶಬ್ದ ಕೋಶ: ನಿಘಂಟುಗಳು
ನಿಘಂಟುಗಳ ದತ್ತಾಂಶ ಹುಡುಕಾಟ
ನೀವು ನಿಘಂಟುಗಳ ದತ್ತಾಂಶವನ್ನು ಹಲವಾರು ರೀತಿಯಲ್ಲಿ ಹುಡುಕಬಹುದು
- ನಿಮ್ಮ ಆಯ್ಕೆಯ ಭಾಷೆಯನ್ನು ಟೈಪ್ ಮಾಡುವ ಮೂಲಕ ಹುಡುಕಿ (ಲಭ್ಯವಿರುವ ಭಾಷೆಗಳ ಪಟ್ಟಿಯನ್ನು ನಿಮಗೆ ಪ್ರದರ್ಶಿಸಲಾಗುತ್ತದೆ)
- ಇಂಗ್ಲಿಶ್ ಪದಗಳನ್ನು ಟೈಪ್ ಮಾಡುವ ಮೂಲಕ ಹುಡುಕಿ. ನೀವು ಇಲ್ಲಿ ಲಭ್ಯವಿರುವ ಭಾಷಾ ದತ್ತಾಂಶಗಳಿಂದ ಫಲಿತಾಂಶವನ್ನು ಪಡೆಯುವಿರಿ.
ನಿಘಂಟು ಪುಸ್ತಕಗಳು:
- ಹೆಚ್ಚುವರಿಯಾಗಿ, ನಿಘಂಟು ವಿಭಾಗದಲ್ಲಿ ಕೊಟ್ಟಿರುವ ಪಿಡಿಎಫ್ ಪುಸ್ತಕಗಳನ್ನೂ ಸಹ ನೀವು ಕಣ್ಣಾಡಿಸಬಹುದು. ಈ ಪುಸ್ತಕಗಳನ್ನು ಇಂಗ್ಲಿಶ್ ಪದಗಳ ಮೂಲಕ ಹುಡುಕಬಹುದು. ಈ ಎಲ್ಲಾ ಪುಸ್ತಕಗಳೂ ಗಣಕೀಕೃತಗೊಂಡು ಡಾಟಾಬೇಸ್ ನಲ್ಲೇ ದೊರಕುವಂತೆ ಮಾಡಲಾಗುತ್ತದೆ.
- ಭಾಷಾ ಕೋಶ: ಭಾಷಾ ಕಲಿಕೆ
ಭಾಷಾ ಕಲಿಕೆಗೆ ಸಂಬಂಧಿಸಿದ ಪುಸ್ತಕಗಳನ್ನು ಇಲ್ಲಿ ಕಾಣಬಹುದಾಗಿದ್ದು, ನಿಮ್ಮ ಕಲಿಕೆಯ ಮಟ್ಟವನ್ನು ಆಯ್ಕೆಮಾಡಿ ಹಾಗೆಯೇ ನಿಮ್ಮ ಪುಸ್ತಕವನ್ನು ಆರಿಸಿಕೊಳ್ಳಿ. ಭಾರತವಾಣಿಯು ಮುಂದಿನ ವರ್ಷಗಳಲ್ಲಿ ಭಾಷಾ ಕಲಿಕಾ ಕಾರ್ಯಕ್ರಮಗಳನ್ನು ರೂಪಿಸುವ ಕೆಲಸವನ್ನು ಕೈಗೊಳ್ಳಲಿದೆ. ಇದಕ್ಕಾಗಿ ಎಲ್ಲ ತಜ್ಞರು, ಶಿಕ್ಷಕಕರು, ಐಟಿ ಯುವ ಸ್ವಯಂಸೇವಾ ಸಮುದಾಯ, ವಿಶ್ವವಿದ್ಯಾಲಯಗಳು ನೆರವಾಗಬೇಕು ಎಂದು ನಾನು ವಿನಂತಿಸಿಕೊಳ್ಳುತ್ತೇನೆ.
- ಮಾಹಿತಿ ತಂತ್ರಜ್ಞಾನ ಕೋಶ: (ಟಿಡಿಐಎಲ್ ಗೆ ಲಿಂಕ್ ಮಾಡಲಾಗಿದೆ)
ಈ ವಿಭಾಗ ಎಲ್ಲ ಭಾಷೆಗಳ ಮಾಹಿತಿ ತಂತ್ರಜ್ಞಾನ ಸಾಧನಗಳನ್ನು ಒಂದೇ ಕಡೆ ಪಡೆಯಲು ಒಂದೇ ವಿಂಡೋವನ್ನು ಒದಗಿಸುವ ಗುರಿಯನ್ನು ಹೊಂದಿದೆ. ನಿಮ್ಮ ಆಯ್ಕೆಯ ಸಾಧನಗಳನ್ನು ಪಡೆಯಲು ದಯವಿಟ್ಟು http://www.tdil-dc.in/index.php?lang=en ಗೆ ಭೇಟಿನೀಡಿ.
- ಬಹುಮಾಧ್ಯಮ ಕೋಶ: ಬಹುಮಾಧ್ಯಮ
ಈ ವಿಭಾಗ ಭಾಷೆಯನ್ನು ಕುರಿತ ಬಹುಮಾಧ್ಯಮ ವಿಷಯವನ್ನು ಒದಗಿಸುತ್ತದೆ. ಮತ್ತೆ ನಿಮ್ಮ ಆಯ್ಕೆಯನ್ನು ಶೋಧಿಸಿ ಮಾಹಿತಿಯನ್ನು ಪಡೆಯಿರಿ.
ಭಾರತವಾಣಿ ನಿಘಂಟು ಅಪ್ಲಿಕೇಶನ್
ಪ್ರಸ್ತುತ, google.com. ನಲ್ಲಿ ಒಂದು ಆಂಡ್ರಾಯ್ಡ್ ಮತ್ತು ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಆಧಾರಿತ ನಿಘಂಟು ಅಪ್ಲಿಕೇಶನ್ ಲಭ್ಯವಿದೆ. ಇದೇ ಭಾರತವಾಣಿ. ಇದು ಒಂದು ಮೂಲ ಭಾಷೆಯನ್ನು ಹೊರತುಪಡಿಸಿ, ನಿಮ್ಮ ಆಯ್ಕೆಯ ಲಿಪಿಯಲ್ಲಿಯೇ ಬೇರೆ ಬೇರೆ ಭಾಷೆಗಳಲ್ಲಿ ಅರ್ಥಗಳನ್ನು ಪಡೆಯಲು ಅವಕಾಶವಿರುವ ಜಾಲತಾಣ ಆಧಾರಿತ ನಿಘಂಟು ಅಪ್ಲಿಕೇಶನ್. ಇನ್ನೂ ಹಲವಾರು ನಿಘಂಟುಗಳು ಹಂತ ಹಂತವಾಗಿ ಒಟ್ಟುಗೂಡುತ್ತವೆ.
- ಆಂಡ್ರಾಯ್ಡ್ ಅಪ್ಲಿಕೇಶನ್ ಕೊಂಡಿ: http://bit.ly/1XYqodI
- ವಿಂಡೋಸ್ ಅಪ್ಲಿಕೇಶನ್ ಕೊಂಡಿ: http://bit.ly/2a2Ew19
ಹೀಗೆ ಭಾರತವಾಣಿಯು ಮುಕ್ತಜ್ಞಾನ ಪಡೆಯುವ ನಾಗರಿಕರ ಪ್ರಜಾತಾಂತ್ರಿಕ ಹಕ್ಕನ್ನು ಅವರಿಗೆ ನೀಡುವುದಕ್ಕೆ ಮುಂದಾಗಿದೆ ಎಂದು ತಿಳಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ.
ಮುಕ್ತಜ್ಞಾನದ ಇನ್ನೂ ಕೆಲವು ಆನ್‌ಲೈನ್ ಪ್ರಯೋಗಗಳನ್ನು ನಾನಿಲ್ಲಿ ಕೇವಲ ಉದಾಹರಣಾರ್ಥ ನೀಡುತ್ತಿದ್ದೇನೆ.
