೨೦೧೬ರ ಮಾರ್ಚ್ ೧೧ರ ಗೆಜೆಟ್ ಅಧಿಸೂಚನೆಯಂತೆ ಕರ್ನಾಟಕದಲ್ಲಿ ಪ್ಲಾಸ್ಟಿಕ್ ನಿಷೇಧವಾಗಿದೆ. ಈ ನಿಷೇಧವನ್ನು ನಾನೂ ನಿಮ್ಮಂತೆಯೇ ತುಂಬಾ ಖುಷಿಯಿಂದ ಸ್ವೀಕರಿಸಿದ್ದೆ. ಈಗ ಪ್ಲಾಸ್ಟಿಕ್ ನಿಷೇಧದ ಅಧಿಸೂಚನೆಯನ್ನು ಓದಿದ ಮೇಲೆ `ಇದೂ ನಿಷೇಧವೆ?’ ಎಂಬ ಪ್ರಶ್ನೆ ಮೂಡಿದೆ. ಈ ಅಧಿಸೂಚನೆಯ ಪ್ರಕಾರ ಪ್ಯಾಕೇಜಿಂಗ್ ಮಾಡುವ ಸಂದರ್ಭದಲ್ಲಿ ಅವಿಭಾಜ್ಯವಾಗಿ ಉಪಯೋಗಿಸುವ ಪ್ಲಾಸ್ಟಿಕ್ನ ಮೇಲೆ ಯಾವುದೇ ನಿಷೇಧವಿಲ್ಲ. ಈ ವಿನಾಯ್ತಿಯು ನೋಡಲೇನೋ ಸುಂದರ, ಸರಳ; ಒಳಗೆ ನೋಡಿದರೆ ಇದರ ಪರಿಣಾಮ ಅಕರಾಳ, ವಿಕರಾಳ. ಒಟ್ಟಾರೆ ಪರಿಣಾಮವಂತೂ ನಗಣ್ಯ.
ಉತ್ಪಾದನೆಯ ಸಂದರ್ಭದಲ್ಲೇ ಅವಿಭಾಜ್ಯವಾಗಿ ಪ್ಲಾಸ್ಟಿಕ್ನ್ನು ಬಳಸುವವರಾರು? ಸಾಮಾನ್ಯವಾಗಿ ರಾಜ್ಯದ ವಿವಿಧ ನಗರಗಳಲ್ಲಿ ತಮ್ಮ ಉತ್ಪನ್ನಗಳನ್ನು ಸರಬರಾಜು ಮಾಡುವ ಸಾಮರ್ಥ್ಯವುಳ್ಳ ಸಂಸ್ಥೆಗಳು. ಆಯಾ ಊರುಗಳಲ್ಲಿ ಕರಿದ ಪದಾರ್ಥಗಳನ್ನು, ಕೆಲವು ಗೃಹ ಉತ್ಪನ್ನಗಳನ್ನು ಪ್ಲಾಸ್ಟಿಕ್ ಕವರುಗಳಲ್ಲಿ ತುಂಬಿ ಮಾರುವ ಕೆಲವರನ್ನು ಬಿಟ್ಟರೆ, ಇಂಥ ಪ್ಯಾಕೇಜಿಂಗ್ನ್ನು ಬಳಸುವವರು – ಸರಣಿ ಅಂಗಡಿಗಳನ್ನು ಇಟ್ಟುಕೊಂಡ ಮಾಲ್ಗಳು, ಬಹುರಾಷ್ಟ್ರೀಯ, ಬೃಹತ್ ಉದ್ದಿಮೆಗಳು – ಇಂಥವೇ.
