ಭಾರತದಲ್ಲಿ ಕುಡಿಯುವ ನೀರಿನ ಭೀಕರ ಸಮಸ್ಯೆಗೆ ಪರಿಹಾರವಾಗಿ ಅಮೆರಿಕಾದ ಎಸ್೨ಸಿ ಗ್ಲೋಬಲ್ ಸಿಸ್ಟಮ್ಸ್ ಎಂಬ ಸಂಸ್ಥೆಯು ಅಲಾಸ್ಕಾದಿಂದ ಪರಿಶುದ್ಧ ನೀರನ್ನು ಕಾರ್ಗೋ ಹಡಗುಗಳ ಮೂಲಕ ತಂದು ಮಾರಲು ನಿರ್ಧರಿಸಿದೆ. ಮುಂದಿನ ಆರೆಂಟು ತಿಂಗಳಲ್ಲೇ ಈ ಯೋಜನೆ ಸಾಕಾರಗೊಳ್ಳಲಿದೆ ಎಂದು ಸಂಸ್ಥೆಯು ಪ್ರಕಟಿಸಿದೆ. ಆದರೆ ಈ ಸಂಸ್ಥೆಯ ಹಣಕಾಸಿನ ಸಾಮರ್ಥ್ಯ, ಅಲಾಸ್ಕಾದಿಂದ ನೀರೆತ್ತುವುದರಲ್ಲಿ ಇರುವ ಸಮಸ್ಯೆಗಳು, ಭಾರತದ ನೀರಿನ ಅಗತ್ಯ – ಇವನ್ನೆಲ್ಲ ಗಮನಿಸಿದರೆ ಇದೊಂದು ಅಪ್ಪಟ ಕಮರ್ಶಿಯಲ್ ಕನಸೇ ಹೊರತು ಯಾವುದೇ ಸಾಮಾಜಿಕ ಉದ್ದೇಶವೂ ಇದರಲ್ಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ವಿಶೇಷವೆಂದರೆ ಅಲಾಸ್ಕಾದ ಸಿಟ್ಕಾ ನಗರದ ಬಳಿ ಇರುವ ಬ್ಲೂ ಲೇಕ್ ಸರೋವರದಿಂದ ಸಂಗ್ರಹವಾಗಿ ಶಾಂತಸಾಗರವನ್ನು ದಾಟಿ ಬರುವ ನೀರನ್ನು ಭಾರತದ ಪಶ್ಚಿಮ ತಟದ ಮುಂಬಯಿ, ಜವಹರಲಾಲ್ ನೆಹರು, ಮರ್ಮಗೋವಾ ಮತ್ತು ನವಮಂಗಳೂರು ಬಂದರುಗಳಲ್ಲಿ ಸಂಗ್ರಹಿಸಲಾಗುವುದು. ಅಲಾಸ್ಕಾದಲ್ಲಿ ೧೨.೫ ಪೈಸೆಗೆ ಲೀಟರಿನಂತೆ ದಿನಾಲೂ ೮೦ ಲಕ್ಷ ಗ್ಯಾಲನ್ನಷ್ಟು ನೀರನ್ನು ಖರೀದಿಸುವ ಎಸ್೨ಸಿ ಸಂಸ್ಥೆಯು ಭಾರತದಲ್ಲಿ ಇದೇ ನೀರನ್ನು ರೂ. ೧೨.೬೯ ಪೈಸೆಗೆ ಲೀಟರಿನಂತೆ ಮಆರಾಟ ಮಾಡಿ ಲಾಭ ಗಳಿಸುವುದಂತೆ. ಅಷ್ಟೇ ಅಲ್ಲ, ಭಾರತವನ್ನೇ ವಿಶ್ವ ಜಲಕೇಂದ್ರವನ್ನಾಗಿ ಮಾಡಿಕೊಂಡು ಇಲ್ಲಿಂದಲೇ ಅರಬ್ ಮತ್ತು ಆಫ್ರಿಕಾದ ದೇಶಗಳಿಗೂ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಈ ಎಲ್ಲಾ ದೇಶಗಳಿಗೂ ಭಾರತದಿಂದ ನಾಲ್ಕೇ ದಿನಗಳಲ್ಲಿ ನೀರು ಕಳಿಸಬಹುದು ಎಂಬುದೇ ಇಲ್ಲಿನ ಹೆಚ್ಚುಗಾರಿಕೆ.
