ಇಂಡಸ್, ಸಿಂಧು, ಇಂಡಿಯಾ, – ಯಾರನ್ನು ಕಾಡಿಲ್ಲ? ಇಂಗ್ಲೆಂಡ್ ಮೂಲದ ಪತ್ರಕರ್ತೆ ಅಲಿಸ್ ಅಲ್ಬೀನಿಯಾಗೂ ಸಿಂಧೂ ನದಿ, ಅದರ ಸಂಸ್ಕೃತಿ ಕಾಡಿ ಕಾಡಿ ಕಾಡಿ…. ಅವಳೊಮ್ಮೆ ನಿರ್ಧರಿಸಿಯೇ ಬಿಟ್ಟಳು: ಈ ಸಿಂಧೂ ನದಿಯ ಗುಂಟ ಯಾಕೆ ಪ್ರವಾಸ ಮಾಡಬಾರದು? ಹಾಗೆ ಪ್ರವಾಸ ಮಾಡಿ ಬರೆದ ಪುಸ್ತಕವೇ ಎಂಪೈರ್ಸ್ ಆಫ್ ದಿ ಇಂಡಸ್ : ದಿ ಸ್ಟೋರಿ ಆಫ್ ಅ ರಿವರ್.
ನದಿಯ ಕಥೆ ಹೇಳುವುದು ಹೇಗೆ? ಅದರ ಅಕ್ಕಪಕ್ಕ ಇದ್ದ, ಇರುವ ಜನಜೀವನವನ್ನು ವಿವರಿಸುವ ಮೂಲಕ. ಅಲ್ಲೀಗ ಏನು ನಡೆಯುತ್ತಿದೆ ಎಂಬುದನ್ನು ಚಿತ್ರವತ್ತಾಗಿ ಬರೆಯುವ ಮೂಲಕ. ಛಾಯಾಚಿತ್ರಗಳನ್ನು ತೋರಿಸುವ ಮೂಲಕ. ಸಿಂಧೂ ನದಿಯನ್ನು ಪಾಕಿಸ್ತಾನದ ಮುಖಜಭೂಮಿಯಿಂದ ಹಿಡಿದು ಟಿಬೆಟಿನ ಸಿಂಧೂ ನದೀ ಮೂಲದವರೆಗೆ ಅನುಸರಿಸಿ ಅಲಿಸ್ ಬರೆದ ಈ ಪುಸ್ತಕ ಕಳೆದ ಒಂದು ತಿಂಗಳಿನಿಂದ ನನ್ನನ್ನು ತುಂಬಾ ಕಾಡಿತು. ನಾನು ಇತ್ತೀಚೆಗೆ ಓದಿದ ಪುಸ್ತಕಗಳಲ್ಲಿ ಅತ್ಯಂತ ರೋಚಕ, ಮನೋಜ್ಞ ಮತ್ತು ನೇರ ನಿರೂಪಣೆ ಇರುವ ಪುಸ್ತಕವಿದು. ಕೆಲವೊಂದು ವಿಚಾರಗಳಲ್ಲಿ ಅವಳ ಓದಿನಲ್ಲೆಲ್ಲೋ ಕೊಂಚ ಕೊರತೆ ಇದೆ ಎಂದು ಅನ್ನಿಸುತ್ತದೆ. ಆದರೆ ಒಟ್ಟಾರೆಯಾಗಿ ಅಲಿಸ್ ಕಂಡ ಈ ವಂಡರ್ಲ್ಯಾಂಡ್ (ಅಲಿಸ್ ಇನ್ ವಂಡರ್ಲ್ಯಾಂಡ್ ನೆನಪಾಯಿತೆ?) ಕುರಿತ ಪುಸ್ತಕ ನಮ್ಮನ್ನು ಇತಿಹಾಸ, ವರ್ತಮಾನ ಮತ್ತು ಭವಿಷ್ಯಕ್ಕೆ ಕರೆದೊಯ್ಯುವ ಶಕ್ತಿ ಹೊಂದಿದೆ.