- ಪ್ರೊಪಬ್ಲಿಕಾ ಎಂಬ ಅಮೆರಿಕಾದ ಜಾಲತಾಣವು ಹಲವು ಸಂಸ್ಥೆಗಳಿಂದ ದೇಣಿಗೆ ಪಡೆದು ಸ್ವತಂತ್ರ ಪತ್ರಿಕೋದ್ಯಮವನ್ನು ನಡೆಸುತ್ತಿದೆ. `ನಮ್ಮ ಸುದ್ದಿಗಳನ್ನು ಕದಿಯಿರಿ’ ಎಂಬುದೇ ಈ ಜಾಲತಾಣದ ಮುಖ್ಯ ಘೋಷಣೆಯಾಗಿದೆ.
- ಇಂಟರ್‌ನೆಟ್ ಆರ್ಕೈವ್ ಎಂಬ ಜಾಲತಾಣದಲ್ಲಿ ಭಾರೀ ಪ್ರಮಾಣದಲ್ಲಿ ಪುಸ್ತಕಗಳು, ದೃಶ್ಯ-ಶ್ರಾವ್ಯ ಕಡತಗಳು ಲಭ್ಯ.
- ವಿಕಿಪೀಡಿಯಾ ಜಾಲತಾಣದಲ್ಲಿ ಮುಕ್ತವಾಗಿ ಮಾಹಿತಿ ದೊರೆಯುವುದು ಎಲ್ಲರಿಗೂ ಗೊತ್ತಿದೆ.
- ಮ್ಯಾಗ್ನಟ್ಯೂನ್ ಎಂಬ ಸಂಗೀತ ತಾಣದಲ್ಲಿ ನಿಮ್ಮ ಆಲ್ಬಮ್‌ಗಳನ್ನು ಆರಬಹುದು; ಬಳಕೆದಾರರು ಉಚಿತವಾಗಿ ಸಂಗೀತವನ್ನು ಕೇಳಬಹುದು.
- ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ಮೊದಲ ಸಲ ಮುಕ್ತ ಕಲಿಕೆಯಯ ಅವಕಾಶಗಳನ್ನು ರೂಪಿಸಿ ತನ್ನೆಲ್ಲ ಕೋರ್ಸ್‌ಗಳ ಪಠ್ಯಗಳನ್ನು ಯಾರು ಬೇಕಾದರೂ ಬಳಸಬಹುದು ಎಂದು ಘೋಷಿಸಿತು.
- ಪ್ರಾಜೆಕ್ಟ್ ಗುಟೆನ್‌ಬರ್ಗ್ ಎಂಬ ಅತಿ ಹಳೆಯ ಯೋಜನೆಯಲ್ಲಿ ಕೂಡಾ ಭಾರೀ ಪ್ರಮಾಣದಲ್ಲಿ ಶಾಸ್ತ್ರೀಯ ಸಾಹಿತ್ಯವನ್ನು ಸಾರ್ವಜನಿಕರೇ ಅಕ್ಷರ ಜೋಡಿಸಿ ರೂಪಿಸಿದ್ದಾರೆ.
- ಕಣಜ ಜಾಲತಾಣಕ್ಕಿಂತ ಮುಂಚಿತವಾಗಿ ತಮಿಳುನಾಡು ಸರ್ಕಾರವು ತಮಿಳು ವರ್ಚುಯಲ್ ವಿಶ್ವವಿದ್ಯಾಲಯವನ್ನು ರೂಪಿಸಿ ಎಲ್ಲ ಪಠ್ಯಗಳನ್ನೂ ಪಿಡಿಎಫ್ ರೂಪದಲ್ಲಿ ಸಾರ್ವಜನಿಕರಿಗೆ ಕೊಟ್ಟಿದೆ.
- ಪ್ಲಾಸ್ ಜಾಲತಾಣದಲ್ಲಿ ನೀವು ಸಾವಿರಾರು ಸಂಶೋಧನಾ ಲೇಖನಗಳನ್ನು ಉಚಿತವಾಗಿ ಪಡೆಯಬಹುದು.
- ಭಾರತ ಸರ್ಕಾರವು ಈ ಪಾಠಶಾಲಾ ಎಂಬ ಯೋಜನೆಯ ಮೂಲಕ ಪಠ್ಯಪುಸ್ತಕಗಳನ್ನು ಉಚಿತವಾಗಿ ನೀಡುತ್ತಿದೆ. ಈ-ಬಾಸ್ತಾ ಎಂಬ ಇನ್ನೊಂದು ಜಾಲತಾಣದಲ್ಲಿ ಪಠ್ಯಪುಸ್ತಕಗಳಿವೆ. ಭಾರತವಾಣಿಯಲ್ಲೂ ಹಲವು ರಾಜ್ಯಗಳ ಪಠ್ಯಪುಸ್ತಕಗಳಿವೆ. ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ಓಪನ್ ಸ್ಕೂಲಿಂಗ್ (ಎನ್‌ಐಓಎಸ್) ತಾಣದಲ್ಲಿ ಹಲವು ಪುಸ್ತಕಗಳು ಸಿಗುತ್ತವೆ.
- ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ (ಐಜಿಎನ್‌ಸಿಎ)ದಲ್ಲಿ ಕಲೆ-ಸಂಸ್ಕೃತಿಗೆ ಸಂಬಂಧಿಸಿದ ಹಲವು ಪುಸ್ತಕಗಳಿವೆ.
- ಇನ್ನೂ ಹಲವು ಉಪಯುಕ್ತ ಮುಕ್ತಜ್ಞಾನದ ಮೂಲಗಳ ವಿವರಗಳನ್ನು ಭಾರತವಾಣಿ ಜಾಲತಾಣದಲ್ಲಿ ಪಡೆಯಬಹುದು (www.bharatavani.in)
- ಭಾರತದಾದ್ಯಂತ ಸ್ಪಿಕ್‌ಮೆಕೇ ಸಂಸ್ಥೆಯು ಶಾಸ್ತ್ರೀಯ ಸಂಗೀತದ ಕಚೇರಿಗಳನ್ನು ವಿದ್ಯಾರ್ಥಿಗಳಿಗೆ, ಯುವ ಸಮುದಾಯಕ್ಕಾಗಿ ಸಂಘಟಿಸುತ್ತಿದೆ. ಇಲ್ಲಿ ಸಂಗೀತಗಾರರೊಂದಿಗೆ ಸಭಿಕರು ಪ್ರಶ್ನೋತ್ತರ ನಡೆಸಬಹುದು.
ಇವೆಲ್ಲವೂ ಜ್ಞಾನ ಹಂಚಿಕೆಯ ಪ್ರಜಾಪ್ರಭುತ್ವೀಕರಣದ ಕೆಲವು ಉದಾಹರಣೆಗಳು ಇಲ್ಲಿ ಒಂದೋ ಸರ್ಕಾರ ಅಥವಾ ಸಾರ್ವಜನಿಕ ಸಂಸ್ಥೆಗಳು ಮುಕ್ತಜ್ಞಾನ ನೀಡಲು ಮುಂದಾಗಿವೆ.