ಈ ಸುದ್ದಿಯನ್ನು ಗಾರ್ಡಿಯನ್ ಪತ್ರಿಕೆಯು ಮೂರು ದಿನಗಳ ಹಿಂದೆ ಪ್ರಕಟಿಸಿದಾಗಿನಿಂದ ಎಲ್ಲೆಡೆ ಈ ಯೋಜನೆ ಸಾಧ್ಯವೇ, ಸಾಧುವೆ? ಎಂಬ ಚರ್ಚೆ ಆರಂಭವಾಗಿದೆ. ಹಾಗಾದರೆ ಈ ಎಸ್೨ಸಿ ಸಂಸ್ಥೆಗೆ ಈ ವಿಷಯದಲ್ಲಿ ಇರುವ ತಜ್ಞತೆಯೇನು? ಭಾರತಕ್ಕೆ ನಿಜಕ್ಕೂ ಅಲಾಸ್ಕಾದಿಂದ ನೀರು ತರಬೇಕಾದ ಅಗತ್ಯವಿದೆಯೆ? ಇಂಥ ಯೋಜನೆಗಳು ಹಿಂದೆಯೂ ಇದ್ದಿರಲಿಲ್ಲವೆ? ಅವೆಲ್ಲ ವಿಫಲವಾಗಲು ಕಾರಣವೇನು? ನೀರಿನ ಖಾಸಗೀಕರಣದ ಈ ಹೊಸ ವ್ಯಾಪಾರವನ್ನು ಭಾರತ ಸರ್ಕಾರವು ಕೂಡಲೇ ನಿಲ್ಲಿಸದಿದ್ದರೆ ಜಾಗತೀಕರಣದ ಹೆಸರಿನಲ್ಲಿ ಕುಡಿಯುವ ನೀರನ್ನೂ ಬಡವರ ಕೈಗೆ ಸಿಗದಂತೆ ಮಾಡುವ ಯತ್ನಕ್ಕೆ ಮೇಲುಗೈ ಆಗಬಹುದು.
ಭಾರತದಲ್ಲಿ ನೀರಿನ ಸಮಸ್ಯೆಯು ಭೀಕರವಾಗಿದೆ ಎಂದು ಎರಡು ವರದಿಗಳು ಹೇಳಿದ್ದನ್ನೇ ಎಸ್೨ಸಿಯಂಥ ಸಂಸ್ಥೆಗಳು ಬಳಸಿಕೊಳ್ಳುತ್ತಿವೆ. ಮೊದಲನೆಯ ವರದಿಯನ್ನು ಜೆಪಿ ಮೋರ್ಗನ್ ಸಂಸ್ಥೆ ತಯಾರಿಸಿದ್ದರೆ, ಎರಡನೆಯ ವರದಿಯನ್ನು ಗ್ರೈಲ್ ರಿಪೋರ್ಟ್ ಸಂಸ್ಥೆಯು ರೂಪಿಸಿದೆ. ಎರಡೂ ವರದಿಗಳಲ್ಲಿ ಭಾರತದ ನೀರಿನ ಪರಿಸ್ಥಿತಿಯನ್ನು ಅಧಿಕೃತವಾಗೇ ಅಧ್ಯಯನ ಮಾಡಿರುವುದೂ ಕಂಡುಬರುತ್ತದೆ. ಈ ವರದಿಗಳ ಅಂಕಿ ಅಂಶಗಳನ್ನು ಖಚಿತವಾಗಿ ಪರಿಶೀಲಿಸಲು ನನಗೆ ಸಾಧ್ಯವಾಗಿಲ್ಲ. ಆದರೆ, ಭಾರತದ ನೀರಿನ ಸಮಸ್ಯೆ ಭೀಕರವಾಗಿಲ್ಲದಿದ್ದರೂ ಗಂಭೀರವಾಗಿದೆ ಎನ್ನುವುದಂತೂ ನಿಜ. ಇದಕ್ಕೆ ನೀರಿನ ಕೊರತೆ ಕಾರಣವಲ್ಲ, ಬದಲಿಗೆ ನೀರಿನ ಬಳಕೆಯ ಅಸಮರ್ಪಕ ಅವೈಜ್ಞಾನಿಕ ನಿರ್ವಹಣೆಯೇ ಕಾರಣ ಎಂಬುದೂ ಅಷ್ಟೇ ನಿಜ. ಕಾವೇರಿಯಿಂದ ಕುಡಿಯುವ ನೀರು ತರಿಸಿಕೊಂಡು ತಮ್ಮ ಕಾರಿನಿಂದ ಹಿಡಿದು ತಿಕದವರೆಗೆ ಎಲ್ಲವನ್ನೂ ಆ ನೀರಿನಲ್ಲೇ ತೊಳೆಯುವ ಬೆಂಗಳೂರಿನ ನನ್ನಂಥ ಲಕ್ಷಾಂತರ ಜನರೇ ಇದಕ್ಕೆ ಒಂದು ನಿದರ್ಶನ.