ಸಾಂಪ್ರದಾಯಿಕ ದಿನಸಿ ಅಂಗಡಿಗಳು, ದವಸ ಧಾನ್ಯಗಳನ್ನು ಬಿಡಿಯಾಗಿ ಮಾರುವವರು, ತರಕಾರಿ ಅಂಗಡಿಗಳು, ಹೂವು – ಹಣ್ಣು ಮಾರುವವರು, ಚಿಲ್ಲರೆ ಗಾಡಿ ಅಂಗಡಿಗಳು, – ಹೀಗೆ ನೀವು ಗಮನಿಸಿದರೆ, ನಿಮಗೆ ಕಡಿಮೆ ಹಣದಲ್ಲಿ ಹೆಚ್ಚು ನಂಬಿಗಸ್ಥ ಸೇವೆ ನೀಡುತ್ತಿರುವ ಸ್ಥಳೀಯ ಮಾರಾಟಗಾರರು ಹೆಚ್ಚಾಗಿ ಲೂಸ್ / ಚಿಲ್ಲರೆ ಮಾರಾಟ ಮಾಡುತ್ತಾರೆ. ಅದಕ್ಕಾಗಿ ಅವರು ಪ್ಲಾಸ್ಟಿಕ್ ಬ್ಯಾಗುಗಳನ್ನು, ಕವರುಗಳನ್ನು ಬಳಸುತ್ತಾರೆ. ಇವರು ಮಾತ್ರವೇ ಈಗ ಕಾಗದದ / ಬಟ್ಟೆಯ ಚೀಲಗಳನ್ನು ಬಳಸಬೇಕಾದ ಸನ್ನಿವೇಶ ಉಂಟಾಗಿದೆ.
ಅಂದರೆ, ಪ್ಲಾಸ್ಟಿಕ್ ನಿಷೇಧದ ಪಾಲನೆ ಮಾಡಲು ನಮ್ಮ ಘನ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೆರವಾಗುವವರು ಮಧ್ಯಮ ಮತ್ತು ಬಡ ವರ್ಗದ ಜನತೆ ಮತ್ತು ಅವರಿಗೆ ಚಿಲ್ಲರೆ ಮಾರಾಟದ ಅನುಕೂಲ ಮಾಡಿಕೊಟ್ಟಿದ್ದ ಮಾರಾಟಗಾರರು! ಎಂಥ ಸಾಮಾಜಿಕ ನ್ಯಾಯ ಅಲ್ಲವೆ? ಹೇಳು ನಾವು ಬಂಡವಾಳ ಶಾಹಿ ವಿರೋಧಿ; ಆದರೆ ಹೆಚ್ಚು ಬಂಡವಾಳ ಹೂಡಿ ಪ್ರಿ-ಪ್ಯಾಕೇಜಿಂಗ್ ಮಾಡಿದರೆ ಪ್ಲಾಸ್ಟಿಕ್ ನಿಷೇಧದ ಬಿಸಿ ಯಾವ ದೊಡ್ಡ ಉದ್ದಿಮೆಯ, ಅಂಗಡಿಯ ಕುಂಡೆಗೂ ಮುಟ್ಟುವುದಿಲ್ಲ. ಇದನ್ನು `ರಾಜ್ಯದಾದ್ಯಂತ ಪ್ಲಾಸ್ಟಿಕ್ ನಿಷೇಧ’ ಎಂದು ಕರೆದರೆ, ಇದರಂಥ ಆತ್ಮವಂಚನೆ ಇನ್ನೊಂದಿಲ್ಲ; ಆತ್ಮಸಾಕ್ಷಿಯನ್ನು ನಂಬಿರುವವರಿಗೆ ಈ ಮಾತು!!
ಪ್ಲಾಸ್ಟಿಕ್ ಕ್ಯಾರಿ ಬ್ಯಾಗುಗಳನ್ನು ನಿಷೇಧಿಸುವುದನ್ನಾಗಲೀ, ಮದುವೆ-ಶುಭ ಸಮಾರಂಭಗಳಲ್ಲಿ ಅತಿಯಾಗಿ ಬಳಸುವ ಪ್ಲಾಸ್ಟಿಕ್ ತಟ್ಟೆ, ಲೋಟ, ಚಮಚಾ, ಫ್ಲೆಕ್ಸ್ಗಳನ್ನು ನಿಷೇಧಿಸುವುದನ್ನಾಗಲೀ ನಾನು ವಿರೋಧಿಸುತ್ತಿಲ್ಲ. ಅವೆಲ್ಲವೂ ಒಳ್ಳೆಯದೇ. ಆದರೆ ಪ್ರಿ-ಪ್ಯಾಕೇಜಿಂಗ್ ಉದ್ದಿಮೆಯನ್ನು, ಅದನ್ನು ಬಳಸಬಹುದಾದ ದೊಡ್ಡ ಕಂಪೆನಿಗಳ ಉತ್ಪನ್ನಗಳನ್ನು ಮಾತ್ರ ನಿಷೇಧದಿಂದ ಹೊರಗಿಟ್ಟಿರುವ ಜಾಣತನ ತೋರಿರುವುದು ಮಾತ್ರ ಖಂಡನೀಯ.