ಹಲವು ಖಾಸಗಿ ಜಾಲತಾಣಗಳಲ್ಲೂ ಇಂಥ ಮುಕ್ತಜ್ಞಾನದ ಆಕರಗಳಿವೆ. ಜ್ಞಾನರಂಗವು ಕಾರ್ಪೋರೇಟ್-ಬಂಡವಾಳಶಾಹಿ ಹಿಡಿತದಿಂದ ಮುಕ್ತವಾಗಿ ನಮ್ಮ ಪರಂಪರೆಯಲ್ಲಿ ಸದಾ ಆಚರಣೆಯಲ್ಲಿದ್ದ ಮುಕ್ತ ಶಿಕ್ಷಣದ ವ್ಯವಸ್ಥೆಯನ್ನು ರೂಪಿಸುವುದೇ ಇಂದಿನ ಸವಾಲು. ಕುಲಾಂತರಿ ತಳಿಯ ತಂತ್ರಜ್ಞಾನದ, ಪರಮಾಣು ಸ್ಥಾವರಗಳ ಅಪಾಯವನ್ನು, ಜನ ತಮ್ಮದೇ ಸಾಮುದಾಯಿಕ ಹೋರಾಟ ಮತ್ತು ಜ್ಞಾನದ ಬಲದಿಂದಲೇ ತಡೆಯುತ್ತಿದ್ದಾರೆ. ಶ್ರೀಸಾಮಾನ್ಯರು, ಆಟೋ ಚಾಲಕರು ದುಡ್ಡು ಹಾಕಿ ಸಿನೆಮಾ ನಿರ್ಮಿಸುತ್ತಿದ್ದಾರೆ. ಸಮೂಹ ಬಲದ ಚಟುವಟಿಕೆಗಳು (ಕ್ರೌಡ್ ಸೋರ್ಸಿಂಗ್) ಹೆಚ್ಚುತ್ತಿರುವ ಈ ಕಾಲದಲ್ಲಿ ನಮ್ಮದೇ ಭಾಷೆಯಲ್ಲಿ ಈ ಕಾಲದ ಅರಿವನ್ನು ಮುಕ್ತವಾಗಿ ಪಡೆಯಲು ಕೇಳುವುದು ನಮ್ಮ ಹಕ್ಕು.
ಆನ್‌ಲೈನ್ ಮುಕ್ತಜ್ಞಾನದಲ್ಲಿ ಭಾಷೆಯ ಸವಾಲುಗಳು
ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು ಎಷ್ಟಿವೆಯೋ, ಸವಾಲುಗಳೂ ಅಷ್ಟೇ ಇವೆ.
- ಲಿಪಿ ಕಾಣದೆ ಏನೂ ಸಾಧ್ಯವಿಲ್ಲ: ಕಂಪ್ಯೂಟರಿನಲ್ಲಿ ನಮಗೆ ಬೇಕಾದ ಲಿಪಿಯ ಅಕ್ಷರಗಳನ್ನು ಮೂಡಿಸುವುದು ಮತ್ತು ನಮಗೆ ಬೇಕಾದ ಭಾಷೆ, ಲಿಪಿಯಲ್ಲಿ ಬರೆಯುವುದು. ಇದನ್ನು ಪರಿಹರಿಸಲು ಭಾರತವಾಣಿ ಯೋಜನೆಯು ಪ್ರಯತ್ನ ಆರಂಭಿಸಿದೆ. ಮೊದಲ ಹಂತದಲ್ಲಿ ಒಂದು ಲಿಪಿಯಿಂದ ಇನ್ನೊಂದು ಲಿಪಿಗೆ ಬದಲಾವಣೆ ಮಾಡಿಕೊಳ್ಳುವ ಲಿಪ್ಯಂತರಣವನ್ನು ಭಾರತವಾಣಿಯು ತನ್ನ ಆಪ್‌ನಲ್ಲಿ ಅಳವಡಿಸಿಕೊಂಡಿದೆ. ವಿವಿಧ ಭಾಷೆಗಳ ಲಿಪಿಗಳನ್ನು ಇಂದಿನ ಮಾಹಿತಿ ತಂತ್ರಜ್ಞಾನಾಧಾರಿತ ಸಾಧನಗಳಲ್ಲಿ (ಬಟ್ಟೆ ಒಗೆಯುವ ಯಂತ್ರದಿಂದ ಹಿಡಿದು ಸ್ಮಾರ್ಟ್‌ಫೋನ್ – ಟ್ಯಾಬ್ಲೆಟ್‌ವರೆಗೆ) ಮೂಡಿಸದ ಹೊರತು ಮಾತೃಭಾಷೆಯಲ್ಲಿ ಜ್ಞಾನವು ಸಿಗುವ ಸಾಧ್ಯತೆ ಕ್ಷೀಣ ಎಂಬುದು ನನ್ನ ಸ್ಪಷ್ಟ ಅನಿಸಿಕೆ. ಕೆಲವು ದಿನಗಳ ಹಿಂದೆ ಕಿಂಡೆಲ್ ಈ-ಬುಕ್ ರೀಡರ್‌ನಲ್ಲಿ ವಸುಧೇಂದ್ರ ಅವರ ಕನ್ನಡ ಪುಸ್ತಕವು ಪ್ರಕಟವಾಗದೇ ಹೋದ ಬಗ್ಗೆ ಫೇಸ್‌ಬುಕ್‌ನಲ್ಲಿ ಬಿಸಿ ಬಿಸಿ ಚರ್ಚೆ ನಡೆದಿದ್ದನ್ನು ನೀವು ಗಮನಿಸಿರಬಹುದು. ನಾನು ಆಗ ಭಾರತದ ಎಲ್ಲ ಐಟಿ ಸಾಧನಗಳಲ್ಲೂ ಭಾರತೀಯ ಭಾಷೆಗಳ ತಂತ್ರಾಂಶವನ್ನು ಮೊದಲೇ ಹಾಕಿರಬೇಕು ಎಂಬ ಆನ್‌ಲೈನ್ ಸಹಿಸಂಗ್ರಹ ಚಳವಳಿಯನ್ನು ಆರಂಭಿಸಿದೆ. ಈ ಬಗ್ಗೆ ಮತ್ತೆ ಶ್ರೀವಸುಧೇಂದ್ರ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಸದ್ಯದಲ್ಲೇ ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಮತ್ತು ವಾಣಿಜ್ಯ ಸಚಿವರಲ್ಲಿ ಈ ಬಗ್ಗೆ ವಿನಂತಿ ಮಾಡಲು ಮುಂದಾಗಿದ್ದೇನೆ. ಅಲ್ಲದೆ ಭಾರತದಲ್ಲಿ ಮಾರಾಟವಾಗುವ ಎಲ್ಲ ಪೊಟ್ಟಣಗಳ ಮೇಲೆ ಒಂದಲ್ಲ ಒಂದು ಪ್ರಾದೇಶಿಕ ಭಾಷಾ ಲಿಪಿಯಲ್ಲಿ ಮಾಹಿತಿ ಇರಬೇಕು ಎಂದೂ ನಾನು ಕೇಂದ್ರ ವಾಣಿಜ್ಯ ಸಚಿವೆಯರನ್ನು ವಿನಂತಿಸಲಿದ್ದೇನೆ.
- ಪಠ್ಯರೂಪ ಭಾಷಾ ದತ್ತಾಂಶದ ಕೊರತೆ: ಆನ್‌ಲೈನ್ ಎಂದರೆ ಪಿಡಿಎಫ್ ಎಂದು ತಿಳಿದುಕೊಂಡಿರುವ ಈ ಕಾಲದಲ್ಲಿ ಯುನಿಕೋಡ್ ಬಳಸಿದ, ಪಠ್ಯಗಳನ್ನು ದೊರಕಿಸುವ ಕೆಲಸ ತುಂಬಾ ಸವಾಲಿನದು. ಹಳೆಯ ಪುಸ್ತಕಗಳನ್ನು ಮತ್ತೆ ಡಿಟಿಪಿ ಮಾಡಬೇಕಾದ, ಪಿಡಿಎಫ್ ಮಾಡಬೇಕಾದ ಸನ್ನಿವೇಶವೇ ಈಗಲೂ ಇದೆ. ಸರ್ಕಾರಗಳು ಜ್ಞಾನ ಆಧಾರಿತ ಮಾಹಿತಿಗಳನ್ನು ಯುನಿಕೋಡ್ ರೂಪದಲ್ಲಿ ಒಂದೆಡೆ ಸಂಗ್ರಹಿಸುವ ವ್ಯವಸ್ಥೆಯನ್ನು ರೂಪಿಸಬೇಕು. ಉದಾಹರಣೆಗೆ ಪಠ್ಯಪುಸ್ತಕಗಳನ್ನು ಸ್ಮಾರ್ಟ್‌ಫೋನ್‌ನಲ್ಲಿ ಕೊಡುವಾಗ ಯುನಿಕೋಡ್ ಪಠ್ಯವೇ ಬೇಕಾಗುತ್ತದೆ. ವಿವಿಧ ಯೋಜನೆಗಳಲ್ಲಿ ಈಗಾಗಲೇ ಸಂಗ್ರಹಿಸಿರುವ ಬಹು ಭಾಷಾ ಪದ-ವಾಕ್ಯ ಸಮುಚ್ಚಯವನ್ನು ಮುಕ್ತವಾಗಿ ಬಿಡುಗಡೆ ಮಾಡಿ ಸಮುದಾಐದಿಂದಲೇ ಭಾಷಾ ವ್ಯಾಕರಣದ ತಂತ್ರಾಂಶಗಳು, ಅನುವಾದದ ಸೂತ್ರಗಳು ಹೊರಹೊಮ್ಮಬೇಕು ಎಂಬುದು ನನ್ನ ಆಶಯವಾಗಿದೆ.