ಈಗ ಈ ಸುದ್ದಿಯನ್ನು ಎಳೆ ಎಳೆಯಾಗಿ ಬಿಡಿಸಿ ನೋಡಬೇಕಿದೆ. ಆದ್ದರಿಂದಲೇ ತುಸು ಉದ್ದವಾದ ಈ ಬ್ಲಾಗನ್ನು ನೀವೆಲ್ಲ ಸಂಯಮದಿಂದ ಓದಬೇಕು. ಸಮಸ್ಯೆಯನ್ನು ಬುಡದಿಂದ ಅರ್ಥ ಮಾಡಿಕೊಳ್ಳದೇ ಪರಿಹಾರ ಹುಡುಕುವುದರಲ್ಲಿ ಅರ್ಥವಿಲ್ಲ.
ಮೊದಲು ಗಾರ್ಡಿಯನ್ ಪತ್ರಿಕೆಯು ವರದಿ ಮಾಡಿದ್ದರಲ್ಲಿ ಏನೇನು ವಿಷಯಗಳಿವೆ ಅನ್ನೋದನ್ನು ತಿಳಿದುಕೊಳ್ಳೋಣ:
ಹೀಗೆ ನೀರು ತರುವಲ್ಲಿ ಡೀಸೆಲ್ ಖರ್ಚೇ ನಿಮ್ಮ ಕಂಪೆನಿಯನ್ನು ತಿಂದು ಹಾಕುತ್ತದೆ ಎನ್ನುತ್ತಾರೆ ಆಂತಾರಾಷ್ಟ್ರೀಯ ಜಲತಜ್ಞ ಪೀಟರ್ ಗ್ಲೀಕ್. ಹಾಗಂತ ಇಂಥ ಯತ್ನಗಳು ಹಿಂದೆಯೂ ನಡೆದಿವೆ. ೧೯೯೭ರಲ್ಲೇ ೧೩ ಮೈಲು ದೂರದ ಈಜಿನಾ ದ್ವೀಪಕ್ಕೆ ಗ್ರೀಸ್ ದೇಶವು ನೀರನ್ನು ಹಡಗಿನಲ್ಲಿ ಸರಬರಾಜು ಮಾಡಿತ್ತು. ಸಿಂಗಾಪುರವು ಸದ್ಯ ಮಲೇಶ್ಯಾದಿಂದಲೇ ಶುದ್ಧ ನೀರನ್ನು ಆಮದು ಮಾಡಿಕೊಳ್ಳುತ್ತಿದೆ. ಆದರೆ ಮುಖ್ಯವಾಗಿ ಅರಬ್ ದೇಶಗಳು ಡಿಸ್ಯಾಲಿನೇಶನ್ ಸ್ಥಾವರಗಳನ್ನು ಇಟ್ಟುಕೊಂಡು ಉಪ್ಪುನೀರನ್ನೇ ಶುದ್ಧೀಕರಿಸಿಕೊಂಡು ಬಳಸುತ್ತಿವೆ. ಈ ನೀರು ಅಲಾಸ್ಕಾದ ನೀರಿಗಿಂತ ೧೮ ಪಟ್ಟು ಅಗ್ಗವಂತೆ. ಸೌದಿ ಅರೇಬಿಯಾ ಮತ್ತು ಕುವೈತ್ಗಳಲ್ಲಿ ಇಂಥ ಸ್ಥಾವರಗಳೇ ಅಲ್ಲಿನ ನೀರಿನ ಸಮಸ್ಯೆಯನ್ನು ಬಗೆಹರಿಸಿವೆ. ಈ ಮಧ್ಯೆ ಕೆನಡಾ ದೇಶವು ನೀರಿನ ರಫ್ತನ್ನು ನಿಷೇಧಿಸಲು ಚಿಂತನೆ ನಡೆಸಿದೆ.