ಉದಾಹರಣೆಗೆ: ನೀವು ಮಾಲ್ಗೆ ಹೋಗಿ ಒಂದು ಕಿಲೋ ಸಕ್ಕರೆಯ ಪ್ಯಾಕನ್ನು (ಇದು ೩೦ ರೂ.ನಿಂದ ೪೫ ರೂ.ವರೆಗೆ ಇರುತ್ತದೆ) ಎತ್ತಿಕೊಂಡರೆ ಅದು ನಿಷೇಧ ಆಗುವುದಿಲ್ಲ; ಅದೇ ಸಕ್ಕರೆಯನ್ನು ಸಾಂಪ್ರದಾಯಿಕ ದಿನಸಿ ಅಂಗಡಿಗಳಲ್ಲಿ ಬಿಡಿ ಕವರಿನಲ್ಲಿ ತುಂಬಿಸಿಕೊಂಡರೆ (ಇದರ ಬೆಲೆ ಯಾವಾಗಲೂ ಮಾಲ್ಗಳಿಗಿಂತ ಕಡಿಮೆ ಮತ್ತು ಗುಣಮಟ್ಟದಲ್ಲಿ ವ್ಯತ್ಯಾಸ ಇರುವುದಿಲ್ಲ) ನಿಷೇಧದ ಉಲ್ಲಂಘನೆ! ಎರಡೂ ಕಡೆಯೂ ಬಳಕೆಯಾಗುವ ಪ್ಲಾಸ್ಟಿಕ್ ಪ್ರಮಾಣದಲ್ಲಿ ವ್ಯತ್ಯಾಸವಿಲ್ಲ. ಹಾಗೆ ನೋಡಿದರೆ ಪ್ರಿ-ಪ್ಯಾಕೇಜಿಂಗ್ನಲ್ಲಿ ಖಾದ್ಯ ಪೊಟ್ಟಣದ ಗುಣಮಟ್ಟದ ಪ್ಲಾಸ್ಟಿಕ್ ಬಳಸುವುದರಿಂದ, ಇಲ್ಲಿನ ಪ್ಲಾಸ್ಟಿಕ್ ಪ್ರಮಾಣವೂ ಹೆಚ್ಚು; ಅದರಿಂದ ಉತ್ಪಾದನೆಯ ವೇಳೆ ಮತ್ತು ಅನಂತರ ಉಂಟಾಗುವ ಇಂಗಾಲದ ಹೆಜ್ಜೆಗುರುತೂ ಹೆಚ್ಚು. ಇದು ನಿಷೇಧವೆ? ಅಥವಾ ಪ್ಯಾಕೇಜಿಂಗ್ ಉದ್ದಿಮೆಯನ್ನು ಪ್ರೋತ್ಸಾಹಿಸುವ ಹಿಂಬಾಗಿಲ ನೀತಿಯೆ? ಪ್ರಿ-ಪ್ಯಾಕೇಜ್ ಮಾಡಿದ ದಿನಸಿಗಳು ಯಾವಾಗಲೂ ದುಬಾರಿ; ಮಧ್ಯಮವರ್ಗದವರು, ಬಡವರ್ಗದವರು ಕಿಲೋಗಟ್ಟಳೆ ಕೊಳ್ಳುವುದೂ ಇಲ್ಲ; ಪ್ಯಾಕುಗಳನ್ನು ಕಂಡರೆ ಬೆಲೆಗೆ ಹೆದರುತ್ತಾರೆ ಎಂಬ ಸಾಮಾನ್ಯ ಜ್ಞಾನವೂ ನಮ್ಮ `ಅಹಿಂದ’ವಾದಿ ಸರಕಾರಕ್ಕೆ ಇಲ್ಲದೆ ಹೋಯಿತೆ?