- ವ್ಯಾಪಕ ಅನುವಾದದ ತೀವ್ರ ಅವಶ್ಯಕತೆ: ಮೈಸೂರು ವಿಶ್ವವಿದ್ಯಾಲಯವು ರೂಪಿಸಿದ ಸಾಮಾನ್ಯ ವಿಶ್ವಕೋಶ ಮತ್ತು ವಿಷಯ ವಿಶ್ವಕೋಶಗಳು ನಿಜಕ್ಕೂ ದೇಶವೇ ಹೆಮ್ಮೆ ಪಡುವಂಥ ಕೋಶಗಳು. ಇವುಗಳನ್ನು ವಿಶ್ವವಿದ್ಯಾಲಯವು ಭಾರತವಾಣಿಗೆ ನೀಡಿ ಮುಕ್ತಜ್ಞಾನದ ಚಳವಳಿಯಲ್ಲಿ ದೊಡ್ಡ ಹೆಜ್ಜೆ ಹಾಕಿದೆ. ಆದರೆ ಇಂಥದ್ದೇ ಕೋಶಗಳು ಎಲ್ಲ ಭಾಷೆಗಳಲ್ಲೂ ಬರಬೇಕು ಮತ್ತು ಇವು ಕಾಲಕಾಲಕ್ಕೆ ಪರಿಷ್ಕರಣೆಗೆ ಒಳಗಾಗಬೇಕು. ಇದು ಭಾರತೀಯ ಭಾಷೆಗಳ ಮುಂದೆ ಇರುವ ದೊಡ್ಡ ಸವಾಲು. ಬೆಂಗಾಲಿ, ಗುಜರಾತಿ, ಹಿಂದಿಯಂತಹ ಹೆಚ್ಚುನ ಮಾತಾಡುವ ಭಾಷೆಗಳಲ್ಲೂ ಇಂಥ ಕೋಶಗಳನ್ನು ಹುಡುಕುವುದು ಕಷ್ಟ.
- ಹಕ್ಕುಸ್ವಾಮ್ಯ – ಬೌದ್ಧಿಕ ಸ್ವಾಮ್ಯದ ಸವಾಲು: ಮುದ್ರಣ ಆಧಾರಿತ ಪ್ರಕಟಣಾ ರಂಗವು ಬಲವಾದ ಮೇಲೆ ಭಾರತ ದೇಶದಲ್ಲಿ ಹಕ್ಕುಸ್ವಾಮ್ಯವು ವಕ್ಕರಿಸಿತು. ಮುದ್ರಿತ ಪ್ರತಿಗಳ ಕಾಲಕ್ಕಿಂತ ಮೊದಲು ಭಾರತದಲ್ಲಿ ಹಕ್ಕುಸ್ವಾಮ್ಯ ಎಂಬ ಪರಿಕಲ್ಪನೆಯೇ ಇರಲಿಲ್ಲ. ಪಂಪಭಾರತವನ್ನು ತನ್ನದು ಎಂದು ಶತಮಾನಗಳ ಕಾಲ ಇನ್ನಾರೋ ಹೇಳಿಕೊಳ್ಳಲಿಲ್ಲ. ಹಕ್ಕುಸ್ವಾಮ್ಯ ಸಂಪೂರ್ಣವಾಗಿ ಒಂದು ವಿದೇಶಿ ಮಾದರಿ. ಅದು ಅರಿವಿನ ಆಕರಗಳ ವಾಣಿಜ್ಯೀಕರಣದ ಫಲ. ಆದ್ದರಿಂದ ನನ್ನ ಕನಸಿನ ಮುಕ್ತಜ್ಞಾನ ಸಮಾಜದಲ್ಲಿ ಹಕ್ಕುಸ್ವಾಮ್ಯದ ಬಿಗಿಬಂಧವು ಅತ್ಯಂತ ಸಡಿಲಾಗಿರುತ್ತದೆ ಅಥವಾ ಇರುವುದೇ ಇಲ್ಲ. ಇದನ್ನು ಹೇಳುವುದು ಸುಲಭ; ಜಾರಿಗೊಳಿಸುವುದು ಕಷ್ಟ. ಸಾರ್ವಜನಿಕ ಹಣದಿಂದ ಜ್ಞಾನಸೃಷ್ಟಿಯಲ್ಲಿ ತೊಡಗಿರುವ ಸಂಸ್ಥೆಗಳಿಂದ ಈ ಅಭಿಯಾನ ಶುರುವಾಗಿದೆ ಎಂಬುದು ಸಂತೋಷದ ವಿಷಯ.
- ಸಂಪನ್ಮೂಲಗಳ ದುರ್ಬಳಕೆಗೆ ತಡೆ : ನಮ್ಮ ರಾಜ್ಯದಲ್ಲಿ ಒಂದೇ ಜಾನಪದ ಅಕಾಡೆಮಿ, ಜಾನಪದ ವಿವಿ, ಜಾನಪದ ಪರಿಷತ್ತು – ಮೂರು ಸಂಘಟನೆಗಳು; ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕರ್ನಾಟಕ ರಾಜ್ಯ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ, ಕರ್ನಾಟಕ ರಾಜ್ಯ ತಂತ್ರವಿದ್ಯಾ ಮಂಡಳಿ – ಹೀಗೆ ವಿಜ್ಞಾನಕ್ಕೆ ಮೂರು ಸಂಸ್ಥೆಗಳಿವೆ. ಕನ್ನಡ ವಿಶ್ವವಿದ್ಯಾಲಯವು ರೂಪಿಸಿದ ಕನ್ನಡ ಫಾಂಟ್ ಪರಿವರ್ತಕವನ್ನೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೂ ಲಕ್ಷಗಟ್ಟಳೆ ರೂಪಾಯಿ ಕೊಟ್ಟು ತಯಾರಿಸುತ್ತದೆ. ಹೀಗೆ ನಾಡಿನ ಸಂಪನ್ಮೂಲಗಳು ವ್ಯರ್ಥವಾಗುತ್ತಿವೆ. ಇವೆಲ್ಲವನ್ನೂ ಒಂದು ಕೇಂದ್ರೀಕೃತ, ಸಮನ್ವಯ ವ್ಯವಸ್ಥೆಗೆ ಒಳಪಡಿಸಬೇಕು ಎಂಬುದು ನನ್ನ ಮನವಿ.