ಗಾರ್ಡಿಯನ್ ವರದಿ ಹಾಗಿರಲಿ, ಎಸ್೨ಸಿ ಏನು ಹೇಳುತ್ತೆ? (ಗೊತ್ತಿರಲಿ, ಎಸ್೨ಸಿ ಎಂದರೆ ಸೋಸ್ ಟು ಕನ್ಸೂಮರ್ ಎಂದರ್ಥ) ಅಲಾಸ್ಕಾ ರಿಸೋರ್ಸ್ ಮ್ಯಾನೇಜ್ಮೆಂಟ್ (ಎ ಆರ್ ಎಂ) ಸಂಸ್ಥೆಯಲ್ಲಿ ಶೇ ೫೦ರಷ್ಟು ಒಡೆತನವನ್ನು ಹೊಂದಿರುವ ತಾನು ಎಲ್ಲಾ ವಿಧಾನಗಳಲ್ಲಿ, ಎಲ್ಲ ಬಗೆಯ ಗಾತ್ರದಲ್ಲಿ ನೀರು ಸರಬರಾಜು ಮಾಡಬಹುದು ಎನ್ನುತ್ತದೆ.
ಎಸ್೨ಸಿ ಸಂಸ್ಥೆಯ ಮುಖ್ಯಸ್ಥರು ಯಾರು? ಅಲೆಜಾಂಡ್ರೋ ಬಾಟಿಸ್ಟಾ ಎಂಬ ೫೩ ವರ್ಷ ವಯಸ್ಸಿನ ಮೆಕ್ಸಿಕನ್ ರಿಯಲ್ ಎಸ್ಟೇಟ್ ಉದ್ಯಮಿ ಈ ಸಂಸ್ಥೆಯ ಅಧ್ಯಕ್ಷ. ಈತನ ಒಟ್ಟು ಸಿರಿವಂತಿಕೆ ೨.೪೮ ಲಕ್ಷ ಡಾಲರ್ಗಳು ಎಂದು ಫೋರ್ಬಿಸ್ ವೆಬ್ಸೈಟ್ ಉಸುರುತ್ತದೆ. ಹಾಗೇ ಎಸ್೨ಸಿ ಸಂಸ್ಥೆಯಲ್ಲಿ ನಿರ್ದೇಶಕ ಮತ್ತು ಕೆನಡಾ – ಅಮೆರಿಕಾ ಸಂಸ್ಥೆಗಳ ಅಧ್ಯಕ್ಷ. ಜೋಸೆಫ್ ಡಿಕ್ಸನ್ ಎಂಬಾತ ಸಂಸ್ಥೆಯ ಹಣಕಾಸು ಅಧಿಕಾರಿ. ಈತನ ಒಟ್ಟು ಸಿರಿವಂತಿಕೆ ೫೪ ಸಾವಿರ ಡಾಲರ್ಗಳು. ಟೀನಾ ವ್ಯಾಂಡರ್ಹೇಡೆನ್ ಎಂಬಾಕೆ ಈ ಸಂಸ್ಥೆಯ ನಿರ್ದೇಶಕಿ; ಈಕೆಯ ಕೆಲಸ ಮಾರ್ಕೆಟಿಂಗ್, ಹೂಡಿಕೆ ಸಂಗ್ರಹ. ಇನ್ನೊಬ್ಬ ನಿರ್ದೇಶಕ ಮಾರ್ಕ್ ಲೆಂಬರ್ಟ್. ನೀರಿನ ಸಾಗಣೆ ವಿಷಯದಲ್ಲಿ ಅನುಭವ ಇರುವ ಏಕೈಕ ಅಧಿಕಾರಿ ಎನ್ನಬಹುದು.