ಪ್ಲಾಸ್ಟಿಕ್ ಪ್ಯಾಕೇಜಿಂಗ್ ಪರವಾಗಿರುವ ಲಾಬಿ ಸಂಸ್ಥೆಗಳು ಹೇಳುವ ಇನ್ನೊಂದು ಮಾತು ಕೂಡ ಭಾರತದಲ್ಲಿ ಹೆಚ್ಚಿನ ನಿಷ್ಕರ್ಷೆಗೆ ಅರ್ಹ: ಪ್ಲಾಸ್ಟಿಕ್ ಚೀಲಕ್ಕೆ ಬದಲಿಯಾಗಿ ಬಳಸುವ ಉತ್ಪನ್ನದ ಕಾರ್ಬನ್ ಹೆಜ್ಜೆಗುರುತು ಪ್ಲಾಸ್ಟಿಕ್ಗಿಂತ ಎರಡುಪಟ್ಟು ಎಂದು ಅಮೆರಿಕಾದ ಪ್ಯಾಕೇಜಿಂಗ್ ಪರ ಸಂಸ್ಥೆಯ ಸವಿವರವಾದ ಹೇಳುತ್ತದೆ. ಇದು ನಿಜವೂ ಇರಬಹುದು ಎಂಬುದು ನನ್ನ ಗಾಢ ಅನುಮಾನ (ತಕ್ಷಣಕ್ಕೆ ಈ ಅನುಮಾನವನ್ನು ಅಲ್ಲಗಳೆಯುವ ವರದಿಗಳು ನನಗೆ ಸಿಕ್ಕಿಲ್ಲ).
ಕಾಲಮಿತಿಯ ಹೈನು ಉತ್ಪನ್ನಗಳ ಪ್ಯಾಕೇಜಿಂಗ್ಗೆ ವಿನಾಯ್ತಿ ನೀಡಿದ್ದರಲ್ಲಿ ತಪ್ಪಿಲ್ಲ. ದ್ರವ ಪದಾರ್ಥಗಳನ್ನು ಸಾಗಿಸಲು (ಎಣ್ಣೆ ಇತ್ಯಾದಿ) ಪ್ಲಾಸ್ಟಿಕ್ ಪ್ಯಾಕೇಜಿಂಗ್ ಬೇಕು. ಆದರೆ ಘನ ಪದಾರ್ಥಗಳಿಗೆ ಏಕೆ ಪ್ರಿ-ಪ್ಯಾಕೇಜಿಂಗ್ ಬೇಕೇ ಬೇಕು?
ಆದ್ದರಿಂದ
- ಗುಣಮಟ್ಟದಲ್ಲಿ ಜನರ ವಿಶ್ವಾಸವನ್ನು ಗಳಿಸಿದ ಪ್ಯಾಕೇಜಿಂಗ್ ಆಧಾರಿತ ಮಾರಾಟಗಾರ ಸಂಸ್ಥೆಗಳು ಸಗಟಿನಲ್ಲೇ ಸರಬರಾಜು ಮಾಡಬಹುದಲ್ಲ? ಅದಕ್ಕಾಗಿ ದೊಡ್ಡ ದೊಡ್ಡ ಕಂಟೈನರುಗಳನ್ನು (ಮರುಬಳಕೆ ಮಾಡುವ) ಬಳಸಲಿ. ಬೇಳೆ ಕಾಳುಗಳನ್ನು ಅಳೆಯಲು ವೆಂಡಿಂಗ್ ಯಂತ್ರಗಳನ್ನೇ ಇಟ್ಟುಕೊಳ್ಳಬಹುದು; ಇದಕ್ಕಾಗಿ ಹೊಸ ವಿಧಾನಗಳನ್ನೇ ರೂಪಿಸಬಹುದು. ಎಣ್ಣೆ ಡಬ್ಬಗಳನ್ನೂ ಹೀಗೆಯೇ ನಿರ್ವಹಿಸಬಹುದು. ಪ್ಯಾಕೇಜಿಂಗ್ ಎಂದರೆ ಶುದ್ಧತೆ ಎಂಬ ಮೂಢನಂಬಿಕೆಯನ್ನು ಬಿಡಿ. ಈಗಾಗಲೇ ಹಲವು ಪೇಯಗಳಿಂದ ಹಿಡಿದು ನೂರಾರು ಪ್ಯಾಕುಗಳಲ್ಲಿ ಜಿರಳೆ, ಇಲಿ, ಹೆಗ್ಗಣಗಳು ಸಿಕ್ಕಿದ್ದನ್ನು ನೆನಪಿಸಿಕೊಳ್ಳಿ. ಜಿರಲೆ ಇದ್ದ ಪ್ಯಾಕಿನ ಎಲ್ಲ ಪೊಟ್ಟಣಗಳೂ ಕಲಬೆರಕೆಯೇ ಆಗಲಿಲ್ಲವೆ? ಅವನ್ನು ಲಾಟ್ಗಟ್ಟಳೆ ವಾಪಸು ತರಿಸಿಕೊಂಡ ಉದಾಹರಣೆ ಇದೆಯೆ?