ಸಿಂಧೂ ನದಿಯನ್ನು ಅದರ ಕರಾಚಿಯ ಕೊನೆ ತುದಿಯಿಂದ ಮೂಲದವರೆಗೆ ಅನುಸರಿಸಿಕೊಂಡು ಹೋಗುವಾಗ ಅಲಿಸ್ ಯಾವ್ಯಾವುದೋ ವಾಹನ ಬಳಸಿದ್ದಾಳೆ; ದೋಣಿ ಹತ್ತಿದ್ದಾಳೆ. ಜೀಪ್ ಹಾರಿದ್ದಾಳೆ. ದಿನಗಟ್ಟಳೆ, ವಾರಗಟ್ಟಳೆ ಬುರ್ಖಾ ಹಾಕಿಕೊಂಡು ನಡೆದಿದ್ದಾಳೆ. ವಿಮಾನದಲ್ಲಿ ಸಾವಿರಾರು ಮೈಲು ಸುತ್ತುಬಳಸಿ ದೇಶದೇಶಗಳ ಗಡಿ ದಾಟಿದ್ದಾಳೆ. ಸಿಂಧೂ ನದಿಯನ್ನು ದಾಟಿ ಬಂದ ಘಜ್ನಿ ಮಹಮದ್ನ ಮೂಲ ಊರನ್ನು ನೋಡಲು ಅಫಘಾನಿಸ್ತಾನಕ್ಕೂ ಹೋಗಿ ಬಂದಿದ್ದಾಳೆ. ಬಂದೂಕಿನ ಮೊನೆಯಂಚಿಗೇ ನಡೆದಿದ್ದಾಳೆ. ಸೇನೆ, ಉಗ್ರರ ಜೊತೆ ಓಡಾಡಿದ್ದಾಳೆ. ಓಪಿಯಂ ಗಿಡಗಳ ನಡುವೆ ಅಡ್ಡಾಡಿದ್ದಾಳೆ. ಲಿಟರಲಿ, ಛಳಿಯೆನ್ನದೆ, ಮಳೆಯೆನ್ನದೆ ಸಿಂಧೂ ನದಿಯಗುಂಟ ಹತ್ತಿಳಿದು ಎಲ್ಲ ಮನೆ, ಮಠ, ಮಸೀದಿಗಳ ನಡುವೆ ಸಂಚರಿಸಿ ಬಂದು ಮಾಹಿತಿ ಸಂಗ್ರಹಿಸಿದ್ದಾಳೆ.
ಅಲಿಸ್ ಬರೆದ ಮೊದಲ ಅಧ್ಯಾಯವೇ ಸ್ಲಂ ಡಾಗ್ ನೆನಪಿಸುವಂತಿದೆ. ಕರಾಚಿಯ ಕೊಳಚೆಗುಂಡಿಯನ್ನು ಶುದ್ಧಗೊಳಿಸಿ ಮೇಲೇಳುವ ಶೂದ್ರರ ಕಥೆ. ಇಂಥ ೭೭ ಸಾವಿರ ಹಿಂದು ಕುಟುಂಬಗಳಿರೋ ಊರಿಗೆ ಅಲಿಸ್ ಭೇಟಿ ಕೊಡುತ್ತಾಳೆ. ಈ ಎಲ್ಲ ಕುಟುಂಬಗಳೂ ಹಿಂದೆ ವಾಸಿಸುತ್ತಿದ್ದ ಪ್ರದೇಶ ಈಗ ಲ್ಯಾರಿ ಎಕ್ಸ್ಪ್ರೆಸ್ವೇಗಾಗಿ ವಶವಾಗಿದೆ. ಭಾರತ – ಪಾಕಿಸ್ತಾನ ವಿಭಜನೆಯ ಹೊತ್ತಿಗೆ ಪಂಜಾಬಿನ ಗುಜ್ರನ್ವಾಲಾದಿಂದ ಬಂದ ಈ ಕುಟುಂಬಗಳ ಕಥೆ ದಿನಾಲೂ ಸ್ಲಂ ಡಾಗ್ ಸಿನೆಮಾ ಥರಾನೇ ನಡೆಯುತ್ತದೆ.