- ಮುಕ್ತಜ್ಞಾನ ಎಂದರೆ ಕೇವಲ ಇಂಟರ್‌ನೆಟ್ ಅಲ್ಲ ಎಂಬ ಜ್ಞಾನೋದಯ. ಮುಕ್ತಜ್ಞಾನವೆಂದರೆ ಕಂಪ್ಯೂಟರ್ ಮತ್ತು ಅಂತರಜಾಲದ ಸಂಪರ್ಕ ಉಳ್ಳವರಿಗೆ ನೀಡುವ ಉಚಿತ ಮಾಹಿತಿ ಎಂಬ ತಪ್ಪು ಅಭಿಪ್ರಾಯ ಇದೆ. ಅಂತರಜಾಲವು ಜ್ಞಾನದ ಮಾಧ್ಯಮವೇ ಹೊರತು ಅದೇ ಸ್ವತಃ ಜ್ಞಾನವಲ್ಲ ಎಂಬ ಮಿತಿ ನಮಗೆ ಗೊತ್ತಿರಬೇಕು. ಜ್ಞಾನವನ್ನು ಎಲ್ಲ ಬಗೆಯ ಮಾಧ್ಯಮಗಳಿಂದ ಯುವಪೀಳಿಗೆಗೆ ಹಂಚುವುದೇ ನಿಜವಾದ ಚಳವಳಿ.
ಮುದ್ರಣ ರಂಗದಲ್ಲೂ ಮುಕ್ತಜ್ಞಾನದ ಸಾಧ್ಯತೆಗಳಿವೆ
ಮುಕ್ತ ಜ್ಞಾನ ಎಂದಕೂಡಲೇ ಮುದ್ರಿತ ಪುಸ್ತಕಗಳು ಮಾರಾಟಕ್ಕೆ, ಆನ್‌ಲೈನ್ ಮಾಹಿತಿ ಬಿಟ್ಟಿ ಎಂಬ ಮಾನಸಿಕತೆ ಬರುವುದು ಸಹಜ. ಆದರೆ ಮುದ್ರಣ ಮಾಧ್ಯಮದಲ್ಲೂ ಮುಕ್ತ ಮತ್ತು ಉಚಿತ ಮಾಹಿತಿಪುಸ್ತಕಗಳ ಚಳವಳಿ ಆರಂಭವಾಗುವುದರಿಂದ ಮಾತ್ರವೇ ನೈಜ ಮುಕ್ತಜ್ಞಾನದ ಚಳವಳಿ ಆರಂಭವಾಗುತ್ತದೆ. ಕನ್ನಡದಲ್ಲಿ ಈ ಬಗ್ಗೆ ನನ್ನ ಪುಟ್ಟ ಪ್ರಯತ್ನವಾಗಿ ಮಿತ್ರಮಾಧ್ಯಮ ಟ್ರಸ್ಟ್‌ನಿಂದ `ಕಂಪ್ಯೂಟರ್ ಮತ್ತು ಕನ್ನಡ’ ಎಂಬ ಕಲಿಕೆಯ ಪುಸ್ತಕವನ್ನು ಮುದ್ರಿಸಿ ವಿದ್ಯಾರ್ಥಿಗಳಿಗೆ ಹಂಚಿದ್ದೇನೆ. ದಾನಿಗಳು ಹೆಚ್ಚಾದರೆ ಇಂಥ ಪುಸ್ತಕ ದಾಸೋಹವನ್ನೂ ವಿಸ್ತರಿಸಬಹುದು.
ಈಗ ಮುದ್ರಣ ಮಾಧ್ಯಮವು ಬಲವಾಗಿರುವಾಗ ಆನ್‌ಲೈನ್ ಮುಕ್ತಜ್ಞಾನವು ಪುಸ್ತಕ ಪ್ರಕಟಣೆಗಳಿಗೇ ಕುತ್ತಾಗುತ್ತದೆ ಎಂದು ಕೆಲವು ಕನ್ನಡ ಲೇಖಕರೂ ಸೇರಿದಂತೆ ಹಲವರು ಭಾವಿಸಿದ್ದಾರೆ. ಇದು ತಪ್ಪು ಕಲ್ಪನೆ. ನೀವು ಇಂಗ್ಲಿಶ್ ಪ್ರಕಟಣಾ ರಂಗವನ್ನೇ ನೋಡಿದರೆ, ಅಮೆಝಾನ್ ಜಾಲತಾಣವು ಬಂದಮೇಲೆ ಪುಸ್ತಕಗಳ ಮಾರಾಟ ಹಲವು ಪಟ್ಟು ಹೆಚ್ಚಿದೆ. ಕಂಪ್ಯೂಟರಿನಲ್ಲೇ ಓದಬಹುದಾದ ಈ-ಬುಕ್‌ಗಳ ಮಾರಾಟವೂ ಹೆಚ್ಚಿದೆ. ಆನ್‌ಲೈನ್ ಪುಸ್ತಕ ಮತ್ತು ಮುದ್ರಿತ ಪುಸ್ತಕಗಳ ನಡುವಿನ ಅಂತರವು ಭಾರತದಲ್ಲಿ ಸದ್ಯಕ್ಕಂತೂ ಕಡಿಮೆಯಾಗುವುದಿಲ್ಲ. ಈ-ಪುಸ್ತಕಗಳ ಸಂಖ್ಯೆಯು ಹೆಚ್ಚಾದರೂ ನಷ್ಟವಿಲ್ಲ; ಇಲ್ಲಿ ಪುಸ್ತಕದ ಸರಬರಾಜಿನ, ಮುದ್ರಣದ ವೆಚ್ಚದ ಚಿಂತೆ ಇಲ್ಲ. ಆದ್ದರಿಂದ ಕಡಿಮೆ ಬೆಲೆ ಇಟ್ಟರೂ ಲಾಭವೇ. ಮೈಸೂರಿನ ಒಬ್ಬ ಹುಡುಗಿ ಕಿಂಡೆಲ್ ಸ್ಟೋರ್‌ನಲ್ಲಿ ತನ್ನದೇ ಒಂದು ಇಂಗ್ಲಿಶ್ ಕಾದಂಬರಿಯನ್ನು ಪ್ರಕಟಿಸಿದ್ದಾಳೆ ಎಂದು ನನ್ನ ಕಚೇರಿಯಲ್ಲಿ ಇದ್ದವರು ತಿಳಿಸಿದರು.
ತಂತ್ರಜ್ಞಾನವೊಂದು ದೈತ್ಯಾಕಾರದಲ್ಲಿ ಬೆಳೆದ ಮೇಲೆ ಅದನ್ನು ತಡೆದು ನಿಲ್ಲಿಸುವುದು ಅಸಾಧ್ಯ. ಆದ್ದರಿಂದ ಈ-ಪುಸ್ತಕಗಳ ಜನಪ್ರಿಯತೆ ಹೆಚ್ಚಿದರೆ ಅದನ್ನು ವಿರೋಧಿಸುವ ಬದಲು ಅದರೊಂದಿಗೆ ಬಾಳುವ ಸಹನೆಯನ್ನು ಸಾಂಪ್ರದಾಯಿಕ ಮಾರುಕಟ್ಟೆ ವ್ಯವಸ್ಥೆಗಳು ಹೊಂದಬೇಕಿದೆ ಎಂಬುದು ನನ್ನ ಖಚಿತ ಅಭಿಮತವಾಗಿದೆ. ಅದನ್ನು ನಮಗೆ ಬೇಕಾದ ವಿಷಯಕ್ಕೆ ಮಾತ್ರ ಸೀಮಿತಗೊಳಿಸಲೂ ಬರುವುದಿಲ್ಲ. ಮನುಕುಲವು ಈ ಎಲ್ಲ ರಾಜಿಗಳನ್ನು ಮೀರಿ ಮುನ್ನಡೆದಿದೆ.