- ಶ್ರೀ ಸಾಮಾನ್ಯರು ಬಟ್ಟೆ ಚೀಲ ಬಳಸಿ ಎಂದು ಉಪದೇಶ ಮಾಡಿ ಕಾನೂನಿನ ಮೂಲಕ ಹೆದರಿಸುವ ಜೊತೆಗೇ, ಉಳ್ಳವರೂ (ಮಾಲ್ಗಳನ್ನು, ಪ್ಯಾಕೇಜಿಂಗ್ ಉತ್ಪನ್ನಗಳನ್ನು ಹೆಚ್ಚು ಹೆಚ್ಚಾಗಿ ಬಳಸುವವರು, ಚೌಕಾಶಿ ಬಗ್ಗೆ ಗಮನ ಕೊಡದವರು) ತಮ್ಮ ಕಾರುಗಳಲ್ಲಿ ಬಟ್ಟೆ ಚೀಲಗಳನ್ನು, ದೊಡ್ಡ ದೊಡ್ಡ ಪ್ಲಾಸ್ಟಿಕ್ ಕಂಟೇನರುಗಳನ್ನು ತರಲಿ ಎಂದೂ ಉಪದೇಶಿಸಿ. ಕಾಗದದ ಪೊಟ್ಟಣಗಳನ್ನು ದೊಡ್ಡ ಮಾಲ್ಗಳೂ ಬಳಸಲಿ; ಅವುಗಳನ್ನು ಇಟ್ಟುಕೊಳ್ಳುವುದಕ್ಕೆ ಗ್ರಾಹಕರು ವ್ಯವಸ್ಥೆ ಮಾಡಿಕೊಳ್ಳಬೇಕು, ಅಷ್ಟೆ.
- ಪ್ಲಾಸ್ಟಿಕ್ ನಿಷೇಧವೇ ಬೇರೆ; ಚಿಲ್ಲರೆ ಮಾರಾಟದ ಮೇಲೆಯೇ ನೇರ ಪರಿಣಾಮ ಬೀರುವ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಕವರುಗಳ ನಿಷೇಧವೇ ಬೇರೆ. ಇಂಥ ಅರೆಬೆಂದ ಅಧಿಸೂಚನೆಯಿಂದ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಕಡಿಮೆಯಾಗುವುದಿಲ್ಲ, ಹೆಚ್ಚಾಗುತ್ತದೆ. ಖಾದ್ಯ ಪೊಟ್ಟಣದ ಗುಣಮಟ್ಟದ್ದಲ್ಲದ, ಕಳಪೆ ಪ್ಲಾಸ್ಟಿಕ್ಗಳನ್ನೂ ಸಣ್ಣ ಮಾರಾಟಗಾರರು ಪ್ರಿ-ಪ್ಯಾಕೇಜಿಂಗ್ ರೂಪದಲ್ಲಿ ಬಳಸಲು ಇದು ಅಡ್ಡದಾರಿ ಹೇಳಿಕೊಡುತ್ತದೆ. ಇಂಥ ಪರಾರಿ ನೀತಿ (ಎಸ್ಕೇಪಿಸಂ) ಅಪಾಯಕಾರಿ. ನೈಜ ಪ್ಲಾಸ್ಟಿಕ್ ನಿಷೇಧದಲ್ಲಿ ಔಷಧ, ಹಾಲು, ವಿಷಕಾರಿ ಮುಂತಾದ – ಪ್ಲಾಸ್ಟಿಕ್ ಪ್ಯಾಕೇಜಿಂಗ್ ಅನಿವಾರ್ಯವಾದ ಉತ್ಪನ್ನಗಳನ್ನು ಹೊರತುಪಡಿಸಿ ಎಲ್ಲ ಬಗೆಯ ಪದಾರ್ಥಗಳ ಎಲ್ಲ ಪ್ರಮಾಣದ (ಕನಿಷ್ಠ ೧೦ ಕಿಲೋ ತೂಗುವ ಸಗಟು ಮಾರಾಟ ಹೊರತುಪಡಿಸಿ) ಪ್ಯಾಕೇಜಿಂಗ್ನ್ನೂ ನಿಷೇಧಿಸಬೇಕು. ಆಗಲೇ ನಿಷೇಧಕ್ಕೊಂದು ಅರ್ಥ ಬರುತ್ತದೆ.