ಎಸ್೨ಸಿ ಸಂಸ್ಥೆಯ ಸ್ವಯಂ ಹೇಳಿಕೆ ಇಲ್ಲಿದೆ:
ಈ ಸಂಸ್ಥೆಯು ಅಮೆರಿಕಾ ಸರ್ಕಾರಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ ಯೋಜನೆಯ ಕುರಿತು ಇರುವ ರಿಸ್ಕ್ಗಳನ್ನು ಹೀಗೆ ಪಟ್ಟಿ ಮಾಡಿದೆ: ನಮ್ಮದು ಹೊಸ ವ್ಯವಹಾರ. ಇದರಲ್ಲಿ ನಮ್ಮ ತಂಡಕ್ಕೆ ಇರುವ ಅನುಭವ ಕಡಿಮೆ. ಆದ್ದರಿಂದ ನಮ್ಮಲ್ಲಿ ಹಣ ಹೂಡುವುದು ಒಂದು ತಾಪತ್ರಯದ ವಿಚಾರವೇ ಹೌದು. ನಾವು ಈವರೆಗೆ ಯಾವುದೇ ಕಾರ್ಯಾಚರಣೆಯನ್ನೂ ಮಾಡಿಲ್ಲ. ಜಲಸಾಗಣೆ ಬಗ್ಗೆ ಕೇವಲ ಪ್ರಯೋಗ ಮಾಡಿದ್ದೇವೆ ಅಷ್ಟೆ. ನಮ್ಮ ಯೋಜನೆಯ ಆರ್ಥಿಕ ವಯಬಿಲಿಟಿಯೇ ಸಂಶಯಾಸ್ಪದವಾಗಿದೆ. ಅಕಸ್ಮಾತ್ ನಾವು ಜಲಸಾಗಣೆ ವ್ಯವಸ್ಥೆಯನ್ನು ಸ್ಥಾಪಿಸದೇ ಇದ್ದರೆ ನಮಗೆ ಬೇರೆ ಆದಾಯವೇ ಇರುವುದಿಲ್ಲ. ನಮ್ಮ ವ್ಯವಹಾರ ಮುಂದುವರಿಸಲು ನಮಗೆ ಇನ್ನೂ ಬಂಡವಾಳ ಬೇಕಿದೆ. ಬಂಡವಾಳದ ಕೊರತೆಯಿಂದ ಪ್ರಸ್ತುತ ನಾವು ಯಾವುದೇ ಹೊಸ ಸಾಧನ ಖರೀದಿ ಒಪ್ಪಂದವನ್ನೂ ಹೊಂದಿಲ್ಲ. ಅದೂ ಅಲ್ಲದೆ ನಾವು ನೀರು ಮಾರಾಟದ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆಗೆ ಗುರಿಯಾದರೆ ಹೂಡಿಕೆದಾರರಾದ ನಿಮ್ಮ ಎಲ್ಲ ಹಣವೂ ಕಳೆದುಹೋಗುತ್ತದೆ. ಇದಲ್ಲದೆ ನಾವು ಪೆನ್ನಿಸ್ಟಾಕ್ ನಿಯಮಗಳ ಅಡಿಯಲ್ಲಿ ಬರೋದ್ರಿಂದ ನಮ್ಮ ದಾಸ್ತಾನನ್ನು ಮರುಮಾರಾಟ ಮಾಡುವುದಕ್ಕೆ ನಿರ್ಬಂಧಗಳಿವೆ.
(ಪೆನ್ನಿ ಸ್ಟಾಕ್ ಅಂದ್ರೆ: ನಾಸ್ಡಾಕ್ – ಅಮೆರಿಕಾದ ಶೇರು ವಿನಿಮಯ ಕೇಂದ್ರದಲ್ಲಿ ಪಟ್ಟೀಕರಣವಾಗಿರಲ್ಲ; ಅದರ ಶೇರು ಬೆಲೆ ೫ ಡಾಲರ್ಗಿಂತ ಕಡಿಮೆಯಾಗಿರುತ್ತೆ; ೫೦ ಲಕ್ಷ ಡಾಲರ್ಗಿಂತ ಕಡಿಮೆ ಆಸ್ತಿಯನ್ನು ಹೊಂದಿದ ಕಂಪೆನಿಯಾಗಿರುತ್ತೆ. ಅಲ್ಲದೆ ಅದು ನಾಸ್ಡಾಕ್ನ ಪಿಂಕ್ಶೀಟ್ನಲ್ಲಿ ಅಥವಾ ಓವರ್ ದಿ ಕೌಂಟರ್ ಬುಲೆಟಿನ್ ಬೋರ್ಡ್ನಲ್ಲಿ ಪಟ್ಟಿಯಾಗಿರುತ್ತೆ. ಅಂದಮೇಲೆ ಗೊತ್ತಾಯಿತಲ್ಲ, ಎಸ್೨ಸಿ ಸಂಸ್ಥೆಯ ಆರ್ಥಿಕ ಸಾಮರ್ಥ್ಯ ಏನೆಂದು…)
ನಷ್ಟದ ಕಂಪೆನಿ
ಎಸ್೨ಸಿ ಸಂಸ್ಥೆಯು ಸಲ್ಲಿಸಿದ ಅಧಿಕೃತ ವಾರ್ಷಿಕ ಹಣಕಾಸು ದಾಖಲೆಗಳ ಪ್ರಕಾರ ಸಂಸ್ಥೆಯ ೨೦೧೦ರ ಜೂನ್ ೩೦ಕ್ಕೆ ಕೊನೆಗೊಂಡಂತೆ ಅಕ್ಯುಮುಲೇಟೆಡ್ ನಷ್ಟ ೫೫.೨೭ ಲಕ್ಷ ಡಾಲರ್ಗಳು. ಜೂನ್೩೦ಕ್ಕೆ ಕೊನೆಗೊಂಡಂತೆ ಮೂರು ತಿಂಗಳ ನಷ್ಟವೇ ೨.೪೮ ಲಕ್ಷ ಡಾಲರ್ಗಳು. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪೆನಿಯು ೪೬ ಸಾವಿರ ಡಾಲರ್ ನಷ್ಟ ಅನುಭವಿಸಿತ್ತಂತೆ. ಸಂಸ್ಥೆಯ ಖರ್ಚುಗಳು ಆರು ತಿಂಗಳಲ್ಲಿ ೧.೮೨ ಲಕ್ಷ ಡಾಲರ್ಗಳು. ಈ ಆರು ತಿಂಗಳಲ್ಲಿ ಸಂಥೆಯು ಬಳಸಿದ ನಗದು ಹಣ ೧.೨೨ ಲಕ್ಷ ಡಾಲರ್ಗಳು.