ಅಲ್ಲಿಂದ ಅಲಿಸ್ ಮುಖಜಭೂಮಿಯಿಂದ ಕರಾಚಿವರೆಗೆ ದೋಣಿಯಲ್ಲಿ ಹೋಗುತ್ತಾಳೆ. ದಾರಿಯಲ್ಲೇ ಬ್ರಿಟಿಶರು ಮತ್ತು ಈಸ್ಟ್ ಇಂಡಿಯಾದ ಕಥೆ ನಿರೂಪಿಸುತ್ತಾಳೆ. ಅಲೆಕ್ಸಾಂಡರ್ ಬರ್ನ್ಸ್ ಎಂಬ ಯುವ ಅಧಿಕಾರಿ ಹೇಗೆ ಸಿಂಧೂ ನದಿಯ ಹರಿವಿಗೆ ಎದುರಾಗಿ ಹೇಗೆ ಯಾತ್ರೆ ಕೈಗೊಂಡ….. ಅವನ ಸಾಹಸವನ್ನು ಬ್ರಿಟಿಶ್ ಪತ್ರಿಕೆಗಳು ಆಧುನಿಕ ಅಲೆಕ್ಸಾಂಡರ್ ಎಂದು ಬಣ್ಣಿಸಿದವು ಎಂದು ಅಲಿಸ್ ನಿರ್ಲಿಪ್ತವಾಗಿ ವಿವರಿಸುತ್ತಾಳೆ.
೧೯೦೧ರ ಹೊತ್ತಿಗೆ ಪಂಜಾಬಿನ ಐದು ನದಿಗಳ ಪೈಕಿ ನಾಲ್ಕು ನದಿಗಳಿಗೆ ಅಣೆಕಟ್ಟು ಕಟ್ಟಿದ ಅಥವಾ ನಾಲೆಗಳನ್ನು ನಿರ್ಮಿಸಿದ ಅಭಿವೃದ್ಧಿಯ ಹಎಜ್ಜೆಗುರುತುಗಳನ್ನು ಅಲಿಸ್ ದಾಖಲಿಸಿದ್ದಾಳೆ.
ಥಟ್ಟಾಗೆ ಬಂದ ಅಲಿಸ್ಗೆ ಕಂಡಿದ್ದು ಆಫ್ರಿಕಾ ಮೂಲದ ಶೀದಿಗಳು. ಅವರೇ, ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಇರುವ ಸಿದ್ದಿಗಳು. ಆಫ್ರಿಕಾದಿಂದ ಗುಲಾಮರಾಗಿ ಬಂದ ಇವರೆಲ್ಲ ಈಗಲೂ ಪಾಕಿಸ್ತಾನದಲ್ಲಿ ಜೀವಿಸಿದ್ದಾರೆ. ನಾಲ್ಕಡಿ ಅಗಲದ ಮಸೀಂದೋ ಅಥವಾ ಮುಗರ್ಮನ್ ಎಂಬ ಡೋಲು ಅವರ ಪ್ರಮುಖ ಐಕನ್ ಎಂದರೂ ತಪ್ಪಿಲ್ಲ. ಆದರೆ ಎಷ್ಟೋ ಮನೆಗಳಲ್ಲಿ ಈಗ ಮುಗರ್ಮನ್ ಇಲ್ಲ. ಇದ್ದರೂ ಬಾರಿಸಲು ಬರುವುದಿಲ್ಲ.
ಮಾಯ್ ಮಶೀರಾ ಬಾಗ್ ಬನಾಯಾ
ಲೀಮಾ ಅರ್ಚಾರ್ ಲೇ
ಹೇಮನ್ ಮಾಂಗಾ ಹೇರಾ ಥೇರಾ
ಹೇಮನ್ ಮಂಗಾ ರೇ
ಮಾಯ್ ಮಿಶ್ರಾ ಎಂಬಾಕೆ ಶೀದಿಗಳಿಗೆ ಆರಾಧ್ಯ ದೈವ. ಆಕೆ ಆಫ್ರಿಕಾದಿಂದ ಮೆಕ್ಕಾ ಹಾದು ಭಾರತಕ್ಕೆ ತನ್ನೆರಡು ಸೋದರರೊಂದಿಗೆ ಪ್ರಯಾಣ ಮಾಡಿದವಳಂತೆ.