ಇಂದು ಜಗತ್ತಿನಲ್ಲಿ ಕಲಿಕೆಗಾಗಿ ಇರುವ ಜ್ಞಾನವನ್ನು ಮುಕ್ತವಾಗಿ ಕೊಡುವ ಮಾತು ಹೆಚ್ಚಾಗಿ ಕೇಳಿ ಬರುತ್ತಿದೆ. ಆದರೆ ಸಂಶೋಧನೆ ಮತ್ತು ಉನ್ನತ ಹಂತದ ಜ್ಞಾನವನ್ನು ಪಡೆಯುವ ದಾರಿ ಇನ್ನೂ ಸುದೀರ್ಘವಾಗಿದೆ. ಒಂದೆಡೆ ಉನ್ನತ ಸಂಶೋಧನೆಗಳನ್ನು ಸಂರಕ್ಷಣಾವಾದದ ಬಂಧದಲ್ಲಿ ಬಿಗಿಯುವ ಬೆಳವಣಿಗೆ ಕಂಡುಬರುತ್ತಿದೆ; ಇನ್ನೊಂದೆಡೆ ನಮ್ಮ ದೇಸಿ ಅರಿವಿನ ದಾಖಲೀಕರಣವು ನಿಧಾನಗತಿಯಲ್ಲಿರುವುದು ಆತಂಕ ಹುಟ್ಟಿಸುತ್ತದೆ.
ಮಾತೃಭಾಷೆಯಲ್ಲಿ ಮುಕ್ತಜ್ಞಾನವನ್ನು ಬಿತ್ತರಿಸಲು ಯಾರ್‍ಯಾರು ಏನೇನು ಮಾಡಬೇಕು ಎಂಬ ಬಗ್ಗೆ ನನ್ನ ಸಲಹೆಗಳನ್ನು ಮಂಡಿಸಬಯಸುತ್ತೇನೆ:
- ತಂದೆ-ತಾಯಂದಿರು ಮನೆಯಲ್ಲಿ ಮಾತೃಭಾಷೆಯಲ್ಲೇ ಮಾತನಾಡಬೇಕು; ಸ್ಮಾರ್ಟ್‌ಫೋನ್‌ಗಳಲ್ಲಿ, ಸಮಾಜತಾಣಗಳಲ್ಲಿ, ಈಮೈಲಿನಲ್ಲಿ ಮಾತೃಭಾಷೆಯಲ್ಲೇ ವ್ಯವಹರಿಸಬೇಕು. ಇದು ನಾಗರಿಕರಾಗಿ ಭಾಷೆಯನ್ನು ರಕ್ಷಿಸುವ ಬಹುಮುಖ್ಯ ಹೊಣೆಗಾರಿಕೆ.
- ರಾಜ್ಯ ಸರ್ಕಾರಗಳು ಎಲ್ಲಾ ವಿಶ್ವವಿದ್ಯಾಲಯಗಳು, ಅಕಾಡೆಮಿಗಳು, ಸರ್ಕಾರದ ನಿಧಿಯ ಸಹಾಯ ಪಡೆದ ಸಂಘ-ಸಂಸ್ಥೆಗಳು ಪ್ರಕಟಿಸಿರುವ ಮಾಹಿತಿ ಸಾಹಿತ್ಯ, ಪಠ್ಯಪುಸ್ತಕಗಳನ್ನು, ಸರ್ಕಾರದ ಅಧಿಕೃತ ಜ್ಞಾನಕೋಶವಾದ `ಕಣಜ’ದಲ್ಲಾಗಲೀ, `ಭಾರತವಾಣಿ’ಯಲ್ಲಾಗಲೀ ಪಠ್ಯರೂಪದಲ್ಲಿ ಮುಕ್ತ ಬಳಕೆಗೆ ಪ್ರಕಟಿಸಬೇಕು. ಖಾಸಗಿ ಲೇಖಕರು ಮತ್ತು ಸಮಾಜಸೇವಾ ಸಂಸ್ಥೆಗಳೂ ಈ ಮುಕ್ತಜ್ಞಾನದ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಆಯಾ ರಾಜ್ಯಗಳಲ್ಲಿ ಇರುವ ಇತರೆ ಭಾಷೆಗಳ ಬಗ್ಗೆಯೂ ರಾಜ್ಯ ಸರ್ಕಾರಗಳು ಪಠ್ಯಕ್ರಮಗಳನ್ನು ರೂಪಿಸಬೇಕು. ತುಳು,ಕೊಂಕಣಿ,ಕೊಡವ, ಬ್ಯಾರಿ ಅಕಾಡೆಮಿಗಳ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ಎಲ್ಲ ಅಥವಾ ಪ್ರಮುಖ ಜ್ಞಾನಪ್ರವಾಹಗಳ ಮಾಹಿತಿ ಸಾಹಿತ್ಯದ ಪ್ರಕಟಣೆಗಳೂ ಬರಬೇಕು.
- ಭಾರತ ಸರ್ಕಾರದ ಮತ್ತು ವಿವಿಧ ರಾಜ್ಯ ಸರ್ಕಾರಗಳ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ ಯೋಜನೆಗಳಲ್ಲಿ ಪರಸ್ಪರ ಹೊಂದಾಣಿಕೆ ಮೂಡಿಸುವಂತೆ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಜಾಲವನ್ನು ಸ್ಥಾಪಿಸಬೇಕು. ಈ ಜಾಲದಲ್ಲಿ ಸಾರ್ವಜನಿಕರೂ ಇರುವಂತಾಗಿ ಭಾಷಾ ತಂತ್ರಾಂಶಗಳ ಅಭಿವೃದ್ಧಿ ಕಾರ್ಯಗಳನ್ನು ಕಾಲಮಿತಿಯಲ್ಲಿ ರೂಪಿಸುವಂತೆ ಯತ್ನಿಸಬೇಕು. ಬಹುಶಃ ಕಳೆದ ಹತ್ತು ವರ್ಷಗಳಲ್ಲಿ ಸಂಶೋಧನೆ ನಡೆಸಿ ರೂಪಿಸಿದ ಬಹುತೇಕ ತಂತ್ರಾಂಶಗಳು ಬಳಕೆಗೆ ಅಯೋಗ್ಯವಾಗಿವೆ. ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈವರೆಗೆ ನಡೆಸಿರುವ ಕೆಲಸ ಕಾರ್ಯಗಳ ಸ್ಥಿತಿವರದಿಗಳನ್ನು ಪ್ರಕಟಿಸಬೇಕು.
- ಸರ್ಕಾರದ ಎಲ್ಲ ಸುತ್ತೋಲೆಗಳೂ, ಯೋಜನೆಗಳ ಮಾಹಿತಿಗಳು ಮೊದಲ ಹಂತದಲ್ಲಿ ಬಹುಭಾಷಾ ಪಠ್ಯರೂಪದಲ್ಲಿ ಇರಬಹುದು; ಆಮೇಲೆ ಇವನ್ನು ಬಹುಭಾಷಾ ಅನುವಾದದ ಪ್ರತಿಗಳ ಮೂಲಕ ಹಂಚಬಹುದು. ಕನ್ನಡದಿಂದ ತೆಲುಗಿಗೆ ಅತ್ಯಂತ ಹೆಚ್ಚಿನ ಗುಣಮಟ್ಟದಿಂದ ಅನುವಾದ ಮಾಡುವ ತಂತ್ರಾಂಶವನ್ನು ಹೈದರಾಬಾದ್ ವಿಶ್ವವಿದ್ಯಾಲಯವು ರೂಪಿಸಿದೆ. ಇದೇ ರೀತಿ ಬಹುಭಾಷಾ ಅನುವಾದ ತಂತ್ರಾಂಶವನ್ನು ಇನ್ನೆರಡು ವರ್ಷಗಳಲ್ಲಿ ರೂಪಿಸುವುದು ಕಷ್ಟದ ಕೆಲಸವೇನಲ್ಲ. ಕನ್ನಡಿಗರೇ ಆದ ಡಾ|| ಕವಿ ನಾರಾಯಣಮೂರ್ತಿಯವರನ್ನು ನಾನು ಈ ತಂತ್ರಾಂಶವನ್ನು ರೂಪಿಸಿದ್ದಕ್ಕಾಗಿ ಅಭಿನಂದಿಸುತ್ತೇನೆ. ಯಾವುದೇ ಯಾಂತ್ರಿಕ ಅನುವಾದವೂ ಮನುಷ್ಯ ಅನುವಾದದ ಗುಣಮಟ್ಟವನ್ನು ಮೀರಲು ಕಷ್ಟವಿದೆ. ಆದರೆ ಮನುಷ್ಯ – ಯಂತ್ರ ಅನುವಾದಗಳ ಸಮನ್ವಯದಿಂದ ಅನುವಾದವನ್ನು ಕರಾರುವಾಕ್ಕಾಗಿ, ಬಹುಬೇಗ ಮಾಡಬಹುದು ಎಂಬುದು ಶ್ರೀ ನಾರಾಯಣಮೂರ್ತಿಯವರ ಅಭಿಮತ. ಅವರ ತಂತ್ರಾಂಶವು ಯಾವುದೇ ಸಾಮಾನ್ಯ ಗಣಕಯಂತ್ರದಲ್ಲಿ ಒಂದು ಸೆಕೆಂಡಿಗೆ ಒಂದು ಲಕ್ಷ ಕನ್ನಡ ವಾಕ್ಯಗಳನ್ನು ತೆಲುಗಿಗೆ ಅನುವಾದ ಮಾಡುತ್ತದೆ.
- ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಟೆಕ್ನಾಲಜಿ ಡೆವಲಪ್‌ಮೆಂಟ್ ಫಾರ್ ಇಂಡಿಯನ್ ಲಾಂಗ್ವೇಜಸ್ (ಟಿಡಿಐಎಲ್) ಎಂಬ ಸಂಸ್ಥೆಯು ಕಾರ್ಯ ನಿರ್ವಹಿಸುತ್ತ ನೂರಾರು ಭಾಷಾ ಸಾಧನಗಳನ್ನು ಪ್ರಕಟಿಸಿದೆ. ಈ ಸಾಧನಗಳನ್ನು ಸಾರ್ವಜನಿಕರ ಮುಕ್ತ ಬಳಕೆಗೆ ತತ್‌ಸಾಮಯಿಕಗೊಳಿಸಿ ಬಿಡುಗಡೆ ಮಾಡಬೇಕೆಂದು ನಾವೆಲ್ಲರೂ ವಿನಂತಿಸಬೇಕು.
- ಮಾತೃಭಾಷೆಯಲ್ಲೇ ಮುಕ್ತಜ್ಞಾನವನ್ನು ಪಸರಿಸಲು ಸರ್ಕಾರಗಳು, ಸ್ವಯಂಸೇವಾ ಸಂಸ್ಥೆಗಳು ಉಚಿತವಾದ ವಿವಿಧ ವಿಷಯಾಧಾರಿತ ಪಠ್ಯಕ್ರಮಗಳನ್ನು ರೂಪಿಸಬೇಕು. ಪ್ರಾಥಮಿಕ ಮಾಧ್ಯಮದಲ್ಲೇ ಕನ್ನಡವನ್ನು ತರುವುದು ಕಷ್ಟವಾಗಿರುವುವಾಗ ಪದವಿಪೂರ್ವ, ಪದವಿ ಮತ್ತು ಸ್ನಾತಕೋತ್ತರ ತರಗತಿಗಳಲ್ಲಿ ಮಾತೃಭಾಷಾ ಮಾಧ್ಯಮವನ್ನು ರೂಪಿಸುವುದು ಅತಿ ದೊಡ್ಡ ಸವಾಲು. ಇದನ್ನು ಎದುರಿಸಲು ಸರ್ಕಾರಗಳು ಎಲ್ಲ ತರಗತಿಗಳಲ್ಲೂ, ಎಲ್ಲ ವಿಷಯಗಳಲ್ಲೂ ಮಾತೃಭಾಷಾ ಪಠ್ಯಪುಸ್ತಕಗಳನ್ನು ರೂಪಿಸಲು ಮುಂದಾಗಬೇಕು. ಇಂಗ್ಲಿಶಿನಂತಹ ವಸಾಹತುಶಾಹಿ ಭಾಷೆಯ ಪ್ರಭಾವ ಮತ್ತಷ್ಟು ಹೆಚ್ಚುತ್ತಿರುವ ಸಂದರ್ಭದಲ್ಲಿ ನಾವು ಭಾಷೆಗಳ, ಲಿಪಿಗಳ ಬೆಳವಣಿಗೆಗೆ ಒತ್ತಡ ಹೇರುವ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ. ಯಾರಿಗೂ ಯಾವ ಒತ್ತಾಯವನ್ನೂ ಮಾಡುವುದಿಲ್ಲ ಎಂದಾದರೆ ನಾವು ಮಾತೃಭಾಷೆಯ ಬಗ್ಗೆ ಮಾತನಾಡುವುದೇ ವ್ಯರ್ಥ.
- ಮುಕ್ತಜ್ಞಾನದ ನಕಾಶೆ ರಚನೆ, `ಅರಿವಿನ ಗೋಮಾಳ’ದ ಸ್ಥಾಪನೆ: ಜ್ಞಾನವೆಂದರೆ ಸಮಕಾಲೀನ ವಿಜ್ಞಾನ, ಮಾನವಿಕ ವಿಷಯಗಳಷ್ಟೇ ಅಲ್ಲ ಎಂಬ ಹಿನ್ನೆಲೆಯಲ್ಲಿ ನಮ್ಮ ದೇಶದ ಎಲ್ಲ ಅರಿವಿನ ಶಾಖೆಗಳ ಸಮಗ್ರ ನಕಾಶೆಯೊಂದನ್ನು ಸಿದ್ಧಪಡಿಸುವ ತುರ್ತು ಈಗ ಇದೆ. ಈಗಲೂ ಅಲ್ಲಲ್ಲಿ ಕಂಡುಬರುವ ದೇಸಿ ಲೋಹ ವಿಜ್ಞಾನ, ನಾಟಿ ವೈದ್ಯಕೀಯದಂತಹ ದೇಸಿ ಜ್ಞಾನ, ನಮ್ಮ ವಾಸ್ತುಶಿಲ್ಪ, ಜನಪದ ಕಲಾಪ್ರಕಾರಗಳ ಪಾರಂಪರಿಕ ಜ್ಞಾನ, ಸಮುದಾಯದಲ್ಲಿ ನಶಿಸಿಹೋಗುತ್ತಿರುವ ಮೌಖಿಕ ಜ್ಞಾನ – ಹೀಗೆ ಎಲ್ಲ ಬಗೆಯ ಬದುಕು ಕಟ್ಟುವ ಅರಿವಿನ ಹರಿವನ್ನು ದಾಖಲಿಸುವ ಕೆಲಸಕ್ಕೆ ಈ ನಕಾಶೆಯನ್ನು ಬಳಸಬೇಕು. ಇದನ್ನು ನಾನು `ಅರಿವಿನ ಗೋಮಾಳ’ ಎಂದು ಕರೆಯುತ್ತೇನೆ. ಅರಿವನ್ನು ಎಲ್ಲರೂ ಸಮಾನವಾಗಿ ಪಡೆಯುವುದಕ್ಕೆ ಇಂಥ ವೇದಿಕೆಗಳು ಈ ಕಾಲದ ಅಗತ್ಯವಾಗಿದೆ. ಪಠ್ಯದಲ್ಲಿರುವ ಜ್ಞಾನದ ಹೊರತಾಗಿರುವ ಇಂಥ ಸಾವಿರಾರು ಕವಲುಗಳ ದೇಸಿ ಜ್ಞಾನವನ್ನು ವೈಜ್ಞಾನಿಕವಾಗಿ ದಾಖಲೀಕರಿಸುವ ಕೆಲಸ ನಿಧಾನವಾಗಿ ನಡೆಯುತ್ತಿರುವುದು ವಿಷಾದನೀಯ. ನಮ್ಮ ಸರ್ಕಾರಗಳು ವಿವಿಧ ಭಾಷೆಗಳಲ್ಲಿ ಇರುವ ಮೌಖಿಕ ಪರಂಪರೆಯ ಅರಿವಿನ ದಾಖಲೀಕರಣ, ಹಳೆಯ ತಾಳೆಗರಿಗಳ ದಾಖಲೀಕರಣ- ಪಠ್ಯಸಂಗ್ರಹ, – ಇವನ್ನೆಲ್ಲ ಅತ್ಯಂತ ಬೇಗ ಮಾಡದಿದ್ದರೆ ಈಗ ನಡೆಯುತ್ತಿರುವ ಕೆಲಸಗಳೂ ವ್ಯರ್ಥ. ಆರು ವರ್ಷಗಳಿಂದ ಮುಕ್ತಜ್ಞಾನ ರಂಗದ ಬಗ್ಗೆ ಅಧ್ಯಯನ ನಡೆಸುತ್ತಿರುವ ನನಗೆ ಈ ಅಪಾಯ ಹೆಚ್ಚು ಹೆಚ್ಚಾಗಿ ಕಾಣುತ್ತಿದೆ.