ಇದೇ ವರದಿಯಲ್ಲಿ ಎಸ್೨ಸಿ ಸಂಸ್ಥೆಯು ಇರಾಖಿನ ಖಾಸಗಿ ಪಾರ್ಟಿಗಳ ಜೊತೆ ಒಪ್ಪಂದ ಮಾತುಕತೆ ನಡೆಸಿರುವುದಾಗಿಯೂ, ಭಾರತ ಮತ್ತು ಸೌದಿ ಅರೇಬಿಯಾದಲ್ಲಿ ಈಗಾಗಲೇ ಸಾಗಣೆ ಜಾಲ ಹೊಂದಿರುವ ಕಂಪೆನಿಗಳ ಜೊತೆ ಮಾತುಕತೆ ಶುರು ಮಾಡಿರುವುದಾಗಿಯೂ ತಿಳಿಸಿದೆ. ಮಾರ್ಕೆಟ್ ಕಾರ್ಯಗಳಿಗಾಗಿ ಶಹೀದ್ ವೋಹ್ರಾ ಮತ್ತು ರಾಡ್ ಬಾರ್ಲೆಟ್ ಎಂಬುವವರನ್ನು ಸಂಸ್ಥೆಯು ನೇಮಿಸಿಕೊಂಡಿದೆ. ಶಾಹಿದ್ಗೆ ಹಡಗು ಉದ್ಯಮದಲ್ಲಿ ಅನುಭವವಿದೆ.
ಇಷ್ಟೆಲ್ಲ ಮಾಹಿತಿಯನ್ನು ಬದಿಗಿಟ್ಟು, ಎಸ್೨ಸಿ ಸಂಸ್ಥೆಯು ಈಗ ಏನೇನು ಸಾಧಿಸಿದೆ ಅನ್ನೋದನ್ನು ನೋಡೋಣ: ಸಿಟ್ಕಾ ನಗರದಲ್ಲಿ ನೀರು ಸಾಗಣೆಗೆ ಬೇಕಾದ ವ್ಯವಸ್ಥೆಯನ್ನು ನಿರ್ಮಿಸಲು ಅದು ಇನ್ನೂ ಕಾಮಗಾರಿ ಪರವಾನಗಿಯನ್ನೇ ಪಡೆದಿಲ್ಲ. ಈ ಕೆಲಸಕ್ಕೆ ಅಮೆರಿಕಾದ ಸೇನಾ ಇಂಜಿನಿಯರ್ಗಳನ್ನು ಬಳಸಿದರೂ ಕನಿಷ್ಟ ಆರು ತಿಂಗಳು ಬೇಕಾಗುತ್ತಂತೆ.