ಶೀದಿಗಳ ಸಮುದಾಯಕ್ಕೆ ಒಂದು ಮುಖ ತಂದವನು, ಅವರ ಬದುಕು ಬವಣೆಗಳನ್ನು ದಾಖಲಿಸಿ ಸಮಾಜದಲ್ಲಿ ಶೀದಿಗಳಿಗಾಗಿ ಹೋರಾಡಿದವನು ಮುಸಾಫಿರ್ ಎಂಬ ಶೀದಿ. ತಾಂದೋ ಬಾಗೋದಲ್ಲಿ ಹುಟ್ಟಿ ಬೆಳೆದು ಬದುಕಿದ ಮುಸಾಫಿರ್ ನಿಜಕ್ಕೂ ಸಮಾಜದ ಒಬ್ಬ ಆಪ್ತ ಪಯಣಿಗ. ಅವನು ಶೀದಿಗಳ ಶೋಷಣೆ ಕುರಿತು ಒಂದು ಪುಸ್ತಕವನ್ನೇ ಬರೆದಿದ್ದಾನೆ. ಅಲಿಸ್ ಈ ಪುಸ್ತಕವನ್ನು ಹುಡುಕಿಕೊಂಡು ಮುಸಾಫಿರ್ನ ಮಗನ ಮನೆಗೆ ಹೋಗುತ್ತಾಳೆ. ಮುಸಾಫಿರ್ನ ಮಗ ಬಾಝ್ಮಿ ಹಿಂದೆ ಶಿಕ್ಷಕರಾಗಿದ್ದವರು; ಆದರೆ ಹತ್ತು ವರ್ಷಗಳ ಹಿಂದೆ ಪಾರ್ಶ್ವವಾಯುವಿಗೆ ತುತ್ತಾಗಿ ಮಾತು ಕಳೆದುಕೊಂಡಿದ್ದಾರೆ. ಆದರೆ ಮಗನ ಮೂಲಕ ಅಲಿಸ್ ಜೊತೆಗೆ ಸನ್ನೆಯಲ್ಲೇ ಮಾತಾಡುತ್ತಾರೆ.
ನೋಡಿ, ಬಾಝ್ಮಿ ಮನೆಯಲ್ಲಿ ಅಲಿಸ್ ಮೂರು ವಾರ ಕಳೆಯುತ್ತಾಳೆ. ಇದೊಂದೇ ಸಾಕಲ್ಲವೆ, ಅಲಿಸ್ ಹೇಗೆ ಈ ಪುಸ್ತಕವನ್ನು ಮನಸಾರೆ ರೂಪಿಸಿದಳು ಎಂಬುದಕ್ಕೆ ಪುರಾವೆ?
ಮುಸಾಫಿರ್ ಕಾವ್ಯನಾಮದ ಮುಹಮ್ಮದ್ ಸಿದ್ದಿಕಿಯ ತಂದೆ ಹುಟ್ಟಿದ್ದು ೧೭೯೩ರಲ್ಲಿ. ಶೇಖ್ ಹುಸೇನ್ ಎಂಬ ವರ್ತಕನಿಗೆ ಮಾರಾಟವಾಗಿದ್ದ ಮುಸಾಫಿರ್ನ ತಂದೆಯನ್ನು ಶೇಖ್ ಚೆನ್ನಾಗಿಯೇ ನೋಡಿಕೊಂಡ. ಅವನಿಗೆ ಬಿಲಾಲ್ ಎಂದು ಹೆಸರಿಟ್ಟ. ಕೊನೆಗೆ ಬಿಲಾಲ್ನನ್ನು ಹೌರ್ ಆಲಿ ಎಂಬ ಸಿರಿವಂತನಿಗೆ ಮಾರಿದ. ಸಿಂಧಿ ಸಮಾಜದಲ್ಲಿ ಬೆಳೆದ ಮುಸಾಫಿರ್ಗೆ ಹೌರ್ ಆಲಿಯ ಪತ್ನಿಯೇ ನಮಾಝ್ ಮಾಡುವುದು ಹೇಗೆ, ಉಪವಾಸ ಮಾಡುವುದು ಹೇಗೆ ಎಂದೆಲ್ಲ ಕಲಿಸಿಕೊಟ್ಟಳು. ೧೮೪೩ರಲ್ಲಿ ಗುಲಾಮೀ ಪದ್ಧತಿಯನ್ನು ಬ್ರಿಟಿಶ್ ಸರ್ಕಾರ ನಿಷೇಧಿಸಿತು. ಹೌರ್ ಆಲಿ ಬಿಲಾಲನನ್ನು ಬಿಡುಗಡೆ ಮಾಡಿದ; ಜೊತೆಗೇ ತನ್ನ ತೋಟದಲ್ಲಿ ಬಿಲಾಲನಿಗೆ ಒಂದು ಮನೆಯನ್ನೂ ಕಟ್ಟಿಕೊಟ್ಟ! ಬಿಲಾಲನ ಮಗನಾಗಿ ೧೮೭೯ರಲ್ಲಿ ಹುಟ್ಟಿದ ಮುಸಾಫಿರ್. ಅಂದರೆ ಬಿಲಾಲನಿಗೆ ಎಂಬತ್ತಾರು ವರ್ಷಗಳಾಗಿದ್ದಾಗ!