ಪ್ರಿ-ಪ್ಯಾಕೇಜಿಂಗ್ ಉದ್ದಿಮೆಯ ಇನ್ನೂ ಒಂದು ಅಪಾಯವನ್ನು ಗಮನಿಸಲೇಬೇಕು. ಹೆಚ್ಚಾಗಿ ಬಹುರಾಷ್ಟ್ರೀಯ ಸಂಸ್ಥೆಗಳ ದೈತ್ಯ ಜಾಲಗಳು ದೇಶ ವಿದೇಶಗಳಿಂದ ಹಡಗುಗಳಲ್ಲಿ ತರಿಸಿಕೊಳ್ಳುವ ಪ್ಯಾಕೇಜ್ ಮಾಡಿದ ಉತ್ಪನ್ನಗಳಿಂದ (ಹಣ್ಣುಗಳನ್ನೂ ಸೇರಿಸಿ) ಭಾರತದ ಕಿರು ಉತ್ಪಾದಕರ ಮೇಲೆ ದೊಡ್ಡ ಹೊಡೆತ ಅದಾಗಲೇ ಬಿದ್ದಾಗಿದೆ. ಈ ಉತ್ಪನ್ನಗಳ ಮೇಲೆ ನಿಷೇಧದ ಪರಿಣಾಮ ಇಲ್ಲವೇ ಇಲ್ಲ! ವಿದೇಶಿ ಬ್ರಾಂಡಿನ ಮೀನಿನ ಉಪ್ಪಿನಕಾಯಿಯನ್ನು ಹೆಚ್ಚು ದುಡ್ಡುಕೊಟ್ಟು ಖರೀದಿಸಿ ಆರಾಮಾಗಿ ಒಯ್ಯಬಹುದು; ಮೀನು ಮಾರುಕಟ್ಟೆಯಲ್ಲಿ ಬಂಗುಡೆ ಖರೀದಿಸಿದರೆ ಅದನ್ನು ಬಟ್ಟೆಚೀಲದಲ್ಲೋ, ಅಥವಾ ನಾವೇ ತೆಗೆದುಕೊಂಡು ಹೋದ ಪ್ಲಾಸ್ಟಿಕ್ ಕವರಿನಲ್ಲೋ ಒಯ್ಯಬೇಕು. ಇದು ಸ್ಥಳೀಯತೆಯನ್ನು ಅವಮಾನಿಸುವ, ತಾರತಮ್ಯದಿಂದ ನೋಡುವ ಕ್ರಮವಲ್ಲದೆ ಮತ್ತೇನು?
ಪ್ಲಾಸ್ಟಿಕ್ ಬಳಕೆಯನ್ನು ತಡೆಯುವ ಆಮೂಲಾಗ್ರ ಕ್ರಮ ಆರಂಭವಾಗಬೇಕು ಎಂಬ ಲವಲೇಶದ ಆಶಯವೂ ಈ ಕಾಯ್ದೆಯಲ್ಲಿಲ್ಲ. ಪ್ಲಾಸ್ಟಿಕ್ ಬಳಕೆಯನ್ನೇ ತಗ್ಗಿಸುವ ಕಾರ್ಯತಂತ್ರವಂತೂ ಇಲ್ಲಿ ಕಾಣಸಿಗದು. ತೂಕ ಮತ್ತು ಗುಣಮಟ್ಟದ ಮೇಲ್ವಿಚಾರಣೆಯನ್ನು ಬಲಪಡಿಸಿ, ಪ್ಯಾಕೇಜಿಂಗ್ ಪ್ಲಾಸ್ಟಿಕ್ನ್ನೇ ಕೊನೆಗಾಣಿಸುವ ರಾಜಕೀಯ ದೃಢತೆ ಇಲ್ಲಿಲ್ಲ.
ದೊಡ್ಡ ಉದ್ದಿಮೆಗಳಿಗೆ ಹಾಯೆನಿಸುವಂತೆ, ಬಿಡಿ ಖರೀದಿದಾರ ಕುಟುಂಬಗಳೆಲ್ಲ ಅಪರಾಧಿ ಪ್ರಜ್ಞೆಯಿಂದ ನರಳುವಂತೆ ಮಾಡುವ ಈ ಪ್ಲಾಸ್ಟಿಕ್ ನಿಷೇಧ ಎಂಬ ಅರೆಬೆಂದ ಶಾಸನಕ್ಕೆ ನನ್ನ ಧಿಕ್ಕಾರ!