ಎಸ್೨ಸಿ ಸಂಸ್ಥೆಯು ಅಲಾಸ್ಕಾದಲ್ಲಿ ಎ ಆರ್ ಎಂ ಮೂಲಕ ಬಾಟ್ಲಿಂಗ್ಗಾಗಿ ಟ್ರೂ ಅಲಾಸ್ಕಾ ಬಾಟ್ಲಿಂಗ್ ಅನ್ನೋ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಆದರೆ ಈ ಕಂಪೆನಯು ವ್ಯವಹಾರ ನಿಭಾಯಿಸಲಾಗದೆ ತನ್ನನ್ನೇ ಹಣಕಾಸು ನೀಡಿಕೆ ಸಂಸ್ಥೆ ಕೋವ್ ಪಾರ್ಟರ್ನ್ಸ್ಗೆ ಮಾರಿಕೊಂಡಿತ್ತು. ಈ ವರ್ಷದೊಳಗೆ ಅದು ಸಿಟ್ಕಾದಿಂದ ೫ ಕೋಟಿ ಗ್ಯಾಲನ್ ನೀರನ್ನು ಎತ್ತಲೇಬೇಕು; ಇಲ್ಲವಾದರೆ, ಅದಕ್ಕೆ ನೀಡಿರುವ ನೀರೆತ್ತುವ ಗುತ್ತಿಗೆಯೇ ರದ್ದಾಗುತ್ತೆ.
ಭಾರತಕ್ಕೆ ಅಲಾಸ್ಕಾದ ನೀರು ಬೇಕೆ?
ಏನೇ ಇರಲಿ, ಭಾರತಕ್ಕೆ ಅಲಾಸ್ಕಾದಿಂದ ನೀರು ತರಬೇಕೆ ಅನ್ನೋದೇ ಇಲ್ಲಿ ನಾವು, ಸಮಾಜ, ಸರ್ಕಾರ ನಿರ್ಧರಿಸಬೇಕಾಗಿರೋ ವಿಷಯ. ಹಿಮಾಲಯದ ಗ್ಲೇಸಿಯರ್ಗಳು ಕುಗ್ಗುತ್ತಿವೆ ಎಂಬುದನ್ನು ಒಪ್ಪಿಕೊಂಡರೂ, ಮಳೆಯ ಪ್ರಮಾಣ ಹೆಚ್ಚುಕಡಿಮೆಯಾಗಿದೆ ಎನ್ನುವುದನ್ನು ಒಪ್ಪಿಕೊಂಡರೂ, ನಮ್ಮ ದೇಶದಲ್ಲಿ ನೀರಿನ ನಿರ್ವಹಣೆ ಸರಿಯಾದರೆ ಸಮಸ್ಯೆ ಇರುವುದಿಲ್ಲ ಎನ್ನುವುದು ಒಂದು ಸಹಜ ತರ್ಕ. ರಾಜಕೀಯ ದೃಢತೆ ಇದ್ದರೆ ನೀರನ್ನು ಸಂಗ್ರಹಿಸುವ ಸಾವಿರಾರು ವಿಧಾನಗಳನ್ನು ಅನುಸರಿಸಿ ಇಡೀ ದೇಶವು ನೀರಿನ ಸಮೃದ್ಧತೆಯಿಂದ ಕೂಡಿರುವಂತೆ ಮಾಡಬಹುದು. ಕುಡಿಯುವ ನೀರು ಶುದ್ಧವಾಗಿರಬೇಕು, ನಿಜ. ಹಾಗಂತ ಶತಮಾನಗಳ ಕಾಲ ನಮ್ಮ ಹಿರೀಕರು ವಿಷಪೂರಿತ ನೀರನ್ನೇನಾನದೂ ಕುಡಿದಿದ್ದರೆ ನಮ್ಮ ಪೀಳಿಗೆ ಇಷ್ಟೆಲ್ಲ ಆರೋಗ್ಯದಿಂದ ಇರುತ್ತಿರಲಿಲ್ಲ. ಅತಿಯಾದ ಕೀಟನಾಶಕಗಳ ಬಳಕೆ, ಅಂತರ್ಜಲಕ್ಕೆ ರಾಸಾಯನಿಕಗಳ ಸೇರ್ಪಡೆ, ಎಲ್ಲಕ್ಕಿಂತ ನೀರಿನ ದುಂದು ಬಳಕೆ – ಇದೇ ನಮ್ಮ ನೀರಿನ ಸಮಸ್ಯೆಗೆ ಕಾರಣ. ಅದಿಲ್ಲದೇ ಹೋಗಿದ್ದರೆ ರಾಜಸ್ಥಾನದಲ್ಲಿ ರಾಜೇಂದ್ರ ಸಿಂಗ್ ಬತ್ತಿಹೋದ ನದಿಗಳಿಗೆ ಜೀವ ತರುವುದು ಎಂದರೇನು?