ಮುಕ್ತ ಮುಕ್ತ ಎಂದು ತಂತ್ರಾಂಶದಲ್ಲಿ ಮುಕ್ತತೆ ಇರಬೇಕೆಂದು ಹೋರಾಟ ಆರಂಭಿಸಿದ ಸಾಫ್ಟ್‌ವೇರ್ ಸಂತ ರಿಚರ್ಡ್ ಸ್ಟಾಲ್‌ಮನ್, ನೀವು ಗ್ಯಾಜೆಟ್ ಅಲ್ಲ ಎಂದು ಪ್ರತಿಪಾದಿಸಿದ ಜೆರೋನ್ ಲೇನಿಯೆರ್, `ನಾಲೆಜ್ ಕಾಮನ್ಸ್’ ಬಗ್ಗೆ ಆಳ ಅಧ್ಯಯನ ನಡೆಸಿದ ಚಾರ್ಲೆಟ್ ಹೆಸ್ ಮತ್ತು ಎಲಿನಾರ್ ಆಸ್ರಾಮ್, ವಿಕಿಪೀಡಿಯವನ್ನು ಆರಂಭಿಸಿ ಮುಕ್ತಜ್ಞಾನದ ರುಚಿ ಹತ್ತಿಸಿದ ಜಿಮ್ಮಿ ವೇಲ್ಸ್, ಪ್ರಾಜೆಕ್ಟ್ ಗುಟೆನ್‌ಬರ್ಗ್, ಆರ್ಕೈವ್, ಎಂ ಐ ಟಿ – ಈ ಎಲ್ಲ ವ್ಯಕ್ತಿಗಳು ಮತ್ತು ಸಂಸ್ಥೆಗಳ ಪ್ರಯತ್ನದಿಂದ ಜಾಗತಿಕವಾಗಿ ಮುಕ್ತಜ್ಞಾನದ ಅಭಿಯಾನವು ಹುರುಪಿನಿಂದ ನಡೆದಿದೆ. ಇದೆಲ್ಲವನ್ನೂ ಭಾರತೀಯ ಸಮಾಜದ ಸನ್ನಿವೇಶಗಳಿಗೆ ತಕ್ಕಂತೆ ಅಳವಡಿಸಿಕೊಂಡು ಮುಕ್ತಜ್ಞಾನ ಸಮಾಜವನ್ನು ಕಟ್ಟುವ ಹೊಣೆ ನಮ್ಮ ನಿಮ್ಮೆಲ್ಲರ ಮೇಲಿದೆ.
ನನ್ನ ಮುಕ್ತಜ್ಞಾನ ಯತ್ನಗಳಿಗೆ ಬೆನ್ನೆಲುಬಾಗಿ ನಿಂತಿದ್ದ ರಾಷ್ಟ್ರಕವಿ ಜಿಎಸ್‌ಎಸ್ ಅವರ ಕವನವೊಂದನ್ನು ಉಲ್ಲೇಖಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.
ಬೀಜದಿಂದ ಬೀಜಕ್ಕೆ
ಬೀಜದಿಂದ ಬೀಜಕ್ಕೆ
ಇದರ ಪಯಣ.
ಒಂದು ಹತ್ತಾಗಿ, ಹತ್ತು ನೂರಾಗಿ
ನೂರು ಸಾವಿರವಾಗಿ ಹೀಗೇ
ಅಸಂಖ್ಯವಾಗಿ ಅನಂತದ ಕಡೆಗೆ
ಇದರ ದಾರಿ.
ಬೀಜದಿಂದ ಬೀಜಕ್ಕೆ :
ಈ ನಡುವೆ ಎಷ್ಟೊಂದು ಮರ, ಎಷ್ಟು ಎಲೆ
ಎಷ್ಟು ಹೂ, ಎಷ್ಟು ಹಣ್ಣು !
ಎಲ್ಲಾ ಮಣ್ಣು
ಈ ಒಂದು ಬೀಜ ಕಡೆಗೂ ಮತ್ತೆ
ಬೀಜವಾಗುವುದಕ್ಕೆ.
ಬೀಜದಿಂದ ಬೀಜಕ್ಕೆ-
ನಡುವೆ ಎಷ್ಟೊಂದು ದೇಹ,
ಎಷ್ಟೊಂದು ಕುಡಿ-ಮಿಡಿ-ಕೊಂಬೆ ರೆಂಬೆಗಳ ಉದ್ದಕ್ಕು
ಜೋಗುಳದ ತೊಟ್ಟಿಲು ನೂರಾರು ಮೆಟ್ಟಿಲು
ಎಷ್ಟೊಂದು ಹಗಲಿರುಳು ಋತುಗಳಾರೈಕೆ
ಎಷ್ಟು ಬಗೆ ರಸವನ್ನೆತ್ತಿ
ಕಣ್ಣಿಗೆ ಕಿವಿಗೆ ಮೂಗು ನಾಲಗೆಗೆ
ರುಚಿಕೊಟ್ಟು, ಕಡೆಗೆಲ್ಲವನ್ನೂ ಮಣ್ಣಿಗೆ ಬಿಟ್ಟು,
ಕೊನೆಗೊಂದು ನೆನಪಾಗಿ, ಕಂಬನಿಯಾಗಿ,
ಕತೆಯಾಗಿ, ಕವಿತೆಯಾಗಿ,
ಲೈಬ್ರರಿಯ ತುಂಬ ಪುಸ್ತಕವಾಗಿ,
ಮತ್ತೆ ಒಂದು ಹತ್ತಾಗಿ ಹತ್ತು ನೂರಾಗಿ
ಲಕ್ಷೋಪಲಕ್ಷವಾಗಿ, ನೆಲದೊಳಗೆ ಬಿದ್ದು ಮೇಲೆದ್ದು
ಮರ ಮರದ ತುದಿಗೇರಿ ಮತ್ತೆ ಬೀಜವೆ ಆಗಿ
ಹಿಂದು ಮುಂದನ್ನೆಲ್ಲ ತನ್ನೊಳಗೆ ಸಂಧಿಸಿಕೊಂಡ ಬಿಂದುವಾಗಿ
ಬೀಜದಿಂದ ಬೀಜಕ್ಕೆ
ಬೀಜದಿಂದ ಬೀಜಕ್ಕೆ
ಇದರ ಪಯಣ : ಅಚಲೋಯಂ ಸನಾತನಃ”
ವಂದನೆಗಳು
==============================
ಬೇಳೂರು ಸುದರ್ಶನ
ಸಲಹೆಗಾರ, ಭಾರತವಾಣಿ ಯೋಜನೆ
ಭಾರತೀಯ ಭಾಷಾ ಸಂಸ್ಥೆ, ಮೈಸೂರು.
ಮಿಂಚಂಚೆ: beluru@beluru.com
ಕರವಾಣಿ: ೯೭೪೧೯೭೬೭೮೯
ಹಂಪಿಯ ಚಿತ್ರಗಳ ಕೃಪೆ: ಮಿತ್ರ, ನಮ್ಮ ನಾಡಿನ ಖ್ಯಾತ ಛಾಯಾಗ್ರಹಣಕಾರ ಶ್ರೀ ಶಿವಶಂಕರ ಬಣಗಾರ.