ಶೀದಿಗಳಿಗಾಗಿ ಮೀರ್ ಘುಲಾಂ ಮುಹಮ್ಮದ್ ಎಂಬ ತಾಲ್ಪುರ್ ಮನೆತನದ ಯಜಮಾನನ ನೆರವಿನಿಂದ ಮುಸಾಫಿರ್ ಒಂದು ಶಾಲೆಯನ್ನು ಸ್ಥಾಪಿಸಿದ. ೧೯೫೨ರಲ್ಲಿ ಆತ ಬರೆದ ಘುಲಾಮೀ ಏ ಆಝಾದೀ ಝಾ ಇಬ್ರತ್ನಾಕ್ ನಙರಾ ಎಂಬ ಪುಸ್ತಕವನ್ನೇ ಅಲಿಸ್ ಹುಡುಕಿ ತೆಗೆದದ್ದು. ಅದನ್ನು ಬಾಝ್ಮಿಯ ಮಗಳ ನೆರವಿನಿಂದ ಓದಿಸಿಕೊಂಡು ಟಿಪ್ಪಣಿ ಮಾಡಿಕೊಳ್ಳುವ ಅಲಿಸ್ ಕಂಡುಕೊಳ್ಳುವ ಸತ್ಯವನ್ನು ಅರಿಯಲು ನೀವು ಅಲಿಸ್ ಪುಸ್ತಕವನ್ನೇ ಓದಬೇಕು.
ಅಲ್ಲಿಂದ ಅಲಿಸ್ ಸಿಂಧೂ ನದಿಯ ಗುಂಟ ಆಗಿಹೋದ ಸಾವಿರಾರು ಸೂಫಿ ಸಂತರ ಕುರಿತು ಹುಡುಕಾಟ ಆರಂಭಿಸುತ್ತಾಳೆ. ಝೋಕ್ನಲ್ಲಿ ೧೮ನೇ ಶತಮಾನದ ಆರಂಭದಲ್ಲೇ ‘ಬಿತ್ತಿದವನೇ ಉಣ್ಣಬೇಕು’ ಎಂಬ ತತ್ವದಡಿ ಕೃಷಿ ಸಮುದಾಯವನ್ನು ಕಟ್ಟಿದ ಸೂಫಿ ಶಾ ಇನಾಯತ್ನ ಕಥೆಯನ್ನು ಅಲಿಸ್ ಸೊಗಸಾಗಿ ಕಟ್ಟಿಕೊಟ್ಟಿದ್ದಾಳೆ. ಈಗಲೂ ಈ ಕ್ರಾಂತಿಯ ಕಥೆಯ ಕಾವ್ಯವನ್ನು ಹೇಳುವಾಗ ಸಿಂಧಿಗಳು ಕಣ್ಣೀರು ಹರಿಸುತ್ತಾರೆ. ಮಶ್ಕೂರಿನಲ್ಲಿ ಈ ಸಊಫಿ ಸಂತನ ನೆನಪಿನಲ್ಲಿ ನಡೆಯುವ ಉರ್ಸ್ಗೆ ಅಲಿಸ್ ಹೋಗುತ್ತಾಳೆ.