ನೀರಿಗಾಗಿ ಹೋರಾಡುವ ಪತ್ರಕರ್ತರ ದೊಡ್ಡ ಪಡೆಯೇ ನಮ್ಮಲ್ಲಿದೆ. ಕರ್ನಾಟಕದ ಶ್ರೀಪಡ್ರೆ ಅಂಥ ನೀರು ತಜ್ಞ ಪತ್ರಕರ್ತರು. ನೀರಿನ ಸಮರ್ಥ ನಿರ್ವಹಣೆಯಿಂದ ಹೇಗೆ ಕೊರತೆಯನ್ನು ಕಳೆದು ಮಿಗತೆ ಸಾಧಿಸಬಹುದು ಎಂಬ ಅಸಂಖ್ಯ ಸಮಕಾಲೀನ ಕಥೆಗಳನ್ನು ಅವರು ನೀಡಿದ್ದಾರೆ. ಇಂಥ ಪತ್ರಿಕೋದ್ಯಮ ದೇಶದೆಲ್ಲೆಡೆ ಬೆಳೆದಿದೆ. ಹಲವು ಸರ್ಕಾರೇತರ ಸಂಸ್ಥೆಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ.
ನಮ್ಮ ದೇಶದ ಅಂತರ್ಜಲವನ್ನೇ ಖಾಸಗೀಕರಣ ಮಾಡುವ ಯತ್ನಗಳು ಹಲವೆಡೆ ನಡೆದಿವೆ. ಬೆಂಗಳೂರಿನಲ್ಲಿ ನೀರಿನ ಕೊರತೆ ಇದ್ದರೆ ಖಾಸಗಿ ಸಂಸ್ಥೆಗಳು ಇಂಥ ಕೊಳವೆ ಬಾವಿಗಳಿಂದಲೇ ನೀರು ಎತ್ತುತ್ತವೆ; ದುಬಾರಿ ಬೆಲೆಗೆ ಮಾರುತ್ತವೆ. ಜಲ ನಮ್ಮ ರಾಷ್ಟ್ರೀಯ ಸಂಪತ್ತು. ಅದನ್ನು ಖಾಸಗೀಕರಣಗೊಳಿಸುವುದೇ ಒಂದು ಅಪರಾಧ. ಅದರ ಜೊತೆಗೆ ಅಲಾಸ್ಕಾದಿಂದ ನೀರು ತಂದು ಕುಡಿಯುವುದು ಎಂದರೆ….? ನಮ್ಮಲ್ಲಿ ಇರುವ ಸಾಧ್ಯತೆಗಳು ಕೊನೆಗೊಳ್ಳುವರೆಗೂ ಇಂಥ ಸಂಭಾವ್ಯತೆಯ ಬಗ್ಗೆ ಯೋಚಿಸುವುದು ಎಷ್ಟು ಸರಿ?
ನೀರಿನ ಸಮಸ್ಯೆಗೆ ನದೀಜೋಡಣೆಯೇ ಪರಿಹಾರ ಎಂಬ ಸ್ವದೇಶಿ ಚಿಂತನೆಯೊಂದು ನಮ್ಮಲ್ಲೀಗ ಬಲವಾಗಿದೆ. ಆದರೆ ಅದು ಎಷ್ಟು ಅಪಾಯಕಾರಿ ಎಂಬ ಕಲ್ಪನೆಯೂ ಅಂಥ ಅಭಿಯಾಣಿಗಳಿಗೆ ಇಲ್ಲದಿರುವುದು ಶೋಚನೀಯ. ಪ್ರಕೃತಿಯನ್ನು ಮೀರಿ ನಾವೇನೂ ಮಾಡಲಾರೆವು; ಪ್ರಕೃತಿಯು ರೂಪಿಸಿದ ಜೀವ ಸಂತುಲನ ವ್ಯವಸ್ಥೆಯನ್ನು ಹಾಳು ಮಾಡುವುದಕ್ಕೆ ನಮಗೆ ಹಕ್ಕಿಲ್ಲ ಎಂದು ನಾವು ತಿಳಿದುಕೊಳ್ಳುವವರೆಗೂ ಇಂಥ ಕಲ್ಪನೆಗಳಿಗೆ ಸ್ಕೋಪ್ ಇದ್ದೇ ಇರುತ್ತದೆ.
ಎಸ್೨ಸಿ ಸಂಸ್ಥೆಯ ಹೇಳಿಕೆಯಿಂದ ನಮ್ಮ ದೇಶದ ನೀರಿನ ಸಮಸ್ಯೆಯ ಬಗ್ಗೆ ಚರ್ಚೆ ಎದ್ದರೆ ಒಳ್ಳೇದೇ.