ಶಾ ಇನಾಯತ್ನ ಒಬ್ಬ ಗುರು ಸರ್ಮದ್. ಈತ ನಗ್ನ ಸಂತ. ಮೊದಲು ಪರ್ಶಿಯನ್ – ಯೆಹೂದಿ ವರ್ತಕನಾಗಿದ್ದ ಸರ್ಮದ್ ತನ್ನ ಪ್ರಯಾಣದ ವೇಳೆ ಅಭಯ್ ಚಂದ್ ಎಂಬ ಸುಂದರ ಹುಡುಗನಿಗೆ ಮನಸೋಲುತ್ತಾನೆ. ಅವರಿಬ್ಬರೂ ದಿಲ್ಲಿಗೆ ಬರುತ್ತಾರೆ. ಅಲ್ಲಿ ಶಾಜಹಾನ್ನ ವಾರಸುದಾರ ದಾರಾ ಶಿಕೋಹ್ ಅವನನ್ನು ಗುರುವಾಗಿ ಸ್ವೀಕರಿಸುತ್ತಾನೆ. ಈ ದಾರಾ ಶಿಕೋಹ್ ಕೂಡಾ ವಿಚಿತ್ರ ವ್ಯಕ್ತಿ. ಉಪನಿಷತ್ತುಗಳನ್ನೇ ಉರ್ದುವಿಗೆ ಅನುವಾದಿಸಿದವನು. ಆದರೆ ಅವನ ಅಣ್ಣ ಔರಂಗಜೇಬ್ ಇವರಿಬ್ಬರನ್ನೂ ಕೊಲ್ಲಿಸುತ್ತಾನೆ.
ಸರ್ಮದ್ನ ತತ್ವಗಳಿಂದ ಪ್ರಭಾವಿಯಾದ ಶಾ ಇನಾಯತ್ ಸುಧಾರಣಾ ಚಳವಳಿ ಮಾಡಿದ್ದನ್ನು ನೀವು ಪುಸ್ತಕದಲ್ಲೇ ಓದಿ. ಈಗ ಈ ಸ್ಥಳದಲ್ಲಿ ಸಜ್ಜದಾ ಎಂಬುವವನೇ ಮುಖ್ಯಸ್ಥ. ಅವನ ಪ್ರಕಾರ ಅವನೇ ಈಗ ಶಾ ಇನಾಯತ್!
ಶಾ ಇನಾಯತ್ನ ಪ್ರಭಾವಕ್ಕೆ ಒಳಗಾಗಿ ಕಾವ್ಯ ರಚನೆ ಮಾಡಿದ ಶಾ ಅಬ್ದುಲ್ ಲತೀಫ್ನ ಕಥೆಯೂ ರೋಚಕವಾಗಿದೆ. ಆತ ಬರೆದ ರಿಸಾಲೋ (ಕವನ ಸಂಕಲನ)ದಲ್ಲಿ ಮೂವತ್ತು ಸುರ್ಗಳಿಗೆ. ಇವೆಲ್ಲವೂ ಮಹಿಳೆಯರೇ ಹಾಡಿಕೊಳ್ಳುವ ಹಾಡುಗಳು. ಲತೀಫ್ನ ಉರ್ಸ್ಗೆ ಸುನ್ನಿಗಳು, ಹಿಂದುಗಳು, ಶಿಯಾಗಳು, ಎಲ್ಲರೂ ಬರುತ್ತಾರೆ. ಲತೀಫ್ ತಂಬೂರೋ (ತಂಬೂರಿ?) ಎಂಬ ವಾದ್ಯವನ್ನೂ ಆವಿಷ್ಕರಿಸಿದವ.
ಇವೆಲ್ಲವೂ ಸಿಂಧೂ ನದಿಯ ತಟದಲ್ಲೇ ನಡೆದ ಇತಿಹಾಸ. ಅದಕ್ಕೇ ಅಲಿಸ್ ಇವನ್ನೆಲ್ಲ ಶ್ರದ್ಧೆಯಿಂದ ದಾಖಲಿಸಿದ್ದಾಳೆ.
ನನಗೆ ಪುಸ್ತಕವನ್ನು ವಿಮರ್ಶೆ ಮಾಡುವ ಬದಲು ಪರಿಚಯ ಮಾಡುವ ಉತ್ಸಾಹ ಹೆಚ್ಚಾಗುತ್ತಿದೆ. ಮುಂದಿನ ಭಾಗದಲ್ಲಿ ಇನ್ನಷ್ಟು ವಿವರಗಳನ್ನು ಕೊಡುತ್ತೇನೆ. ಕಳೆದ ಒಂದು ತಿಂಗಳಿನಿಂದ ನನ್ನನ್ನು ಆತ್ಯಂತಿಕವಾಗಿ ತಟ್ಟಿದ, ಪುಟಪುಟದಲ್ಲೂ ನನಗೊಂದು ಹೊಸ ಹೊಳಹನ್ನು ಕೊಟ್ಟ ಈ ಪುಸ್ತಕದ ಬಗ್ಗೆ ಹೇಳಲು ಬೇಕಾದಷ್ಟಿದೆ.